ಶನಿವಾರ, ಡಿಸೆಂಬರ್ 31, 2022

ಜಯಮ್ಮ ನಿಧನ

ಜಯಮ್ಮ
    ಭದ್ರಾವತಿ, ಡಿ. ೩೧ : ತಾಲೂಕಿನ ವೀರಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ, ರಾಮನಗರ ನಿವಾಸಿ ಎಂ.ಎಲ್ ಯಶೋಧರಯ್ಯನವರ ತಾಯಿ ಜಯಮ್ಮ(೮೩) ನಿಧನ ಹೊಂದಿದರು.
      ೫ ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಇದ್ದರು. ಇವರ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ರಾಮನಗರ ರುದ್ರಭೂಮಿಯಲ್ಲಿ ನೆರವೇರಲಿದೆ. ಇವರ ನಿಧನಕ್ಕೆ ವೀರಾಪುರ ಗ್ರಾಮ ಪಂಚಾಯಿತಿ, ರಾಮನಗರ ಗ್ರಾಮಸ್ಥರು, ವಿವಿಧ ಸಂಘ-ಸಂಸ್ಥೆಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅಯ್ಯಪ್ಪ ಸ್ವಾಮಿ ದೀಪೋತ್ಸವದ ಮೂಲಕ ಸೌಹಾರ್ದತೆ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ನ್ಯೂಟೌನ್ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ೫೧ನೇ ವರ್ಷದ ಅಯ್ಯಪ್ಪಸ್ವಾಮಿ ದೀಪೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪಾಲ್ಗೊಂಡು ದಾನಿಗಳು, ಸೇವಾಕರ್ತರನ್ನು ಸನ್ಮಾನಿಸಿದರು.
    ಭದ್ರಾವತಿ, ಡಿ. ೩೧ : ಅಯ್ಯಪ್ಪ ಸ್ವಾಮಿ ದೀಪೋತ್ಸವದ ಮೂಲಕ ಎಲ್ಲರನ್ನು ಒಗ್ಗೂಡಿಸುವ ಪ್ರಯತ್ನ ನಡೆಯುತ್ತಿದ್ದು, ಸೌಹಾರ್ದತೆಯಿಂದ ಪ್ರತಿಯೊಬ್ಬರು ಬದುಕುವಂತಾಗಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಶನಿವಾರ ನ್ಯೂಟೌನ್ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ವತಿಯಿಂದ ೫೧ನೇ ವರ್ಷದ ಅಯ್ಯಪ್ಪಸ್ವಾಮಿ ದೀಪೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
    ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ ಪ್ರತಿವರ್ಷ ವಿಜೃಂಭಣೆಯಿಂದ ದೀಪೋತ್ಸವ ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಅಯ್ಯಪ್ಪಸ್ವಾಮಿ ಕೃಪೆಯಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುವ ಜೊತೆಗೆ ಸಮಿತಿಗೆ ಎಲ್ಲಾ ರೀತಿಯ ಸಹಕಾರ ನೀಡುವುದು ಭರವಸೆ ನೀಡಿದರು.


ಭದ್ರಾವತಿ ನ್ಯೂಟೌನ್ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ೫೧ನೇ ವರ್ಷದ ಅಯ್ಯಪ್ಪಸ್ವಾಮಿ ದೀಪೋತ್ಸವ ಅಂಗವಾಗಿ ಸಾಮೂಹಿಕ ಅನ್ನಸಂತರ್ಪಣೆ ನೆರವೇರಿತು.
    ಪ್ರಮುಖರಾದ ಬಿ.ಕೆ ಜಗನ್ನಾಥ, ಟಿ. ಚಂದ್ರೇಗೌಡ, ಬಾಲಕೃಷ್ಣ, ಎಸ್. ಕುಮಾರ್, ಸುದೀಪ್‌ಕುಮಾರ್, ಬಿ.ಎಸ್ ಗಣೇಶ್, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಎಸ್. ಜಯಕೃಷ್ಣ, ಉಪಾಧ್ಯಕ್ಷ ವಿ. ಬಾಬು, ಪ್ರಧಾನ ಕಾರ್ಯದರ್ಶಿ ಟಿ.ಪಿ ಸುಬ್ರಮಣ್ಯ, ಕಾರ್ಯದರ್ಶಿ ಶೇಖ್ಯಾನಾಯ್ಕ, ಖಜಾಂಚಿ ರಾಮಮೊಗವೀರ, ಸದಸ್ಯರಾದ ಪಿ.ಆರ್ ಪ್ರಭಾಕರ್, ಆರ್. ರಾಧಕೃಷ್ಣನ್, ಡಿ. ಗಿರೀಶ್ ಪಿಳ್ಳೆ, ಕೆ.ಸಿ ರಾಜಶೇಖರ್, ಕೆ. ಮಧುಕುಮಾರ್ ಹಾಗು ಕೇರಳ ಸಮಾಜಂ ಹಾಗು ಮಹಿಳಾ ಘಟಕ ಮತ್ತು ಯುವ ಘಟಕದ ಪದಾಧಿಕಾರಿಗಳು ಹಾಗು ಅಯ್ಯಪ್ಪ ಸ್ವಾಮಿ ಗುರುಮೂರ್ತಿ, ಮಾಲಾಧಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳು, ಗಣ್ಯರು ಉಪಸ್ಥಿತರಿದ್ದರು.
    ಕಾರ್ಯಕ್ರಮದಲ್ಲಿ ಸೇವಾಕರ್ತರು, ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಭಕ್ತಿಗೀತೆಗಳ ಗಾಯನ ನಡೆಯಿತು. ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.

ಆದಾಯ ಹೆಚ್ಚಿಸಿಕೊಳ್ಳುವ ಯೋಜನೆಗಳನ್ನು ರೂಪಿಸಿ

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಅಧ್ಯಕ್ಷತೆಯಲ್ಲಿ ಆಯ-ವ್ಯಯ ಪೂರ್ವಭಾವಿ ಸಭೆಯಲ್ಲಿ ಪೌರಾಯುಕ್ತ ಎಚ್.ಎಂ ಮನುಕುಮಾರ್ ನಿರೀಕ್ಷಿತ ಆದಾಯ ಕುರಿತು ಹಾಗು ಕೈಗೊಳ್ಳಲು ಉದ್ದೇಶಿಸಲಾಗಿರುವ ಯೋಜನೆಗಳ ಕುರಿತು ಮಾಹಿತಿ ನೀಡಿದರು.  
    ಭದ್ರಾವತಿ, ಡಿ. ೩೧ :  ಆದಾಯ ಹೆಚ್ಚಿಸಿಕೊಳ್ಳುವ ಕಡೆಯ ಹೆಚ್ಚಿನ ಗಮನ ನೀಡುವ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡುವಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ನಗರಸಭೆ ಆಡಳಿತಕ್ಕೆ ಸಲಹೆ ನೀಡಿದರು.
    ಶನಿವಾರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಆಯ-ವ್ಯಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಅನಗತ್ಯವಾಗಿ ತೆರಿಗೆ ಹೆಚ್ಚು ಮಾಡುವ ಮೊದಲು ನಗರಸಭೆಗೆ ಆದಾಯ ಬರುವ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಕಳಪೆ ಕಾಮಗಾರಿಗಳಿಗೆ ಕಡಿವಾಣ ಹಾಕಬೇಕು. ಎಲ್ಲಾ ವಾರ್ಡ್‌ಗಳಲ್ಲೂ ಶುದ್ಧ ಕುಡಿಯುವ ನೀರು ಸಮರ್ಪಕವಾಗಿ ಕಲ್ಪಿಸಿಕೊಡಬೇಕು. ಎಲ್ಲೆಡೆ ನೈರ್ಮಲ್ಯ         ಕಾಪಾಡಿಕೊಳ್ಳುವ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಮನೆ ಮಾಲೀಕರ ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ, ಎಲ್.ವಿ ರುದ್ರಪ್ಪ, ಜನ್ನಾಪುರ-ಹುತ್ತಾ ತೆರಿಗೆದಾರರ ಸಂಘದ ಅಧ್ಯಕ್ಷ ಬಿ. ಚಂದ್ರಶೇಖರಯ್ಯ, ಕೆ.ಎಂ ಸತೀಶ್, ವರ್ತಕರ ಸಂಘದ ಅಧ್ಯಕ್ಷ ಸಿ.ಎನ್ ಗಿರೀಶ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಬಿಜೆಪಿ ಮುಖಂಡ ಟಿ. ವೆಂಕಟೇಶ್ ಸೇರಿದಂತೆ ಪ್ರಮುಖರು ಸಲಹೆ-ಸೂಚನೆಗಳನ್ನು  ನೀಡಿದರು.
    ಇದಕ್ಕೂ ಮೊದಲು ಪೌರಾಯುಕ್ತ ಎಚ್.ಎಂ ಮನುಕುಮಾರ್ ಸುಮಾರು ೧೦,೩೬೫ ಲಕ್ಷ ರು. ನಿರೀಕ್ಷಿತ ಆದಾಯ ಕುರಿತು ಹಾಗು ಕೈಗೊಳ್ಳಲು ಉದ್ದೇಶಿಸಲಾಗಿರುವ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಉಪಾಧ್ಯಕ್ಷ ಚನ್ನಪ್ಪ, ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶುಕ್ರವಾರ, ಡಿಸೆಂಬರ್ 30, 2022

'ಡಿ' ಗ್ರೂಪ್ ಸಂಘದ ಉಪಾಧ್ಯಕ್ಷ ಕೃಷ್ಣ ನಿಧನ

    ಭದ್ರಾವತಿ, ಡಿ. 30: ತಾಲೂಕು  'ಡಿ' ಗ್ರೂಪ್ ಸಂಘದ  ಉಪಾಧ್ಯಕ್ಷ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿ ಕೃಷ್ಣ(74) ಶುಕ್ರವಾರ ನಿಧನ ಹೊಂದಿದರು. 
     ಪತ್ನಿ, ಮೂವರು ಪುತ್ರಿಯರು ಇದ್ದರು. ಕೃಷ್ಣರವರು  ಆರೋಗ್ಯ ಇಲಾಖೆ ನೌಕರರಾಗಿದ್ದು, ಈ ಹಿಂದೆ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ತಾಲೂಕಿನ ಕೆ.ಎಚ್ ನಗರದ  ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. 
     ಕೃಷ್ಣರವರ ನಿಧನಕ್ಕೆ ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಮಾಜಿ ಅಧ್ಯಕ್ಷ ಎನ್.  ಕೃಷ್ಣಪ್ಪ, ನಿಲೇಶ್ ರಾಜ್, ಆರೋಗ್ಯ ಇಲಾಖೆ ನೌಕರರು ಸಂತಾಪ ಸೂಚಿಸಿದ್ದಾರೆ.    

ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಡಿ. ನಾಗರಾಜ್‌ಗೆ ಬೆಳ್ಳಿ ಪದಕ

ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭದ್ರಾವತಿ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟಿನ ಅಧ್ಯಕ್ಷ ಡಿ. ನಾಗರಾಜ್‌ರವರು ಭಾಗವಹಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ಭದ್ರಾವತಿ, ಡಿ. ೩೦: ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ನಗರದ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟಿನ ಅಧ್ಯಕ್ಷ ಡಿ. ನಾಗರಾಜ್‌ರವರು ಭಾಗವಹಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ಪುದುಚೆರಿ ಗಾಜೀವ್‌ಗಾಂಧಿ ಇಂಡೋರ್ ಸ್ಟೇಡಿಯಂ, ಉಪ್ಪಲಮ್‌ನಲ್ಲಿ ಪುದುಚೆರಿ ಅಮೆಚ್ಯೂರ್ ಯೋಗ ಅಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗು ಇಂಡಿಯನ್ ಯೋಗ ಫೆಡರೇಷನ್ ವತಿಯಿಂದ ಆಯೋಜಿಸಲಾಗಿದ್ದ ೪೧ನೇ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ ಪಂದ್ಯಾವಳಿಯ ೬೦ ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
    ಡಿ. ನಾಗರಾಜ್‌ರವರನ್ನು ಕರ್ನಾಟಕ ರಾಜ್ಯ ಯೋಗ ಸಂಸ್ಥೆ ಅಧ್ಯಕ್ಷ ಡಾ. ರಾಮಮೂರ್ತಿ ಹಾಗು ಕಾರ್ಯದರ್ಶಿ ಡಿ. ಪುಟ್ಟೇಗೌಡ ಹಾಗು ಯೋಗಪಟುಗಳು ಅಭಿನಂದಿಸಿದ್ದಾರೆ.  

ಗುರುವಾರ, ಡಿಸೆಂಬರ್ 29, 2022

ನೂತನ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರಿಡಿ

ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರು ನಾಮಕರಣಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(ಕೆಆರ್‌ಎಸ್) ಗುರುವಾರ ಭದ್ರಾವತಿಯಲ್ಲಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
    ಭದ್ರಾವತಿ, ಡಿ. ೨೯: ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರು ನಾಮಕರಣಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(ಕೆಆರ್‌ಎಸ್) ಗುರುವಾರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
    ಪಕ್ಷದ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ೧೧೯ನೇ ಜನ್ಮದಿನ ಆಚರಿಸಲಾಗುತ್ತಿದ್ದು, ಕನ್ನಡನಾಡು ಅದರಲ್ಲೂ ಶಿವಮೊಗ್ಗ ಜಿಲ್ಲೆಗೆ ಕುವೆಂಪು ಅವರ ಕೊಡುಗೆ ಅನನ್ಯವಾಗಿದೆ. ಸಮಸ್ತ ಜನತೆ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳೊಂದಿಗೆ ಅವರ ಹೆಸರನ್ನು ಅಜರಾಮರವಾಗಿಸುವ ನಿಟ್ಟಿನಲ್ಲಿ ನೂತನ ವಿಮಾನ ನಿಲ್ದಾಣಕ್ಕೆ ಹೆಸರನ್ನು ನಾಮಕರಣಗೊಳಿಸುವಂತೆ ಕೋರಿದೆ.
    ತಹಸೀಲ್ದಾರ್ ಗ್ರೇಡ್-೨ ರಂಗಮ್ಮ  ಮೂಲಕ  ಮನವಿ ಸಲ್ಲಿಸಲಾಯಿತು.  ಪಕ್ಷದ ಅಧ್ಯಕ್ಷ ನಾಗರಾಜ್‌ರಾವ್ ಶಿಂಧೆ, ಯುವ ಘಟಕದ ಅಧ್ಯಕ್ಷ ಅರಳಿಹಳ್ಳಿ ತ್ಯಾಗರಾಜ್, ಕಾರ್ಯದರ್ಶಿ ಶಬರೀಶ್, ಮುಖಂಡರಾದ ತೀರ್ಥಕುಮಾರ್, ರಾಜೇಂದ್ರ, ವೆಂಕಟೇಶ್, ಆನಂದ್, ವಿನೋದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜಮೀನುಗಳಿಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಕಾಡಾ ಅಧ್ಯಕ್ಷೆ ಭೂಮಿ ಪೂಜೆ

ಭದ್ರಾವತಿ ತಾಲೂಕಿನ ಭಂಡಾರಹಳ್ಳಿ ವೀರಾಪುರ ಗ್ರಾಮದಲ್ಲಿ ರೈತರ ಜಮೀನುಗಳಿಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಗುರುವಾರ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಚಾಲನೆ ನೀಡಿದರು.
    ಭದ್ರಾವತಿ, ಡಿ. ೨೯: ತಾಲೂಕಿನ ಭಂಡಾರಹಳ್ಳಿ ವೀರಾಪುರ ಗ್ರಾಮದಲ್ಲಿ ರೈತರ ಜಮೀನುಗಳಿಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಗುರುವಾರ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಚಾಲನೆ ನೀಡಿದರು.
    ಈ ಸಂದರ್ಭದಲ್ಲಿ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಹಾಗು ನಿಗದಿ ಅವಧಿಯಲ್ಲಿ ಮುಕ್ತಾಯಗೊಳಿಸುವಂತೆ ಗುತ್ತಿಗೆದಾರಿಗೆ ಸೂಚಿಸಿದ ಪವಿತ್ರ ರಾಮಯ್ಯ, ರೈತರು ರಸ್ತೆಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.


    ಗ್ರಾಮ ಪಂಚಾಯಿತಿ ಹಾಗು ನೀರು ಬಳಕೆದಾರರ ಸಂಘದ ಸದಸ್ಯರು, ರೈತ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು. ಪವಿತ್ರ ರಾಮಯ್ಯರವರು ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಬಹುತೇಕ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸುವ ಜೊತೆಗೆ ಅವುಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ರೈತರು, ನಿವಾಸಿಗಳು ಅವರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.