Thursday, January 5, 2023

ಕಾಲ್ವರಿ ಕಾರುಣ್ಯ ಟ್ರಸ್ಟ್ ವತಿಯಿಂದ ಅಂಬ್ಯುಲೆನ್ಸ್ ಸೇವೆಗೆ ಚಾಲನೆ

ಭದ್ರಾವತಿ ಕಾಲ್ವರಿ ಕಾರುಣ್ಯ ಟ್ರಸ್ಟ್ ವತಿಯಿಂದ ನೂತನವಾಗಿ ಅಂಬ್ಯುಲೆನ್ಸ್ ಸೇವೆ ಆರಂಭಿಸಲಾಗಿದ್ದು, ಗುರುವಾರ ಸೇವೆಗೆ ಚಾಲನೆ ನೀಡಲಾಯಿತು.
    ಭದ್ರಾವತಿ, ಜ. ೫ : ನಗರದ ಕಾಲ್ವರಿ ಕಾರುಣ್ಯ ಟ್ರಸ್ಟ್ ವತಿಯಿಂದ ನೂತನವಾಗಿ ಅಂಬ್ಯುಲೆನ್ಸ್ ಸೇವೆ ಆರಂಭಿಸಲಾಗಿದ್ದು, ಗುರುವಾರ ಸೇವೆಗೆ ಚಾಲನೆ ನೀಡಲಾಯಿತು.
    ತುರ್ತು ಸಂದರ್ಭದಲ್ಲಿ ಕಡುಬಡವರಿಗೆ ಕಡಿಮೆ ದರದಲ್ಲಿ ಸೇವೆ ನೀಡುವ ಉದ್ದೇಶ ಟ್ರಸ್ಟ್ ಹೊಂದಿದ್ದು, ಅಂಬ್ಯುಲೆನ್ಸ್ ರಾಜ್ಯದ ಎಲ್ಲೆಡೆ ಸಂಚರಿಸಲಿದೆ. ಚಾಲನೆ ನೀಡಿದ ಪ್ರಮುಖರು ಮಾತನಾಡಿ, ಟ್ರಸ್ಟ್ ಕಾರ್ಯ ಶ್ಲಾಘನೀಯವಾಗಿದೆ. ಉತ್ತಮ ಸೇವೆ ನೀಡುವ ಕಡೆ ಹೆಚ್ಚಿನ ಗಮನ ಹರಿಸಿ ಸೇವಾ ಕಾರ್ಯ ಸಾರ್ಥಕಗೊಳಿಸಬೇಕೆಂದು ಕರೆ ನೀಡಿದರು.  
    ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸ್ಟೀವನ್ ಜೋನಾಥನ್, ಕಾರ್ಯದರ್ಶಿ ಮನೋಹರ್ ಬಾಬು, ಪಾಸ್ಟರ್ ರವಿಕುಮಾರ್, ಪಾಸ್ಟರ್ ರೈಮಂಡ್, ತೆಲುಗು ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಬಾಸ್ಕರ್ ಬಾಬು, ಯುವ ಮುಖಂಡ ವಿಲ್ಸನ್ ಬಾಬು, ನಗರಸಭೆ ಮಾಜಿ ಸದಸ್ಯ ಮುಕುಂದಪ್ಪ, ಯಂಗ್ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಆರ್. ಮೋಸಸ್, ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ತಾಲೂಕು ಅಧ್ಯಕ್ಷ ಸಂತೋಷ್ ಕುಮಾರ್, ಕಾಕನಿ ಪ್ರಕಾಶ್, ಬಾಬು, ಕೇವಿನ, ಬಾಲಾಜಿ, ಅಶೋಕ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಾಮಾಜಿಕ ಜಾಲತಾಣಗಳ ಬಳಕೆ ಮಿತಿಯಲ್ಲಿರಲಿ, ಎಚ್ಚರಿಕೆ ವಹಿಸಿ : ಜಿ.ಕೆ ಮಿಥುನ್ ಕುಮಾರ್

ಭದ್ರಾವತಿ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್‌ಎವಿ ಶಾಲೆ ಮತ್ತು ಕಾಲೇಜುಗಳ ವಾರ್ಷಿಕೋತ್ಸವ ೨೫ನೇ ವರ್ಷದ ಬೆಳ್ಳಿ ಉತ್ಸವ ಸಮಾರಂಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಜ. ೫ : ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಹೇಳಿದರು.
    ಅವರು ನಗರದ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್‌ಎವಿ ಶಾಲೆ ಮತ್ತು ಕಾಲೇಜುಗಳ ವಾರ್ಷಿಕೋತ್ಸವ ೨೫ನೇ ವರ್ಷದ ಬೆಳ್ಳಿ ಉತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ಸಾಮಾಜಿಕ ಜಾಲತಾಣಗಳ ಬಳಕೆ ಮಿತಿಯಲ್ಲಿರಬೇಕು. ಅಲ್ಲದೆ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದಂತೆ, ಮಾದಕ ದ್ರವ್ಯ ವ್ಯಸನದಿಂದ ದೂರವಿರುವಂತೆ ಹಾಗೂ ದಿನನಿತ್ಯದ  ಜೀವನದಲ್ಲಿ ಉತ್ತಮ ಹವ್ಯಾಸಗಳನ್ನು ರೂಡಿಸಿಕೊಳ್ಳುವಂತೆ ಕರೆ ನೀಡಿದರು.
    ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ವೇದಿಕೆ ಕಾರ್ಯಕ್ರಮದ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಣ ಸಂಸ್ಥೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು, ಪೋಷಕರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.

ಅಂತಿಮ ಮತದಾರರ ಪಟ್ಟಿ ಪ್ರಕಟ: ಹೊಸ ಸೇರ್ಪಡೆ 6,191, ಕೈ ಬಿಟ್ಟಿರುವುದು 5,323

ಭದ್ರಾವತಿ,  ಜ. 5: ಭದ್ರಾವತಿ ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಗುರುವಾರ ತಹಸೀಲ್ದಾರ್ ಆರ್. ಪ್ರದೀಪ್ ಪ್ರಕಟಿಸಿದರು.
    ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ  ಸಂಜೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹೊಸದಾಗಿ 6,191 ಮತದಾರರು ಸೇರ್ಪಡೆಗೊಂಡಿದ್ದು, ಉಳಿದಂತೆ 5,323 ಮತದಾರರನ್ನು ಕೈ ಬಿಡಲಾಗಿದೆ. 2,405 ತಿದ್ದುಪಡಿಯಲಿದ್ದು, ಅಂತಿಮವಾಗಿ 2,07,609 ಮತದಾರರಿದ್ದಾರೆ. ಈ ಪೈಕಿ 1,01,058 ಪುರುಷ ಹಾಗು 1,06,546 ಮಹಿಳಾ ಮತ್ತು 5 ತೃತೀಯ ಲಿಂಗ ಮತದಾರರಿದ್ದು, ಒಟ್ಟಾರೆ ಅಂತಿಮ ಮತಪಟ್ಟೆಯಲ್ಲಿ 2,885 ಮತದಾರರ ಸಂಖ್ಯೆ ಹೆಚ್ಚಳವಾಗಿದೆ  ಎಂದರು.
    ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 1266 ಮಂದಿ ಮತದಾರರು ಮರಣ ಹೊಂದಿದ್ದು, 3,366 ಮತದಾರರು ಸ್ಥಳಾಂತರ, 161 ಮತದಾರರು ಪುನರಾವರ್ತನೆ ಹಾಗು 530 ಮತದಾರರು ವಲಸೆ ಗೊಂಡಿದ್ದು,  ಈ ಹಿನ್ನೆಲೆಯಿಂದ  ಒಟ್ಟು 5323 ಮಂದಿ ಮತದಾರರನ್ನು ಕೈ ಬಿಡಲಾಗಿದೆ ಎಂದು ಸ್ಪಷ್ಟಪಡಿಸಿದರು.
     18 ರಿಂದ 19 ವಯಸ್ಸಿನ 911 ಯುವ ಮತದಾರರು ಹಾಗೂ 1776 ವಿಕಲಚೇತನ ಮತ್ತು 355 ಗಣ್ಯ ವ್ಯಕ್ತಿ ಮತದಾರರಿದ್ದು, 253 ಮತಕಟ್ಟೆ ಅಧಿಕಾರಿಗಳು ಇದ್ದಾರೆ ಎಂದು ಮಾಹಿತಿ ನೀಡಿದರು.
     ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರಾದ ಟಿ. ಚಂದ್ರೇಗೌಡ, ಡಿ.ಸಿ ಮಾಯಣ್ಣ, ಆರ್.  ಕರುಣಾ ಮೂರ್ತಿ, ಬಿ.ಟಿ ನಾಗರಾಜ್, ಸಿ.ಎಂ ಖಾದರ್, ಮೊಸರಹಳ್ಳಿ ಸುರೇಶ್, ಎನ್ ರಾಮಕೃಷ್ಣ  ಮೆಡಿಕಲ್ ಆನಂದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, January 4, 2023

ಅತಿಯಾದ ಮೊಬೈಲ್ ಬಳಕೆ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಮಾರಕ

ಭದ್ರಾವತಿ ಕಾಗದನಗರದ ಪೇಪರ್‌ಟೌನ್ ಆಂಗ್ಲ ಶಾಲೆಯಲ್ಲಿ ೪೦ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕ್ರೀಡಾ ಚಟುವಟಿಕೆಗಳ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪೇಪರ್‌ಟೌನ್ ಪೊಲೀಸ್ ಠಾಣಾಧಿಕಾರಿ ಭಾರತಿ, ವಿ. ಸಂತೋಷ್‌ಕುಮಾರ್, ಆರ್. ಸತೀಶ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ, ಜ. ೪ : ಮೊಬೈಲ್ ವ್ಯಸನ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೈಯಕ್ತಿಕ ಜೀವನದ ಮೇಲೆ ದುಷ್ಪರಿಣಾಮ ಉಂಟು ಮಾಡಲಿದ್ದು, ಈ ಹಿನ್ನಲೆಯಲ್ಲಿ ಎಚ್ಚರವಹಿಸುವಂತೆ ಮಾಚೇನಹಳ್ಳಿ ಟಿಎಂಎಇಎಸ್ ಆಯುರ್ವೇದಿಕ್ ಕಾಲೇಜಿನ ಮನೋ ಚಿಕಿತ್ಸಕರು ಮತ್ತು ಆಧ್ಯಾತ್ಮಿಕ ಚಿಂತಕರಾದ ವಿ. ಸಂತೋಷ್‌ಕುಮಾರ್ ಹೇಳಿದರು.
    ಅವರು ಬುಧವಾರ ಕಾಗದನಗರದ ಪೇಪರ್‌ಟೌನ್ ಆಂಗ್ಲ ಶಾಲೆಯಲ್ಲಿ ೪೦ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕ್ರೀಡಾ ಚಟುವಟಿಕೆಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ಅತಿಯಾದ ಮೊಬೈಲ್ ಬಳಕೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತವೆ. ಪೋಷಕರು ತಮ್ಮ ಮಕ್ಕಳು ಈ ವ್ಯಸನದಿಂದ ಹೊರಬರಲು ಮಕ್ಕಳಿಗೆ ಮೊಬೈಲ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು. ಕೆಲವು ಆಪ್‌ಗಳನ್ನು ಮಕ್ಕಳು ಬಳಸದಂತೆ ತಡೆಯುವಲ್ಲಿ ಕ್ರಮ ಕೈಗೊಳ್ಳಬೇಕೆಂದರು.
    ಶಿಕ್ಷಣ ಸಂಯೋಜಕ ರವಿಕುಮಾರ್ ಮಾತನಾಡಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ವಿಷಯವಾರು ಅಭ್ಯಾಸಕ್ಕೆ ಹೆಚ್ಚಿನ ಗಮನ ಹರಿಸಬೇಕು. ಹೆಚ್ಚಿನ ಅಂಕಗಳನ್ನು ಪಡೆಯಲು ಪ್ರಯತ್ನಿಸಬೇಕೆಂದರು.
    ಕಾಲೇಜಿನ ಪ್ರಾಂಶುಪಾಲ ಆರ್. ಸತೀಶ್, ಉಪ ಪ್ರಾಂಶುಪಾಲ ಡಿ. ನಾಗರಾಜ್, ಪೇಪರ್‌ಟೌನ್ ಪೊಲೀಸ್ ಠಾಣಾಧಿಕಾರಿ ಭಾರತಿ, ಸಿ. ಚನ್ನಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಿರಿ ಪ್ರಾರ್ಥಿಸಿ, ಹರ್ಷಿತ ವಂದಿಸಿದರು. ಬಿಂದು ಕಾರ್ಯಕ್ರಮ ನಿರೂಪಿಸಿದರು.  


ಭದ್ರಾವತಿ ಕಾಗದನಗರದ ಪೇಪರ್‌ಟೌನ್ ಆಂಗ್ಲ ಶಾಲೆಯಲ್ಲಿ ೪೦ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕ್ರೀಡಾ ಚಟುವಟಿಕೆಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಚೇನಹಳ್ಳಿ ಟಿಎಂಎಇಎಸ್ ಆಯುರ್ವೇದಿಕ್ ಕಾಲೇಜಿನ ಮನೋ ಚಿಕಿತ್ಸಕರು ಮತ್ತು ಆಧ್ಯಾತ್ಮಿಕ ಚಿಂತಕರಾದ ವಿ. ಸಂತೋಷ್‌ಕುಮಾರ್ ಪಾಲ್ಗೊಂಡು ಮಾತನಾಡಿದರು.

ವಿಜೃಂಭಣೆಯಿಂದ ಜರುಗಿದ ಶ್ರೀ ಮಾರಿಯಮ್ಮ ಜಾತ್ರಾ ಮಹೋತ್ಸವ

ಕಣ್ಮನ ಸೆಳೆದ ಅಮ್ಮನವರ ಲಕ್ಷ್ಮೀ ಅಲಂಕಾರ, ಸಾವಿರಾರು ಮಂದಿಗೆ ಅನ್ನಸಂತರ್ಪಣೆ

ಭದ್ರಾವತಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಬುಧವಾರ ವಿಶೇಷವಾಗಿ ಅಮ್ಮನವರಿಗೆ ಕೈಗೊಳ್ಳಲಾಗಿದ್ದ ಲಕ್ಷ್ಮೀ ಅಲಂಕಾರ ಭಕ್ತರ ಕಣ್ಮನ ಸೆಳೆಯಿತು.
    ಭದ್ರಾವತಿ, ಜ. ೪ : ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
    ಜಾತ್ರಾ  ಮಹೋತ್ಸವ ಅಂಗವಾಗಿ ಭದ್ರಾ ನದಿ ಶಕ್ತಿ ತೀರ್ಥದಿಂದ ಸೋಮವಾರ ಬೆಳಿಗ್ಗೆ ಅಮ್ಮನವರಿಗೆ ಅಭಿಷೇಕ ನೆರವೇರಿಸಲಾಯಿತು. ಮಂಗಳವಾರ ಸಂಜೆ ಭದ್ರಾನದಿ ದಡದಲ್ಲಿ ಅಮ್ಮನವರ ಶಕ್ತಿ ಕರಗ ನಿರ್ಮಿಸಿ ಅಗ್ನಿಕುಂಡ, ತ್ರಿಶೂಲ ಮುದ್ರೆಯೊಂದಿಗೆ ವರ್ಣರಂಜಿತ ಸಿಡಿಮದ್ದು ಹಾಗು ವಿಶೇಷ ಮಂಗಳ ವಾದ್ಯಗಳೊಂದಿಗೆ ದೇವಸ್ಥಾನಕ್ಕೆ ತರಲಾಯಿತು.
    ಬುಧವಾರ ಮಧ್ಯಾಹ್ನ ಸಾವಿರಾರು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು. ಸಂಜೆ ೫ ಅಮ್ಮನವರ ಭವ್ಯ ರಾಜಬೀದಿ ಉತ್ಸವ ಮೆರವಣಿಗೆ ನಡೆಯಿತು. ಗುರುವಾರ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.
    ಸಮಿತಿ ಅಧ್ಯಕ್ಷ, ಉದ್ಯಮಿ ಎ. ಮಾಧು ನೇತೃತ್ವದಲ್ಲಿ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು. ಸಮಿತಿ ಪದಾಧಿಕಾರಿಗಳು, ಸೇವಾಕರ್ತರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಜನಪ್ರತಿನಿಧಿಗಳು, ಗಣ್ಯರು ಸೇರಿದಂತೆ ನಗರದ ವಿವಿಧೆಡೆಗಳಿಂದ ಸಾವಿರಾರು ಮಂದಿ ಭಕ್ತಾಧಿಗಳು ದೇವಸ್ಥಾನಕ್ಕೆ ಆಗಮಿಸಿ ಅಮ್ಮನವರ ದರ್ಶನ ಪಡೆದರು. ವಿಶೇಷವಾಗಿ ಅಮ್ಮನವರಿಗೆ ಕೈಗೊಳ್ಳಲಾಗಿದ್ದ ಲಕ್ಷ್ಮೀ ಅಲಂಕಾರ ಭಕ್ತರ ಕಣ್ಮನ ಸೆಳೆಯಿತು.


ಭದ್ರಾವತಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಬುಧವಾರ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.

ನ್ಯಾಯಾಲಯಕ್ಕೆ ಆಗಮಿಸಿದ್ದ ವ್ಯಕ್ತಿಗೆ ಹೃದಯಾಘಾತ : ನಿಧನ

ಎಂ.ಆರ್ ಗೋಪಾಲಕೃಷ್ಣ
    ಭದ್ರಾವತಿ, ಜ. ೪: ನಗರದ ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆ ಸಂಬಂಧ ಆಗಮಿಸಿದ್ದ ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.  
    ಶಿವಮೊಗ್ಗ ನಿವಾಸಿ ಎಂ.ಅರ್ ಗೋಪಾಲಕೃಷ್ಣ (೭೨ ) ಮೃತಪಟ್ಟಿದ್ದು, ಪತ್ನಿ ಹಾಗು ಇಬ್ಬರು ಪುತ್ರರು ಇದ್ದರು. ಬೆಳಿಗ್ಗೆ ನ್ಯಾಯಾಧೀಶರ ಕೊಠಡಿ ಹೊರಗೆ ಕುಳಿತು ಕೊಂಡಿದ್ದಾಗ ಏಕಾಏಕಿ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ.
    ಗೋಪಾಲಕೃಷ್ಣರನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷೆ ನಡೆಸಿದ ವೈದ್ಯರು ಮೃತಪಟ್ಟಿರುವುದು ಖಚಿತ ಪಡಿಸಿದ್ದಾರೆ. ನಂತರ ಮೃತದೇಹವನ್ನು ಶಿವಮೊಗ್ಗಕ್ಕೆ ಕಳುಹಿಸಲಾಯಿತು. ನಗರದ ಆರ್ಯವೈಶ್ಯ ಸಮಾಜ ಸಂತಾಪ ಸೂಚಿಸಿದೆ.
    ಶಿವಮೊಗ್ಗ ಸೋಮಿನಕೊಪ್ಪ ನಿವಾಸಿ ಗೋಪಾಲಕೃಷ್ಣರವರು ಪ್ರಕರಣವೊಂದರ ವಿಚಾರಣೆಗಾಗಿ ಇಲ್ಲಿನ ನ್ಯಾಯಾಲಯಕ್ಕೆ ಆಗಾಗ ಬಂದು ಹೋಗುತ್ತಿದ್ದರು ಎನ್ನಲಾಗಿದೆ.

ಎಮೆರಿಟಸ್ ಪ್ರೊಫೆಸರ್ ಡಾ. ವಿಜಯದೇವಿಗೆ ಅಲ್ಲಮಪ್ರಭು ಪ್ರಶಸ್ತಿ

ಪ್ರೊಫೆಸರ್ ಡಾ. ವಿಜಯದೇವಿ
    ಭದ್ರಾವತಿ, ಜ. ೪ : ನಗರದ ನಿವಾಸಿ, ವಿಜಯಪುರ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ, ಎಮೆರಿಟಸ್ ಪ್ರೊಫೆಸರ್  ಡಾ. ವಿಜಯದೇವಿ ಅವರಿಗೆ ಅಲ್ಲಮಪ್ರಭು ಪ್ರಶಸ್ತಿ ಲಭಿಸಿದೆ.
    ಗುರುಬಸವ ಅಧ್ಯಯನ ಪೀಠ ವತಿಯಿಂದ ಶಿವಮೊಗ್ಗ ಶ್ರೀ ಬೆಕ್ಕಿನಕಲ್ಮಠ ಶ್ರೀ ಗುರುಬಸವ ಭವನದಲ್ಲಿ ಜ.೬ ಮತ್ತು ೭ರಂದು ಎರಡು ದಿನಗಳ ಕಾಲ ಶಿವಮೊಗ್ಗ ಆನಂದಪುರ, ಶ್ರೀ ಬೆಕ್ಕಿನಕಲ್ಮಠ, ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನ ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿರುವ ಪರಮ ತಪಸ್ವಿ ಲಿಂಗೈಕ್ಯ ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳವರ ೧೧೧ನೇ ಪುಣ್ಯಸ್ಮರಣೋತ್ಸವ, ಶರಣ ಸಾಹಿತ್ಯ ಮತ್ತು ಭಾವೈಕ್ಯ ಸಮ್ಮೇಳನದಲ್ಲಿ ಡಾ. ವಿಜಯದೇವಿಯವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
    ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು, ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸಿ ನಾರಾಯಣಗೌಡ, ಶಾಸಕರಾದ ಕೆ.ಎಸ್ ಈಶ್ವರಪ್ಪ, ಆಯನೂರು ಮಂಜುನಾಥ್, ಡಿ.ಎಸ್ ಅರುಣ್, ಶಿವಮೊಗ್ಗ ಮಹಾನಗರ ಪಾಲಿಕೆ ಮಹಾಪೌರ ಎಸ್. ಶಿವಕುಮಾರ್, ಸದಸ್ಯ ಪ್ರಭಾಕರ್ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಡಾ. ವಿಜಯದೇವಿಯವರು ಶಿಕ್ಷಣ ಹಾಗು ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸಿದ್ದು, ತಾಲೂಕು ಹಾಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಾಗು ಶರಣ ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಹಲವಾರು ಕೃತಿಗಳನ್ನು ರಚಿಸಿದ್ದಾರೆ.  ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ.  ಇದೀಗ ಅಲ್ಲಮಪ್ರಭು ಪ್ರಶಸ್ತಿ ಲಭಿಸಿದೆ. ಇವರಿಗೆ ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು, ಜನಪ್ರತಿನಿಧಿಗಳು ಅಭಿನಂದನೆ ಸಲ್ಲಿಸಿದ್ದಾರೆ.