Wednesday, November 23, 2022

೯ ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ಶಿಕ್ಷಕ ಬಂಧನ

    ಭದ್ರಾವತಿ, ನ. ೨೩: ಶಾಲಾ ಶಿಕ್ಷಕನೊಬ್ಬ ಸುಮಾರು ೯ ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
      ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯ ಕುಟುಂಬಸ್ಥರು ನೀಡಿರುವ ದೂರಿನ ಆನ್ವಯ ಪೊಲೀಸರು ಉರ್ದು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ , ಖಲಂದರ್ ನಗರದ ನಿವಾಸಿ ಅಕ್ಬರ್ ಎಂಬಾತನನ್ನು ಬಂಧಿಸಿ ಶಿವಮೊಗ್ಗ ಪೋಕ್ಸೋ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಟಿಪ್ಪು ಪ್ರತಿಮೆ, ಮುಖ್ಯದ್ವಾರ ನಿರ್ಮಾಣ ಕುರಿತು ಸಿ.ಎಂ ಖಾದರ್ ಭಾಷಣ

ವ್ಯಾಪಕವಾಗಿ ಹರಿದಾಡುತ್ತಿದೆ ೩ ದಿನಗಳ ಹಿಂದಿನ ವಿಡಿಯೋ


    ಭದ್ರಾವತಿ, ನ. ೨೩ : ನಗರದ ಅನ್ವರ್ ಕಾಲೋನಿ ಹೊಳೆಹೊನ್ನೂರು ವೃತ್ತದಲ್ಲಿ ಟಿಪ್ಪು ಸುಲ್ತಾನ್ ಪ್ರತಿಮೆ ಹಾಗು ಮುಖ್ಯದ್ವಾರ ನಿರ್ಮಿಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಸಹೋದರ, ಕಾಂಗ್ರೆಸ್ ಮುಖಂಡ ಸಿ.ಎಂ ಖಾದರ್ ಭಾಷಣದ ವಿಡಿಯೋ ಇದೀಗ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದೆ.
    ಕಳೆದ ೩ ದಿನಗಳ ಹಿಂದೆ ನಗರದ ಹೊಳೆಹೊನ್ನೂರು ವೃತ್ತದಲ್ಲಿ ದೇಶಪ್ರೇಮಿ ಟಿಪ್ಪು ಸುಲ್ತಾನ್ ಯುವಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಟಿಪ್ಪು ಜಯಂತಿ ಹಾಗು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿರುವ ಭಾಷಣದ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ.
    ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ನಾವು ಬಿ.ಕೆ ಸಂಗಮೇಶ್ವರನ್ನು ಪುನಃ ಕ್ಷೇತ್ರದ ಶಾಸಕರನ್ನಾಗಿ ಆಯ್ಕೆಮಾಡುತ್ತೇವೆ. ಸರ್ಕಾರದಲ್ಲಿ  ಮಂತ್ರಿಯನ್ನಾಗಿ ಮಾಡುತ್ತೇವೆ. ಅವರು ಮಂತ್ರಿಯಾದ ನಂತರ  ಸುಮಾರು ೨೨ ಅಡಿ ಎತ್ತರದ ಟಿಪ್ಪು ಸುಲ್ತಾನ್ ಪ್ರತಿಮೆ ಹಾಗು ಟಿಪ್ಪು ಹೆಸರಿನ ಮುಖ್ಯದ್ವಾರ ನಿರ್ಮಿಸುವುದು ಖಚಿತ  ಎಂದು ಭಾಷಣದಲ್ಲಿ ಹೇಳಿದ್ದು, ಇದಕ್ಕೂ ಮೊದಲು ವೀರಸಾರ್ವಕರ್ ಕುರಿತು ಮಾತನಾಡಿದ್ದಾರೆ. ಈ ವಿಡಿಯೋ ಇದೀಗ ವ್ಯಾಪಕವಾಗಿ ಹರಿದಾಡುತ್ತಿದೆ.

ವಿಜೃಂಭಣೆಯಿಂದ ಜರುಗಿದ ಶ್ರೀ ಸತ್ಯ ಸಾಯಿ ಬಾಬಾರವರ ೯೭ನೇ ಜನ್ಮದಿನೋತ್ಸವ

ಭದ್ರಾವತಿ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು ಮತ್ತು ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಬುಧವಾರ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ೯೭ನೇ ಜನ್ಮದಿನೋತ್ಸವ ಹಿನ್ನಲೆಯಲ್ಲಿ ಶಾಲಾ ಮಕ್ಕಳಿಂದ ಪಲ್ಲಕ್ಕಿ ಸೇವೆ ನಡೆಯಿತು.
ಭದ್ರಾವತಿ, ನ. ೨೩ : ನಗರದ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು ಮತ್ತು ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಬುಧವಾರ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ೯೭ನೇ ಜನ್ಮದಿನೋತ್ಸವ ಹಲವು ಧಾರ್ಮಿಕ ಹಾಗು ಸೇವಾ ಕಾರ್ಯಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
      ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರದಲ್ಲಿ ಬೆಳಿಗ್ಗೆ ಓಂಕಾರ, ಜ್ಯೋತಿರ್ಧ್ಯಾನ, ಸುಪ್ರಭಾತ, ನಗರಸಂಕೀರ್ತನೆ, ಪ್ರಶಾಂತಿ ಧ್ವಜಾರೋಹಣ, ಶ್ರೀ ಸಾಯಿ ಸತ್ಯ ನಾರಾಯಣ ಪೂಜೆ, ಸಹಸ್ರ ನಾಮಾರ್ಚನೆ, ಶಿವಮೊಗ್ಗ ಮಿಡ್‌ಟೌನ್ ರೋಟರಿ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಾಗು ಶ್ರೀ ಸತ್ಯ ಸಾಯಿ ಶಾಲಾ ಮಕ್ಕಳಿಂದ ಪಲ್ಲಕ್ಕಿ ಸೇವೆ, ಮಹಾಮಂಗಳಾರತಿ, ಶಾಲಾ ಮಕ್ಕಳಿಗೆ ಮಹಾಪ್ರಸಾದ ವಿನಿಯೋಗ ಜರುಗಿತು.     ಮಧ್ಯಾಹ್ನ ನಾರಾಯಣರಿಗೆ ವಸ್ತ್ರದಾನ ಮತ್ತು ನಾರಾಯಣ ಸೇವೆ, ಭಕ್ತಾಧಿಗಳಿಗೆ ಮಹಾಪ್ರಸಾದ ವಿನಿಯೋಗ, ಸಂಜೆ ಕಲಾವಾದ್ಯಗಳೊಂದಿಗೆ ಹಾಡುಗಾರಿಕೆ ಹಾಗು ಭಜನೆ, ಚಿಂತನೆ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಜರುಗಿದವು.


ಭದ್ರಾವತಿ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು ಮತ್ತು ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಬುಧವಾರ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ೯೭ನೇ ಜನ್ಮದಿನೋತ್ಸವ ಹಿನ್ನಲೆಯಲ್ಲಿ ರಕ್ತದಾನ ಶಿಬಿರ ನಡೆಯಿತು.
      ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಕಾರ್ಯದರ್ಶಿ ಡಿ. ಪ್ರಭಾಕರ ಬೀರಯ್ಯ, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಶಿಕ್ಷಣ ಸಂಯೋಜಕ ಪರಮೇಶ್ವರಪ್ಪ, ಪ್ರಾಂಶುಪಾಲರಾದ ಮೃತ್ಯುಂಜಯ ಕಾನಿಟ್ಕರ್, ಶಾಮರಾಯಚಾರ್, ಉಪಪಾಂಶುಪಾಲ ಪ್ರಸನ್ನ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗು ಸಿಬ್ಬಂದಿ ವರ್ಗದವರು, ಉದ್ಯಮಿ ಬಿ.ಕೆ ಜಗನ್ನಾಥ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಭಕ್ತಾಧಿಗಳು ಪಾಲ್ಗೊಂಡಿದ್ದರು.


ಭದ್ರಾವತಿ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು ಮತ್ತು ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಬುಧವಾರ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ೯೭ನೇ ಜನ್ಮದಿನೋತ್ಸವ ಹಿನ್ನಲೆಯಲ್ಲಿ ಶ್ರೀ ಸಾಯಿ ಸತ್ಯನಾರಾಯಣ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.

ಬಂಜಾರ ರೈತರ ಸಂಘ ಅಸ್ತಿತ್ವಕ್ಕೆ : ರಾಜ್ಯಾಧ್ಯಕ್ಷರಾಗಿ ಕೃಷ್ಣನಾಯ್ಕ

ನೂತನವಾಗಿ ರಾಜ್ಯ ಬಂಜಾರ ರೈತರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಭದ್ರಾವತಿ ನಗರದಲ್ಲಿ ಆಯೋಜಿಸಲಾಗಿದ್ದ ಪದಗ್ರಹಣ ಸಮಾರಂಭವನ್ನು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಉದ್ಘಾಟಿಸಿದರು.
    ಭದ್ರಾವತಿ, ನ. ೨೩ : ನೂತನವಾಗಿ ರಾಜ್ಯ ಬಂಜಾರ ರೈತರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ನಗರದಲ್ಲಿ ಆಯೋಜಿಸಲಾಗಿದ್ದ ಪದಗ್ರಹಣ ಸಮಾರಂಭವನ್ನು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಉದ್ಘಾಟಿಸಿದರು.
      ಸಮಾರಂಭದಲ್ಲಿ ಮಾತನಾಡಿದ ಪ್ರಮುಖರು, ಹೆಚ್ಚು ಸಂಘಟಿತರಾಗಿ ರೈತರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಹೆಚ್ಚು ಗಮನ ಹರಿಸಬೇಕೆಂದರು.
      ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ದಲಿತ ಮುಖಂಡ ಕುಬೇಂದ್ರಪ್ಪ, ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆನಂದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
      ನೂತನ ಪದಾಧಿಕಾರಿಗಳು: ರಾಜ್ಯಾಧ್ಯಕ್ಷರಾಗಿ ಕೃಷ್ಣನಾಯ್ಕ, ಉಪಾಧ್ಯಕ್ಷರಾಗಿ ಸುನಿಲ್‌ಕುಮಾರ್(ದಾವಣಗೆರೆ) ಮತ್ತು ರಮೇಶ್‌ನಾಯ್ಕ(ತುಮಕೂರು), ಪ್ರಧಾನ ಕಾರ್ಯದರ್ಶಿಯಾಗಿ ಶಂಕರನಾಯ್ಕ, ಕಾರ್ಯಾಧ್ಯಕ್ಷರಾಗಿ ರಮೇಶ್‌ನಾಯ್ಕ(ಕೊಪ್ಪಳ), ಮಹಿಳಾ ಘಟಕದ ರಾಜ್ಯಾಧ್ಯಕ್ಷರಾಗಿ ಉಷಾನಾಯ್ಕ, ರಾಜ್ಯ ಯುವ ಘಟಕದ ಅಧ್ಯಕ್ಷರಾಗಿ ಮಂಜಾನಾಯ್ಕ, ಸಲಹೆಗಾರರಾಗಿ ಅಮೋಸ್, ಕಾನೂನು ಸಲಹೆಗಾರರಾಗಿ ಎಚ್.ಆರ್ ಲಮಾಣಿ(ಹಾವೇರಿ), ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಮಂಜಾನಾಯ್ಕ ಮತ್ತು ಬಾಗಲಕೋಟೆ ಜಿಲ್ಲಾಧ್ಯಕ್ಷರಾಗಿ ಶಿವರಾಜ ಸೇರಿದಂತೆ ಇನ್ನಿತರರು ಪದಗ್ರಹಣ ಸ್ವೀಕರಿಸಿದರು.
      ಸಂಘದ ರಾಜ್ಯಾಧ್ಯಕ್ಷ ಕೃಷ್ಣನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಗಣೇಶ್ ಪ್ರಾರ್ಥಿಸಿ, ಮಂಜನಾಯ್ಕ ಸ್ವಾಗತಿಸಿದರು.  

Tuesday, November 22, 2022

೪೦ ಮಂದಿಗೆ ಉಚಿತ ದಂತ ಪಂಕ್ತಿ ಜೋಡಣೆ

ಮಂಗಳೂರಿನ ಯೆನೆಪೋಯ ಡೆಂಟಲ್ ಕಾಲೇಜು ಸಹಯೋಗದೊಂದಿಗೆ ಭದ್ರಾವತಿಯಲ್ಲಿ ರೋಟರಿ ಕ್ಲಬ್ ಮತ್ತು ಜನ್ನಾಪುರ ಕಲಾ ಡಿಜಿಟಲ್ ಸ್ಟುಡಿಯೋ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರಕ್ಕೆ ರೋಟರಿ ಕ್ಲಬ್ ಅಧ್ಯಕ್ಷ ಎಸ್. ಅಡವೀಶಯ್ಯ ಚಾಲನೆ ನೀಡಿದರು.
    ಭದ್ರಾವತಿ, ನ. ೨೨: ಮಂಗಳೂರಿನ ಯೆನೆಪೋಯ ಡೆಂಟಲ್ ಕಾಲೇಜು ಸಹಯೋಗದೊಂದಿಗೆ ನಗರದ ರೋಟರಿ ಕ್ಲಬ್ ಮತ್ತು ಜನ್ನಾಪುರ ಕಲಾ ಡಿಜಿಟಲ್ ಸ್ಟುಡಿಯೋ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರದಲ್ಲಿ ಸುಮಾರು ೪೦ ಮಂದಿ ಪಾಲ್ಗೊಂಡು ಸದುಪಯೋಗ ಪಡೆದುಕೊಂಡರು.
      ಹಿರಿಯ ನಾಗರೀಕರು ಹಾಗು ೧೮ ವರ್ಷ ಮೇಲ್ಪಟ್ಟವರಿಗೆ ರೋಟರಿ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಬಿರದ ಯಶಸ್ವಿಗೆ ಯೆನೆಪೋಯ ಡೆಂಟಲ್ ಕಾಲೇಜಿನ ವೈದ್ಯರು ಮತ್ತು ಸಿಬ್ಬಂದಿಯನ್ನೊಳಗೊಂಡ ಸುಮಾರು ೪೦ ಜನರ ತಂಡ ಹಾಗು ರೋಟರಿ ಪದಾಧಿಕಾರಿಗಳು, ಸದಸ್ಯರು ಮತ್ತು ಕಲಾ ಡಿಜಿಟಲ್ ಸ್ಟುಡಿಯೋ ಸಿಬ್ಬಂದಿಗಳು ಶ್ರಮಿಸಿದರು.
      ಶಿಬಿರಕ್ಕೆ ರೋಟರಿ ಕ್ಲಬ್ ಅಧ್ಯಕ್ಷ ಎಸ್. ಅಡವೀಶಯ್ಯ ಚಾಲನೆ ನೀಡಿದರು.  ಯೆನೆಪೋಯ ಡೆಂಟಲ್ ಕಾಲೇಜಿನ ವಿಭಾಗದ ಮುಖ್ಯಸ್ಥ ಡಾ. ಸನತ್ ಶೆಟ್ಟಿ, ಪ್ರೊಫೆಸರ್‌ಗಳಾದ ಡಾ. ರಾಜೇಶ್‌ಶೆಟ್ಟಿ, ಡಾ. ವಿದ್ಯಾ ಭಟ್, ಕಲಾ ಸ್ಟುಡಿಯೋ ಕೆವಿನ್ ಸೋಲೊಮಾನ್, ರೋಟರಿ ಕ್ಲಬ್  ಕಾರ್ಯದರ್ಶಿ ಕೆ.ಎಚ್ ಶಿವಕುಮಾರ್, ದುಷ್ಯಂತ್‌ರಾಜ್, ತೀರ್ಥಯ್ಯ, ದಯಾ ಸಾಗರ್ ಟ್ರಸ್ಟ್‌ನ ಮೋಸಸ್ ರೋಸಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಮಂಗಳೂರಿನ ಯೆನೆಪೋಯ ಡೆಂಟಲ್ ಕಾಲೇಜು ಸಹಯೋಗದೊಂದಿಗೆ ನಗರದ ರೋಟರಿ ಕ್ಲಬ್ ಮತ್ತು ಜನ್ನಾಪುರ ಕಲಾ ಡಿಜಿಟಲ್ ಸ್ಟುಡಿಯೋ ವತಿಯಿಂದ ಮಂಗಳವಾರ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರ ಆಯೋಜಿಸಲಾಗಿತ್ತು.

ಟಿಪ್ಪು ಜಯಂತಿ, ಕನ್ನಡ ರಾಜ್ಯೋತ್ಸವ

ಭದ್ರಾವತಿಯಲ್ಲಿ ದೇಶಪ್ರೇಮಿ ಟಿಪ್ಪು ಸುಲ್ತಾನ್ ಯುವಕರ ಸಂಘದ ವತಿಯಿಂದ ನಗರದ ಹೊಳೆಹೊನ್ನೂರು ವೃತ್ತದಲ್ಲಿ ಟಿಪ್ಪು ಜಯಂತಿ ಮತ್ತು ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.
    ಭದ್ರಾವತಿ, ನ. ೨೨: ದೇಶಪ್ರೇಮಿ ಟಿಪ್ಪು ಸುಲ್ತಾನ್ ಯುವಕರ ಸಂಘದ ವತಿಯಿಂದ ನಗರದ ಹೊಳೆಹೊನ್ನೂರು ವೃತ್ತದಲ್ಲಿ ಟಿಪ್ಪು ಜಯಂತಿ ಮತ್ತು ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.
      ಹೊಳೆಹೊನ್ನೂರು ವೃತ್ತದಿಂದ ಸಿ.ಎನ್ ರಸ್ತೆ, ರಂಗಪ್ಪ ವೃತ್ತ, ಮಾಧವಚಾರ್ ವೃತ್ತ ಮೂಲಕ ಬಿ.ಎಚ್ ರಸ್ತೆ ಹಾಲಪ್ಪ ವೃತ್ತ ಮೂಲಕ ಅಂಬೇಡ್ಕರ್ ವೃತ್ತದ ವರೆಗೆ ಟಿಪ್ಪು ಸುಲ್ತಾನ್ ಭಾವಚಿತ್ರದೊಂದಿಗೆ ಕನ್ನಡ ಧ್ವಜ ಹಿಡಿದು ಮೆರವಣಿಗೆ ನಡೆಸಲಾಯಿತು. ನಂತರ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುನಃ ಇದೆ ಮಾರ್ಗದಲ್ಲಿ ಹಿಂದಿರುಗಿ ಹೊಳೆಹೊನ್ನೂರು ವೃತ್ತ ತಲುಪಲಾಯಿತು.
      ಶಾಸಕ ಬಿ.ಕೆ ಸಂಗಮೇಶ್ವರ್, ಮಾಜಿ ಉಪಮೇಯರ್ ಮಹಮದ್ ಸನ್ನಾವುಲ್ಲಾ, ಪ್ರಮುಖರಾದ ಸಿ.ಎಂ ಖಾದರ್, ಫೀರ್‌ಷರೀಫ್, ಅಮೀರ್‌ಜಾನ್, ಜಹೀರ್ ಜಾನ್, ಅಮೋಸ್, ಕೃಷ್ಣನಾಯ್ಕ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ದುಶ್ಚಟಗಳಿಂದ ದೂರವಿರುವಂತೆ ಎಚ್ಚರವಹಿಸಿ : ಬಿ.ಕೆ ಸಂಗಮೇಶ್ವರ್

ಅಪೇಕ್ಷ ನೃತ್ಯ ಕಲಾ ವೃಂದ ಹಾಗು ಶ್ರೀ ಬಸವೇಶ್ವರ ಧರ್ಮಸಂಸ್ಥೆ ವತಿಯಿಂದ ಭದ್ರಾವತಿ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ, ಸಂಗೀತ ನೃತ್ಯ ಸಂಭ್ರಮ, ವಿವಿಧ ಕ್ಷೇತ್ರದ ಸಾಧಕರಿಗೆ ಪುರಸ್ಕಾರ ಮತ್ತು ಸನ್ಮಾನ ಹಾಗು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಕುವರ/ಕುವರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ನ. ೨೨: ಪೋಷಕರು ತಮ್ಮ ಮಕ್ಕಳು ಕಲೆ, ಸಾಹಿತ್ಯ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ದುಶ್ಚಟಗಳಿಂದ ದೂರವಿರುವಂತೆ ಎಚ್ಚರವಹಿಸಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
      ಅವರು ಮಂಗಳವಾರ ಅಪೇಕ್ಷ ನೃತ್ಯ ಕಲಾ ವೃಂದ ಹಾಗು ಶ್ರೀ ಬಸವೇಶ್ವರ ಧರ್ಮಸಂಸ್ಥೆ ವತಿಯಿಂದ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ, ಸಂಗೀತ ನೃತ್ಯ ಸಂಭ್ರಮ, ವಿವಿಧ ಕ್ಷೇತ್ರದ ಸಾಧಕರಿಗೆ ಪುರಸ್ಕಾರ ಮತ್ತು ಸನ್ಮಾನ ಹಾಗು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಕುವರ/ಕುವರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
      ಮಕ್ಕಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಹ ತೊಡಗಿಸಿಕೊಂಡು ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಪ್ರತಿಯೊಬ್ಬರು ಸಹ ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕೆಂದರು.
       ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್ ಪರಮೇಶ್ವರಪ್ಪ ಮಾತನಾಡಿ, ಮಕ್ಕಳ ಮುಂದಿನ ಭವಿಷ್ಯದ ಬೆಳವಣಿಗೆಯಲ್ಲಿ ಆಂಗ್ಲ ಭಾಷೆ ಹೆಚ್ಚಿನ ಪ್ರಾಮುಖ್ಯತೆ ವಹಿಸಲಿದೆ ಎಂಬ ಭಾವನೆಯಲ್ಲಿ ಕನ್ನಡ ಭಾಷೆ ಕಲಿಕೆಯಿಂದ ದೂರ ಉಳಿಯುವುದು ಸರಿಯಲ್ಲ. ಎಲ್ಲಾ ಭಾಷೆ ಮೇಲೆ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆ ಮೇಲಿನ ಅಭಿಮಾನ ಬೆಳೆಸಿಕೊಳ್ಳುವುದು ಪ್ರಸ್ತುತ ಅನಿವಾರ್ಯವಾಗಿದೆ. ಹೊಸ ಶಿಕ್ಷಣ ನೀತಿಯಲ್ಲಿ ಮಕ್ಕಳು ಕಡ್ಡಾಯವಾಗಿ ೫ನೇ ತರಗತಿವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವಂತೆ ಸೂಚಿಸಲಾಗಿದೆ. ಅಲ್ಲದೆ ಭಾಷಾ ತಜ್ಞರು ಸಹ ಮಾತೃಭಾಷೆ ಶಿಕ್ಷಣ ಕಲಿಕೆ ಕುರಿತು ಸಲಹೆ ನೀಡಿದ್ದಾರೆ. ಮಾತೃಭಾಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಇತರರಿಗೆ ಪ್ರೇರಣೆಯಾಗಿದೆ ಎಂದರು.
      ಸಮಾಜ ಸೇವಕ ಸ್ನೇಹಜೀವಿ ಉಮೇಶ್ ಮಾತನಾಡಿ, ಅತಿಹೆಚ್ಚು ಅಂಕಪಡೆದ ಮಕ್ಕಳನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯವಾಗಿದೆ. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆ ಕಾಯಿಯಂತೆ ಸಾಧನೆ ಮಾಡಿರುವ ಸಾಧಕರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿರುವುದು ಭವಿಷ್ಯದಲ್ಲಿ ಮಕ್ಕಳು ಕಲೆ, ಸಾಹಿತ್ಯ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಿದೆ ಎಂದರು.
       ಅಪೇಕ್ಷ ನೃತ್ಯ ಕಲಾ ವೃಂದ ಅಧ್ಯಕ್ಷೆ ಭಾರತಿ ಗೋವಿಂದಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.  ತಹಸೀಲ್ದಾರ್ ಆರ್. ಪ್ರದೀಪ್, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ. ಸಿದ್ದಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ಡಿ.ಎಸ್ ಶಿವಪ್ರಕಾಶ್, ಉದ್ಯಮಿಗಳಾದ ಸುಧಾಕರ ಶೆಟ್ಟಿ, ಬಿ.ಕೆ ಜಗನ್ನಾಥ ಮತ್ತು ಬಸವೇಶ್ವರ ಧರ್ಮಸಂಸ್ಥೆ ಅಧ್ಯಕ್ಷ ಶಿವಕುಮಾರ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
      ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತ ವಿಭಾಗದ ಉಪನಿರ್ದೇಶಕ ಸಿ.ಆರ್ ಪರಮೇಶ್ವರಪ್ಪರವರಿಗೆ ಶಿಕ್ಷಣ ಸಂಜೀವಿನಿ ರಾಜ್ಯ ಪ್ರಶಸ್ತಿ, ಸರ್ಕಾರಿ ಆಸ್ಪತ್ರೆ ಹಿರಿಯ ವೈದ್ಯ ಡಾ. ಎಚ್.ಆರ್ ವೀರಭದ್ರಪ್ಪರವರಿಗೆ ವೈದ್ಯಕೀಯ ರತ್ನ ರಾಜ್ಯ ಪ್ರಶಸ್ತಿ, ಅಂತರಾಷ್ಟ್ರೀಯ ಯೋಗಪಟು ಎನ್.ಪಿ ವೆಂಕಟೇಶ್‌ರವರಿಗೆ ಯೋಗ ಸಾಮ್ರಾಟ್ ರಾಜ್ಯ ಪ್ರಶಸ್ತಿ, ಬೆಂಗಳೂರಿನ ಸಂಗೀತ ಶಿಕ್ಷಕಿ ವಿದೂಷಿ ಎಸ್.ಎ ಛಾಯಾರವರಿಗೆ ಸಂಗೀತ ರತ್ನ ರಾಜ್ಯ ಪ್ರಶಸ್ತಿ, ಪೊಲೀಸ್ ನಿರೀಕ್ಷಕ ಬಿ. ಮಹಮದ್ ಸಲೀಂರವರಿಗೆ ಆರಕ್ಷಕ ರತ್ನ ರಾಜ್ಯ ಪ್ರಶಸ್ತಿ, ಹಿರಿಯ ಗಾಯಕ ಶ್ರೀವತ್ಸರಿಗೆ ಜಯಶೀಲನ್ ರಾಜ್ಯ ಪ್ರಶಸ್ತಿ, ಹುಬ್ಬಳ್ಳಿ ಜಾನಪದ ಕಲಾವಿದ ಮುತ್ತಪ್ಪ ಯಮನಪ್ಪ ಭೂತಪ್ಪಗೋಳ ಹಾಗು ಶಿವಮೊಗ್ಗ ನಿವೃತ್ತ ಶಿಕ್ಷಕ, ಜಾನಪದ ಕಲಾವಿದ ನಿಸಾರ್ ಖಾನ್ ಕೆಂಚಾಯಿಕೊಪ್ಪರಿಗೆ ಜಾನಪದ ರತ್ನ ರಾಜ್ಯ ಪ್ರಶಸ್ತಿ, ಸುರಕ್ಷಾ ವೃದ್ಧಾಶ್ರಮ ಹಾಗು ಸುರಕ್ಷಾ ಅನಾಥಶ್ರಮ ಅಧ್ಯಕ್ಷೆ ಜ್ಯೋತಿ ಸೋಮಶೇಖರ್, ಬೆಂಗಳೂರಿನ ಸಮಾಜ ಸೇವಕ ದಾಮೋದರ ರೆಡ್ಡಿ, ಸರ್ಕಾರಿ ಆಸ್ಪತ್ರೆ ನಿವೃತ್ತ ನೌಕರ ಗೋವಿಂದಪ್ಪ ಮತ್ತು ಎನ್‌ಆರ್ ಪುರದ ಅಭಿನವ ಪ್ರತಿಭಾ ವೇದಿಕೆ ಮುಖ್ಯಸ್ಥ ಅಭಿನವ ಗಿರಿರಾಜ್‌ರವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಹಾಗು ವೈ.ಎಂ ಧರ್ಮಪ್ಪ, ಆರ್. ಅನಿತ, ಬಿ.ಎಚ್ ನಿರಂಜನಮೂರ್ತಿ, ಜಿ.ಎಚ್ ಪ್ರಭು, ಡಾ. ಎನ್. ತ್ರಿವೇಣಿ, ಎಸ್.ಎನ್ ಸಿದ್ದಯ್ಯ ಮತ್ತು ಸಿ ಶೇಖರಪ್ಪರವರಿಗೆ ಶಿಕ್ಷಣ ಸೇವಾ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
      ನೃತ್ಯ ಕಲಾವಿದ, ದೈಹಿಕ ಶಿಕ್ಷಕ ಅಪೇಕ್ಷ ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಿ. ಚನ್ನಪ್ಪ ಸ್ವಾಗತಿಸಿ, ಅರಳೇಹಳ್ಳಿ ಅಣ್ಣಪ್ಪ ನಿರೂಪಿಸಿದರು. ಜಾನಪದ ಕಲಾವಿದ, ಶಿಕ್ಷಕ ರೇವಣಪ್ಪ ಸಂಗಡಿಗರು ಪ್ರಾರ್ಥಿಸಿದರು.
      ಶಿಕ್ಷಕರಾದ ಯು. ಮಹಾದೇವಪ್ಪ, ಕೋಕಿಲ, ವೈ.ಕೆ ಹನುಮಂತಯ್ಯ, ಕವಿತಾರಾವ್, ಎಲ್. ದೇವರಾಜ್, ಸುಧಾಮಣಿ, ಕವಿತಾ ಸೇರಿದಂತೆ ವಿವಿಧ ಶಾಲೆಗಳ ಮಕ್ಕಳು, ಶಿಕ್ಷಕರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಅಪೇಕ್ಷ ನೃತ್ಯ ಕಲಾ ವೃಂದ ಹಾಗು ಶ್ರೀ ಬಸವೇಶ್ವರ ಧರ್ಮಸಂಸ್ಥೆ ವತಿಯಿಂದ ಭದ್ರಾವತಿ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ, ಸಂಗೀತ ನೃತ್ಯ ಸಂಭ್ರಮ, ವಿವಿಧ ಕ್ಷೇತ್ರದ ಸಾಧಕರಿಗೆ ಪುರಸ್ಕಾರ ಮತ್ತು ಸನ್ಮಾನ ಹಾಗು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಕುವರ/ಕುವರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ , ಸುರಕ್ಷಾ ವೃದ್ಧಾಶ್ರಮ ಹಾಗು ಸುರಕ್ಷಾ ಅನಾಥಶ್ರಮ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ದಂಪತಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.