Sunday, April 30, 2023

ಶಾರದ ಅಪ್ಪಾಜಿ ಪರ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅಬ್ಬರದ ಮತಯಾಚನೆ

ಭದ್ರಾವತಿ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಪರವಾಗಿ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ ಭಾನುವಾರ ಕ್ಷೇತ್ರದ ವಿವಿಧೆಡೆ ಮತಯಾಚನೆ ನಡೆಸಿದರು.
    ಭದ್ರಾವತಿ, ಏ. ೩೦: ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಪರವಾಗಿ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ ಭಾನುವಾರ ಕ್ಷೇತ್ರದ ವಿವಿಧೆಡೆ ಮತಯಾಚನೆ ನಡೆಸಿದರು.
    ಮಧ್ಯಾಹ್ನ ಹೆಲಿಕಾಪ್ಟರ್ ಮೂಲಕ ಹುಡ್ಕೋಕಾಲೋನಿ ಹೆಲಿಪ್ಯಾಡ್‌ಗೆ ಆಗಮಿಸಿದ ಇಬ್ರಾಹಿಂ ಅವರಿಗೆ ಸ್ಥಳೀಯ ಮುಖಂಡರು ಅದ್ದೂರಿ ಸ್ವಾಗತ ಕೋರಿದರು. ನಂತರ ಬೊಮ್ಮನಕಟ್ಟೆಗೆ ತೆರಳಿ ಉಂಬ್ಳೆಬೈಲು ರಸ್ತೆ ಮಾರ್ಗವಾಗಿ ಕೃಷ್ಣಪ್ಪ ವೃತ್ತ, ಜಯಶ್ರೀ ವೃತ್ತ, ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ, ಸೀಗೆಬಾಗಿ, ಅನ್ವರ್‌ಕಾಲೋನಿ, ತಾಲೂಕು ಕಛೇರಿ ರಸ್ತೆ, ಕಂಚಿನ ಬಾಗಿಲು, ಖಾಜಿಮೊಹಲ್ಲಾ, ಹೊಸಸೇತುವೆ ರಸ್ತೆ, ಬಿ.ಎಚ್ ರಸ್ತೆ ತಲುಪಿ ನಂತರ ಹುತ್ತಾ ಮಾರ್ಗವಾಗಿ ದೊಣಬಘಟ್ಟಕ್ಕೆ ತೆರಳಿದರು.  ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಉರ್ದು ಭಾಷೆಯಲ್ಲಿ ಮತಯಾಚನೆ ನಡೆಸಿ ಶಾರದ ಅಪ್ಪಾಜಿ ಬೆಂಬಲಿಸುವಂತೆ ಮನವಿ ಮಾಡಿದರು.
    ಕೆಲವು ಭಾಗಗಳಲ್ಲಿ ಮುಸ್ಲಿಂ ಸಮುದಾಯದ ಹಿರಿಯರು ಇಬ್ರಾಹಿಂ ಅವರನ್ನು ಆಶೀರ್ವದಿಸುವ ಮೂಲಕ ಗಮನ ಸೆಳೆದರು. ಇಬ್ರಾಹಿಂ ಸಹ ಹಿರಿಯರಿಗೆ ಪ್ರೀತಿ, ಗೌರವ ತೋರುವ ಮೂಲಕ ಅವರಿಂದ ಸಲಹೆ, ಸೂಚನೆಗಳನ್ನು ಪಡೆದುಕೊಂಡರು.
    ಅಭ್ಯರ್ಥಿ ಶಾರದ ಅಪ್ಪಾಜಿ, ಪಕ್ಷದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುರ್ತುಜಾಖಾನ್, ಮಾಜಿ ಉಪಮೇಯರ್ ಮಹಮದ್ ಸನ್ನಾವುಲ್ಲಾ, ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ಸೈಯದ್ ಅಜ್ಮಲ್ ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.


ಭದ್ರಾವತಿಯಲ್ಲಿ ಮತಯಾಚನೆ ಸಂದರ್ಭದಲ್ಲಿ ಕೆಲವು ಭಾಗಗಳಲ್ಲಿ ಮುಸ್ಲಿಂ ಸಮುದಾಯದ ಹಿರಿಯರು ಇಬ್ರಾಹಿಂ ಅವರನ್ನು ಆಶೀರ್ವದಿಸುವ ಮೂಲಕ ಗಮನ ಸೆಳೆದರು. ಇಬ್ರಾಹಿಂ ಸಹ ಹಿರಿಯರಿಗೆ ಪ್ರೀತಿ, ಗೌರವ ತೋರುವ ಮೂಲಕ ಅವರಿಂದ ಸಲಹೆ, ಸೂಚನೆಗಳನ್ನು ಪಡೆದುಕೊಂಡರು.

ನ್ಯಾಯವಾದಿ ಬಿ.ಜಿ ಲೋಹಿತಾ ನಂಜಪ್ಪ ನಿಧನ

ಲೋಹಿತಾ ನಂಜಪ್ಪ 
    ಭದ್ರಾವತಿ, ಏ. ೩೦: ನಗರಸಭೆ ವಾರ್ಡ್ ನಂ.೨೯ರ ಜನ್ನಾಪುರ ನಿವಾಸಿ, ನ್ಯಾಯವಾದಿ ಬಿ.ಜಿ ಲೋಹಿತಾ ನಂಜಪ್ಪ(೫೬) ಹೃದಯಾಘಾತದಿಂದ ಶನಿವಾರ ನಿಧನ ಹೊಂದಿದರು.
    ಲಯನ್ಸ್ ಕ್ಲಬ್ ಅಧ್ಯಕ್ಷ, ಪುತ್ರ ಕಾರ್ತಿಕ್ ಹಾಗು ಓರ್ವ ಪುತ್ರಿ, ಸೊಸೆ ಮತ್ತು ಮೊಮ್ಮಕ್ಕಳು ಇದ್ದರು. ಮೈಸೂರಿನಲ್ಲಿ ಮದುವೆ ಸಮಾರಂಭಕ್ಕೆ ತೆರಳಿ ಹಿಂದಿರುಗುತ್ತಿದ್ದಾಗ ಮಾರ್ಗಮಧ್ಯೆ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ.  ನ್ಯಾಯವಾದಿ ದಿವಂಗತ ಎ.ಬಿ ನಂಜಪ್ಪನವರ ಪತ್ನಿಯಾಗಿದ್ದ ಬಿ.ಜಿ ಲೋಹಿತಾ ಪ್ರಸ್ತುತ ನೋಟರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
    ಹಳೇನಗರ ಮಹಿಳಾ ಸೇವಾ ಸಮಾಜದಲ್ಲಿ ಈ ಹಿಂದೆ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ನಿರ್ದೇಶಕಿಯಾಗಿದ್ದರು. ನಗರಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪ್ರಸ್ತುತ ಬ್ಲಾಕ್ ಕಾಂಗ್ರೆಸ್ ಕಾನೂನು, ಮಾನವ ಹಕ್ಕುಗಳ ಮತ್ತು ಮಾಹಿತಿ ಹಕ್ಕು ವಿಭಾಗದ ತಾಲೂಕು ಅಧ್ಯಕ್ಷರಾಗಿದ್ದರು.
    ಮೃತರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಲಯನ್ಸ್ ಕ್ಲಬ್, ಹಳೇನಗರ ಸೇವಾ ಸಮಾಜ, ಬ್ಲಾಕ್ ಕಾಂಗ್ರೆಸ್ ಸಮಿತಿ, ಕಾರುಣ್ಯ ಚಾರಿಟಬಲ್ ಟ್ರಸ್ಟ್ ಹಾಗು ಒಕ್ಕಲಿಗ ಸಮಾಜದ ಮುಖಂಡರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

Saturday, April 29, 2023

ಶಾರದ ಅಪ್ಪಾಜಿ ಪರ ಏ.೩೦ರಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಮತಯಾಚನೆ

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ 
    ಭದ್ರಾವತಿ, ಏ. ೨೯: ಕ್ಷೇತ್ರದ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಪರವಾಗಿ ಮತಯಾಚನೆ ನಡೆಸಲು ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ ಏ.೩೦ರ ಭಾನುವಾರ ನಗರಕ್ಕೆ ಆಗಮಿಸುತ್ತಿದ್ದಾರೆ.
    ಮಧ್ಯಾಹ್ನ ೧೨ ಗಂಟೆಗೆ ಹೆಲಿಕಾಪ್ಟರ್ ಮೂಲಕ ಹುಡ್ಕೋಕಾಲೋನಿ ಹೆಲಿಪ್ಯಾಡ್‌ಗೆ ಆಗಮಿಸಲಿದ್ದು, ನಂತರ ಬೊಮ್ಮನಕಟ್ಟೆಗೆ ತೆರಳಿಲಿದ್ದಾರೆ. ಉಂಬ್ಳೆಬೈಲು ರಸ್ತೆ ಮಾರ್ಗವಾಗಿ ಕೃಷ್ಣಪ್ಪ ವೃತ್ತ, ಜಯಶ್ರೀ ವೃತ್ತ, ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ, ಸೀಗೆಬಾಗಿ, ಅನ್ವರ್‌ಕಾಲೋನಿ, ತಾಲೂಕು ಕಛೇರಿ ರಸ್ತೆ, ಕಂಚಿನ ಬಾಗಿಲು, ಖಾಜಿಮೊಹಲ್ಲಾ, ಹೊಸಸೇತುವೆ ರಸ್ತೆ, ಬಿ.ಎಚ್ ರಸ್ತೆ ತಲುಪಿ ನಂತರ ಹುತ್ತಾ ಮಾರ್ಗವಾಗಿ ದೊಣಬಘಟ್ಟಕ್ಕೆ ತೆರಳಲಿದ್ದಾರೆ. ಕೊನೆಯಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.  
    ಪಕ್ಷದ ಮುಖಂಡರು, ಕಾರ್ಯಕರ್ತರು, ಅಲ್ಪಸಂಖ್ಯಾತರು ಸೇರಿದಂತೆ ಸಮಸ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಪಕ್ಷದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುರ್ತುಜಾಖಾನ್ ಮನವಿ ಮಾಡಿದ್ದಾರೆ.

ಜೆಡಿಎಸ್ ಅಭ್ಯರ್ಥಿಪರ ವಾರ್ಡ್ ೨೬ರಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ

ಭದ್ರಾವತಿ ಕ್ಷೇತ್ರದಾದ್ಯಂತ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಪರವಾಗಿ ವ್ಯಾಪಕ ಪ್ರಚಾರ ನಡೆಯುತ್ತಿದ್ದು, ಶನಿವಾರ ನಗರಸಭೆ ವಾರ್ಡ್ ನಂ.೨೬ರಲ್ಲಿ ಪಕ್ಷದ ಸ್ಥಳೀಯ ಪ್ರಮುಖರು ಪ್ರಚಾರ ನಡೆಸಿದರು.
    ಭದ್ರಾವತಿ, ಏ. ೨೯: ಕ್ಷೇತ್ರದಾದ್ಯಂತ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಪರವಾಗಿ ವ್ಯಾಪಕ ಪ್ರಚಾರ ನಡೆಯುತ್ತಿದ್ದು, ಶನಿವಾರ ನಗರಸಭೆ ವಾರ್ಡ್ ನಂ.೨೬ರಲ್ಲಿ ಪಕ್ಷದ ಸ್ಥಳೀಯ ಪ್ರಮುಖರು ಪ್ರಚಾರ ನಡೆಸಿದರು.
    ಬಾಲಭಾರತಿ, ನ್ಯೂಕಾಲೋನಿ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಈ ಬಾರಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಶಾರದ ಅಪ್ಪಾಜಿ ಬೆಂಬಲಿಸುವಂತೆ ಮತಯಾಚಿಸಿದರು.
    ಪ್ರಮುಖರಾದ ಪರಮೇಶ್ವರಿ, ಪುಷ್ಪಾವತಿ, ಕೆ.ವಿ ಚಂದ್ರಣ್ಣ, ಅಂತೋಣಿದಾಸ್, ಭಾಸ್ಕರ್, ವಿಷ್ಣು, ಗಂಗಾ, ಬಾಸ್ಕರ್(ಎನ್‌ಆರ್‌ಎಂ), ಈಶ್ವರ್, ಟೋನಿ ಸೇರಿದಂತೆ ಇನ್ನಿತರರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
    ನಗರಸಭೆ ೩೫ ವಾರ್ಡ್‌ಗಳಲ್ಲೂ ವ್ಯಾಪಕ ಪ್ರಚಾರ ನಡೆಯುತ್ತಿದ್ದು, ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಆಯಾ ಭಾಗದ ಮುಖಂಡರುಗಳು ಒಂದೆಡೆ ಸಭೆ ನಡೆಸಿ ಮತಯಾಚಿಸುತ್ತಿದ್ದಾರೆ. ಈ ನಡುವೆ ಇತರೆ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವವರ ಸಂಖ್ಯೆ ಸಹ ಹೆಚ್ಚಾಗುತ್ತಿದೆ.

ಏ.೩೦ರಂದು ‘ನಮ್ಮ ನಡೆ ಮತಗಟ್ಟೆಯ ಕಡೆ’ ಕಾಲ್ನಡಿಗೆ ಜಾಥಾ

    ಭದ್ರಾವತಿ, ಏ. ೨೯ : ಚುನಾವಣಾ ಆಯೋಗದ ಆದೇಶದ ಮೇರೆಗೆ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಾಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಸೂಚನೆ ಮೇರೆಗೆ ಏ.೩೦ರಂದು ಬೆಳಿಗ್ಗೆ ೮ ಗಂಟೆಗೆ ನಗರಸಭೆ ವತಿಯಿಂದ 'ನಮ್ಮ ನಡೆ ಮತಗಟ್ಟೆಯ ಕಡೆ' ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ.
    ಮತದಾರರಿಗೆ ಮತದಾನ ಹಾಗು ತಮ್ಮ ಮತಗಟ್ಟೆ ಕುರಿತು ಜಾಗೃತಿ ಮೂಡಿಸಲು ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ಏಕಕಾಲಕ್ಕೆ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಜಾಥಾ ಹಮ್ಮಿಕೊಳ್ಳಲಾಗಿದೆ. ನಗರದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಿಂದ ಕಾಲ್ನಡಿಗೆ ಜಾಥಾ ಆರಂಭಗೊಂಡು ಹಳೇನಗರದ ಬಸವೇಶ್ವರ ವೃತ್ತದವರೆಗೆ ಸಾಗಲಿದೆ. ಜಾಥಾ ಯಶಸ್ವಿಗೊಳಿಸುವಂತೆ ನಗರಸಭೆ ಪೌರಾಯುಕ್ತ ಮನುಕುಮಾರ್ ಕೋರಿದ್ದಾರೆ.   

ಏ.೩೦ರಂದು ಶ್ರೀ ಶ್ರೀನಿವಾಸ ಸ್ವಾಮಿಯ ಕಲ್ಯಾಣೋತ್ಸವ


    ಭದ್ರಾವತಿ, ಏ. ೨೯: ಮಿಲ್ಟ್ರಿಕ್ಯಾಂಪ್ ಬೈಪಾಸ್ ರಸ್ತೆ ಶ್ರೀ ಶ್ರೀನಿವಾಸ ದೇವಸ್ಥಾನದಲ್ಲಿ ಏ.೩೦ರ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಶ್ರೀ ಶ್ರೀನಿವಾಸ ಸ್ವಾಮಿಯ ಕಲ್ಯಾಣೋತ್ಸವ ಏರ್ಪಡಿಸಲಾಗಿದೆ.
    ಮಧ್ಯಾಹ್ನ ೧೨.೩೦ಕ್ಕೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಹಾಗು ಸ್ವಾಮಿಯ ಕಲ್ಯಾಣೋತ್ಸವದ ಕಂಕಣ ದೊರೆಯುತ್ತದೆ(ವಿವಾಹ ಪ್ರತಿಬಂಧಕರ ದೋಷದ ನಿವಾರಣೆಗೋಸ್ಕರ). ಹೆಚ್ಚಿನ ಮಾಹಿತಿಗೆ ಮೊ: ೯೮೪೫೫೪೬೨೧೧/೬೩೬೨೭೧೧೭೬೬  ಸಂಪರ್ಕಿಸಬಹುದಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಲ್ಯಾಣೋತ್ಸವ ಯಶಸ್ವಿಗೊಳಿಸಲು ಕೋರಲಾಗಿದೆ.

ರುದ್ರೇಶ್ ಪರವಾಗಿ ಮತದಾರರಿಗೆ ಹೆಚ್ಚಿನ ಒಲವು : ಹರಿಕೃಷ್ಣ

ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್ ಪರವಾಗಿ ಮತದಾರರು ಹೆಚ್ಚಿನ ಒಲವು ಹೊಂದಿದ್ದು, ಅವರ ಗೆಲುವು ಖಚಿತವಾಗಿದೆ ಎಂದು ಭಾರತೀಯ ಜನತಾ ಪಕ್ಷ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರಿಕೃಷ್ಣ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
    ಭದ್ರಾವತಿ, ಏ. ೨೯ : ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್ ಪರವಾಗಿ ಮತದಾರರು ಹೆಚ್ಚಿನ ಒಲವು ಹೊಂದಿದ್ದು, ಅವರ ಗೆಲುವು ಖಚಿತವಾಗಿದೆ ಎಂದು ಭಾರತೀಯ ಜನತಾ ಪಕ್ಷ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರಿಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.
    ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೆಲುವಿನೊಂದಿಗೆ ಈ ಬಾರಿ ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲೂ ವಿಜಯೋತ್ಸವ ಆಚರಿಸಲಿದ್ದೇವೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಮಾಜದ ಎಲ್ಲಾ ವರ್ಗದ ಜನರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಕಾರ್ಮಿಕರು, ರೈತರು, ಮಹಿಳೆಯರು, ಯುವಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅವರ ಜನಪರ ಕಾಳಜಿ ಹಾಗು ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪನವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಿವೆ ಎಂದರು.
    ಪ್ರತಿಯೊಬ್ಬರ ಮನೆ ಮನೆಗೆ ತೆರಳಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಜನಪರ ಯೋಜನೆಗಳು, ಅಭಿವೃದ್ಧಿ ಕಾರ್ಯಗಳ ಕುರಿತು ಮನವರಿಕೆ ಮಾಡಿಕೊಡುವ ಮೂಲಕ ಮತಯಾಚನೆ ನಡೆಸಲಾಗುತ್ತಿದೆ. ಈಗಾಗಲೇ ಕ್ಷೇತ್ರದಾದ್ಯಂತ ವ್ಯಾಪಕ ಪ್ರಚಾರ ನಡೆಸಲಾಗಿದ್ದು, ಅಭ್ಯರ್ಥಿಪರವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಅವರು ಗೆಲ್ಲುವ ವಿಶ್ವಾಸವಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ತಾಲೂಕು ಬಿಜೆಪಿ ಮಂಡಲ ಕಾರ್ಯದರ್ಶಿ ಚನ್ನೇಶ್, ಗೋಕುಲ್ ಕೃಷ್ಣ, ವಿನೋದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.