Saturday, December 10, 2022

ದೊಡ್ಡಗೊಪ್ಪೇನಹಳ್ಳಿ ನೀರು ಬಳಕೆದಾರರ ಸಂಘದ ಕಛೇರಿಗೆ ಪವಿತ್ರ ರಾಮಯ್ಯ ಭೇಟಿ : ಅರ್ಜಿ ಸ್ವೀಕಾರ

ಭದ್ರಾವತಿ ತಾಲೂಕಿನ ದೊಡ್ಡಗೊಪ್ಪೇನಹಳ್ಳಿ(ಡಿ.ಜಿ ಹಳ್ಳಿ) ನೀರು ಬಳಕೆದಾರರ ಸಹಕಾರ ಸಂಘದ ಕಛೇರಿಗೆ ಶನಿವಾರ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ ಪವಿತ್ರ ರಾಮಯ್ಯ ಭೇಟಿ ನೀಡಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಿದರು.
    ಭದ್ರಾವತಿ, ಡಿ. ೧೦: ತಾಲೂಕಿನ ದೊಡ್ಡಗೊಪ್ಪೇನಹಳ್ಳಿ(ಡಿ.ಜಿ ಹಳ್ಳಿ) ನೀರು ಬಳಕೆದಾರರ ಸಹಕಾರ ಸಂಘದ ಕಛೇರಿಗೆ ಶನಿವಾರ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ ಪವಿತ್ರ ರಾಮಯ್ಯ ಭೇಟಿ ನೀಡಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಿದರು.
      ಗೊಂದಿ ಎಡನಾಲೆ ಸಂಬಂಧ ಸಮಸ್ಯೆಗಳ ಕುರಿತು ಚರ್ಚಿಸಿ ರೈತರಿಂದ ಅರ್ಜಿಗಳನ್ನು ಸ್ವೀಕರಿಸಿದರು. ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು. ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರುಗಳು ಹಾಗು ರೈತರು ಉಪಸ್ಥಿತರಿದ್ದರು. ಸಂಘದ ವತಿಯಿಂದ ಕೆ.ಬಿ ಪವಿತ್ರ ರಾಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪುನೀತ್‌ರಾಜ್‌ಕುಮಾರ್ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ : ೪೨ ಮಂದಿ ದಾನಿಗಳು ಭಾಗಿ

ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ, ಲಯನ್ಸ್ ಮತ್ತು ಲಿಯೋ ಕ್ಲಬ್ ವತಿಯಿಂದ ಡಾ. ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಶನಿವಾರ ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.  
    ಭದ್ರಾವತಿ, ಡಿ. ೧೦: ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ, ಲಯನ್ಸ್ ಮತ್ತು ಲಿಯೋ ಕ್ಲಬ್ ವತಿಯಿಂದ ಡಾ. ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಶನಿವಾರ ನಗರದ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.  
    ದಾವಣಗೆರೆ ಲಯನ್ಸ್ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಬೆಳಿಗ್ಗೆ ೯.೩೦ರಿಂದ ಆರಂಭಗೊಂಡ ಶಿಬಿರ ಸಂಜೆ ೪.೩೦ರವರೆಗೆ ನಡೆಯಿತು. ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸುಮಾರು ೪೨ ಮಂದಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡು ಶಿಬಿರ ಯಶಸ್ವಿಗೊಳಿಸಿದರು.


    ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಎನ್ ಕಾರ್ತಿಕ್ ಶಿಬಿರದ ನೇತೃತ್ವ ವಹಿಸಿದ್ದರು. ಕಾರ್ಯದರ್ಶಿ ಎಂ. ನಾಗರಾಜ್ ಶೇಟ್, ಖಜಾಂಚಿ ಜಿ.ಪಿ ದರ್ಶನ್, ಪ್ರಮುಖರಾದ ಮೋನೇಶ್, ಬಿ. ದಿವಾಕರಶೆಟ್ಟಿ, ಎಲ್. ದೇವರಾಜ್, ಭುವನೇಶ್ವರ್ ಸೇರಿದಂತೆ ಕ್ಲಬ್ ಹಿರಿಯ ಹಾಗು ಕಿರಿಯ ಸದಸ್ಯರು, ಲಯನ್ಸ್ ರಕ್ತನಿಧಿ ಕೇಂದ್ರದ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.    

ಅಧಿವೇಶನದಲ್ಲಿ ಎನ್‌ಪಿಎಸ್ ರದ್ದತಿ ಪ್ರಶ್ನಾವಳಿಯ ಮೊದಲ ಆದ್ಯತೆಯಾಗಲಿ : ಮನವಿ

ಬೆಂಗಳೂರಿನ ಫ್ರೀಡಂ ಪಾರ್ಕ್ ಡಿ.೧೯ರಂದು ಹಮ್ಮಿಕೊಳ್ಳಲಾಗಿರುವ 'ಮಾಡು ಇಲ್ಲವೇ ಮಡಿ' ಅನಿರ್ಧಿಷ್ಟ ಹೋರಾಟದ ಅಂಗವಾಗಿ ಪೌರಾಡಳಿತ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಎನ್‌ಪಿಎಸ್ ನೌಕರರು ಶನಿವಾರ ಭದ್ರಾವತಿ ತಾಲೂಕು ಪಂಚಾಯಿತಿ ಆವರಣದಲ್ಲಿ 'ಜಾಗೃತಿ ಜಾಥಾ' ನಡೆಸುವ ಮೂಲಕ ಸರ್ಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    \ಭದ್ರಾವತಿ, ಡಿ. ೧೦: ವಿಧಾನಸಭಾ ಅಧಿವೇಶನದಲ್ಲಿ ಎನ್‌ಪಿಎಸ್ ರದ್ದತಿ ವಿಷಯ ಪ್ರಶ್ನಾವಳಿಯ ಮೊದಲ ಆದ್ಯತೆಯಲ್ಲಿ ಸೇರಿಸುವ ಮೂಲಕ ಡಿ. ೧೯ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿರುವ 'ಮಾಡು ಇಲ್ಲವೇ ಮಡಿ' ಅನಿರ್ಧಿಷ್ಟ ಹೋರಾಟ ಬೆಂಬಲಿಸುವಂತೆ ಆಗ್ರಹಿಸಿ ಶನಿವಾರ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರ ಸಂಘದ ತಾಲೂಕು ಘಟಕದ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್‌ರವರಿಗೆ ಮನವಿ ಸಲ್ಲಿಸಲಾಯಿತು.
    ಅನಿರ್ಧಿಷ್ಟ ಹೋರಾಟದ ಅಂಗವಾಗಿ ಪೌರಾಡಳಿತ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಎನ್‌ಪಿಎಸ್ ನೌಕರರು ತಾಲೂಕು ಪಂಚಾಯಿತಿ ಆವರಣದಲ್ಲಿ 'ಜಾಗೃತಿ ಜಾಥಾ' ನಡೆಸುವ ಮೂಲಕ ಸರ್ಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಸರ್ಕಾರಿ ನೌಕರರ ಭವಿಷ್ಯಕ್ಕೆ ಎನ್‌ಪಿಎಸ್ ಮಾರಕವಾಗಿದ್ದು, ಇದನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುಕೊಂಡು ಬರಲಾಗುತ್ತಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯತನ ವಹಿಸಲಾಗಿದೆ ಎಂದು ದೂರಿದರು.
    ಸಂಘದ ಅಧ್ಯಕ್ಷ ಎ. ರಂಗನಾಥ್ ನೇತೃತ್ವ ವಹಿಸಿದ್ದರು. ಕಾರ್ಯದರ್ಶಿ ಶಿವಾನಾಯ್ಕ, ಖಜಾಂಚಿ ಶ್ರೀಕಾಂತ್, ಉಪಾಧ್ಯಕ್ಷರಾದ ಆರ್.ಯು ಚಂದ್ರಶೇಖರ್, ಹೇಮಂತ್‌ಕುಮಾರ್, ಸಹಕಾರ್ಯದರ್ಶಿಗಳಾದ ಮಹಮದ್ ಜಾಫರ್, ನಂದಿನಿ ಮತ್ತು ಪೂರ್ಣಿಮಾ ಹಾಗು ಸರ್ಕಾರಿ ನೌಕರರ ವಿವಿಧ ಸಂಘಟನೆಗಳ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Friday, December 9, 2022

ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ವಿಷ್ಣುಕಾರ್ತಿಕ ದೀಪೋತ್ಸವ

ಭದ್ರಾವತಿ ಹಳೇನಗರದ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಗುರುವಾರರಾತ್ರಿ ವಿಷ್ಣುಕಾರ್ತೀಕ ದೀಪೋತ್ಸವ ವಿಜೃಂಭಣೆಯಿಂದ ನೆರವೇರಿತು.
    ಭದ್ರಾವತಿ, ಡಿ. ೯: ಹಳೇನಗರದ ಪುರಾಣ ಪ್ರಸಿದ್ದ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಗುರುವಾರ ರಾತ್ರಿ ವಿಷ್ಣುಕಾರ್ತೀಕ ದೀಪೋತ್ಸವ ವಿಜೃಂಭಣೆಯಿಂದ ನೆರವೇರಿತು.
  ಸಂಜೆ ಗರುಡವಾಹನರೂಢ ಭೂದೇವಿ ಶ್ರೀದೇವಿ ಸಹಿತನಾದ ಶ್ರೀಶ್ರೀನಿವಾಸದೇವರ ಉತ್ಸವಮೂರ್ತಿ ಮೆರವಣಿಗೆ ರಥಬೀದಿಯಲ್ಲಿ ನಡೆಸಲಾಯಿತು. ದೇವಾಲಯಕ್ಕೆ ಉತ್ಸವ ಮರಳುತ್ತಿದ್ದಂತೆ ದೇವಾಲಯದ ಹೊರ ಆವರಣದಲ್ಲಿ ಭಕ್ತರು ದೀಪಗಳನ್ನು ಹಚ್ಚಿ ಬೆಳಗಿಸಿದರು.  ದೇವಾಲಯದ ಸುತ್ತಮುತ್ತ ಇರಿಸಲಾಗಿದ್ದ ದೀಪಗಳನ್ನು ಭಕ್ತಾದಿಗಳು ಹಚ್ಚಿದರು.
    ದೇವಾಲಯದ ಗರುಡಗಂಭದ ಬಳಿ ಉತ್ವಮೂರ್ತಿ ಮುಂದೆ ಎಣ್ಣೆಯಲ್ಲಿ ಅದ್ದಿದ ವಸ್ತ್ರಕ್ಕೆ ದೀಪವನ್ನು ಹಚ್ಚುವ ಮೂಲಕ ದೇವರಿಗೆ ದೃಷ್ಠಿಪರಿಹಾರಾರ್ಥವಾಗಿ ಚೊಕ್ಕಸುಡಲಾಯಿತು. ನಂತರ ಮೂಲದೇವರಿಗೆ ಹಾಗೂ ಉತ್ಸವದೇವರಿಗೆ ಪೂಜೆನಡೆಸಿ ದೀಪಬೆಳಗಿ, ಮಹಾಮಂಗಳಾರತಿ, ಅಷ್ಠಾವಧಾನ ಸೇವೆ, ವೇದಪಠಣ, ಭಜನೆ ಸೇರಿದಂತೆ ಇನ್ನಿತರ ಆಚರಣೆಗಳನ್ನು ನಡೆಸಲಾಯಿತು.  ಸಲ್ಲಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ರಂಗನಾಥಶರ್ಮ ಪೂಜಾವಿಧಾನಗಳನ್ನು ನೆರವೇರಿಸಿದರು.

ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣಿಕೆಗೆ ಯತ್ನ : ದಾಳಿ

ಭದ್ರಾವತಿ ತಾಲೂಕಿನ ಅರಬಿಳಚಿ ಗ್ರಾಮದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದಾಗ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಹಾಗು ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಸುಮಾರು ೭ ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
    ಭದ್ರಾವತಿ, ಡಿ. ೯: ತಾಲೂಕಿನ ಅರಬಿಳಚಿ ಗ್ರಾಮದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದಾಗ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಹಾಗು ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಸುಮಾರು ೭ ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
    ಗ್ರಾಮದ ಅರಬಿಳಚಿ ಕ್ಯಾಂಪ್‌ನಲ್ಲಿ ವಾಹನದಲ್ಲಿ ಅಕ್ರಮವಾಗಿ ಅಕ್ಕಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಗ್ರಾಮಾಂತರ ವೃತ್ತ ನಿರೀಕ್ಷಕ ಎನ್.ಎಂ ಗುರುರಾಜ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
  ವಾಹನ ಬಸಲೀಕಟ್ಟೆ ಗ್ರಾಮದಿಂದ ಅರೆಬಿಳಚಿ ಗ್ರಾಮಕ್ಕೆ ತೆರಳಿದ್ದು, ಅರೆಬಿಳಚಿಯ ಮಣಿಶೇಖರ್ ಮನೆಯ ಬಳಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಚಾಲಕ ವಾಹನ  ಬಿಟ್ಟು ಪರಾರಿಯಾಗಿದ್ದಾನೆ. ವಾಹನದಲ್ಲಿದ್ದ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಉಪಠಾಣಾಧಿಕಾರಿ(ಎಎಸ್‌ಐ) ಕೃಷ್ಣಮೂರ್ತಿ, ಸುನಿಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  

ಡಿ.೧೦ರಂದು ಎನ್‌ಪಿಎಸ್ ನೌಕರರಿಂದ ಜಾಗೃತಿ ಜಾಥಾ

ಭದ್ರಾವತಿ, ಡಿ. ೯: ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರ ಸಂಘದ ತಾಲೂಕು ಘಟಕದ ವತಿಯಿಂದ ಡಿ.೧೦ರ ಶನಿವಾರ ಮಧ್ಯಾಹ್ನ ೧೨.೩೦ಕ್ಕೆ ತಾಲೂಕು ಪಂಚಾಯಿತಿ ಆವರಣದಲ್ಲಿ 'ಜಾಗೃತಿ ಜಾಥಾ' ಹಮ್ಮಿಕೊಳ್ಳಲಾಗಿದೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರ ಸಂಘ ಡಿ.೧೯ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 'ಮಾಡು ಇಲ್ಲವೇ ಮಡಿ' ಅನಿರ್ಧಿಷ್ಟ ಹೋರಾಟ ಹಮ್ಮಿಕೊಂಡಿದ್ದು, ಇದಕ್ಕೆ ಪೂರಕವಾಗಿ ಶಾಸಕರಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುವ ನಿಟ್ಟಿನಲ್ಲಿ 'ಜಾಗೃತಿ ಜಾಥಾ' ತಾಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಎನ್‌ಪಿಎಸ್ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ವಿದ್ಯಾರ್ಥಿಗಳು ಕಾವ್ಯ, ಕಥೆ, ಪ್ರಬಂಧ ರಚನೆ ಕುರಿತು ಹೆಚ್ಚಿನ ಜ್ಞಾನ ಹೊಂದಿ : ಎ.ಕೆ ನಾಗೇಂದ್ರಪ್ಪ

ಭದ್ರಾವತಿ ಹೊಸಮನೆ ಬಾಪೂಜಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಹಾಗು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಕಾವ್ಯ, ಕಥೆ ಹಾಗು ಪ್ರಬಂಧ ರಚನಾ ಕಮ್ಮಟ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಉದ್ಘಾಟಿಸಿ ಮಾತನಾಡಿದರು.
    ಭದ್ರಾವತಿ, ಡಿ. ೯: ವಿದ್ಯಾರ್ಥಿಗಳು ಕಾವ್ಯ, ಕಥೆ, ಪ್ರಬಂಧ ರಚನೆ ಕುರಿತು ಹೆಚ್ಚಿನ ಜ್ಞಾನ  ಹೊಂದಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹೇಳಿದರು.
    ಅವರು ಶುಕ್ರವಾರ ಹೊಸಮನೆ ಬಾಪೂಜಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಹಾಗು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಕಾವ್ಯ, ಕಥೆ ಹಾಗು ಪ್ರಬಂಧ ರಚನಾ ಕಮ್ಮಟ ಉದ್ಘಾಟಿಸಿ ಮಾತನಾಡಿದರು.
    ಕಾವ್ಯ, ಕಥೆ, ಪ್ರಬಂಧ ರಚನೆ ಕುರಿತು ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಹೆಚ್ಚು ಸಹಕಾರಿಯಾಗಿವೆ ಎಂದರು.
    ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಡಿ. ಶಿವಲಿಂಗೇಗೌಡ, ಭದ್ರಾ ಪ್ರೌಢಶಾಲೆ ಶಿಕ್ಷಕ ಶ್ರೀನಿವಾಸ ಜಾಜೂರ್, ಕುವೆಂಪು ವಿಶ್ವವಿದ್ಯಾಲಯ ಸಂಶೋಧನಾ ವಿದ್ಯಾರ್ಥಿನಿ ವಿ.ಎಂ ರಾಧ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಸಾಹಿತಿ ಬಿ. ಕಾಂತಪ್ಪ ಮತ್ತು ಬಾಪೂಜಿ ಪ್ರೌಢಶಾಲೆ ಕಾರ್ಯದರ್ಶಿ ಯಶೋಧ ವಡಿವೇಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು. ಬಾಪೂಜಿ ಪ್ರೌ|ಢ ಶಾಲೆ ಮುಖ್ಯೋಪಾಧ್ಯಾಯ ವಸಂತಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕ ಲೋಹಿತ್ ಕುಮಾರ್ ನಿರೂಪಿಸಿದರು.  ಪ್ರಕಾಶ್, ಉಮಾಪತಿ, ಗಂಗಾರಾಜ್ ಸೇರಿದಂತೆ ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.