Sunday, March 26, 2023

ವಿಐಎಸ್‌ಎಲ್ ಉಳಿಸಿ ಹೋರಾಟಕ್ಕೆ ಸೈಲ್ ನಿವೃತ್ತ ಕಾರ್ಮಿಕರ ಒಕ್ಕೂಟದ ಉನ್ನತ ಮಟ್ಟದ ಸಮಿತಿ ಬೆಂಬಲ


ಮಾ.೨೮ರಂದು ಸಮಿತಿ ಮುಖಂಡರು ಗುತ್ತಿಗೆ ಕಾರ್ಮಿಕರ ಹೋರಾಟದಲ್ಲಿ ಉಪಸ್ಥಿತಿ
ಭದ್ರಾವತಿ, ಮಾ. ೨೭: ಸೈಲ್ ನಿವೃತ್ತ ಕಾರ್ಮಿಕರ ಒಕ್ಕೂಟದ ಉನ್ನತ ಮಟ್ಟದ ಸಮಿತಿಯ ಸಭೆ ಮಾ.೨೮ ಮತ್ತು ೨೯ರಂದು ನಗರದಲ್ಲಿ ನಡೆಯಲಿದ್ದು, ಒಕ್ಕೂಟದ ವತಿಯಿಂದ ವಿಐಎಸ್‌ಎಲ್ ಉಳಿಸಿ ಹೋರಾಟಕ್ಕೆ ಬೆಂಬಲ ಸೂಚಿಸಲಾಗಿದೆ.
ಭಾರತರತ್ನ ಸರ್.ಎಂ ವಿಶ್ವೇಶ್ವರಾಯರವರಿಂದ ಸಂಸ್ಥಾಪಿಸಲ್ಪಟ್ಟ ಹಾಗು ಲಕ್ಷಾಂತರ ಕುಟುಂಬಗಳಿಗೆ ಅನ್ನ ನೀಡಿದ ನಗರಕ್ಕೆ ಉಸಿರಾಗಿರುವ ರಾಜ್ಯದ ಪ್ರತಿಷ್ಠಿತ ವಿಐಎಸ್‌ಎಲ್ ಕಾರ್ಖಾನೆ ಸ್ಥಗಿತಗೊಳಿಸಲು ತೆಗೆದುಕೊಂಡಿರುವ ನಿರ್ಧಾರವನ್ನು ಒಕ್ಕೂಟ ಖಂಡಿಸಿದೆ. ಸುಧೀರ್ಘವಾಗಿ ಸುಮಾರು ೨ ತಿಂಗಳಿನಿಂದ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾ.೨೮ರ ಮಧ್ಯಾಹ್ನ ೩ ಗಂಟೆಗೆ ಒಕ್ಕೂಟ ಪಾಲ್ಗೊಳ್ಳಲಿದೆ.
ಒಕ್ಕೂಟದ ಅಧ್ಯಕ್ಷ ಡಾ. ವಿ.ಎನ್ ಶರ್ಮಾ(ರಾಂಚಿ), ಉಪಾಧ್ಯಕ್ಷರಾದ ಎಸ್.ಕೆ ಘೋಷ್(ಕೋಲ್ಕತ್ತಾ), ಅಭಯ್‌ಕುಮಾರ್ ದಾಸ್(ರೊರ‍್ಕೆಲಾ), ಪ್ರಧಾನ ಕಾರ್ಯದರ್ಶಿ ರಾಮ್ ಅಗರ್ ಸಿಂಗ್(ಬೊಕಾರೋ) ಉಪಸ್ಥಿತರಿರುವರು. ಅಲ್ಲದೆ ದೇಶದ ವಿವಿಧ ಸ್ಥಳಗಳಿಂದ ಸುಮಾರು ೩೦ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ನಿವೃತ್ತ, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರ ಕೋರಿದೆ.

No comments:

Post a Comment