Thursday, March 16, 2023

ಏಕಾಏಕಿ ನೀರೂರು ಪೊಲೀಸ್ ಠಾಣೆಯಾಗಿ ಬದಲಾದ ಲೇಡಿಸ್ ಕ್ಲಬ್

ಲಾಫಿಂಗ್ ಬುದ್ಧ ಚಲನಚಿತ್ರದ ಮೊದಲ ಹಂತದ ಚಿತ್ರೀಕರಣಕ್ಕೆ ಚಾಲನೆ  

ಭದ್ರಾವತಿ ನ್ಯೂಟೌನ್ ಜಯಶ್ರೀ ವೃತ್ತದಲ್ಲಿರುವ ಲೇಡಿಸ್ ಕ್ಲಬ್‌ನಲ್ಲಿ ಲಾಫಿಂಗ್ ಬುದ್ಧ ಚಿತ್ರದ ಚಿತ್ರೀಕರಣ ನಡೆಯುತ್ತಿರುವುದು.
    ಭದ್ರಾವತಿ, ಮಾ. ೧೬ : ನಗರದ ನ್ಯೂಟೌನ್ ಜಯಶ್ರೀ ವೃತ್ತದಲ್ಲಿರುವ ಲೇಡಿಸ್ ಕ್ಲಬ್ ಇದೀಗ ಕೆಲವೇ ದಿನಗಳಲ್ಲಿ ನೀರೂರು ಪೊಲೀಸ್ ಠಾಣೆಯಾಗಿ ಪರಿವರ್ತನೆಯಾಗಿದ್ದು, ಇಲ್ಲಿನ ನಿವಾಸಿಗಳನ್ನು ಬೆರಗುಗೊಳಿಸಿದೆ.
    ಲೇಡಿಸ್ ಕ್ಲಬ್ ಸುಮಾರು ೫-೬ ದಶಕಗಳಿಂದ ಈ ಭಾಗದಲ್ಲಿ ಮನೆ ಮಾತಯಾಗಿದ್ದು, ಏಕಾಏಕಿ ನೀರೂರು ಪೊಲೀಸ್ ಠಾಣೆಯಾಗಿ ರೂಪುಗೊಂಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಕಳೆದ ೨-೩ ದಿನಗಳಿಂದ ನಿವಾಸಿಗಳ ಕುತೂಹಲಕ್ಕೆ ಕಾರಣವಾಗಿದೆ. ಹೌದು ಹಳೇಯದಾದ ಲೇಡಿಸ್ ಕ್ಲಬ್ ಕಟ್ಟಡದಲ್ಲಿ ಲಾಫಿಂಗ್ ಬುದ್ಧ ಚಲನಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಈ ಚಿತ್ರಕ್ಕೆ ಪೊಲೀಸ್ ಠಾಣೆಯಾಗಿ ಬಳಸಿಕೊಳ್ಳಲಾಗಿದೆ. ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧೆಡೆಗಳಿಂದ ಕಲಾವಿದರು, ತಂತ್ರಜ್ಞರ ತಂಡ ಆಗಮಿಸಿ ಬೀಡು ಬಿಟ್ಟಿದೆ.
    ನಟ, ನಿರ್ದೇಶಕ ರಿಷಬ್‌ಶೆಟ್ಟಿರವರ ನಿರ್ಮಾಣದಲ್ಲಿ ತಾಲೂಕಿನ ಸುತ್ತಮುತ್ತ ಚಲನಚಿತ್ರವೊಂದರ ಚಿತ್ರೀಕರಣ ನಡೆಯುತ್ತಿದ್ದು, ಮಾ.೧೧ರಂದು ನಗರದ ಲೋಯರ್ ಹುತ್ತಾ ಶ್ರೀಚಂಡಿಕಾ ದುರ್ಗಾ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆಯಿತು. ನಂತರ ಲೇಡಿಸ್ ಕ್ಲಬ್‌ನಲ್ಲಿ ನಿರ್ಮಿಸಲಾಗಿರುವ ನೀರೂರು ಪೊಲೀಸ್ ಠಾಣೆ ಶೆಡ್‌ನಲ್ಲಿ ಚಿತ್ರೀಕರಣ ಆರಂಭಗೊಂಡಿದೆ.


ಅಪರಂಜಿ ಶಿವರಾಜ್, ರಂಗ ಕಲಾವಿದ, ಕಿರುತೆರೆ ನಟ
    ಚಿತ್ರದ ನಾಯಕ ನಟನಾಗಿ ಪ್ರಮೋದ್ ಶೆಟ್ಟಿ ಹಾಗು ನಾಯಕಿಯಾಗಿ ತೇಜೂ ಬೆಳವಾಡಿ ನಟಿಸುತ್ತಿದ್ದು, ಕಥೆ ಮತ್ತು ನಿರ್ದೇಶನ ಭರತ್‌ರಾಜ್ ಹಾಗು ಛಾಯಾಗ್ರಾಹಣ ಚಂದ್ರಶೇಖರ್ ಮತ್ತು ಚಿತ್ರದ ನಿರ್ವಹಣೆ ಹಾಗು ವ್ಯವಸ್ಥಾಪಕರಾಗಿ ನಗರದ ರಂಗಕಲಾವಿದ, ಕಿರುತೆರೆ ನಟ ಅಪರಂಜಿ ಶಿವರಾಜ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಪರಂಜಿ ಶಿವರಾಜ್‌ರವರು ಇದುವರೆಗೂ ೨೧ ಚಲನಚಿತ್ರಗಳಲ್ಲಿ ಕಾರ್ಯನಿರ್ವಹಿಸಿದ್ದು, ಈ ಪೈಕಿ ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.


ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮಾ.೨೩ರವರೆಗೆ ನಡೆಯಲಿದೆ. ೨ನೇ ಹಂತದ ಚಿತ್ರೀಕರಣ ಏಪ್ರಿಲ್‌ನಲ್ಲಿ ನಡೆಯಲಿದೆ. ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಭದ್ರಾವತಿ ಸುತ್ತಮುತ್ತ ನಡೆಯಲಿದ್ದು, ಆರಂಭಿಕ ಹಂತದ ಚಿತ್ರೀಕರಣ ಇದೀಗ ಆರಂಭಗೊಂಡಿದೆ. ಈ ಹಿಂದೆ ಕನ್ನಡದ ಹಲವು ಪ್ರಸಿದ್ದ ಚಲನಚಿತ್ರಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದು, ಈ ಚಿತ್ರದ ನಿರ್ವಹಣೆ ಹಾಗು ವ್ಯವಸ್ಥಾಪಕನಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.
                                                                - ಅಪರಂಜಿ ಶಿವರಾಜ್, ರಂಗ ಕಲಾವಿದ, ಕಿರುತೆರೆ ನಟ.







Wednesday, March 15, 2023

ವಿಐಎಸ್‌ಎಲ್-ಎಂಪಿಎಂ ಮುಚ್ಚದಿರಲು ಆಗ್ರಹ : ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕ ಸಂಘಟನೆಗಳು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ), ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ  ಮತ್ತು ಡಾ. ಬಿ.ಆರ್ ಅಂಬೇಡ್ಕರ್ ಪಡೆ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೆಂಬಲ ಸೂಚಿಸಲಾಯಿತು.
    ಭದ್ರಾವತಿ, ಮಾ. ೧೫ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕ ಸಂಘಟನೆಗಳು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ), ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ  ಮತ್ತು ಡಾ. ಬಿ.ಆರ್ ಅಂಬೇಡ್ಕರ್ ಪಡೆ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೆಂಬಲ ಸೂಚಿಸಲಾಯಿತು.
    ಇದಕ್ಕೂ ಮೊದಲು ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ಧೋರಣೆಗಳನ್ನು ಖಂಡಿಸಲಾಯಿತು. ನಂತರ ಎಂಪಿಎಂ ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿ ತಹಸೀಲ್ದಾರ್ ಮೂಲಕ ಪ್ರಧಾನ ಮಂತ್ರಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಮೈಸೂರು ಮಹಾರಾಜರು ಹಾಗು ಭಾರತರತ್ನ ಸರ್.ಎಂ ವಿಶ್ವೇಶ್ವರಾಯರವರ ಪರಿಶ್ರಮದ ಫಲವಾಗಿ ಸ್ಥಾಪನೆಗೊಂಡ ವಿಐಎಸ್‌ಎಲ್   ನೂರು ವರ್ಷ ಪೂರೈಸಿರುವ ದೇಶದ ಮೊಟ್ಟಮೊದಲ ಕಾರ್ಖಾನೆಯಾಗಿದೆ. ರಾಜ್ಯದ ೬.೫ ಕೋಟಿ ಕನ್ನಡಿಗರ ಹಮ್ಮೆಯ ಆಸ್ತಿಯಾಗಿದೆ. ಕ್ಷೇತ್ರದ ಜೀವನಾಡಿಯಾಗಿದೆ. ಉಕ್ಕಿನ ನಗರಿ ಎಂದು ಹೆಸರು ತಂದುಕೊಟ್ಟ ಕಾರ್ಖಾನೆ ಇದಾಗಿದೆ. ವಿಐಎಸ್‌ಎಲ್ ಮತ್ತು ಎಂ.ಪಿ.ಎಂ ಈ ಎರಡು ಕಾರ್ಖಾನೆಗಳು ರಾಜ್ಯದ ಹೆಮ್ಮೆಯ ಗರಿಗಳು, ಪ್ರಸ್ತುತ ಈ ಕಾರ್ಖಾನೆಗಳು ಮುಚ್ಚುವ ಸ್ಥಿತಿ ತಲುಪಿರುವುದು ವಿಷಾದನೀಯ ಬೆಳವಣಿಗೆಯಾಗಿದೆ ಎಂದು ಅಳಲು ತೋರ್ಪಡಿಸಿಕೊಳ್ಳಲಾಗಿದೆ.  
    ಈ ಎರಡು ಕಾರ್ಖಾನೆಗಳಲ್ಲಿ ಸುಮಾರು ೩೦ ಸಾವಿರಕ್ಕೂ ಅಧಿಕ ಕಾರ್ಮಿಕರು ೩ ಪಾಳಿಯಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇದರಿಂದಾಗಿ ಸಾವಿರಾರು ಕಾಯಂ ಮತ್ತು ಗುತ್ತಿಗೆ ಕಾರ್ಮಿಕರ ಕುಟುಂಬಗಳಿಗೆ ಜೀವನಕ್ಕೆ ದಾರಿಯಾಗಿತ್ತು. ವಿಐಎಸ್‌ಎಲ್ ವಿಶ್ವದಲ್ಲೇ ಉತ್ಕೃಷ್ಟ ಉಕ್ಕು ತಯಾರಿಕೆಗೆ ಹೆಸರುವಾಸಿಯಾಗಿದ್ದು, ಆದರೆ ಇದೀಗ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ಹೂಡದೆ ಇರುವುದರಿಂದ ಕಾರ್ಖಾನೆಯಲ್ಲಿ ಉತ್ಪಾದನೆ ಕಡಿಮೆಯಾಗಿದೆ. ಇದರಿಂದಾಗಿ ಕಾರ್ಖಾನೆಯಲ್ಲಿ ಕಾರ್ಮಿಕರ ಸಂಖ್ಯೆ ಸಹ ಕಡಿಮೆಯಾಗುತ್ತಿದ್ದು, ಸಾವಿರಾರು ಕಾಯಂ ಮತ್ತು ಗುತ್ತಿಗೆ ಕಾರ್ಮಿಕರು ಸಂಕಷ್ಟ ಎದುರಿಸುವಂತಾಗಿದೆ.  ಕಾರ್ಮಿಕರ ಕುಟುಂಬಗಳಿಗೆ ಜೀವನ ನಿರ್ವಹಣೆ ಮಾಡುವುದು ಬಹಳ ಕಷ್ಟಕರವಾಗಿದೆ. ಅಲ್ಲದೆ ಈ ಎರಡು ಕಾರ್ಖಾನೆಗಳನ್ನು ಪರೋಕ್ಷವಾಗಿ ಅವಲಂಬಿಸಿರುವವರು ಸಹ ಸಂಕಷ್ಟ ಎದುರಿಸುವಂತಾಗಿದೆ. ಈ ಹಿನ್ನಲೆಯಲ್ಲಿ  ವಿಐಎಸ್‌ಎಲ್ ಮತ್ತು ಎಂಪಿಎಂ ಈ ಎರಡು ಕಾರ್ಖಾನೆಗಳನ್ನು ಮುಚ್ಚುವ ಪ್ರಕ್ರಿಯೆ ಹಿಂಪಡೆದುಕೊಂಡು ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.  
    ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಟಿ.ಎಚ್ ಹಾಲೇಶಪ್ಪ, ತಾಲೂಕು ಪ್ರಧಾನ ಸಂಚಾಲಕ ಎಸ್. ಪುಟ್ಟರಾಜು, ತಾಲೂಕು ಅಧ್ಯಕ್ಷ ಎಸ್. ಜಮೀರ್, ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಿ. ಆನೇಕೊಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಆರ್ ಶಿವಾನಂದ್, ಡಾ. ಬಿ.ಆರ್ ಅಂಬೇಡ್ಕರ್ ಎಸ್‌ಸಿ/ಎಸ್‌ಟಿ ಪಡೆ ಅಧ್ಯಕ್ಷ ವೆಂಕಟೇಶ್ ಉಜ್ಜನಿಪುರ, ಜೆಡಿಎಸ್ ನಗರ ಅಧ್ಯಕ್ಷ ಆರ್. ಕರುಣಾಮೂರ್ತಿ, ನಗರಸಭೆ ಸದಸ್ಯ ಉದಯಕುಮಾರ್, ದಲಿತ ಮುಖಂಡರಾದ ನಾಗೇಶ್, ಸಂಪತ್, ಹನುಮಂತಪ್ಪ, ಅಣ್ಣಪ್ಪ, ಸಂತೋಷ್, ಶಿವಕುಮಾರ್, ಶ್ರೀನಿವಾಸ್, ಮಂಜುನಾಥ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭದ್ರಾವತಿಯಲ್ಲಿ ಬುಧವಾರ ದಲಿತ ಮುಖಂಡರು ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳನ್ನು ಅಭಿವೃದ್ಧಿಪಡಿಸದೆ ನಿರ್ಲಕ್ಷಿಸಿರುವುದನ್ನು ಖಂಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟಿಸಿದರು.

ಮಹಿಳಾ ದಿನಾಚರಣೆ : ಸಾಧಕ ಮಹಿಳೆಯರಿಗೆ ಸನ್ಮಾನ

ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್‌ನಲ್ಲಿ ಕೇರಳ ಸಮಾಜಂ ಮಹಿಳಾ ವಿಭಾಗದ ವತಿಯಿಂದ ಮಹಿಳಾ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು. ನಿವೃತ್ತ ಜಿಲ್ಲಾ ಸರ್ಜನ್ ಡಾ. ನಂದಾ ಆರ್. ಕೋಠಿ ಸೇರಿದಂತೆ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು.
    ಭದ್ರಾವತಿ, ಮಾ. ೧೫ : ನಗರದ ನ್ಯೂಟೌನ್ ಲಯನ್ಸ್ ಕ್ಲಬ್‌ನಲ್ಲಿ ಕೇರಳ ಸಮಾಜಂ ಮಹಿಳಾ ವಿಭಾಗದ ವತಿಯಿಂದ ಮಹಿಳಾ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು.
    ನಿವೃತ್ತ ಜಿಲ್ಲಾ ಸರ್ಜನ್ ಡಾ. ನಂದಾ ಆರ್. ಕೋಠಿ, ಹಳೇನಗರ ತಾಲೂಕು ಸಾರ್ವಜನಿಕ ಆಸ್ಪತ್ರೆ ಮಹಿಳಾ ವೈದ್ಯೆ ಡಾ. ವರ್ಷಾ,  ಎಮೆರಿಟಸ್ ಪ್ರೊಫೆಸರ್ ಡಾ. ವಿಜಯಾದೇವಿ, ಲಯನ್ಸ್ ಕ್ಲಬ್ ವಿದ್ಯಾ ಕಾರ್ತಿಕ್, ಕಲಾ ದೇವರಾಜ್, ವಿಜಯಲಕ್ಷ್ಮೀ ಬಿ. ಸಿ ಕುಮಾರ್, ಕಮಲಮ್ಮ ಸೇರಿದಂತೆ ಇನ್ನಿತರರನ್ನು ಮಹಿಳಾ ದಿನಾಚರಣೆ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು.
    ಕೇರಳ ಸಮಾಜಂ ಪದಾಧಿಕಾರಿಗಳಾದ ಶೋಭಾ ಬಾಲಚಂದರ್, ಸೀತಾಲಕ್ಷ್ಮಿ, ವಿಜಯಲಕ್ಷ್ಮಿ, ರೇಖಾಚಂದ್ರನ್, ಪಂಕಜ, ಶಾಂತಮ್ಮ, ಕಲ್ಯಾಣಿ ಶಶಿಧರನ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತನೆ : ಪ್ರಕರಣ ದಾಖಲು

    ಭದ್ರಾವತಿ, ಮಾ. ೧೫ : ನಗರದ ತರೀಕೆರೆ ರಸ್ತೆ ರೈಲ್ವೆ ಮೇಲ್ಸೇತುವೆ ಕೆಳಗೆ ಯುವಕನೊಬ್ಬ ಮಾದಕ ವಸ್ತು ಸೇವನೆ ಅಮಲಿನಲ್ಲಿ ಅಸಭ್ಯವಾಗಿ ವರ್ತಿಸಿದ ಹಿನ್ನಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
    ಸಾದತ್ ಕಾಲೋನಿ ನಿವಾಸಿ ಶೇಖ್(೧೯) ಎಂಬಾತ ಅಸಭ್ಯವಾಗಿ ವರ್ತಿಸಿದ್ದು, ಈತನನ್ನು ವಶಕ್ಕೆ ಪಡೆದು ಶಿವಮೊಗ್ಗ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ದಾಖಲಿಸಲಾಯಿತು. ಈತ ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಇಸ್ಪೀಟ್ ಜೂಜಾಟ ಅಡ್ಡೆ ಮೇಲೆ ದಾಳಿ

    ಭದ್ರಾವತಿ, ಮೇ. ೧೫ : ತಾಲೂಕಿನ ಸೀತಾರಾಮಪುರ ಗ್ರಾಮದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಬಳಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಅಡ್ಡೆಯೊಂದರ ಮೇಲೆ ದಾಳಿ ನಡೆಸಿ ಪ್ರಕರಣದ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.
    ಅತ್ತಿಗುಂದ ಗ್ರಾಮದ ಪ್ರದೀಪ, ಚಂದ್ರಶೇಖರ್ ಮತ್ತು ಇತರರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗ್ರಾಮಾಂತರ ಠಾಣೆ ಪೊಲೀಸರು ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tuesday, March 14, 2023

ವಿಐಎಸ್‌ಎಲ್ ಉಳಿಸಿ : ಮೈಸೂರಿನಲ್ಲಿ ಧರಣಿ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಉಳಿಸುವಂತೆ ಒತ್ತಾಯಿಸಲು ಹಾಗು ಮೈಸೂರು ಅರಸರ ಮನೆತನಕ್ಕೆ ವಿಷಯ ಮುಟ್ಟಿಸಲು ಪ್ರತಿಭಟನಾ ಧರಣಿ ಹಮ್ಮಿಕೊಂಡಿರುವ ನಗರದ ದಯಾನಂದ್ ಮತ್ತು ಸಂಗಡಿಗರು
    ಭದ್ರಾವತಿ, ಮಾ. ೧೪ : ನಗರದ ಬಿ.ಎಚ್ ರಸ್ತೆ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ವಿದ್ಯುನ್ಮಾನ ತೂಕ ಮತ್ತು ಅಳತೆ ತಕ್ಕಡಿಗಳ ಸಣ್ಣ ವ್ಯಾಪಾರಿ ದಯಾನಂದ್ ಮತ್ತು ಸ್ನೇಹಿತರು ವಿಐಎಸ್‌ಎಲ್ ಕಾರ್ಖಾನೆ ಉಳಿಸುವಂತೆ ಒತ್ತಾಯಿಸಿ ಮೈಸೂರಿನ ಗಾಂಧಿ ಸ್ಕ್ವಯರ್‌ನ ಗಾಂಧಿ ಪ್ರತಿಮೆ ಬಳಿ ರಾಜ ಮನೆತನದ ಗಮನ ಸೆಳೆದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಲು ಮಂಗಳವಾರ ಧರಣಿ ಪ್ರತಿಭಟನೆ ನಡೆಸಿದರು.
  ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಮೋಕ್ಷಗುಡಂ ವಿಶ್ವೇಶ್ವರಾಯರವರು ಸ್ಥಾಪಿಸಿದ ವಿಐಎಸ್‌ಎಲ್ ಕಾರ್ಖಾನೆಗೆ ನೂರು ವರ್ಷ ತುಂಬಿದೆ. ಲಕ್ಷಾಂತರ ಮಂದಿಗೆ ಉದ್ಯೋಗ, ಅನ್ನ, ವಸತಿ ನೀಡಿದ ಕಾರ್ಖಾನೆಯ ಶತಮಾನೋತ್ಸವ ಆಚರಿಸುವ ಬದಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಚ್ಚಲು ತೀರ್ಮಾನಿಸಿ ಶೋಕೋತ್ಸವ ಆಚರಿಸುವಂತೆ ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.
    ಕಳೆದೆರೆಡು ತಿಂಗಳಿಂದ ಗುತ್ತಿಗೆ ಕಾರ್ಮಿಕರು ನಿರಂತರ ಹೋರಾಟ ಮಾಡುತ್ತಿದ್ದರು ಪ್ರಯೋಜನವಾಗಿಲ್ಲ. ನಾಡಿನ ಸಂತರು ಮಠಾಧಿಪತಿಗಳು ಸಂಘ ಸಂಸ್ಥೆಗಳ ಮುಖಂಡರು ಹೋರಾಟಕ್ಕೆ ಬೆಂಬಲಿಸಿ ಕೇಂದ್ರ ನರೇಂದ್ರ ಮೋದಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಪ್ರಧಾನಿಗಳು ವಿಮಾನ ನಿಲ್ದಾಣ ಉದ್ಘಾಟಿಸಲು ಶಿವಮೊಗ್ಗಕ್ಕೆ ಆಗಮಿಸಿದ್ದರೂ ಸಹ ಈ ಕುರಿತು ಚಕಾರ ಎತ್ತಿಲ್ಲ. ಮಂಡ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ ವಿಶ್ವೇಶ್ವರಾಯ ಇಬ್ಬರೂ ಕನ್ನಡ ನಾಡಿಗೆ ಸೀಮಿತರಲ್ಲ. ಜಗತ್ತಿಗೆ ಬೆಳಕು ಕೊಟ್ಟ ಅಭಿವೃದ್ದಿಯ ಹರಿಕಾರ ಮಹಾನ್ ವ್ಯಕ್ತಿಗಳೆಂದು ಸ್ವತಃ ಮೋದಿರವರೇ ಹೊಗಳಿ ರಾಜಕೀಯ ಭಾಷಣ ಮಾಡಿದ್ದಾರೆ. ಅವರಿಬ್ಬರ ಮೇಲೆ ಅಂತಹ ಅಭಿಮಾನವಿದ್ದರೆ ಅವರು ಸ್ಥಾಪಿಸಿದ ವಿಐಎಸ್‌ಎಲ್ ಕಾರ್ಖಾನೆ ಉಳಿಸಲಿ ಎಂದು ಆಗ್ರಹಿಸಿದರು.
    ಈಗಾಗಲೇ ಕಾರ್ಖಾನೆ ಉಳಿವಿಗಾಗಿ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಇದೀಗ ಕಾರ್ಖಾನೆ ಸ್ಥಾಪನೆಗೆ ಕಾರಣಕರ್ತರಾಗಿರುವ ಮೈಸೂರು ಅರಸರ ಮನೆತನಕ್ಕೆ ವಿಷಯ ಮುಟ್ಟಿಸಲು ಹಾಗೂ ಕೇಂದ್ರ ಸರ್ಕಾರಕ್ಕೆ ಎಚ್ಚರಿಸಲು ಪ್ರತಿಭಟಣಾ ಧರಣಿ ಕೈಗೊಳ್ಳಲಾಗಿದೆ ಎಂದರು.

ಕಾಂಗ್ರೆಸ್ ಕಾರ್ಯಕರ್ತರಿಂದ ವಕೀಲರ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ : ಕ್ಷಮೆಯಾಚಿಸಿದ ತಹಸೀಲ್ದಾರ್

ಭದ್ರಾವತಿ ಜೆಎಂಎಫ್‌ಸಿ ಕೋರ್ಟ್ ಮುಂಭಾಗದ ರಸ್ತೆ ಅಗಲೀಕರಣಕ್ಕೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ವಕೀಲರ ಮೇಲೆ ದೌರ್ಜನ್ಯ ನಡೆಸಿರುವುದು ಖಂಡನೀಯ. ಅಲ್ಲದೆ ಹಿನ್ನಲೆ ಅರಿಯದ ನೂತನ ತಹಸೀಲ್ದಾರ್ ಸಹ ವಕೀಲರ ವಿರುದ್ದ ಆರೋಪಿಸಿರುವುದನ್ನು ಖಂಡಿಸಿ ನ್ಯಾಯಾಲಯದ ಕಲಾಪಗಳಿಗೆ ವಕೀಲರು ಹಾಜರಾಗದೆ ಪ್ರತಿಭಟನೆ ನಡೆಸಿದರು.
 ಭದ್ರಾವತಿ, ಮಾ. ೧೪: ನಗರದ ಜೆಎಂಎಫ್‌ಸಿ ಕೋರ್ಟ್ ಮುಂಭಾಗದ ರಸ್ತೆ ಅಗಲೀಕರಣಕ್ಕೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ವಕೀಲರ ಮೇಲೆ ದೌರ್ಜನ್ಯ ನಡೆಸಿರುವುದು ಖಂಡನೀಯ. ಅಲ್ಲದೆ ಹಿನ್ನಲೆ ಅರಿಯದ ನೂತನ ತಹಸೀಲ್ದಾರ್ ಸಹ ವಕೀಲರ ವಿರುದ್ದ ಆರೋಪಿಸಿರುವುದನ್ನು ಖಂಡಿಸಿ ನ್ಯಾಯಾಲಯದ ಕಲಾಪಗಳಿಗೆ ವಕೀಲರು ಹಾಜರಾಗದೆ ಪ್ರತಿಭಟನೆ ನಡೆಸಿದರು.
    ವಕೀಲರ ಸಂಘ ಕಳೆದ ಸುಮಾರು ೩ ವರ್ಷಗಳಿಂದ ಕೋರ್ಟ್ ಮುಂಭಾಗ ಕಟ್ಟಡಗಳ ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡಬೇಕೆಂದು ಆಗ್ರಹಿಸಿ ಹೋರಾಟ ನಡೆಸುತ್ತಿದೆ.  ಆದರೆ ಶಾಸಕರ ಆದೇಶದಂತೆ ಅಧಿಕಾರಿಗಳು ಕಟ್ಟಡಗಳ ತೆರವು ಮಾಡದೆ ರಸ್ತೆ ಡಾಂಬರೀಕರಣಕ್ಕೆ ಮುಂದಾಗಿರುವುದು ಖಂಡನೀಯ ಎಂದು ಆರೋಪಿಸಿದರು.
    ಭಾನುವಾರ ರಜಾ ದಿನವಾದ ಹಿನ್ನಲೆಯಲ್ಲಿ ಯಾರು ಪ್ರಶ್ನಿಸುವುದಿಲ್ಲ ಎಂದು ಮನಗಂಡು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುಂಡಿಗಳನ್ನು ಮುಚ್ಚುವ ನೆಪದಲ್ಲಿ ಡಾಂಬರೀಕರಣ ಮಾಡಲು ಬಂದಿದ್ದು ಹೇಯಕೃತ್ಯವಾಗಿದೆ. ಅಲ್ಲದೆ ವಕೀಲರ ಮೇಲೆ ದೌರ್ಜಜ್ಯವೆಸಗಲು ಬಂದ ಪುಡಾರಿಗಳ ಮೇಲೆ ಶಿಸ್ತು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
    ಘಟನೆಯನ್ನು ಖಂಡಿಸಿ ವಕೀಲರು ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ವಕೀಲರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ನೇತೃತ್ವದಲ್ಲಿ ತುರ್ತು ಸಭೆ ನಡೆಸಿ ರಂಗಪ್ಪ ವೃತ್ತದಿಂದ ತಾಲೂಕು ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
    ತಹಸೀಲ್ದಾರ್ ಸ್ಥಳಕ್ಕಾಗಮಿಸಿ ಮಾತನಾಡಿ, ಭಾನುವಾರ ನಾವು ಹಿನ್ನಲೆ ಅರಿಯದೆ ಮಾತನಾಡಿದ್ದು ತಪ್ಪಾಗಿದೆ ವಿಷಾಧಿಸುತ್ತೇನೆಂದು ಹೇಳಿದರು.
ನಂತರ ವಕೀಲರು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಕಟ್ಟಡ ತೆರವು ಮಾಡದ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ತಾಯಿಸಿದರು.
    ಪ್ರತಿಭಟನೆಯಲ್ಲಿ ವಕೀಲರ ಸಂಘದ ಪದಾಧಿಕಾರಿಗಳಾದ ವಿಶ್ವನಾಥ್, ಉದಯಕುಮಾರ್, ಮಂಜಪ್ಪ, ವಿಮಲಾ, ಹಿರಿಯ ವಕೀಲರಾದ ಬಿ.ಆರ್.ಪ್ರಭುದೇವ್, ಟಿ. ಚಂದ್ರೇಗೌಡ, ವಿ. ವೆಂಕಟೇಶ್, ಎ.ಟಿ ರವಿ, ಉಮಾಪತಿ, ಸಿದ್ದೇಶ್, ಸುಜಾತ, ಆಶಾ, ಕೆ.ಎಸ್.ಸುದೀಂದ್ರ, ಕೂಡ್ಲಿಗೆರೆ ಮಂಜುನಾಥ್ ಸೇರಿದಂತೆ ಇನ್ನಿತರ ವಕೀಲರು ಭಾಗವಹಿಸಿದ್ದರು.