Saturday, February 18, 2023

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟ ತೀವ್ರಗೊಳ್ಳಲಿ : ಟಿ. ಚಂದ್ರೇಗೌಡ


ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು, ಶನಿವಾರ ಅಪ್ಪರ್ ಹುತ್ತಾಕಾಲೋನಿಯಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಫೆ. ೧೮ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ತೀವ್ರ ಹೋರಾಟ ನಡೆಸುವುದು ಅನಿವಾರ್ಯ ಎಂದು ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರಗೌಡ ಹೇಳಿದರು.
    ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು, ಶನಿವಾರ ಅಪ್ಪರ್ ಹುತ್ತಾಕಾಲೋನಿಯಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
    ಹೋರಾಟ ತೀವ್ರಗೊಳಿಸಲು ಸೂಕ್ತ ಸಮಯ ಇದಾಗಿದ್ದು, ಸರ್ಕಾರಕ್ಕೆ ಹೋರಾಟದ ಬಿಸಿ ಮುಟ್ಟಿಸಬೇಕು. ಇಲ್ಲವಾದಲ್ಲಿ ಹೋರಾಟಕ್ಕೆ ಯಾವುದೇ ಫಲಿತಾಂಶ ಲಭಿಸುವುದಿಲ್ಲ. ಮುಂದಿನ ೩-೪ ದಿನಗಳಲ್ಲಿ ದೊಡ್ಡಮಟ್ಟದ ಹೋರಾಟ ನಡೆಯಬೇಕು. ಆಗ ಮಾತ್ರ ಸರ್ಕಾರ ಕಾರ್ಮಿಕರ ಹೋರಾಟಕ್ಕೆ ಸ್ಪಂದಿಸಲಿದೆ ಎಂದರು.
    ಸ್ಥಳೀಯ ಮುಖಂಡರು ಮಾತನಾಡಿ, ವಿಐಎಸ್‌ಎಲ್ ಕಾರ್ಖಾನೆ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ನಾವೆಲ್ಲರೂ ಬೆಂಬಲ ವ್ಯಕ್ತಪಡಿಸಬೇಕೆಂದರು.
    ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, ಇಂದು ನಮ್ಮ ಮುಂದೆ ದೊಡ್ಡ ಸವಾಲು ಎದುರಾಗಿದೆ. ಕಾರ್ಖಾನೆ ಉಳಿಸಿಕೊಳ್ಳಲು ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ನಮಗೆ ಕಾರ್ಖಾನೆ ಉಳಿಸಿಕೊಳ್ಳುವ ನಂಬಿಕೆ ಇದೆ. ನಮ್ಮ ಹೋರಾಟಕ್ಕೆ ನಿವಾಸಿಗಳು ಎಲ್ಲಾ ರೀತಿಯ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಕಾರ್ಮಿಕ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.
    ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ೩೧ ದಿನಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಕಳೆದ ಕೆಲವು ದಿನಗಳಿಂದ ನಗರಸಭೆ ವ್ಯಾಪ್ತಿಯ ವಾರ್ಡ್‌ಗಳಿಗೆ ತೆರಳಿ ಹೋರಾಟಕ್ಕೆ ಬೆಂಬಲ ನೀಡುವಂತೆ ನಿವಾಸಿಗಳಿಗೆ ಮನವಿ ಮಾಡುತ್ತಿದ್ದಾರೆ.

ಮಹಾಶಿವರಾತ್ರಿ : ಶ್ರೀ ಸಂಗಮೇಶ್ವರ ದರ್ಶನಕ್ಕೆ ಸಾಲುಗಟ್ಟಿ ನಿಂತ ಭಕ್ತರು

ಭದ್ರಾವತಿ ಹೃದಯ ಭಾಗದಲ್ಲಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬದ ಹಿನ್ನಲೆಯಲ್ಲಿ ಸ್ವಾಮಿಯ ದರ್ಶನ ಪಡೆಯಲು ಸಾಲುಗಟ್ಟಿ ನಿಂತಿರುವ ಭಕ್ತರು.
    ಭದ್ರಾವತಿ, ಫೆ. ೧೮: ಮಹಾಶಿವರಾತ್ರಿ ಈ ಬಾರಿ ಎಲ್ಲೆಡೆ ವೈಭವಯುತವಾಗಿ ಜರುಗುತ್ತಿದ್ದು. ವಿಶೇಷವಾಗಿ ನಗರದ ಹೃದಯ ಭಾಗದಲ್ಲಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಸ್ವಾಮಿಯ ದರ್ಶನ ಪಡೆಯಲು ಶನಿವಾರ ಬೆಳಿಗ್ಗೆಯಿಂದಲೇ ಭಕ್ತಾಧಿಗಳು ಸಾಲುಗಟ್ಟಿ ನಿಂತಿರುವುದು ಕಂಡು ಬಂದಿತು.
    ಪ್ರತಿ ವರ್ಷದಂತೆ ಈ ಬಾರಿ ಸಹ ವೀರಶೈವ ಸೇವಾ ಸಮಿತಿವತಿಯಿಂದ ಧಾರ್ಮಿಕ ಆಚರಣೆಗಳು ಜರುಗಿದವು. ಶುಕ್ರವಾರ ಸಂಜೆ ಗಣಹೋಮ, ರುದ್ರಹೋಮ, ನವಗ್ರಹ ಪೂಜೆ ಜರುಗಿದವು. ಶನಿವಾರ ಬೆಳಿಗ್ಗೆ  ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣಪತಿ, ಶ್ರೀ ಸಂಗಮೇಶ್ವರಸ್ವಾಮಿ, ನಂದಿ, ನಾಗದೇವತೆ ದೇವರುಗಳಿಗೆ ರುದ್ರಾಭಿಷೇಕ ನೆರವೇರಿತು.
    ತರೀಕೆರೆ ಹಿರೇಮಠದ ಶ್ರೀ ಷ||ಬ್ರ|| ಜಗದೀಶ್ವರ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ವೇದಬ್ರಹ್ಮ ಸಿ.ಎಂ ಮಹೇಶ್ವರಮೂರ್ತಿ ಶಾಸ್ತ್ರಿಗಳು, ಚಿನ್ನಯ್ಯ ಶಾಸ್ತ್ರಿ, ಎಸ್.ಆರ್ ವಿಶ್ವನಾಥಯ್ಯ, ವಾಗೀಶಯ್ಯ, ರುದ್ರಸ್ವಾಮಿ ಶಾಸ್ತ್ರಿ, ಎಂ.ಬಿ ಕಿರಣ್ ಶಾಸ್ತ್ರಿ ಮತ್ತು ಶಂಕರಯ್ಯ ಹಿರೇಮಠ್ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿಕೊಟ್ಟರು. ವೀರಶೈವ ಸೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಶಿವರಾತ್ರಿ ಆಚರಣಾ ಉಸ್ತುವಾರಿ ವಿವಿಧ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಫೆ.೧೯ರ ಭಾನುವಾರ ಹಳೇನಗರದ ಶ್ರೀ ಕೋಟೆ ಬಸವಣ್ಣ, ಶ್ರೀ ವೀರಭದ್ರಸ್ವಾಮಿ, ಶ್ರೀ ಬನಶಂಕರಿದೇವಿ ಮತ್ತು ಶ್ರೀ ಸದಾನಂದಸ್ವಾಮಿ ಗದ್ದುಗೆಯಲ್ಲಿ ಮಹಾಶಿವರಾತ್ರಿ ಪ್ರಯುಕ್ತ ರುದ್ರಾಭಿಷೇಕ ಸೇರಿದಂತೆ ಇನ್ನಿತರ ಆಚರಣೆಗಳನ್ನು ಹಮ್ಮಿಕೊಳ್ಳಲಾಗಿದೆ.
    ಬೆಳಿಗ್ಗೆ ೭ ಗಂಟೆಗೆ ಕೋಟೆ ಬಸವಣ್ಣ ದೇವಸ್ಥಾನದಲ್ಲಿ ಕೆಂಡಾರ್ಚನೆ ಗುಗ್ಗಳ ಮಹೋತ್ಸವ ನಡೆಯಲಿದ್ದು, ದೇವಸ್ಥಾನದಿಂದ ಆರಂಭಗೊಳ್ಳುವ ಉತ್ಸವ ಮೆರವಣಿಗೆ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, ಕಂಚಿಬಾಗಿಲು, ರಂಗಪ್ಪ ವೃತ್ತ, ಮಾಧವಚಾರ್ ವೃತ್ತ ಮುಖಾಂತರ ಪುನಃ ಕೋಟೆ ಬಸವಣ್ಣ ದೇವಸ್ಥಾನ ತಲುಪಲಿದೆ.  
    ದೇವಸ್ಥಾನದ ಸಮೀಪ ಸೇವಾಕರ್ತರಿಂದ ಭಕ್ತರಿಗೆ ಕಲ್ಲಂಗಡಿ ಹಣ್ಣು, ಕೋಸಂಬರಿ, ಪಾನಕ ವಿತರಣೆ ನೆರವೇರಿತು. ಸ್ಥಳೀಯ ಸಂಘ-ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಪ್ರಮುಖರು, ಗಣ್ಯರು ಸೇರಿದಂತೆ ನಗರದ ವಿವಿಧೆಡೆಗಳಿಂದ ಭಕ್ತಾಧಿಗಳು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಕೃಪೆಗೆ ಪಾತ್ರರಾದರು.


ಭದ್ರಾವತಿ ಹೃದಯ ಭಾಗದಲ್ಲಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬದ ಹಿನ್ನಲೆಯಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.  

Friday, February 17, 2023

ಚಿನ್ನದ ಪ್ರಭಾವಳಿಯೊಂದಿಗಿನ ಶಿವಲಿಂಗ ಕಲಾಕೃತಿ

ಮಹಾ ಶಿವರಾತ್ರಿ ಪ್ರಯುಕ್ತ ಭದ್ರಾವತಿ ಸೂಕ್ಷ್ಮ ಕೆತ್ತನೆ ಕಲಾಕೃತಿಗಳ ಕಲಾವಿದ, ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪುರಸ್ಕೃತ ಸಚಿನ್ ಎಂ. ವರ್ಣೇಕರ್ ಈ ಬಾರಿ ಮಹಾಶಿವರಾತ್ರಿಗೆ ವಿಶೇಷವಾಗಿ ಚಿನ್ನದ ಪ್ರಭಾವಳಿಯೊಂದಿಗಿನ ಶಿವಲಿಂಗ ಕಲಾಕೃತಿಯನ್ನು ರಚಿಸಿದ್ದಾರೆ.
    ಭದ್ರಾವತಿ, ಫೆ. ೧೭: ಮಹಾ ಶಿವರಾತ್ರಿ ಪ್ರಯುಕ್ತ ಸೂಕ್ಷ್ಮ ಕೆತ್ತನೆ ಕಲಾಕೃತಿಗಳ ಕಲಾವಿದ, ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪುರಸ್ಕೃತ ಸಚಿನ್ ಎಂ. ವರ್ಣೇಕರ್ ಈ ಬಾರಿ ಮಹಾಶಿವರಾತ್ರಿಗೆ ವಿಶೇಷವಾಗಿ ಚಿನ್ನದ ಪ್ರಭಾವಳಿಯೊಂದಿಗಿನ ಶಿವಲಿಂಗ ಕಲಾಕೃತಿಯನ್ನು ರಚಿಸಿದ್ದಾರೆ.
    ಶಿವಲಿಂಗ ೧ ಸೆ.ಮೀ ಎತ್ತರವಿದ್ದು, ಪ್ರಭಾವಳಿ ೨.೫ ಸೆ.ಮೀ ಎತ್ತರ ಮತ್ತು ಅಗಲ ಹೊಂದಿದೆ. ಈ ಕಲಾಕೃತಿ ಹೆಚ್ಚು ಆಕರ್ಷಕವಾಗಿ ಕಂಡು ಬರುತ್ತಿದ್ದು, ಕಳೆದ ವರ್ಷ ಉತ್ತರಾಖಂಡದ ಪ್ರವಿತ್ರ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಶ್ರೀ ಕೇದಾರನಾಥೇಶ್ವರ ದೇವಸ್ಥಾನ ಮಾದರಿ ಕಲಾಕೃತಿಯನ್ನು ರಚಿಸಿದ್ದರು. ಇವರ ಕೆಲವು ಕಲಾಕೃತಿಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುಷಾ ವಸ್ತು ಸಂಗ್ರಹಾಲಯ ಅಲಂಕರಿಸಿವೆ. ಇವರ ಕಲಾಕೃತಿಗಳಿಗೆ ಪ್ರಶಸ್ತಿಗಳು ಸಹ ಲಭಿಸಿವೆ.

ಜನಪರ, ಜನಸೇವೆ ಬಜೆಟ್ : ಡಾ. ಬಿ.ಜಿ ಧನಂಜಯ

ಡಾ. ಬಿ.ಜಿ ಧನಂಜಯ
    ಭದ್ರಾವತಿ, ಫೆ. ೧೭: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಬಾರಿ ಮಂಡಿಸಿರುವ ಬಜೆಟ್ ಜನಪರ, ಜನಸೇವೆ ಬಜೆಟ್ ಎಂದು ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
    ಬಹಳ ವರ್ಷಗಳ ನಂತರ ಬಸವರಾಜ ಬೊಮ್ಮಾಯಿಯವರು ತಮ್ಮ ರಾಜಕೀಯ ಅನುಭವ ಹಾಗು ಆರ್ಥಿಕ ಜಾಣ್ಮೆ ಪ್ರದರ್ಶಿಸುವ ಮೂಲಕ ಉಳಿತಾಯ ಬಜೆಟ್ ಮಂಡಿಸಿದ್ದಾರೆ. ಶಿಕ್ಷಣ, ಆರೋಗ್ಯ, ಉದ್ಯೋಗಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಶಾಲಾ, ಕಾಲೇಜುಗಳ ಕೊಠಡಿ ನಿರ್ಮಾಣಕ್ಕೆ ಆದ್ಯತೆ, ಪಂಚಾಯತ್‌ರಾಜ್ ವ್ಯವಸ್ಥೆ ಗಟ್ಟಿಗೊಳಿಸುವ ಮೂಲಕ ತಂತ್ರಜ್ಞಾನ ಅಳವಡಿಕೆಗೆ ವಿಶೇಷ ಆದ್ಯತೆ ನೀಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.
    ರೈತ ಶಕ್ತಿ, ಯುವ ಶಕ್ತಿ, ಸ್ತ್ರೀ ಶಕ್ತಿ ಬಳಕೆಗೆ ಉತ್ತಮ ಯೋಜನೆಗಳನ್ನು ರೂಪಿಸಲಾಗಿದೆ. ವಿಶೇಷವಾಗಿ ೧ ಲಕ್ಷ ಮಹಿಳೆಯರಿಗೆ ಉಚಿತ ಕೌಶಲ್ಯ ತರಬೇತಿ ನೀಡಲು ಮುಂದಾಗಿರುವುದು ಅವರು ಸ್ವಾವಲಂಬಿಗಳಾಗಿ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಇದು ಚುನಾವಣೆ ಉದ್ದೇಶದಿಂದ ಮಂಡಿಸಿರುವ ಬಜೆಟ್ ಅಲ್ಲ. ಬದಲಾಗಿ ಜನಪರ, ಜನಸೇವೆ ಬಜೆಟ್ ಆಗಿದೆ.

ಜೆಡಿಎಸ್ ನಗರ ಕಾರ್ಯದರ್ಶಿಯಾಗಿ ಎನ್. ರಾಮಕೃಷ್ಣ ನೇಮಕ

ಎನ್. ರಾಮಕೃಷ್ಣ
    ಭದ್ರಾವತಿ, ಫೆ. ೧೭ : ಜಾತ್ಯತೀತ ಜನತಾದಳ ನಗರ ಘಟಕದ ಕಾರ್ಯದರ್ಶಿಯಾಗಿ ಹುತ್ತಾಕಾಲೋನಿ ನಿವಾಸಿ, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್. ರಾಮಕೃಷ್ಣ ನೇಮಕಗೊಂಡಿದ್ದಾರೆ.
    ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಎನ್. ರಾಮಕೃಷ್ಣರವರನ್ನು ನಗರ ಘಟಕದ ಕಾರ್ಯದರ್ಶಿಯಾಗಿ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ಧರಾಗಿ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಸಮನ್ವಯತೆ ಕಾಯ್ದುಕೊಂಡು ಪಕ್ಷ ಬಲವರ್ಧನೆಗೆ ಶ್ರಮಿಸುವಂತೆ ಸೂಚಿಸಿದ್ದಾರೆ.
    ನಗರ ಘಟಕದ ಕಾರ್ಯದರ್ಶಿಯಾಗಿ ನೇಮಕಗೊಳ್ಳಲು ಕಾರಣಕರ್ತರಾದ ಪಕ್ಷದ ವರಿಷ್ಠರು, ಮುಖಂಡರು, ಕಾರ್ಯಕರ್ತರಿಗೆ ಎನ್. ರಾಮಕೃಷ್ಣ ಕೃತಜ್ಞತೆ ಸಲ್ಲಿಸಿದ್ದಾರೆ.

ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಬಿ.ಕೆ ಶಿವಕುಮಾರ್ ಪುತ್ರಿ ಹಿತಾರವರ ಶ್ರೀಮಂತ ಕಾರ್ಯಕ್ರಮ

ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬ ವರ್ಗದವರು ಭಾಗಿ

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸಹೋದರ ಬಿ.ಕೆ ಶಿವಕುಮಾರ್‌ರವರ ಪುತ್ರಿ ಹಿತಾರವರ ಶ್ರೀಮಂತ ಕಾರ್ಯಕ್ರಮ ಶುಕ್ರವಾರ ಶಿವಮೊಗ್ಗ ಲಗಾನ್ ಕಲ್ಯಾಣ ಮಂಟಪದಲ್ಲಿ ನಡೆಯಿತು.
    ಭದ್ರಾವತಿ, ಫೆ. ೧೭ : ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸಹೋದರ ಬಿ.ಕೆ ಶಿವಕುಮಾರ್‌ರವರ ಪುತ್ರಿ ಹಿತಾರವರ ಶ್ರೀಮಂತ ಕಾರ್ಯಕ್ರಮ ಶುಕ್ರವಾರ ಶಿವಮೊಗ್ಗ ಲಗಾನ್ ಕಲ್ಯಾಣ ಮಂಟಪದಲ್ಲಿ ನಡೆಯಿತು.
    ಹಿತಾರವರು ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ರವರ ಸೊಸೆಯಾಗಿದ್ದು, ಶ್ರೀಮಂತ ಕಾರ್ಯಕ್ರಮದಲ್ಲಿ ಸಹೋದರ, ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಸೇರಿದಂತೆ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.
    ಕ್ಷೇತ್ರದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಗಣ್ಯರು, ಹಿತೈಷಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗು ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.

ವಿಐಎಸ್‌ಎಲ್ ಆಸ್ಪತ್ರೆ ನಿವೃತ್ತ ವೈದ್ಯೆ ಡಾ. ಅರುಂಧತಿ ನಿಧನ

ಡಾ. ಅರುಂಧತಿ
ಭದ್ರಾವತಿ, ಫೆ. ೧೭ : ನಗರದ ಜನ್ನಾಪುರ ನಿವಾಸಿ, ವಿಐಎಸ್‌ಎಲ್ ಆಸ್ಪತ್ರೆ ನಿವೃತ್ತ ವೈದ್ಯೆ ಡಾ. ಅರುಂಧತಿ(೮೦) ನಿಧನ ಹೊಂದಿದರು.
ಪತಿ ಡಾ. ಚಂದ್ರಶೇಖರ್ ಹಂಚಾಟೆ, ಪುತ್ರ ಡಾ. ಗಿರೀಶ್, ಪುತ್ರಿ ಮಾಲಿನಿ ಹಾಗು ಸೊಸೆ ಇದ್ದಾರೆ. ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ಶುಕ್ರವಾರ ಸಂಜೆ ಇವರ ಅಂತ್ಯಕ್ರಿಯೆ ನೆರವೇರಿತು.
ಡಾ. ಅರುಂಧತಿಯವರ ನಿಧನಕ್ಕೆ ನಗರದ ವೈದ್ಯರು, ಗಣ್ಯರು, ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.