Sunday, November 27, 2022

ನ.೨೯ರಂದು ಸುಬ್ರಹ್ಮಣ್ಯ ಷಷ್ಠಿ

    ಭದ್ರಾವತಿ, ನ. ೨೭ :  ಹಳೇನಗರದ ಶ್ರೀ ರಾಮೇಶ್ವರ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ನ. ೨೯ರ ಮಂಗಳವಾರ ಸ್ಕಂದ/ಸುಬ್ರಹ್ಮಣ್ಯ ಷಷ್ಠಿ ಏರ್ಪಡಿಸಲಾಗಿದೆ.
  ಮಂಗಳವಾರ ಬೆಳಿಗ್ಗೆ ೭ ಗಂಟೆಗೆ ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ, ಮಹನ್ಯಾಸ ಪೂರ್ವಕ ರುದ್ರಾಭಿಷೇಕದ ನಂತರ ವಿಶೇಷ ಅಲಂಕಾರ, ಬೆಳಿಗ್ಗೆ ೯ ಗಂಟೆಗೆ ಶ್ರೀ ಸುಬ್ರಹ್ಮಣ್ಯ ಮೂಲಮಂತ್ರದಿಂದ ಹೋಮ ಜನ್ನಾಪುರ ವೇ.ಬ್ರ ಕೃಷ್ಣಮೂರ್ತಿ ಸೋಮಯಾಜಿ ಅರ್ಚಾರತ್ವದಲ್ಲಿ ನಡೆಯಲಿದೆ.
   ರಾಜಬೀದಿ ಉತ್ಸವದ ನಂತರ ಪೂರ್ಣಾಹುತಿ, ಬ್ರಹ್ಮಚಾರಿಗಳಪೂಜೆ ನಂತರ ಮಹಾಮಂಗಳಾರತಿ ನಡೆಯಲಿದ್ದು,  ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಶ್ರೀ ಕ್ಷೇತ್ರ ಭದ್ರಗಿರಿಯಲ್ಲಿ ಕಾರ್ತಿಕ ದೀಪೋತ್ಸವ ಅಂಗವಾಗಿ ಧ್ವಜಾರೋಹಣ

ಡಿ.೫ರಂದು ೬ನೇ ವರ್ಷದ ಗುರುಪೂಜೆ, ಪುತ್ಥಳಿ ಅನಾವರಣ

ಭದ್ರಾವತಿ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವದ ಅಂಗವಾಗಿ ಭಾನುವಾರ ಧ್ವಜಾರೋಹಣ ಹಾಗು ಧಾರ್ಮಿಕ ಆಚರಣೆಗಳು ಜರುಗಿದವು.
    ಭದ್ರಾವತಿ, ನ. ೨೭ : ನಗರದ ತರೀಕೆರೆ ರಸ್ತೆ ಶ್ರೀ ಶಿವಸುಬ್ರಮಣ್ಯ ಸ್ವಾಮಿ ಆಶ್ರಮ ಹಾಗು ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಅಂಗವಾಗಿ ಭಾನುವಾರ ಧ್ವಜಾರೋಹಣ ನೆರವೇರಿತು.
    ಪ್ರತಿ ವರ್ಷದಂತೆ ಈ ಬಾರಿ ಸಹ ಕಾರ್ತಿಕ ದೀಪೋತ್ಸವ ವಿಜೃಂಭಣೆಯಿಂದ ಡಿ.೫ರ ವರೆಗೆ ನಡೆಯುತ್ತಿದ್ದು, ಧ್ವಜಾರೋಹಣದೊಂದಿಗೆ ಆರಂಭಗೊಂಡ ದೀಪೋತ್ಸವದಲ್ಲಿ ಪ್ರತಿದಿನ ವಿವಿಧ ಧಾರ್ಮಿಕ ಆಚರಣೆಗಳು ಜರುಗಲಿವೆ. ಧ್ವಜಾರೋಹಣದ ಅಂಗವಾಗಿ ಹೋಮ-ಹವನ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಶ್ರೀ ಕ್ಷೇತ್ರದ ಶ್ರೀ ಮುರುಗೇಶ್ ಸ್ವಾಮೀಜಿ ದಿವ್ಯಸಾನಿಧ್ಯದಲ್ಲಿ ಜರುಗಿದವು.
    ಎಂ.ಸಿ ಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶೋಭಾ ಬಸಪ್ಪ, ಶಿವಮೊಗ್ಗ ಜಿಲ್ಲಾ ಸೇವಾದಳ ಅಧ್ಯಕ್ಷ ಮಂಜುನಾಥ್ ಬಾಬು, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ಶ್ರೀ ಕ್ಷೇತ್ರದ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎ. ಚಂದ್ರಘೋಷಣ್,  ಸೇವಾಕರ್ತರಾದ ಮಂಜುನಾಥ್, ಸೋಮು, ಮೂರ್ತಿ, ಸಂಜೀವ್ ಕುಮಾರ್, ಎಂ. ವೇಲು, ಮಣಿ, ನಾರಾಯಣಸ್ವಾಮಿ ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡಿದ್ದರು.
    ಡಿ.೫ರಂದು ೬ನೇ ವರ್ಷದ ಗುರುಪೂಜೆ-ಪುತ್ಥಳಿ ಪ್ರತಿಷ್ಠಾಪನೆ :
    ಶ್ರೀ ಕ್ಷೇತ್ರದ ಸಂಸ್ಥಾಪಕರಾದ ಶ್ರೀ ಭದ್ರಗಿರಿ ಸಿದ್ದರ್ ಮಹಾ ಸ್ವಾಮೀಜಿಯವರ ೬ನೇ ವರ್ಷದ ಗುರುಪೂಜೆ ಮತ್ತು ಪುತ್ಥಳಿ ಪ್ರತಿಷ್ಠಾಪನೆ  ಡಿ.೫ರಂದು ನಡೆಯಲಿದ್ದು, ಈ ಸಂಬಂಧ ಬೆಳಿಗ್ಗೆ ೧೦.೩೦ಕ್ಕೆ ಗುರುವಂದನೆ ಹಾಗು ಧಾರ್ಮಿಕ ಸಭೆ ಆರಂಭಗೊಳ್ಳಲಿದೆ.


    ಶ್ರೀ ಕ್ಷೇತ್ರದ ಶ್ರೀ ಮುರುಗೇಶ್ ಸ್ವಾಮೀಜಿ, ಚನ್ನಗಿರಿ ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ, ಬಾಗಲಕೋಟೆ ಸುಕ್ಷೇತ್ರ ಕುಳ್ಳೂರು ಶ್ರೀ ಗುರು ಶಿವಯೋಗೀಶ್ವರ ಸಂಸ್ಥಾನ ಕಲ್ಮಠದ ಶ್ರೀ ಬಸವಾನಂದ ಭಾರತಿ ಸ್ವಾಮೀಜಿ, ಚಿತ್ರದುರ್ಗ ಬಂಜಾರ ಮಠದ ಪೀಠಾಧ್ಯಕ್ಷ ಶ್ರೀ ಸೇವಾಲಾಲ್ ಸರ್ದಾರ್‌ಜೀ ಸ್ವಾಮೀಜಿ, ಜಮ್ಮು ಹಾಕನೋರ್ ಶ್ರೀರಾಮ್ ಮಂದಿರ ಪೌಲಿವಾಲ ಆಶ್ರಮಂ ಶ್ರೀ ಅಣ್ಣಮಲೈಮೌನ ಸ್ವಾಮೀಜಿ ಮತ್ತು ಹರಿದ್ವಾರ್ ಕನ್ಕಾಲ್, ಭೈರಾಗಿ ಕ್ಯಾಂಪ್, ಅಭಿದ್ ಗಂಗಾ ಮೈಯ್ಯ ಅಮಂ ಶ್ರೀ ಕೃಷ್ಣನಂದ ಭಾರತಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
    ಶ್ರೀ ಕ್ಷೇತ್ರದ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎ. ಚಂದ್ರಘೋಷನ್ ಅಧ್ಯಕ್ಷತೆ ವಹಿಸಲಿದ್ದು, ತರೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಎಸ್ ಸುರೇಶ್ ಉದ್ಘಾಟಿಸುವರು. ಕೇಂದ್ರ ಸಚಿವರಾದ ಶೋಭಕರಂದ್ಲಾಜೆ, ಗೃಹಸಚಿವ ಅರಗಜ್ಞಾನೇಂದ್ರ, ಸಂಸದ ಬಿ.ವೈ ರಾಘವೇಂದ್ರ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ,  ಶಾಸಕರಾದ ಬಿ.ಕೆ ಸಂಗಮೇಶ್ವರ್, ಸಿ.ಟಿ ರವಿ, ಮಾಜಿ ಶಾಸಕ ಜಿ.ಎಚ್ ಶ್ರೀನಿವಾಸ್, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಎಂ.ಸಿ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಬಸಪ್ಪ ಮತ್ತು ಭದ್ರಗಿರಿ ಸೇವಾ ಟ್ರಸ್ಟ್ ಅಧ್ಯಕ್ಷ ಆರ್. ಶ್ಯಾಮರಾಜ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

Saturday, November 26, 2022

ಮನಸೂರೆಗೊಂಡ ಆಳ್ವಾಸ್ ಸಾಂಸ್ಕೃತಿಕ ವೈಭವ

\

ಆಳ್ವಾಸ್ ನುಡಿಸಿರಿ ವಿರಾಸತ್ ವತಿಯಿಂದ ಮೂಡಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶನಿವಾರ ಸಂಜೆ ಆಯೋಜಿಸಲಾಗಿದ್ದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಉದ್ಘಾಟಿಸಿದರು.
    ಭದ್ರಾವತಿ, ನ. ೨೬:  ನಗರದ ಆಳ್ವಾಸ್ ನುಡಿಸಿರಿ ವಿರಾಸತ್ ವತಿಯಿಂದ ಮೂಡಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶನಿವಾರ ಸಂಜೆ ಆಯೋಜಿಸಲಾಗಿದ್ದ ಆಳ್ವಾಸ್ ಸಾಂಸ್ಕೃತಿಕ ವೈಭವ ಮನಸೂರೆಗೊಂಡಿತು.


ಆಳ್ವಾಸ್ ನುಡಿಸಿರಿ ವಿರಾಸತ್ ವತಿಯಿಂದ ಮೂಡಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶನಿವಾರ ಸಂಜೆ ಆಯೋಜಿಸಲಾಗಿದ್ದ ಆಳ್ವಾಸ್ ಸಾಂಸ್ಕೃತಿಕ ವೈಭವ ಮನಸೂರೆಗೊಂಡಿತು.
    ಆಂಧ್ರದ ಜನಪದ ಬಂಜಾರ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಶಾಸ್ತ್ರೀಯ ನೃತ್ಯ-ನವದುರ್ಗೆ, ಮಲ್ಲಕಂಬ ಮತ್ತು ರೋಪ್ ಕಸರತ್ತು, ಗುಜರಾತಿನ ಗಾರ್ಭ ಮತ್ತು ದಾಂಡಿಯಾ, ಮಣಿಪುರಿ ದೋಲ್ ಚಲಮ್, ಕಥಕ್ ನೃತ್ಯ-ನವರಂಗ್, ಪಶ್ಚಿಮ ಬಂಗಾಳದ ಪುರುಲಿಯ ಸಿಂಹ ನೃತ್ಯ ಸೇರಿದಂತೆ  ದೇಶ-ವಿದೇಶಗಳ ವಿವಿಧ ಪ್ರಕಾರದ ಶಾಸ್ತ್ರೀಯ ಜಾನಪದ, ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಂಡವು. ಆಳ್ವಾಸ್‌ನ ಪ್ರತಿಭಾವಂತ ೩೦೦ ವಿದ್ಯಾರ್ಥಿಗಳಿಂದ ೩ ಗಂಟೆ ೩೦ ನಿಮಿಷ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮ ವೀಕ್ಷಿಸಲು ಗ್ರಾಮಾಂತರ ಹಾಗು ನಗರ ಪ್ರದೇಶದ ವಿವಿಧೆಡೆಗಳಿಂದ ಜನರು ಆಗಮಿಸಿದ್ದರು.


    ಇದಕ್ಕೂ ಮೊದಲು ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ೩ ಬಾರಿ ಕ್ಷೇತ್ರದ ಶಾಸಕರನ್ನಾಗಿ ಆಯ್ಕೆ ಮಾಡಿರುವ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕ್ಷೇತ್ರದ ಜನರಿಗೆ ಇದೊಂದು ನನ್ನ ಚಿಕ್ಕ ಸೇವೆಯಾಗಿದೆ. ನಾನು, ನನ್ನ ಕುಟುಂಬದವರು, ಅಭಿಮಾನಿಗಳು, ಹಿತೈಷಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಸೇರಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ  ಇನ್ನೂ ಹೆಚ್ಚಿನ ಸೇವೆ ಮಾಡುವ ಗುರಿ ಹೊಂದಿದ್ದೇನೆ. ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ನಾನು ಮಂತ್ರಿಯಾಗುವುದು ಖಚಿತ. ಈಗಾಗಲೇ ಪಕ್ಷದ ವರಿಷ್ಠರು ನನ್ನನ್ನು ಮಂತ್ರಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಧಿಕಾರ ಇದ್ದಾಗ ಮಾತ್ರ ಏನಾದರೂ ಮಾಡಲು ಸಾಧ್ಯ. ಈ ಹಿನ್ನಲೆಯಲ್ಲಿ ನನ್ನನ್ನು ಪುನಃ ಆಯ್ಕೆ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಕಾರಣಕರ್ತರಾಗಬೇಕೆಂದು ಮನವಿ ಮಾಡಿದರು.


ಆಳ್ವಾಸ್ ನುಡಿಸಿರಿ ವಿರಾಸತ್ ವತಿಯಿಂದ ಮೂಡಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶನಿವಾರ ಸಂಜೆ ಆಯೋಜಿಸಲಾಗಿದ್ದ ಆಳ್ವಾಸ್ ಸಾಂಸ್ಕೃತಿಕ ವೈಭವ ಮನಸೂರೆಗೊಂಡಿತು.
    ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ತಹಸೀಲ್ದಾರ್ ಆರ್. ಪ್ರದೀಪ್,   ನಗರಸಭೆ ಪೌರಾಯುಕ್ತ ಮನುಕುಮಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ ಮತ್ತು ಆಳ್ವಾಸ್ ನುಡಿಸಿರಿ ವಿರಾಸತ್ ಪ್ರಮುಖರಾದ ಪ್ರಕಾಶ್ ವೇದಿಕೆ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸ್ವಾಗತಿಸಿದರು. ಎಂ. ವಿರೂಪಾಕ್ಷಪ್ಪ ನಿರೂಪಿಸಿದರು.

ಶೃಂಗೇರಿ ಜಗದ್ಗುರು ವಿಧುಶೇಖರ ಶ್ರೀಗಳಿಗೆ ಭವ್ಯ ಸ್ವಾಗತ

ಶ್ರೀಗಳ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗಿದ ಲಲಿತಾ ಹೋಮ

ಭದ್ರಾವತಿ ಹೊಸಸೇತುವೆ ರಸ್ತೆಯ ಸಿದ್ದಾರೂಢನಗರದ ಭದ್ರಾ ನದಿ ತಟದಲ್ಲಿರುವ ಶೃಂಗೇರಿ ಶ್ರೀ ಶಂಕರ ಮಠದಲ್ಲಿ ಆಯೋಜಿಸಲಾಗಿದ್ದ ಲಲಿತಾ ಹೋಮ ಕಾರ್ಯಕ್ರಮಕ್ಕೆ ಆಗಮಿಸಿದ ದಕ್ಷಿಣಾಮ್ನಾಯ ಶಾರದಾ ಪೀಠದ ವಿಧುಶೇಖರ ಭಾರತಿ ಶ್ರೀಗಳನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
    ಭದ್ರಾವತಿ, ನ. ೨೬: ಇಲ್ಲಿನ ಹೊಸಸೇತುವೆ ರಸ್ತೆಯ ಸಿದ್ದಾರೂಢನಗರದ ಭದ್ರಾ ನದಿ ತಟದಲ್ಲಿರುವ ಶೃಂಗೇರಿ ಶ್ರೀ ಶಂಕರ ಮಠದಲ್ಲಿ ಶನಿವಾರ ಆಯೋಜಿಸಲಾಗಿದ್ದ ಲಲಿತಾ ಹೋಮ ದಕ್ಷಿಣಾಮ್ನಾಯ ಶಾರದಾ ಪೀಠದ ವಿಧುಶೇಖರ ಭಾರತಿ ಶ್ರೀ ನೇತೃತ್ವದಲ್ಲಿ ಸಂಪನ್ನಗೊಂಡಿತು.
    ಶುಕ್ರವಾರ ರಾತ್ರಿ ನಗರಕ್ಕೆ ಆಗಮಿಸಿದ ಶ್ರೀಗಳನ್ನು ಕೆಎಸ್‌ಆರ್‌ಟಿಸಿ ಘಟಕದ ಬಳಿ ಶ್ರೀ ಶಂಕರ ವೃತ್ತದಲ್ಲಿ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.  ಅಲಂಕೃತ ವಾಹನದಲ್ಲಿ ಶ್ರೀಗಳ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಡೊಳ್ಳು ಕುಣಿತ, ಕರಾವಳಿಯ ಚಂಡೆ ವಾದ್ಯ, ನಾದಸ್ವರದದ ಮೆರುಗಿನೊಂದಿಗೆ ಉತ್ಸವದಲ್ಲಿ ನೂರಾರು ಮಹಿಳೆಯರು ಜ್ಯೋತಿಗಳನ್ನು ಹಿಡಿದು ಸಾಗಿದರು.

 

ಭದ್ರಾವತಿ ಹೊಸಸೇತುವೆ ರಸ್ತೆಯ ಸಿದ್ದಾರೂಢನಗರದ ಭದ್ರಾ ನದಿ ತಟದಲ್ಲಿರುವ ಶೃಂಗೇರಿ ಶ್ರೀ ಶಂಕರ ಮಠದಲ್ಲಿ ಆಯೋಜಿಸಲಾಗಿದ್ದ ಲಲಿತಾ ಹೋಮ ಕಾರ್ಯಕ್ರಮಕ್ಕೆ ಆಗಮಿಸಿದ ದಕ್ಷಿಣಾಮ್ನಾಯ ಶಾರದಾ ಪೀಠದ ವಿಧುಶೇಖರ ಭಾರತಿ ಶ್ರೀಗಳು ಚಂದ್ರಮೌಳೇಶ್ವರ ದೇವರ ಪೂಜೆ ನೆರವೇರಿಸಿದರು.
    ನಂತರದಲ್ಲಿ ಶ್ರೀಮಠದಲ್ಲಿ ಶ್ರೀಗಳು ಮಹಾಗಣಪತಿ, ಶಾರದಾಂಬೆ ಹಾಗೂ ಶಂಕರಾಚಾರ್ಯರ ದರ್ಶನ ಪಡೆದು, ಧೂಳಿ ಪಾದಪೂಜೆಯಲ್ಲಿ ಪಾಲ್ಗೊಂಡರು. ಕೊನೆಯಲ್ಲಿ ಶ್ರೀಗಳು ಚಂದ್ರಮೌಳೇಶ್ವರ ದೇವರ ಪೂಜೆ ನೆರವೇರಿಸಿದರು.
    ಶ್ರೀಗಳ ಸಮ್ಮುಖದಲ್ಲಿ ಶ್ರೀಲಲಿತಾ ಹೋಮ ಪೂರ್ಣಾಹುತಿ ನಡೆದಿದ್ದು, ಆನಂತರ ನೆರೆದಿದ್ದ ಭಕ್ತರಿಗೆ ಶ್ರೀಗಳಿಂದ ಫಲ ಮಂತ್ರಾಕ್ಷತೆ ಅನುಗ್ರಹ ನಡೆಯಿತು.

ನಗರಸಭೆಯಲ್ಲಿ ಬೋಗಸ್, ಅಧಿಕಾರಿಗಳಿಂದ ಮಿತಿಮೀರಿದ ವರ್ತನೆ

ಸಾಮಾನ್ಯಸಭೆಯಲ್ಲಿ ಆಡಳಿತಾರೂಢ ಸದಸ್ಯರಿಂದಲೇ ಗಂಭೀರ ಆರೋಪ

\

ಭದ್ರಾವತಿ ನಗರಸಭೆ ಸಾಮಾನ್ಯಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಅಧ್ಯಕ್ಷತೆಯಲ್ಲಿ ನಡೆಯಿತು. 
    ಭದ್ರಾವತಿ, ನ. ೨೬ : ನಗರಸಭೆಯಲ್ಲಿ ಬೋಗಸ್ ಹೆಚ್ಚಾಗಿದ್ದು, ಅಧಿಕಾರಿಗಳು ಮಿತಿಮೀರಿ ವರ್ತಿಸುತ್ತಿದ್ದಾರೆಂದು ನಗರಸಭೆ ಹಿರಿಯ ಸದಸ್ಯ ಬಿ.ಟಿ ನಾಗರಾಜ್ ಆರೋಪಿಸಿದರು.
    ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಮಾಜಿ ಅಧ್ಯಕ್ಷರು ಹಾಗು ಆಡಳಿತಾರೂಢ ಪಕ್ಷದ ಸದಸ್ಯರಾದ ಬಿ.ಟಿ. ನಾಗರಾಜ್, ನಗರಸಭೆಯಲ್ಲಿ  ಬೋಗಸ್ ಹೆಚ್ಚಾಗಿದೆ ಎಂದು ಆರೋಪಿಸಿ ಉಪಾಧ್ಯಕ್ಷ ಹಾಗೂ ಪೌರಾಯುಕ್ತರ ವಿರುದ್ಧ ವಾಗ್ದಾಳಿ ನಡೆಸಿದರು. ಇದರಿಂದಾಗಿ ಆಡಳಿತಾರೂಢ ಪಕ್ಷದ ಸದಸ್ಯರು ಮುಜುಗರ ಅನುಭವಿಸುವಂತಾಯಿತು.
    ಆರೋಪ ಮಾಡುವ ಬದಲು ನಿರ್ದಿಷ್ಟವಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಖಿತವಾಗಿ ದೂರು ಸಲ್ಲಿಸುವಂತೆ ಉಪಾಧ್ಯಕ್ಷ ಚನ್ನಪ್ಪ ತಿರುಗೇಟು ನೀಡಿದಾಗ, ಉತ್ತರ ನೀಡಲು ನೀನ್ಯಾರು ಸುಮ್ಮನೆ ಕುಳಿತುಕೊಳ್ಳುವಂತೆ ಏಕವಚನದಲ್ಲಿ ಬಿ.ಟಿ.ನಾಗರಾಜ್ ಸಂಭೋದಿಸಿದಾಗ ಉಪಾಧ್ಯಕ್ಷ ಚನ್ನಪ್ಪ ಸಹ ಏಕವಚನದ ಸುರಿಮಳೆ ಸುರಿಸುತ್ತಾ ಅಸಮಾಧಾನ ಹೊರಹಾಕಿದರು.
    ಸದಸ್ಯರಾದ ಕಾಂತರಾಜ್, ಮೋಹನ್‌ಕುಮಾರ್ ಸೇರಿದಂತೆ ಇನ್ನಿತರರು ಮನವಿ ಸಲ್ಲಿಸಿ, ನಗರಸಭೆ ವ್ಯಾಪ್ತಿಯ ಬಡಾವಣೆಗಳಿಗೆ ಖಾತೆ ಮಾಡುವ ಸಂದರ್ಭದಲ್ಲಿ ಹಾಗು ಪೆಟ್ರೋಲ್ ಮತ್ತು ಗ್ಯಾಸ್ ಬಂಕ್‌ಗಳಿಗೆ ಎನ್‌ಓಸಿ ನೀಡುವ ವಿಚಾರದಲ್ಲಿ ವಿಷಯವನ್ನು ಸಭೆಗೆ ಮಂಡಿಸಲು ಕೋರಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಅಜೆಂಡಾದಲ್ಲಿ ವಿಷಯ ಸಂಖ್ಯೆ ೯ ಪ್ರಸ್ತಾಪಿಸುತ್ತಿದ್ದಂತೆ ಸಭೆಯಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಯಿತು.
    ಬಿಜೆಪಿ ಹಿರಿಯ ಸದಸ್ಯ ವಿ.ಕದಿರೇಶ್ ಬಡಾವಣೆಗಳ ನಿರ್ಮಾಣ ಸೇರಿದಂತೆ ಇಂತಹ ವಿಚಾರಗಳನ್ನು ಸಾಮಾನ್ಯ ಸಭೆ ಗಮನಕ್ಕೆ ತರಬೇಕೆಂಬ ಕಡ್ಡಾಯವಿಲ್ಲ ಎಂದು ಜಿಲ್ಲಾಧಿಕಾರಿಗಳ ಸುತ್ತೋಲೆ ಪ್ರಸ್ತಾಪಿಸುತ್ತಿದ್ದಂತೆ ಪಕ್ಷೇತರ ಸದಸ್ಯ ಮೋಹನ್‌ಕುಮಾರ್‌ರವರು ಬಿ.ಟಿ.ನಾಗರಾಜ್ ಬೆಂಬಲಕ್ಕೆ ನಿಂತರು. ಇಂತಹ ವಿಚಾರಗಳನ್ನು ಸಭೆಯ ಗಮನಕ್ಕೆ ತಂದರೆ ತಪ್ಪೇನಿದೆ. ಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ಹಾಗೂ ೩೦ ವರ್ಷಗಳ ಕಾಲ ಸದಸ್ಯನಾಗಿ ಅನುಭವ ಹೊಂದಿದ್ದೇನೆ. ಅಧ್ಯಕ್ಷಸ್ಥ್ತಾನದಲ್ಲಿ ಕುಳಿತು ಆಡಳಿತ ನಡೆಸಿದ್ದೇನೆ,  ಈ ವಿಚಾರದಲ್ಲಿ ಜಾಣ ನಡೆ ಅನುಸರಿಸುತ್ತಿರುವ ಆಯುಕ್ತರ  ಸ್ವ ಹಿತಾಸಕ್ತಿ ಎದ್ದು ಕಾಣುತ್ತಿದೆ ಎಂದು ಬಿ.ಟಿ. ನಾಗರಾಜ್ ಗಂಭೀರ ಆರೋಪ ಮಾಡಿದರು.
    ಈ ಸಂದರ್ಭದಲ್ಲಿ ಸಿಟ್ಟಿಗೆದ್ದ ಪೌರಾಯುಕ್ತ ಮನುಕುಮಾರ್, ವೈಯಕ್ತಿಕವಾಗಿ ಆರೋಪ ಮಾಡಿದರೆ ನಿಯಮ ಉಲ್ಲಂಘನೆಯಾಗುತ್ತದೆ ಎಂದು ಬಿ.ಟಿ.ನಾಗರಾಜ್ ಕಡೆ ಬೆರಳು ತೋರಿಸುತ್ತಾ ಅಸಮಾಧಾನ ಹೊರ ಹಾಕಿದರು.
    ಸಭೆಯ ನುಂಗಿದ ನೀರು :
    ಸಭೆ ಆರಂಭ ವಾಗುತ್ತಿದ್ದಂತೆಯೇ ಹಳೇನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಸದಸ್ಯ ವಿ.ಕದಿರೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಛೀಮಾರಿ ಹಾಕಿದ ಪ್ರಸಂಗ ನಡೆಯಿತು. ಇದಕ್ಕೆ ಸದಸ್ಯೆಯರಾದ ಅನುಪಮಾ ಚನ್ನೇಶ್, ಶಶಿಕಲಾ ನಾರಾಯಣಪ್ಪ, ವಿಜಯ ಸೇರಿದಂತೆ ಇನ್ನಿತರರು ಧ್ವನಿಗೂಡಿಸಿದರು.
    ಕುಡಿಯಲು ಕನಿಷ್ಟ ಪಕ್ಷ ನೀರು ಪೂರೈಸಲಾಗದ ನಗರಸಭೆಯಿಂದ ಶ್ರೀಸಾಮನ್ಯ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಸದಸ್ಯ ಕರೀಗೌಡ ಛೇಡಿಸಿದರು. ನಲ್ಲಿ ಮೀಟರ್ ರೀಡಿಂಗ್ ಕಡ್ಡಾಯ ಗೊಳಿಸುವ ಮೂಲಕ ನೀರು ಸೋರಿಕೆ ತಡೆಗಟ್ಟಿ ಮುಂದಿನ ಎರಡು ತಿಂಗಳಿನಲ್ಲಿ ನೀರಿನ ಸಮಸ್ಯೆ ಬಗೆ ಹರಿಸುವ ಬಗ್ಗೆ ಪೌರಾಯುಕ್ತ ಮನುಕುಮಾರ್ ಭರವಸೆ ನೀಡಿದರು.  
    ವಾರ್ಡ್‌ಗಳ ಅಭಿವೃದ್ಧಿ ವಿಚಾರದಲ್ಲಿ ಮಲತಾಯಿ ಧೋರಣೆ ಹಾಗೂ ನಿರ್ಲಕ್ಷ ಖಂಡಿಸಿ ಸದಸ್ಯರಾದ ಆನೆಕೊಪ್ಪ ಬಿ. ಬಸವರಾಜ್, ಉದಯಕುಮಾರ್, ವಿಜಿಯ ನೇತೃತ್ವದಲ್ಲಿ ಜೆಡಿಎಸ್ ಸದಸ್ಯರು ಅಧ್ಯಕ್ಷರ ಪೀಠದ ಎದುರು ಪ್ರತಿಭಟನೆ ನಡೆಸಿದರು.
    ಉಳಿದಂತೆ ಅಜೆಂಡಾದಲ್ಲಿನ ಬಹುತೇಕ ಪ್ರಸ್ತಾವನೆಗಳು ಕುರಿತು ಚರ್ಚೆ ನಡೆದು ಅನುಮೋದಿಸಲಾಯಿತು. ಬಹುತೇಕ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪ್‌ಕುಮಾರ್ ಉಪಸ್ಥಿತರಿದ್ದರು.

Friday, November 25, 2022

ಮೊದಲ ಸಾಮಾನ್ಯಸಭೆ ಆರಂಭದಲ್ಲಿಯೇ ಪ್ರತಿಭಟನೆ ಬಿಸಿ

ವಾರ್ಡ್ ನಂ.೨೧ರ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ :  ಆಕ್ರೋಶ

ಭದ್ರಾವತಿ ನಗರಸಭೆ ಆವರಣದಲ್ಲಿ ವಾರ್ಡ್ ನಂ.೨೧ರ ಜೆಡಿಎಸ್ ನಗರಸಭಾ ಸದಸ್ಯೆ ವಿಜಯರವರ ನೇತೃತ್ವದಲ್ಲಿ ವಾರ್ಡ್ ನಿವಾಸಿಗಳು ಪ್ರತಿಭಟನೆ ನಡೆಸಿದರು.
    ಭದ್ರಾವತಿ, ನ. ೨೫: ನಗರಸಭೆ ಅಧ್ಯಕ್ಷೆಯಾಗಿ ಅನುಸುಧಾ ಮೋಹನ್ ಪಳನಿ ಅಧಿಕಾರ ಸ್ವೀಕರಿಸಿದ ನಂತರ ನಡೆದ ಮೊದಲ ಸಾಮಾನ್ಯ ಸಭೆ ಆರಂಭದಲ್ಲಿಯೇ ಪ್ರತಿಭಟನೆ ಬಿಸಿ ಎದುರಿಸುವಂತಾಯಿತು.
    ಶುಕ್ರವಾರ ಮಧ್ಯಾಹ್ನ ೨.೩೦ಕ್ಕೆ ಆರಂಭಗೊಳ್ಳಬೇಕಿದ್ದ ಸಭೆ ಸಂಜೆ ೪ ಗಂಟೆಗೆ ಆರಂಭಗೊಂಡಿತು. ಸಭೆ ಆರಂಭಗೊಳ್ಳುವ ಮೊದಲು ನಗರಸಭೆ ಆವರಣದಲ್ಲಿ ವಾರ್ಡ್ ನಂ.೨೧ರ ಜೆಡಿಎಸ್ ನಗರಸಭಾ ಸದಸ್ಯೆ ವಿಜಯರವರ ನೇತೃತ್ವದಲ್ಲಿ ವಾರ್ಡ್ ನಿವಾಸಿಗಳು ಪ್ರತಿಭಟನೆ ನಡೆಸಿದರು.
    ಕಾಗದನಗರ, ಜೆಪಿಎಸ್ ಕಾಲೋನಿ, ಉಜ್ಜನಿಪುರ ವ್ಯಾಪ್ತಿಯನ್ನು ಹೊಂದಿರುವ ವಾರ್ಡ್‌ನಲ್ಲಿ ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. ಈ ವಾರ್ಡ್‌ಗೆ ಇದುವರೆಗೂ ಯಾವುದೇ ಅನುದಾನ ಸಹ ಬಿಡುಗಡೆಗೊಳಿಸಿಲ್ಲ. ಸಾರ್ವಜನಿಕ ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲದಂತಾಗಿದ್ದು, ನೀರಿನ ವ್ಯವಸ್ಥೆ ಸಹ ಇಲ್ಲವಾಗಿದೆ. ಇದರಿಂದಾಗಿ ನಿವಾಸಿಗಳು ಪರದಾಡುವಂತಾಗಿದೆ.
    ರಸ್ತೆ, ಚರಂಡಿಗಳು ಸಹ ಹಾಳಾಗಿದ್ದು, ಇವುಗಳನ್ನು ದುರಸ್ತಿಪಡಿಸಿಲ್ಲ. ಕೆಲವು ಕಾಮಗಾರಿಗಳನ್ನು ಸ್ವಂತ ಹಣದಲ್ಲಿ ಕೈಗೊಳ್ಳಲಾಗಿದೆ. ಮಲತಾಯಿ ಧೋರಣೆ ಅನುಸರಿಸುವ ಮೂಲಕ ವಾರ್ಡ್ ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆರೋಪಿಸಲಾಯಿತು.
    ತಕ್ಷಣ ವಾರ್ಡ್ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಲಾಯಿತು.
ಪೌರಾಯುಕ್ತ ಮನುಕುಮಾರ್ ಸಮಸ್ಯೆಗಳನ್ನು ಆಲಿಸಿ ಮುಂದಿನ ೧೦ ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.  
    ಜೆಡಿಎಸ್ ನಗರ ಅಧ್ಯಕ್ಷ ಆರ್. ಕರುಣಾಮೂರ್ತಿ, ಸದಸ್ಯರಾದ ಬಸವರಾಜ ಬಿ ಆನೇಕೊಪ್ಪ, ಉದಯಕುಮಾರ್, ಸವಿತಾ ಉಮೇಶ್, ಪಲ್ಲವಿ ದಿಲೀಪ್, ಕೋಟೇಶ್ವರರಾವ್, ಮಂಜುಳ ಸುಬ್ಬಣ್ಣ, ರೂಪಾವತಿ, ನಾಗರತ್ನ ಅನಿಲ್‌ಕುಮಾರ್ ಮುಖಂಡರಾದ ಬಿ.ಎಸ್ ನಾರಾಯಣಪ್ಪ, ಅಶೋಕ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನ.೨೬ರಂದು ಶಾಂತವೇರಿ ಗೋಪಾಲಗೌಡರ ಸ್ಮರಣೆ ಕಾರ್ಯಕ್ರಮ

    ಭದ್ರಾವತಿ, ನ. ೨೫ : ನಗರದ ಚುಂಚಾದ್ರಿ ಮಹಿಳಾ ವೇದಿಕೆ ಹಾಗು ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವ ಆಚರಣಾ ಸಮಿತಿ ವತಿಯಿಂದ ರಾಜ್ಯ ಕಂಡ ಧೀಮಂತ ರಾಜಕಾರಣಿ ದಿವಂಗತ ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಅವರ ಸಾಧನೆಯ ಸ್ಮರಣೆ ಕಾರ್ಯಕ್ರಮ ನ.೨೬ರಂದು ಬೆಳಿಗ್ಗೆ ೧೦.೩೦ಕ್ಕೆ ಅಪ್ಪರ್ ಹುತ್ತಾ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
    ವಿಧಾನಸಭೆ ಮಾಜಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಉದ್ಘಾಟಿಸಲಿದ್ದು, ಚುಂಚಾದ್ರಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಡಾ. ಆರ್. ಅನುರಾಧ ಪಟೇಲ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
    ಶಾಸಕ ಬಿ.ಕೆ ಸಂಗಮೇಶ್ವರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಶಾಂತವೇರಿ ಗೋಪಾಲಗೌಡರ ಪುತ್ರಿ ಇಳಾಗೀತಾ ಮತ್ತು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಲಿದ್ದಾರೆ.