ಶನಿವಾರ, ಅಕ್ಟೋಬರ್ 29, 2022

ನಾಡಪ್ರಭು ಕೆಂಪೇಗೌಡರ ಹೆಸರು ಅಜರಾಮರಗೊಳ್ಳಲಿ : ಬಿ.ಕೆ ಸಂಗಮೇಶ್ವರ್

ನಾಡಪ್ರಭು ಕೆಂಪೇಗೌಡರ ೧೦೮ ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟನೆ ಅಂಗವಾಗಿ ಪವಿತ್ರ ಮೃತ್ತಿಕೆ ಸಂಗ್ರಹಣೆಗಾಗಿ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ನಾಡಪ್ರಭು ಕೆಂಪೇಗೌಡ ರಥ ಅಭಿಯಾನ ಶನಿವಾರ ಭದ್ರಾವತಿ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ರಂಗಪ್ಪ ವೃತ್ತದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಹಸಿರು ನಿಶಾನೆ ತೋರಿಸಿದರು.
    ಭದ್ರಾವತಿ, ಅ. ೨೯ : ನಾಡಪ್ರಭು ಕೆಂಪೇಗೌಡ ಕೊಡುಗೆ ಅಪಾರವಾಗಿದ್ದು, ಭವಿಷ್ಯದಲ್ಲಿ ಅವರ ಹೆಸರನ್ನು ಅಜರಾಮರಗೊಳಿಸುವಂತಾಗಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
      ನಾಡಪ್ರಭು ಕೆಂಪೇಗೌಡರ ೧೦೮ ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟನೆ ಅಂಗವಾಗಿ ಪವಿತ್ರ ಮೃತ್ತಿಕೆ ಸಂಗ್ರಹಣೆಗಾಗಿ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ನಾಡಪ್ರಭು ಕೆಂಪೇಗೌಡ ರಥ ಅಭಿಯಾನ ಶನಿವಾರ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ರಂಗಪ್ಪ ವೃತ್ತದಲ್ಲಿ ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಹಸಿರು ನಿಶಾನೆ ತೋರಿಸಿ ಮಾತನಾಡಿದರು.
      ನಾಡಪ್ರಭು ಕೆಂಪೇಗೌಡರ ಇತಿಹಾಸ ಎಲ್ಲರಿಗೂ ತಿಳಿದಿದ್ದು, ಅವರ ಕುರಿತು ಹೆಚ್ಚು ಮಾತನಾಡುವ ಅಗತ್ಯವಿಲ್ಲ. ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಯಾರು ಸಹ ಮರೆಯುವಂತಿಲ್ಲ. ಇಂತಹ ಮಹಾನ್ ವ್ಯಕ್ತಿಯ ಹೆಸರನ್ನು ಪ್ರತಿಯೊಬ್ಬರು ಅಜರಾಮರಗೊಳಿಸುವ ನಿಟ್ಟಿನಲ್ಲಿ ಮುಂದಾಗಬೇಕೆಂದರು.
      ಇದಕ್ಕೂ ಮೊದಲು ಬೆಳಿಗ್ಗೆ ೯ ಗಂಟೆಗೆ ತಾಲೂಕಿನ ಗಡಿಭಾಗ ಕಾರೇಹಳ್ಳಿಗೆ ಆಗಮಿಸಿದ ರಥ ಅಭಿಯಾನವನ್ನು ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗು ನಗರಸಭೆ ಆಡಳಿತದಿಂದ ಕುಂಭ ಕಳಸ ಹಾಗು ಕಲಾ ತಂಡಗಳೊಂದಿಗೆ ಸ್ವಾಗತಿಸಲಾಯಿತು. ನಂತರ ರಥ ಅಭಿಯಾನ ಬಾರಂದೂರು, ಮಾವಿನಕೆರೆ, ಯರೇಹಳ್ಳಿ, ಅಂತರಗಂಗೆ, ವೀರಾಪುರ ಮಾರ್ಗವಾಗಿ ಮಧ್ಯಾಹ್ನ ೨.೩೦ರ ಸುಮಾರಿಗೆ ರಂಗಪ್ಪ ವೃತ್ತಕ್ಕೆ ಆಗಮಿಸಿತು.
      ನಂತರ ಹಳೇನಗರದ ಪುರಾಣಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಮೂಲಕ ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ, ಅಪ್ಪರ್ ಹುತ್ತಾ, ಹುತ್ತಾ ಕಾಲೋನಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ತಲುಪಿ ಸಿದ್ದಾಪುರ, ಹಿರಿಯೂರು, ಹುಣಸೇಕಟ್ಟೆ ಜಂಕ್ಷನ್, ಸಂಜೆ ವೇಳೆಗೆ ಸಿಂಗನಮನೆ, ಗೋಣಿಬೀಡು, ಗೊಂಧಿ, ತಾರೀಕಟ್ಟೆ, ರಾತ್ರಿ ೮ರ ವೇಳೆಗೆ ರಬ್ಬರ್‌ಕಾಡು ತಲುಪಿ ಕೊನೆಯಲ್ಲಿ ನಗರಸಭೆ ಆವರಣದಲ್ಲಿ ಅಂತ್ಯಗೊಂಡಿತು.
      ತಹಸೀಲ್ದಾರ್ ಆರ್. ಪ್ರದೀಪ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನುಕುಮಾರ್, ಗ್ರಾಮ ಪಂಚಾಯಿತಿ, ನಗರಸಭೆ ಚುನಾಯಿತ ಪ್ರತಿನಿಧಿಗಳು, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಮುಖರಾದ ಶಾರದ ಅಪ್ಪಾಜಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ, ಸಮುದಾಯಗಳ ಪ್ರಮುಖರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

      

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ