Tuesday, January 17, 2023

ಸಂಘಟನೆಯಲ್ಲಿ ಒಗ್ಗಟ್ಟು ಬಹಳ ಮುಖ್ಯ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ಹಳೇನಗರದ ಶ್ರೀ ವೀರಶೈವ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದ ೪ನೇ ವರ್ಷದ ವಾರ್ಷಿಕೋತ್ಸವ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ಜ. ೧೭ : ಸಂಘಟನೆಯಲ್ಲಿ ಒಗ್ಗಟ್ಟು ಬಹಳ ಮುಖ್ಯವಾಗಿದ್ದು, ವೀರಶೈವ ಲಿಂಗಾಯತ ಮಹಿಳೆಯರು ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದರು.
    ಅವರು ಮಂಗಳವಾರ ಹಳೇನಗರದ ಶ್ರೀ ವೀರಶೈವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದ ೪ನೇ ವರ್ಷದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
    ಎಲ್ಲರೂ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು.  ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧವಾಗಿದ್ದೇನೆ ಎಂದರು.
    ಸಮಾಜದ ಅಧ್ಯಕ್ಷೆ ಆರ್.ಎಸ್ ಶೋಭಾ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಎಚ್. ಭುವನೇಶ್ವರ್, ನಗರಸಭೆ ಸ್ಥಾಯಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಸದಸ್ಯರಾದ ಬಿ.ಕೆ ಮೋಹನ್, ಅನುಪಮ ಚನ್ನೇಶ್, ಟಿಪ್ಪುಸುಲ್ತಾನ್, ಸಮಾಜದ ಗೌರವಾಧ್ಯಕ್ಷೆ ಗೌರಮ್ಮ ಶಂಕ್ರಯ್ಯ, ಉಪಾಧ್ಯಕ್ಷೆ ಭಾಗ್ಯ ನಿಜಗುಣ, ನಿರ್ದೇಶಕಿ ಎಸ್. ಗುಣ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಪ್ರಧಾನ ಕಾರ್ಯದರ್ಶಿ ನಾಗರತ್ನ ವಾಗೀಶ್‌ಕೋಠಿ ವಾರ್ಷಿಕ ವರದಿ ಮಂಡಿಸಿದರು. ರೂಪ ನಾಗರಾಜ್ ಸ್ವಾಗತಿಸಿದರು.  ಉಷಾ ವೀರಶೇಖರ್ ನಿರೂಪಿಸಿದರು. ವೀರಶೈವ ಲಿಂಗಾಯತ ಮಹಿಳಾ ಸಮಾಜದ ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಸಮಾಜದ ಸದಸ್ಯರು ಪಾಲ್ಗೊಂಡಿದ್ದರು.

ಹಳೇ ಸಂತೆಮೈದಾನ ಸ್ಥಳಾಂತರ ಸುದ್ದಿ : ರೈತರು, ವ್ಯಾಪಾರಸ್ಥರಲ್ಲಿ ಆತಂಕ

ನಿರ್ಧಾರ ಕೈಗೊಳ್ಳುವ ಮೊದಲೇ ಹೋರಾಟ ಎಚ್ಚರಿಕೆ

ಭದ್ರಾವತಿ ಹೊಸಮನೆ ಮುಖ್ಯ ರಸ್ತೆಯಲ್ಲಿರುವ ಸುಮಾರು ೬ ದಶಕಗಳಿಗೂ ಹೆಚ್ಚಿನ ಕಾಲದ ಇತಿಹಾಸ ಹೊಂದಿರುವ ಹಳೇ ಸಂತೆಮೈದಾನ.

    * ಅನಂತಕುಮಾರ್
    ಭದ್ರಾವತಿ : ನಗರದ ಹೊಸಮನೆ ಮುಖ್ಯ ರಸ್ತೆಯಲ್ಲಿರುವ ಸುಮಾರು ೬ ದಶಕಗಳಿಗೂ ಹೆಚ್ಚಿನ ಕಾಲದ ಇತಿಹಾಸ ಹೊಂದಿರುವ ಹಳೇ ಸಂತೆಮೈದಾನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಗೊಳ್ಳಲಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡ ತೊಡಗಿದೆ. ಈ ನಡುವೆ ಸ್ಥಳಾಂತರಕ್ಕೆ ಅವಕಾಶ ನೀಡದಂತೆ ಜಾಗೃತಿ ಮೂಡಿಸುವ ಕಾರ್ಯ ಸಹ ನಡೆದಿದೆ.
      'ಭದ್ರಾವತಿ ಭಾನುವಾರ ಸಂತೆ' ನಾಡಿನಾದ್ಯಂತ ತನ್ನದೇ ಆದ ಪ್ರಸಿದ್ದಿ ಪಡೆದುಕೊಂಡಿದ್ದು, ಒಂದು ಕಾಲದಲ್ಲಿ ಸಂತೆಗೆ ಹೋಗುವುದೇ ಒಂದು ರೀತಿಯ ಹಬ್ಬದ ಸಂಭ್ರಮವಾಗಿತ್ತು. ನಗರಸಭೆ ಅಸ್ತಿತ್ವಕ್ಕೆ ಬರುವ ಮೊದಲೇ ಪುರಸಭೆ ಅಧೀನದಲ್ಲಿ ಈ ಸಂತೆ ಮೈದಾನದಲ್ಲಿ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದವು. ತಾಲೂಕಿನ ವಿವಿಧೆಡೆಗಳಿಂದ ರೈತರು, ನಗರ ಪ್ರದೇಶದ ವರ್ತಕರು, ಬೀದಿಬದಿ ವ್ಯಾಪಾರಿಗಳು ನಿರಾಂತಕವಾಗಿ ತಮ್ಮ ವ್ಯಾಪಾರ ವಹಿವಾಟು ನಡೆಸಿಕೊಂಡು ಬರುತ್ತಿದ್ದಾರೆ. ಗ್ರಾಮ ಮತ್ತು ನಗರ ಪ್ರದೇಶದ ಸಾವಿರಾರು ಜನ ಸಂತೆಯಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ. ಕೆಲವು ಕಠಿಣ ಸಂದರ್ಭದ ಸಮಯದಲ್ಲಿ ಮಾತ್ರ ಸಂತೆ ಸ್ಥಗಿತಗೊಂಡಿರುವುದು ಬಿಟ್ಟರೇ ಉಳಿದಂತೆ ಯಾವುದೇ ಕಾರಣಕ್ಕೂ ಸಂತೆ ಸ್ಥಗಿತಗೊಂಡಿರುವ ಉದಾಹರಣೆಗಳಿಲ್ಲ. ದವಸ ಧಾನ್ಯ, ತರಕಾರಿ, ತಿಂಡಿತಿನಿಸುಗಳು, ಕುರಿ, ಕೋಳಿ, ಕೃಷಿ ಪರಿಕರಗಳು, ಗೃಹಪಯೋಗಿ ಬಳಕೆ ವಸ್ತುಗಳ ವ್ಯಾಪಾರ ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ. ಜನರು ೧ ವಾರಕ್ಕೆ ಅಗತ್ಯವಿರುವಷ್ಟನ್ನು ಖರೀದಿಸಿಕೊಂಡು ಹೋಗುತ್ತಿದ್ದರು. ನಗರದ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಕಾರ್ಮಿಕ ಕುಟುಂಬ ವರ್ಗದವರು ಈ ಸಂತೆಯನ್ನು ಅವಲಂಬಿಸಿದ್ದರು.
      ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳು ಅವನತಿ ದಾರಿ ಹಿಡಿಯುತ್ತಿದ್ದಂತೆ ಸಂತೆ ಸಹ ತನ್ನ ವೈಭವ ಕಳೆದುಕೊಂಡಿದೆ. ಈ ನಡುವೆ ಈ ಜಾಗದಲ್ಲಿ ಹಂತ ಹಂತವಾಗಿ ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ. ವಿಶಾಲವಾದ ಜಾಗ ಕಿರಿದಾಗ ತೊಡಗಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಸುಮಾರು ೨೭ ಲಕ್ಷ ರು. ವೆಚ್ಚದಲ್ಲಿ ರೈತರ ಸಂತೆ ಕಟ್ಟಡ ನಿರ್ಮಿಸಿದ್ದು, ಪ್ರಸ್ತುತ ಅಂಗನವಾಡಿವಾಗಿ ಮಾರ್ಪಾಡಾಗಿದೆ. ಸುಮಾರು ೧೫ ವರ್ಷಗಳ ಹಿಂದೆ ನಗರಸಭೆ ವತಿಯಿಂದ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ಸುಮಾರು ೭೩ ಲಕ್ಷ ರು. ವೆಚ್ಚದಲ್ಲಿ ತರಕಾರಿ ಮಾರುಕಟ್ಟೆ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಂಡಿದ್ದು, ಆದರೆ ಇದುವರೆಗೂ ಮಾರುಕಟ್ಟೆ ಸದ್ಬಳಕೆಯಾಗದೆ ಪಾಳು ಬಿದ್ದಿದೆ. ಈ ಕಟ್ಟಡದಿಂದ ನಗರಸಭೆಗೆ ಯಾವುದೇ ಆದಾಯ ಬರುತ್ತಿಲ್ಲ. ಈ ಕಟ್ಟಡದ ಸಮೀಪದಲ್ಲಿಯೇ ಕೆಲವು ವರ್ಷಗಳ ಹಿಂದೆ ನಗರಸಭೆ ಪಂಪ್‌ಹೌಸ್ ನಿರ್ಮಿಸಲಾಗಿದೆ. ಮತ್ತೊಂದು ಕಡೆ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗಿದೆ. ಇನ್ನೊಂದು ಕಡೆ ಶೌಚಾಲಯ ನಿರ್ಮಾಣಗೊಳ್ಳುತ್ತಿದೆ. ಈ ನಡುವೆ ಬೃಹತ್ ನೀರಿನ ಟ್ಯಾಂಕ್ ಸಹ ನಿರ್ಮಾಣಗೊಂಡಿದೆ. ಈ ಹಿಂದೆ ಈ ಜಾಗದಲ್ಲಿಯೇ ಖಾಸಗಿ ಬಸ್ ನಿಲ್ದಾಣ ನಿರ್ಮಿಸಬೇಕೆಂಬ ಪ್ರಸ್ತಾಪ ಸಹ ಮಾಡಲಾಗಿತ್ತು. ಅಲ್ಲದೆ ಅಂಬೇಡ್ಕರ್ ಭವನ ನಿರ್ಮಿಸುವ ಸಂಬಂಧ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ಆದರೆ ಇವು ಕಾರ್ಯಗತಗೊಳ್ಳಲಿಲ್ಲ. ಇದೀಗ ನಗರಸಭೆ ಸ್ಥಳಾಂತರಿಸಲಾಗುತ್ತಿದೆ ಎಂಬ ಸುದ್ದಿ ಹರಿದಾಡ ತೊಡಗಿದೆ.
      ಕಳೆದ ೩ ದಿನಗಳ ಹಿಂದೆ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸಂತೆ ಸ್ಥಳಾಂತರಿಸುವ ಸಂಬಂಧ ರೈತರು ಮತ್ತು ವ್ಯಾಪಾರಸ್ಥರಲ್ಲಿ ಜಾಗೃತಿ ಮೂಡಿಸಲಾಯಿತು. ಯಾವುದೇ ಕಾರಣಕ್ಕೂ ಸ್ಥಳಾಂತರಕ್ಕೆ ಅವಕಾಶ ನೀಡದೆ ಹೋರಾಟ ನಡೆಸುವಂತೆ ಕರೆ ನೀಡಲಾಯಿತು.
      ಒಂದು ವೇಳೆ ಹಳೇ ಸಂತೆಮೈದಾನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಗೊಂಡಲ್ಲಿ ಅನುಕೂಲಕ್ಕಿಂತ ಅನಾಕೂಲವೇ ಹೆಚ್ಚು. ರೈತರು, ವ್ಯಾಪಾರಸ್ಥರು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ವ್ಯಾಪಾರ ವಹಿವಾಟು ಕುಸಿಯುತ್ತದೆ ಎಂಬುದು ಬಹುತೇಕ ಜನರ ಅಭಿಪ್ರಾಯವಾಗಿದೆ. ಈ ನಡುವೆ ನಗರಸಭೆ ಸಾಮಾನ್ಯಸಭೆಯಲ್ಲಿ ಹಳೇ ಸಂತೆಮೈದಾನ ಸ್ಥಳಾಂತರಿಸುವ ವಿಚಾರ ಇದುವರೆಗೂ ಪ್ರಸ್ತಾಪವಾಗಿಲ್ಲ. ಆದರೆ ನಗರಸಭೆ ಕಟ್ಟಡ ವಿಸ್ತರಿಸುವ ಸಂಬಂಧ ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಆದರೆ ಅಧಿಕಾರಿಗಳು ತೆರೆಮರೆಯಲ್ಲಿ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.


ಯಾವುದೇ ಕಾರ್ಯವನ್ನು ಕದ್ದುಮುಚ್ಚಿ ಅಥವಾ ತರಾತುರಿಯಲ್ಲಿ ಕೈಗೊಳ್ಳುವುದಿಲ್ಲ. ಇತ್ತೀಚೆಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ನಗರಸಭೆ ಕಟ್ಟಡ ವಿಸ್ತರಿಸುವ ಸಂಬಂಧ ಚರ್ಚೆಗಳು ನಡೆದಿವೆ. ಪ್ರಸ್ತುತ ಇರುವ ಕಟ್ಟಡವನ್ನು ವಿಸ್ತರಿಸುವುದರಿಂದ ಮುಂದೆ ಸಮಸ್ಯೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಹೊಸ ಜಾಗ ಹುಡುಕಾಟ ನಡೆಸಲಾಗಿದೆ. ಹಳೇಸಂತೆಮೈದಾನ ಜಾಗ ಪ್ರಸ್ತಾಪವಾಗಿದೆ ಹೊರತು ಸ್ಥಳಾಂತರಿಸುವ ಸಂಬಂಧ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರೊಂದಿಗೂ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.

                                                                                     - ಎಚ್.ಎಂ ಮನುಕುಮಾರ್, ಪೌರಾಯುಕ್ತರು, ನಗರಸಭೆ, ಭದ್ರಾವತಿ.
------------------------------------------------------------------------------------------

ಹಳೇ ಸಂತೆಮೈದಾನ ಪುರಸಭೆ ಕಾಲದಿಂದಲೂ ಅಸ್ತಿತ್ವದಲ್ಲಿದ್ದು, ಗ್ರಾಮೀಣ ಹಾಗು ನಗರ ಭಾಗದ ರೈತರು, ವ್ಯಾಪಾರಸ್ಥರಿಗೆ ಹೆಚ್ಚಿನ ಅನುಕೂಲವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಜಾಗದಲ್ಲಿ ನಗರಸಭೆಗೆ ಆದಾಯವಿಲ್ಲದ ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ. ಮತ್ತೊಂದೆಡೆ ವಿಶಾಲವಾದ ಜಾಗ ಕಿರುದಾಗುತ್ತಿದೆ. ಈ ಜಾಗವನ್ನು ಬೇರೆಡೆಗೆ ಸ್ಥಳಾಂತರಿಸುವುದು ಸೂಕ್ತವಲ್ಲ.
- ಆರ್. ಕರುಣಾಮೂರ್ತಿ, ಮಾಜಿ ಅಧ್ಯಕ್ಷರು, ನಗರಸಭೆ, ಭದ್ರಾವತಿ.

                                    --------------------------------------------------------------------------------------------------

ರೈತರು, ವ್ಯಾಪಾರಸ್ಥರು ಕಂದಾಯ ಪಾವತಿಸಿದರೂ ಸಹ ಈ ಜಾಗದಲ್ಲಿ ನಗರಸಭೆ ವತಿಯಿಂದ ಯಾವುದೇ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿಲ್ಲ. ಆದರೂ ಸಹ ಸಂಕಷ್ಟದಲ್ಲಿಯೇ ವ್ಯಾಪಾರ ವಹಿವಾಟು ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಈ ಜಾಗವನ್ನು ಸ್ಥಳಾಂತರಿಸುವ ಹುನ್ನಾರ ನಡೆಸಲಾಗುತ್ತಿದೆ. ಎಲ್ಲರೂ ಎಚ್ಚೆತ್ತುಕೊಂಡು ಇದರ ವಿರುದ್ಧ ಹೋರಾಟ ನಡೆಸುವುದು ಅಗತ್ಯವಾಗಿದೆ.
  - ಬಿ.ಎನ್ ರಾಜು, ಅಧ್ಯಕ್ಷರು, ಮಾನವ ಹಕ್ಕುಗಳ ಹೋರಾಟ ಸಮಿತಿ, ಭದ್ರಾವತಿ.



ಸುಮಾರು ೧೫ ವರ್ಷಗಳ ಹಿಂದೆ ಭದ್ರಾವತಿ ನಗರಸಭೆ ವತಿಯಿಂದ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ಸುಮಾರು ೭೩ ಲಕ್ಷ ರು. ವೆಚ್ಚದಲ್ಲಿ ತರಕಾರಿ ಮಾರುಕಟ್ಟೆ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಂಡಿದ್ದು, ಆದರೆ ಇದುವರೆಗೂ ಮಾರುಕಟ್ಟೆ ಸದ್ಬಳಕೆಯಾಗದೆ ಪಾಳು ಬಿದ್ದಿದೆ.


೧೨ನೇ ಶತಮಾನದ ಬದುಕು ನಮ್ಮೆಲ್ಲರಿಗೂ ದಾರಿ ದೀಪ : ಹರೋನಹಳ್ಳಿ ಸ್ವಾಮಿ

ಭದ್ರಾವತಿ ಹಳೇನಗರದ ಸರ್ಕಾರಿ ಸಂಚಿ ಹೊನ್ನಮ್ಮ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಮೈಸೂರು ಹಾಗು ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೬೩೨ನೇ ವಚನ ಮಂಟಪ ಮತ್ತು ದತ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು 'ವಚನ ಸಾಹಿತ್ಯ-ವೈಚಾರಿಕತೆ' ವಿಷಯ ಕುರಿತು ಶಿಕ್ಷಕ ಹಾಗು ಹವ್ಯಾಸಿ ಖಗೋಳ ಶಾಸ್ತ್ರಜ್ಞ ಹರೋನಹಳ್ಳಿ ಸ್ವಾಮಿ ಮಾತನಾಡಿದರು.
    ಭದ್ರಾವತಿ, ಜ. ೧೭ : ಇಂದಿನ ಬದುಕಿಗೂ, ೧೨ನೇ ಶತಮಾನದ ಬದುಕಿಗೂ ಸಾಕಷ್ಟು ವ್ಯತ್ಯಾಸಗಳಿವೆ. ವಚನಕಾರರ, ಶರಣರ ಬದುಕು ನಮ್ಮೆಲ್ಲರೂ ದಾರಿದೀಪವಾಗಿದೆ ಎಂದು ಶಿಕ್ಷಕ ಹಾಗು ಹವ್ಯಾಸಿ ಖಗೋಳ ಶಾಸ್ತ್ರಜ್ಞ ಹರೋನಹಳ್ಳಿ ಸ್ವಾಮಿ ಹೇಳಿದರು.
    ಅವರು ಮಂಗಳವಾರ ಹಳೇನಗರದ ಸರ್ಕಾರಿ ಸಂಚಿಯ ಹೊನ್ನಮ್ಮ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಮೈಸೂರು ಹಾಗು ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೬೩೨ನೇ ವಚನ ಮಂಟಪ ಮತ್ತು ದತ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು 'ವಚನ ಸಾಹಿತ್ಯ-ವೈಚಾರಿಕತೆ' ವಿಷಯ ಕುರಿತು ಮಾತನಾಡಿದರು.
    ೧೨ನೇ ಶತಮಾನದ ಬದುಕು ವಚನಗಳಾಗಿವೆ. ಮೂಡನಂಬಿಕೆ, ಅಜ್ಞಾನ, ಅಸಮಾನತೆ ಸೇರಿದಂತೆ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸಿ ಮೌಲ್ಯಯುತವಾದ ಸಮಾಜ ರೂಪುಗೊಳ್ಳುವಲ್ಲಿ ವಚನಕಾರರ ಕೊಡುಗೆ ಮಹತ್ವದಾಗಿದೆ. ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಅಂದಿನ ಸಮಾಜಕ್ಕೂ, ಇಂದಿನ ಸಮಾಜಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ನಾವೆಲ್ಲರೂ ವಚನಕಾರರ, ಶರಣರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಅದರಲ್ಲೂ ಇಂದಿನ ಯುವ ಪೀಳಿಗೆಗೆ ಆದರ್ಶ ಮತ್ತು ಗುರಿಗಳು ಬಹಳ ಮುಖ್ಯವಾಗಿವೆ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ತಮ್ಮತನ ಮೈಗೂಡಿಸಿಕೊಂಡು ಸಾಧನೆ ದಾರಿಯಲ್ಲಿ ಸಾಗಬೇಕೆಂದರು.
    ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಸ್ ಸಿದ್ದಲಿಂಗಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ಕಾರ್ಯಕ್ರಮ ಉದ್ಘಾಟಿಸಿದರು. ಪರಿಷತ್ ತಾಲೂಕು ಕಾರ್ಯದರ್ಶಿ ನಂದಿನಿ ಮಲ್ಲಿಕಾರ್ಜುನ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಸವ ಕೇಂದ್ರದ ಅಧ್ಯಕ್ಷ ಜಗದೀಶ್ ಕವಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷ ಮಲ್ಲಿಕಾಂಬ ವಿರೂಪಾಕ್ಷಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಉಪನ್ಯಾಸಕ ಬಿ. ಚೆನ್ನಯ್ಯ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಹಾಗು ಕದಳಿ ಮಹಿಳಾ ವೇದಿಕೆ ಸದಸ್ಯರಿಂದ ವಚನ ಗಾಯನ ನಡೆಯಿತು.

Monday, January 16, 2023

ನಿರ್ಮಾಣಗೊಂಡು ೪ ವರ್ಷ ಕಳೆದರೂ ಸಹ ಉದ್ಘಾಟನೆಗೊಳ್ಳದ ಪ್ರಾಥಮಿಕ ಆರೋಗ್ಯ ಕೇಂದ್ರ

ಕರ್ನಾಟಕ ರಾಷ್ಟ್ರ ಸಮಿತಿ ನೇತೃತ್ವದಲ್ಲಿ ಸ್ಥಳೀಯರ ಪ್ರತಿಭಟನೆ : ತಕ್ಷಣ ಉದ್ಘಾಟಿಸಲು ಆಗ್ರಹ


ಭದ್ರಾವತಿ ನಗರಸಭೆ ವಾರ್ಡ್ ನಂ.೯ರ ಭದ್ರಾ ಕಾಲೋನಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಗೊಂಡು ಸುಮಾರು ೪ ವರ್ಷ ಕಳೆದರೂ ಸಹ ಉದ್ಘಾಟನೆಗೊಳ್ಳದೆ ಪಾಳು ಬಿದ್ದಿದ್ದು, ತಕ್ಷಣ ಅಗತ್ಯವಿರುವ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಿ ಉದ್ಘಾಟಿಸಬೇಕೆಂದು ಆಗ್ರಹಿಸಿ ಸೋಮವಾರ ಸ್ಥಳೀಯರು ಕರ್ನಾಟಕ ರಾಷ್ಟ್ರ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದರು.
    ಭದ್ರಾವತಿ, ಜ. ೧೬ : ನಗರಸಭೆ ವಾರ್ಡ್ ನಂ.೯ರ ಭದ್ರಾ ಕಾಲೋನಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಗೊಂಡು ಸುಮಾರು ೪ ವರ್ಷ ಕಳೆದರೂ ಸಹ ಉದ್ಘಾಟನೆಗೊಳ್ಳದೆ ಪಾಳು ಬಿದ್ದಿದ್ದು, ತಕ್ಷಣ ಅಗತ್ಯವಿರುವ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಿ ಉದ್ಘಾಟಿಸಬೇಕೆಂದು ಆಗ್ರಹಿಸಿ ಸೋಮವಾರ ಸ್ಥಳೀಯರು ಕರ್ನಾಟಕ ರಾಷ್ಟ್ರ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದರು.
    ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆಗೊಳ್ಳದ ಕಾರಣ ಇಲ್ಲಿನ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದ್ದು, ನೂತನ ಕಟ್ಟಡ ನಿರ್ಮಾಣಗೊಂಡು ೪ ವರ್ಷ ಕಳೆದರೂ ಸಹ ಉದ್ಘಾಟನೆಗೊಳ್ಳದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಸ್ವತಃ ವೈದ್ಯರಾಗಿರುವ ಆರೋಗ್ಯ ಸಚಿವರಾದ ಡಾ. ಸುಧಾಕರ್‌ರವರು ತಕ್ಷಣ ಈ ಬಗ್ಗೆ ಗಮನ ಹರಿಸಬೇಕು.
    ಕಟ್ಟಡ ಉದ್ಘಾಟನೆಗೊಳ್ಳದ ಕಾರಣ ಪುಂಡರು-ಪೋಕರಿಗಳ ಅಡ್ಡೆಗಳ ಸ್ಥಳವಾಗಿದ್ದು, ದನ-ಕರು, ಹಂದಿ, ನಾಯಿ, ಹಾವು-ಮುಂಗುಸಿಗಳ ಆಶ್ರಯ ತಾಣವಾಗಿದೆ. ಈಗಾಗಲೇ ಕಟ್ಟಡ ಪಾಳು ಬಿದ್ದಿದ್ದು, ತಕ್ಷಣ ಸಂಬಂಧಪಟ್ಟ ಇಲಾಖೆಯವರು ಎಚ್ಚುತ್ತುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಲಾಯಿತು.
    ಪಕ್ಷದ ಪ್ರಮುಖರಾದ ಯುವ ಘಟಕದ ಅಧ್ಯಕ್ಷ ಅರಳಿಹಳ್ಳಿ ತ್ಯಾಗರಾಜ್, ತೀರ್ಥಕುಮಾರ್, ರಾಜೇಂದ್ರ, ಚಿನ್ನಯ್ಯ, ಆನಂದ್, ಮಲ್ಲಿಕಾರ್ಜುನ್, ವಿನೋದ್‌ಕುಮಾರ್, ಅಣ್ಣಪ್ಪ, ಸಿಖಂದರ್ ಹಾಗು ಸ್ಥಳೀಯರು ಉಪಸ್ಥಿತರಿದ್ದರು.

ರೈತ ಸಂಕ್ರಾಂತಿ ಆನ್‌ಲೈನ್ ಸಂವಾದ : ಕೃಷಿ ಸಮಸ್ಯೆಗಳ ಕುರಿತು ಚರ್ಚೆ

ರೈತ ಚೈತನ್ಯ ಕಾರ್ಯಕ್ರಮ ಕುರಿತು ಎಚ್.ಡಿ ಕುಮಾರಸ್ವಾಮಿ ಮನವರಿಕೆ

ಜೆಡಿಎಸ್ ಪಕ್ಷದ ವತಿಯಿಂದ  ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ರೈತ ಸಂಕ್ರಾಂತಿ ಆನ್‌ಲೈನ್ ಸಂವಾದ ಭದ್ರಾವತಿ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆಯಿತು. 
    ಭದ್ರಾವತಿ, ಜ. ೧೬ : ಜೆಡಿಎಸ್ ಪಕ್ಷದ ವತಿಯಿಂದ  ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ರೈತ ಸಂಕ್ರಾಂತಿ ಆನ್‌ಲೈನ್ ಸಂವಾದ ನಗರದ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
    ಆನ್‌ಲೈನ್ ಮೂಲಕ ಕ್ಷೇತ್ರದ ರೈತರೊಂದಿಗೆ ಎಚ್.ಡಿ ಕುಮಾರಸ್ವಾಮಿ ಕೃಷಿ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸಿದರು. ಅಲ್ಲದೆ ಈಗಾಗಲೇ ಪಕ್ಷದ ವತಿಯಿಂದ ರೂಪಿಸಲಾಗಿರುವ ರೈತ ಚೈತನ್ಯ ಕಾರ್ಯಕ್ರಮ ಕುರಿತು ಮನವರಿಕೆ ಮಾಡಿಕೊಡಲಾಯಿತು. ಮಧ್ಯಾಹ್ನ ೩.೩೦ ರಿಂದ ಆರಂಭಗೊಂಡ ಸಂವಾದ ಸುಮಾರು ೩ ಗಂಟೆಗೂ ಹೆಚ್ಚು ಸಮಯ ನಡೆಯಿತು. ಕ್ಷೇತ್ರದ ವಿವಿಧೆಡೆಗಳಿಂದ ರೈತರು ಸಂವಾದದಲ್ಲಿ ಪಾಲ್ಗೊಂಡಿದ್ದರು.


    ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ, ಪಕ್ಷದ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ಪ್ರಮುಖರಾದ ಡಿ.ಟಿ ಶ್ರೀಧರ್, ಡಿ. ಆನಂದ್, ಎಂ.ಎ ಅಜಿತ್, ಎಚ್.ಬಿ ರವಿಕುಮಾರ್, ಆನಂದ್, ಮುತುರ್ಜಾಖಾನ್, ಜಯರಾಂ ಗೊಂದಿ, ಎ.ಟಿ ರವಿ, ಭಾಗ್ಯಮ್ಮ, ದಿಲೀಪ್, ಸೈಯದ್ ಅಜ್ಮಲ್, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ರೈತ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಸಂವಾದದಲ್ಲಿ ರೈತರಿಗೆ ಎಳ್ಳು ಸಕ್ಕರೆ ವಿತರಿಸಲಾಯಿತು.

Sunday, January 15, 2023

ಉಕ್ಕಿನ ನಗರದೆಲ್ಲೆಡೆ ಸಂಕ್ರಾಂತಿ ಸಂಭ್ರಮ, ಸಡಗರ

ನ್ಯೂಟೌನ್ ಆಂಜನೇಯ ಅಗ್ರಹಾರ, ಕೂಲಿಬ್ಲಾಕ್ ಶೆಡ್ ಶ್ರೀ ಮಾರಿಯಮ್ಮ ಅಖಾಡ ಪೊಂಗಲ್ ಕಮಿಟಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ೫೪ನೇ ವರ್ಷದ ಸಂಕ್ರಾಂತಿ ಹಾಗು ಪೊಂಗಲ್ ಹಬ್ಬದ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಭಾನುವಾರ ದನಗಳ ಪ್ರದರ್ಶನ ಹಾಗು ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯನ್ನು ವೀಕ್ಷಿಸಲು ಸುತ್ತಮುತ್ತಲ ಪ್ರದೇಶಗಳಿಂದ ಜನರು ಆಗಮಿಸಿದ್ದರು.
    ಭದ್ರಾವತಿ, ಜ. ೧೫ : ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಆಚರಣೆ ನಗರದಲ್ಲೆಡೆ ವಿಜೃಂಭಣೆಯಿಂದ ಕಂಡು ಬಂದಿದ್ದು, ಬೆಳಿಗ್ಗೆಯೇ ಮನೆ ಮನೆಗಳ ಮುಂದೆ ರಂಗುರಂಗಿನ ರಂಗೋಲಿ ಮೂಲಕ ಹಬ್ಬಕ್ಕೆ ಅದ್ದೂರಿ ಸ್ವಾಗತ ಕೋರಿರುವುದು ಕಂಡು ಬಂದಿತು.
    ಸಂಕ್ರಾಂತಿ ಅಂಗವಾಗಿ ವಿವಿಧ ದೇವಾಲಯಗಳಲ್ಲೂ ವಿಶೇಷ ಪೂಜೆ ನಡೆಯಿತು. ಅಲ್ಲದೆ ವಿವಿಧ ಸಂಘ-ಸಂಸ್ಥೆಗಳಿಂದ ಸಹ ವಿಶಿಷ್ಟವಾಗಿ ಹಬ್ಬ ಆಚರಣೆ ನಡೆಸಲಾಯಿತು. ತಿಂಡಿತಿನಿಸುಗಳೊಂದಿಗೆ ಗೋ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.  


ಭದ್ರಾವತಿಯಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಭಾನುವಾರ ತಿಂಡಿತಿನಿಸುಗಳೊಂದಿಗೆ ಗೋ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.   
     ನ್ಯೂಟೌನ್ ಆಂಜನೇಯ ಅಗ್ರಹಾರ, ಕೂಲಿಬ್ಲಾಕ್ ಶೆಡ್ ಶ್ರೀ ಮಾರಿಯಮ್ಮ ಅಖಾಡ ಪೊಂಗಲ್ ಕಮಿಟಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ೫೪ನೇ ವರ್ಷದ ಸಂಕ್ರಾಂತಿ ಹಾಗು ಪೊಂಗಲ್ ಹಬ್ಬದ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಭಾನುವಾರ ದನಗಳ ಪ್ರದರ್ಶನ ಹಾಗು ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯನ್ನು ವೀಕ್ಷಿಸಲು ಸುತ್ತಮುತ್ತಲ ಪ್ರದೇಶಗಳಿಂದ ಜನರು ಆಗಮಿಸಿದ್ದರು.
    ಸ್ಪರ್ಧೆ ಮಾರಿಯಮ್ಮ ದೇವಸ್ಥಾನ ಬಳಿ ಆಂಜನೇಯ ಆಗ್ರಹಾರದ ಮುಖ್ಯ ರಸ್ತೆಯಲ್ಲಿ ಆಯೋಜಿಸಲಾಗಿತ್ತು. ಸ್ಪರ್ಧೆ ಸಂದರ್ಭದಲ್ಲಿ ಎರಡು ಕಡೆ ಕಬ್ಬಿಣದ ಬ್ಯಾರಿಗೇಡ್‌ಗಳನ್ನು ಅಳವಡಿಸಲಾಗಿತ್ತು.  
    ನಗರದ ಅಪ್ಪರ್ ಹುತ್ತಾ ಗೆಳೆಯರ ಬಳಗ ಟ್ರಸ್ಟ್ ವತಿಯಿಂದ ಈ ಬಾರಿ ವಿಶೇಷವಾಗಿ ಸಂಕ್ರಾಂತಿ ಸಂಭ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀ ನಂದಿ, ಈಶ್ವರ ಮತ್ತು ಸಂಕಷ್ಟಹರ ಗಣಪತಿ ದೇವಸ್ಥಾನದ ಮುಂಭಾಗ ಬೆಳಿಗ್ಗೆ ಪೊಂಗಲ್, ಗೋವಿನ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಸಂಜೆ ವಿಶೇಷ ಆಕರ್ಷಣೆಯಾಗಿ ಹೋರಿಗಳ ಕಿಚ್ಚಾಯಿಸುವ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ಭದ್ರಾವತಿ ಅಪ್ಪರ್ ಹುತ್ತಾ ಗೆಳೆಯರ ಬಳಗ ಟ್ರಸ್ಟ್ ವತಿಯಿಂದ ಈ ಬಾರಿ ವಿಶೇಷವಾಗಿ ಸಂಕ್ರಾಂತಿ ಸಂಭ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀ ನಂದಿ, ಈಶ್ವರ ಮತ್ತು ಸಂಕಷ್ಟಹರ ಗಣಪತಿ ದೇವಸ್ಥಾನದ ಮುಂಭಾಗ ಬೆಳಿಗ್ಗೆ ಪೊಂಗಲ್, ಗೋವಿನ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
    ನಂತರ ಹೊಳೆಹೊನ್ನೂರು ಸರ್ಕಾರಿ ಪ್ರೌಢಶಾಲೆಯ ರವಿಕಿರಣ್ ಅವರಿಂದ ದೈವ ನೃತ್ಯರೂಪಕ, ಚೌಡೇಶ್ವರಿ ಮಹಿಳಾ ಮಂಡಳಿಯಿಂದ ಕೋಲಾಟ, ದಿವಾಕರ ಮತ್ತು ತಂಡದಿಂದ ಹಾಗು ವೀರಾಂಜನೇಯ ಭಜನಾ ಮಂಡಳಿ ವತಿಯಿಂದ ಜಾನಪದ ಗೀತೆ, ಹೊಳೆಗಂಗೂರು ಸರ್ಕಾರಿ ಪ್ರೌಢ ಶಾಲೆ ವತಿಯಿಂದ ಕೋಲಾಟ ಹಾಗು ಸೋಂಪಾನಾಯ್ಕ ಮತ್ತು ತಂಡದವರಿಂದ ಬಣಜಾರ್ ಶೈಲಿಯ ಕೋಲಾಟ ಸೇರಿದಂತೆ ಜಾನಪದ ಕಾರ್ಯಕ್ರಮಗಳು ಜರುಗಿದವು.

ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಎಸ್. ಕುಮಾರ್‌ಗೆ ಅವಕಾಶ ನೀಡಿ

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಭದ್ರಾವತಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಎಸ್. ಕುಮಾರ್ ಸ್ಪರ್ಧಿಸಲು ಅವಕಾಶ ನೀಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಒತ್ತಾಯಿಸಿದೆ.
    ಭದ್ರಾವತಿ, ಜ. ೧೫:  : ಈ ಹಿಂದೆ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಾಬಲ್ಯ ಹೊಂದಿದ್ದ ಒಕ್ಕಲಿಗರು ಇದೀಗ ತಮ್ಮ ಪ್ರಾಬಲ್ಯ ಕಳೆದುಕೊಳ್ಳುತ್ತಿದ್ದಾರೆ. ಎಲ್ಲಾ ರಂಗದಲ್ಲೂ ಶೋಷಣೆಗೆ ಒಳಗಾಗುತ್ತಿದ್ದು, ಈಗಲಾದರೂ ಎಚ್ಚೆತ್ತುಕೊಂಡು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಘಟಿತರಾಗುವುದು ಅನಿವಾರ್ಯವಾಗಿದೆ ಎಂಬ ಸಂದೇಶದೊಂದಿಗೆ ಕಳೆದ ೩ ತಿಂಗಳ ಹಿಂದೆ ನೂತನವಾಗಿ ಅಸ್ತಿತ್ವಕ್ಕೆ ಬಂದ ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ ಇದೀಗ ಮತ್ತಷ್ಟು ಕ್ರಿಯಾಶೀಲವಾಗಿದ್ದು, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಎಸ್. ಕುಮಾರ್ ಸ್ಪರ್ಧಿಸಲು ಅವಕಾಶ ನೀಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಒತ್ತಾಯಿಸಿದೆ.
    ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಎಸ್. ಕುಮಾರ್‌ರವರು ಕ್ಷೇತ್ರದಲ್ಲಿ ತನ್ನದೇ ಆದ ವರ್ಚಸ್ಸನ್ನು ಹೊಂದಿದ್ದು, ೪ ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಅಲ್ಲದೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಗುರುತಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಬಾರಿ ಚುನಾವಣೆಯಲ್ಲಿ ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಸಿಗಬೇಕೆಂಬ ಉದ್ದೇಶದಿಂದ ಒಂದು ಬಾರಿ ಎಸ್. ಕುಮಾರ್‌ಗೆ ಅವಕಾಶ ನೀಡುವಂತೆ ವೇದಿಕೆ ಕೋರಿದೆ.
    ಸಂಸದ ಬಿ.ವೈ ರಾಘವೇಂದ್ರ, ಒಕ್ಕಲಿಗ ಸಮುದಾಯದ ಮುಖಂಡರು, ಮೇದಿಕೆ ಪ್ರಮುಖರು, ಬಿಜೆಪಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.