ತಾಲೂಕು ಬಗರ್‌ಹುಕುಂ ಹೊರಾಟ ಸಮಿತಿವತಿಯಿಂದ ಬೃಹತ್ ಪ್ರತಿಭಟನೆ
ಭದ್ರಾವತಿ ತಾಲೂಕು ಕಛೇರಿಯಲ್ಲಿ ಕೆಲವು ಭ್ರಷ್ಟ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಸಾಗುವಳಿದಾರರಿಗೆ ಲಭಿಸಬೇಕಾದ ಸರ್ಕಾರಿ ಸೌಲಭ್ಯಗಳಿಂದ ವಂಚಿಸುತ್ತಿರುವುದನ್ನು ಖಂಡಿಸಿ ಸೋಮವಾರ ತಾಲೂಕು ಬಗರ್‌ಹುಕುಂ ಹೊರಾಟ ಸಮಿತಿವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ, ಫೆ. ೧೩ : ತಾಲೂಕು ಕಛೇರಿಯಲ್ಲಿ ಕೆಲವು ಭ್ರಷ್ಟ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಸಾಗುವಳಿದಾರರಿಗೆ ಲಭಿಸಬೇಕಾದ ಸರ್ಕಾರಿ ಸೌಲಭ್ಯಗಳಿಂದ ವಂಚಿಸುತ್ತಿರುವುದನ್ನು ಖಂಡಿಸಿ ಸೋಮವಾರ ತಾಲೂಕು ಬಗರ್‌ಹುಕುಂ ಹೊರಾಟ ಸಮಿತಿವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಮಾತನಾಡಿ, ತಾಲೂಕಿನ ವ್ಯಾಪ್ತಿಯಲ್ಲಿ ಬಹುತೇಕ ಸಾಗುವಳಿದಾರರು ಹಲವಾರು ದಶಕಗಳಿಂದ ಗೋಮಾಳ, ಸೊಪ್ಪಿನಬೆಟ್ಟ, ಹುಲ್ಲುಬನ್ನಿ ಹರಾಜು ಸರಕಾರಿ ಪಡ, ಖರಾಬು ಸೇರಿದಂತೆ ಇನ್ನಿತರ ಸರ್ಕಾರಿ ಭೂಮಿಯಲ್ಲಿ ಗಿಡಗಂಟೆಗಳನ್ನು ತೆಗೆದು ಸ್ವಚ್ಛ ಮಾಡಿ ವ್ಯವಸಾಯಕ್ಕೆ ಯೋಗ್ಯವನ್ನಾಗಿಸಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಕಾಲ ಕಾಲಕ್ಕೆ ಆಯಾ ಸರ್ಕಾರಗಳು ಸಹ ಸಾಗುವಳಿದಾರರ ಪರವಾದ ನಿಲುವುಗಳನ್ನು ಕೈಗೊಳ್ಳುತ್ತಿವೆ. ಅಲ್ಲದೆ ಸಾಗುವಳಿದಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವರಿಗೆ ದಾಖಲೆ ಪತ್ರಗಳನ್ನು ವಿತರಿಸಲು ಮುಂದಾಗಿವೆ. ಇದಕ್ಕೆ ಪೂರಕವೆಂಬಂತೆ ನಮೂನೆ ೫೦, ೫೩, ೫೭ರ ಅಡಿಯಲ್ಲಿ ಅರ್ಜಿ ಕರೆದಿದ್ದು, ನಿಯಮಾನುಸಾರ ಅರ್ಹ ಸಾಗುವಳಿದಾರರಿಗೆ ದಾಖಲೆಪತ್ರಗಳನ್ನು ನೀಡಬೇಕಾಗಿದೆ. ಆದರೆ ಅರ್ಹ ಸಾಗುವಳಿದಾರರಿಗೆ ದಾಖಲೆಪತ್ರಗಳನ್ನು ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ ಸುಮಾರು ೧೨ ಸಾವಿರಕ್ಕೂ ಅಧಿಕ ಬಗರ್ ಹುಕುಂ ಸಾಗುವಳಿದಾರರು ಅರ್ಜಿ ಸಲ್ಲಿಸಿದ್ದು, ಆದರೆ ಸರ್ಕಾರದ ನಿಯಮಗಳನ್ನು ಪಾಲಿಸದೆ ೧೨ ಸಾವಿರ ಅರ್ಜಿಗಳ ಪೈಕಿ ಶ್ರೀಮಂತರಿಗೆ, ರಾಜಕೀಯ ಪ್ರಭಾವಿಗಳಿಗೆ ದಾಖಲೆಪತ್ರಗಳನ್ನು ನೀಡಲು ಟಿ.ಟಿ ಚಲನ್ ತಯಾರಿಸಿದ್ದು, ಕಾನೂನು ಉಲಂಘನೆ ಮಾಡಿ ಕಛೇರಿ ಸಮಯ ಮುಗಿದನಂತರವು ಕೆಲವು ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಶಾಸಕರ ಹಿಂಬಾಲಕರು, ಮಧ್ಯವರ್ತಿಗಳು ಅರ್ಹ ಸಾಗುವಳಿದಾರರಿಗೆ ವಂಚಿಸುತ್ತಿದ್ದಾರೆ. ದಾಖಲೆಪತ್ರಗಳ ವಿತರಣೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.
ತಕ್ಷಣ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅರ್ಹ ಫಲಾನುಭವಿಗಳಿಗೆ ದಾಖಲೆಪತ್ರಗಳನ್ನು ವಿತರಿಸಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕೆಂದು ಆಗ್ರಹಿಸಿದರು. ಪ್ರಮುಖರಾದ ಆರ್. ಕರುಣಾಮೂರ್ತಿ, ಎಂ.ಎ ಅಜಿತ್, ಗೊಂದಿ ಜಯರಾಂ, ಧರ್ಮರಾಜ್, ಹನುಮಂತನಾಯ್ಕ, ಗೋಕುಲ್ ಕೃಷ್ಣನ್, ದಿಲೀಪ್, ಗುಣಶೇಖರ್, ನಕುಲ್, ಯುವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.