Thursday, February 9, 2023

ಪಕ್ಷವಿರಲಿ, ಸಂಘಟನೆ ಇರಲಿ, ಕುಟುಂಬವಿರಲಿ ಶಿಸ್ತು ಬಹಳ ಮುಖ್ಯ : ಡಿ.ಕೆ ಶಿವಕುಮಾರ್

ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಸಂಗಮೇಶ್ವರ್‌ಗೆ ಮಾತಿನ ಚಾಟಿ, ಕೇವಲ ಸ್ವಾಗತ ಭಾಷಣಕ್ಕೆ ಸೀಮಿತ

ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಜಾಧ್ವನಿ ಕಾರ್ಯಕ್ರಮದ ವೇದಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿದರು.
    ಭದ್ರಾವತಿ, ಫೆ. ೯ : ಯಾವುದೇ ಪಕ್ಷವಿರಲಿ, ಸಂಘಟನೆ ಇರಲಿ, ಕುಟುಂಬವಿರಲಿ ಶಿಸ್ತು ಬಹಳ ಮುಖ್ಯ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳುವ ಮೂಲಕ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮಾತಿನ ಚಾಟಿ ಬೀಸಿದರು.
    ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಜಾಧ್ವನಿ ಕಾರ್ಯಕ್ರಮದ ವೇದಿಕೆಯಲ್ಲಿ ಮಾತು ಆರಂಭಿಸಿದ ಡಿ.ಕೆ ಶಿವಕುಮಾರ್, ಇಲ್ಲಿನ ಶಾಸಕ ಸಂಗಮೇಶ್ವರ್ ಒಂದು ರೀತಿ ಹಸು ಇದ್ದ ಹಾಗೆ ಒದೆಯುವುದಿಲ್ಲ, ಆಯುವುದಿಲ್ಲ. ವೇದಿಕೆಯಲ್ಲಿ ಯಾರೋ ಗಲಾಟೆ ಮಾಡುತ್ತಿದ್ದಾರೆ ಅಲ್ಲಿ ಸ್ವಲ್ಪ ನೋಡಪ್ಪ ಎಂದರೆ ಇಲ್ಲಾ ಅಣ್ಣ ಅವರು ಕೋಪ ಮಾಡಿಕೊಂಡಿದ್ದಾರೆ ಎನ್ನುತ್ತಾರೆ. ಈ ರೀತಿ ಉತ್ತರ ಸರಿಯಲ್ಲ ಎಂದರು.
    ಯಾವುದೇ ಪಕ್ಷವಿರಲಿ, ಸಂಘಟನೆ ಇರಲಿ, ಕುಟುಂಬವಿರಲಿ ಶಿಸ್ತು ಬಹಳ ಮುಖ್ಯ. ನಮ್ಮ ಮನೆಗಳಲ್ಲಿ ಮಕ್ಕಳಿಗೆ ಹಿರಿಯರು ಶಿಸ್ತಿನ ಪಾಠ ಕಲಿಸುತ್ತಾರೆ. ಶಾಲೆಗಳಲ್ಲಿ ಶಿಕ್ಷಕರು ನಮಗೆ ಶಿಸ್ತಿನ ಪಾಠ ಕಲಿಸುತ್ತಾರೆ. ಇದೆ ರೀತಿ ಪಕ್ಷದ ಕಾರ್ಯಕರ್ತರಿಗೂ ಶಿಸ್ತಿನ ಪಾಠ ಕಲಿಸಬೇಕು. ಆಗ ಮಾತ್ರ ಪಕ್ಷಕ್ಕೆ ಒಂದು ಗೌರವವಿರುತ್ತದೆ ಎಂದು ಸಂಗಮೇಶ್ವರ್‌ಗೆ ಮಾತಿನ ಚಾಟಿ ಬೀಸಿದರು.
    ಸಂಗಮೇಶ್ವರ್ ಕೇವಲ ಸ್ವಾಗತ ಭಾಷಣಕ್ಕೆ ಸೀಮಿತ :
    ಡಿ.ಕೆ ಶಿವಕುಮಾರ್‌ರವರು ಬಿ.ಕೆ ಸಂಗಮೇಶ್ವರ್‌ಗೆ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಲು ಸಹ ಅವಕಾಶ ನೀಡಲಿಲ್ಲ. ಅವರು ಆಯ್ಕೆ ಮಾಡಿದ ವ್ಯಕ್ತಿಗಳು ಮಾತ್ರ ಜ್ಯೋತಿ ಬೆಳಗಿಸಿದರು. ಉಳಿದಂತೆ ಸಂಗಮೇಶ್ವರ್‌ಗೆ ಸ್ವಾಗತ ಕೋರಲು ಮಾತ್ರ ಅವಕಾಶ ನೀಡಲಾಗಿತ್ತು.  ವಿಐಎಸ್‌ಎಲ್ ಕಾರ್ಖಾನೆ ಮುಂಭಾಗ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲೂ ಸಹ ಸಂಗಮೇಶ್ವರ್‌ಗೆ ಮಾತನಾಡಲು ಅವಕಾಶ ನೀಡಲಿಲ್ಲ. ಇದರಿಂದಾಗಿ ಶಾಸಕರ ಬೆಂಬಲಿಗರು, ಅಭಿಮಾನಿಗಳಲ್ಲಿ ಸ್ವಲ್ಪಮಟ್ಟಿಗೆ ನಿರಾಸೆಯನ್ನುಂಟು ಮಾಡಿತು.
    ಯುವ ಕಾಂಗ್ರೆಸ್‌ಗೂ ಭದ್ರಾವತಿಗೂ ಒಂದು ರೀತಿಯ ನಂಟು : ನಲಪಾಡ್
    ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಲಪಾಡ್, ಯುವ ಕಾಂಗ್ರೆಸ್‌ಗೂ ಭದ್ರಾವತಿಗೂ ಒಂದು ರೀತಿಯ ನಂಟು ಬೆಳೆದಿದೆ. ರಾಷ್ಟ್ರೀಯ ಅಧ್ಯಕ್ಷರು ಇದೆ ಊರಿನವರು, ನಾನು ಸಹ ಇದೆ ಊರಿನವನು. ೧೯೬೮ ರಿಂದ ೭೮ರವರೆಗೆ ನಮ್ಮ ತಾತ ಎಂ.ಎ ಮಹಮದ್‌ರವರು ಅಂದಿನ ಪುರಸಭೆ ಅಧ್ಯಕ್ಷರಾಗಿ ಉತ್ತಮವಾಗಿ ಸೇವೆ ಸಲ್ಲಿಸಿದ್ದರು. ನಮ್ಮ ತಂದೆ ಹ್ಯಾರಿಸ್‌ರವರು ಪ್ರಸ್ತುತ ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮೊದಲು ೨೦೦೪ರಲ್ಲಿ ಎಂಪಿಎಂ ಕಾರ್ಖಾನೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಅವರು ಕಾರ್ಖಾನೆ ಉಳಿವಿಗಾಗಿ ಹೆಚ್ಚಿನ ಕಾಳಜಿ ವಹಿಸಿದ್ದರು.  ಇವರ ನಂತರ ಬಂದ ಅರಗಜ್ಞಾನೇಂದ್ರರವರು ಕಾರ್ಖಾನೆಯನ್ನು ಅರ್ಧ ಮುಳುಗಿಸಿದರು. ಪ್ರಸ್ತುತ ಕೇಂದ್ರ ಹಾಗು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಎಂಪಿಎಂ ಮತ್ತು ವಿಐಎಸ್‌ಎಲ್ ಕಾರ್ಖಾನೆಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿವೆ. ಇದನ್ನು ಕ್ಷೇತ್ರದ ಜನರು ಅರ್ಥ ಮಾಡಿಕೊಂಡು ಯಾವುದೇ ಕಾರಣಕ್ಕೂ ಮುಚ್ಚಲು ಅವಕಾಶನೀಡಬಾರದು. ಕಾರ್ಖಾನೆಗಳ ಉಳಿವಿಗಾಗಿ ಎಲ್ಲರೂ ಹೋರಾಟಕ್ಕೆ ಸಿದ್ದರಾಗಬೇಕೆಂದು ಮನವಿ ಮಾಡಿದರು.
    ಬಿಜೆಪಿ ನಾಯಕರ ಪ್ಯಾಂಟ್ ಕೆಳಗೆ ಬೀಳದಂತೆ ಎಚ್ಚರ ವಹಿಸಲು ಉಚಿತವಾಗಿ ಬೆಲ್ಟ್ ನೀಡುತ್ತೇವೆ: ಬಿ.ವಿ ಶ್ರೀನಿವಾಸ್  
    ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಮಾತನಾಡಿ, ಬಿಜೆಪಿ ನಾಯಕರು ನಮ್ಮ ಪಕ್ಷದ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದನ್ನು ಯುವ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಬಿಜೆಪಿ ನಾಯಕರ ಪ್ಯಾಂಟ್ ಆಗಾಗ ಕೆಳಗೆ ಬೀಳುತ್ತಿರುತ್ತದೆ. ನಲಪಾಡ್‌ರವರು ಅವರಿಗೆ ಉಚಿತವಾಗಿ ಬೆಲ್ಟ್‌ಗಳನ್ನು ತಲುಪಿಸಲಿದ್ದಾರೆ. ನಾವುಗಳು ಕೈಗಳಿಗೆ ಬಳೆ ತೊಟ್ಟುಕೊಂಡು ಕುಳಿತ್ತಿಲ್ಲ. ನಮ್ಮ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದರೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
    ವೇದಿಕೆಯಲ್ಲಿ ಪ್ರಮುಖರಾದ ಶಾಸಕ ಬಿ.ಕೆ ಸಂಗಮೇಶ್ವರ್, ಮಾಜಿ ಸಂಸದರಾದ ಕೆ.ಎಚ್ ಮುನಿಯಪ್ಪ, ಉಗ್ರಪ್ಪ, ಮಾಜಿ ಸಚಿವರಾದ ರೇವಣ್ಣ, ಮೋಟಮ್ಮ, ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್, ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಜಿ.ಎಚ್ ಶ್ರೀನಿವಾಸ್, ಕೆ.ಬಿ ಪ್ರಸನ್ನಕುಮಾರ್,  ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್,  ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾಕುಮಾರಿ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಟಿ. ಚಂದ್ರೇಗೌಡ, ಎಚ್.ಎಲ್ ಷಡಾಕ್ಷರಿ ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.

ಫೆ.೧೨ರಂದು ಐಕ್ಯತಾ ಜಾಗೃತಿ ಸಮಾವೇಶ

ಭದ್ರಾವತಿಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದಿಂದ ಫೆ.೧೨ರಂದು ಹಮ್ಮಿಕೊಳ್ಳಲಾಗಿರುವ ಐಕ್ಯತಾ ಜಾಗೃತಿ ಸಮಾವೇಶ ಕುರಿತು ರಾಜ್ಯಾಧ್ಯಕ್ಷ ವಿ. ವಿನೋದ್ ಮಾಹಿತಿ ನೀಡಿದರು.
    ಭದ್ರಾವತಿ, ಫೆ. ೯: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದಿಂದ ಫೆ.೧೨ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಸಿ.ಎನ್ ರಸ್ತೆ ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ತಾಲೂಕು ಮಟ್ಟದ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಐಕ್ಯತಾ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ವಿ. ವಿನೋದ್ ತಿಳಿಸಿದರು.
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಕ್ಕೂಟ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ನಿಟ್ಟಿನಲ್ಲಿ ಕಾರ್ಯೊನ್ಮುಖವಾಗಿದೆ. ಈ ಹಿನ್ನಲೆಯಲ್ಲಿ ಕಾರ್ಮಿಕರಿಗೆ ಜಾಗೃತಿ ಮೂಡಿಸಲು ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
    ಸಮಾವೇಶದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಯದಲ್ಲಿ ಉತ್ತಮ ಸೇವೆ ಸಲ್ಲಿಸಿದ ಕಾರ್ಮಿಕರಿಗೆ ಗೌರವ, ಸನ್ಮಾನ ಹಾಗು ಪ್ರಶಸ್ತಿ ನೀಡಲಾಗುವುದು. ಅಲ್ಲದೆ ಆಯ್ಕೆಯಾದ ಫಲಾನುಭವಿಗಳಿಗೆ ಫ್ಲಂಬರ್ ಕಿಟ್, ಎಲೆಕ್ಟ್ರಿಷನ್ ಕಿಟ್ ಹಾಗು ಮಹಿಳಾ ಪೌಷ್ಠಿಕಾಂಶ ಕಿಟ್, ನೊಂದಾಯಿತ ಫಲಾನುಭವಿಯ ಗುರುತಿನ ಚೀಟಿ ಹಾಗು ಒಕ್ಕೂಟದ ಸದಸ್ಯತ್ವ ಗುರುತಿನ ಚೀಟಿ ವಿತರಿಸಲಾಗುವುದು ಎಂದರು.
    ಸಮಾವೇಶದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ಸಹ ಕಾರ್ಯದರ್ಶಿ ಸುಶೀಲಮ್ಮ, ನಗರ ಅಧ್ಯಕ್ಷ ಪಳನಿ, ಉಪಾಧ್ಯಕ್ಷ ಶ್ರೀಕಾಂತ, ಕಾರ್ಯಾಧ್ಯಕ್ಷ ಮಧು, ಮಹಿಳಾ ಘಟಕದ ಅಧ್ಯಕ್ಷೆ ಸಂಧ್ಯಾ, ತಾಲೂಕು ಅಧ್ಯಕ್ಷ ಮೋಹನ್, ಉಪಾಧ್ಯಕ್ಷರಾದ ಜಯಣ್ಣ, ರಮೇಶ್, ತಾಲೂಕು ಕಾರ್ಯದರ್ಶಿ ಆಶೀರ್ವಾದ್, ಗ್ರಾಮಾಂತರ ಕಾರ್ಯದರ್ಶಿ ಸಂದೇಶ್ ಪೈ, ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜು ಮತ್ತು ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, February 8, 2023

ಶಿಕ್ಷಣಕ್ಕೆ ಶುಲ್ಕ ಪಾವತಿಸಿದರೂ ಇಡಿ ನೋಟಿಸ್ : ಡಿ.ಕೆ ಶಿವಕುಮಾರ್ ಅಸಮಧಾನ

ಭದ್ರಾವತಿಯಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿದರು.
    ಭದ್ರಾವತಿ, ಫೆ. ೮ : ಮಗಳ ಶಿಕ್ಷಣಕ್ಕೆ ಶುಲ್ಕ ಪಾವತಿಸಿದ ವಿಚಾರಕ್ಕೂ ಸಹ ಇಡಿ ಯಿಂದ ನೋಟಿಸ್ ನೀಡಲಾಗಿದ್ದು, ನನಗೆ ವಿನಾಕಾರಣ ಕಿರುಕುಳ ನೀಡುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
    ಅವರು ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದೆಂಬ ದುರುದ್ದೇಶದಿಂದ ಇಡಿ ಯಿಂದ ನನ್ನ ಮಗಳಿಗೆ ನೋಟಿಸ್ ನೀಡಲಾಗಿದೆ.  ಫೆ.೨೭ರಂದು ವಿಚಾರಣೆಗೆ ನನ್ನ ಮಗಳು ತೆರಳಲಿದ್ದು, ಇದರಿಂದ ನನಗೆ ತುಂಬಾ ಬೇಸರವಾಗುತ್ತಿದೆ. ನನ್ನ ಹಾಗು ಕುಟುಂಬ ಸದಸ್ಯರ ಮೇಲೆ ಪದೇ ಪದೇ ಇಡಿ ದಾಳಿ ನಡೆಸುತ್ತಿರುವುದು ಮನಸ್ಸಿಗೆ ತುಂಬಾ ಅಸಮಾಧಾನ ಉಂಟು ಮಾಡುತ್ತಿದೆ ಎಂದರು.
    ಬಿಎಸ್‌ವೈ ಕುಟುಂಬಕ್ಕೆ ಮತ ಕೇಳುವ ನೈತಿಕತೆ ಇಲ್ಲ:
    ಚುನಾವಣೆ ಸಂದರ್ಭದಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪುನಶ್ಚೇತನಗೊಳಿಸುವುದಾಗಿ ಬಿ.ಎಸ್ ಯಡಿಯೂರಪ್ಪ ಹಾಗು ಸಂಸದ ಬಿ.ವೈ ರಾಘವೇಂದ್ರ ಭರವಸೆ ನೀಡಿದ್ದರು. ಆದರೆ ಅವರು ಕಾರ್ಖಾನೆ ಪುನಶ್ಚೇತನಗೊಳಿಸುವಲ್ಲಿ, ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಜಿಲ್ಲೆಯಲ್ಲಿ ಮತ ಕೇಳುವ ನೈತಿಕತೆ ಕಳೆದುಕೊಂಡಿದ್ದಾರೆಂದರು.  

ನೀಡಿದ ಭರವಸೆ ಈಡೇರಿಸುವ ಪಕ್ಷ ಕಾಂಗ್ರೆಸ್ : ಸಂಗಮೇಶ್ವರನ್ನು ಗೆಲ್ಲಿಸಿ

ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್

ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಜಾಧ್ವನಿ ಕಾರ್ಯಕ್ರಮ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಉದ್ಘಾಟಿಸಿದರು.
    ಭದ್ರಾವತಿ, ಫೆ. ೮ :  ನೀಡಿದ ಭರವಸೆ ಈಡೇರಿಸುವ ಪಕ್ಷ ಕಾಂಗ್ರೆಸ್. ಈ ಬಾರಿ ನಮ್ಮ ಭರವಸೆಗಳಿಗೆ ಗ್ಯಾರಂಟಿ ನೀಡುತ್ತಿದ್ದು, ಇದೊಂದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.  
    ಅವರು ಬುಧವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಜಾಧ್ವನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಜನರಿಗೆ ಬಿಜೆಪಿ ಪಕ್ಷ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದ್ದು, ಇದುವರೆಗೂ ತನ್ನ ಭರವಸೆಗಳನ್ನು ಈಡೇರಿಸಿಲ್ಲ. ಕೇವಲ ಸುಳ್ಳು ಭರವಸೆಗಳನ್ನು ನೀಡುವ ಪಕ್ಷವಾಗಿದೆ. ಆದರೆ ಕಾಂಗ್ರೆಸ್ ಪಕ್ಷ ಜನರಿಗೆ ಎಂದಿಗೂ ಸುಳ್ಳು ಭರವಸೆಗಳನ್ನು ನೀಡಿಲ್ಲ. ಜಗಜ್ಯೋತಿ ಬಸವಣ್ಣ, ಕನಕದಾಸರು, ಶಿಶುನಾಳ ಷರೀಫ, ರಾಷ್ಟ್ರಕವಿ ಕುವೆಂಪು ಸೇರಿದಂತೆ ಮಹಾನ್ ಆದರ್ಶ ವ್ಯಕ್ತಿಗಳ ನಾಡಿನಲ್ಲಿ ಇದೀಗ ಕಾಂಗ್ರೆಸ್ ತನ್ನ ಭರವಸೆಗಳಿಗೆ ಗ್ಯಾರಂಟಿ ಕಾರ್ಡ್ ನೀಡುತ್ತಿದೆ. ಒಂದು ವೇಳೆ ನಮ್ಮ ಭರವಸೆಗಳು ಸುಳ್ಳಾದರೇ ಅದನ್ನು ಜನರು ಪ್ರಶ್ನಿಸುವಂತಾಗಲಿ ಎಂದರು.
    ಅಡುಗೆ ಅನಿಲ, ಬೇಳೆಕಾಳು, ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಜನರ ದಿನನಿತ್ಯದ ಬದುಕು ಕಷ್ಟಕರವಾಗಿದ್ದು, ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಜನರ ಧ್ವನಿಯನ್ನು ಅಡಗಿಸುವ ಮೂಲಕ ತಮ್ಮ ಹೋರಾಟದ ಶಕ್ತಿಯನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿವೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಜನರ ಧ್ವನಿಯಾಗಿ ಶಕ್ತಿ ತುಂಬುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರಜಾಧ್ವನಿ ಕೈಗೊಂಡಿದೆ ಎಂದರು.
    ಕ್ಷೇತ್ರದ ಪ್ರತಿಯೊಂದು ಮನೆಗೂ ಗ್ಯಾರಂಟಿ ಕಾರ್ಡ್ ನೀಡಿ:
    ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ೨೦೦ ಯುನಿಟ್ ವಿದ್ಯುತ್ ಉಚಿತ, ಆಮೂಲಕ ಇನ್ನು ಮುಂದೆ ನೀವು ೨೦೦ ಯುನಿಟ್ ಒಳಗೆ ವಿದ್ಯುತ್ ಬಳಸಿದರೆ ಯಾರೂ ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿಲ್ಲ. ಪ್ರತಿ ಮನೆ ಯಜಮಾನಿಗೆ ೨೦೦೦ ರೂ. ಪ್ರತಿ ತಿಂಗಳು ಕೊಡುತ್ತೇವೆ. ವರ್ಷಕ್ಕೆ ಒಟ್ಟು ೪೨ ಸಾವಿರದಂತೆ ೫ ವರ್ಷಕ್ಕೆ ೨ ಲಕ್ಷ ಕೊಡುತ್ತೇವೆ. ಜತೆಗೆ ೧೦ ಕೆಜಿ ಅಕ್ಕಿ ನೀಡುತ್ತೇವೆ. ಇದು ಸುಳ್ಳಿನ ಭರವಸೆಯಲ್ಲ. ನಾನು ಹಾಗು ಸಿದ್ದರಾಮಯ್ಯ ಸಹಿ ಹಾಕಿರೋ ಗ್ಯಾರಂಟಿ ಕಾರ್ಡ್ ನೀಡುತ್ತೇವೆ. ಸಂಗಮೇಶ್ವರ್‌ರವರು ಈ ಗ್ಯಾರಂಟಿ ಕಾರ್ಡ್ ಪ್ರತಿ ಮನೆ ಮನೆಗೂ ತಲುಪಿಸಬೇಕು.  ಕಾರ್ಡ್‌ನ ಒಂದು ಭಾಗದಲ್ಲಿ  ಸಹಿ ಪಡೆದು ಕತ್ತರಿಸಿದ ಭಾಗವನ್ನು ಹಿಂಪಡೆಯಬೇಕೆಂದರು.
    ಸಂಗಮೇಶ್ವರನ್ನು ಗೆಲ್ಲಿಸಿ, ನೀವು ಹಾಕುವ ಮತದ ಶಬ್ದ ದೆಹಲಿಗೆ ಕೇಳಿಸಲಿ:
    ಈ ಕ್ಷೇತ್ರದ ಜನರು ಸಂಗಮೇಶ್ವರನ್ನು ಕಳೆದ ಚುನಾವಣೆಯಲ್ಲಿ ಗೆಲ್ಲಿಸಿದ್ದು, ಕಳೆದ ಬಾರಿ ನಮ್ಮ ಸರ್ಕಾರ ಉತ್ತಮ ಆಡಳಿತ ನೀಡಿದ್ದರೂ, ಜನ ನಮ್ಮ ಮೇಲೆ ವಿಶ್ವಾಸ ಇಡದೆ ಕೇವಲ ೮೦ ಸ್ಥಾನ ನೀಡಿದರು. ದಳದವರು ೩೮ ಸೀಟು ಗೆದ್ದಿದ್ದರು. ಆದರೂ ನಾವು ಕುಮಾರಸ್ವಾಮಿ ಅವರಿಗೆ ಸರ್ಕಾರ ನಡೆಸಲು ಬೆಂಬಲ ನೀಡಿದ್ದೆವು. ಅವರು ಸರ್ಕಾರ ಉಳಿಸಿಕೊಳ್ಳಲು ಆಗಲಿಲ್ಲ. ಅವರ ಹೇಳಿಕೆ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಆದರೆ ಈ ರಾಜ್ಯದಲ್ಲಿ ಜನತಾ ದಳ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದರು.
    ಬಿಜೆಪಿ ಪಕ್ಷ ಇದುವರೆಗೂ ಕೇವಲ ಸುಳ್ಳಿನ ಭರವಸೆಗಳನ್ನು ನೀಡಿದೆ. ಈ ಹಿನ್ನಲೆಯಲ್ಲಿ ಇಲ್ಲಿ ನೀವು ಮತ ಹಾಕುವಾಗ ಬರುವ ಶಬ್ಧ ದೆಹಲಿಗೆ ಕೇಳಿಸಬೇಕು. ಇಲ್ಲಿ ಸಂಗಮೇಶ್ ಗೆಲ್ಲಿಸಬೇಕು, ಮೋದಿಯನ್ನು ಹಾರಿಸಬೇಕು. ಯಡಿಯೂರಪ್ಪನವರನ್ನು ಅವರ ಪಕ್ಷದವರೇ ಹಾರಿಸಿದ್ದಾರೆ ಎಂದರು.
    ಸರ್ವಧರ್ಮಿಯರ ಕ್ಷೇತ್ರ : ನೀತಿ ಮೇಲೆ ರಾಜಕಾರಣ
  ಕ್ಷೇತ್ರದಲ್ಲಿ ಒಕ್ಕಲಿಗರು, ಲಿಂಗಾಯತರು, ಮುಸಲ್ಮಾನರು, ಪರಿಶಿಷ್ಟ ಜಾತಿ/ಪಂಗಡದವರು ಸೇರಿದಂತೆ ಎಲ್ಲ ವರ್ಗದವರೂ ಇದ್ದಾರೆ. ಇಲ್ಲಿ ಜಾತಿ ಮೇಲೆ ರಾಜಕಾರಣ ಮಾಡಿದರೆ ಪ್ರಯೋಜನವಿಲ್ಲ. ನೀತಿ ಮೇಲೆ ರಾಜಕಾರಣ ಮಾಡಬೇಕು. ನಾವು ಹುಟ್ಟುವಾಗ ಇಂತಹುದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಲ್ಲ. ಕಾಂಗ್ರೆಸ್ ಎಲ್ಲ ಜಾತಿ ಹಾಗೂ ವರ್ಗದ ಪಕ್ಷ. ಎಲ್ಲರಿಗೂ ರಕ್ಷಣೆ ನೀಡುತ್ತಾ ಬಂದಿದ್ದೇವೆ ಎಂದರು.
    ವಿಐಎಸ್‌ಎಲ್-ಎಂಪಿಎಂ ಕಾರ್ಖಾನೆಗಳಿಗೆ ಬಂಡವಾಳ ಹೂಡಿಕೆಯಾಕಿಲ್ಲ ?
    ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಈ ಜಿಲ್ಲೆಯಲ್ಲಿ ಬೇಕಾದಷ್ಟು ಕೆಲಸ ಮಾಡಿದ್ದಾರೆ ಎಂದು ಹೇಳುತ್ತಾರೆ. ಆದರೆ ರಾಜ್ಯ ಸರ್ಕಾರ ನಡೆಸಿದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ೧೦ ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿದೆ ಎಂದು ಹೇಳಿದ್ದು, ಅದರಲ್ಲಿ ಎಷ್ಟು ಕೋಟಿ ಬಂಡವಾಳ ಶಿವಮೊಗ್ಗ ಜಿಲ್ಲೆಯಲ್ಲಿ ಹೂಡಿಕೆಯಾಗಲಿದೆ ಎಂದು ಬಿಜೆಪಿಯವರು ಉತ್ತರಿಸಲಿ. ಈ ಕ್ಷೇತ್ರದಲ್ಲಿ ವಿಐಎಸ್‌ಎಲ್ ಹಾಗೂ ಎಂಪಿಎಂ ಕಾರ್ಖಾನೆ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದೀರಿ. ಕೇಂದ್ರ ಸರ್ಕಾರ ವಿಐಎಸ್‌ಎಲ್ ಕಾರ್ಖಾನೆ ಮಾರಲು ಆಹ್ವಾನ ನೀಡಿದರೂ ಯಾರೊಬ್ಬರೂ ಮುಂದೆ ಬಂದಿಲ್ಲ ಯಾಕೆ ಎಂದು ಪ್ರಶ್ನಿಸಿದರು.
    ಸಿ.ಎಂ ಇಬ್ರಾಹಿಂ ಕಾಂಗ್ರೆಸ್ ಬೆಂಬಲಿಸಲಿ:
    ಕಮಲ ಕೆರೆಯಲ್ಲಿದ್ದರೆ ಚೆನ್ನ, ತೆನೆ ಹೊಲದಲ್ಲಿದ್ದರೆ ಚೆನ್ನ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಅದಕ್ಕಾಗಿ ರಾಜ್ಯದಲ್ಲಿ ಬದಲಾವಣೆ ಮಾಡಬೇಕು.  ನಿಮ್ಮ ಹೃದಯದದಲ್ಲಿ ಜಾತ್ಯಾತೀತ ತತ್ವವಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ನಿಮಗೆ ಗೊತ್ತಿದೆ. ಕುಮಾರಣ್ಣ ಏನಾದರೂ ಹೇಳಲಿ. ನೀವು ಕಾಂಗ್ರೆಸ್ ಪಕ್ಷ ಬೆಂಬಲಿಸಿದರೆ ರಾಜ್ಯ ಹಾಗು ಎಲ್ಲಾ ಸಮಾಜದವರು ಉಳಿಯುತ್ತಾರೆ.
    ಬಿ.ವಿ ಶ್ರೀನಿವಾಸ್‌ಗೆ ಉತ್ತಮ ಭವಿಷ್ಯವಿದೆ :
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ನಿಮ್ಮ ಮನೆ ಮಗ ಎಂಬುದು ಹೆಮ್ಮೆಯ ವಿಚಾರವಾಗಿದೆ. ಅವರು ಕೋವಿಡ್ ಸಂದರ್ಭದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಜನರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವ ಜೊತೆಗೆ ದೆಹಲಿಯಲ್ಲಿ ಕೂತು ಆಕ್ಸಿಜನ್ ಕೊಡಿಸಿ ಜೀವ ಉಳಿಸಿದ್ದರು. ಹೀಗಾಗಿ ಅವರನ್ನು ಆಕ್ಸಿಜನ್ ಮ್ಯಾನ್ ಎಂದು ಕರೆದರು. ಅವರು ದೇಶದ ಯಾವುದೇ ಮೂಲೆಯಲ್ಲಿರಲಿ ಇಂದು ಅವರನ್ನು ಜನರು ಗುರುತಿಸುತ್ತಾರೆ. ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ ಎಂದರು.  
    ವೇದಿಕೆಯಲ್ಲಿ ಪ್ರಮುಖರಾದ ಶಾಸಕ ಬಿ.ಕೆ ಸಂಗಮೇಶ್ವರ್, ಮಾಜಿ ಸಂಸದ ಕೆ.ಎಚ್ ಮುನಿಯಪ್ಪ, ಉಗ್ರಪ್ಪ, ಮಾಜಿ ಸಚಿವ ರೇವಣ್ಣ, ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್, ರಾಜ್ಯಾಧ್ಯಕ್ಷ ನಲಪಾಡ್, ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಜಿ.ಎಚ್ ಶ್ರೀನಿವಾಸ್, ಕೆ.ಬಿ ಪ್ರಸನ್ನಕುಮಾರ್,  ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್,  ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾಕುಮಾರಿ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.

ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ, ವಿಐಎಸ್‌ಎಲ್-ಎಂಪಿಎಂ ಉಳಿಸುವುದು ನನ್ನ ಜವಾಬ್ದಾರಿ : ಡಿ.ಕೆ ಶಿವಕುಮಾರ್

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ೨೧ನೇ ದಿನದ ಮುಷ್ಕರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.
    ಭದ್ರಾವತಿ, ಫೆ. ೮: ಈ ಬಾರಿ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಕಾಂಗ್ರೆಸ್ ಸರ್ಕಾರ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಪುನಃ ಕೇಂದ್ರ ಸರ್ಕಾರದಿಂದ ಹಿಂಪಡೆದು ಅಭಿವೃದ್ಧಿಪಡಿಸುವುದಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಾರ್ಮಿಕರಿಗೆ ಭರವಸೆ ನೀಡಿದರು.
    ಅವರು ಬುಧವಾರ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ೨೧ನೇ ದಿನದ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.
    ಜವಾಹರ್‌ಲಾಲ್ ನೆಹರುರವರು ದೇಶದಲ್ಲಿ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳ ಸ್ಥಾಪನೆಗೆ ಹೆಚ್ಚಿನ ಮಹತ್ಮ ನೀಡುವ ಮೂಲಕ ನಮಗೆ ಅಗತ್ಯವಿರುವ ವಸ್ತುಗಳನ್ನು ನಾವೇ ಉತ್ಪಾದಿಸಿಕೊಳ್ಳುವ ಜೊತೆಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದರು. ದೇಶಾದ್ಯಂತ ಕೈಕಾರಿಕಾ ಕ್ರಾಂತಿ ನಿರ್ಮಾಣವಾಗಿತ್ತು. ಆದರೆ ಇಂದಿನ ಬಿಜೆಪಿ ಸರ್ಕಾರ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳನ್ನು ಮುಚ್ಚುವ ಮೂಲಕ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಉಂಟು ಮಾಡುತ್ತಿದೆ ಎಂದು ಆರೋಪಿಸಿದರು.
    ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾರ್ಖಾನೆಗೆ ಅಗತ್ಯವಿರುವ ಗಣಿ ಮಂಜೂರಾತಿ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು  ಮಾಡಿತ್ತು. ಆದರೆ ಈ ಗಣಿಯನ್ನು ಕಾರ್ಖಾನೆ ಹೆಸರಿಗೆ ನೋಂದಾಯಿಸಿಕೊಳ್ಳಲು ಇವರಿಗೆ ಸಾಧ್ಯವಾಗಿಲ್ಲ. ಉಳಿದಂತೆ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸುವ ವಿಚಾರದಲ್ಲೂ ಸುಳ್ಳು ಆಶ್ವಾಸನೆಗಳನ್ನು ನೀಡಲಾಗಿದೆ. ಕೇಂದ್ರದಿಂದ ಒಬ್ಬ ಸಚಿವರನ್ನು ಕರೆತಂದು ೬ ಸಾವಿರ ಕೋ. ರು. ಹಾಗು ಮತ್ತೊಬ್ಬ ಸಚಿವರಿಂದ ೧ ಸಾವಿರ ಕೋ. ರು. ಬಂಡವಾಳ ತೊಡಗಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೂ ಬಂಡವಾಳ ಹೂಡದೆ ನಿರ್ಲಕ್ಷ್ಯತನ ವಹಿಸಲಾಗಿದೆ ಎಂದು ಆರೋಪಿಸಿದರು.
    ಕಾರ್ಖಾನೆ ಉಳಿಸಿಕೊಳ್ಳುವುದು ದೊಡ್ಡ ವಿಷಯವಲ್ಲ. ಸುಮಾರು ೧೬೦೦ ಎಕರೆ ಭೂಮಿ, ರಸ್ತೆ, ನೀರು ಸೇರಿದಂತೆ ಮೂಲ ಸೌಲಭ್ಯಗಳು ಈ ವ್ಯಾಪ್ತಿಯಲ್ಲಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿಯಾಗಿದೆ. ನಾವು ಎಂದಿಗೂ ನಿಮ್ಮ ಪರವಾಗಿ ಇರುತ್ತೇವೆ. ನೀವು ಸಹ ನಮ್ಮ ಪರವಾಗಿರಿ. ಇದೊಂದು ರೀತಿಯ ಒಪ್ಪಂದವಾಗಿದೆ. ಕಾರ್ಮಿಕರು ಯಾರು ಸಹ ಧೈರ್ಯ ಕಳೆದುಕೊಳ್ಳಬಾರದು. ನಿವೃತ್ತ ಕಾರ್ಮಿಕರು ಮನೆಗಳನ್ನು ಖಾಲಿ ಮಾಡುವ ಅಗತ್ಯವಿಲ್ಲ. ಒಂದು ವೇಳೆ ಹೋರಾಟ ಮಾಡುವ ಅನಿವಾರ್ಯತೆ ನಿರ್ಮಾಣವಾದಲ್ಲಿ ನಿಮ್ಮ ಪರ ಹೋರಾಟಕ್ಕೂ ಸಹ ಸಿದ್ದವಾಗಿದ್ದೇನೆ ಎಂದರು.
    ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಮಾತನಾಡಿ, ನಾನು ಇದೆ ಊರಿನಲ್ಲಿ ಹುಟ್ಟಿ ಬೆಳೆದಿದ್ದೇನೆ. ಈ ಕಾರ್ಖಾನೆಯನ್ನು ಅವಲಂಬಿಸಿರುವ ಕುಟುಂಬಗಳಲ್ಲಿ ನಾನು ಸಹ ಒಬ್ಬನಾಗಿದ್ದೇನೆ. ಭವ್ಯ ಪರಂಪರೆ ಹೊಂದಿರುವ, ಸಮೃದ್ಧಿಯಿಂದ ಕೂಡಿರುವ ಈ ಕಾರ್ಖಾನೆಯನ್ನು ಮುಚ್ಚಲು ಸ್ಪಷ್ಟವಾದ ಕಾರಣಗಳಿಲ್ಲ.  ವಾಸ್ತವಾಗಿ ಈ ಕಾರ್ಖಾನೆಯಲ್ಲಿ ೨೫೦ಕ್ಕೂ ಹೆಚ್ಚು ಕಾಯಂ ಕಾರ್ಮಿಕರು, ಸುಮಾರು ೧೫೦೦ ಗುತ್ತಿಗೆ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಾರ್ಷಿಕ ೪೫೦ ಕೋ.ರು. ಲಾಭದಲ್ಲಿ ಮುನ್ನಡೆಯುತ್ತಿದೆ. ಆದರೆ ಕೇಂದ್ರ ಸರ್ಕಾರಕ್ಕೆ ಕೇವಲ ೧೦೦ ಜನ ಮಾತ್ರ ಕಾರ್ಮಿಕರಿದ್ದು, ನಷ್ಟದಲ್ಲಿ ಸಾಗುತ್ತಿದೆ ಎಂದು ಸುಳ್ಳು ವರದಿಗಳನ್ನು ನೀಡಲಾಗಿದೆ.  ಈ ಕಾರ್ಖಾನೆಯನ್ನು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡಿ ಹಣ ಲೂಟಿ ಮಾಡುವ ಕುತಂತ್ರ  ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
    ನಮ್ಮ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಈ ಹಿನ್ನಲೆಯಲ್ಲಿ ನಾನು ಈ ಊರಿನ ಒಬ್ಬ ಕಾರ್ಮಿಕನಾಗಿ ಪಕ್ಷದ ರಾಜ್ಯಧ್ಯಕ್ಷರಾದ ಡಿ.ಕೆ ಶಿವಕುಮಾರ್‌ರವರಿಗೆ ಕಾರ್ಖಾನೆ ಉಳಿಸಿ ಅಭಿವೃದ್ಧಿಗೊಳಿಸುವಂತೆ ಮನವಿ ಮಾಡುತ್ತಿದ್ದೇನೆ. ಅವರು ನನ್ನ ಮನವಿಗೆ ಪೂರಕವಾಗಿ ಸ್ಪಂದಿಸಲಿದ್ದಾರೆಂಬ ವಿಶ್ವಾಸವಿದೆ ಎಂದರು.
    ವೇದಿಕೆಯಲ್ಲಿ ಪ್ರಮುಖರಾದ ಶಾಸಕ ಬಿ.ಕೆ ಸಂಗಮೇಶ್ವರ್, ಮಾಜಿ ಸಂಸದ ಕೆ.ಎಚ್ ಮುನಿಯಪ್ಪ, ಉಗ್ರಪ್ಪ, ಮಾಜಿ ಸಚಿವ ರೇವಣ್ಣ, ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್,  ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಣಿಶೇಖರ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಟಿ ನಾಗರಾಜ್, ಪಕ್ಷದ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಜಿ. ಪಲ್ಲವಿ ಹಾಗು ಗುತ್ತಿಗೆ ಕಾರ್ಮಿಕ ಸಂಘಟನೆಗಳ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


"ಇಲ್ಲಿ ಕಬ್ಬಿಣ ಉತ್ಪಾದಿಸಲಾಗುತ್ತದೆ. ಈ ಕಬ್ಬಿಣ ಬಳಸಿ ಕತ್ತರಿ ತಯಾರಿಸಬಹುದು, ಸೂಜಿ ತಯಾರಿಸಬಹುದು. ಬಿಜೆಪಿ ಈ ಕಾರ್ಖಾನೆ ಹಾಗು ಕಾರ್ಮಿಕರ ಪಾಲಿಗೆ ಕತ್ತರಿಯಾಗಿದೆ. ಕಾಂಗ್ರೆಸ್ ಸೂಜಿಯಾಗಿದ್ದು, ಎಲ್ಲರನ್ನು ಸೇರಿಸುವ ಹೊಲಿಗೆಯಾಗಿದೆ. ಈ ಹಿನ್ನಲೆಯಲ್ಲಿ ಕಾರ್ಮಿಕರು ಆತಂಕ ಪಡುವ ಅಗತ್ಯವಿಲ್ಲ. ಮೊದಲು ಕಾರ್ಖಾನೆ ಉಳಿಯಬೇಕು. ಕಾರ್ಖಾನೆ ಉಳಿದರೆ ಕಾರ್ಮಿಕರು. ಜೀವ ಉಳಿದರೆ ಮುನುಷ್ಯ. ಜೀವ ಇಲ್ಲದಿದ್ದರೆ ಏನನ್ನು ಸಹ ಮಾಡಲು ಸಾಧ್ಯವಿಲ್ಲ."
                                                                                                 -ಡಿ.ಕೆ ಶಿವಕುಮಾರ್, ಅಧ್ಯಕ್ಷರು, ಕೆಪಿಸಿಸಿ


Tuesday, February 7, 2023

ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ : ವಿಐಎಸ್ ಎಲ್ ಎಂಪಿಎಂ ಉಳಿಸುವ ಪ್ರಯತ್ನ

   ಭದ್ರಾವತಿ, ಫೆ. 8:  ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಸಂಪೂರ್ಣ ವಿಶ್ವಾಸವಿದ್ದು, ನಗರದ ವಿಐಎಸ್ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲಾಗುವುದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
    ಅವರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ವ್ಯಾಪಕ ಜನ ಬೆಂಬಲ ವ್ಯಕ್ತವಾಗುತ್ತಿದೆ ಸುಮಾರು 150 ಸ್ಥಾನಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ವಿಐಎಸ್ಎಲ್ ಕಾರ್ಖಾನೆ ಪುನಶ್ಚೇತನಗೊಳಿಸುವುದಾಗಿ   ಬಿ.ಎಸ್ ಯಡಿಯೂರಪ್ಪನವರು ಶಿವಮೊಗ್ಗ  ಜಿಲ್ಲೆಯ ಜನರಿಗೆ ಭರವಸೆ ನೀಡಿದ್ದರು. ಆದರೆ ಅವರು ತಮ್ಮ ಮಾತನ್ನು ಉಳಿಸಿಕೊಂಡಿಲ್ಲ.  ಹಿನ್ನೆಲೆಯಲ್ಲಿ ಅವರಿಗೆ  ಈ ಬಾರಿ ಜಿಲ್ಲೆಯಲ್ಲಿ ಮತ ಕೇಳುವ ನೈತಿಕತೆ ಇಲ್ಲ ಎಂದರು. 
       ಶಾಸಕರಾದ ಬಿ.ಕೆ ಸಂಗಮೇಶ್ವರ,  ಎನ್.ಎ ಹ್ಯಾರಿಸ್, ಸಲೀಂ ಅಹಮದ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಗೋಪಾಲ ಕೃಷ್ಣ ಬೇಲೂರು  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
 

೨೦ ದಿನ ಪೂರೈಸಿದ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟ : ಪ್ರಗತಿಪರ ಸಂಘಟನೆಗಳಿಂದ ತುರ್ತು ಸಭೆ

ಭದ್ರಾವತಿಯಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಮಂಗಳವಾರ ೨೦ನೇ ದಿನ ಪೂರೈಸಿದ್ದು, ಈ ನಡುವೆ ಹೋರಾಟದ ದಿಕ್ಕು ತಪ್ಪಿಸಲಾಗುತ್ತಿದೆ ಎಂಬ ಆತಂಕ ಇದೀಗ ಪ್ರಗತಿಪರ ಸಂಘಟನೆಗಳಲ್ಲಿ ಎದುರಾಗಿದೆ. ಈ ಹಿನ್ನಲೆಯಲ್ಲಿ ಮಂಗಳವಾರ ಸಂಜೆ ತುರ್ತು ಸಭೆ ನಡೆಸಲಾಯಿತು.
    ಭದ್ರಾವತಿ, ಫೆ. ೭ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಮಂಗಳವಾರ ೨೦ನೇ ದಿನ ಪೂರೈಸಿದ್ದು, ಈ ನಡುವೆ ಹೋರಾಟದ ದಿಕ್ಕು ತಪ್ಪಿಸಲಾಗುತ್ತಿದೆ ಎಂಬ ಆತಂಕ ಇದೀಗ ಪ್ರಗತಿಪರ ಸಂಘಟನೆಗಳಲ್ಲಿ ಎದುರಾಗಿದೆ. ಈ ಹಿನ್ನಲೆಯಲ್ಲಿ ಮಂಗಳವಾರ ಸಂಜೆ ತುರ್ತು ಸಭೆ ನಡೆಸಲಾಯಿತು.
    ಪ್ರಗತಿಪರ ಸಂಘಟನೆಯ ಪ್ರಮುಖರಾದ ಸುರೇಶ್ ಸಭೆಯಲ್ಲಿ ಮಾತನಾಡಿ, ಗುತ್ತಿಗೆ ಕಾರ್ಮಿಕರು ಕಳೆದ ೨೦ ದಿನಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಇದಕ್ಕೆ ಪೂರಕವಾದ ಪ್ರತಿಕ್ರಿಯೆ ಯಾರಿಂದಲೂ ವ್ಯಕ್ತವಾಗುತ್ತಿಲ್ಲ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷ ಸೇರಿದಂತೆ ರಾಜಕೀಯ ಪಕ್ಷಗಳು ಹೋರಾಟವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಹೋರಾಟ ದಿಕ್ಕು ತಪ್ಪುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ನಾವುಗಳು ಜಾಗೃತರಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದರು.
    ರೈತ ಮುಖಂಡ ಯಶವಂತರಾವ್ ಘೋರ್ಪಡೆ ಮಾತನಾಡಿ, ಕಾರ್ಖಾನೆಗಳ ಅಭಿವೃದ್ಧಿ ವಿಚಾರದಲ್ಲಿ ಆಯಾ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ.  ರಾಜಕಾರಣವೇ ಕಾರ್ಖಾನೆಗಳ ಇಂದಿನ ಸ್ಥಿತಿಗೆ ಮೂಲ ಕಾರಣವಾಗಿದ್ದು, ಆಯಾ ಪಕ್ಷಗಳು ತಮ್ಮದೇ ಆದ ಧೋರಣೆಗಳನ್ನು ಹೊಂದಿವೆ. ರಾಜ್ಯ ಮತ್ತು ಕೇಂದ್ರ  ಎರಡು ಸರ್ಕಾರಗಳು ಸಹ ಕಾರ್ಖಾನೆಗಳ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ. ಈ ಹಿನ್ನಲೆಯಲ್ಲಿ ಎರಡು ಸರ್ಕಾರಗಳ ವಿರುದ್ಧ ಹೋರಾಟ ನಡೆಸಬೇಕೆಂದರು.
    ಬಂಜಾರ ರೈತರ ಸಂಘದ ರಾಜ್ಯಾಧ್ಯಕ್ಷ ಕೃಷ್ಣನಾಯ್ಕ ಮಾತನಾಡಿ, ಹೋರಾಟ ನಿರಂತರವಾಗಿ ನಡೆಯಬೇಕು. ಅದರಲ್ಲೂ ಇದೀಗ ಬೃಹತ್ ಮಟ್ಟದ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗಿದೆ. ಇಲ್ಲವಾದಲ್ಲಿ ಎರಡು ಕಾರ್ಖಾನೆಗಳನ್ನು ಉಳಿಸಿಕೊಳ್ಳುವುದು ಅಸಾಧ್ಯ ಎಂದರು.
    ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ, ಜಿಲ್ಲಾ ಸಂಚಾಲಕ ಚಿನ್ನಯ್ಯ, ಕೋಮು ಸೌಹಾರ್ದ ವೇದಿಕೆಯ ಜಿ. ರಾಜು, ಕರ್ನಾಟಕ ರಕ್ಷಣಾ ವೇದಿಕೆಯ ಮುರಳಿ, ಬಂಜಾರ ಸಂಘದ ಅಧ್ಯಕ್ಷ ಪ್ರೇಮ್‌ಕುಮಾರ್, ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ಛಲವಾದಿ ಸಮಾಜದ ಜಯರಾಜ್, ಗೋಪಾಲ್, ಜಗದೀಶ್, ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಹನುಮಮ್ಮ,, ರೇಷ್ಮಬಾನು, ಜಾವಿದ್, ಎಚ್.ಎಂ ಖಾದ್ರಿ, ರಮೇಶ್, ಜೆಬಿಟಿ ಬಾಬು, ಅಸಾದುಲ್ಲಾ ಖಾನ್, ಖದೀರ್, ಗಂಗಾನಾಯ್ಕಗೊಂದಿ, ಯಲ್ಲೋಜಿರಾವ್, ಸಣ್ಣಯ್ಯ, ಎಂ. ನಾರಾಯಣ, ಐಸಾಕ್, ನಿತ್ಯಾನಂದ, ಧರ್ಮರಾಜ್ ಸೇರಿದಂತೆ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
    ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಪ್ರಚಾರ ಸಮಿತಿ ಬೆಂಬಲ :
  ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್ ನೇತೃತ್ವದಲ್ಲಿ ಮಂಗಳವಾರ ಬೆಂಬಲ ಸೂಚಿಸಿ ಕಾರ್ಖಾನೆ ಉಳಿವಿಗಾಗಿ ಗುತ್ತಿಗೆ ಕಾರ್ಮಿಕರೊಂದಿಗೆ ಚರ್ಚಿಸಲಾಯಿತು.
      ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್, ರಾಜ್ಯ ಸಂಚಾಲಕ ಎಸ್.ಪಿ ದಿನೇಶ್, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ರಮೇಶ್, ಮುಖಂಡರುಗಳಾದ ಜಾನಿ ಮಾರ್ಟೀನ್, ಪಲ್ಲವಿ,  ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ. ಚಂದ್ರೇಗೌಡ, ತಾಲೂಕು ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಬಿ. ಗಂಗಾಧರ್, ಅಲ್ಪ ಸಂಖ್ಯಾತರ ವಿಭಾಗದ ಅಮೀರ್ ಜಾನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ ಗಿರೀಶ್, ನಗರ ಘಟಕದ ಅಧ್ಯಕ್ಷ ವಿನೋದ್, ಗ್ರಾಮಾಂತರ ಅಧ್ಯಕ್ಷ ಅಫ್ತಾಬ್, ಎನ್ ಎಸ್‌ಯುಐ ಅಧ್ಯಕ್ಷ ಮುಸ್ವೀರ್ ಬಾಷ, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಪ್ರಧಾನ ಕಾರ್ಯದರ್ಶಿ ರಾಕೇಶ್ ಮತ್ತು ಪದಾಧಿಕಾರಿಗಳು ಹಾಗೂ ಗುತ್ತಿಗೆ ಕಾರ್ಮಿಕರು ಪಾಲ್ಗೊಂಡಿದ್ದರು.


ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್ ನೇತೃತ್ವದಲ್ಲಿ ಮಂಗಳವಾರ ಬೆಂಬಲ ಸೂಚಿಸಿ ಕಾರ್ಖಾನೆ ಉಳಿವಿಗಾಗಿ ಗುತ್ತಿಗೆ ಕಾರ್ಮಿಕರೊಂದಿಗೆ ಚರ್ಚಿಸಲಾಯಿತು.