ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ
ಭದ್ರಾವತಿ, ಜ. ೧೩: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಮುಚ್ಚುವ ಹುನ್ನಾರ ನಡೆಸುತ್ತಿದೆ ಎಂಬ ಸುದ್ದಿ ಕ್ಷೇತ್ರದಾದ್ಯಂತ ಹರಿದಾಡುತ್ತಿದ್ದು, ಈ ಸಂಬಂಧ ಕಾರ್ಮಿಕ ಸಂಘಟನೆಗಳು, ರಾಜಕೀಯ ಪಕ್ಷಗಳು ಉಗ್ರ ಹೋರಾಟಕ್ಕೆ ಮುಂದಾಗಿವೆ.
ಶಾಸಕ ಬಿ.ಕೆ ಸಂಗಮೇಶ್ವರ್ ಪ್ರತಿಕ್ರಿಯಿಸಿ, ಈ ಹಿಂದೆ ಕಾಂಗ್ರೆಸ್ ಪಕ್ಷ ನೀಡಿದ ಭರವಸೆಯಂತೆ ವಿಐಎಸ್‌ಎಲ್ ಕಾರ್ಖಾನೆಗೆ ಗಣಿಯನ್ನು ಮಂಜೂರಾತಿ ಮಾಡಿಕೊಟ್ಟಿದೆ. ಆದರೆ ಬಿಜೆಪಿ ಆಡಳಿತದ ಕೇಂದ್ರ ಸರ್ಕಾರ ತನ್ನ ನಿಲುವನ್ನು ಬದಲಿಸಿ ನೀಡಿದ ಭರವಸೆಯನ್ನು ಈಡೇರಿಸದೆ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಹೊರಟಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ವಿಐಎಸ್‌ಎಲ್ ಕಾರ್ಖಾನೆ ಕ್ಷೇತ್ರದ ಆರ್ಥಿಕ ಬೆನ್ನಲುಬಾಗಿದ್ದು, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸುಮಾರು ೨೦ ಸಾವಿರ ಕುಟುಂಬ ಕಾರ್ಖಾನೆಯನ್ನು ಅವಲಂಬಿಸಿ ಬದುಕುತ್ತಿದ್ದಾರೆ. ಜನರ ಜೀವನಾಧಾರವಾಗಿರುವ ಕಾರ್ಖಾನೆಯನ್ನು ಯಾವುದೇ ಕಾರಣದಿಂದಲೂ ಮುಚ್ಚಲು ಬಿಡುವುದಿಲ್ಲ. ಒಂದು ವೇಳೆ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಮುಂದಾದಲ್ಲಿ ಪಕ್ಷದ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಸಮಾಜ ಸೇವಕ ಪೊಲೀಸ್ ಉಮೇಶ್ ಪ್ರತಿಕ್ರಿಯಿಸಿ, ಈಗಾಗಲೇ ಎಂಪಿಎಂ ಕಾರ್ಖಾನೆ ಮುಚ್ಚಿ ಹೋಗಿದೆ. ಇದೀಗ ವಿಐಎಸ್‌ಎಲ್ ಕಾರ್ಖಾನೆ ಸಹ ಮುಚ್ಚಿ ಹೋಗುತ್ತಿದ್ದು, ಇದರಿಂದಾಗಿ ಕ್ಷೇತ್ರದಲ್ಲಿ ಸಾವಿರಾರು ಕಾರ್ಮಿಕರು ಬೀದಿಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ. ಕ್ಷೇತ್ರದಲ್ಲಿ ನಿರುದ್ಯೋಗ ಬಹುದೊಡ್ಡ ಸಮಸ್ಯೆಯಾಗಲಿದ್ದು, ಇದೀಗ ಕ್ಷೇತ್ರದ ಜನರನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಎಲ್ಲರೂ ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ಹೋರಾಟ ನಡೆಸುವಂತೆ ಕರೆ ನೀಡಿದ್ದಾರೆ.
ಜೆಡಿಎಸ್ ಪಕ್ಷದಿಂದ ಜ.೧೪ರಂದು ದೇವೇಗೌಡರ ಭೇಟಿ:
ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಮೂಲಕ ವಿಐಎಸ್‌ಎಲ್ ಕಾರ್ಖಾನೆ ಉಳಿಸಿ ಕೊಡುವಂತೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ಜೆಡಿಎಸ್ ಪಕ್ಷದ ನಿಯೋಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಶಾರದ ಅಪ್ಪಾಜಿ ನೇತೃತ್ವದಲ್ಲಿ ಜ.೧೪ರಂದು ಸಂಜೆ ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಿದೆ.
ಈಗಾಗಲೇ ಕಾರ್ಮಿಕ ಸಂಘಟನೆಗಳು ಸಂಸದ ಬಿ.ವೈ ರಾಘವೇಂದ್ರ ಜೊತೆ ಚರ್ಚಿಸಿದ್ದು, ಸಂಸದ ಮುಂದಿನ ನಿಲುವು ಇನ್ನೂ ತಿಳಿದು ಬಂದಿಲ್ಲ.
No comments:
Post a Comment