Tuesday, April 4, 2023

ಲೋಕಾಯುಕ್ತ ಡಿವೈಎಸ್ಪಿ ಹೆಸರಿನಲ್ಲಿ ಹಣದ ಬೇಡಿಕೆಯೊಂದಿಗೆ ಕಿರುಕುಳ

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪೊಲೀಸರಿಗೆ ದೂರು


    ಭದ್ರಾವತಿ, ಏ. ೪ : ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ಇಲಾಖೆಗೆ ನಿಮ್ಮ ವಿರುದ್ಧ ದೂರು ಬಂದಿದ್ದು, ನಿಮ್ಮನ್ನು ಪ್ರಕರಣದಿಂದ ಪಾರು ಮಾಡಲು ಹಣ ನೀಡುವಂತೆ ವ್ಯಕ್ತಿಯೋರ್ವ ಶಿಶು ಅಭಿವೃದ್ಧಿ ಯೋಜನಾಧಿಕಾರಿ(ಸಿಡಿಪಿಓ)ಗೆ ಕರೆ ಮಾಡಿ ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ. ಈ ಹಿನ್ನಲೆಯಲ್ಲಿ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
    ವ್ಯಕ್ತಿಯೋರ್ವ ನಾನು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಎಂದು ಹೇಳಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್‌ರವರಿಗೆ ಮೊಬೈಲ್ ಮೂಲಕ ಕರೆ ಮಾಡಿದ್ದು, ಅಂಗನವಾಡಿ ಆಹಾರ ವಿತರಣೆಯಲ್ಲಿ ಹಗರಣ ನಡೆದಿರುವ ಬಗ್ಗೆ ನಿಮ್ಮ ವಿರುದ್ಧ ದೂರು ಬಂದಿದೆ. ಈ ಹಿನ್ನಲೆಯಲ್ಲಿ ಇಲಾಖೆ ವಿಚಾರಣಾಧಿಕಾರಿಗಳು ಬೆಂಗಳೂರಿನಿಂದ ಬರುತ್ತಿದ್ದಾರೆ.  ನಿಮ್ಮನ್ನು ಪಾರು ಮಾಡಲು ೧.೨೦ ಲಕ್ಷ ರು. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ.
    ನಿರಂತರವಾಗಿ ಕರೆ ಮಾಡಿ ಮಾನಸಿಕವಾಗಿ ಕಿರುಕುಳ ನೀಡಿದ್ದು, ಇದರಿಂದ ಅನುಮಾನಗೊಂಡ ಸುರೇಶ್‌ರವರು ಕರೆ ಮಾಡಿರುವ ವ್ಯಕ್ತಿ ಕುರಿತು ಮಾಹಿತಿ ತಿಳಿದುಕೊಂಡಿದ್ದಾರೆ. ಆತ ನಕಲಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಎಂಬುದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  

ಶಾಸಕ ಬಿ.ಕೆ ಸಂಗಮೇಶ್ವರ್ ಪ್ರಚಾರ ವಾಹನ ವಶಕ್ಕೆ

ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲು


ಭದ್ರಾವತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಬಿ.ಕೆ ಸಂಗಮೇಶ್ವರ್ ಪರವಾಗಿ ಪ್ರಚಾರ ನಡೆಸುತ್ತಿದ್ದ ವಾಹನ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ತಂಡ ವಶಕ್ಕೆ ಪಡೆದಿರುವುದು.
    ಭದ್ರಾವತಿ, ಏ. ೪ : ಕಾಂಗ್ರೆಸ್ ಅಭ್ಯರ್ಥಿ ಶಾಸಕ ಬಿ.ಕೆ ಸಂಗಮೇಶ್ವರ್ ಪರವಾಗಿ ಪ್ರಚಾರ ನಡೆಸುತ್ತಿದ್ದ ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.
    ಟಾಟಾ ಏಸ್ ವಾಹನದಲ್ಲಿ ಸಂಗಮೇಶ್ವರ್ ಪರವಾಗಿ ಪ್ರಚಾರ ನಡೆಸುತ್ತಿದ್ದು, ಚುನಾವಣಾ ಆಯೋಗದಿಂದ ಅನುಮತಿ ಪಡೆಯದೆ ಶಾಸಕರ ಭಾವಚಿತ್ರ, ಕಾಂಗ್ರೆಸ್ ಪಕ್ಷದ ಚಿಹ್ನೆ, ಬಾವುಟದೊಂದಿಗೆ ಹಾಗು ಎಲ್‌ಇಡಿ ಪರದೆ ಮೂಲಕ ಶಾಸಕರ ಸಾಧನೆಗಳ ಪ್ರದರ್ಶನ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಲಾಗಿದೆ ಎಂದು ವಾಹನವನ್ನು ವಶಕ್ಕೆ ಪಡೆದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
    ಘಟನೆ ವಿವರ :
    ಶಾಸಕ ಬಿ.ಕೆ ಸಂಗಮೇಶ್ವರ್ ಪರವಾಗಿ ಕಳೆದ ಸುಮಾರು ೨ ತಿಂಗಳಿನಿಂದ ಕ್ಷೇತ್ರದಾದ್ಯಂತ ಟಾಟಾ ಏಸ್ ವಾಹನದಲ್ಲಿ ಶಾಸಕರ ಭಾವಚಿತ್ರ, ಕಾಂಗ್ರೆಸ್ ಪಕ್ಷದ ಚಿಹ್ನೆ, ಬಾವುಟದೊಂದಿಗೆ ಹಾಗು ಎಲ್‌ಇಡಿ ಪರದೆ ಮೂಲಕ ಶಾಸಕರ ಸಾಧನೆಗಳ ಪ್ರದರ್ಶನ ಮಾಡುವ ಮೂಲಕ ಪ್ರಚಾರ ನಡೆಸಲಾಗುತ್ತಿದ್ದು, ಸೋಮವಾರ ಸಂಜೆ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಗವಿರಂಗಪ್ಪ ನೇತೃತ್ವದ ತಂಡ ಈ ವಾಹನ ತಪಾಸಣೆ ನಡೆಸಿದಾಗ ಚುನಾವಣೆ ನೀತಿ ಸಂಹಿತೆ ಘೋಷಣೆಯಾದ ನಂತರ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆಯದೆ ಪ್ರಚಾರ ಕಾರ್ಯ ಕೈಗೊಳ್ಳುತ್ತಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಚಾಲಕನನ್ನು ಬಂಧಿಸಿ ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಶ್ರೀ ಕ್ಷೇತ್ರ ಭದ್ರಗಿರಿ ಲೋಕ ಕಲ್ಯಾಣಾರ್ಥ ವಿಜೃಂಭಣೆಯಿಂದ ಜರುಗಿದ ಸಾಮೂಹಿಕ ಶ್ರೀ ಮಹಾಚಂಡಿಕಯಾಗ

ಭದ್ರಾವತಿ, ಏ. 4 : ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ  ಮಂಗಳವಾರ ಲೋಕ ಕಲ್ಯಾಣಾರ್ಥ ಸಾಮೂಹಿಕ ಶ್ರೀ ಮಹಾಚಂಡಿಕಯಾಗ ವಿಜೃಂಭಣೆಯಿಂದ ಜರುಗಿತು.
     ಶ್ರೀ ಕ್ಷೇತ್ರದಲ್ಲಿ ಶ್ರೀ ದುರ್ಗಾದೇವಿ ಪ್ರತಿಮೆ ಪ್ರತಿಷ್ಠಾಪನೆ ೧೨ನೇ ವರ್ಷದ ಅಂಗವಾಗಿ ಶ್ರೀ ಮಹಾಚಂಡಿಕಯಾಗ ಹಮ್ಮಿಕೊಳ್ಳಲಾಗಿತ್ತು, ಮಧ್ಯಾಹ್ನ ೧೨.೩೦ಕ್ಕೆ ಪೂರ್ಣಾಹುತಿ ಹಾಗು ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಿತು. 

    ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ  ಭಕ್ತಾಧಿಗಳು ಸಾಮೂಹಿಕ ಶ್ರೀ ಮಹಾಚಂಡಿಕಯಾಗದಲ್ಲಿ ಪಾಲ್ಗೊಂಡು  ಅಮ್ಮನವರ ಕೃಪೆಗೆ  ಪಾತ್ರರಾದರು.    
       ದೇವಸ್ಥಾನ ಸಮಿತಿ ಅಧ್ಯಕ್ಷ ಎ. ಚಂದ್ರಘೋಷನ್ ಸೇರಿದಂತೆ ಪದಾಧಿಕಾರಿಗಳು, ಸೇವಾಕರ್ತರು ಉಪಸ್ಥಿತರಿದ್ದರು.  
 


Monday, April 3, 2023

ಸಿದ್ದಲಿಂಗಯ್ಯರಿಗೆ ಭಾರತ ಕಲಾ ಭೂಷಣ ರಾಷ್ಟ್ರ ಪ್ರಶಸ್ತಿ

ಭದ್ರಾವತಿ ಸಿದ್ಧಾರೂಢನಗರದ ನಿವಾಸಿ, ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ, ಜೇಡಿಕಟ್ಟೆ ಮರುಳಸಿದ್ದೇಶ್ವರ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯನವರಿಗೆ ಭಾರತ ಕಲಾ ಭೂಷಣ ರಾಷ್ಟ್ರ ಪ್ರಶಸ್ತಿ ಲಭಿಸಿದ್ದು, ಮಂಗಳೂರಿನ ಕಥಾಬಿಂದು ಪ್ರಕಾಶನ ವತಿಯಿಂದ ಪಿ.ವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಭಾನುವಾರ ಮುಂಬೈನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 
    ಭದ್ರಾವತಿ, ಏ. ೩ : ಸಿದ್ಧಾರೂಢನಗರದ ನಿವಾಸಿ, ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ, ಜೇಡಿಕಟ್ಟೆ ಮರುಳಸಿದ್ದೇಶ್ವರ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯನವರಿಗೆ ಭಾರತ ಕಲಾ ಭೂಷಣ ರಾಷ್ಟ್ರ ಪ್ರಶಸ್ತಿ ಲಭಿಸಿದೆ.
    ಮಂಗಳೂರಿನ ಕಥಾಬಿಂದು ಪ್ರಕಾಶನ ವತಿಯಿಂದ ಪಿ.ವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಭಾನುವಾರ ಮುಂಬೈನಲ್ಲಿ ಆಯೋಜಿಸಲಾಗಿದ್ದ ಭಾರತ ಕಲಾ ಭೂಷಣ ರಾಷ್ಟ್ರ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ, ಕೃತಿಗಳ ಬಿಡುಗಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿದ್ದಲಿಂಗಯ್ಯನವರು ಸಲ್ಲಿಸಿರುವ ಸಮಾಜ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
    ಸಿದ್ದಲಿಂಗಯ್ಯನವರು ಹಲವು ವರ್ಷಗಳ ಕಾಲ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯ, ಜಿಲ್ಲಾ ಹಾಗು ತಾಲೂಕು ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದು,  ಧಾರ್ಮಿಕ ಹಾಗು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
    ಮಂಡ್ಯ ಶ್ರೀರಂಗಪಟ್ಟಣ ಶ್ರೀ ಕ್ಷೇತ್ರ ಕಾಶಿ ಚಂದ್ರಮೌಳೇಶ್ವರ ಸ್ವಾಮಿ ಸನ್ನಿಧಿ, ಚಂದ್ರವನ ಆಶ್ರಮ, ಶ್ರೀ ಕ್ಷೇತ್ರ ಬೇಬಿ ಮಠದ ಡಾ. ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿದ್ದರು.

೧೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹೊಸಳ್ಳಿ ದಾಳೇಗೌಡರಿಗೆ ಆಹ್ವಾನ

ಭದ್ರಾವತಿ ತಾಲೂಕು ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವಾಧ್ಯಕ್ಷರಾಗಿ ಆಯ್ಕೆಯಾಗಿರುವ ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್(ಕೆಪಿಸಿ)ಬಿ.ಆರ್ ಪ್ರಾಜೆಕ್ಟ್ ನಿವೃತ್ತ ಅಭಿಯಂತರ, ಹಿರಿಯ ಸಾಹಿತಿ ಹೊಸಳ್ಳಿ ದಾಳೇಗೌಡ ಅವರನ್ನು ಸೋಮವಾರ ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನಿಸಲಾಯಿತು.
    ಭದ್ರಾವತಿ, ಏ. ೩: ತಾಲೂಕು ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವಾಧ್ಯಕ್ಷರಾಗಿ ಆಯ್ಕೆಯಾಗಿರುವ ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್(ಕೆಪಿಸಿ)ಬಿ.ಆರ್ ಪ್ರಾಜೆಕ್ಟ್ ನಿವೃತ್ತ ಅಭಿಯಂತರ, ಹಿರಿಯ ಸಾಹಿತಿ ಹೊಸಳ್ಳಿ ದಾಳೇಗೌಡ ಅವರನ್ನು ಸೋಮವಾರ ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನಿಸಲಾಯಿತು.
    ತಾಲೂಕು ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಏ.೧೬ರ ಭಾನುವಾರ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನ ಮುಂಭಾಗದಲ್ಲಿರುವ ಶ್ರೀ ರಾಮ ಸಮುದಾಯ ಭವನದಲ್ಲಿ ನಡೆಯಲಿದ್ದು, ಹೊಸಳ್ಳಿ ದಾಳೇಗೌಡರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ನೇತೃತ್ವದಲ್ಲಿ ತಾಲೂಕು ಘಟಕದ ಪ್ರಮುಖರು ಬಿ.ಆರ್ ಪ್ರಾಜೆಕ್ಟ್‌ನಲ್ಲಿರುವ ಹೊಸಳ್ಳಿ ದಾಳೇಗೌಡರ ನಿವಾಸಕ್ಕೆ ತೆರಳಿ ಅವರನ್ನು ಸನ್ಮಾನಿಸಿ ಆಹ್ವಾನಿಸಲಾಯಿತು.
    ಪರಿಷತ್ ಜಿಲ್ಲಾ ಕಾರ್ಯದರ್ಶಿ ಎಂ.ಎಂ ಸ್ವಾಮಿ, ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಕಾರ್ಯದರ್ಶಿ ಟಿ. ತಿಮ್ಮಪ್ಪ, ಸಂಘಟನಾ ಕಾರ್ಯದರ್ಶಿ ಬಿ. ಕಮಲಾಕರ್, ಕೋಶಾಧ್ಯಕ್ಷ ನಾಗೋಜಿ ರಾವ್, ಕೆ.ಟಿ ಪ್ರಸನ್ನ, ಹೇಮಾವತಿ ವಿಶ್ವನಾಥ್, ಅನ್ನಪೂರ್ಣ ಸತೀಶ್, ಜಯಂತಿ ನಾಗರಾಜ್‌ಶೇಟ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಂವಿಧಾನ, ಕಾನೂನು ಗಾಳಿಗೆ ತೂರಿ ಪರಿಶಿಷ್ಟ ಜಾತಿಗಳ ವರ್ಗೀಕರಣ ಹಂಚಿಕೆ : ಆರೋಪ

ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ


ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ವರ್ಗೀಕರಣ(ಒಳ ಮೀಸಲಾತಿ) ಹಂಚಿಕೆ ನಿರ್ಣಯ ವಿರೋಧಿಸಿ ಸೋಮವಾರ ಭದ್ರಾವತಿ ತಾಲೂಕು ಕಛೇರಿ ಮಿನಿವಿಧಾನಸೌಧ ಮುಂಭಾಗ ಮೀಸಲಾತಿ ಸಂರಕ್ಷಣಾ ಒಕ್ಕೂಟ ತಾಲೂಕು ಸಮಿತಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ, ಏ. ೩ : ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ವರ್ಗೀಕರಣ(ಒಳ ಮೀಸಲಾತಿ) ಹಂಚಿಕೆ ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಭಾರತದ ಸಂವಿಧಾನ ಮತ್ತು ಕಾನೂನನ್ನು ಗಾಳಿಗೆ ತೂರಲಾಗಿದೆ. ಈ ಅಸಂವಿಧಾನಿಕ ಮತ್ತು ಅವೈಜ್ಞಾನಿಕ ಪ್ರಕ್ರಿಯೆಯನ್ನು ಮೀಸಲಾತಿ ಸಂರಕ್ಷಣಾ ಒಕ್ಕೂಟ ತಾಲೂಕು ಸಮಿತಿ ಖಂಡಿಸುವ ಜೊತೆಗೆ ವಿರೋಧಿಸುತ್ತದೆ ಎಂದು ಬಂಜಾರ ಸಮಾಜದ ಪ್ರಮುಖರು ಹೇಳಿದರು.
    ಸೋಮವಾರ ತಾಲೂಕು ಕಛೇರಿ ಮಿನಿವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಿ ಮಾತನಾಡಿದ ಪ್ರಮುಖರು, "ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಒಪ್ಪಿರುವುದಿಲ್ಲ" ಎನ್ನುತ್ತಲೇ ರಾಜ್ಯ ಸರ್ಕಾರ ಈ ವರದಿಯನ್ನುಆಧರಿಸಿ ಪರಿಶಿಷ್ಟ ಜಾತಿಗಳನ್ನು ೪ ಗುಂಪುಗಳಾಗಿ ವಿಭಜಿಸಿ, ಒಳ ಮೀಸಲಾತಿ ಹಂಚಿಕೆ ಮಾಡಿರುವುದು ನ್ಯಾಯ ಸಮ್ಮತವಾಗಿಲ್ಲ ಮತ್ತು ಸಂವಿಧಾನ ವಿರೋಧವಾಗಿರುತ್ತದೆ. ನಾಡಿನ ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳು ಸರ್ಕಾರದ ಈ ನಿರ್ಧಾರವನ್ನು ವಿರೋಧಿಸುತ್ತವೆ. ಈ ಸಂಬಂಧ ಮಾ.೨೫ರಂದು ನಡೆದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಕೈಗೊಂಡಿರುವ ನಿರ್ಣಯ ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿದರು.
    ಸರ್ಕಾರದ ಈ ನಿರ್ಧಾರ ವಿರೋಧಿಸಿ ಮಾ.೨೭ ರಂದು ಶಿಕಾರಿಮರದಲ್ಲಿ ನಡೆದ ಬೃಹತ್ ಪ್ರತಿಭಟನೆಯ ನೇತೃತ್ವವಹಿಸಿದ್ದ ಹೋರಾಟಗಾರರ ಮೇಲೆ ದೂರು ದಾಖಲಾಗಿದ್ದು, ದಾಖಲಾಗಿರುವ ಎಫ್‌ಐಆರ್ ಕೂಡಲೇ ರದ್ದುಪಡಿಸಬೇಕೆಂದು ಒತ್ತಾಯಿಸಿದರು. ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯದವರ ಶೇ. ೪ ಮೀಸಲಾತಿ ರದ್ದು ಪಡಿಸಿರುವುದನ್ನು ಒಕ್ಕೂಟ ಖಂಡಿಸುತ್ತದೆ ಎಂದರು.
                                        ಪ್ರತಿಭಟನೆಯಲ್ಲಿ ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ಪ್ರೇಮ್‌ಕುಮಾರ್, ಬಂಜಾರ ರೈತ ಸಂಘದ ರಾಜ್ಯಾಧ್ಯಕ್ಷ ಕೃಷ್ಣನಾಯ್ಕ, ಪ್ರಮುಖರಾದ ಡಿಎಸ್‌ಎಸ್ ಮುಖಂಡ ಸಿ. ಜಯಪ್ಪ, ಪ್ರವೀಣ್‌ನಾಯ್ಕ, ಎ. ಮಸ್ತಾನ್, ಇಬ್ರಾಹಿಂ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ತಾಲೂಕಿನ ವಿವಿಧ ತಾಂಡಗಳ ಬಂಜಾರ ಸಮಾಜದ ಮುಖಂಡರು, ಮಹಿಳೆಯರು ಪಾಲ್ಗೊಂಡಿದ್ದರು. ಹಳೇನಗರದ ಕನಕಮಂಟಪ ಮೈದಾನದಿಂದ ತಾಲೂಕು ಕಛೇರಿ ಮಿನಿವಿಧಾನಸೌಧದವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಿತು. ತಹಸೀಲ್ದಾರ್ ಸುರೇಶ್ ಆಚಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಲಯನ್ಸ್ ಜಿಲ್ಲಾ ಗೌರ‍್ನರ್ ಡಾ.ಎಂ.ಕೆ ಭಟ್ ಅಧಿಕೃತ ಭೇಟಿ : ವಿವಿಧ ಸೇವಾ ಕಾರ್ಯಗಳ ಉದ್ಘಾಟನೆ

ಭದ್ರಾವತಿ ಬಿ.ಎಚ್ ರಸ್ತೆ ರೈಲ್ವೆ ನಿಲ್ದಾಣದ ಮುಂಭಾಗ ನೂತನವಾಗಿ ನಿರ್ಮಿಸಲಾಗಿರುವ ಗಡಿಯಾರ ಕಂಬ(ಕ್ಲಾಕ್ ಟವರ್)ಲಯನ್ಸ್ ಜಿಲ್ಲಾ ಗೌರ‍್ನರ್ ಡಾ. ಎಂ.ಕೆ ಭಟ್ ಉದ್ಘಾಟಿಸಿದರು.  
    ಭದ್ರಾವತಿ, ಏ. ೧:  ನಗರದ ಲಯನ್ಸ್ ಮತ್ತು ಲಿಯೋ ಕ್ಲಬ್‌ಗೆ ಭಾನುವಾರ ಲಯನ್ಸ್ ಜಿಲ್ಲಾ ಗೌರ‍್ನರ್ ಡಾ. ಎಂ.ಕೆ ಭಟ್ ಅಧಿಕೃತ ಭೇಟಿ ನೀಡುವ ಮೂಲಕ ಹಲವು ಸೇವಾಕಾರ್ಯಗಳಲ್ಲಿ ಪಾಲ್ಗೊಂಡರು.
    ಹೊಸಸೇತುವೆ ರಸ್ತೆ, ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಬಳಿ ನೂತನವಾಗಿ ನಿರ್ಮಿಸಲಾಗಿರುವ ಬಸ್ ತಂಗುದಾಣ ಡಾ.ಎಂ.ಕೆ ಭಟ್ ಉದ್ಘಾಟಿಸಿದರು. ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯಕ್ಕೆ ಚಾಲನೆ ನೀಡಿದರು.
    ಬಿ.ಎಚ್ ರಸ್ತೆ ರೈಲ್ವೆ ನಿಲ್ದಾಣದ ಮುಂಭಾಗ ನೂತನವಾಗಿ ನಿರ್ಮಿಸಲಾಗಿರುವ ಗಡಿಯಾರ ಕಂಬ(ಕ್ಲಾಕ್ ಟವರ್) ಮತ್ತು  ಜನ್ನಾಪುರ ಜಯಶ್ರೀ ಕಲ್ಯಾಣ ಮಂಪಟ ಸಮೀಪದಲ್ಲಿರುವ ಕಾರುಣ್ಯ ಚಾರಿಟಬಲ್ ಟ್ರಸ್ಟ್‌ನಲ್ಲಿ ಅಳವಡಿಸಲಾಗಿರುವ ಎಲೆಕ್ಟ್ರಿಕ್ ಗೀಸರ್ ಉದ್ಘಾಟಿಸಿದರು. ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಬಾಟಲ್‌ಗಳನ್ನು ವಿತರಿಸಿದರು.
    ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಎನ್ ಕಾರ್ತಿಕ್ ಅಧ್ಯಕ್ಷತೆ ವಹಿಸಿದ್ದರು. ವಿಭಾಗ-೨, ವಲಯ-೨ರ ಅಧ್ಯಕ್ಷ ಕೆ.ವಿ ಚಂದ್ರಶೇಖರ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಂ. ನಾಗರಾಜ್ ಶೇಟ್, ಖಜಾಂಚಿ ಜಿ.ಪಿ ದರ್ಶನ್, ಪ್ರಮುಖರಾದ ಎಚ್.ವಿ ಶಿವರುದ್ರಪ್ಪ, ಕೆ.ಎನ್ ಭೈರಪ್ಪಗೌಡ, ಹೆಬ್ಬಂಡಿ ನಾಗರಾಜ್, ದೇವರಾಜ್, ರಾಜ್‌ಕುಮಾರ್, ಭುವನೇಶ್ವರ್, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.