Tuesday, November 1, 2022

ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಮಾತೃ ಭಾಷೆ ಸಹಕಾರಿ : ಡಿ. ಮಂಜುನಾಥ್

ಭದ್ರಾವತಿ ಅಪ್ಪರ್‌ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ನ. ೧:  ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪರಿಸರದ ಭಾಷೆ, ಮಾತೃ ಭಾಷೆ ಹೆಚ್ಚು ಸಹಕಾರಿಯಾಗಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಹೇಳಿದರು.
      ಅವರು ಮಂಗಳವಾರ ನಗರದ ಅಪ್ಪರ್‌ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.
      ಮಕ್ಕಳ ಕಲಿಕೆ ಮಾತೃ ಭಾಷೆಯಲ್ಲಿಯೇ ಆರಂಭವಾಗಬೇಕು. ಪರಿಸರದ ಭಾಷೆಯಲ್ಲಿ ಬೆಳೆದ ಅನೇಕರು ಮಹಾನ್ ವ್ಯಕ್ತಿಗಳಾಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳು ಇಂದು ಸಮಾಜದಲ್ಲಿ ನಮ್ಮಲ್ಲರಿಗೂ ಮಾದರಿಯಾಗಿದ್ದಾರೆ. ಪೋಷಕರು ಮಾತೃ ಭಾಷೆ ಮೇಲಿನ ಅಭಿಮಾನ ಬೆಳೆಸಿಕೊಳ್ಳಬೇಕೆಂದರು.
      ಪ್ರಪಂಚದ ಪ್ರಮುಖ ಭಾಷೆಗಳಲ್ಲಿ ಕನ್ನಡ ಸಹ ಒಂದಾಗಿದ್ದು, ಅದರಲ್ಲೂ ದೇಶದಲ್ಲಿರುವ ಭಾಷೆಗಳಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಕಾಯ್ದುಕೊಂಡಿದೆ. ಇಂತಹ ಭಾಷೆ ಮೇಲೆ ನಮ್ಮ ಅಭಿಮಾನ ಹೆಚ್ಚಾಗಬೇಕು. ಆಗ ಮಾತ್ರ ಕನ್ನಡ ರಾಜ್ಯೋತ್ಸವ ಆಚರಣೆ ಸಾರ್ಥಕಗೊಳ್ಳುತ್ತದೆ ಎಂದರು.
      ವೇದಿಕೆ ಗೌರವಾಧ್ಯಕ್ಷೆ ಡಾ. ಅನುರಾಧ ಪಟೇಲ್ ಮಾತನಾಡಿ, ವೇದಿಕೆ ಸಮಾಜಮುಖಿಯಾಗಿ ಮುನ್ನಡೆಯುತ್ತಿದೆ. ಸದಸ್ಯರು ಸರ್ವತೋಮುಖವಾಗಿ ಬೆಳವಣಿಗೆ ಹೊಂದಲು ವೇದಿಕೆ ಸಹಕಾರಿಯಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ವೇದಿಕೆಯಲ್ಲಿ ಮುನ್ನಡೆಯಬೇಕೆಂದರು.
      ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಲುವೇಗೌಡರು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿದ್ದರು. ವೇದಿಕೆ ಅಧ್ಯಕ್ಷೆ ಸುಧಾಮಣಿ ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು.  ಕಾರ್ಯದರ್ಶಿ ಲತಾ ಪ್ರಭಾಕರ್ ವಾರ್ಷಿಕ ವರದಿ ಹಾಗು ಖಜಾಂಚಿ ಭಾರತಿ ಕುಮಾರ್ ಲೆಕ್ಕಪತ್ರ ಮಂಡಿಸಿದರು.  

No comments:

Post a Comment