ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರಸ್ವಾಮಿ, ಶ್ರೀ ವಾದಿರಾಜಸ್ವಾಮಿಗಳ ಮಠದಲ್ಲಿ ಗುರುರಾಜ ಸೇವಾ ಸಮಿತಿ ಹಾಗೂ ಪೇಜಾವರ ವಿಶ್ವೇಶತೀರ್ಥ ಶ್ರೀಪಾದಂಗಳವರ ಶಿಷ್ಯವರ್ಗದವರಿಂದ ಪೇಜಾವರ ವಿಶ್ವೇಶತೀರ್ಥರ ೩ನೇ ವರ್ಷದ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಡಿ. ೨೫ : ಜಾತಿ, ಧರ್ಮ, ಮತ ಬೇಧಭಾವವಿಲ್ಲದೆ ಎಲ್ಲರ ಪ್ರೀತಿ, ಅಭಿಮಾನ, ಗೌರವಗಳಿಗೆ ಪಾತ್ರರಾಗಿದ್ದ ಶ್ರೀ ಪೇಜಾವರ ವಿಶ್ವೇಶ್ವತೀರ್ಥರ ಜೀವನಾದರ್ಶ ಎಲ್ಲರಿಗೂ ಅನುಕರಣೀಯ ಎಂದು ಪಂಡಿತರಾದ ಮೃತ್ತಿಕಾ ಗುರುರಾಜಾಚಾರ್ ಹೇಳಿದರು.
ಅವರು ಭಾನುವಾರ ಹಳೇನಗರದ ಶ್ರೀ ರಾಘವೇಂದ್ರಸ್ವಾಮಿ, ಶ್ರೀ ವಾದಿರಾಜಸ್ವಾಮಿಗಳ ಮಠದಲ್ಲಿ ಗುರುರಾಜ ಸೇವಾ ಸಮಿತಿ ಹಾಗೂ ಪೇಜಾವರ ವಿಶ್ವೇಶತೀರ್ಥ ಶ್ರೀಪಾದಂಗಳವರ ಶಿಷ್ಯವರ್ಗದವರಿಂದ ಹಮ್ಮಿಕೊಳ್ಳಲಾಗಿದ್ದ ಪೇಜಾವರ ವಿಶ್ವೇಶತೀರ್ಥರ ೩ನೇ ವರ್ಷದ ಆರಾಧನಾ ಮಹೋತ್ಸವದಲ್ಲಿ ಉಪನ್ಯಾಸ ನೀಡಿದರು. ಪೇಜಾವರ ಶ್ರೀಗಳು ಬಾಲ್ಯದಲ್ಲಿಯೇ ಸನ್ಯಾಸತ್ವ ಸ್ವೀಕರಿಸಿ ವಿದ್ಯಾಮಾನ್ಯ ತೀರ್ಥರಿಂದ ವಿದ್ಯಾಭ್ಯಾಸ ಮಾಡಿ ವಿಶ್ವೇಶತೀರ್ಥರೆಂದು ನಾಮಾಂಕಿತರಾಗಿ, ೪ ಬಾರಿ ಪರ‍್ಯಾಯದಲ್ಲಿ ಸರ್ವಜ್ಞಪೀಠವನ್ನಲಂಕರಿಸಿ ಶ್ರೀಕೃಷ್ಣನನ್ನು ಪೂಜಿಸಿದ ಮಹಾಮಹಿಮರು. ತಪಸ್ಸು, ವಿದ್ಯಾದಾನ, ಸಮಾಜದ ಎಲ್ಲಾ ವರ್ಗಗಳ ಜನರ ಹಿತಕ್ಕಾಗಿ ದೇಶಾದ್ಯಂತ ಸಂಚರಿಸಿ ಜಾತಿ, ಮತ ಬೇಧಭಾವವಿಲ್ಲದೆ ಎಲ್ಲರ ಕಷ್ಟ ಸುಖಗಳಿಗೆ ಸ್ಪಂದಿಸಿ ಯತಿಕುಲಕ್ಕೆ ಚಕ್ರವರ್ತಿ ಎಂಬ ರೀತಿ ಬಾಳಿದ ಮಹಾಮಹಿಮರು. ಅವರು ತೋರಿದ ದಾರಿಯಲ್ಲಿ ನಾವುಗಳು ಸಾಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಶ್ರೀ ಮಠದಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ನಂತರ ಹಳೇನಗರದ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪೇಜಾವರ ಶ್ರೀಗಳ ಭಾವಚಿತ್ರ ಹಾಗು ಅವರ ಪಾದುಕೆಯನ್ನು ಹಿಡಿದು ಚಂಡೆ ವಾದ್ಯದೊಂದಿಗೆ ನಗರದ ಮುಖ್ಯ ಬೀದಿಗಳಲ್ಲಿ ಪೇಜಾವರವಿಶ್ವೇಶ್ವರ ತೀರ್ಥರಿಗೆ ಜೈಕಾರ ಹಾಕುವ ಮೂಲಕ ಉತ್ಸವ ನಡೆಸಲಾಯಿತು.
ಮಠಕ್ಕೆ ಆಗಮಿಸಿದ ಶ್ರೀಗಳ ಪಾದುಕೆ ಹಾಗೂ ಭಾವಚಿತ್ರಕ್ಕೆ ಪುಷ್ಪವೃಷ್ಠಿಯೊಂದಿಗೆ ಮಠದ ಪ್ರಾಕಾರದಲ್ಲಿ ಉತ್ಸವ ನಡೆಸಿ ಶ್ರೀಗಳ ಪಾದಕಾ ಪೂಜೆನಂತರ ಮಹಿಳಾ ಭಜನಾ ಮಂಡಳಿಯವರು ಶ್ರೀಗಳ ಕುರಿತ ಹಾಡು ಸೇರಿದಂತೆ ದಾಸರು ರಚಿಸಿದ ಕೀರ್ತನೆಗಳನ್ನು ಹಾಡಿದರು. ಮಹಾಮಂಗಳಾರತಿ, ನಂತರ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.
ಪಂಡಿತರಾದ ಗೊಪಾಲಾಚಾರ್, ಸತ್ಯನಾರಾಯಣಾಚಾರ್, ಮಾಧುರಾವ್, ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳೀಧರ ತಂತ್ರಿ, ರಮಾಕಾಂತ್, ಪವನಕುಮಾರ್, ಶ್ರೀನಿಧಿ, ಜಯತೀರ್ಥ, ಶೇಷಗಿರಿ, ಜಯಶ್ರೀ, ಶೋಭಾ, ಪರಿಮಳ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.