ಬಿ.ಕೆ ಸಂಗಮೇಶ್ವರ್
ಭದ್ರಾವತಿ, ಮೇ. ೧೩ : ಕ್ಷೇತ್ರದಲ್ಲಿ ೩ ಬಾರಿ ಶಾಸಕರಾಗಿ ಅಯ್ಕೆಯಾಗಿದ್ದ ಬಿ.ಕೆ ಸಂಗಮೇಶ್ವರ್ ವಿರುದ್ಧ ಈ ಬಾರಿ ಹಲವು ಆರೋಪಗಳು ಕೇಳಿ ಬರುತ್ತಿದ್ದವು. ಅಲ್ಲದೆ ಅವರೊಂದಿಗೆ ಗುರುತಿಸಿಕೊಂಡಿದ್ದ ಬಹುತೇಕ ಮಂದಿ ದೂರ ಸರಿದಿದ್ದರೂ ಆದರೂ ಸಹ ಈ ಬಾರಿ ಗೆಲ್ಲುವ ಮೂಲಕ ೪ನೇ ಬಾರಿಗೆ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಆರೋಗ್ಯದ ಸುಧಾರಣೆಗೆ ಹೆಚ್ಚಿನ ಗಮನ ಹರಿಸಿರುವ ಸಂಗಮೇಶ್ವರ್ ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿರಲಿಲ್ಲ. ಬಹುತೇಕ ಸಭೆ-ಸಮಾರಂಭಗಳಲ್ಲಿ ಕುಟುಂಬ ವರ್ಗದವರೇ ಪಾಲ್ಗೊಳ್ಳುತ್ತಿದ್ದರು. ಆರೋಗ್ಯ ಸುಧಾರಣೆ ನಡುವೆಯೂ ಎಂದಿಗೂ ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಸಂಗಮೇಶ್ವರ್ ಕಡೆಗಣಿಸಿರಲಿಲ್ಲ. ಆದರೂ ಸಹ ಇವರ ವಿರುದ್ಧ ಕುಟುಂಬ ರಾಜಕಾರಣ ಆರೋಪ ಮಾಡಲಾಗುತ್ತಿತ್ತು.
ಚುನಾವಣೆ ಸಮೀಪಿಸುತ್ತಿದ್ದಂತೆ ಇವರಿಂದ ಬಹಳಷ್ಟು ಮಂದಿ ದೂರ ಸರಿದಿದ್ದರು. ಆದರೂ ಸಹ ಯಾವುದಕ್ಕೂ ತಲೆಗೆಡಿಸಿಕೊಳ್ಳದೆ ಕೇವಲ ಸಂಜೆಯಿಂದ ರಾತ್ರಿವರೆಗೂ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ೫ ವರ್ಷಗಳ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳ ಮೇಲೆ ವಿಶ್ವಾಸ ಹೊಂದಿದ್ದರು. ಅಲ್ಲದೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ನನಗೆ ಸಚಿವ ಸ್ಥಾನ ಸಿಗಲಿದೆ. ಇದರಿಂದ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದ್ದರು. ಅವರ ಭರವಸೆಯಿಂದಾಗಿ ಇದೀಗ ಗೆಲುವು ಲಭಿಸಿದೆ ಎನ್ನಲಾಗುತ್ತಿದೆ.
ನೂತನ ಸರ್ಕಾರದಲ್ಲಿ ಅವರಿಗೆ ಸಚಿವ ಸ್ಥಾನ ಲಭಿಸುವ ಮೂಲಕ ಕ್ಷೇತ್ರದಲ್ಲಿನ ಸಮಸ್ಯೆಗಳು ಬಗೆಹರಿಯಬೇಕು. ಬಹುಮುಖ್ಯವಾಗಿ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡೂ ಕಾರ್ಖಾನೆಗಳ ಅಭಿವೃದ್ಧಿ, ನಿರುದ್ಯೋಗ ನಿರ್ಮೂಲನೆ, ಉನ್ನತ ಶಿಕ್ಷಣ, ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.
ಇದೀಗ ೪ನೇ ಬಾರಿಗೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ದಾಖಲೆ ನಿರ್ಮಿಸಿರುವ ಸಂಗಮೇಶ್ವರ್ ನೂತನ ಸರ್ಕಾರದಲ್ಲಿ ಸಚಿವರಾಗುವ ಮತ್ತೊಂದು ದಾಖಲೆ ನಿರ್ಮಿಸುವಂತಾಗಲಿ ಎಂಬುದು ಕ್ಷೇತ್ರದ ಜನರ ಆಶಯವಾಗಿದೆ.