ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಪ್ರಮುಖರ ಆಕ್ರೋಶ
ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಭದ್ರಾವತಿ, ಮಾ. ೨ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗ ಶಾಂತಿಯುತವಾಗಿ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಗುತ್ತಿಗೆ ಕಾರ್ಮಿಕರು ಮನವಿ ಸಲ್ಲಿಸಲು ಅವಕಾಶ ನೀಡದಿರುವುದ ಖಂಡನೀಯ ಎಂದು ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರು, ಮುಖ್ಯವಾಗಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯಬೇಕು, ಅಗತ್ಯವಿರುವ ಬಂಡವಾಳ ತೊಡಗಿಸಬೇಕು ಹಾಗು ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ನೀಡಬೇಕೆಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜ.೧೯ರಿಂದ ಕಾರ್ಖಾನೆ ಮುಂಭಾಗ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ನಾವುಗಳು ಯಾವುದೇ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಅಥವಾ ವ್ಯಕ್ತಿಗಳ ಪರವಾಗಿಲ್ಲ. ನಮ್ಮ ಹೋರಾಟದಲ್ಲಿ ಎಲ್ಲರಿಗೂ ಮುಕ್ತವಾದ ಅವಕಾಶ ನೀಡಿದ್ದೇವೆ. ಇದುವರೆಗೂ ನಮ್ಮ ಹೋರಾಟಕ್ಕೆ ಕೇಂದ್ರ ಸರ್ಕಾರ ಅಥವಾ ಉಕ್ಕು ಪ್ರಾಧಿಕಾರ ಯಾವುದೇ ರೀತಿ ಸ್ಪಂದಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
ರಾಜಕೀಯ ಇಚ್ಛಾಶಕ್ತಿ ಇಲ್ಲದೆ ಮತ್ತು ರಾಜಕೀಯ ಲಾಭ, ನಷ್ಟದ ಪಿತೂರಿಯಿಂದ ಈ ಕಾರ್ಖಾನೆಯನ್ನು ಮುಚ್ಚಲು ಹೊರಟಿರುವುದು ಖಂಡನೀಯ. ರಾಜಕೀಯವಾಗಿ ಎಲ್ಲಾ ಪ್ರಯತ್ನಗಳಾದ ಮೇಲೂ ನಮ್ಮ ಕಾರ್ಖಾನೆಯನ್ನು ಉಳಿಸಿಕೊಳ್ಳಲು ನಮಗೆ ಉಳಿದಿದ್ದು ಒಂದೇ ಮಾರ್ಗ ಪ್ರಧಾನ ಮಂತ್ರಿಯವರೊಂದಿನ ನೇರ ಭೇಟಿ. ಈ ಹಿನ್ನಲೆಯಲ್ಲಿ ಫೆ.೨೭ರಂದು ಶಿವಮೊಗ್ಗ ಸೋಗಾನೆಯಲ್ಲಿ ನಿರ್ಮಿಸಲಾಗಿರುವ ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರ ಆಗಮನ ಎದುರು ನೋಡಲಾಗುತ್ತಿತ್ತು ಎಂದರು.
ನಮಗೆ ದೊರಕಿರುವ ಅಮೂಲ್ಯವಾದ ಅವಕಾಶ ಕಾರ್ಖಾನೆ ಹಾಗು ಭದ್ರಾವತಿಯ ಉತ್ತಮ ಭವಿಷ್ಯದ ಸಲುವಾಗಿ ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಂಡು ಕಾರ್ಖಾನೆಯ ಸಂಕ್ಷಿಪ್ತ ವಿಚಾರವನ್ನು ಅವರ ಗಮನಕ್ಕೆ ತರಲು ಹಾಗು ಕಾರ್ಖಾನೆ ಮುಚ್ಚುವ ನಿರ್ಧಾರ ಕೈಬಿಟ್ಟು ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಮನವಿ ಮಾಡಿಕೊಳ್ಳಲು ತೀರ್ಮಾನಿಸಲಾಗಿತ್ತು. ನಮಗೆ ಪ್ರಧಾನ ಮಂತ್ರಿಯವರ ಅಧೀನ ಕಾರ್ಯದರ್ಶಿ(ಪಿ.ಎಸ್)ಯವರಿಗೆ ಮನವಿ ಸಲ್ಲಿಸಲು ಅವಕಾಶ ಮಾಡಿಕೊಡಲಾಯಿತು. ಆದರೆ ನಮಗೆ ನೇರವಾಗಿ ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಲು ಅವಕಾಶ ನೀಡುವಂತೆ ಕೋರಲಾಗಿತ್ತು. ಆದರೆ ಇದಕ್ಕೆ ಅವಕಾಶ ನೀಡಲಿಲ್ಲ. ಈ ಹಿನ್ನಲೆಯಲ್ಲಿ ಕಾರ್ಖಾನೆ ಮುಂಭಾಗದಿಂದ ಬೆಳಿಗ್ಗೆ ೬.೩೦ಕ್ಕೆ ಪಾದಯಾತ್ರೆ ಮೂಲಕ ವಿಮಾನ ನಿಲ್ದಾಣ ತಲುಪಲು ತೀರ್ಮಾನಿಸಲಾಯಿತು ಎಂದರು.
ಪ್ರಧಾನ ಮಂತ್ರಿಯವರಿಗೆ ನಾವುಗಳು ಮನವಿ ಸಲ್ಲಿಸುವುದನ್ನು ತಪ್ಪಿಸಲು ಪೊಲೀಸರು ನಮ್ಮನ್ನು ಬೆಳಗಿನ ಜಾವ ಸುಮಾರು ೩ ಗಂಟೆ ಸಮಯದಲ್ಲಿ ಏಕಾಏಕಿ ಮನೆಯಿಂದ ಬಂಧಿಸಿ ಹೊಳೆಹೂನ್ನೂರು ಮಂಟದದಲ್ಲಿಡಲಾಗಿತ್ತು. ಸಂಜೆ ೪ ಗಂಟೆ ಸಮಯದಲ್ಲಿ ಬಿಡುಗಡೆಗೊಳಿಸಿದರು. ಈ ನಡುವೆ ನಮ್ಮನ್ನು ಬಂಧಿಸಿರುವ ವಿಷಯ ತಿಳಿದ ಗುತ್ತಿಗೆ ಕಾರ್ಮಿಕರು ಧೈರ್ಯಗೆಡದೆ ಹೋರಾಟ ಮುಂದುವರೆಸುವ ಮೂಲಕ ಪಾದಯಾತ್ರೆ ಆರಂಭಿಸಿದರು. ಆದರೆ ಮಾರ್ಗಮಧ್ಯ ಬಿಳಿ ಕ್ರಾಸ್ ಪಾದಯಾತ್ರೆ ತಡೆದು ವಶಕ್ಕೆ ಪಡೆಯಲಾಯಿತು. ನಮಗೆ ಮನವಿ ಸಲ್ಲಿಸಲು ಅವಕಾಶ ನೀಡದಿರುವುದು ಖಂಡನೀಯವಾಗಿದ್ದು, ಇದರ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು.
ನಮಗೆ ಯಾರ ಮೇಲೂ ವೈಯಕ್ತಿಕವಾಗಿ ದ್ವೇಷವಿಲ್ಲ. ನಮ್ಮ ಹೋರಾಟಕ್ಕೆ ಬೆಂಬಲ ನೀಡುವ ನೆಪದಲ್ಲಿ ಕೆಲವರು ನಮ್ಮನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ನಮ್ಮ ಹೋರಾಟಕ್ಕೆ ಕಪ್ಪು ಚುಕ್ಕೆಯನ್ನು ತರಲು ಯತ್ನಿಸುತ್ತಿದ್ದಾರೆ. ಇದನ್ನು ಸಹ ನಾವುಗಳು ಖಂಡಿಸುತ್ತೇವೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರರವರ ಮೇಲೆ ನಮಗೆ ತುಂಬಾ ಗೌರವಿದೆ. ನಮ್ಮ ಹೋರಾಟ ಕಾರ್ಖಾನೆ ಉಳಿಸಿಕೊಳ್ಳುವುದಾಗಿದೆ ಎಂದರು.
ನಮಸಂಘವು ನಮ್ಮ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಸಂಘಟನೆಗಳ ಅಧ್ಯಕ್ಷರಾದ ಎಚ್.ಜಿ ಸುರೇಶ್, ಕುಮಾರಸ್ವಾಮಿ, ಪ್ರಮುಖರಾದ ಆರ್. ಮಂಜುನಾಥ್, ಪಿ. ರಾಕೇಶ್, ಎನ್.ಆರ್ ವಿನಯ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.