ಭದ್ರಾವತಿ ಅಪ್ಪರ್‌ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ , ಸಾಗರ ಮಹಿಳಾ ಖಾದಿ ಉದ್ಯಮಿ, ಸಮಾಜ ಸೇವಕಿ ಕೆ.ಬಿ ಭಾಗೀರಥಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ, ಮಾ. ೨೬: ಸಮಾಜ ಹಾಗು ಕುಟುಂಬಕ್ಕೆ ಮಹಿಳೆಯರ ಕೊಡುಗೆ ಅನನ್ಯವಾಗಿದ್ದು, ಮಹಿಳೆಯರನ್ನು ಸಮಾಜದಲ್ಲಿ ಸಮಾನವಾಗಿ ಕಾಣುವ ಮೂಲಕ ಅವರನ್ನು ಸಹ ಗುರುತಿಸಿ ಗೌರವಿಸುವಂತಾಗಬೇಕೆಂದು ನಗರದ ಚುಂಚಾದ್ರಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಡಾ. ಅನುರಾಧ ಪಟೇಲ್ ಹೇಳಿದರು.
ಅವರು ವೇದಿಕೆ ವತಿಯಿಂದ ಅಪ್ಪರ್‌ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಮ್ಮ ಇತಿಹಾಸದಲ್ಲಿನ ಅನೇಕ ಮಹಿಳೆಯರ ಕೊಡುಗೆ, ಸಾಧನೆಗಳನ್ನು ನಾವುಗಳು ತಿಳಿದುಕೊಳ್ಳಬೇಕಾಗಿದೆ. ಸ್ತ್ರೀಯರು ಪರಸ್ಪರ ನಡುವೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕಾಗಿದೆ. ಪ್ರತಿಯೊಬ್ಬರು ಪ್ರೋತ್ಸಾಹಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಸಮಾಜ ಹಾಗು ಕುಟುಂಬದಲ್ಲಿನ ನಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಮುನ್ನಡೆಯಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಂಡು ತನ್ನ ಸಾಮರ್ಥ್ಯ ಪ್ರದರ್ಶಿಸುತ್ತಿದ್ದಾಳೆ. ಯಾವುದೇ ಕಾರ್ಯದಲ್ಲಿ ಪ್ರಾಮಾಣಿಕತೆಯಿಂದ ಮುನ್ನಡೆದಾಗ ಯಶಸ್ಸು ಖಚಿತ ಎಂದರು.
ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಮಾತನಾಡಿ, ಹೆಣ್ಣು ಸಾಧನೆಗೆ ಸ್ಪೂರ್ತಿದಾಯಕ. ಸಮಾಜದಲ್ಲಿ ಅವಳಿಗೆ ಇನ್ನೂ ಹೆಚ್ಚಿನ ಸಲಹೆ, ಸಹಕಾರ ನೀಡಿದಾಗ ಏನು ಬೇಕಾದರೂ ಸಾಧಿಸಲು ಸಾಧ್ಯ ಎಂದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಘಟಕ ವ್ಯವಸ್ಥಾಪಕಿ ಅಂಬಿಕಾ ಸುಧೀರ್, ಸಾಗರ ಮಹಿಳಾ ಖಾದಿ ಉದ್ಯಮಿ, ಸಮಾಜ ಸೇವಕಿ ಕೆ.ಬಿ ಭಾಗೀರಥಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಾನಪದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮಿಸ್ ಚುಂಚಾದ್ರಿ ಮಹಿಳೆಯಾಗಿ ಪ್ರೇಮ ಮಂಜುನಾಥ್, ಅದೃಷ್ಟದ ಮಹಿಳೆಯಾಗಿ ಆಯ್ಕೆಯಾದ ಪದ್ಮ ಮಂಜುನಾಥ್‌ರವರಿಗೆ ಬೆಳ್ಳಿ ದೀಪ ಉಡುಗೊರೆಯಾಗಿ ನೀಡಿಲಾಯಿತು.
ಲತಾ ಪ್ರಭಾಕರ್ ಸ್ವಾಗತಿಸಿದರು. ಸುಮತಿ ಕಾರಂತ್ ನಿರೂಪಿಸಿ ಶೀಲಾ ರವಿ ವಂದಿಸಿದರು.