Tuesday, January 10, 2023

ಮನವಿಗೆ ಸ್ಪಂದನೆ : ಕುಲಸಚಿವೆ, ಹಣಕಾಸು ಅಧಿಕಾರಿ ಕರ್ತವ್ಯದಿಂದ ಬಿಡುಗಡೆ

ಕುವೆಂಪು ವಿ.ವಿ ಅಧ್ಯಾಪಕೇತರ ನೌಕರರ ಸಂಘ ಉನ್ನತ ಶಿಕ್ಷಣ ಖಾತೆ ಸಚಿವ, ಸಂಸದರಿಗೆ ಕೃತಜ್ಞತೆ


    ಭದ್ರಾವತಿ, ಜ. ೧೦: ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಜಿ. ಅನುರಾಧ ಹಾಗೂ ಹಣಕಾಸು ಅಧಿಕಾರಿ ಎಸ್. ರಾಮಕೃಷ್ಣ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಅಧ್ಯಾಪಕೇತರ ನೌಕರರ ಸಂಘ ಉನ್ನತ ಶಿಕ್ಷಣ ಖಾತೆ ಸಚಿವ ಸಿ.ಎನ್ ಅಶ್ವಥ್ ನಾರಾಯಣ, ಸಂಸದ ಬಿ.ವೈ ರಾಘವೇಂದ್ರ ಮತ್ತು ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ್ಯ ಕಾರ್ಯ ನಿರ್ವಾಹ ಪಟ್ಟಾಭಿರಾಮ್‌ರವರಿಗೆ ಕೃತಜ್ಞತೆ ಸಲ್ಲಿಸಿದೆ.
    ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಿದರೂ ಸಹ ವಿಶ್ವವಿದ್ಯಾಲಯದ ನೌಕರರ ಸಮಸ್ಯೆಗಳಿಗೆ ಕುಲಸಚಿವೆ ಜಿ. ಅನುರಾಧ ಅವರು ಪೂರಕವಾಗಿ ಸ್ಪಂದಿಸದೆ ಆಡಳಿತದಲ್ಲಿ ವಿಮುಖ ನೀತಿ ಅನುಸರಿಸುತ್ತಿದ್ದಾರೆ. ನೌಕರ ವರ್ಗಕ್ಕೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಖುದ್ದಾಗಿ ಭೇಟಿಯಾಗಿ ಸಮಸ್ಯೆ ವಿವರಿಸಿದರೂ ಸಹ ಸಂಘದ ಪದಾಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಇದರಿಂದಾಗಿ ನೌಕರರ ಯಾವುದೇ ಸಮಸ್ಯೆಗಳು ಬಗೆಹರಿಯದೆ ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಈ ಹಿನ್ನಲೆಯಲ್ಲಿ ಅವರನ್ನು ವಿಶ್ವವಿದ್ಯಾಲಯದಿಂದ ವರ್ಗಾವಣೆಗೊಳಿಸುವಂತೆ  ಇತ್ತೀಚೆಗೆ ಸಂಘದ ವತಿಯಿಂದ ಸಂಸದರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಹಾಗು ಉನ್ನತ ಶಿಕ್ಷಣ ಖಾತೆ ಸಚಿವ ಸಿ.ಎನ್ ಅಶ್ವಥ್ ನಾರಾಯಣ ಅವರಿಗೆ ಮನವಿ ಸಲ್ಲಿಸಲಾಗಿತ್ತು.
    ಇದೀಗ ಮನವಿಗೆ ಪೂರಕವಾಗಿ ಸ್ಪಂದಿಸಿ ಜಿ. ಅನುರಾಧ ಹಾಗು ಎಸ್. ರಾಮಕೃಷ್ಣ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ಸಂಘದ ಅಧ್ಯಕ್ಷ ಶ್ರೀನಿವಾಸ, ಉಪಾಧ್ಯಕ್ಷ ಎಂ.ಎಂ ಸ್ವಾಮಿ ಸೇರಿದಂತೆ ಪದಾಧಿಕಾರಿಗಳು ನೌಕರರ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

‎ ಕುಮಾರಸ್ವಾಮಿ ಸಮ್ಮುಖದಲ್ಲಿ ಸ್ಥಳೀಯ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

      ಭದ್ರಾವತಿ, ಜ. 10: ಹಲವು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸಿರುವ ಸ್ಥಳೀಯ ಪ್ರಮುಖ ಮುಖಂಡರು ಕಾಂಗ್ರೆಸ್ ಪಕ್ಷವನ್ನು ತೊರೆದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ಪ್ರಮುಖರಾದ  ಪರಮೇಶಿ,  ಬಸಪ್ಪ, ಸಂತೋಷ್, ಉಮೇಶ್ ಮತ್ತು ಕಿರಣ್ ಸೇರಿದಂತೆ ಇನ್ನಿತರರು ಸೇರ್ಪಡೆಗೊಂಡರು. 
        ಹೊಸದಾಗಿ ಪಕ್ಷಕ್ಕೆ ಸೇರ್ಪಡೆಗೊಂಡ ಪ್ರಮುಖರಿಗೆ ವಿವಿಧ ಜವಾಬ್ದಾರಿಗಳನ್ನು ವಹಿಸಲಾಗಿದೆ. ಪರಮೇಶಿಯವರಿಗೆ ಜಿಲ್ಲಾ ಉಪಾಧ್ಯಕ್ಷ, ಬಸಪ್ಪರಿಗೆ ತಾಲೂಕು ನಗರ ಉಪಾಧ್ಯಕ್ಷ ಹಾಗು ಸಂತೋಷ್ ಅವರಿಗೆ ಸಂಘಟನಾ ಕಾರ್ಯದರ್ಶಿ ಜವಾಬ್ದಾರಿಗಳನ್ನು ವಹಿಸಲಾಗಿದೆ.
    ವಿಧಾನಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶಾರದಾ ಅಪ್ಪಾಜಿ ಯುವ ಘಟಕದ ಜಿಲ್ಲಾಧ್ಯಕ್ಷ ಮಧು ಕುಮಾರ್, ತಾಲೂಕು ಅಧ್ಯಕ್ಷ ಆರ್ ಕರುಣಾಮೂರ್ತಿ, ಪ್ರಮುಖರಾದ ಡಿ.ಟಿ ಶ್ರೀಧರ್, ವಿಶಾಲಾಕ್ಷಿ, ಅಮೋಸ್, ಎಚ್.ಬಿ ರವಿಕುಮಾರ್, ಭಾಗ್ಯಮ್ಮ, ಮಂಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಳೆದ ಕೆಲವು ತಿಂಗಳುಗಳಿಂದ ಜೆಡಿಎಸ್ ಪಕ್ಷದ ಸಂಘಟನಾ ಚಟುವಟಿಕೆಗಳು ತೀವ್ರಗೊಂಡಿದ್ದು, ವಿವಿಧ ಪಕ್ಷಗಳ ಪ್ರಮುಖರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಈಗಾಗಲೇ ಪಕ್ಷದ ಅಭ್ಯರ್ಥಿ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.

ಕುವೆಂಪು ವಿ.ವಿ ಹಣಕಾಸು ಅಧಿಕಾರಿ ರಾಮಕೃಷ್ಣ ವರ್ಗಾವಣೆ


ಎಸ್. ರಾಮಕೃಷ್ಣ
    ಭದ್ರಾವತಿ, ಜ. ೧೦: ಕುವೆಂಪು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಎಸ್. ರಾಮಕೃಷ್ಣ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದ್ದು, ಈ ಸಂಬಂಧ ವಿಶ್ವವಿದ್ಯಾಲಯದ ಮಾನವ ಸಂಪನ್ಮೂಲ ಮತ್ತು ನಿರ್ವಹಣೆ ವಿಭಾಗದ ಉಪ ಕುಲಸಚಿವರು ಕಛೇರಿ ಆದೇಶ ಹೊರಡಿಸಿದ್ದಾರೆ.
    ರಾಮಕೃಷ್ಣರವರು ೧ ಜುಲೈ, ೨೦೨೦ರಿಂದ ವಿಶ್ವವಿದ್ಯಾಲಯದಲ್ಲಿ ಹಣಕಾಸು ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜ.೧೦ರ ಕುಲಪತಿಗಳ ಆದೇಶದ ಮೇರೆಗೆ ಇವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದ್ದು, ಮಾತೃ ಇಲಾಖೆಯ ಸೇವೆಗೆ ಹಿಂದಿರುಗಿಸಲಾಗಿದೆ. ಇವರ ಕರ್ತವ್ಯದ ಹೊಣೆಯನ್ನು ಕುಲಸಚಿವರು(ಪರೀಕ್ಷಾಂಗ) ಇವರಿಗೆ ವಹಿಸಲಾಗಿದೆ.

ಕುವೆಂಪು ವಿ.ವಿ ಕುಲಸಚಿವೆ ಜಿ. ಅನುರಾಧ ವರ್ಗಾವಣೆ

ಜಿ. ಅನುರಾಧ
    ಭದ್ರಾವತಿ, ಜ. ೧೦ : ಕುವೆಂಪು ವಿಶ್ವ ವಿದ್ಯಾನಿಲಯದ ಕುಲಸಚಿವೆ ಜಿ. ಅನುರಾಧ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿ ಅಧಿಸೂಚನೆ ಹೊರಡಿಸಿದೆ.
    ಈ ಹಿಂದೆ ಶಿವಮೊಗ್ಗ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಕುವೆಂಪು ವಿಶ್ವ ವಿದ್ಯಾನಿಲಯಕ್ಕೆ ವರ್ಗಾವಣೆಗೊಂಡಿದ್ದರು. ಕುಲಸಚಿವೆಯಾಗಿ ಉತ್ತಮವಾಗಿ ಕರ್ತವ ನಿರ್ವಹಿಸುವ ಮೂಲಕ ಸಾಕಷ್ಟು ಸುಧಾರಣೆಗಳನ್ನು ಜಾರಿಗೆ ತಂದಿದ್ದರು. ಇದೀಗ ಏಕಾಏಕಿ ಅವರನ್ನು ವಿಜಯನಗರ ಜಿಲ್ಲೆ ಹೊಸಪೇಟೆ ಖಾಲಿ ಇರುವ ಅಪರ ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾಯಿಸಲಾಗಿದೆ.

Monday, January 9, 2023

ಡಿ. ನಾಗರಾಜ್‌ಗೆ ಯೋಗ ಸ್ಪರ್ಧೆಯಲ್ಲಿ ಬೆಳ್ಳಿ ಪದಕ

ಅಂತರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭದ್ರಾವತಿ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಿ. ನಾಗರಾಜ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ಭದ್ರಾವತಿ, ಜ. ೧೦ : ಅಂತರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ನಗರದ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಿ. ನಾಗರಾಜ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ಪಾಂಡಿಚೇರಿ ಸರ್ಕಾರದ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪಾಂಡಿಚೇರಿ ಕರುವಾಡಿಕುಪ್ಪಂನ ಕಾಮರಾಜ ಮಣಿಮಂಟಪಂನಲ್ಲಿ ಆಯೋಜಿಸಲಾಗಿದ್ದ ೨೮ನೇ ಅಂತರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್‌ನಲ್ಲಿ ನಾಗರಾಜ್‌ರವರು ೪೬ ವರ್ಷ ಮೇಲ್ಪಟ್ಟವರ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
    ಮುಖ್ಯಮಂತ್ರಿ ರಂಗಸ್ವಾಮಿ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಸಚಿವ ಕೆ. ಲಕ್ಷ್ಮೀನಾರಾಯಣನ್, ಸಭಾಧ್ಯಕ್ಷ ಆರ್. ಸೆಲ್ವಂ, ಇಲಾಖೆ ನಿರ್ದೇಶಕಿ ಪಿ. ಪ್ರಿಯದರ್ಶಿನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಕ್ಷರ ಸಂತ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಲ ಹಾಜಬ್ಬರಿಗೆ ಸನ್ಮಾನ

ಅಕ್ಷರ ಸಂತ, ಸಮಾಜ ಸೇವಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಲ ಹಾಜಬ್ಬ ಅವರನ್ನು ಭದ್ರಾವತಿ ಅಪ್ಪರ್ ಹುತ್ತಾ ಅನನ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ: ಅಕ್ಷರ ಸಂತ, ಸಮಾಜ ಸೇವಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಲ ಹಾಜಬ್ಬ ಅವರನ್ನು ನಗರದ ಅಪ್ಪರ್ ಹುತ್ತಾ ಅನನ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು.
    ಟ್ರಸ್ಟ್ ೧೦ನೇ ವರ್ಷದ ದಶ ಸಂಭ್ರಮ ಅನನ್ಯೋತ್ಸವ ವಾರ್ಷಿಕ ದಿನಾಚರಣೆಯಲ್ಲಿ ಹಾಜಬ್ಬ ಅವರ ಸೇವೆಯನ್ನು ಸ್ಮರಿಸಿ ಗೌರವಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಡಾ. ಕೆ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.
    ಟ್ರಸ್ಟ್ ಉಪಾಧ್ಯಕ್ಷ ಕೆ.ಪಿ ಹರೀಶ್‌ಕುಮಾರ್, ಕಾರ್ಯದರ್ಶಿ ಅನಿಲ್‌ಕುಮಾರ್, ಟ್ರಸ್ಟಿಗಳಾದ ಸುರೇಶ್‌ಕುಮಾರ್, ಸಿ.ಎನ್ ಗಿರೀಶ್, ಗುರುಪ್ರಸಾದ್ ತಂತ್ರಿ, ಗಿರಿರಾಜ್, ಶ್ರೀನಿಧಿ, ಭಾಗ್ಯ ಸೇರಿದಂತೆ ಒಟ್ಟು ೧೯ ಜನ ಟ್ರಸ್ಟಿಗಳು, ಆಡಳಿತಾಧಿಕಾರಿ ವೇಣುಗೋಪಾಲ್, ಪ್ರಾಂಶುಪಾಲ ಕಲ್ಲೇಶ್, ವಾರ್ಡ್ ನಗರಸಭಾ ಸದಸ್ಯೆ ಲತಾ ಚಂದ್ರಶೇಖರ್ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.    

ಅಕ್ರಮ ಮದ್ಯಮಾರಾಟಕ್ಕೆ ಕಡಿವಾಣ ಹಾಕಿ : ಕೆಆರ್‌ಎಸ್ ಪಕ್ಷ ಆಗ್ರಹ

ತಾಲೂಕು ಆಡಳಿತ, ಅಬಕಾರಿ ಇಲಾಖೆಗೆ ಮನವಿ

ಭದ್ರಾವತಿ ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(ಕೆಆರ್‌ಎಸ್)ದ ವತಿಯಿಂದ ತಾಲೂಕು ಆಡಳಿತ ಹಾಗು ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.
    ಭದ್ರಾವತಿ, ಜ. ೯: ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(ಕೆಆರ್‌ಎಸ್)ದ ವತಿಯಿಂದ ತಾಲೂಕು ಆಡಳಿತ ಹಾಗು ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.
   ತಾಲೂಕಿನ ನಗರ ಹಾಗು ಗ್ರಾಮಾಂತರ ಪ್ರದೇಶದಲ್ಲಿ  ಅಕ್ರಮ ಮದ್ಯ ಮಾರಾಟವನ್ನು ಹೆಚ್ಚಾಗಿದ್ದು,  ಇದರಿಂದಾಗಿ ತಾಲೂಕಿನಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ. ಅಲ್ಲದೆ ಮಕ್ಕಳ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ಗ್ರಾಮಾಂತರ ಭಾಗದಲ್ಲಿನ ಮಹಿಳೆಯರು ಮತ್ತು ಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಿದ್ದು, ಈ ಹಿನ್ನಲೆಯಲ್ಲಿ ತಾಲೂಕು ದಂಡಾಧಿಕಾರಿಗಳು ಹಾಗು ಅಬಕಾರಿ ಇಲಾಖೆಗಳು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಕೋರಲಾಗಿದೆ.
        ಕರ್ನಾಟಕ ರಾಷ್ಟ್ರ ಸಮಿತಿ ಯುವ ಘಟಕದ ತಾಲೂಕು ಅಧ್ಯಕ್ಷ ಆರ್. ತ್ಯಾಗರಾಜ ನೇತೃತ್ವದಲ್ಲಿ ಮನವಿ ಮನವಿ ಸಲ್ಲಿಸಲಾಯಿತು. ತೀರ್ಥಕುಮಾರ್ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.