Monday, March 27, 2023

ವಿಐಎಸ್‌ಎಲ್-ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿಗೆ ಕ್ರೈಸ್ತ ಧರ್ಮಗುರುಗಳಿಂದ ಸಾಮೂಹಿಕ ಪ್ರಾರ್ಥನೆ

ಎರಡು ಕಾರ್ಖಾನೆಗಳಿಗೂ ಅಗತ್ಯವಿರುವ ಬಂಡವಾಳ ಹೂಡಿ ಪುನಶ್ಚೇತನಗೊಳಿಸಲು ಆಗ್ರಹ

ಭದ್ರಾವತಿಯಲ್ಲಿ ಸೋಮವಾರ ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ತಾಲೂಕು ಶಾಖೆ ವತಿಯಿಂದ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿ ವಿಐಎಸ್‌ಎಲ್-ಎಂಪಿಎಂ ಎರಡೂ ಕಾರ್ಖಾನೆಗಳ ಪುನಶ್ಚೇತನಗೊಳಿಸಲು ಆಗ್ರಹಿಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಮಾ. ೨೬ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಕೈಬಿಡಬೇಕೆಂದು ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ಎಂಪಿಎಂ ಕಾರ್ಖಾನೆ ಪುನರ್ ಆರಂಭಿಸಬೇಕೆಂದು ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಗೆ ನಗರದ ಕ್ರೈಸ್ತ ಧರ್ಮಗುರುಗಳು ಆಗ್ರಹಿಸಿದ್ದಾರೆ.
    ಸೋಮವಾರ ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ತಾಲೂಕು ಶಾಖೆ ವತಿಯಿಂದ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು.
ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆದು ಅಗತ್ಯವಿರುವ ಬಂಡವಾಳ ತೊಡಗಿಸುವ ಜೊತೆಗೆ ದುಡಿಯುವ ಕೈಗಳಿಗೆ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು.  ಭವಿಷ್ಯದಲ್ಲಿ ಎರಡು ಕಾರ್ಖಾನೆಗಳು ಅಭಿವೃದ್ಧಿ ಹೊಂದುವಂತಾಗಲಿ ಎಂದು ಸಾಮೂಹಿಕವಾಗಿ ಪ್ರಾರ್ಥಿಸಿದರು.
    ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಯಿತು.
    ನ್ಯೂಟೌನ್ ಅಮಲೋದ್ಭವಿಮಾತೆ ದೇವಾಲಯದ ಧರ್ಮಗುರು ಲ್ಯಾನ್ಸಿ ಡಿಸೋಜ, ಗಾಂಧಿನಗರ ವೇಲಾಂಗಣಿ ಮಾತೆ ದೇವಾಲಯದ ಧರ್ಮಗುರು ಪಾದರ್ ಸ್ಟೀವನ್ ಡಿಸಾ, ಮಾವಿನಕೆರೆ ಕಿರಿಯ ಪುಷ್ಪ ಸಂತ ತೆರೇಸರ ದೇವಾಲಯದ ಧರ್ಮಗುರು ಪಾದರ್ ದಿವ್ಯ ಕರುಣೀಶ್ ಕ್ಯಾಪುಚಿನ್, ಕಾಗದನಗರದ ಸಂತ ಜೋಸೆಫರ ದೇವಾಲಯ ಧರ್ಮಗುರು ಡೊನೆಮಿಕ್ ಕ್ರಿಸ್ತರಾಜ್, ಹಿರಿಯೂರು ವಿನ್ನಿ ಮೈನರ್ ಸೆಮಿನರಿ ರೆಕ್ಟರ್ ಪಾದರ್ ಸಂತೋಷ್ ಪೆರೇರಾ, ಧರ್ಮಗುರು ಪಾದರ್ ಮಾರ್ಕ್ ಪೆಟ್ರಿಕ್ ಡಿಸಿಲ್ವ, ಜೇಡಿಕಟ್ಟೆ ಆಶಾಕಿರಣ ನಿರ್ದೇಶಕ ಪಾದರ್ ಪ್ರಕಾಶ್ ಪಿಂಟೋ,   ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ಸಂಚಾಲಕ ಅಂತೋಣಿ ವಿಲ್ಸನ್, ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ಸೆಲ್ವರಾಜ್, ನಗರಸಭೆ ಸದಸ್ಯ ಜಾರ್ಜ್, ಲತಾ ರಾರ್ಬಟ್, ಜೆ. ಭಾಸ್ಕರ್, ಡೇವಿಸ್, ಸ್ಟೀಫನ್,  ತಾಲೂಕಿನ ಎಲ್ಲಾ ಚರ್ಚ್‌ಗಳ ಧರ್ಮಗುರುಗಳು, ಫಾಸ್ಟರ್‌ಗಳು, ಸಭಾಪಾಲಕರು, ಧರ್ಮಭಗಿನಿಯರು, ಸಂಘ-ಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದರು. ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಕಾರ್ಮಿಕ ಮುಖಂಡರು, ಗುತ್ತಿಗೆ ಕಾರ್ಮಿಕರು ಉಪಸ್ಥಿತರಿದ್ದರು.

ಬೀದಿ ನಾಯಿ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ಪ್ರತಿಭಟನೆ : ಮನವಿ

ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ನಗರಸಭೆ ಮುಂಭಾಗ ಕೆಜಿಎನ್ ನೌಜವಾನ್ ಕಮಿಟಿವತಿಯಿಂದ ಪ್ರತಿಭಟನೆ ನಡೆಸಿ ಪರಿಸರ ಅಭಿಯಂತರ ಪ್ರಭಾಕರ್‌ರವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಮಾ. ೨೭: ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ನಗರಸಭೆ ಮುಂಭಾಗ ಕೆಜಿಎನ್ ನೌಜವಾನ್ ಕಮಿಟಿವತಿಯಿಂದ ಪ್ರತಿಭಟನೆ ನಡೆಸಿ ಪರಿಸರ ಅಭಿಯಂತರ ಪ್ರಭಾಕರ್‌ರವರಿಗೆ ಮನವಿ ಸಲ್ಲಿಸಲಾಯಿತು.
    ನಗರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನೆಹರು ನಗರದಲ್ಲಿ ೬ ವರ್ಷದ ಮಗುವಿನ ಮೇಲೆ ಬೀದಿನಾಯಿಗಳು ಏಕಾಏಕಿ ದಾಳಿ ನಡೆಸಿದ್ದು, ಇದರಿಂದಾಗಿ ಮಕ್ಕಳು, ಮಹಿಳೆಯರು, ವಯೋವೃದ್ದರು ಒಬ್ಬಂಟಿಯಾಗಿ ಸಂಚರಿಸಲು ಭಯಪಡುವಂತಾಗಿದೆ. ಈಗಾಗಲೇ ನಗರಸಭೆ ಹಲವು ವಾರ್ಡ್‌ಗಳಲ್ಲಿ ಬೀದಿನಾಯಿಗಳು ದಾಳಿ ನಡೆಸಿರುವ ಪ್ರಕರಣಗಳು ನಡೆದಿವೆ. ಈ ಸಂಬಂಧ ಮೌಖಿಕವಾಗಿ ನಾಯಿಗಳ ನಿಯಂತ್ರಣಕ್ಕೆ ಈ ಹಿಂದೆ ತಮ್ಮ ಗಮನಕ್ಕೆ ತರಲಾಗಿದೆ. ಆದರೂ ಸಹ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸದ ಸಂಗತಿಯಾಗಿದೆ. ತಕ್ಷಣ ಬೀದಿ ನಾಯಿಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.


    ಕೆಜಿಎನ್ ನೌಜವಾನ್ ಕಮಿಟಿ ಅಧ್ಯಕ್ಷ ಅಸದ್ ಉಲ್ಲಾ ಖಾನ್ ನೇತೃತ್ವ ವಹಿಸಿದ್ದರು. ಉಪಾಧ್ಯಕ್ಷರಾದ ಶಾಹಿದ್,  ಇಮ್ರಾನ್,  ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಮುರ್ತುಜಾಖಾನ್, ದೇಶ ಪ್ರೇಮಿ ಟಿಪ್ಪು ಸುಲ್ತಾನ್ ಯುವಕರ ಸಂಘದ ಅಧ್ಯಕ್ಷ ಮೆಹಬೂಬ್, ಪ್ರಮುಖರಾದ ನಗರಸಭಾ ಸದಸ್ಯರಾದ ಟಿಪ್ಪು ಸುಲ್ತಾನ್, ಬಷೀರ್ ಅಹಮದ್,  ಅಬ್ದುಲ್ ಖದೀರ್, ಎ. ಮಸ್ತಾನ್, ಇಬ್ರಾಹಿಂ ಖಾನ್, ಜಾವಿದ್, ಕೇಸರಿಪಡೆ ಮಂಜುನಾಥ್ ಕೊಹ್ಲಿ,  ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Sunday, March 26, 2023

ವಿಐಎಸ್‌ಎಲ್ ಉಳಿಸಿ ಹೋರಾಟಕ್ಕೆ ಸೈಲ್ ನಿವೃತ್ತ ಕಾರ್ಮಿಕರ ಒಕ್ಕೂಟದ ಉನ್ನತ ಮಟ್ಟದ ಸಮಿತಿ ಬೆಂಬಲ


ಮಾ.೨೮ರಂದು ಸಮಿತಿ ಮುಖಂಡರು ಗುತ್ತಿಗೆ ಕಾರ್ಮಿಕರ ಹೋರಾಟದಲ್ಲಿ ಉಪಸ್ಥಿತಿ
ಭದ್ರಾವತಿ, ಮಾ. ೨೭: ಸೈಲ್ ನಿವೃತ್ತ ಕಾರ್ಮಿಕರ ಒಕ್ಕೂಟದ ಉನ್ನತ ಮಟ್ಟದ ಸಮಿತಿಯ ಸಭೆ ಮಾ.೨೮ ಮತ್ತು ೨೯ರಂದು ನಗರದಲ್ಲಿ ನಡೆಯಲಿದ್ದು, ಒಕ್ಕೂಟದ ವತಿಯಿಂದ ವಿಐಎಸ್‌ಎಲ್ ಉಳಿಸಿ ಹೋರಾಟಕ್ಕೆ ಬೆಂಬಲ ಸೂಚಿಸಲಾಗಿದೆ.
ಭಾರತರತ್ನ ಸರ್.ಎಂ ವಿಶ್ವೇಶ್ವರಾಯರವರಿಂದ ಸಂಸ್ಥಾಪಿಸಲ್ಪಟ್ಟ ಹಾಗು ಲಕ್ಷಾಂತರ ಕುಟುಂಬಗಳಿಗೆ ಅನ್ನ ನೀಡಿದ ನಗರಕ್ಕೆ ಉಸಿರಾಗಿರುವ ರಾಜ್ಯದ ಪ್ರತಿಷ್ಠಿತ ವಿಐಎಸ್‌ಎಲ್ ಕಾರ್ಖಾನೆ ಸ್ಥಗಿತಗೊಳಿಸಲು ತೆಗೆದುಕೊಂಡಿರುವ ನಿರ್ಧಾರವನ್ನು ಒಕ್ಕೂಟ ಖಂಡಿಸಿದೆ. ಸುಧೀರ್ಘವಾಗಿ ಸುಮಾರು ೨ ತಿಂಗಳಿನಿಂದ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾ.೨೮ರ ಮಧ್ಯಾಹ್ನ ೩ ಗಂಟೆಗೆ ಒಕ್ಕೂಟ ಪಾಲ್ಗೊಳ್ಳಲಿದೆ.
ಒಕ್ಕೂಟದ ಅಧ್ಯಕ್ಷ ಡಾ. ವಿ.ಎನ್ ಶರ್ಮಾ(ರಾಂಚಿ), ಉಪಾಧ್ಯಕ್ಷರಾದ ಎಸ್.ಕೆ ಘೋಷ್(ಕೋಲ್ಕತ್ತಾ), ಅಭಯ್‌ಕುಮಾರ್ ದಾಸ್(ರೊರ‍್ಕೆಲಾ), ಪ್ರಧಾನ ಕಾರ್ಯದರ್ಶಿ ರಾಮ್ ಅಗರ್ ಸಿಂಗ್(ಬೊಕಾರೋ) ಉಪಸ್ಥಿತರಿರುವರು. ಅಲ್ಲದೆ ದೇಶದ ವಿವಿಧ ಸ್ಥಳಗಳಿಂದ ಸುಮಾರು ೩೦ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ನಿವೃತ್ತ, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರ ಕೋರಿದೆ.

ಏ.೪ರಂದು ಭದ್ರಗಿರಿಯಲ್ಲಿ ಸಾಮೂಹಿಕ ಶ್ರೀ ಮಹಾಚಂಡಿಕಯಾಗ


ಭದ್ರಾವತಿ, ಮಾ. ೨೭ : ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಏ.೪ರ ಮಂಗಳವಾರ ಲೋಕ ಕಲ್ಯಾಣಾರ್ಥ ಸಾಮೂಹಿಕ ಶ್ರೀ ಮಹಾಚಂಡಿಕಯಾಗ ಹಮ್ಮಿಕೊಳ್ಳಲಾಗಿದೆ.
ಶ್ರೀ ಕ್ಷೇತ್ರದಲ್ಲಿ ಶ್ರೀ ದುರ್ಗಾದೇವಿ ಪ್ರತಿಮೆ ಪ್ರತಿಷ್ಠಾಪನೆ ೧೨ ವರ್ಷದ ಅಂಗವಾಗಿ ಶ್ರೀ ಮಹಾಚಂಡಿಕಯಾಗ ಹಮ್ಮಿಕೊಳ್ಳಲಾಗಿದ್ದು, ಮಧ್ಯಾಹ್ನ ೧೨.೩೦ಕ್ಕೆ ಪೂರ್ಣಾಹುತಿ ಹಾಗು ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಜರುಗಲಿದೆ. ಹೆಚ್ಚಿನ ಮಾಹಿತಿಗೆ ಮೊ: ೯೪೮೦೨೮೩೦೩೦ ಅಥವಾ ೯೪೮೨೬೧೪೫೪೫ ಸಂಖ್ಯೆಗೆ ಕರೆ ಮಾಡಬಹುದಾಗಿದೆ.  


ವಿಐಎಸ್‌ಎಲ್-ಎಂಪಿಎಂ ಉಳಿವಿಗಾಗಿ ಮಾ.೨೭ರಂದು ಹೋರಾಟ


    ಭದ್ರಾವತಿ, ಮಾ. ೨೬ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಕೈಬಿಡಬೇಕೆಂದು ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ಎಂಪಿಎಂ ಕಾರ್ಖಾನೆ ಪುನರ್ ಆರಂಭಿಸಬೇಕೆಂದು ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಿ ಮಾ.೨೭ರಂದು ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ತಾಲೂಕು ಶಾಖೆ ವತಿಯಿಂದ ಮನವಿ ಸಲ್ಲಿಸುವ ಮೂಲಕ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಲಾಗುತ್ತಿದೆ.
    ಕಾರ್ಖಾನೆ ಮುಂಭಾಗ ಮಧ್ಯಾಹ್ನ ೨.೩೦ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಚರ್ಚ್‌ಗಳ ಧರ್ಮಗುರುಗಳು, ಫಾಸ್ಟರ್‌ಗಳು, ಸಭಾಪಾಲಕರು, ಧರ್ಮಭಗಿನಿಯರು, ಸಂಘ-ಸಂಸ್ಥೆಗಳ ಮುಖಂಡರು ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ. ತಹಸೀಲ್ದಾರ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಗುವುದು.
    ಕೈಸ್ತ ಸಮುದಾಯದವರು ಸೇರಿದಂತೆ ಸಮಸ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ನ್ಯೂಟೌನ್ ಅಮಲೋದ್ಭವಿಮಾತೆ ದೇವಾಲಯದ ಧರ್ಮಗುರು ಲ್ಯಾನ್ಸಿ ಡಿಸೋಜ ಮತ್ತು ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ಸಂಚಾಲಕ ಅಂತೋಣಿ ವಿಲ್ಸನ್ ಕೋರಿದ್ದಾರೆ.

ಮಹಿಳೆಯರ ಕೊಡುಗೆ, ಸಾಧನೆಯನ್ನು ಗುರುತಿಸಿ ಗೌರವಿಸುವಂತಾಗಲಿ : ಡಾ. ಅನುರಾಧ ಪಟೇಲ್


ಭದ್ರಾವತಿ ಅಪ್ಪರ್‌ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ , ಸಾಗರ ಮಹಿಳಾ ಖಾದಿ ಉದ್ಯಮಿ, ಸಮಾಜ ಸೇವಕಿ ಕೆ.ಬಿ ಭಾಗೀರಥಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಮಾ. ೨೬: ಸಮಾಜ ಹಾಗು ಕುಟುಂಬಕ್ಕೆ ಮಹಿಳೆಯರ ಕೊಡುಗೆ ಅನನ್ಯವಾಗಿದ್ದು, ಮಹಿಳೆಯರನ್ನು ಸಮಾಜದಲ್ಲಿ ಸಮಾನವಾಗಿ ಕಾಣುವ ಮೂಲಕ ಅವರನ್ನು ಸಹ ಗುರುತಿಸಿ ಗೌರವಿಸುವಂತಾಗಬೇಕೆಂದು ನಗರದ ಚುಂಚಾದ್ರಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಡಾ. ಅನುರಾಧ ಪಟೇಲ್ ಹೇಳಿದರು.
    ಅವರು ವೇದಿಕೆ ವತಿಯಿಂದ ಅಪ್ಪರ್‌ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
    ನಮ್ಮ ಇತಿಹಾಸದಲ್ಲಿನ ಅನೇಕ ಮಹಿಳೆಯರ ಕೊಡುಗೆ, ಸಾಧನೆಗಳನ್ನು ನಾವುಗಳು ತಿಳಿದುಕೊಳ್ಳಬೇಕಾಗಿದೆ. ಸ್ತ್ರೀಯರು ಪರಸ್ಪರ ನಡುವೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕಾಗಿದೆ. ಪ್ರತಿಯೊಬ್ಬರು ಪ್ರೋತ್ಸಾಹಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಸಮಾಜ ಹಾಗು ಕುಟುಂಬದಲ್ಲಿನ ನಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಮುನ್ನಡೆಯಬೇಕಾಗಿದೆ ಎಂದರು.
    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಂಡು ತನ್ನ ಸಾಮರ್ಥ್ಯ ಪ್ರದರ್ಶಿಸುತ್ತಿದ್ದಾಳೆ. ಯಾವುದೇ ಕಾರ್ಯದಲ್ಲಿ ಪ್ರಾಮಾಣಿಕತೆಯಿಂದ ಮುನ್ನಡೆದಾಗ ಯಶಸ್ಸು ಖಚಿತ ಎಂದರು.
    ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಮಾತನಾಡಿ, ಹೆಣ್ಣು ಸಾಧನೆಗೆ ಸ್ಪೂರ್ತಿದಾಯಕ. ಸಮಾಜದಲ್ಲಿ ಅವಳಿಗೆ ಇನ್ನೂ ಹೆಚ್ಚಿನ ಸಲಹೆ, ಸಹಕಾರ ನೀಡಿದಾಗ ಏನು ಬೇಕಾದರೂ ಸಾಧಿಸಲು ಸಾಧ್ಯ ಎಂದರು.
    ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಘಟಕ ವ್ಯವಸ್ಥಾಪಕಿ ಅಂಬಿಕಾ ಸುಧೀರ್, ಸಾಗರ ಮಹಿಳಾ ಖಾದಿ ಉದ್ಯಮಿ, ಸಮಾಜ ಸೇವಕಿ ಕೆ.ಬಿ ಭಾಗೀರಥಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಜಾನಪದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮಿಸ್ ಚುಂಚಾದ್ರಿ ಮಹಿಳೆಯಾಗಿ ಪ್ರೇಮ ಮಂಜುನಾಥ್, ಅದೃಷ್ಟದ ಮಹಿಳೆಯಾಗಿ ಆಯ್ಕೆಯಾದ ಪದ್ಮ ಮಂಜುನಾಥ್‌ರವರಿಗೆ ಬೆಳ್ಳಿ ದೀಪ ಉಡುಗೊರೆಯಾಗಿ ನೀಡಿಲಾಯಿತು.
    ಲತಾ ಪ್ರಭಾಕರ್ ಸ್ವಾಗತಿಸಿದರು. ಸುಮತಿ ಕಾರಂತ್ ನಿರೂಪಿಸಿ ಶೀಲಾ ರವಿ ವಂದಿಸಿದರು.  

೬೭ ದಿನ ಪೂರೈಸಿದ ವಿಐಎಸ್‌ಎಲ್ ಉಳಿಸಿ ಹೋರಾಟ : ಅಂಚೆ ಕಾರ್ಡ್‌ನಲ್ಲಿ ರಕ್ತದಲ್ಲಿ ಬರೆದ ಗುತ್ತಿಗೆ ಕಾರ್ಮಿಕರು

ಮುಚ್ಚುವ ಆದೇಶ ಹಿಂಪಡೆದು ಬಂಡವಾಳ ತೊಡಗಿಸಿ, ಇಲ್ಲವಾದಲ್ಲಿ ಜೋಳಿಗೆ ಹಿಡಿಯಲು ಸಿದ್ದ : ಶ್ರೀ ಈಶ್ವರಾನಂದಪುರಿ ಸ್ವಾಮೀಜಿ

ಭದ್ರಾವತಿಯಲ್ಲಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಭಾನುವಾರ ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಬೆಂಬಲ ಸೂಚಿಸಿ ಗುತ್ತಿಗೆ ಕಾರ್ಮಿಕರು ತಮ್ಮ ತಮ್ಮ ರಕ್ತದಲ್ಲಿ ಪ್ರಧಾನಿಗೆ ಲ್ಲಿ 'ಸೇವ್ ವಿಐಎಸ್‌ಎಲ್, ಸೇವ್ ಭದ್ರಾವತಿ' ಎಂದು ಬರೆದು ಒತ್ತಾಯಿಸಿರುವ ಅಂಚೆ ಕಾರ್ಡ್‌ಗಳನ್ನು ಪ್ರದರ್ಶಿಸಿದರು.
    ಭದ್ರಾವತಿ, ಮಾ. ೨೬ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಳ್ಳಲು ಕ್ಷಣಗಣನೆ ಎದುರಾಗುತ್ತಿದ್ದು, ಈ ನಡುವೆ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಭಾನುವಾರ ೬೭ ದಿನಗಳನ್ನು ಪೂರೈಸಿದೆ. ಈ ನಡುವೆ ಹೋರಾಟದ ರೂಪುರೇಷೆಗಳು ಸಹ ಬದಲಾಗುತ್ತಿದ್ದು, ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ.
    ೬೭ ದಿನ ಕಳೆದರೂ ಸಹ ಗುತ್ತಿಗೆ ಕಾರ್ಮಿಕರು ಧೈರ್ಯ ಕಳೆದುಕೊಳ್ಳದೆ ಒಗ್ಗಟ್ಟಿನಿಂದ ಹೋರಾಟ ಮುನ್ನಡೆಸುತ್ತಿದ್ದು, ಬೆಂಗಳೂರು ವಿಧಾನಸೌಧ, ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿವರೆಗೂ ಪಾದಯಾತ್ರೆ, ಬೈಕ್ ರ‍್ಯಾಲಿ, ದೆಹಲಿಯಲ್ಲಿ ಹೋರಾಟ, ಮೈಸೂರು ಮಹಾರಾಜರ ವಂಶಸ್ಥರ ಗಮನ ಸೆಳೆಯಲು ಮೈಸೂರಿನಲ್ಲಿ ಹೋರಾಟ, ಭದ್ರಾವತಿ ಬಂದ್, ಬೃಹತ್ ಜಾಥಾ, ರಸ್ತೆ ತಡೆ, ಸಹಿ ಅಭಿಯಾನ, ಪತ್ರ ಚಳುವಳಿ ಸೇರಿದಂತೆ ಹಲವು ಬಗೆಯ ಹೋರಾಟಗಳನ್ನು ಕೈಗೊಂಡಿದ್ದಾರೆ.
    ಹೋರಾಟದ ನಡುವೆ ರಾಜ್ಯದ ಪ್ರಮುಖ ಮಠಗಳಿಗೆ ತೆರಳಿ ಮಠಾಧೀಶರುಗಳಿಗೆ, ಮಾಜಿ ಪ್ರಧಾನಿ, ಕೇಂದ್ರ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳಿಗೆ ಮನವಿ ಸಲ್ಲಿಸಿ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆದು ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವಂತೆ ಕೋರಿದ್ದಾರೆ.
    ವಿವಿಧ ಧರ್ಮಗಳ ಧರ್ಮಗುರುಗಳು, ಮಠಾಧೀಶರು, ರಾಜಕೀಯ ಪಕ್ಷಗಳ ಪ್ರಮುಖರು, ಗಣ್ಯರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೆಂಬಲ ನೀಡಿ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚದಂತೆ ಆಗ್ರಹಿಸಿದ್ದಾರೆ. ವಿವಿಧ ಸಂಘ-ಸಂಸ್ಥೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿ ಕೈಜೋಡಿಸಿವೆ. ಆದರೂ ಸಹ ಕೇಂದ್ರ ಸರ್ಕಾರವಾಗಲಿ, ಉಕ್ಕು ಪ್ರಾಧಿಕಾರವಾಗಲಿ ಹೋರಾಟಕ್ಕೆ ಪೂರಕವಾಗಿ ಸ್ಪಂದಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.
    ಕಾರ್ಖಾನೆ ಉಳಿವಿಗಾಗಿ ಜೋಳಿಗೆ ಹಿಡಿಯಲು ಸಿದ್ದ : ಶ್ರೀ ಈಶ್ವರಾನಂದಪುರಿ ಸ್ವಾಮೀಜಿ
    ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಭಾನುವಾರ ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಬೆಂಬಲ ಸೂಚಿಸಿ ಮಾತನಾಡಿದರು.
    ಪ್ರತಿಷ್ಠಿತ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಪ್ರಸ್ತುತ ಮುಚ್ಚುವ ಸ್ಥಿತಿ ಎದುರಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಗುತ್ತಿಗೆ ಕಾರ್ಮಿಕರ ಹೋರಾಟ ಕೇಂದ್ರ ಸರ್ಕಾರದ ಗಮನ ಸೆಳೆಯುವಂತಾಗಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳು ಇನ್ನೂ ಹೆಚ್ಚಿನ ಗಮನ ಹರಿಸಬೇಕಾಗಿದೆ. ಕೇಂದ್ರ ಸರ್ಕಾರ ತಕ್ಷಣ ತನ್ನ ನಿಲುವು ಬದಲಿಸಿಕೊಂಡು ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ಹೂಡಬೇಕು. ಒಂದು ವೇಳೆ ಅದು ಸಾಧ್ಯವಾಗದಿದ್ದಲ್ಲಿ ಮಠಾಧೀಶರು ಜೋಳಿಗೆ ಹಿಡಿದು ಕಾರ್ಖಾನೆ ಉಳಿಸಿಕೊಳ್ಳಲು ಮುಂದಾಗುವುದು ಸಿದ್ದ ಎಂದರು.
    ರಕ್ತದಲ್ಲಿ ಕಾರ್ಮಿಕರ ಹೋರಾಟದ ಕೂಗು :
    ಸಾವಿರಾರು ಗುತ್ತಿಗೆ ಕಾರ್ಮಿಕರು ಭಾನುವಾರ ಅಂಚೆ ಕಾರ್ಡ್‌ನಲ್ಲಿ ತಮ್ಮ ತಮ್ಮ ರಕ್ತದ ಮೂಲಕ ಆಂಗ್ಲ ಭಾಷೆಯಲ್ಲಿ 'ಸೇವ್ ವಿಐಎಸ್‌ಎಲ್, ಸೇವ್ ಭದ್ರಾವತಿ' ಎಂದು ಬರೆದು ಹೆಬ್ಬೆಟ್ಟು ಹಾಕುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯುವಂತೆ, ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಆಗ್ರಹಿಸಿದ್ದಾರೆ.
ಗುತ್ತಿಗೆ ಕಾರ್ಮಿಕರು ಹೋರಾಟಕ್ಕೆ ಇದೀಗ ತಮ್ಮ ರಕ್ತ ಚೆಲ್ಲುತ್ತಿದ್ದು, ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ಸ್ವರೂಪ ಪಡೆದುಕೊಳ್ಳುವ ಮೊದಲು ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ.
ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ತಾಲೂಕು ಕುರುಬರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.