Monday, November 28, 2022

ಅಪೇಕ್ಷ ಮಂಜುನಾಥ್ ರಿಗೆ ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ

ಭದ್ರಾವತಿ, ನ. 28: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ನೃತ್ಯ ಕಲಾವಿದ  ಅಪೇಕ್ಷ ಮಂಜುನಾಥ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
      ಇವರ ಕಲಾ ಸೇವೆಯನ್ನು ಗುರುತಿಸಿ ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಹಾಗು ಸೃಷ್ಟಿ ಶಕ್ತಿ ಸಂಸ್ಥೆ  ವತಿಯಿಂದ ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
     ಕರ್ನಾಟಕ ಜನ ಸೇವಾ ಟ್ರಸ್ಟ್ ಅಧ್ಯಕ್ಷ, ಸಮಾಜ ಸೇವಕ ಪ್ರಶಾಂತ್ ಚಕ್ರವರ್ತಿ ಪ್ರಶಸ್ತಿ ಪ್ರದಾನ ಮಾಡಿದರು.  ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಹಾಗು ಸೃಷ್ಟಿ ಶಕ್ತಿ ಸಂಸ್ಥೆ  ಅಧ್ಯಕ್ಷ್ಯ ಇಸಾಕ್ ದೊಡ್ಡೇರಿ,  ಗಾಯಕ ಶಶಿಧರ ಕೋಟೆ, ಜೂನಿಯರ್ ರಾಜ್ ಕುಮಾರ್ ಡಾ. ಕೆ.ಸಿ ವೆಂಕಟರಾಮು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ದೊಣಬಘಟ್ಟ ಗ್ರಾಮಕ್ಕೆ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಭೇಟಿ : ಪರಿಶೀಲನೆ

'ನಮ್ಮ ಹೊಲ ನಮ್ಮರಸ್ತೆ' ಅನುದಾನದಲ್ಲಿ ಕಾಮಗಾರಿಗೆ ಭರವಸೆ

ಭದ್ರಾವತಿ ತಾಲೂಕಿನ ದೊಣಬಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ಜಮೀನುಗಳಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಸೋಮವಾರ ಭೇಟಿನೀಡಿ ಪರಿಶೀಲಿಸಿದರು. 
    ಭದ್ರಾವತಿ, ನ. ೨೮:  ತಾಲೂಕಿನ ದೊಣಬಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ಜಮೀನುಗಳಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಸೋಮವಾರ ಭೇಟಿನೀಡಿ ಪರಿಶೀಲಿಸಿದರು.
    ಈ ವ್ಯಾಪ್ತಿಯ ರೈತರು ಹಲವಾರು ಬಾರಿ ಪ್ರಾಧಿಕಾರದ ಅಧ್ಯಕ್ಷರಿಗೆ ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಈ ಹಿನ್ನಲೆಯಲ್ಲಿ ಭೇಟಿ ನೀಡಿದ ಅಧ್ಯಕ್ಷರು 'ನಮ್ಮ ಹೊಲ ನಮ್ಮ ರಸ್ತೆ' ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಗ್ರಾಮದಲ್ಲಿ ಅತಿ ಅವಶ್ಯವಿರುವ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ ಸ್ಥಳದಲ್ಲಿಯೇ ಕೈಗೊಳ್ಳಬೇಕಾಗಿರುವ ಕಾಮಗಾರಿಗಳ ಕುರಿತು ಅಧಿಕಾರಿಗಳಿಗೆ ಸೂಚಿಸಿದರು.  
    ದೊಣಬಘಟ್ಟ ಗ್ರಾಮದ ರೈತ ಮುಖಂಡರು, ಗ್ರಾಮದ ಹಿರಿಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.

ರಾಮ್ ಸೇನಾ ಯುವಪಡೆಯಿಂದ ‎ಕನ್ನಡ ರಾಜ್ಯೋತ್ಸವ

 
 ಭದ್ರಾವತಿ, ನ. 27:  ತಾಲೂಕಿನ ಕಾಳನಕಟ್ಟೆ ಗ್ರಾಮದಲ್ಲಿ ರಾಮ್ ಸೇನಾ ಯುವಪಡೆ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
     ಗ್ರಾಮದ ಹಿರಿಯರು ಹಾಗೂ ಯುವಕರ ಸಹಕಾರದೊಂದಿಗೆ  ರಾಮ್ ಸೇನಾ  ಜಿಲ್ಲಾಧ್ಯಕ್ಷ  ಉಮೇಶ್ ಗೌಡ  ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಗ್ರಾಮ ಪಂಚಾಯಿತಿ ಅಧ್ಯಕ್ಷ
ದಯಾನಂದ್,  ರಾಮ್ ಸೇನಾ ಪ್ರಮುಖರಾದ ಶ್ರೀಕಾಂತ್, ನಾಗೇಶ್, ಮಂಜುನಾಥ್, ವೆಂಕಟೇಶ್, ಸ್ವಾಮಿ, ಪ್ರವೀಣ, ಮುನಿಸ್ವಾಮಿ, ಸುದೀಪ್, ಗ್ರಾಮದ ಮುಖಂಡರಾದ ಸುಬ್ಬಣ್ಣ, ಕೃಷ್ಣಪ್ಪ, ಚಂದ್ರಣ್ಣ ಸೇರಿದಂತೆ ಸ್ಥಳೀಯರು ಪಾಲ್ಗೊಂಡಿದ್ದರು.

Sunday, November 27, 2022

ವಿದ್ಯಾರ್ಥಿಗಳು ಕಥೆ, ಕಾವ್ಯ ರಚನೆ ಕುರಿತು ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಿ

ಭದ್ರಾವತಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಕಥೆ, ಕಾವ್ಯ ರಚನಾಕಮ್ಮಟ ಹಾಗೂ ಭಾರತದ ಸಂವಿಧಾನ ದಿನಾಚರಣೆ ಡಾ. ಬಿ.ಜಿ ಧನಂಜಯ, ಕೋಗಲೂರು ತಿಪ್ಪೇಸ್ವಾಮಿ, ಪ್ರೊ. ಎಂ. ಚಂದ್ರಶೇಖರಯ್ಯ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ, ನ. ೨೭: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಪದವಿ ವಿದ್ಯಾರ್ಥಿಗಳಿಗಾಗಿ ಕಥೆ, ಕಾವ್ಯ ರಚನಾಕಮ್ಮಟ ಹಾಗೂ ಭಾರತದ ಸಂವಿಧಾನ ದಿನಾಚರಣೆ ಆಯೋಜಿಸಲಾಗಿತ್ತು.
    ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಮಾತನಾಡಿ, ವಿದ್ಯಾರ್ಥಿಗಳು ಕಥೆ, ಕಾವ್ಯ ರಚನೆ ಕುರಿತು ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ದೇಶದ ಸಂವಿಧಾನ ಪ್ರತಿಯೊಬ್ಬರು ಗೌರವಿಸುವ ಜೊತೆಗೆ ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕೆಂದರು.
    ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
    ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಪ್ರೊ. ಎಂ. ಚಂದ್ರಶೇಖರಯ್ಯ, ಶಿವಮೊಗ್ಗ ಸಂಗಮ ಆಪ್ತ ಸಲಹಾ ಕೇಂದ್ರದ ಡಾ. ಕಲ್ಪನಾ, ಕಸಾಪ ಕಾರ್ಯದರ್ಶಿ ಜಗದೀಶ್, ಸಂಘಟನಾ ಕಾರ್ಯದರ್ಶಿಗಳಾದ ಕಮಲಾಕರ್, ನಾಗೋಜಿ ರಾವ್, ಸಾಹಿತಿ ಜೆ.ಎನ್ ಬಸವರಾಜಪ್ಪ, ಕಸಾಪ ಹೊಳೆಹೊನ್ನೂರು ಘಟಕದ ಅಧ್ಯಕ್ಷ ಶ್ರೀನಿವಾಸ್, ಕೆ.ಟಿ ಪ್ರಸನ್ನ, ಪ್ರಕಾಶ್ ಮತ್ತು ಕವಿತಾರಾವ್, ಕಾಲೇಜಿನ ಅಧ್ಯಾಪಕ ಹಾಗು ಅಧ್ಯಾಪಕೇತರ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಸಿ.ಎನ್ ಕುಮಾರ್ ವಂದಿಸಿದರು.  

ನ.೨೯ರಂದು ಸುಬ್ರಹ್ಮಣ್ಯ ಷಷ್ಠಿ

    ಭದ್ರಾವತಿ, ನ. ೨೭ :  ಹಳೇನಗರದ ಶ್ರೀ ರಾಮೇಶ್ವರ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ನ. ೨೯ರ ಮಂಗಳವಾರ ಸ್ಕಂದ/ಸುಬ್ರಹ್ಮಣ್ಯ ಷಷ್ಠಿ ಏರ್ಪಡಿಸಲಾಗಿದೆ.
  ಮಂಗಳವಾರ ಬೆಳಿಗ್ಗೆ ೭ ಗಂಟೆಗೆ ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ, ಮಹನ್ಯಾಸ ಪೂರ್ವಕ ರುದ್ರಾಭಿಷೇಕದ ನಂತರ ವಿಶೇಷ ಅಲಂಕಾರ, ಬೆಳಿಗ್ಗೆ ೯ ಗಂಟೆಗೆ ಶ್ರೀ ಸುಬ್ರಹ್ಮಣ್ಯ ಮೂಲಮಂತ್ರದಿಂದ ಹೋಮ ಜನ್ನಾಪುರ ವೇ.ಬ್ರ ಕೃಷ್ಣಮೂರ್ತಿ ಸೋಮಯಾಜಿ ಅರ್ಚಾರತ್ವದಲ್ಲಿ ನಡೆಯಲಿದೆ.
   ರಾಜಬೀದಿ ಉತ್ಸವದ ನಂತರ ಪೂರ್ಣಾಹುತಿ, ಬ್ರಹ್ಮಚಾರಿಗಳಪೂಜೆ ನಂತರ ಮಹಾಮಂಗಳಾರತಿ ನಡೆಯಲಿದ್ದು,  ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಶ್ರೀ ಕ್ಷೇತ್ರ ಭದ್ರಗಿರಿಯಲ್ಲಿ ಕಾರ್ತಿಕ ದೀಪೋತ್ಸವ ಅಂಗವಾಗಿ ಧ್ವಜಾರೋಹಣ

ಡಿ.೫ರಂದು ೬ನೇ ವರ್ಷದ ಗುರುಪೂಜೆ, ಪುತ್ಥಳಿ ಅನಾವರಣ

ಭದ್ರಾವತಿ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವದ ಅಂಗವಾಗಿ ಭಾನುವಾರ ಧ್ವಜಾರೋಹಣ ಹಾಗು ಧಾರ್ಮಿಕ ಆಚರಣೆಗಳು ಜರುಗಿದವು.
    ಭದ್ರಾವತಿ, ನ. ೨೭ : ನಗರದ ತರೀಕೆರೆ ರಸ್ತೆ ಶ್ರೀ ಶಿವಸುಬ್ರಮಣ್ಯ ಸ್ವಾಮಿ ಆಶ್ರಮ ಹಾಗು ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಅಂಗವಾಗಿ ಭಾನುವಾರ ಧ್ವಜಾರೋಹಣ ನೆರವೇರಿತು.
    ಪ್ರತಿ ವರ್ಷದಂತೆ ಈ ಬಾರಿ ಸಹ ಕಾರ್ತಿಕ ದೀಪೋತ್ಸವ ವಿಜೃಂಭಣೆಯಿಂದ ಡಿ.೫ರ ವರೆಗೆ ನಡೆಯುತ್ತಿದ್ದು, ಧ್ವಜಾರೋಹಣದೊಂದಿಗೆ ಆರಂಭಗೊಂಡ ದೀಪೋತ್ಸವದಲ್ಲಿ ಪ್ರತಿದಿನ ವಿವಿಧ ಧಾರ್ಮಿಕ ಆಚರಣೆಗಳು ಜರುಗಲಿವೆ. ಧ್ವಜಾರೋಹಣದ ಅಂಗವಾಗಿ ಹೋಮ-ಹವನ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಶ್ರೀ ಕ್ಷೇತ್ರದ ಶ್ರೀ ಮುರುಗೇಶ್ ಸ್ವಾಮೀಜಿ ದಿವ್ಯಸಾನಿಧ್ಯದಲ್ಲಿ ಜರುಗಿದವು.
    ಎಂ.ಸಿ ಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶೋಭಾ ಬಸಪ್ಪ, ಶಿವಮೊಗ್ಗ ಜಿಲ್ಲಾ ಸೇವಾದಳ ಅಧ್ಯಕ್ಷ ಮಂಜುನಾಥ್ ಬಾಬು, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ಶ್ರೀ ಕ್ಷೇತ್ರದ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎ. ಚಂದ್ರಘೋಷಣ್,  ಸೇವಾಕರ್ತರಾದ ಮಂಜುನಾಥ್, ಸೋಮು, ಮೂರ್ತಿ, ಸಂಜೀವ್ ಕುಮಾರ್, ಎಂ. ವೇಲು, ಮಣಿ, ನಾರಾಯಣಸ್ವಾಮಿ ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡಿದ್ದರು.
    ಡಿ.೫ರಂದು ೬ನೇ ವರ್ಷದ ಗುರುಪೂಜೆ-ಪುತ್ಥಳಿ ಪ್ರತಿಷ್ಠಾಪನೆ :
    ಶ್ರೀ ಕ್ಷೇತ್ರದ ಸಂಸ್ಥಾಪಕರಾದ ಶ್ರೀ ಭದ್ರಗಿರಿ ಸಿದ್ದರ್ ಮಹಾ ಸ್ವಾಮೀಜಿಯವರ ೬ನೇ ವರ್ಷದ ಗುರುಪೂಜೆ ಮತ್ತು ಪುತ್ಥಳಿ ಪ್ರತಿಷ್ಠಾಪನೆ  ಡಿ.೫ರಂದು ನಡೆಯಲಿದ್ದು, ಈ ಸಂಬಂಧ ಬೆಳಿಗ್ಗೆ ೧೦.೩೦ಕ್ಕೆ ಗುರುವಂದನೆ ಹಾಗು ಧಾರ್ಮಿಕ ಸಭೆ ಆರಂಭಗೊಳ್ಳಲಿದೆ.


    ಶ್ರೀ ಕ್ಷೇತ್ರದ ಶ್ರೀ ಮುರುಗೇಶ್ ಸ್ವಾಮೀಜಿ, ಚನ್ನಗಿರಿ ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ, ಬಾಗಲಕೋಟೆ ಸುಕ್ಷೇತ್ರ ಕುಳ್ಳೂರು ಶ್ರೀ ಗುರು ಶಿವಯೋಗೀಶ್ವರ ಸಂಸ್ಥಾನ ಕಲ್ಮಠದ ಶ್ರೀ ಬಸವಾನಂದ ಭಾರತಿ ಸ್ವಾಮೀಜಿ, ಚಿತ್ರದುರ್ಗ ಬಂಜಾರ ಮಠದ ಪೀಠಾಧ್ಯಕ್ಷ ಶ್ರೀ ಸೇವಾಲಾಲ್ ಸರ್ದಾರ್‌ಜೀ ಸ್ವಾಮೀಜಿ, ಜಮ್ಮು ಹಾಕನೋರ್ ಶ್ರೀರಾಮ್ ಮಂದಿರ ಪೌಲಿವಾಲ ಆಶ್ರಮಂ ಶ್ರೀ ಅಣ್ಣಮಲೈಮೌನ ಸ್ವಾಮೀಜಿ ಮತ್ತು ಹರಿದ್ವಾರ್ ಕನ್ಕಾಲ್, ಭೈರಾಗಿ ಕ್ಯಾಂಪ್, ಅಭಿದ್ ಗಂಗಾ ಮೈಯ್ಯ ಅಮಂ ಶ್ರೀ ಕೃಷ್ಣನಂದ ಭಾರತಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
    ಶ್ರೀ ಕ್ಷೇತ್ರದ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎ. ಚಂದ್ರಘೋಷನ್ ಅಧ್ಯಕ್ಷತೆ ವಹಿಸಲಿದ್ದು, ತರೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಎಸ್ ಸುರೇಶ್ ಉದ್ಘಾಟಿಸುವರು. ಕೇಂದ್ರ ಸಚಿವರಾದ ಶೋಭಕರಂದ್ಲಾಜೆ, ಗೃಹಸಚಿವ ಅರಗಜ್ಞಾನೇಂದ್ರ, ಸಂಸದ ಬಿ.ವೈ ರಾಘವೇಂದ್ರ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ,  ಶಾಸಕರಾದ ಬಿ.ಕೆ ಸಂಗಮೇಶ್ವರ್, ಸಿ.ಟಿ ರವಿ, ಮಾಜಿ ಶಾಸಕ ಜಿ.ಎಚ್ ಶ್ರೀನಿವಾಸ್, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಎಂ.ಸಿ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಬಸಪ್ಪ ಮತ್ತು ಭದ್ರಗಿರಿ ಸೇವಾ ಟ್ರಸ್ಟ್ ಅಧ್ಯಕ್ಷ ಆರ್. ಶ್ಯಾಮರಾಜ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

Saturday, November 26, 2022

ಮನಸೂರೆಗೊಂಡ ಆಳ್ವಾಸ್ ಸಾಂಸ್ಕೃತಿಕ ವೈಭವ

\

ಆಳ್ವಾಸ್ ನುಡಿಸಿರಿ ವಿರಾಸತ್ ವತಿಯಿಂದ ಮೂಡಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶನಿವಾರ ಸಂಜೆ ಆಯೋಜಿಸಲಾಗಿದ್ದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಉದ್ಘಾಟಿಸಿದರು.
    ಭದ್ರಾವತಿ, ನ. ೨೬:  ನಗರದ ಆಳ್ವಾಸ್ ನುಡಿಸಿರಿ ವಿರಾಸತ್ ವತಿಯಿಂದ ಮೂಡಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶನಿವಾರ ಸಂಜೆ ಆಯೋಜಿಸಲಾಗಿದ್ದ ಆಳ್ವಾಸ್ ಸಾಂಸ್ಕೃತಿಕ ವೈಭವ ಮನಸೂರೆಗೊಂಡಿತು.


ಆಳ್ವಾಸ್ ನುಡಿಸಿರಿ ವಿರಾಸತ್ ವತಿಯಿಂದ ಮೂಡಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶನಿವಾರ ಸಂಜೆ ಆಯೋಜಿಸಲಾಗಿದ್ದ ಆಳ್ವಾಸ್ ಸಾಂಸ್ಕೃತಿಕ ವೈಭವ ಮನಸೂರೆಗೊಂಡಿತು.
    ಆಂಧ್ರದ ಜನಪದ ಬಂಜಾರ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಶಾಸ್ತ್ರೀಯ ನೃತ್ಯ-ನವದುರ್ಗೆ, ಮಲ್ಲಕಂಬ ಮತ್ತು ರೋಪ್ ಕಸರತ್ತು, ಗುಜರಾತಿನ ಗಾರ್ಭ ಮತ್ತು ದಾಂಡಿಯಾ, ಮಣಿಪುರಿ ದೋಲ್ ಚಲಮ್, ಕಥಕ್ ನೃತ್ಯ-ನವರಂಗ್, ಪಶ್ಚಿಮ ಬಂಗಾಳದ ಪುರುಲಿಯ ಸಿಂಹ ನೃತ್ಯ ಸೇರಿದಂತೆ  ದೇಶ-ವಿದೇಶಗಳ ವಿವಿಧ ಪ್ರಕಾರದ ಶಾಸ್ತ್ರೀಯ ಜಾನಪದ, ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಂಡವು. ಆಳ್ವಾಸ್‌ನ ಪ್ರತಿಭಾವಂತ ೩೦೦ ವಿದ್ಯಾರ್ಥಿಗಳಿಂದ ೩ ಗಂಟೆ ೩೦ ನಿಮಿಷ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮ ವೀಕ್ಷಿಸಲು ಗ್ರಾಮಾಂತರ ಹಾಗು ನಗರ ಪ್ರದೇಶದ ವಿವಿಧೆಡೆಗಳಿಂದ ಜನರು ಆಗಮಿಸಿದ್ದರು.


    ಇದಕ್ಕೂ ಮೊದಲು ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ೩ ಬಾರಿ ಕ್ಷೇತ್ರದ ಶಾಸಕರನ್ನಾಗಿ ಆಯ್ಕೆ ಮಾಡಿರುವ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕ್ಷೇತ್ರದ ಜನರಿಗೆ ಇದೊಂದು ನನ್ನ ಚಿಕ್ಕ ಸೇವೆಯಾಗಿದೆ. ನಾನು, ನನ್ನ ಕುಟುಂಬದವರು, ಅಭಿಮಾನಿಗಳು, ಹಿತೈಷಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಸೇರಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ  ಇನ್ನೂ ಹೆಚ್ಚಿನ ಸೇವೆ ಮಾಡುವ ಗುರಿ ಹೊಂದಿದ್ದೇನೆ. ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ನಾನು ಮಂತ್ರಿಯಾಗುವುದು ಖಚಿತ. ಈಗಾಗಲೇ ಪಕ್ಷದ ವರಿಷ್ಠರು ನನ್ನನ್ನು ಮಂತ್ರಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಧಿಕಾರ ಇದ್ದಾಗ ಮಾತ್ರ ಏನಾದರೂ ಮಾಡಲು ಸಾಧ್ಯ. ಈ ಹಿನ್ನಲೆಯಲ್ಲಿ ನನ್ನನ್ನು ಪುನಃ ಆಯ್ಕೆ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಕಾರಣಕರ್ತರಾಗಬೇಕೆಂದು ಮನವಿ ಮಾಡಿದರು.


ಆಳ್ವಾಸ್ ನುಡಿಸಿರಿ ವಿರಾಸತ್ ವತಿಯಿಂದ ಮೂಡಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶನಿವಾರ ಸಂಜೆ ಆಯೋಜಿಸಲಾಗಿದ್ದ ಆಳ್ವಾಸ್ ಸಾಂಸ್ಕೃತಿಕ ವೈಭವ ಮನಸೂರೆಗೊಂಡಿತು.
    ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ತಹಸೀಲ್ದಾರ್ ಆರ್. ಪ್ರದೀಪ್,   ನಗರಸಭೆ ಪೌರಾಯುಕ್ತ ಮನುಕುಮಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ ಮತ್ತು ಆಳ್ವಾಸ್ ನುಡಿಸಿರಿ ವಿರಾಸತ್ ಪ್ರಮುಖರಾದ ಪ್ರಕಾಶ್ ವೇದಿಕೆ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸ್ವಾಗತಿಸಿದರು. ಎಂ. ವಿರೂಪಾಕ್ಷಪ್ಪ ನಿರೂಪಿಸಿದರು.