Wednesday, February 8, 2023

ನೀಡಿದ ಭರವಸೆ ಈಡೇರಿಸುವ ಪಕ್ಷ ಕಾಂಗ್ರೆಸ್ : ಸಂಗಮೇಶ್ವರನ್ನು ಗೆಲ್ಲಿಸಿ

ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್

ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಜಾಧ್ವನಿ ಕಾರ್ಯಕ್ರಮ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಉದ್ಘಾಟಿಸಿದರು.
    ಭದ್ರಾವತಿ, ಫೆ. ೮ :  ನೀಡಿದ ಭರವಸೆ ಈಡೇರಿಸುವ ಪಕ್ಷ ಕಾಂಗ್ರೆಸ್. ಈ ಬಾರಿ ನಮ್ಮ ಭರವಸೆಗಳಿಗೆ ಗ್ಯಾರಂಟಿ ನೀಡುತ್ತಿದ್ದು, ಇದೊಂದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.  
    ಅವರು ಬುಧವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಜಾಧ್ವನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಜನರಿಗೆ ಬಿಜೆಪಿ ಪಕ್ಷ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದ್ದು, ಇದುವರೆಗೂ ತನ್ನ ಭರವಸೆಗಳನ್ನು ಈಡೇರಿಸಿಲ್ಲ. ಕೇವಲ ಸುಳ್ಳು ಭರವಸೆಗಳನ್ನು ನೀಡುವ ಪಕ್ಷವಾಗಿದೆ. ಆದರೆ ಕಾಂಗ್ರೆಸ್ ಪಕ್ಷ ಜನರಿಗೆ ಎಂದಿಗೂ ಸುಳ್ಳು ಭರವಸೆಗಳನ್ನು ನೀಡಿಲ್ಲ. ಜಗಜ್ಯೋತಿ ಬಸವಣ್ಣ, ಕನಕದಾಸರು, ಶಿಶುನಾಳ ಷರೀಫ, ರಾಷ್ಟ್ರಕವಿ ಕುವೆಂಪು ಸೇರಿದಂತೆ ಮಹಾನ್ ಆದರ್ಶ ವ್ಯಕ್ತಿಗಳ ನಾಡಿನಲ್ಲಿ ಇದೀಗ ಕಾಂಗ್ರೆಸ್ ತನ್ನ ಭರವಸೆಗಳಿಗೆ ಗ್ಯಾರಂಟಿ ಕಾರ್ಡ್ ನೀಡುತ್ತಿದೆ. ಒಂದು ವೇಳೆ ನಮ್ಮ ಭರವಸೆಗಳು ಸುಳ್ಳಾದರೇ ಅದನ್ನು ಜನರು ಪ್ರಶ್ನಿಸುವಂತಾಗಲಿ ಎಂದರು.
    ಅಡುಗೆ ಅನಿಲ, ಬೇಳೆಕಾಳು, ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಜನರ ದಿನನಿತ್ಯದ ಬದುಕು ಕಷ್ಟಕರವಾಗಿದ್ದು, ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಜನರ ಧ್ವನಿಯನ್ನು ಅಡಗಿಸುವ ಮೂಲಕ ತಮ್ಮ ಹೋರಾಟದ ಶಕ್ತಿಯನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿವೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಜನರ ಧ್ವನಿಯಾಗಿ ಶಕ್ತಿ ತುಂಬುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರಜಾಧ್ವನಿ ಕೈಗೊಂಡಿದೆ ಎಂದರು.
    ಕ್ಷೇತ್ರದ ಪ್ರತಿಯೊಂದು ಮನೆಗೂ ಗ್ಯಾರಂಟಿ ಕಾರ್ಡ್ ನೀಡಿ:
    ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ೨೦೦ ಯುನಿಟ್ ವಿದ್ಯುತ್ ಉಚಿತ, ಆಮೂಲಕ ಇನ್ನು ಮುಂದೆ ನೀವು ೨೦೦ ಯುನಿಟ್ ಒಳಗೆ ವಿದ್ಯುತ್ ಬಳಸಿದರೆ ಯಾರೂ ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿಲ್ಲ. ಪ್ರತಿ ಮನೆ ಯಜಮಾನಿಗೆ ೨೦೦೦ ರೂ. ಪ್ರತಿ ತಿಂಗಳು ಕೊಡುತ್ತೇವೆ. ವರ್ಷಕ್ಕೆ ಒಟ್ಟು ೪೨ ಸಾವಿರದಂತೆ ೫ ವರ್ಷಕ್ಕೆ ೨ ಲಕ್ಷ ಕೊಡುತ್ತೇವೆ. ಜತೆಗೆ ೧೦ ಕೆಜಿ ಅಕ್ಕಿ ನೀಡುತ್ತೇವೆ. ಇದು ಸುಳ್ಳಿನ ಭರವಸೆಯಲ್ಲ. ನಾನು ಹಾಗು ಸಿದ್ದರಾಮಯ್ಯ ಸಹಿ ಹಾಕಿರೋ ಗ್ಯಾರಂಟಿ ಕಾರ್ಡ್ ನೀಡುತ್ತೇವೆ. ಸಂಗಮೇಶ್ವರ್‌ರವರು ಈ ಗ್ಯಾರಂಟಿ ಕಾರ್ಡ್ ಪ್ರತಿ ಮನೆ ಮನೆಗೂ ತಲುಪಿಸಬೇಕು.  ಕಾರ್ಡ್‌ನ ಒಂದು ಭಾಗದಲ್ಲಿ  ಸಹಿ ಪಡೆದು ಕತ್ತರಿಸಿದ ಭಾಗವನ್ನು ಹಿಂಪಡೆಯಬೇಕೆಂದರು.
    ಸಂಗಮೇಶ್ವರನ್ನು ಗೆಲ್ಲಿಸಿ, ನೀವು ಹಾಕುವ ಮತದ ಶಬ್ದ ದೆಹಲಿಗೆ ಕೇಳಿಸಲಿ:
    ಈ ಕ್ಷೇತ್ರದ ಜನರು ಸಂಗಮೇಶ್ವರನ್ನು ಕಳೆದ ಚುನಾವಣೆಯಲ್ಲಿ ಗೆಲ್ಲಿಸಿದ್ದು, ಕಳೆದ ಬಾರಿ ನಮ್ಮ ಸರ್ಕಾರ ಉತ್ತಮ ಆಡಳಿತ ನೀಡಿದ್ದರೂ, ಜನ ನಮ್ಮ ಮೇಲೆ ವಿಶ್ವಾಸ ಇಡದೆ ಕೇವಲ ೮೦ ಸ್ಥಾನ ನೀಡಿದರು. ದಳದವರು ೩೮ ಸೀಟು ಗೆದ್ದಿದ್ದರು. ಆದರೂ ನಾವು ಕುಮಾರಸ್ವಾಮಿ ಅವರಿಗೆ ಸರ್ಕಾರ ನಡೆಸಲು ಬೆಂಬಲ ನೀಡಿದ್ದೆವು. ಅವರು ಸರ್ಕಾರ ಉಳಿಸಿಕೊಳ್ಳಲು ಆಗಲಿಲ್ಲ. ಅವರ ಹೇಳಿಕೆ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಆದರೆ ಈ ರಾಜ್ಯದಲ್ಲಿ ಜನತಾ ದಳ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದರು.
    ಬಿಜೆಪಿ ಪಕ್ಷ ಇದುವರೆಗೂ ಕೇವಲ ಸುಳ್ಳಿನ ಭರವಸೆಗಳನ್ನು ನೀಡಿದೆ. ಈ ಹಿನ್ನಲೆಯಲ್ಲಿ ಇಲ್ಲಿ ನೀವು ಮತ ಹಾಕುವಾಗ ಬರುವ ಶಬ್ಧ ದೆಹಲಿಗೆ ಕೇಳಿಸಬೇಕು. ಇಲ್ಲಿ ಸಂಗಮೇಶ್ ಗೆಲ್ಲಿಸಬೇಕು, ಮೋದಿಯನ್ನು ಹಾರಿಸಬೇಕು. ಯಡಿಯೂರಪ್ಪನವರನ್ನು ಅವರ ಪಕ್ಷದವರೇ ಹಾರಿಸಿದ್ದಾರೆ ಎಂದರು.
    ಸರ್ವಧರ್ಮಿಯರ ಕ್ಷೇತ್ರ : ನೀತಿ ಮೇಲೆ ರಾಜಕಾರಣ
  ಕ್ಷೇತ್ರದಲ್ಲಿ ಒಕ್ಕಲಿಗರು, ಲಿಂಗಾಯತರು, ಮುಸಲ್ಮಾನರು, ಪರಿಶಿಷ್ಟ ಜಾತಿ/ಪಂಗಡದವರು ಸೇರಿದಂತೆ ಎಲ್ಲ ವರ್ಗದವರೂ ಇದ್ದಾರೆ. ಇಲ್ಲಿ ಜಾತಿ ಮೇಲೆ ರಾಜಕಾರಣ ಮಾಡಿದರೆ ಪ್ರಯೋಜನವಿಲ್ಲ. ನೀತಿ ಮೇಲೆ ರಾಜಕಾರಣ ಮಾಡಬೇಕು. ನಾವು ಹುಟ್ಟುವಾಗ ಇಂತಹುದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಲ್ಲ. ಕಾಂಗ್ರೆಸ್ ಎಲ್ಲ ಜಾತಿ ಹಾಗೂ ವರ್ಗದ ಪಕ್ಷ. ಎಲ್ಲರಿಗೂ ರಕ್ಷಣೆ ನೀಡುತ್ತಾ ಬಂದಿದ್ದೇವೆ ಎಂದರು.
    ವಿಐಎಸ್‌ಎಲ್-ಎಂಪಿಎಂ ಕಾರ್ಖಾನೆಗಳಿಗೆ ಬಂಡವಾಳ ಹೂಡಿಕೆಯಾಕಿಲ್ಲ ?
    ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಈ ಜಿಲ್ಲೆಯಲ್ಲಿ ಬೇಕಾದಷ್ಟು ಕೆಲಸ ಮಾಡಿದ್ದಾರೆ ಎಂದು ಹೇಳುತ್ತಾರೆ. ಆದರೆ ರಾಜ್ಯ ಸರ್ಕಾರ ನಡೆಸಿದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ೧೦ ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿದೆ ಎಂದು ಹೇಳಿದ್ದು, ಅದರಲ್ಲಿ ಎಷ್ಟು ಕೋಟಿ ಬಂಡವಾಳ ಶಿವಮೊಗ್ಗ ಜಿಲ್ಲೆಯಲ್ಲಿ ಹೂಡಿಕೆಯಾಗಲಿದೆ ಎಂದು ಬಿಜೆಪಿಯವರು ಉತ್ತರಿಸಲಿ. ಈ ಕ್ಷೇತ್ರದಲ್ಲಿ ವಿಐಎಸ್‌ಎಲ್ ಹಾಗೂ ಎಂಪಿಎಂ ಕಾರ್ಖಾನೆ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದೀರಿ. ಕೇಂದ್ರ ಸರ್ಕಾರ ವಿಐಎಸ್‌ಎಲ್ ಕಾರ್ಖಾನೆ ಮಾರಲು ಆಹ್ವಾನ ನೀಡಿದರೂ ಯಾರೊಬ್ಬರೂ ಮುಂದೆ ಬಂದಿಲ್ಲ ಯಾಕೆ ಎಂದು ಪ್ರಶ್ನಿಸಿದರು.
    ಸಿ.ಎಂ ಇಬ್ರಾಹಿಂ ಕಾಂಗ್ರೆಸ್ ಬೆಂಬಲಿಸಲಿ:
    ಕಮಲ ಕೆರೆಯಲ್ಲಿದ್ದರೆ ಚೆನ್ನ, ತೆನೆ ಹೊಲದಲ್ಲಿದ್ದರೆ ಚೆನ್ನ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಅದಕ್ಕಾಗಿ ರಾಜ್ಯದಲ್ಲಿ ಬದಲಾವಣೆ ಮಾಡಬೇಕು.  ನಿಮ್ಮ ಹೃದಯದದಲ್ಲಿ ಜಾತ್ಯಾತೀತ ತತ್ವವಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ನಿಮಗೆ ಗೊತ್ತಿದೆ. ಕುಮಾರಣ್ಣ ಏನಾದರೂ ಹೇಳಲಿ. ನೀವು ಕಾಂಗ್ರೆಸ್ ಪಕ್ಷ ಬೆಂಬಲಿಸಿದರೆ ರಾಜ್ಯ ಹಾಗು ಎಲ್ಲಾ ಸಮಾಜದವರು ಉಳಿಯುತ್ತಾರೆ.
    ಬಿ.ವಿ ಶ್ರೀನಿವಾಸ್‌ಗೆ ಉತ್ತಮ ಭವಿಷ್ಯವಿದೆ :
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ನಿಮ್ಮ ಮನೆ ಮಗ ಎಂಬುದು ಹೆಮ್ಮೆಯ ವಿಚಾರವಾಗಿದೆ. ಅವರು ಕೋವಿಡ್ ಸಂದರ್ಭದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಜನರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವ ಜೊತೆಗೆ ದೆಹಲಿಯಲ್ಲಿ ಕೂತು ಆಕ್ಸಿಜನ್ ಕೊಡಿಸಿ ಜೀವ ಉಳಿಸಿದ್ದರು. ಹೀಗಾಗಿ ಅವರನ್ನು ಆಕ್ಸಿಜನ್ ಮ್ಯಾನ್ ಎಂದು ಕರೆದರು. ಅವರು ದೇಶದ ಯಾವುದೇ ಮೂಲೆಯಲ್ಲಿರಲಿ ಇಂದು ಅವರನ್ನು ಜನರು ಗುರುತಿಸುತ್ತಾರೆ. ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ ಎಂದರು.  
    ವೇದಿಕೆಯಲ್ಲಿ ಪ್ರಮುಖರಾದ ಶಾಸಕ ಬಿ.ಕೆ ಸಂಗಮೇಶ್ವರ್, ಮಾಜಿ ಸಂಸದ ಕೆ.ಎಚ್ ಮುನಿಯಪ್ಪ, ಉಗ್ರಪ್ಪ, ಮಾಜಿ ಸಚಿವ ರೇವಣ್ಣ, ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್, ರಾಜ್ಯಾಧ್ಯಕ್ಷ ನಲಪಾಡ್, ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಜಿ.ಎಚ್ ಶ್ರೀನಿವಾಸ್, ಕೆ.ಬಿ ಪ್ರಸನ್ನಕುಮಾರ್,  ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್,  ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾಕುಮಾರಿ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.

No comments:

Post a Comment