Monday, May 1, 2023

ಭದ್ರಾವತಿ ಸರ್ವತೋಮುಖ ಅಭಿವೃದ್ಧಿಗಾಗಿ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ : ಎಸ್.ಕೆ ಸುಧೀಂದ್ರ

ಭದ್ರಾವತಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಕ್ಷೇತರ ಅಭ್ಯರ್ಥಿ ಎಸ್.ಕೆ ಸುಧೀಂದ್ರ ಮಾತನಾಡಿದರು.  
    ಭದ್ರಾವತಿ, ಮೇ. ೧ : ವಿಧಾನಸಭಾ ಚುನಾವಣೆಗೆ ೨ನೇ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನನ್ನನ್ನು ಬೆಂಬಲಿಸುವಂತೆ ಪಕ್ಷೇತರ ಅಭ್ಯರ್ಥಿ ಎಸ್.ಕೆ ಸುಧೀಂದ್ರ ಮನವಿ ಮಾಡಿದರು.
    ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ಕಾರ್ಮಿಕರಾದ ದಿವಂಗತ ಕೃಷ್ಣಮೂರ್ತಿ ಮತ್ತು ಸುಮತಿ ಪುತ್ರನಾಗಿದ್ದೇನೆ. ಇಲ್ಲಿಯೇ ಹುಟ್ಟಿ ಬೆಳೆದಿದ್ದು, ವಿದ್ಯಾರ್ಥಿ ದೆಸೆಯಿಂದಲೇ ನನ್ನ ರಾಜಕೀಯ ಜೀವನ ಆರಂಭಗೊಂಡಿದೆ. ಸುಮಾರು ೨೯ ವರ್ಷಗಳಿಂದ ತೆರೆಮರೆಯಲ್ಲಿ ಕೈಲಾದಷ್ಟು ಸಾಮಾಜಿಕ ಸೇವಾ ಕಾರ್ಯಗಳನ್ನು ಹಾಗು ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದೇನೆ ಎಂದರು.
    ನಾನು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯ ಗುರಿ ಹೊಂದಿದ್ದೇನೆ. ಈ ಹಿನ್ನಲೆಯಲ್ಲಿ ಮತದಾರರು ಈ ಬಾರಿ ಚುನಾವಣೆಯಲ್ಲಿ ಮತ ಖರೀದಿ ಮಾಡುವವರಿಗೆ ಮತ ನೀಡಲಾರೆ, ಅಭಿವೃದ್ಧಿ ಮಾಡುವವರಿಗಾಗಿ ಮಾತ್ರ ನನ್ನ ಮತ, ಆರ್ಥಿಕತೆ, ಸಾಮಾಜಿಕತೆಯ ಜ್ಞಾನ ಮತ್ತು ನ್ಯಾಯ ಪರತೆಯ ನೀತಿಯುಳ್ಳವರಿಗೆ ನನ್ನ ಮತ, ಸ್ವಜನ ಪಕ್ಷಪಾತಿಗಳನ್ನು ಧಿಕ್ಕರಿಸಿ ಸರ್ವರನ್ನೂ ಸಮಾನರೆಂದು ಕಾಣುವವರಿಗೆ ನನ್ನ ಮತ, ವಿಧಾನಸಭೆಯಲ್ಲಿ ಮೌನವಾಗಿದ್ದು ಮತಯಾಚನೆಗೆ ಮಾತ್ರ ಬಾಯಿ ಬಿಡುವವರಿಗೆ ನನ್ನ ಮತವಿಲ್ಲ ಹಾಗು ನನ್ನ ಒಂದು ಮತ ಕ್ಷೇತ್ರದ ಭವಿಷ್ಯ ಬದಲಾಯಿಸುತ್ತದೆ ಎಂಬ ತಿಳುವಳಿಕೆಯಿಂದ ನಾನು ಕಡ್ಡಾಯವಾಗಿ ಮತದಾನ ಮಾಡುತ್ತಿದ್ದೇನೆ ಎಂಬ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಬೆಂಬಿಸುವಂತೆ ಮನವಿ ಮಾಡಿದರು.

ರೈಸ್ ಮಿಲ್ ಮಾಲೀಕರ ಪತ್ನಿ ಕಲಾ ನಿಧನ

ಕಲಾ
    ಭದ್ರಾವತಿ, ಮೇ. ೧ : ತಾಲೂಕಿನ ಹಿರಿಯೂರು ಗ್ರಾಮದ ಶ್ರೀ ವೆಂಕಟೇಶ್ವರ ರೈಸ್ ಮಿಲ್ ಮಾಲೀಕ ಎಲ್.ಸಿ ಮಂಜುನಾಥ್‌ರವರ ಪತ್ನಿ ಕಲಾ(೫೬) ಸೋಮವಾರ ಬೆಳಿಗ್ಗೆ ನಿಧನ ಹೊಂದಿದರು.
    ಪತಿ ಎಲ್.ಸಿ ಮಂಜುನಾಥ್, ಇಬ್ಬರು ಗಂಡು ಮಕ್ಕಳಿದ್ದರು. ಇವರ ಅಂತ್ಯಕ್ರಿಯೆ ಸಂಜೆ ನಡೆಯಲಿದೆ. ಇವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಕೆ.ಟಿ ಪ್ರಸನ್ನ ಹಾಗು ಗ್ರಾಮದ ಮುಖಂಡರು, ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.

Sunday, April 30, 2023

ಕಾರ್ಮಿಕ ದಿನಾಚರಣೆ : ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರಿಂದ ಮುಂದುವರೆದ ಹೋರಾಟ

ಭದ್ರಾವತಿಯಲ್ಲಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ಸೋಮವಾರ ಕಾರ್ಮಿಕರ ದಿನಾಚರಣೆ ಮೂಲಕ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಭದ್ರಾವತಿ, ಮೇ. ೧ : ಕೇಂದ್ರ ಸರ್ಕಾರಿ ಸ್ವಾಮ್ಯದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುತ್ತಿಗೆ ಕಾರ್ಮಿಕರು ಕಳೆದ ಸುಮಾರು ೩ ತಿಂಗಳಿನಿಂದ ನಿರಂತರವಾಗಿ ಕಾರ್ಖಾನೆ ಮುಂಭಾಗ ಹೋರಾಟ ನಡೆಸುತ್ತಿದ್ದು, ಈ ನಡುವೆ ಸೋಮವಾರ ಕಾರ್ಮಿಕರ ದಿನಾಚರಣೆ ಮೂಲಕ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯಬೇಕು, ಅಗತ್ಯವಿರುವ ಬಂಡವಾಳ ತೊಡಗಿಸಬೇಕು ಹಾಗು ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ. ಹಲವು ವಿಭಿನ್ನ ರೀತಿಯ ಹೋರಾಟಗಳನ್ನು ನಡೆಸಲಾಗಿದ್ದು,  ರಾಜ್ಯ ಹಾಗು ಕೇಂದ್ರ ಸರ್ಕಾರಗಳಿಗೆ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.
    ಚುನಾವಣೆ ಘೋಷಣೆಯಿಂದಾಗಿ ಹೋರಾಟಕ್ಕೆ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಿದ್ದು, ಆದರೆ ಕಾರ್ಮಿಕರು ಎದೆಗುಂದದೆ ತಮ್ಮ ಹೋರಾಟ ಮುಂದುವರೆಸಿದ್ದಾರೆ.
    ಕಾರ್ಮಿಕ ದಿನಾಚರಣೆ ಮೂಲಕ ಪುನಃ ತಮ್ಮ ಅಳಲು ತೋರ್ಪಡಿಸಿಕೊಂಡಿದ್ದಾರೆ. ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು, ನಿವೃತ್ತ ಕಾರ್ಮಿಕರು ಮಾಜಿ ಸೈನಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಓ.ಸಿ, ಮಟ್ಕಾ ಜೂಜಾಟ : ಓರ್ವನ ವಿರುದ್ಧ ಪ್ರಕರಣ ದಾಖಲು

    ಭದ್ರಾವತಿ, ಏ. ೩೦: ಸಾರ್ವಜನಿಕ ಸ್ಥಳದಲ್ಲಿ ಓ.ಸಿ, ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನ ವಿರುದ್ಧ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
    ಹೊಸ ಕೋಡಿಹಳ್ಳಿ ಬಸ್ ನಿಲ್ದಾಣದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಸೋಮಶೇಖರ್(೫೦) ಎಂಬಾತ ಓ.ಸಿ, ಮಟ್ಕಾ ಜೂಜಾಟದಲ್ಲಿ ತೊಡಗಿದ್ದು, ಖಚಿತ ಮಾಹಿತಿ ಮೇರೆಗೆ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸರು ದಾಳಿ ನಡೆಸಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್ ಜೂಜಾಟ : ಓರ್ವನ ವಿರುದ್ಧ ಪ್ರಕರಣ ದಾಖಲು

    ಭದ್ರಾವತಿ, ಏ. ೩೦ : ಮೊಬೈಲ್ ಮೂಲಕ ಐಪಿಎಲ್ ಟಿ-೨೦ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನ ಮೇಲೆ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.
    ತಾಲೂಕಿನ ಸಿಂಗನಮನೆ ಬಿಆರ್‌ಪಿ ಗ್ರಾಮದ ನಿವಾಸಿ ಯೋಗೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.  ಈತ ಏ.೨೭ ರಂದು ಸಂಜೆ ಗ್ರಾಮದ ಲಕ್ಷ್ಮೀ ನಾರಾಯಣ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತು ಮೊಬೈಲ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿರುವ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.

‘ನಮ್ಮ ನಡೆ ಮತಗಟ್ಟೆಯ ಕಡೆ’ ಕಾಲ್ನಡಿಗೆ ಜಾಥಾ ಮೂಲಕ ಜಾಗೃತಿ

ಚುನಾವಣಾ ಆಯೋಗದ ಆದೇಶದ ಹಿನ್ನಲೆಯಲ್ಲಿ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಾಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಸೂಚನೆ ಮೇರೆಗೆ ಭದ್ರಾವತಿ ನಗರಸಭೆ ವತಿಯಿಂದ ಭಾನುವಾರ 'ನಮ್ಮ ನಡೆ ಮತಗಟ್ಟೆಯ ಕಡೆ' ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಏ. ೩೦ : ಚುನಾವಣಾ ಆಯೋಗದ ಆದೇಶದ ಹಿನ್ನಲೆಯಲ್ಲಿ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಾಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಸೂಚನೆ ಮೇರೆಗೆ ನಗರಸಭೆ ವತಿಯಿಂದ ಭಾನುವಾರ 'ನಮ್ಮ ನಡೆ ಮತಗಟ್ಟೆಯ ಕಡೆ' ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು.
    ಮತದಾರರಿಗೆ ಮತದಾನ ಹಾಗು ತಮ್ಮ ಮತಗಟ್ಟೆ ಕುರಿತು ಜಾಗೃತಿ ಮೂಡಿಸಲು ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ಏಕಕಾಲಕ್ಕೆ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಜಾಥಾ ಆರಂಭಕ್ಕೂ ಮೊದಲು ನಗರದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.  ಈ ಬಾರಿ ಚುನಾವಣಾ ಆಯೋಗ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ವಿನೂತನವಾದ ವಿಶೇಷ ಧ್ವಜಾ ರೂಪಿಸಿದ್ದು, ಪೌರಾಯುಕ್ತ ಮನುಕುಮಾರ್ ಧ್ವಜಾರೋಹಣಗೊಳಿಸಿದರು.
    ಕಿರುತೆರೆ ನಟ, ರಂಗಕರ್ಮಿ ಅಪರಂಜಿ ಶಿವರಾಜ್, ದೈಹಿಕ ಶಿಕ್ಷಣ ಶಿಕ್ಷಕರಾದ ಶಿವಲಿಂಗೇಗೌಡ, ಕರಣ್‌ಸಿಂಗ್, ಹಳೇ ಸೀಗೆಬಾಗಿ ಡಾ. ಬಿ.ಆರ್ ಅಂಬೇಡ್ಕರ್ ಎಜುಕೇಷನ್ ಟ್ರಸ್ಟ್ ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯ(ಬಿ.ಇಡಿ) ಪ್ರಾಂಶುಪಾಲರು ಮತ್ತು ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಶಾರದ ಅಪ್ಪಾಜಿ ಪರ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅಬ್ಬರದ ಮತಯಾಚನೆ

ಭದ್ರಾವತಿ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಪರವಾಗಿ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ ಭಾನುವಾರ ಕ್ಷೇತ್ರದ ವಿವಿಧೆಡೆ ಮತಯಾಚನೆ ನಡೆಸಿದರು.
    ಭದ್ರಾವತಿ, ಏ. ೩೦: ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಪರವಾಗಿ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ ಭಾನುವಾರ ಕ್ಷೇತ್ರದ ವಿವಿಧೆಡೆ ಮತಯಾಚನೆ ನಡೆಸಿದರು.
    ಮಧ್ಯಾಹ್ನ ಹೆಲಿಕಾಪ್ಟರ್ ಮೂಲಕ ಹುಡ್ಕೋಕಾಲೋನಿ ಹೆಲಿಪ್ಯಾಡ್‌ಗೆ ಆಗಮಿಸಿದ ಇಬ್ರಾಹಿಂ ಅವರಿಗೆ ಸ್ಥಳೀಯ ಮುಖಂಡರು ಅದ್ದೂರಿ ಸ್ವಾಗತ ಕೋರಿದರು. ನಂತರ ಬೊಮ್ಮನಕಟ್ಟೆಗೆ ತೆರಳಿ ಉಂಬ್ಳೆಬೈಲು ರಸ್ತೆ ಮಾರ್ಗವಾಗಿ ಕೃಷ್ಣಪ್ಪ ವೃತ್ತ, ಜಯಶ್ರೀ ವೃತ್ತ, ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ, ಸೀಗೆಬಾಗಿ, ಅನ್ವರ್‌ಕಾಲೋನಿ, ತಾಲೂಕು ಕಛೇರಿ ರಸ್ತೆ, ಕಂಚಿನ ಬಾಗಿಲು, ಖಾಜಿಮೊಹಲ್ಲಾ, ಹೊಸಸೇತುವೆ ರಸ್ತೆ, ಬಿ.ಎಚ್ ರಸ್ತೆ ತಲುಪಿ ನಂತರ ಹುತ್ತಾ ಮಾರ್ಗವಾಗಿ ದೊಣಬಘಟ್ಟಕ್ಕೆ ತೆರಳಿದರು.  ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಉರ್ದು ಭಾಷೆಯಲ್ಲಿ ಮತಯಾಚನೆ ನಡೆಸಿ ಶಾರದ ಅಪ್ಪಾಜಿ ಬೆಂಬಲಿಸುವಂತೆ ಮನವಿ ಮಾಡಿದರು.
    ಕೆಲವು ಭಾಗಗಳಲ್ಲಿ ಮುಸ್ಲಿಂ ಸಮುದಾಯದ ಹಿರಿಯರು ಇಬ್ರಾಹಿಂ ಅವರನ್ನು ಆಶೀರ್ವದಿಸುವ ಮೂಲಕ ಗಮನ ಸೆಳೆದರು. ಇಬ್ರಾಹಿಂ ಸಹ ಹಿರಿಯರಿಗೆ ಪ್ರೀತಿ, ಗೌರವ ತೋರುವ ಮೂಲಕ ಅವರಿಂದ ಸಲಹೆ, ಸೂಚನೆಗಳನ್ನು ಪಡೆದುಕೊಂಡರು.
    ಅಭ್ಯರ್ಥಿ ಶಾರದ ಅಪ್ಪಾಜಿ, ಪಕ್ಷದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುರ್ತುಜಾಖಾನ್, ಮಾಜಿ ಉಪಮೇಯರ್ ಮಹಮದ್ ಸನ್ನಾವುಲ್ಲಾ, ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ಸೈಯದ್ ಅಜ್ಮಲ್ ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.


ಭದ್ರಾವತಿಯಲ್ಲಿ ಮತಯಾಚನೆ ಸಂದರ್ಭದಲ್ಲಿ ಕೆಲವು ಭಾಗಗಳಲ್ಲಿ ಮುಸ್ಲಿಂ ಸಮುದಾಯದ ಹಿರಿಯರು ಇಬ್ರಾಹಿಂ ಅವರನ್ನು ಆಶೀರ್ವದಿಸುವ ಮೂಲಕ ಗಮನ ಸೆಳೆದರು. ಇಬ್ರಾಹಿಂ ಸಹ ಹಿರಿಯರಿಗೆ ಪ್ರೀತಿ, ಗೌರವ ತೋರುವ ಮೂಲಕ ಅವರಿಂದ ಸಲಹೆ, ಸೂಚನೆಗಳನ್ನು ಪಡೆದುಕೊಂಡರು.