Friday, December 9, 2022

ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣಿಕೆಗೆ ಯತ್ನ : ದಾಳಿ

ಭದ್ರಾವತಿ ತಾಲೂಕಿನ ಅರಬಿಳಚಿ ಗ್ರಾಮದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದಾಗ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಹಾಗು ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಸುಮಾರು ೭ ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
    ಭದ್ರಾವತಿ, ಡಿ. ೯: ತಾಲೂಕಿನ ಅರಬಿಳಚಿ ಗ್ರಾಮದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದಾಗ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಹಾಗು ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಸುಮಾರು ೭ ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
    ಗ್ರಾಮದ ಅರಬಿಳಚಿ ಕ್ಯಾಂಪ್‌ನಲ್ಲಿ ವಾಹನದಲ್ಲಿ ಅಕ್ರಮವಾಗಿ ಅಕ್ಕಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಗ್ರಾಮಾಂತರ ವೃತ್ತ ನಿರೀಕ್ಷಕ ಎನ್.ಎಂ ಗುರುರಾಜ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
  ವಾಹನ ಬಸಲೀಕಟ್ಟೆ ಗ್ರಾಮದಿಂದ ಅರೆಬಿಳಚಿ ಗ್ರಾಮಕ್ಕೆ ತೆರಳಿದ್ದು, ಅರೆಬಿಳಚಿಯ ಮಣಿಶೇಖರ್ ಮನೆಯ ಬಳಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಚಾಲಕ ವಾಹನ  ಬಿಟ್ಟು ಪರಾರಿಯಾಗಿದ್ದಾನೆ. ವಾಹನದಲ್ಲಿದ್ದ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಉಪಠಾಣಾಧಿಕಾರಿ(ಎಎಸ್‌ಐ) ಕೃಷ್ಣಮೂರ್ತಿ, ಸುನಿಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  

ಡಿ.೧೦ರಂದು ಎನ್‌ಪಿಎಸ್ ನೌಕರರಿಂದ ಜಾಗೃತಿ ಜಾಥಾ

ಭದ್ರಾವತಿ, ಡಿ. ೯: ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರ ಸಂಘದ ತಾಲೂಕು ಘಟಕದ ವತಿಯಿಂದ ಡಿ.೧೦ರ ಶನಿವಾರ ಮಧ್ಯಾಹ್ನ ೧೨.೩೦ಕ್ಕೆ ತಾಲೂಕು ಪಂಚಾಯಿತಿ ಆವರಣದಲ್ಲಿ 'ಜಾಗೃತಿ ಜಾಥಾ' ಹಮ್ಮಿಕೊಳ್ಳಲಾಗಿದೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರ ಸಂಘ ಡಿ.೧೯ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 'ಮಾಡು ಇಲ್ಲವೇ ಮಡಿ' ಅನಿರ್ಧಿಷ್ಟ ಹೋರಾಟ ಹಮ್ಮಿಕೊಂಡಿದ್ದು, ಇದಕ್ಕೆ ಪೂರಕವಾಗಿ ಶಾಸಕರಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುವ ನಿಟ್ಟಿನಲ್ಲಿ 'ಜಾಗೃತಿ ಜಾಥಾ' ತಾಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಎನ್‌ಪಿಎಸ್ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ವಿದ್ಯಾರ್ಥಿಗಳು ಕಾವ್ಯ, ಕಥೆ, ಪ್ರಬಂಧ ರಚನೆ ಕುರಿತು ಹೆಚ್ಚಿನ ಜ್ಞಾನ ಹೊಂದಿ : ಎ.ಕೆ ನಾಗೇಂದ್ರಪ್ಪ

ಭದ್ರಾವತಿ ಹೊಸಮನೆ ಬಾಪೂಜಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಹಾಗು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಕಾವ್ಯ, ಕಥೆ ಹಾಗು ಪ್ರಬಂಧ ರಚನಾ ಕಮ್ಮಟ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಉದ್ಘಾಟಿಸಿ ಮಾತನಾಡಿದರು.
    ಭದ್ರಾವತಿ, ಡಿ. ೯: ವಿದ್ಯಾರ್ಥಿಗಳು ಕಾವ್ಯ, ಕಥೆ, ಪ್ರಬಂಧ ರಚನೆ ಕುರಿತು ಹೆಚ್ಚಿನ ಜ್ಞಾನ  ಹೊಂದಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹೇಳಿದರು.
    ಅವರು ಶುಕ್ರವಾರ ಹೊಸಮನೆ ಬಾಪೂಜಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಹಾಗು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಕಾವ್ಯ, ಕಥೆ ಹಾಗು ಪ್ರಬಂಧ ರಚನಾ ಕಮ್ಮಟ ಉದ್ಘಾಟಿಸಿ ಮಾತನಾಡಿದರು.
    ಕಾವ್ಯ, ಕಥೆ, ಪ್ರಬಂಧ ರಚನೆ ಕುರಿತು ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಹೆಚ್ಚು ಸಹಕಾರಿಯಾಗಿವೆ ಎಂದರು.
    ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಡಿ. ಶಿವಲಿಂಗೇಗೌಡ, ಭದ್ರಾ ಪ್ರೌಢಶಾಲೆ ಶಿಕ್ಷಕ ಶ್ರೀನಿವಾಸ ಜಾಜೂರ್, ಕುವೆಂಪು ವಿಶ್ವವಿದ್ಯಾಲಯ ಸಂಶೋಧನಾ ವಿದ್ಯಾರ್ಥಿನಿ ವಿ.ಎಂ ರಾಧ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಸಾಹಿತಿ ಬಿ. ಕಾಂತಪ್ಪ ಮತ್ತು ಬಾಪೂಜಿ ಪ್ರೌಢಶಾಲೆ ಕಾರ್ಯದರ್ಶಿ ಯಶೋಧ ವಡಿವೇಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು. ಬಾಪೂಜಿ ಪ್ರೌ|ಢ ಶಾಲೆ ಮುಖ್ಯೋಪಾಧ್ಯಾಯ ವಸಂತಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕ ಲೋಹಿತ್ ಕುಮಾರ್ ನಿರೂಪಿಸಿದರು.  ಪ್ರಕಾಶ್, ಉಮಾಪತಿ, ಗಂಗಾರಾಜ್ ಸೇರಿದಂತೆ ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Thursday, December 8, 2022

ಡಿ.೧೦ರಂದು ವಿಶ್ವ ಮಾನವ ಸಮಾವೇಶ, ಪಾದಯಾತ್ರೆಗೆ ಚಾಲನೆ

ಭದ್ರಾವತಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿದರು. 
    ಭದ್ರಾವತಿ, ಡಿ. ೮: ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ವಿಶ್ವ ಮಾನವ ಸಮಾವೇಶ ಮತ್ತು ಎಂಪಿಎಂ ಹಾಗು ವಿಐಎಸ್‌ಎಲ್ ಕಾರ್ಖಾನೆಗಳ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಜ.೨೬ರವರೆಗೆ ತಾಲೂಕಿನಾದ್ಯಂತ ಚಿಟಿಕೆ ಉಪ್ಪು ಸಂಗ್ರಹಿಸಿ ಮನವಿ ಸಲ್ಲಿಸಲು ಹಮ್ಮಿಕೊಳ್ಳಲಾಗಿರುವ ಪಾದಯಾತ್ರೆ ಉದ್ಘಾಟನೆ ಡಿ.೧೦ರಂದು ಸಂಜೆ ೫.೩೦ಕ್ಕೆ ಹಳೇನಗರದ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಬಿ.ಎನ್ ರಾಜು ತಿಳಿಸಿದರು.
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾರಂಭದಲ್ಲಿ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ ದತ್ತಾ, ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ ಮತ್ತು ರೈತ ಸಂಘ ಹಸಿರು ಸೇನೆ ವರಿಷ್ಠ ಕೆ.ಟಿ ಗಂಗಾಧರ್ ಅವರಿಗೆ ವಿಶ್ವ ಮಾನವ ಪ್ರಶಸ್ತಿ ನೀಡಲಾಗುವುದು.
    ಸಮಾರಂಭವನ್ನು ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ. ಚಂದ್ರಶೇಖರಯ್ಯ ಉದ್ಘಾಟಿಸುವರು. ಶಾಸಕ ಬಿ.ಕೆ ಸಂಗಮೇಶ್ವರ್, ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ, ಪ್ರೊ. ಎಂ. ಚಂದ್ರಶೇಖರಯ್ಯ, ಹಾರೋನಹಳ್ಳಿ ಸ್ವಾಮಿ, ತಹಸೀಲ್ದಾರ್ ಆರ್. ಪ್ರದೀಪ್, ಭಾರತಿ ಗೋವಿಂದಸ್ವಾಮಿ, ಇಂದಿರ ಬಿ. ಕೃಷ್ಣಪ್ಪ, ವಿಜಯಮ್ಮ ಎನ್. ಗಿರಿಯಪ್ಪ , ಜಿ.ಕೆ ಆದರ್ಶ್, ಅಭಿಮನ್ಯು ಪಿ. ಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು ಎಂದರು.
    ಎಂಪಿಎಂ ಹಾಗು ವಿಐಎಸ್‌ಎಲ್ ಕಾರ್ಖಾನೆಗಳ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಜ.೨೬ರವರೆಗೆ  ತಾಲೂಕಿನಾದ್ಯಂತ ಚಿಟಿಕೆ ಉಪ್ಪು ಸಂಗ್ರಹಿಸಿ ಮನವಿ ಸಲ್ಲಿಸಲು ಹಮ್ಮಿಕೊಳ್ಳಲಾಗಿರುವ ಪಾದಯಾತ್ರೆ ಉದ್ಘಾಟನೆ ಸಹ ಇದೆ ಸಂದರ್ಭದಲ್ಲಿ ನಡೆಯಲಿದ್ದು, ಡಿ.೧೧ರಂದು ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಇರುವ  ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ನಡೆಯಲಿದ್ದು, ನಂತರ ನಗರಸಭೆ ವ್ಯಾಪ್ತಿಯಲ್ಲಿ ಮನೆ ಮನೆ ತೆರಳಿ ಚಿಟಿಕೆ ಉಪ್ಪು ಸಂಗಹಿಸಲಾಗುವುದು. ಡಿ.೨೮ರವರೆಗೆ ನಗರಸಭೆ ವ್ಯಾಪ್ತಿಯಲ್ಲಿ ಡಿ.೩೦ರಿಂದ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಪಾದಯಾತ್ರೆ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ  ಕೋರಿದರು.
    ಸಮಿತಿ ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಕಾರ್ಯಾಧ್ಯಕ್ಷ ಐ.ಎಲ್ ಅರುಣ್‌ಕುಮಾರ್, ಉಪಾಧ್ಯಕ್ಷರಾದ ಶೇಖರ್, ರಂಗಪ್ಪ, ಪ್ರಧಾನ ಸಂಚಾಲಕರಾದ ಶ್ರೀನಿವಾಸ್ ಮತ್ತು ಬಸವರಾಜ್ ಉಪಸ್ಥಿತರಿದ್ದರು.  

ರ‍್ಯಾಮ್ಕೋಸ್ ಅಧ್ಯಕ್ಷರಾಗಿ ಬಿ.ಜಿ ಜಗದೀಶಗೌಡ ಅವಿರೋಧ ಆಯ್ಕೆ

ಬಿ.ಜಿ ಜಗದೀಶಗೌಡ
    ಭದ್ರಾವತಿ, ಡಿ. ೮ : ನಗರದ ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ ನಿಯಮಿತ(ರ‍್ಯಾಮ್ಕೋಸ್) ನೂತನ ಅಧ್ಯಕ್ಷರಾಗಿ ತಾಲೂಕಿನ ಆನವೇರಿ ನಿವಾಸಿ, ತರಳಬಾಳು ಯುವ ವೇದಿಕೆ ಮಾಜಿ ಅಧ್ಯಕ್ಷ ಬಿ.ಜಿ ಜಗದೀಶಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಇದುವರೆಗೂ ರ‍್ಯಾಮ್ಕೋಸ್ ಅಧ್ಯಕ್ಷರಾಗಿ ಸಿ. ಮಲ್ಲೇಶಪ್ಪ ಸೇವೆ ಸಲ್ಲಿಸುತ್ತಿದ್ದರು. ಇದೀಗ ಬಿ.ಜಿ ಜಗದೀಶಗೌಡ ಅಧ್ಯಕ್ಷರಾಗಿದ್ದು, ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿರುವ ಸಹಕಾರ ಅಭಿವೃದ್ಧಿ ಅಧಿಕಾರಿ ಶಾಂತರಾಜ್ ಘೋಷಿಸಿದ್ದಾರೆ.
    ಸಂಘದ ಉಪಾಧ್ಯಕ್ಷ ಎಚ್.ಟಿ ಉಮೇಶ್, ನಿರ್ದೇಶಕರಾದ ಸಿ. ಹನುಮಂತಪ್ಪ, ಸಿ. ಮಲ್ಲೇಶಪ್ಪ, ಎಂ. ಪರಮೇಶ್ವರಪ್ಪ, ಯು. ಗಂಗನಗೌಡ, ಜಿ. ಈ.ಚನ್ನಪ್ಪ, ಮಹೇಶ್, ಹೆಚ್.ಎಲ್ ಷಡಾಕ್ಷರಿ. ಎಂ.ಎಸ್ ಬಸರಾಜಪ್ಪ, ಲಲಿತಮ್ಮ, ಎಚ್.ಆರ್ ತಿಮ್ಮಪ್ಪ, ಎಸ್. ಮಹೇಶ್ವರಪ್ಪ, ಎಚ್.ಎಸ್ .ಸಂಜೀವ್‌ಕುಮಾರ್ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ. ವಿರುಪಾಕ್ಷಪ್ಪ ಉಪಸ್ಥಿತರಿದ್ದರು.  

ಎರೆಹುಳು ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ : ಈಶ್ವರ್ ಪಿ ತೀರ್ಥ

ಭದ್ರಾವತಿ ಅಪ್ಪರ್‌ಹುತ್ತಾದಲ್ಲಿರುವ ಅನನ್ಯ ಪ್ರೌಢಶಾಲೆಯಲ್ಲಿ ವಿಶ್ವ ಮಣ್ಣಿನ ದಿನದ ಅಂಗವಾಗಿ ಶಾಲೆಯಲ್ಲಿ ನೂತವಾಗಿ ಅನುಷ್ಠಾನಗೊಳಿರುವ ಎರೆಹುಳು ಗೊಬ್ಬರ ಘಟಕ ಹಾಗೂ ಕೃಷಿ ಬೆಳೆಗಳ ಪರಿಚಯ ಮತ್ತು ಕೃಷಿ ಉಪಕರಣಗಳ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಕೃಷಿ ಬೆಳೆಗಳ ಕುರಿತು ಕೈಪಿಡಿ ಪುಸ್ತಕ ಬಿಡುಗಡೆಗೊಳಿಸಲಾಯಿತು.
    ಭದ್ರಾವತಿ, ಡಿ. ೮: ಉತ್ತಮ ಬೆಳೆ ಬೆಳೆಯಲು ಫಲವತ್ತಾದ ಮಣ್ಣಿನ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಎರೆಹುಳುಗಳ ಪಾತ್ರ ಪ್ರಮುಖವಾಗಿದೆ ಎಂದು ಸಾವಯುವ ಕೃಷಿಕ ಈಶ್ವರ್ ಪಿ ತೀರ್ಥ ಹೇಳಿದರು.
      ಅವರು ನಗರದ ಅಪ್ಪರ್‌ಹುತ್ತಾದಲ್ಲಿರುವ ಅನನ್ಯ ಪ್ರೌಢಶಾಲೆಯಲ್ಲಿ ವಿಶ್ವ ಮಣ್ಣಿನ ದಿನದ ಅಂಗವಾಗಿ ಶಾಲೆಯಲ್ಲಿ ನೂತವಾಗಿ ಅನುಷ್ಠಾನಗೊಳಿರುವ ಎರೆಹುಳು ಗೊಬ್ಬರ ಘಟಕ ಹಾಗೂ ಕೃಷಿ ಬೆಳೆಗಳ ಪರಿಚಯ ಮತ್ತು ಕೃಷಿ ಉಪಕರಣಗಳ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.  
      ಬೆಳೆಗಳಿಗೆ ಉತ್ತಮ ಮಣ್ಣಿನ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪ್ರಸ್ತುತ ಮಣ್ಣಿನ ಸಂರಕ್ಷಣೆ ಅಗತ್ಯವಿದೆ. ಪರಿಸರಕ್ಕೆ ಅದರಲ್ಲೂ ಮಣ್ಣಿನ ಫಲವತ್ತತೆಗೆ ಪ್ಲಾಸ್ಟಿಕ್ ಮಾರಕವಾಗಿದ್ದು, ಇದನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕಾಗಿದೆ. ನಾವುಗಳು ಪ್ಲಾಸ್ಟಿಕ್ ಬಳಕೆ ಮಾಡದಂತೆ ಎಚ್ಚರವಹಿಸಬೇಕಾಗಿದೆ ಎಂದರು.
      ಕೃಷಿಯಲ್ಲಿ ಎರೆಹುಳು ಗೊಬ್ಬರ ಹೆಚ್ಚು ಪ್ರಯೋಜನಕಾರಿಯಾಗಿದ್ದು, ಇದು ಮಣ್ಣಿನ ಫಲವತ್ತತೆ ಹೆಚ್ಚಿಸುವ ಜೊತೆಗೆ ಹೆಚ್ಚಿನ ಇಳುವರಿಯೊಂದಿಗೆ ರೈತರಿಗೆ ಹೆಚ್ಚಿನ ಲಾಭ ತಂದುಕೊಡುತ್ತದೆ ಎಂದರು.  
      ಶಾಲೆಯ ೬ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಕೃಷಿಯಲ್ಲಿ ಆಸಕ್ತಿ  ಮೂಡಿಸುವ ಉದ್ದೇಶದಿಂದ ತಾಲೂಕಿನ ಕೃಷಿ ಬೆಳೆಗಳ ಕುರಿತ ಕೈಪಿಡಿ ಪುಸಕ್ತ ಬಿಡುಗಡೆ ಗೊಳಿಸಲಾಯಿತು.
      ವಿದ್ಯಾಸಂಸ್ಥೆ ಅಧ್ಯಕ್ಷ ಡಾ. ಕೆ. ನಾಗರಾಜ್ ಕೃಷಿ ಉಪಕರಣಗಳ ಪ್ರದರ್ಶನ ಉದ್ಘಾಟಿಸಿದರು.  ಹುಲ್ಲು ಕತ್ತರಿಸುವ ಯಂತ್ರ, ಔಷಧಿ ಸಿಂಪಡಿಸುವ ಯಂತ್ರ, ನೊಗ, ಹಲಗೆ, ನೇಗಿಲು, ಕೈ ಗುದ್ದಲಿ, ಭತ್ತದ ಕಳೆ ಕೀಳುವ ಯಂತ್ರ ಸೇರಿದಂತೆ ಕೃಷಿಯಲ್ಲಿ ಬಳಸುವ ಇನ್ನಿತರ ಪರಿಕರಗಳನ್ನು ಮತ್ತು ಟ್ರಾಕ್ಟರ್, ಟಿಲ್ಲರ್‌ಗಳನ್ನು ಸಹ ಮಕ್ಕಳಿಗೆ ಪರಿಚಯಿಸಲಾಯಿತು.
      ವಿದ್ಯಾಸಂಸ್ಥೆ ಕಾರ್ಯದರ್ಶಿ ಅನಿಲ್ ಕುಮಾರ್, ವ್ಯವಸ್ಥಾಪಕ ವೇಣುಗೋಪಾಲ್, ಪ್ರಾಂಶುಪಾಲ ಕಲ್ಲೇಶ್, ಸುನೀತ, ತನುಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು ಶಾರದ ಪ್ರಾರ್ಥಿಸಿ, ಕವನಾ ಸ್ವಾಗತಿಸಿದರು. ಜೀವಿತಾ ಕಾರ್ಯಕ್ರಮ ನಿರೂಪಿಸಿ, ಶುಭ ಕೋಠಿ ವಂದಿಸಿದರು.
.

ಭದ್ರಾವತಿ ಅಪ್ಪರ್‌ಹುತ್ತಾದಲ್ಲಿರುವ ಅನನ್ಯ ಪ್ರೌಢಶಾಲೆಯಲ್ಲಿ ವಿಶ್ವ ಮಣ್ಣಿನ ದಿನದ ಅಂಗವಾಗಿ ಶಾಲೆಯಲ್ಲಿ ನೂತವಾಗಿ ಅನುಷ್ಠಾನಗೊಳಿರುವ ಎರೆಹುಳು ಗೊಬ್ಬರ ಘಟಕ ಹಾಗೂ ಕೃಷಿ ಬೆಳೆಗಳ ಪರಿಚಯ ಮತ್ತು ಕೃಷಿ ಉಪಕರಣಗಳ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಕೃಷಿಯಲ್ಲಿ ಬಳಸುವ ಪರಿಕರಗಳನ್ನು ಪರಿಚಯಿಸಲಾಯಿತು.

Wednesday, December 7, 2022

ವಿವಿಧ ಸಂಘಟನೆಗಳಿಂದ ಅಂಬೇಡ್ಕರ್ ಪರಿನಿರ್ವಾಣ ದಿನ

ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಭದ್ರಾವತಿಯಲ್ಲಿ ನಗರಸಭೆ ವತಿಯಿಂದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
    ಭದ್ರಾವತಿ, ಡಿ. ೭: ನಗರದ ವಿವಿಧ ಸಂಘಟನೆಗಳಿಂದ ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಿಸಲಾಯಿತು. ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
    ನಗರಸಭೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಮಾಲಾರ್ಪಣೆ ಮಾಡಿದರು. ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಸದಸ್ಯರಾದ ಲತಾ ಚಂದ್ರಶೇಖರ್, ಟಿಪ್ಪು ಸುಲ್ತಾನ್, ಪೌರಾಯುಕ್ತ ಮನುಕುಮಾರ್, ಕಂದಾಯಾಧಿಕಾರಿ ರಾಜ್‌ಕುಮಾರ್, ಪರಿಸರ ಅಭಿಯಂತರ ಪ್ರಭಾಕರ್ ಸೇರಿದಂತೆ ಇನ್ನಿತರ ಅಧಿಕಾರಿಗಳು, ಪೌರ ಸೇವಾ ನೌಕರರ ಸೇವಾ ಸಂಘದ ಪದಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
    ಛಲವಾದಿ ಸಮಾಜದಿಂದ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಸುರೇಶ್, ಪ್ರಮುಖರಾದ ಜಯರಾಜ್, ಗೋಪಾಲ್, ಮಹೇಶ್, ಜಗದೀಶ್, ಛಲವಾದಿ ಕೃಷ್ಣ, ಇ.ಪಿ ಬಸವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕರ್ನಾಟಕ ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ದಲಿತ ಸಂಘಟನೆಗಳು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪರಿನಿರ್ವಾಣ ದಿನ ಆಚರಿಸಿದವು.


ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಭದ್ರಾವತಿಯಲ್ಲಿ ಛಲವಾದಿ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳಿಂದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.