Tuesday, January 10, 2023

‎ ಕುಮಾರಸ್ವಾಮಿ ಸಮ್ಮುಖದಲ್ಲಿ ಸ್ಥಳೀಯ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

      ಭದ್ರಾವತಿ, ಜ. 10: ಹಲವು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸಿರುವ ಸ್ಥಳೀಯ ಪ್ರಮುಖ ಮುಖಂಡರು ಕಾಂಗ್ರೆಸ್ ಪಕ್ಷವನ್ನು ತೊರೆದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ಪ್ರಮುಖರಾದ  ಪರಮೇಶಿ,  ಬಸಪ್ಪ, ಸಂತೋಷ್, ಉಮೇಶ್ ಮತ್ತು ಕಿರಣ್ ಸೇರಿದಂತೆ ಇನ್ನಿತರರು ಸೇರ್ಪಡೆಗೊಂಡರು. 
        ಹೊಸದಾಗಿ ಪಕ್ಷಕ್ಕೆ ಸೇರ್ಪಡೆಗೊಂಡ ಪ್ರಮುಖರಿಗೆ ವಿವಿಧ ಜವಾಬ್ದಾರಿಗಳನ್ನು ವಹಿಸಲಾಗಿದೆ. ಪರಮೇಶಿಯವರಿಗೆ ಜಿಲ್ಲಾ ಉಪಾಧ್ಯಕ್ಷ, ಬಸಪ್ಪರಿಗೆ ತಾಲೂಕು ನಗರ ಉಪಾಧ್ಯಕ್ಷ ಹಾಗು ಸಂತೋಷ್ ಅವರಿಗೆ ಸಂಘಟನಾ ಕಾರ್ಯದರ್ಶಿ ಜವಾಬ್ದಾರಿಗಳನ್ನು ವಹಿಸಲಾಗಿದೆ.
    ವಿಧಾನಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶಾರದಾ ಅಪ್ಪಾಜಿ ಯುವ ಘಟಕದ ಜಿಲ್ಲಾಧ್ಯಕ್ಷ ಮಧು ಕುಮಾರ್, ತಾಲೂಕು ಅಧ್ಯಕ್ಷ ಆರ್ ಕರುಣಾಮೂರ್ತಿ, ಪ್ರಮುಖರಾದ ಡಿ.ಟಿ ಶ್ರೀಧರ್, ವಿಶಾಲಾಕ್ಷಿ, ಅಮೋಸ್, ಎಚ್.ಬಿ ರವಿಕುಮಾರ್, ಭಾಗ್ಯಮ್ಮ, ಮಂಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಳೆದ ಕೆಲವು ತಿಂಗಳುಗಳಿಂದ ಜೆಡಿಎಸ್ ಪಕ್ಷದ ಸಂಘಟನಾ ಚಟುವಟಿಕೆಗಳು ತೀವ್ರಗೊಂಡಿದ್ದು, ವಿವಿಧ ಪಕ್ಷಗಳ ಪ್ರಮುಖರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಈಗಾಗಲೇ ಪಕ್ಷದ ಅಭ್ಯರ್ಥಿ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.

ಕುವೆಂಪು ವಿ.ವಿ ಹಣಕಾಸು ಅಧಿಕಾರಿ ರಾಮಕೃಷ್ಣ ವರ್ಗಾವಣೆ


ಎಸ್. ರಾಮಕೃಷ್ಣ
    ಭದ್ರಾವತಿ, ಜ. ೧೦: ಕುವೆಂಪು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಎಸ್. ರಾಮಕೃಷ್ಣ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದ್ದು, ಈ ಸಂಬಂಧ ವಿಶ್ವವಿದ್ಯಾಲಯದ ಮಾನವ ಸಂಪನ್ಮೂಲ ಮತ್ತು ನಿರ್ವಹಣೆ ವಿಭಾಗದ ಉಪ ಕುಲಸಚಿವರು ಕಛೇರಿ ಆದೇಶ ಹೊರಡಿಸಿದ್ದಾರೆ.
    ರಾಮಕೃಷ್ಣರವರು ೧ ಜುಲೈ, ೨೦೨೦ರಿಂದ ವಿಶ್ವವಿದ್ಯಾಲಯದಲ್ಲಿ ಹಣಕಾಸು ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜ.೧೦ರ ಕುಲಪತಿಗಳ ಆದೇಶದ ಮೇರೆಗೆ ಇವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದ್ದು, ಮಾತೃ ಇಲಾಖೆಯ ಸೇವೆಗೆ ಹಿಂದಿರುಗಿಸಲಾಗಿದೆ. ಇವರ ಕರ್ತವ್ಯದ ಹೊಣೆಯನ್ನು ಕುಲಸಚಿವರು(ಪರೀಕ್ಷಾಂಗ) ಇವರಿಗೆ ವಹಿಸಲಾಗಿದೆ.

ಕುವೆಂಪು ವಿ.ವಿ ಕುಲಸಚಿವೆ ಜಿ. ಅನುರಾಧ ವರ್ಗಾವಣೆ

ಜಿ. ಅನುರಾಧ
    ಭದ್ರಾವತಿ, ಜ. ೧೦ : ಕುವೆಂಪು ವಿಶ್ವ ವಿದ್ಯಾನಿಲಯದ ಕುಲಸಚಿವೆ ಜಿ. ಅನುರಾಧ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿ ಅಧಿಸೂಚನೆ ಹೊರಡಿಸಿದೆ.
    ಈ ಹಿಂದೆ ಶಿವಮೊಗ್ಗ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಕುವೆಂಪು ವಿಶ್ವ ವಿದ್ಯಾನಿಲಯಕ್ಕೆ ವರ್ಗಾವಣೆಗೊಂಡಿದ್ದರು. ಕುಲಸಚಿವೆಯಾಗಿ ಉತ್ತಮವಾಗಿ ಕರ್ತವ ನಿರ್ವಹಿಸುವ ಮೂಲಕ ಸಾಕಷ್ಟು ಸುಧಾರಣೆಗಳನ್ನು ಜಾರಿಗೆ ತಂದಿದ್ದರು. ಇದೀಗ ಏಕಾಏಕಿ ಅವರನ್ನು ವಿಜಯನಗರ ಜಿಲ್ಲೆ ಹೊಸಪೇಟೆ ಖಾಲಿ ಇರುವ ಅಪರ ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾಯಿಸಲಾಗಿದೆ.

Monday, January 9, 2023

ಡಿ. ನಾಗರಾಜ್‌ಗೆ ಯೋಗ ಸ್ಪರ್ಧೆಯಲ್ಲಿ ಬೆಳ್ಳಿ ಪದಕ

ಅಂತರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭದ್ರಾವತಿ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಿ. ನಾಗರಾಜ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ಭದ್ರಾವತಿ, ಜ. ೧೦ : ಅಂತರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ನಗರದ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಿ. ನಾಗರಾಜ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ಪಾಂಡಿಚೇರಿ ಸರ್ಕಾರದ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪಾಂಡಿಚೇರಿ ಕರುವಾಡಿಕುಪ್ಪಂನ ಕಾಮರಾಜ ಮಣಿಮಂಟಪಂನಲ್ಲಿ ಆಯೋಜಿಸಲಾಗಿದ್ದ ೨೮ನೇ ಅಂತರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್‌ನಲ್ಲಿ ನಾಗರಾಜ್‌ರವರು ೪೬ ವರ್ಷ ಮೇಲ್ಪಟ್ಟವರ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
    ಮುಖ್ಯಮಂತ್ರಿ ರಂಗಸ್ವಾಮಿ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಸಚಿವ ಕೆ. ಲಕ್ಷ್ಮೀನಾರಾಯಣನ್, ಸಭಾಧ್ಯಕ್ಷ ಆರ್. ಸೆಲ್ವಂ, ಇಲಾಖೆ ನಿರ್ದೇಶಕಿ ಪಿ. ಪ್ರಿಯದರ್ಶಿನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಕ್ಷರ ಸಂತ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಲ ಹಾಜಬ್ಬರಿಗೆ ಸನ್ಮಾನ

ಅಕ್ಷರ ಸಂತ, ಸಮಾಜ ಸೇವಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಲ ಹಾಜಬ್ಬ ಅವರನ್ನು ಭದ್ರಾವತಿ ಅಪ್ಪರ್ ಹುತ್ತಾ ಅನನ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ: ಅಕ್ಷರ ಸಂತ, ಸಮಾಜ ಸೇವಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಲ ಹಾಜಬ್ಬ ಅವರನ್ನು ನಗರದ ಅಪ್ಪರ್ ಹುತ್ತಾ ಅನನ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು.
    ಟ್ರಸ್ಟ್ ೧೦ನೇ ವರ್ಷದ ದಶ ಸಂಭ್ರಮ ಅನನ್ಯೋತ್ಸವ ವಾರ್ಷಿಕ ದಿನಾಚರಣೆಯಲ್ಲಿ ಹಾಜಬ್ಬ ಅವರ ಸೇವೆಯನ್ನು ಸ್ಮರಿಸಿ ಗೌರವಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಡಾ. ಕೆ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.
    ಟ್ರಸ್ಟ್ ಉಪಾಧ್ಯಕ್ಷ ಕೆ.ಪಿ ಹರೀಶ್‌ಕುಮಾರ್, ಕಾರ್ಯದರ್ಶಿ ಅನಿಲ್‌ಕುಮಾರ್, ಟ್ರಸ್ಟಿಗಳಾದ ಸುರೇಶ್‌ಕುಮಾರ್, ಸಿ.ಎನ್ ಗಿರೀಶ್, ಗುರುಪ್ರಸಾದ್ ತಂತ್ರಿ, ಗಿರಿರಾಜ್, ಶ್ರೀನಿಧಿ, ಭಾಗ್ಯ ಸೇರಿದಂತೆ ಒಟ್ಟು ೧೯ ಜನ ಟ್ರಸ್ಟಿಗಳು, ಆಡಳಿತಾಧಿಕಾರಿ ವೇಣುಗೋಪಾಲ್, ಪ್ರಾಂಶುಪಾಲ ಕಲ್ಲೇಶ್, ವಾರ್ಡ್ ನಗರಸಭಾ ಸದಸ್ಯೆ ಲತಾ ಚಂದ್ರಶೇಖರ್ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.    

ಅಕ್ರಮ ಮದ್ಯಮಾರಾಟಕ್ಕೆ ಕಡಿವಾಣ ಹಾಕಿ : ಕೆಆರ್‌ಎಸ್ ಪಕ್ಷ ಆಗ್ರಹ

ತಾಲೂಕು ಆಡಳಿತ, ಅಬಕಾರಿ ಇಲಾಖೆಗೆ ಮನವಿ

ಭದ್ರಾವತಿ ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(ಕೆಆರ್‌ಎಸ್)ದ ವತಿಯಿಂದ ತಾಲೂಕು ಆಡಳಿತ ಹಾಗು ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.
    ಭದ್ರಾವತಿ, ಜ. ೯: ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(ಕೆಆರ್‌ಎಸ್)ದ ವತಿಯಿಂದ ತಾಲೂಕು ಆಡಳಿತ ಹಾಗು ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.
   ತಾಲೂಕಿನ ನಗರ ಹಾಗು ಗ್ರಾಮಾಂತರ ಪ್ರದೇಶದಲ್ಲಿ  ಅಕ್ರಮ ಮದ್ಯ ಮಾರಾಟವನ್ನು ಹೆಚ್ಚಾಗಿದ್ದು,  ಇದರಿಂದಾಗಿ ತಾಲೂಕಿನಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ. ಅಲ್ಲದೆ ಮಕ್ಕಳ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ಗ್ರಾಮಾಂತರ ಭಾಗದಲ್ಲಿನ ಮಹಿಳೆಯರು ಮತ್ತು ಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಿದ್ದು, ಈ ಹಿನ್ನಲೆಯಲ್ಲಿ ತಾಲೂಕು ದಂಡಾಧಿಕಾರಿಗಳು ಹಾಗು ಅಬಕಾರಿ ಇಲಾಖೆಗಳು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಕೋರಲಾಗಿದೆ.
        ಕರ್ನಾಟಕ ರಾಷ್ಟ್ರ ಸಮಿತಿ ಯುವ ಘಟಕದ ತಾಲೂಕು ಅಧ್ಯಕ್ಷ ಆರ್. ತ್ಯಾಗರಾಜ ನೇತೃತ್ವದಲ್ಲಿ ಮನವಿ ಮನವಿ ಸಲ್ಲಿಸಲಾಯಿತು. ತೀರ್ಥಕುಮಾರ್ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಎನ್‌ಎಂಎಂಎಸ್ ಪರೀಕ್ಷೆಯಿಂದ ಹೆಚ್ಚಿನ ಅನುಕೂಲ : ವೈ.ಎಂ ಧರ್ಮಪ್ಪ

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಘಟಕ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ನ್ಯೂಟೌನ್ ಸೇಂಟ್ ಚಾರ್ಲ್ಸ್ ಶಾಲೆಯಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎನ್‌ಎಂಎಂಎಸ್ ಪರೀಕ್ಷೆ ಎದುರಿಸಲಿರುವ ನಗರದ ವಿವಿಧ ಪ್ರೌಡಶಾಲೆಗಳ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಪರೀಕ್ಷಾ ತರಬೇತಿ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ವೈ.ಎಂ ಧರ್ಮಪ್ಪರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ, ಜ. ೯ : ಎನ್‌ಎಂಎಂಎಸ್ ಪರೀಕ್ಷೆ ಅತ್ಯಂತ ಮಹತ್ವದ ಪರೀಕ್ಷೆಯಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಇದರ ಸದುಪಯೋಗಪಡೆದುಕೊಳ್ಳುವಂತೆ ಶಿವಮೊಗ್ಗ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ವೈ.ಎಂ ಧರ್ಮಪ್ಪ ಹೇಳಿದರು.
    ಅವರು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಘಟಕ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ನ್ಯೂಟೌನ್ ಸೇಂಟ್ ಚಾರ್ಲ್ಸ್ ಶಾಲೆಯಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎನ್‌ಎಂಎಂಎಸ್ ಪರೀಕ್ಷೆ ಎದುರಿಸಲಿರುವ ನಗರದ ವಿವಿಧ ಪ್ರೌಡಶಾಲೆಗಳ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಪರೀಕ್ಷಾ ತರಬೇತಿ ಉದ್ಘಾಟಿಸಿ ಮಾತನಾಡಿದರು.
    ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸರ್ಕಾರ ಪ್ರತಿ ತಿಂಗಳು ೧ ಸಾವಿರ ರು. ವಿದ್ಯಾರ್ಥಿವೇತನ ೪ ವರ್ಷಗಳ ಕಾಲ ನೀಡುತ್ತದೆ. ಇದರಿಂದಾಗಿ ಭವಿಷ್ಯದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ನೆರವಾಗಲಿದೆ. ಈ ಹಿನ್ನಲೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.  
     ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮಾತನಾಡಿ, ನುರಿತ ಹಾಗೂ ಅನುಭವಿ ಸಂಪನ್ಮೂಲ ವ್ಯಕ್ತಿಗಳ ಮೂಲಕ ಈ ತರಬೇತಿ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಕರೆ ನೀಡಿದರು.
    ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಬಸವರಾಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಂ. ದಿವಾಕರ ಪ್ರಾಸ್ತಾವಿಕವಾಗಿ ಮಾತನಾಡಿದರು.
    ಶಿವಮೊಗ್ಗ ಜಿಲ್ಲಾ ಡಯಟ್ ಪ್ರಾಂಶುಪಾಲ ಬಸವರಾಜಪ್ಪ,  ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಜಿ.ಎಚ್ ಪ್ರಭು,  ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ನಾಗರಾಜ, ಸಹ ಶಿಕ್ಷಕರ ಸಂಘದ ರಾಜ್ಯ ಪರಿಷತ್ ಸದಸ್ಯ ಬಿ.ಪಿ ನಾಗರಾಜಪ್ಪ,  ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಎಂ.ಜಿ.ನವೀನ್ ಕುಮಾರ್, ಸಿ.ಡಿ ಮಂಜುನಾಥ್, ವೈ.ಕೆ ರಾಜು, ಶ್ರೀನಿವಾಸ, ನಾಗರಾಜ, ರವಿನಾಯ್ಕ, ಸುರೇಶ್, ಎಚ್.ಎಸ್ ಶಕುಂತಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ನಗರದ ವಿವಿಧ ಪ್ರೌಡಶಾಲೆಗಳ ೩೭೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪ್ರಯೋಜನ ಪಡೆದುಕೊಂಡರು . ಸಂಪನ್ಮೂಲ ವ್ಯಕ್ತಿಗಳಾಗಿ ದಯಾನಂದ, ಸತೀಶ್, ಲೀಲಾವತಿ  ಸೇರಿದಂತೆ ಇನ್ನಿತರರು ಕಾರ್ಯನಿರ್ವಹಿಸಿದರು.