ಭದ್ರಾವತಿ ಬಿ.ಎಚ್ ರಸ್ತೆ, ನಗರಸಭೆ ಮಾರುಕಟ್ಟೆ ಮುಂಭಾಗ ಹೆರಿಟೇಜ್ ಲಾಡ್ಜ್‌ನಲ್ಲಿ ವ್ಯಕ್ತಿಯೊಬ್ಬರ ಕತ್ತು ಸೀಳಿ ಬರ್ಬರವಾಗಿ ಹತ್ಯೆಯಾಗಿರುವ ಜಾವಗಲ್‌ನ ಪರ್ವೇಜ್ ಖಾನ್ ಮತ್ತು ಮಾಧ್ಯಮಗಳ ಮುಂದೆ ಅಳಲು ತೋರ್ಪಡಿಸಿಕೊಳ್ಳುತ್ತಿರುವ ಆತನ ತಾಯಿ ಶಕೀಲಾ
ಭದ್ರಾವತಿ, ಜ. ೧೩: ನಗರದ ಬಿ.ಎಚ್ ರಸ್ತೆ, ನಗರಸಭೆ ಮಾರುಕಟ್ಟೆ ಮುಂಭಾಗ ಹೋಟೆಲ್ ಹೆರಿಟೇಜ್ ಲಾಡ್ಜ್‌ನಲ್ಲಿ ವ್ಯಕ್ತಿಯೊಬ್ಬರ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಹಾಸನ ಮೂಲದ ಪರ್ವೇಜ್ ಖಾನ್ ಎಂಬಾತನ ಕೊಲೆಯಾಗಿದೆ. ಪ್ರೇಯಸಿಯೇ ಈ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಮೂಲಃ ಹಾಸನ ಚನ್ನರಾಯಪಟ್ಟಣದ ಆಯೇಷಾ ಮತ್ತು ಮೂಲಃ ಜಾವಗಲ್‌ನ ಪರ್ವೇಜ್ ಖಾನ್ ಇಬ್ಬರು ಕಳೆದ ೩-೪ ವರ್ಷಗಳಿಂದ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
ಇದೇ ವಿಚಾರಕ್ಕೆ ಪತಿ ಆಯೇಷಾರನ್ನು ಬಿಟ್ಟಿದ್ದ ಎನ್ನಲಾಗಿದೆ. ಈ ನಡುವೆ ಗುರುವಾರ ಪರ್ವೇಜ್ ಹಾಗೂ ಆಯೇಷಾ ನಗರಕ್ಕೆ ಬಂದಿದ್ದಾರೆ. ಲಾಡ್ಜ್‌ನಲ್ಲಿ ರೂಂ ಮಾಡಿಕೊಂಡಿದ್ದು, ರೂಂನಲ್ಲಿದ್ದ ಆಯೇಷಾ ಹಾಗೂ ಪರ್ವೇಜ್ ನಡುವೆ ಜಗಳವಾಗಿದೆ ಎನ್ನಲಾಗಿದ್ದು, ಈ ವೇಳೆ ಪರ್ವೇಜ್ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಕೊಲೆ ಬಳಿಕ ಆಯೇಷಾ ಹಿಂದಿರುಗಿ ಹಾಸನ ಪೊಲೀಸರ ಬಳಿ ಶರಣಾಗಿದ್ದಾಳೆ. ಅಲ್ಲಿಂದ ಮಾಹಿತಿ ಪಡೆದಿರುವ ಹಳೇನಗರ ಠಾಣೆ ಪೊಲೀಸರು, ಆಯೇಷಾಳನ್ನು ಕರೆತಂದು, ಸ್ಥಳ ಮಹಜರ್ ನಡೆಸಿ ಶುಕ್ರವಾರ ಸಂಜೆ ವೇಳೆ ಸ್ಥಳದಿಂದ ಮೃತದೇಹವನ್ನು ತೆಗೆದಿದ್ದಾರೆ. ಕೊಲೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಗರ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಹಳೇನಗರ ಪೊಲೀಸ್ ಠಾಣಾಧಿಕಾರಿ ಕವಿತಾ ಹಾಗು ಶ್ವಾನದಳ ಮತ್ತು ದಾವಣಗೆರೆ ಎಫ್‌ಎಸ್‌ಎಲ್ ತಂಡ ಪರಿಶೀಲನೆ ನಡೆಸಿತು. ಸುದ್ದಿ ತಿಳಿಯುತ್ತಿದ್ದಂತೆ ಜನರು ಲಾಡ್ಜ್ ಬಳಿ ಜಮಾಯಿಸಿದ್ದರು.
ನಂಬಿಸಿ ಕರೆತಂದು ಕೊಲೆ : ತಾಯಿ ಆರೋಪ
ಹತ್ಯೆಯಾಗಿರುವ ಪರ್ವೇಜ್ ಖಾನ್ ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದು, ಈತನ ತಾಯಿ ಶಕೀಲಾ ಹತ್ಯೆ ಕುರಿತು ಪ್ರತಿಕ್ರಿಯಿಸಿ ಬೇರೆ ಮನೆ ಮಾಡುವುದಾಗಿ ನಂಬಿಸಿ ಕರೆದುಕೊಂಡು ಬಂದು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದರು.
ಆಯೇಷಾ 'ನನ್ನ ಬಳಿ ಸುಮಾರು ೧.೫ ಲಕ್ಷ ರು.ಗಳಿದ್ದು, ಬೇರೆ ಮನೆ ಮಾಡ್ತೀನಿ. ನನ್ನ ಜೊತೆ ಬಂದು ಬಿಡು.' ಎಂದು ಹೇಳಿ ನಂಬಿಸಿ ಕರೆದುಕೊಂಡು ಬಂದು ಕೊಲೆ ಮಾಡಿಸಲಾಗಿದೆ. ಅಲ್ಲದೆ ಬರುವ ಮುಂಚೆ ಪರ್ವೇಜ್ ಮೊಬೈಲ್ ಸಿಮ್ ಕಾರ್ಡ್ ತುಂಡು ಮಾಡಲಾಗಿದೆ ಎಂದು ಆರೋಪಿಸಿ ಕುಟುಂಬ ಆರ್ಥಿಕವಾಗಿ ಸಾಕಷ್ಟು ಸಂಕಷ್ಟದಲ್ಲಿದೆ. ಮನೆ ತುಂಬ ಸಾಲ ಮಾಡಲಾಗಿದೆ ಎಂದು ಅಳಲು ತೋರ್ಪಡಿಸಿಕೊಂಡರು.
ಭದ್ರಾವತಿ ಬಿ.ಎಚ್ ರಸ್ತೆ, ನಗರಸಭೆ ಮಾರುಕಟ್ಟೆ ಮುಂಭಾಗ ಹೆರಿಟೇಜ್ ಲಾಡ್ಜ್‌ನಲ್ಲಿ ವ್ಯಕ್ತಿಯೊಬ್ಬರ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶುಕ್ರವಾರ ಸಂಜೆ ವೇಳೆಗೆ ಸ್ಥಳದಿಂದ ಮೃತದೇಹ ತೆಗೆಯಲಾಯಿತು.