Saturday, November 26, 2022

ನಗರಸಭೆಯಲ್ಲಿ ಬೋಗಸ್, ಅಧಿಕಾರಿಗಳಿಂದ ಮಿತಿಮೀರಿದ ವರ್ತನೆ

ಸಾಮಾನ್ಯಸಭೆಯಲ್ಲಿ ಆಡಳಿತಾರೂಢ ಸದಸ್ಯರಿಂದಲೇ ಗಂಭೀರ ಆರೋಪ

\

ಭದ್ರಾವತಿ ನಗರಸಭೆ ಸಾಮಾನ್ಯಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಅಧ್ಯಕ್ಷತೆಯಲ್ಲಿ ನಡೆಯಿತು. 
    ಭದ್ರಾವತಿ, ನ. ೨೬ : ನಗರಸಭೆಯಲ್ಲಿ ಬೋಗಸ್ ಹೆಚ್ಚಾಗಿದ್ದು, ಅಧಿಕಾರಿಗಳು ಮಿತಿಮೀರಿ ವರ್ತಿಸುತ್ತಿದ್ದಾರೆಂದು ನಗರಸಭೆ ಹಿರಿಯ ಸದಸ್ಯ ಬಿ.ಟಿ ನಾಗರಾಜ್ ಆರೋಪಿಸಿದರು.
    ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಮಾಜಿ ಅಧ್ಯಕ್ಷರು ಹಾಗು ಆಡಳಿತಾರೂಢ ಪಕ್ಷದ ಸದಸ್ಯರಾದ ಬಿ.ಟಿ. ನಾಗರಾಜ್, ನಗರಸಭೆಯಲ್ಲಿ  ಬೋಗಸ್ ಹೆಚ್ಚಾಗಿದೆ ಎಂದು ಆರೋಪಿಸಿ ಉಪಾಧ್ಯಕ್ಷ ಹಾಗೂ ಪೌರಾಯುಕ್ತರ ವಿರುದ್ಧ ವಾಗ್ದಾಳಿ ನಡೆಸಿದರು. ಇದರಿಂದಾಗಿ ಆಡಳಿತಾರೂಢ ಪಕ್ಷದ ಸದಸ್ಯರು ಮುಜುಗರ ಅನುಭವಿಸುವಂತಾಯಿತು.
    ಆರೋಪ ಮಾಡುವ ಬದಲು ನಿರ್ದಿಷ್ಟವಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಖಿತವಾಗಿ ದೂರು ಸಲ್ಲಿಸುವಂತೆ ಉಪಾಧ್ಯಕ್ಷ ಚನ್ನಪ್ಪ ತಿರುಗೇಟು ನೀಡಿದಾಗ, ಉತ್ತರ ನೀಡಲು ನೀನ್ಯಾರು ಸುಮ್ಮನೆ ಕುಳಿತುಕೊಳ್ಳುವಂತೆ ಏಕವಚನದಲ್ಲಿ ಬಿ.ಟಿ.ನಾಗರಾಜ್ ಸಂಭೋದಿಸಿದಾಗ ಉಪಾಧ್ಯಕ್ಷ ಚನ್ನಪ್ಪ ಸಹ ಏಕವಚನದ ಸುರಿಮಳೆ ಸುರಿಸುತ್ತಾ ಅಸಮಾಧಾನ ಹೊರಹಾಕಿದರು.
    ಸದಸ್ಯರಾದ ಕಾಂತರಾಜ್, ಮೋಹನ್‌ಕುಮಾರ್ ಸೇರಿದಂತೆ ಇನ್ನಿತರರು ಮನವಿ ಸಲ್ಲಿಸಿ, ನಗರಸಭೆ ವ್ಯಾಪ್ತಿಯ ಬಡಾವಣೆಗಳಿಗೆ ಖಾತೆ ಮಾಡುವ ಸಂದರ್ಭದಲ್ಲಿ ಹಾಗು ಪೆಟ್ರೋಲ್ ಮತ್ತು ಗ್ಯಾಸ್ ಬಂಕ್‌ಗಳಿಗೆ ಎನ್‌ಓಸಿ ನೀಡುವ ವಿಚಾರದಲ್ಲಿ ವಿಷಯವನ್ನು ಸಭೆಗೆ ಮಂಡಿಸಲು ಕೋರಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಅಜೆಂಡಾದಲ್ಲಿ ವಿಷಯ ಸಂಖ್ಯೆ ೯ ಪ್ರಸ್ತಾಪಿಸುತ್ತಿದ್ದಂತೆ ಸಭೆಯಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಯಿತು.
    ಬಿಜೆಪಿ ಹಿರಿಯ ಸದಸ್ಯ ವಿ.ಕದಿರೇಶ್ ಬಡಾವಣೆಗಳ ನಿರ್ಮಾಣ ಸೇರಿದಂತೆ ಇಂತಹ ವಿಚಾರಗಳನ್ನು ಸಾಮಾನ್ಯ ಸಭೆ ಗಮನಕ್ಕೆ ತರಬೇಕೆಂಬ ಕಡ್ಡಾಯವಿಲ್ಲ ಎಂದು ಜಿಲ್ಲಾಧಿಕಾರಿಗಳ ಸುತ್ತೋಲೆ ಪ್ರಸ್ತಾಪಿಸುತ್ತಿದ್ದಂತೆ ಪಕ್ಷೇತರ ಸದಸ್ಯ ಮೋಹನ್‌ಕುಮಾರ್‌ರವರು ಬಿ.ಟಿ.ನಾಗರಾಜ್ ಬೆಂಬಲಕ್ಕೆ ನಿಂತರು. ಇಂತಹ ವಿಚಾರಗಳನ್ನು ಸಭೆಯ ಗಮನಕ್ಕೆ ತಂದರೆ ತಪ್ಪೇನಿದೆ. ಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ಹಾಗೂ ೩೦ ವರ್ಷಗಳ ಕಾಲ ಸದಸ್ಯನಾಗಿ ಅನುಭವ ಹೊಂದಿದ್ದೇನೆ. ಅಧ್ಯಕ್ಷಸ್ಥ್ತಾನದಲ್ಲಿ ಕುಳಿತು ಆಡಳಿತ ನಡೆಸಿದ್ದೇನೆ,  ಈ ವಿಚಾರದಲ್ಲಿ ಜಾಣ ನಡೆ ಅನುಸರಿಸುತ್ತಿರುವ ಆಯುಕ್ತರ  ಸ್ವ ಹಿತಾಸಕ್ತಿ ಎದ್ದು ಕಾಣುತ್ತಿದೆ ಎಂದು ಬಿ.ಟಿ. ನಾಗರಾಜ್ ಗಂಭೀರ ಆರೋಪ ಮಾಡಿದರು.
    ಈ ಸಂದರ್ಭದಲ್ಲಿ ಸಿಟ್ಟಿಗೆದ್ದ ಪೌರಾಯುಕ್ತ ಮನುಕುಮಾರ್, ವೈಯಕ್ತಿಕವಾಗಿ ಆರೋಪ ಮಾಡಿದರೆ ನಿಯಮ ಉಲ್ಲಂಘನೆಯಾಗುತ್ತದೆ ಎಂದು ಬಿ.ಟಿ.ನಾಗರಾಜ್ ಕಡೆ ಬೆರಳು ತೋರಿಸುತ್ತಾ ಅಸಮಾಧಾನ ಹೊರ ಹಾಕಿದರು.
    ಸಭೆಯ ನುಂಗಿದ ನೀರು :
    ಸಭೆ ಆರಂಭ ವಾಗುತ್ತಿದ್ದಂತೆಯೇ ಹಳೇನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಸದಸ್ಯ ವಿ.ಕದಿರೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಛೀಮಾರಿ ಹಾಕಿದ ಪ್ರಸಂಗ ನಡೆಯಿತು. ಇದಕ್ಕೆ ಸದಸ್ಯೆಯರಾದ ಅನುಪಮಾ ಚನ್ನೇಶ್, ಶಶಿಕಲಾ ನಾರಾಯಣಪ್ಪ, ವಿಜಯ ಸೇರಿದಂತೆ ಇನ್ನಿತರರು ಧ್ವನಿಗೂಡಿಸಿದರು.
    ಕುಡಿಯಲು ಕನಿಷ್ಟ ಪಕ್ಷ ನೀರು ಪೂರೈಸಲಾಗದ ನಗರಸಭೆಯಿಂದ ಶ್ರೀಸಾಮನ್ಯ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಸದಸ್ಯ ಕರೀಗೌಡ ಛೇಡಿಸಿದರು. ನಲ್ಲಿ ಮೀಟರ್ ರೀಡಿಂಗ್ ಕಡ್ಡಾಯ ಗೊಳಿಸುವ ಮೂಲಕ ನೀರು ಸೋರಿಕೆ ತಡೆಗಟ್ಟಿ ಮುಂದಿನ ಎರಡು ತಿಂಗಳಿನಲ್ಲಿ ನೀರಿನ ಸಮಸ್ಯೆ ಬಗೆ ಹರಿಸುವ ಬಗ್ಗೆ ಪೌರಾಯುಕ್ತ ಮನುಕುಮಾರ್ ಭರವಸೆ ನೀಡಿದರು.  
    ವಾರ್ಡ್‌ಗಳ ಅಭಿವೃದ್ಧಿ ವಿಚಾರದಲ್ಲಿ ಮಲತಾಯಿ ಧೋರಣೆ ಹಾಗೂ ನಿರ್ಲಕ್ಷ ಖಂಡಿಸಿ ಸದಸ್ಯರಾದ ಆನೆಕೊಪ್ಪ ಬಿ. ಬಸವರಾಜ್, ಉದಯಕುಮಾರ್, ವಿಜಿಯ ನೇತೃತ್ವದಲ್ಲಿ ಜೆಡಿಎಸ್ ಸದಸ್ಯರು ಅಧ್ಯಕ್ಷರ ಪೀಠದ ಎದುರು ಪ್ರತಿಭಟನೆ ನಡೆಸಿದರು.
    ಉಳಿದಂತೆ ಅಜೆಂಡಾದಲ್ಲಿನ ಬಹುತೇಕ ಪ್ರಸ್ತಾವನೆಗಳು ಕುರಿತು ಚರ್ಚೆ ನಡೆದು ಅನುಮೋದಿಸಲಾಯಿತು. ಬಹುತೇಕ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪ್‌ಕುಮಾರ್ ಉಪಸ್ಥಿತರಿದ್ದರು.

No comments:

Post a Comment