Tuesday, November 1, 2022

ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಮಾತೃ ಭಾಷೆ ಸಹಕಾರಿ : ಡಿ. ಮಂಜುನಾಥ್

ಭದ್ರಾವತಿ ಅಪ್ಪರ್‌ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ನ. ೧:  ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪರಿಸರದ ಭಾಷೆ, ಮಾತೃ ಭಾಷೆ ಹೆಚ್ಚು ಸಹಕಾರಿಯಾಗಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಹೇಳಿದರು.
      ಅವರು ಮಂಗಳವಾರ ನಗರದ ಅಪ್ಪರ್‌ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.
      ಮಕ್ಕಳ ಕಲಿಕೆ ಮಾತೃ ಭಾಷೆಯಲ್ಲಿಯೇ ಆರಂಭವಾಗಬೇಕು. ಪರಿಸರದ ಭಾಷೆಯಲ್ಲಿ ಬೆಳೆದ ಅನೇಕರು ಮಹಾನ್ ವ್ಯಕ್ತಿಗಳಾಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳು ಇಂದು ಸಮಾಜದಲ್ಲಿ ನಮ್ಮಲ್ಲರಿಗೂ ಮಾದರಿಯಾಗಿದ್ದಾರೆ. ಪೋಷಕರು ಮಾತೃ ಭಾಷೆ ಮೇಲಿನ ಅಭಿಮಾನ ಬೆಳೆಸಿಕೊಳ್ಳಬೇಕೆಂದರು.
      ಪ್ರಪಂಚದ ಪ್ರಮುಖ ಭಾಷೆಗಳಲ್ಲಿ ಕನ್ನಡ ಸಹ ಒಂದಾಗಿದ್ದು, ಅದರಲ್ಲೂ ದೇಶದಲ್ಲಿರುವ ಭಾಷೆಗಳಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಕಾಯ್ದುಕೊಂಡಿದೆ. ಇಂತಹ ಭಾಷೆ ಮೇಲೆ ನಮ್ಮ ಅಭಿಮಾನ ಹೆಚ್ಚಾಗಬೇಕು. ಆಗ ಮಾತ್ರ ಕನ್ನಡ ರಾಜ್ಯೋತ್ಸವ ಆಚರಣೆ ಸಾರ್ಥಕಗೊಳ್ಳುತ್ತದೆ ಎಂದರು.
      ವೇದಿಕೆ ಗೌರವಾಧ್ಯಕ್ಷೆ ಡಾ. ಅನುರಾಧ ಪಟೇಲ್ ಮಾತನಾಡಿ, ವೇದಿಕೆ ಸಮಾಜಮುಖಿಯಾಗಿ ಮುನ್ನಡೆಯುತ್ತಿದೆ. ಸದಸ್ಯರು ಸರ್ವತೋಮುಖವಾಗಿ ಬೆಳವಣಿಗೆ ಹೊಂದಲು ವೇದಿಕೆ ಸಹಕಾರಿಯಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ವೇದಿಕೆಯಲ್ಲಿ ಮುನ್ನಡೆಯಬೇಕೆಂದರು.
      ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಲುವೇಗೌಡರು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿದ್ದರು. ವೇದಿಕೆ ಅಧ್ಯಕ್ಷೆ ಸುಧಾಮಣಿ ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು.  ಕಾರ್ಯದರ್ಶಿ ಲತಾ ಪ್ರಭಾಕರ್ ವಾರ್ಷಿಕ ವರದಿ ಹಾಗು ಖಜಾಂಚಿ ಭಾರತಿ ಕುಮಾರ್ ಲೆಕ್ಕಪತ್ರ ಮಂಡಿಸಿದರು.  

ಭಾಷಾಭಿಮಾನ ಬೆಳೆಸಿಕೊಳ್ಳಿ, ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ೬೭ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ನ. ೧ : ನೆಲ-ಜಲ-ಭಾಷೆ ಮೇಲಿನ ಅಭಿಮಾನ ಬೆಳೆಸಿಕೊಳ್ಳುವ ಮೂಲಕ ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
      ಅವರು ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ೬೭ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ನಾಡಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
       ಕನ್ನಡ ಭಾಷೆ ತನ್ನದೇ ಆದ ಪರಂಪರೆ ಹೊಂದಿದ್ದು, ಪ್ರತಿಯೊಬ್ಬರಲ್ಲೂ ಭಾಷಾಭಿಮಾನ ಬಹಳ ಮುಖ್ಯವಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಕನ್ನಡ ಭಾಷೆ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದರು.
      ತಹಸೀಲ್ದಾರ್ ಆರ್. ಪ್ರದೀಪ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನುಕುಮಾರ್, ಸದಸ್ಯರಾದ ಗೀತಾರಾಜ್‌ಕುಮಾರ್, ಕಾಂತರಾಜ್, ಮಣಿ ಎಎನ್‌ಎಸ್, ಸರ್ವಮಂಗಳ ಭೈರಪ್ಪ, ಶೃತಿ ವಸಂತ್, ರಿಯಾಜ್ ಅಹಮದ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ವಲಯ ಅರಣ್ಯಾಧಿಕಾರಿ ರಾಜೇಶ್, ಉಪವಲಯ ಅರಣ್ಯಾಧಿಕಾರಿ ಬಿ.ಆರ್. ದಿನೇಶ್‌ಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
      ಕ್ಷೇತ್ರ ಶಿಕ್ಷಣಾಧಿಕಾರಿ  ಎ.ಕೆ ನಾಗೇಂದ್ರಪ್ಪ ಸ್ವಾಗತಿಸಿದರು. ಅಪೇಕ್ಷ ಮಂಜುನಾಥ್ ನಿರೂಪಿಸಿದರು. ಸುಮತಿ ಕಾರಂತ್ ತಂಡದವರು ನಾಡಗೀತೆ ಹಾಗು ಜಾನಪದ ಕಲಾವಿದ ರೇವಣಪ್ಪ ತಂಡದವರು ರೈತಗೀತೆ ಹಾಡಿದರು. ತಾಲೂಕು ದೈಹಿಕ ಶಿಕ್ಷಣ ಸಂಯೋಜಕ ಪ್ರಭು, ದೈಹಿಕ ನಿರ್ದೇಶಕರಾದ ಶಿವಲಿಂಗೇಗೌಡ, ಕರಣ್‌ಸಿಂಗ್, ತಾಲೂಕು ಕಛೇರಿ, ನಗರಸಭೆ ಹಾಗು ತಾಲೂಕು ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಶಾಲಾ ಮಕ್ಕಳು ಪಾಲ್ಗೊಂಡಿದ್ದರು.
      ಇದಕ್ಕೂ ಮೊದಲು ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಅಂಬೇಡ್ಕರ್ ವೃತ್ತದಿಂದ ತಾಯಿ ರಾಜರಾಜೇಶ್ವರಿ ಭಾವಚಿತ್ರದೊಂದಿಗೆ ಕನಕಮಂಟಪ ಮೈದಾನದವರೆಗೂ ಮೆರವಣಿಗೆ ನಡೆಸಲಾಯಿತು.

Monday, October 31, 2022

ನ.೧ರಂದು ಕನ್ನಡ ರಾಜ್ಯೋತ್ಸವ, ಸರ್ವಸದಸ್ಯರ ಸಭೆ

ಭದ್ರಾವತಿ, ಅ. ೩೧ : ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ನ.೧ರಂದು ಬೆಳಿಗ್ಗೆ ೧೧ ಗಂಟೆಗೆ ಸರ್ವಸದಸ್ಯರ ಸಭೆ ಹಾಗು ೬೭ನೇ ಕನ್ನಡ ರಾಜ್ಯೋತ್ಸವ ಅಪ್ಪರ್‌ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
      ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಉದ್ಘಾಟಿಸಲಿದ್ದು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಲುವೇಗೌಡರು, ವೇದಿಕೆ ಗೌರವಾಧ್ಯಕ್ಷೆ ಡಾ. ಆರ್. ಅನುರಾಧ ಪಟೇಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ವೇದಿಕೆ ಅಧ್ಯಕ್ಷೆ ಸುಧಾಮಣಿ ವೆಂಕಟೇಶ್ ಅಧ್ಯಕ್ಷತೆವಹಿಸಲಿದ್ದಾರೆ.

ವಿಇಎಸ್ ವಿದ್ಯಾಸಂಸ್ಥೆ ಅವರಣದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ಭದ್ರಾವತಿ ಹೊಸಸೇತುವೆ ರಸ್ತೆ ಸಿದ್ದಾರೂಢನಗರದಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
    ಭದ್ರಾವತಿ, ಅ. ೩೧ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ನಗರದ ಹೊಸಸೇತುವೆ ರಸ್ತೆ ಸಿದ್ದಾರೂಢನಗರದಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
      ವಿದ್ಯಾಸಂಸ್ಥೆ ಅಧ್ಯಕ್ಷರು ಹಾಗು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಬಿ. ಸಿದ್ದಬಸಪ್ಪ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದಲ್ಲಿ ಸುಮಾರು ೪ ದಶಕಗಳಿಂದ ವಿದ್ಯಾಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿಯವರು ವಿದ್ಯಾಸಂಸ್ಥೆ ಅಭಿವೃದ್ಧಿಗೆ ಸರ್ಕಾರದಿಂದ ಸುಮಾರು ೧ ಕೋ.ರು. ಅನುದಾನ ಬಿಡುಗಡೆಗೊಳಿಸಿದ್ದರು. ಈ ಅನುದಾನದಲ್ಲಿ ಇದೀಗ ವಿದ್ಯಾಸಂಸ್ಥೆಯ ಆಡಳಿತ ಭವನ ನಿರ್ಮಿಸಲಾಗುತ್ತಿದೆ. ಅಲ್ಲದೆ ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಸಹ ಆರಂಭಿಸಲು ಮುಂದಾಗಿದೆ.
      ವಿದ್ಯಾಸಂಸ್ಥೆ ಕಾರ್ಯಾಧ್ಯಕ್ಷ ಬಿ.ಎಲ್ ರಂಗಸ್ವಾಮಿ, ಕಾರ್ಯದರ್ಶಿ ಡಿ.ಎಸ್ ರಾಜಪ್ಪ, ಖಜಾಂಚಿ ಎಸ್.ಕೆ ಮೋಹನ್, ನಿರ್ದೇಶಕರುಗಳಾದ ರಾಜಕುಮಾರ್, ಬಿ.ಆರ್ ದಿನೇಶ್ ಕುಮಾರ್, ಪ್ರಕಾಶ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪೃಥ್ವಿರಾಜ್, ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ.ಎಸ್.ಪಿ ರಾಕೇಶ್, ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ, ಪಿಯು ಕಾಲೇಜಿನ ಪ್ರಾಂಶುಪಾಲ ವರದರಾಜ್, ತಾಂತ್ರಿಕ ಸಲಹೆಗಾರ ಡಾ.ಎಲ್.ಎಸ್ ಮಂಜುನಾಥ್, ತಾಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ವಿದ್ಯಾಸಂಸ್ಥೆಯ ವಿವಿಧ ವಿಭಾಗದ ಮುಖ್ಯೋಪಾಧ್ಯಾಯರುಗಳು ಮತ್ತು ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.



ಶ್ರೀ ತಿರುಮಲ ವೆಂಕಟೇಶ್ವರ ದೇವಸ್ಥಾನ ಸಮಿತಿಯಿಂದ ಶಾಸಕರಿಗೆ ಸನ್ಮಾನ

೬೦ನೇ ವರ್ಷದ ಹುಟ್ಟುಹಬ್ಬ ವಿಜೃಂಭಣೆಯಿಂದ ಆಚರಿಸಿಕೊಂಡ ಶಾಸಕ ಬಿ.ಕೆ ಸಂಗಮೇಶ್ವರ್‌ರನ್ನು ಭದ್ರಾವತಿ ಬಿ.ಎಚ್ ರಸ್ತೆ, ೨ನೇ ವಾರ್ಡ್ ವ್ಯಾಪ್ತಿಯ ಲೋಯರ್ ಹುತ್ತಾ ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಸ್ಥಾನ ಸಮಿತಿ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಅ. ೩೧: ೬೦ನೇ ವರ್ಷದ ಹುಟ್ಟುಹಬ್ಬ ವಿಜೃಂಭಣೆಯಿಂದ ಆಚರಿಸಿಕೊಂಡ ಶಾಸಕ ಬಿ.ಕೆ ಸಂಗಮೇಶ್ವರ್‌ರನ್ನು ನಗರದ ಬಿ.ಎಚ್ ರಸ್ತೆ, ೨ನೇ ವಾರ್ಡ್ ವ್ಯಾಪ್ತಿಯ ಲೋಯರ್ ಹುತ್ತಾ ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಸ್ಥಾನ ಸಮಿತಿ ಸನ್ಮಾನಿಸಿ ಗೌರವಿಸಲಾಯಿತು.
      ನಗರದ ಪ್ರಮುಖ ದೇವಾಲಯಗಳಲ್ಲಿ ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಸಹ ಒಂದಾಗಿದ್ದು, ಪ್ರತಿವರ್ಷ ನಾಡಹಬ್ಬ ದಸರಾ  ಉತ್ಸವಕ್ಕೆ  ಈ ದೇವಸ್ಥಾನದ ಮುಂಭಾಗದಲ್ಲಿಯೇ ಚಾಲನೆ ನೀಡುವುದು ವಿಶೇಷವಾಗಿದೆ. ಶಾಸಕ ಬಿ.ಕೆ ಸಂಗಮೇಶ್ವರ್‌ರವರು ೬೦ ವಸಂತಗಳನ್ನು ಪೂರೈಸಿದ ಹಿನ್ನಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶಾಸಕ ಬಿ.ಕೆ ಸಂಗಮೇಶ್ವರ್‌ರನ್ನು ಸನ್ಮಾನಿಸಿ ಗೌರವಿಸಲಾಯಿತು.
      ಯುವ ಮುಖಂಡ ಬಿ.ಎಸ್ ಗಣೇಶ್, ದೇವಸ್ಥಾನ ಸಮಿತಿ ಅಧ್ಯಕ್ಷ ರಂಗನಾಥರಾವ್ ಕರಾಡೆ, ಪ್ರಧಾನ ಕಾರ್ಯದರ್ಶಿ ಪರಶುರಾಮರಾವ್(ರಘು) ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Sunday, October 30, 2022

ಡಾ. ಪುನೀತ್‌ರಾಜ್‌ಕುಮಾರ್ ಮೊದಲ ಪುಣ್ಯಸ್ಮರಣೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಸಿದ್ದಾಪುರದಲ್ಲಿರುವ ಸುರಕ್ಷಾ ವೃದ್ಧಾಶ್ರಮ ಮತ್ತು ಅನಾಥಾಶ್ರಮದಲ್ಲಿ ಚಲನಚಿತ್ರ ನಟ, ಸಮಾಜ ಸೇವಕ, ಪವರ್‌ಸ್ಟಾರ್ ಡಾ. ಪುನೀತ್‌ರಾಜ್‌ಕುಮಾರ್‌ರವರ ಮೊದಲನೇ ಪುಣ್ಯಸ್ಮರಣೆ ನಡೆಯಿತು.
    ಭದ್ರಾವತಿ, ಅ. ೩೦: ನಗರಸಭೆ ವ್ಯಾಪ್ತಿಯ ಸಿದ್ದಾಪುರದಲ್ಲಿರುವ ಸುರಕ್ಷಾ ವೃದ್ಧಾಶ್ರಮ ಮತ್ತು ಅನಾಥಾಶ್ರಮದಲ್ಲಿ ಚಲನಚಿತ್ರ ನಟ, ಸಮಾಜ ಸೇವಕ, ಪವರ್‌ಸ್ಟಾರ್ ಡಾ. ಪುನೀತ್‌ರಾಜ್‌ಕುಮಾರ್‌ರವರ ಮೊದಲನೇ ಪುಣ್ಯಸ್ಮರಣೆ ನಡೆಯಿತು.
    ಪುನೀತ್‌ರಾಜ್‌ಕುಮಾರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಚಿತ್ರರಂಗಕ್ಕೆ ಹಾಗು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸಲಾಯಿತು. ಸುರಕ್ಷಾ ಸೇವಾ ಟ್ರಸ್ಟ್ ಅಧ್ಯಕ್ಷೆ ಜ್ಯೋತಿ, ಖಜಾಂಚಿ ಪ್ರಶಾಂತ್, ಕಾರ್ಯದರ್ಶಿ ಸೋಮಶೇಖರ್, ಟ್ರಸ್ಟಿಗಳಾದ ಜ್ಯೋತಿ ರಂಗನಾಥ್, ಕುಮಾರ್, ಸಂಜು, ಲಲಿತಾ, ಸೌಮ್ಯ ಸೇರಿದಂತೆ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳು ಇನ್ನಿತರರು ಉಪಸ್ಥಿತರಿದ್ದರು.

ಪುರಸಭೆ ಮಾಜಿ ಅಧ್ಯಕ್ಷೆ ಸರೋಜಮ್ಮ ಮುಳ್ಳೇಗೌಡರ ನಿವಾಸಕ್ಕೆ ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭದ್ರಾವತಿ ಪುರಸಭೆ ಮಾಜಿ ಅಧ್ಯಕ್ಷೆ ಸರೋಜಮ್ಮ ಮುಳ್ಳೇಗೌಡರ ಮನೆಗೆ ಭೇಟಿ ನೀಡಿ ಕುಟುಂಬಸ್ಥರ ಯೋಗಕ್ಷೇಮ ವಿಚಾರಿಸಿದರು.
    ಭದ್ರಾವತಿ, ಅ. ೩೦ : ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪುರಸಭೆ ಮಾಜಿ ಅಧ್ಯಕ್ಷೆ ಸರೋಜಮ್ಮ ಮುಳ್ಳೇಗೌಡರ ಮನೆಗೆ ಭೇಟಿ ನೀಡಿ ಕುಟುಂಬಸ್ಥರ ಯೋಗಕ್ಷೇಮ ವಿಚಾರಿಸಿದರು.
    ಕಳೆದ ೨ ದಿನಗಳ ಹಿಂದೆ ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ೬೦ನೇ ಹುಟ್ಟುಹಬ್ಬ ನಮ್ಮ ಅಭಿಮಾನ ಸಂಗಮೇಶೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ, ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಆರ್ ಸೀತಾರಾಮ್, ಶಾಸಕರಾದ ಬಿ.ಕೆ ಸಂಗಮೇಶ್ವರ್, ಭೈರತಿ ಸುರೇಶ್ ಸೇರಿದಂತೆ ಇನ್ನಿತರರು ಸಿದ್ದರೂಢನಗರದಲ್ಲಿರುವ ಸರೋಜಮ್ಮ ಮುಳ್ಳೇಗೌಡರವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರ ಯೋಗಕ್ಷೇಮ ವಿಚಾರಿಸಿದರು.
    ನಗರಸಭೆ ಸದಸ್ಯ ಆರ್. ಶ್ರೇಯಸ್(ಚಿಟ್ಟೆ), ಮಾಜಿ ಅಧ್ಯಕ್ಷೆ ವೈ. ರೇಣುಕಮ್ಮ, ವೈದ್ಯ ಡಾ. ಓ. ಮಲ್ಲಪ್ಪ, ಮಾಜಿ ಸದಸ್ಯ ಪ್ರಕಾಶ್‌ರಾವ್, ತಾಲೂಕು ಕುರುಬರ ಸಂಘದ ಮಾಜಿ ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗು ಸರೋಜಮ್ಮ ಕುಟುಂಬಸ್ಥರು ಇನ್ನಿತರರು ಉಪಸ್ಥಿತರಿದ್ದರು.