Friday, January 13, 2023

೩೦ ವರ್ಷಗಳಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ, ಜಿಲ್ಲೆಯಲ್ಲಿಯೇ ಹಿಂದುಳಿದ ಕ್ಷೇತ್ರ

ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಜಾನ್ ಬೆನ್ನಿ ಆರೋಪ

ಜಾನ್ ಬೆನ್ನಿ
    ಭದ್ರಾವತಿ, ಜ. ೧೩: ಕ್ಷೇತ್ರದಲ್ಲಿ ಕಳೆದ ೩೦ ವರ್ಷಗಳಿಂದಲೂ ಆಡಳಿತ ನಡೆಸುತ್ತಿರುವ ಜನಪ್ರತಿನಿಧಿಗಳಿಂದ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯದೆ ಕೇವಲ ಭಾಷಣಗಳಿಗೆ ಮಾತ್ರ ಸೀಮಿತವಾಗಿದೆ.  ಸರ್ಕಾರದ ಯೋಜನೆಗಳನ್ನು ಪ್ರತಿ ಮನೆಮನೆಗೂ ತಲುಪಿಸುವ ಇಚ್ಚೆಯೊಂದಿಗೆ ನಾನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದು ನಗರದ ವಿಜಯ ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲೀಕ ಜಾನ್ ಬೆನ್ನಿ ಹೇಳಿದರು.
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಚ್ಚಿ ಹೋಗಿರುವ ಕಾರ್ಖಾನೆಗಳ ಹೆಸರುಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ವ್ಯರ್ಥ ರಾಜಕಾರಣ ಮಾಡುತ್ತಿದ್ದಾರೆ. ಮತದಾರರ ಮನ ಒಲಿಸಿ ಮತ ಹಾಕಿಸಿಕೊಂಡ ಬುದ್ದಿಜೀವಿಗಳು ಮತದಾರರ ಸಮಸ್ಯೆಗಳನ್ನು ಆಲಿಸದೆ. ಹೊಸದಾಗಿ ಕಾರ್ಖಾನೆಗಳನ್ನು ತೆರೆಯದೆ ಇಲ್ಲಿನ ಜನರು ಬೇರೆಡೆಗೆ ವಲಸೆ ಹೋಗುವಂತೆ ಮಾಡಿದ್ದಾರೆಂದು ಆರೋಪಿಸಿದರು.
    ಕ್ಷೇತ್ರದ ಜನರು ಇಲ್ಲಿಯೇ ಉಳಿಯಬೇಕು. ಉದ್ಯೋಗಕ್ಕಾಗಿ ಬೇರೆಡೆಗೆ ವಲಸೆ ಹೋಗುವುದನ್ನು ತಪ್ಪಿಸುವಂತಹ ವಾತಾವರಣ ಸೃಷ್ಟಿಸಬೇಕು. ಆಗ ಕ್ಷೇತ್ರದ ಪ್ರಗತಿ ಸಾಧ್ಯವಾಗುತ್ತದೆ. ಅಂತಹ ಕೆಲಸ ಇದುವರೆಗೂ ನಡೆದಿಲ್ಲ. ಇಲ್ಲಿನ ಯುವ ಸಮುದಾಯ ಉತ್ತಮ ಶಿಕ್ಷಣ ಹೊಂದಿದ್ದರೂ ಸಹ ಆರೋಗ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳು ಅಭಿವೃದ್ದಿಯಾಗಿವೆ.  ಆದರೆ ಭದ್ರಾವತಿ ಮಾತ್ರ ಅಭಿವೃದ್ದಿ ಕಾಣದೆ ಇತಿಹಾಸದ ಪುಟ ಸೇರುವಂತಾಗಿದೆ ಎಂದು ಕ್ಷೇತ್ರದ ಇಂದಿನ ಪರಿಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿದರು.  
 ನೊಂದ ನಾಗರೀಕರು ಅಭಿಮಾನಿಗಳು ನನ್ನ ಬಳಿ ತಮ್ಮ ಅಳಲನ್ನು ಹೇಳಿಕೊಂಡಿದ್ದು ಆ ಹಿನ್ನಲೆಯಲ್ಲಿ ನಾನು ಮುಂಬರುವ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ನಗರವನ್ನು ಪ್ರವಾಸಿ ತಾಣವಾಗಿ ಅಭಿವೃದ್ದಿ ಪಡಿಸುತ್ತೇನೆ. ಅವನತಿಯತ್ತ ಸಾಗುತ್ತಿರುವ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಿ ಹಲವು ಕಾರ್ಖಾನೆಗಳನ್ನು ತೆರೆದು ಉದ್ಯೋಗ ಸೃಷ್ಟಿ ಮಾಡಲಿದ್ದೇನೆ. ಕ್ಷೇತ್ರದ ಸಮಸ್ಯೆ ಕುರಿತು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ಅವರ ಗಮನ  ಸೆಳೆಯುತ್ತೇನೆ. ೫ ವರ್ಷಗಳ ಕಾಲ ಕ್ಷೇತ್ರದಲ್ಲಿಯೇ ಇದ್ದು  ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.
    ಕ್ಷೇತ್ರದ ಮತದಾರರು ನಿಮ್ಮ ಅಮೂಲ್ಯ ಮತಗಳನ್ನು ಹಣಕ್ಕೆ ಮಾರಿಕೊಳ್ಳದೆ, ಸುಳ್ಳು ಭರವಸೆಗಳಿಗೆ ವಂಚಿತರಾಗದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಮುಂದಾಗಿರುವ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ನನ್ನನ್ನು ಈ ಬಾರಿ ಚುನಾವಣೆಯಲ್ಲಿ ಮತಕೊಟ್ಟು ಜಯಗಳಿಸಿಕೊಡಬೇಕೆಂದು ಮನವಿ ಮಾಡಿದರು.
    ಪತ್ರಿಕಾಗೋಷ್ಠಿಯಲ್ಲಿ  ಪ್ರಮುಖರಾದ ಕೃಪಾದಾನಂ, ಗೋಪಾಲ್, ವಾಸುದೇವಮೂರ್ತಿ, ಕುಮಾರ್, ಚಂದ್ರು ಸೇರಿದಂತೆ ಇನ್ನಿತರರು ಉಪಸ್ಥಿರಿದ್ದರು.

No comments:

Post a Comment