Friday, April 14, 2023

ಮೇಣದ ಬತ್ತಿ, ಪಂಜು ಬೆಳಗಿಸಿ ಜಾಥಾ ಮೂಲಕ ಮತದಾನ ಜಾಗೃತಿ, ಅರಿವು

ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಸೂಚನೆ ಮೇರೆಗೆ ಶುಕ್ರವಾರ ಸಂಜೆ ಭದ್ರಾವತಿ ನಗರಸಭೆ ಮುಂಭಾಗದಿಂದ ರಂಗಪ್ಪ ವೃತ್ತದವರೆಗೆ ಜಾಥಾ ಮೂಲಕ ಮತದಾರರಿಗೆ ಮತದಾನದ ಜಾಗೃತಿ ಮತ್ತು ಅರಿವು ಮೂಡಿಸುವ ಸ್ವೀಪ್ ಕಾರ್ಯಕ್ರಮ ನಡೆಯಿತು.
    ಭದ್ರಾವತಿ, ಏ. ೧೪ : ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಸೂಚನೆ ಮೇರೆಗೆ ಶುಕ್ರವಾರ ಸಂಜೆ ನಗರಸಭೆ ಮುಂಭಾಗದಿಂದ ರಂಗಪ್ಪ ವೃತ್ತದವರೆಗೆ ಜಾಥಾ ಮೂಲಕ ಮತದಾರರಿಗೆ ಮತದಾನದ ಜಾಗೃತಿ ಮತ್ತು ಅರಿವು ಮೂಡಿಸುವ ಸ್ವೀಪ್ ಕಾರ್ಯಕ್ರಮ ನಡೆಯಿತು.
    ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ರವಿಚಂದ್ರ ನಾಯಕ ನೇತೃತ್ವದಲ್ಲಿ ಮೇಣದ ಬತ್ತಿ ಹಾಗು ಪಂಜು ಬೆಳಗುವ ಮೂಲಕ ಜಾಥಾ ನಡೆಸಿ ಜಾಗೃತಿ ಮತ್ತು ಅರಿವು ಮೂಡಿಸಲಾಯಿತು.
    ಜಾಥಾದಲ್ಲಿ ನಗರಸಭೆ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಮತದಾನ ಜಾಗೃತಿ ಮೂಡಿಸುವ ಫಲಕಗಳನ್ನು ಹಿಡಿದು ಸಾಗಿದರು. ತಹಸೀಲ್ದಾರ್ ಸುರೇಶ್ ಆಚಾರ್, ಪೌರಾಯುಕ್ತ ಮನುಕುಮಾರ್,  ಪೊಲೀಸ್ ನಗರ ವೃತ್ತ ನಿರೀಕ್ಷಕ ಬಿ.ಪಿ ಶಾಂತಿನಾಥ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಭದ್ರಾವತಿ : ವಿವಿಧೆಡೆ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಜನ್ಮದಿನ

ಭದ್ರಾವತಿ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದಲ್ಲಿರುವ ತಾಲೂಕು ಛಲವಾದಿಗಳ(ಪ.ಜಾ) ಸಮಾಜದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೨ನೇ ಜನ್ಮದಿನ ಆಚರಿಸಲಾಯಿತು.
    ಭದ್ರಾವತಿ, ಏ. ೧೪ : ನಗರದ ವಿವಿಧೆಡೆ ಶುಕ್ರವಾರ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೨ನೇ ಜನ್ಮ ದಿನ ಆಚರಿಸಲಾಯಿತು.
    ತಾಲೂಕು ಛಲವಾದಿಗಳ(ಪ.ಜಾ) ಸಮಾಜ :
    ನಗರದ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದಲ್ಲಿರುವ ತಾಲೂಕು ಛಲವಾದಿಗಳ(ಪ.ಜಾ) ಸಮಾಜದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೨ನೇ ಜನ್ಮದಿನ ಆಚರಿಸಲಾಯಿತು.
    ಸಮಾಜದ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಉದ್ಯಮಿ ಬಿ.ಕೆ ಜಗನ್ನಾಥ್, ಶಿಕ್ಷಕರಾದ ಎ. ತಿಪ್ಪೇಸ್ವಾಮಿ, ತ್ರಿವೇಣಿ, ನಾಗರಾಜ್, ನಗರಸಭೆ ಉಪಾಧ್ಯಕ್ಷೆ ಬಿ.ಪಿ ಸರ್ವಮಂಗಳ ಭೈರಪ್ಪ, ಸದಸ್ಯರಾದ ಉದಯ್‌ಕುಮಾರ್, ಅನ್ನಪೂರ್ಣ ಉಪಸ್ಥಿತರಿದ್ದರು.
    ಸಮಾಜದ ಮುಖಂಡರಾದ ಡಿ. ನರಸಿಂಹಮೂರ್ತಿ ನಿರೂಪಿಸಿದರು. ಎಚ್.ಎಂ ಮಹಾದೇವಯ್ಯ, ಜಂಬೂಸ್ವಾಮಿ ಪ್ರಾರ್ಥಿಸಿದರು. ಸಮಾಜದ ಪ್ರಮುಖರಾದ ಲೋಕೇಶ್, ಚಿಕ್ಕರಾಜು, ಹುಚ್ಚಯ್ಯ, ನಾಗೇಶ್, ಸತೀಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಭದ್ರಾವತಿ ಪೀಪಲ್ ಲಿಬರೇಷನ್ ಸಂಘ(ಬಿಪಿಎಲ್)ದ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್‌ರವರ ಜನ್ಮದಿನ ಆಚರಿಸಲಾಯಿತು.
    ಬಿಪಿಎಲ್ ಸಂಘ :
    ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಭದ್ರಾವತಿ ಪೀಪಲ್ ಲಿಬರೇಷನ್ ಸಂಘ(ಬಿಪಿಎಲ್)ದ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್‌ರವರ ಜನ್ಮದಿನ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಎನ್. ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಪ್ರಧಾನ ಕಾರ್ಯದರ್ಶಿ ಶ್ಯಾಮ್ ಹಾಗು ಪದಾಧಿಕಾರಿಗಳು ಪಾಲ್ಗೊಂಡಿದ್ದರು.
    ತಾಲೂಕು ಬಿಜೆಪಿ ಮಂಡಲ:
  ಭಾರತರತ್ನ, ಸಂವಿಧಾನಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೨ನೇ ಜನ್ಮದಿನ ನಗರದ ಹೊಸಸೇತುವೆ ರಸ್ತೆ ಕೆಎಸ್‌ಆರ್‌ಟಿಸಿ ಬಸ್ ಘಟಕದ ಹಿಂಭಾಗದಲ್ಲಿರುವ ತಾಲೂಕು ಬಿಜೆಪಿ ಮಂಡಲ ಕಾರ್ಯಾಲಯದಲ್ಲಿ ನಡೆಯಿತು.
    ಮಂಡಲದ ಅಧ್ಯಕ್ಷ ಜಿ. ಧರ್ಮ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ವಿಧಾನಸಭಾ ಅಭ್ಯರ್ಥಿ ಮಂಗೋಟೆ ರುದ್ರೇಶ್, ಚುನಾವಣಾ ಪ್ರಭಾರಿ ಅಶೋಕ್ ಮೂರ್ತಿ,  ಚುನಾವಣಾ ಸಂಚಾಲಕ ಎಂ. ಮಂಜುನಾಥ್, ಸಹ ಸಂಚಾಲಕ ಎಂ.ಎಸ್ ಸುರೇಶಪ್ಪ, ಚಂದ್ರು, ಧನುಷ್ ಬೋಸ್ಲೆ, ಚಂದ್ರಪ್ಪ, ರಾಜಶೇಖರ್ ಉಪ್ಪಾರ, ಬಿ.ಎಸ್ ಶ್ರೀನಾಥ್ ಆಚಾರ್, ಸಿ. ರಾಘವೇಂದ್ರ, ಪ್ರದೀಪ್, ಕವಿತಾ ಸುರೇಶ್, ಕವಿತಾ ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭಾರತರತ್ನ, ಸಂವಿಧಾನಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೨ನೇ ಜನ್ಮದಿನ ಭದ್ರಾವತಿ ಹೊಸಸೇತುವೆ ರಸ್ತೆ ಕೆಎಸ್‌ಆರ್‌ಟಿಸಿ ಬಸ್ ಘಟಕದ ಹಿಂಭಾಗದಲ್ಲಿರುವ ತಾಲೂಕು ಬಿಜೆಪಿ ಮಂಡಲ ಕಾರ್ಯಾಲಯದಲ್ಲಿ ನಡೆಯಿತು.

ಎಲ್ಲರೂ ನೆನಪಿಸಿಕೊಳ್ಳಬೇಕಾದ ಮಹಾನ್ ಚೇತನ ಬಾಬಾ ಸಾಹೇಬ್ ಅಂಬೇಡ್ಕರ್ : ಸುರೇಶ್

ಭದ್ರಾವತಿಯಲ್ಲಿ ಶುಕ್ರವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ  ಭಾರತ ರತ್ನ, ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೨ನೇ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಏ. ೧೪: ದೇಶದಲ್ಲಿ ಎಲ್ಲರೂ ಸಮಾನವಾಗಿ ಬದುಕಲು ನೆರವಾಗುವಂತೆ ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಸಂವಿಧಾನ ರಚಿಸಿದ್ದು, ಅಂಬೇಡ್ಕರ್ ಎಲ್ಲರೂ ನೆನಪಿಸಿಕೊಳ್ಳಬೇಕಾದ ಮಹಾನ್ ವ್ಯಕ್ತಿ ಎಂದು ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸುರೇಶ್ ಹೇಳಿದರು.
    ಅವರು ಶುಕ್ರವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತ ರತ್ನ, ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೨ನೇ ಜನ್ಮ ದಿನಾಚರಣೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
    ಅಂಬೇಡ್ಕರ್‌ರವರು ಕೇವಲ ದಲಿತ, ಶೋಷಿತರಿಗೆ ಸೀಮಿತವಾದ ವ್ಯಕ್ತಿಯಾಗಿಲ್ಲ. ಸಮಾಜದಲ್ಲಿ ಎಲ್ಲಾ ಧರ್ಮ, ಜಾತಿ ಸಮುದಾಯದವರನ್ನು ಒಗ್ಗೂಡಿಸಿ ಸಮಸಮಾಜ ನಿರ್ಮಾಣ ಮಾಡಿದವರು. ನಾವೆಲ್ಲರೂ ಇಂದು ಒಗ್ಗಟ್ಟಾಗಿ ಬದುಕಲು ಕಾರಣಕರ್ತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮೂಲಕ ಅವರ ಜನ್ಮದಿನ ಆಚರಿಸಲಾಗುತ್ತಿದೆ. ಅಂಬೇಡ್ಕರ್ ಅವರ ವಿಚಾರಧಾರೆಗಳು ಎಲ್ಲರಿಗೂ ತಲುಪಬೇಕೆಂದರು.
    ವೇದಿಕೆಯಲ್ಲಿ ಬಾಪೂಜಿ ಹರಿಜನ ಸೇವಾ ಸಂಘ, ದಲಿತ ನೌಕರರ ಒಕ್ಕೂಟ, ತಾಲೂಕು ಕುರುಬ ಸಮಾಜ, ಮೋಚಿ ಮಹಿಳಾ ಸಮಾಜ, ಸೆಂಟರ್ ಆಪ್ ಇಂಡಿಯಾ ಟ್ರೆಂಡ್ ಯೂನಿಯನ್, ಅರುಂಧತಿಯಾರ್ ಕ್ಷೇಮಾಭಿವೃದ್ಧಿ ಸಂಘ, ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ), ಆದಿ ದ್ರಾವಿಡ (ತಮಿಳ್) ಹಿತ ರಕ್ಷಣಾ ಸಮಿತಿ, ನಾಡಪ್ರಭು ಕೆಂಪೇಗೌಡ ಹಿತ ರಕ್ಷಣಾ ವೇದಿಕೆ, ತೆಲುಗು ಕ್ರಿಶ್ಚಿಯನ್ ಅಸೋಸಿಯೇಷನ್, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್(ಎಐಟಿಯುಸಿ), ಜಯಕರ್ನಾಟಕ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ(ಪ್ರವಿಣ್ ಶೆಟ್ಟಿ ಬಣ), ಪೌರ ಸೇವಾ ನೌಕರರ ಸಂಘ, ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘ, ಡಾ. ಬಿ.ಆರ್ ಅಂಬೇಡ್ಕರ್ ಯುವ ಜನ ವೇದಿಕೆ, ಪ್ರಜಾರಾಜ್ಯ ದಲಿತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.
    ಇದಕ್ಕೂ ಮೊದಲು ಅಂಬೇಡ್ಕರ್ ವೃತ್ತದಿಂದ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ, ತಾಲೂಕು ಕಛೇರಿ ರಸ್ತೆ ಮೂಲಕ ಹೊಸಸೇತುವೆ ರಸ್ತೆಯಿಂದ ಸಭಾ ವೇದಿಕೆವರೆಗೂ ಬೃಹತ್ ಬೈಕ್‌ರ‍್ಯಾಲಿ ನಡೆಸಲಾಯಿತು.
    ರ‍್ಯಾಲಿಯಲ್ಲಿ ಪ್ರಮುಖರಾದ ಬಾಲಕೃಷ್ಣ, ಮುರುಳಿ, ರಾಜೇಂದ್ರ, ಎಚ್. ರವಿಕುಮಾರ್, ವೆಂಕಟೇಶ್, ಬಿ. ಜಗದೀಶ್, ಇ.ಪಿ ಬಸವರಾಜ್, ಧರ್ಮರಾಜ್, ಸಿ. ಜಯಪ್ಪ, ಕೃಷ್ಣನಾಯ್ಕ, ಐಸಾಕ್ ಲಿಂಕನ್, ಎಸ್. ಉಮಾ, ರೇಖಾ, ಹನುಮಮ್ಮ, ಕಾಣಿಕ್‌ರಾಜ್, ನಿತ್ಯಾನಂದ, ಕುಪ್ಪಸ್ವಾಮಿ, ಭಾಸ್ಕರ್‌ಬಾಬು, ಡಿ. ರಾಜು, ಹಾವು ಮಂಜ,  ಮಹೇಶ್(ಜೆಪಿಎಸ್), ಲೋಕೇಶ್, ಜಗದೀಶ್, ವರುಣ್‌ಗೌಡ, ಎ. ತಿಪ್ಪೇಸ್ವಾಮಿ, ಮಂಜುನಾಥ್, ರವಿಕುಮಾರ್(ವಿಐಎಸ್‌ಎಲ್) ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.


ಭದ್ರಾವತಿಯಲ್ಲಿ ಶುಕ್ರವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತ ರತ್ನ, ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೨ನೇ ಜನ್ಮ ದಿನಾಚರಣೆ ಅಂಗವಾಗಿ ಬೃಹತ್ ಬೈಕ್ ರ‍್ಯಾಲಿ ನಡೆಸಲಾಯಿತು.

Thursday, April 13, 2023

ಅಭ್ಯರ್ಥಿ ಮಂಗೋಟೆ ರುದ್ರೇಶ್ ಗೆಲುವಿಗಾಗಿ ಪೂರ್ವ ಸಿದ್ದತೆ : ಮಂಡಲ ಬೂತ್ ಪ್ರಭಾರಿಗಳ ಸಭೆ

ಭದ್ರಾವತಿಯಲ್ಲಿ ಭಾರತೀಯ ಜನತಾ ಪಕ್ಷದ ತಾಲೂಕು ಮಂಡಲ ವತಿಯಿಂದ ಗುರುವಾರ ಪಕ್ಷದ ಕಛೇರಿಯಲ್ಲಿ ಬೂತ್ ಪ್ರಭಾರಿಗಳ ಸಭೆ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
    ಭದ್ರಾವತಿ, ಏ. ೧೩:  ಭಾರತೀಯ ಜನತಾ ಪಕ್ಷ ವಿಧಾನಸಭಾ ಚುನಾವಣೆಗೆ ಈಗಾಗಲೇ ಕ್ಷೇತ್ರದಲ್ಲಿ ನ್ಯಾಯವಾದಿ, ಯುವ ಮುಖಂಡ ಮಂಗೋಟೆ ರುದ್ರೇಶ್ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು, ಪಕ್ಷದ ತಾಲೂಕು ಮಂಡಲ ರುದ್ರೇಶ್ ಗೆಲುವಿಗಾಗಿ ಪೂರ್ವ ಸಿದ್ದತೆಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳುತ್ತಿದೆ.
    ರುದ್ರೇಶ್‌ರವರ ಆಯ್ಕೆಗೆ ಸಂಬಂಧಿಸಿದಂತೆ ಇದುವರೆಗೂ ಕ್ಷೇತ್ರದಲ್ಲಿ ಯಾವುದೇ ಗೊಂದಲಗಳು ಕಂಡು ಬಂದಿಲ್ಲ. ಈ ಬಾರಿ ಚುನಾವಣೆಯಲ್ಲಿ ಎಲ್ಲರೂ ಸಹ ಒಗ್ಗಟ್ಟಿನಿಂದ ಗೆಲುವಿಗಾಗಿ ಶ್ರಮಿಸಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಗುರುವಾರ ಬೂತ್ ಪ್ರಭಾರಿಗಳ ಸಭೆ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
    ಸಭೆ ಆರಂಭದಲ್ಲಿ ಅಭ್ಯರ್ಥಿ ರುದ್ರೇಶ್‌ರವರಿಗೆ ಶುಭಕೋರಲಾಯಿತು. ಚುನಾವಣಾ ಪ್ರಭಾರಿ ಅಶೋಕ್‌ಮೂರ್ತಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಆರ್.ಎಸ್ ಶೋಭಾ, ಮಂಡಲ ಕಾರ್ಯದರ್ಶಿ ಚನ್ನೇಶ್, ಕ್ಷೇತ್ರ ಚುನಾವಣಾ ಸಂಚಾಲಕ ಎಂ. ಮಂಜುನಾಥ್,   ಸಹ ಸಂಚಾಲಕ ಎಂ.ಎಸ್ ಸುರೇಶಪ್ಪ ಹಾಗೂ ಬೂತ್  ಪ್ರಭಾರಿಗಳು  ಹಾಗೂ ಪ್ರಮುಖ ಕಾರ್ಯಕರ್ತರು.ಸಭೆಯಲ್ಲಿ ಉಪಸ್ಥಿತರಿದ್ದರು.

ನೋಂದಣಿಗೆ ಕಾವೇರಿ ೨.೦ ಜಾಲತಾಣ ಹೆಚ್ಚಿನ ಸಹಕಾರಿ : ಗಿರೀಶ್ ಬಸ್ತನ್ ಗೌಡರ್

ನೋಂದಣಿ ಮತ್ತು ಮುದ್ರಾಂಕ ಇಲಾಖೆ ಭದ್ರಾವತಿ ಕಛೇರಿಯಲ್ಲಿ ಪತ್ರಬರಹಗಾರರಿಗೆ, ದಸ್ತಾವೇಜುಗಾರರಿಗೆ, ವಕೀಲರಿಗೆ ಮತ್ತು ಸೈಬರ್ ಸೆಂಟರ್‌ಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಕಾವೇರಿ ೨.೦ ಜಾಲತಾಣ ನಿರ್ವಹಿಸುವ ಕುರಿತ ಮಾಹಿತಿ ಸಭೆ ನಡೆಯಿತು.
ಭದ್ರಾವತಿ ಏ ೧೩ :  ನೋಂದಣಿ ಮಾಡಿಸಲು ಬರುವವರಿಗೆ ಪ್ರಸ್ತುತ ಎದುರಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಿ ಹೆಚ್ಚಿನ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಸರ್ಕಾರ ಕಾವೇರಿ ೨.೦ ಎಂಬ ಜಾಲತಾಣ ಅರಂಭಿಸಿದೆ ಎಂದು ಜಿಲ್ಲಾ ನೋಂದಣಿ ಅಧಿಕಾರಿ ಮತ್ತು ಕಾವೇರಿ ೨.೦ ಜಾಲತಾಣದ ನೋಡಲ್ ಅಧಿಕಾರಿ ಗಿರೀಶ್ ಬಸ್ತನ್ ಗೌಡರ್ ತಿಳಿಸಿದರು.
    ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಛೇರಿಯಲ್ಲಿ ಪತ್ರಬರಹಗಾರರಿಗೆ, ದಸ್ತಾವೇಜುಗಾರರಿಗೆ, ವಕೀಲರಿಗೆ ಮತ್ತು ಸೈಬರ್ ಸೆಂಟರ್‌ಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಕಾವೇರಿ ೨.೦ ಜಾಲತಾಣ ನಿರ್ವಹಿಸುವ ಕುರಿತ ಮಾಹಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
       ಶಿವಮೊಗ್ಗ ಜಿಲ್ಲೆಯಲ್ಲಿ ಮೇ.೧೫ ರಿಂದ ಈ ಜಾಲತಾಣ ಪ್ರಾರಂಭಿಸಲಾಗುತ್ತಿದ್ದು, ಅದರಲ್ಲೂ ಭದ್ರಾವತಿಯನ್ನು ಪ್ರಥಮ ಹಂತವಾಗಿ ಅಯ್ಕೆ ಮಾಡಿಕೊಳ್ಳಲಾಗಿದೆ. ಪತ್ರ ಬರಹಗಾರರು ಇಂದಿನಿಂದಲೇ ಈ ಜಾಲತಾಣ ಬಳಸಿಕೊಂಡು ನೋಂದಣಿ ಕಾರ್ಯ ಆರಂಭಿಸಬಹುದು ಎಂದರು.


    ಈ ಹಿಂದೆ ಪತ್ರಗಳನ್ನು ನೋಂದಣಿ ಮಾಡಿಸಲು ಹೆಚ್ಚಿನ ಸಮಯ, ಶ್ರಮ ವ್ಯಯವಾಗುತ್ತಿತ್ತು. ಸಾಕ್ಷಿಗಳು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಕಛೇರಿಯಲ್ಲಿ ಜನದಟ್ಟಣೆ ಅಧಿಕವಾಗುತ್ತಿತ್ತು. ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು ಸರ್ಕಾರ ಕಾವೇರಿ ೧.೦  ಜಾಲತಾಣ ಜಾರಿಗೆ ತಂದಿತ್ತು, ಅದರಲ್ಲಿನ ಕೆಲ ನ್ಯೂನತೆ ಕಂಡು ಕಾವೇರಿ ೧.೦ನ್ನು ಸರಳೀಕರಿಸಿ ಕಾವೇರಿ ೨.೦ ಜಾರಿಗೆ ತರಲಾಗಿದೆ ಎಂದರು.    
    ಕಾವೇರಿ ೨.೦ ಜಾಲತಾಣದ ವಿವಿಧ ಹಂತಗಳ ಬಗ್ಗೆ ಸಾಗರದ ಉಪನೋಂದಣಾಧಿಕಾರಿ ಚೇತನ್‌ರಾಜ್ ಗುತ್ತಲ್ ಮಾಹಿತಿ ನೀಡಿದರು. ಈ ಜಾಲತಾಣದ ಮೂಲಕ ತಮ್ಮ ಸ್ವಂತ ಖಾತೆ ತೆರೆದು ನೋಂದಣಿ ಮಾಡಿಸಬಹುದು.  ಪತ್ರಬರಹಗಾರರು ಪ್ರಾಯೋಗಿಕ ಪ್ರಾತ್ಯಕ್ಷತೆ ಪಡೆಯುವ ಮೂಲಕ ಸಹಕರಿಸುವಂತೆ ಮನವಿ ಮಾಡಿದರು.  ಹಿರಿಯ ನೋಂದಣಾಧಿಕಾರಿ ಲಕ್ಷ್ಮೀಕಾಂತ ಉಪಸ್ಥಿತರಿದ್ದರು.

ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು

    ಭದ್ರಾವತಿ, ಏ. ೧೩ : ಮನೆಯ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಹೀರೋ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನ ಕಳುವಾಗಿರುವ ಘಟನೆ ತಾಲೂಕಿನ ಅರಳಿಹಳ್ಳಿ ಗ್ರಾಮದಲ್ಲಿ ನಡೆದಿದೆ.
    ಏ.೬ರಂದು ಮಧ್ಯ ರಾತ್ರಿ ಸುಮಾರು ೧ ಗಂಟೆ ಸಮಯದಲ್ಲಿ ದ್ವಿಚಕ್ರ ವಾಹನ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದು, ಬೆಳಿಗ್ಗೆ ೬ ಗಂಟೆ ಸಮಯದಲ್ಲಿ ಎದ್ದು ನೋಡಿದಾಗ ಕಳುವಾಗಿರುವುದು ಕಂಡು ಬಂದಿದೆ. ಈ ಸಂಬಂಧ ಸಾಧಿಕ್ ಎಂಬುವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್ ಜೂಜಾಟ : ಇಬ್ಬರ ವಿರುದ್ಧ ಪ್ರಕರಣ ದಾಖಲು

    ಭದ್ರಾವತಿ, ಏ. ೧೩:  ಐಪಿಎಲ್ ಟಿ-೨೦ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಸಂಬಂಧ ಇಬ್ಬರ ವಿರುದ್ಧ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
    ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಪೊಲೀಸರು ಏ.೧೧ರಂದು ಸಂಜೆ ೭ ಗಂಟೆ ಸಮಯದಲ್ಲಿ ಕೆ.ಎಚ್ ನಗರ ಬಸ್ ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ಮದನ್ ಮತ್ತು ಉಮೇಶ್ ಎಂಬುವರು ಮೊಬೈಲ್ ಮೂಲಕ ಐಪಿಎಲ್ ಟಿ-೨೦ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.