Tuesday, January 24, 2023

ಮನೆ ಕಾಂಪೌಂಡ್‌ನಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು

    ಭದ್ರಾವತಿ, ಜ. ೨೪: ಮನೆಯ ಕಾಂಪೌಂಡ್‌ನಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ.
    ಖಲಂದರ್ ನಗರದ ಅಬ್ದುಲ್ ರೆಹಮಾನ್ ಎಂಬುವರು ರಾತ್ರಿ ಮನೆಯ ಕಾಂಪೌಂಡ್‌ನಲ್ಲಿ ರಾಯಲ್ ಎನ್ ಫೀಲ್ಡ್ ಬೈಕನ್ನು ನಿಲ್ಲಿಸಿದ್ದು, ಬೆಳಿಗ್ಗೆ ಬೈಕ್ ಕಳುವಾಗಿರುವುದು ಕಂಡು ಬಂದಿದೆ. ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಪಘಾತ : ವೃದ್ಧೆ ಸ್ಥಳದಲ್ಲಿಯೇ ಸಾವು

     ಭದ್ರಾವತಿ, ಜ. ೨೪ :  ರಸ್ತೆಯಲ್ಲಿ ಹೋಗುತ್ತಿದ್ದಾಗ ವೃದ್ಧೆಯೊಬ್ಬರು ಟ್ರ್ಯಾಕ್ಟರ್ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ತಾಲೂಕಿನ ಭದ್ರಾವತಿ-ಚನ್ನಗಿರಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
  ಅರಳಿಹಳ್ಳಿ ಗ್ರಾಮದ ನಿವಾಸಿ ಮಹಮ್ಮದ್ ಸಾಧಿಕ್‌ರವರ  ಮುತ್ತಜ್ಜಿ ಸುಮಾರು ೯೨ ವರ್ಷ ವಯೋಮಾನದ ಚಮನ್ ಬೀ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಟ್ರ್ಯಾಕ್ಟರ್ ಚಾಲಕ ನಾಗರಾಜ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.

೬ ದಿನ ಪೂರೈಸಿದ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಅನಿರ್ಧಿಷ್ಟಾವಧಿ ಹೋರಾಟ

ಬಾಯಿ ಬಡಿದುಕೊಂಡು ಪ್ರತಿಭಟನೆ, ಮಾಜಿ ಸೈನಿಕರ ಸಂಘ ಬೆಂಬಲ, ಮೋದಿಗೆ ಎಚ್‌ಡಿಡಿ ಪತ್ರ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ  ಗುತ್ತಿಗೆ ಕಾರ್ಮಿಕರ ಸಂಘ ಕಾರ್ಖಾನೆ ಮುಂಭಾಗ ಕೈಗೊಂಡಿರುವ ಅನಿರ್ಧಿಷ್ಟಾವಧಿ ಹೋರಾಟ ಮಂಗಳವಾರ ೬ನೇ ದಿನಕ್ಕೆ ಕಾಲಿಟ್ಟಿತು. ಗುತ್ತಿಗೆ ಕಾರ್ಮಿಕರು ಬಾಯಿ ಬಡಿದುಕೊಂಡು ಪ್ರತಿಭಟಿಸಿದರು.
    ಭದ್ರಾವತಿ, ಜ. ೨೪ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ  ಗುತ್ತಿಗೆ ಕಾರ್ಮಿಕರ ಸಂಘ ಕಾರ್ಖಾನೆ ಮುಂಭಾಗ ಕೈಗೊಂಡಿರುವ ಅನಿರ್ಧಿಷ್ಟಾವಧಿ ಹೋರಾಟ ಮಂಗಳವಾರ ೬ನೇ ದಿನಕ್ಕೆ ಕಾಲಿಟ್ಟಿತು.
   ಮಧ್ಯಾಹ್ನ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಗುತ್ತಿಗೆ ಕಾರ್ಮಿಕರು ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ದರಿದ್ದಾರೆ. ಬೇಡಿಕೆ ಈಡೇರುವವರೆಗೂ ಹೋರಾಟ ನಡೆಯಲಿದೆ. ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ. ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸುವಂತೆ ಮನವಿ ಮಾಡಿದರು.
    ಬಾಯಿ ಬಡಿದುಕೊಂಡು ಪ್ರತಿಭಟನೆ :
    ಗುತ್ತಿಗೆ ಕಾರ್ಮಿಕರು ಕೇಂದ್ರ ಸರ್ಕಾರ ಹಾಗು ಉಕ್ಕು ಪ್ರಾಧಿಕಾರ ಮತ್ತು ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಧಿಕ್ಕಾರ ಕೂಗುವ ಜೊತೆಗೆ ಬಾಯಿ ಬಡಿದುಕೊಂಡು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
       ಉಕ್ಕಿನ ನಗರ ಮಾಜಿ ಸೈನಿಕರ ಸಂಘ ಬೆಂಬಲ :
   ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಉಕ್ಕಿನ ನಗರ ಮಾಜಿ ಸೈನಿಕರ ಸಂಘ ಬೆಂಬಲ ಸೂಚಿಸಿದೆ. 
    ಹೋರಾಟದ ಸ್ಥಳಕ್ಕೆ ಆಗಮಿಸಿದ ಸಂಘದ ಪದಾಧಿಕಾರಿಗಳು ಮಾತನಾಡಿ,  ಕಾರ್ಖಾನೆ ಮುಚ್ಚುವ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು. ಕೇಂದ್ರ ಸರ್ಕಾರ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಅಭಿವೃದ್ಧಿಪಡಿಸಬೇಕು. ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಸಂಘ ಸಂಪೂರ್ಣವಾಗಿ ಬೆಂಬಲ ನೀಡುತ್ತದೆ ಎಂದು ಸಂಘದ ಕಾರ್ಯದರ್ಶಿ ವಿನೋದ್ ಪೂಜಾರಿ ಭರವಸೆ ನೀಡಿದರು.
     ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಪ್ರಧಾನಿ ಮೋದಿಗೆ ಪತ್ರ :
   ಪ್ರಧಾನಮಂತ್ರಿ ನಗರೇಂದ್ರ ಮೋದಿಯವರಿಗೆ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚದಿರುವಂತೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಪತ್ರ ಬರೆದಿದ್ದಾರೆ. ಇತ್ತೀಚೆಗೆ ಕಾರ್ಖಾನೆಯ ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರು, ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ ನೇತೃತ್ವದಲ್ಲಿ ದೇವೇಗೌಡರಿಗೆ ಮನವಿ ಸಲ್ಲಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಒತ್ತಾಯಿಸುವಂತೆ ಕೋರಿದ್ದರು. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ದೇವೇಗೌಡರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
   ಕಾರ್ಖಾನೆ ಮುಚ್ಚುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈ ಬಿಡಬೇಕು. ದೇಶಕ್ಕೆ ಅತ್ಯುನ್ನತ ಕೊಡುಗೆಯಾಗಿರುವ ಕಾರ್ಖಾನೆಯ ಮುಚ್ಚುವ ತೀರ್ಮಾನ ಸಮಂಜಸವಲ್ಲ. ರಾಜ್ಯದ ಏಕೈಕ ಸಾರ್ವಜನಿಕ ಸ್ವಾಮ್ಯದ ಉದ್ದಿಮೆ ಇದಾಗಿದೆ. ಕಾರ್ಖಾನೆ ಮರು ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
     ಆತ್ಮನಿರ್ಭರ ಭಾರತದ ಪರಿಕಲ್ಪನೆಗೆ ಪೂರಕವಾಗಿ ಈ ಕಾರ್ಖಾನೆ ಅನೇಕ ಕೊಡುಗೆಗಳನ್ನು ನೀಡುವ ಸಾಮರ್ಥ್ಯ ಹೊಂದಿದೆ. ರಕ್ಷಣಾ ವಲಯ, ನ್ಯೂಕ್ಲಿಯರ್, ರೈಲ್ವೆ ಮುಂತಾದ ವಿಭಾಗದಲ್ಲಿ ಈ ಕಾರ್ಖಾನೆಯಿಂದ ಮಹತ್ವದ ಸಹಕಾರ ದೊರೆಯಲಿದೆ. ಮುಖ್ಯವಾಗಿ ೨೦ ಸಾವಿರಕ್ಕೂ ಹೆಚ್ಚು ಕುಟುಂಬಗಳು ಇದೇ ಕಾರ್ಖಾನೆಯನ್ನು ಅವಲಂಬಿಸಿವೆ. ಈ ಹಿನ್ನಲೆಯಲ್ಲಿ ಕಾರ್ಖಾನೆ ಮುಚ್ಚುವ ನಿರ್ಧಾರ ಕೈಬಿಡುವಂತೆ ಮನವರಿಕೆ ಮಾಡಿದ್ದಾರೆ.

ಜ.೨೫ರಂದು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಲೋಕಾರ್ಪಣೆ

    ಭದ್ರಾವತಿ, ಜ. ೨೫ : ತಾಲೂಕಿನ ಸೀತಾರಾಮಪುರ(ಮುಳ್ಕೆರೆ) ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಲೋಕಾರ್ಪಣೆ ಹಾಗು ಕಳಶಾರೋಹಣ ಕಾರ್ಯಕ್ರಮ ಜ.೨೫ರಂದು ನಡೆಯಲಿದೆ.
    ಬೆಳಿಗ್ಗೆ ೧೦.೩೦ಕ್ಕೆ ಜನ ಜಾಗೃತಿ ಧಾರ್ಮಿಕ ಸಮಾರಂಭದಲ್ಲಿ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಶ್ರೀ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ದಿವ್ಯ ಸಾನಿಧ್ಯ ವಹಿಸಲಿದ್ದು, ಯಡಿಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ತರೀಕೆರೆ ಹಿರೇಮಠದ ಶ್ರೀ ಜಗದೀಶ್ವರ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟ ಹಾಲಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಮಳಲಿಮಠದ ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮತ್ತು ಚನ್ನಗಿರಿ ಕೇದಾರ ಶಾಖಾ ಹಿರೇಮಠದ ಶ್ರೀ ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿರುವರು.
    ಸಂಸದ ಬಿ.ವೈ ರಾಘವೇಂದ್ರ ಜನ ಜಾಗೃತಿ ಧಾರ್ಮಿಕ ಸಮಾರಂಭ ಉದ್ಘಾಟಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆವಹಿಸಲಿದ್ದಾರೆ. ಪ್ರಮುಖರಾದ ಶಾರದ ಅಪ್ಪಾಜಿ, ಎಸ್, ಮಣಿಶೇಖರ್, ಎಚ್.ಎಲ್ ಷಡಾಕ್ಷರಿ, ಜೆ. ಗೀತಾ ಜಗದೀಶ್, ಬೇಬಿ ಶಾಲಿನಿ, ಡಿ. ಪ್ರಭಾಕರ್, ಗೋಣಿ ಮಂಜುನಾಥ್ ಮತ್ತು ಪುಷ್ಪ ಆರ‍್ಮುಗಂ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
    ಹಿರಿಯ ಸಾಹಿತಿ ಜೆ.ಎನ್ ಬಸವರಾಜಪ್ಪ ಉಪನ್ಯಾಸ ನಡೆಸಿಕೊಡಲಿದ್ದು, ಮಧ್ಯಾಹ್ನ ೧೨ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

Monday, January 23, 2023

ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮಣಿಶೇಖರ್ ಉಚ್ಛಾಟನೆ

    ಭದ್ರಾವತಿ, ಜ. 23: ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ  ಕೂಡ್ಲಿಗೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮಾಜಿ ಸದಸ್ಯ ಎಸ್. ಮಣಿಶೇಖರ್ ಅವರನ್ನು ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ ಪಕ್ಷದ ನಗರ ಹಾಗು ಗ್ರಾಮಾಂತರ ಅಧ್ಯಕ್ಷರು  ತಿಳಿಸಿದ್ದಾರೆ.
     ಇವರು ಕಳೆದ ಸುಮಾರು 1 ವರ್ಷದಿಂದ ಪಕ್ಷಕ್ಕೆ ಮುಜುಗರ ಉಂಟುಮಾಡುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಪಕ್ಷದ ವಿರೋಧಿ ಬಣಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಘೋಷಿಸಲಾಗಿದೆ. ಆದರೂ ಸಹ ಪಕ್ಷೇತರ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಪಕ್ಷದಲ್ಲಿ ಗೊಂದಲ ಉಂಟುಮಾಡುತ್ತಿದ್ದಾರೆ. 
   ಈ ಎಲ್ಲಾ ವಿಚಾರಗಳನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ. ಪಕ್ಷದ ನಿರ್ಣಯದಂತೆ ಜಿಲ್ಲಾ ಹಾಗು  ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಪಕ್ಷದ ನಗರ ಹಾಗು ಗ್ರಾಮಾಂತರ ಅಧ್ಯಕ್ಷರು  ಎಸ್. ಮಣಿಶೇಖರ್ ಅವರನ್ನು ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ ಎಂದು ಆರ್. ಕರುಣಾಮೂರ್ತಿ ಮತ್ತು ಕೆ. ಧರ್ಮಾಕುಮಾರ್ ತಿಳಿಸಿದ್ದಾರೆ.
     
     

Sunday, January 22, 2023

ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಮತ್ತು ಸಂಸದ ರಾಘವೇಂದ್ರ ವಿರುದ್ಧ ಕಾರ್ಮಿಕರ ಆಕ್ರೋಶ

ಕ್ಷೇತ್ರಕ್ಕೆ ಕಾಲಿಡುವ ನೈತಿಕತೆ ಇಲ್ಲ, ಕಾರ್ಮಿಕರ ಪರ ಸೂಕ್ತ ತೀರ್ಮಾನ ಕೈಗೊಳ್ಳಿ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಭೀತಿಯಲ್ಲಿ ಹೋರಾಟ ನಡೆಸುತ್ತಿರುವ ಕಾರ್ಮಿಕರು ಇದೀಗ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗು ಸಂಸದ ಬಿ.ವೈ ರಾಘವೇಂದ್ರ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಭಾನುವಾರ ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂಸದರು ಪಾಲ್ಗೊಳ್ಳದಂತೆ ಹೋರಾಟ ನಡೆಸುವ ಮೂಲಕ ಕಾರ್ಮಿಕರು ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ.
    ಭದ್ರಾವತಿ, ಜ. ೨೩ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಭೀತಿಯಲ್ಲಿ ಹೋರಾಟ ನಡೆಸುತ್ತಿರುವ ಕಾರ್ಮಿಕರು ಇದೀಗ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗು ಸಂಸದ ಬಿ.ವೈ ರಾಘವೇಂದ್ರ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಭಾನುವಾರ ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂಸದರು ಪಾಲ್ಗೊಳ್ಳದಂತೆ ಹೋರಾಟ ನಡೆಸುವ ಮೂಲಕ ಕಾರ್ಮಿಕರು ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ.
    ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ರಾಜ್ಯ ಸರ್.ಎಂ ವಿಶ್ವೇಶ್ವರಾಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಕಛೇರಿ ಹಾಗು ಭಾರತರತ್ನ ಸರ್.ಎಂ ವಿಶ್ವೇಶ್ವರಾಯನವರ ಪ್ರತಿಮೆ ಅನಾವರಣ ಕಾರ್ಯಕ್ರಮ ಉದ್ಘಾಟನೆಯನ್ನು ಸಂಸದ ಬಿ.ವೈ ರಾಘವೇಂದ್ರ ನೆರವೇರಿಸಬೇಕಿತ್ತು. ಕಾರ್ಯಕ್ರಮದ ಮಾಹಿತಿ ಅರಿತ ಕಾರ್ಮಿಕರು ಸ್ಥಳಕ್ಕೆ ಆಗಮಿಸಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
    ಕಾರ್ಖಾನೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೇವಲ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಕಾರ್ಮಿಕರು ಹಾಗು ಕ್ಷೇತ್ರದ ಮತದಾರರನ್ನು ವಂಚಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗು ಸಂಸದ ರಾಘವೇಂದ್ರರವರಿಗೆ ಕ್ಷೇತ್ರಕ್ಕೆ ಬರುವ ಯಾವುದೇ ನೈತಿಕತೆ ಇಲ್ಲವಾಗಿದೆ. ಈ ಹಿನ್ನಲೆಯಲ್ಲಿ ಕ್ಷೇತ್ರಕ್ಕೆ ಅವರು ಬರುವುದನ್ನು ವಿರೋಧಿಸುತ್ತೇವೆ. ಕಾರ್ಖಾನೆ ಸಂಬಂಧ ಸೂಕ್ತ ನಿಲುವು ಕೈಗೊಂಡು ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸುವುದಾದರೇ ಕ್ಷೇತ್ರಕ್ಕೆ ಬರಲಿ ಎಂದು ಆಗ್ರಹಿಸಿದರು.
    ಕಾರ್ಮಿಕರ ಹೋರಾಟಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಮಾಜಿ ಸದಸ್ಯ, ಜೆಡಿಎಸ್ ಯುವ ಘಟಕದ ತಾಲೂಕು ಅಧ್ಯಕ್ಷ ಎಂ.ಎ ಅಜಿತ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ನಗರಸಭೆ ಸದಸ್ಯ ಆರ್. ಮೋಹನ್‌ಕುಮಾರ್ ಸೇರಿದಂತೆ ಪ್ರಮುಖರು ಬೆಂಬಲ ಸೂಚಿಸಿದರು.
ಕಾರ್ಮಿಕರ ಹೋರಾಟ ತೀವ್ರಗೊಂಡ ಹಿನ್ನಲೆಯಲ್ಲಿ ಈ ಭಾಗದಲ್ಲಿ ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಕೊನೆಗೆ ಕಾರ್ಯಕ್ರಮವನ್ನು ಹಿರಿಯ ಕಟ್ಟಡ ಕಾರ್ಮಿಕರೊಬ್ಬರಿಂದ ಉದ್ಘಾಟಿಸಲಾಯಿತು.  

ಭದ್ರಾವತಿ ಕ್ಷೇತ್ರದ ಸಮಸ್ಯೆಗಳ ನಿವಾರಣೆಗಾಗಿ ಓಂ ಶಕ್ತಿ ದೇವಿಗೆ ಹರಕೆ ಹೊತ್ತ ಶಾರದ ಅಪ್ಪಾಜಿ

ಇರುಮುಡಿ ಹೊತ್ತು ತಮಿಳುನಾಡಿನ ಮೇಲ್‌ಮರವತ್ತೂರು ದೇವಾಲಯಕ್ಕೆ ಪ್ರಯಾಣ

ಭದ್ರಾವತಿ ಕ್ಷೇತ್ರದಲ್ಲಿನ ಸಮಸ್ಯೆಗಳು ನಿವಾರಣೆಯಾಗುವ ಮೂಲಕ ಜನರು ಸಂಕಷ್ಟಗಳಿಂದ ಹೊರ ಬರಲಿ ಎಂಬ ಸಂಕಲ್ಪದೊಂದಿಗೆ ವಿಧಾನಸಭಾ ಚುನಾವಣೆ ಜೆಡಿಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿ ಓಂ ಶಕ್ತಿ ದೇವಿಯ ಇರುಮುಡಿ ಹೊತ್ತು ತಮಿಳುನಾಡಿನ ಮೇಲ್‌ಮರವತ್ತೂರು ದೇವಾಲಯಕ್ಕೆ ತೆರಳಿದ್ದಾರೆ.
    ಭದ್ರಾವತಿ, ಜ. ೨೩  :  ಕ್ಷೇತ್ರದಲ್ಲಿನ ಸಮಸ್ಯೆಗಳು ನಿವಾರಣೆಯಾಗುವ ಮೂಲಕ ಜನರು ಸಂಕಷ್ಟಗಳಿಂದ ಹೊರ ಬರಲಿ ಎಂಬ ಸಂಕಲ್ಪದೊಂದಿಗೆ ವಿಧಾನಸಭಾ ಚುನಾವಣೆ ಜೆಡಿಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿ ಓಂ ಶಕ್ತಿ ದೇವಿಯ ಇರುಮುಡಿ ಹೊತ್ತು ತಮಿಳುನಾಡಿನ ಮೇಲ್‌ಮರವತ್ತೂರು ದೇವಾಲಯಕ್ಕೆ ತೆರಳಿದ್ದಾರೆ.
    ಕಳೆದ ಕೆಲವು ದಿನಗಳಿಂದ ಮಡಿಬಟ್ಟೆಯೊಂದಿಗೆ ದೇವಿಯ ಆರಾಧನೆಯಲ್ಲಿ ತೊಡಗಿಸಿಕೊಂಡಿರುವ ಶಾರದ ಅಪ್ಪಾಜಿಯವರು ಶನಿವಾರ ಇರುಮುಡಿ ಹೊತ್ತು ಭಕ್ತರೊಂದಿಗೆ ಪ್ರಯಾಣ ಬೆಳೆಸಿದ್ದು, ಜ.೨೫ರಂದು ದೇವಿಗೆ ಇರುಮುಡಿ ಸಮರ್ಪಿಸಲಿದ್ದಾರೆ.
    ಶಾರದಾ ಅಪ್ಪಾಜಿ ಅವರೊಂದಿಗೆ ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಮಧು ಕುಮಾರ್ ಸೇರಿದಂತೆ ಪ್ರಮುಖರು, ಕಾರ್ಯಕರ್ತರು ಸಹ ದೇವಿಯ ದರ್ಶನಕ್ಕೆ ತೆರಳಿದ್ದಾರೆ. ನಗರದಲ್ಲಿ ಓಂ ಶಕ್ತಿ ದೇವಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಪ್ರತಿವರ್ಷ ಸಾವಿರಾರು ಭಕ್ತರು ಇರುಮುಡಿ ಹೊತ್ತು ದೇವಿಗೆ ಸಮರ್ಪಿಸುವ ಮೂಲಕ ಭಕ್ತಿ ಮೆರೆದಿದ್ದಾರೆ.


    ನೆಲಸಮಗೊಂಡ ಓಂಶಕ್ತಿ ದೇವಾಲಯ:
    ನಗರದ ಹುಡ್ಕೋ ಕಾಲೋನಿ ಬೈಪಾಸ್ ರಸ್ತೆಯಲ್ಲಿರುವ ಮೇಲ್‌ಮರವತ್ತೂರು ದೇವಾಲಯವನ್ನು ರಸ್ತೆ ಅಗಲೀಕರಣಕ್ಕಾಗಿ ಕಳೆದ ಕೆಲವು ಹಿಂದೆ ನೆಲಸಮಗೊಳಿಸಲಾಗಿದೆ. ದೇವಸ್ಥಾನ ಉಳಿಸಿಕೊಡುವಂತೆ ದೇವಸ್ಥಾನ ಸಮಿತಿಯವರು ಹಾಗು ಭಕ್ತರು ಸಂಸದ ಬಿ.ವೈ ರಾಘವೇಂದ್ರರಿಗೆ ಮನವಿ ಮಾಡಿದ್ದರು. ಆದರೆ ದೇವಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗದಿರುವುದು ವಿಪರ್ಯಾಸದ ಸಂಗತಿಯಾಗಿದೆ.