Saturday, May 13, 2023

೪ನೇ ಬಾರಿಗೆ ಗೆಲವು ಸಾಧಿಸಿ ಇತಿಹಾಸ ನಿರ್ಮಿಸಿದ ಶಾಸಕ ಬಿ.ಕೆ ಸಂಗಮೇಶ್ವರ್

ಪ್ರಬಲ ಸ್ಪರ್ಧೆ ನೀಡಿದ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ

    ಭದ್ರಾವತಿ, ಮೇ. ೧೩: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಬಿ.ಕೆ ಸಂಗಮೇಶ್ವರ್ ೪ನೇ ಬಾರಿಗೆ ಮರು ಆಯ್ಕೆಯಾಗುವ ಮೂಲಕ ಕ್ಷೇತ್ರದ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ್ದಾರೆ.
    ಈ ಬಾರಿ ಚುನಾವಣೆಯಲ್ಲಿ ಸಂಗಮೇಶ್ವರ್‌ಗೆ ಜ್ಯಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಪ್ರಬಲ ಪೈಪೋಟಿ ನೀಡುವ ಗಮನ ಸೆಳೆದರು. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಶಾರದ ಅಪ್ಪಾಜಿ ೨,೫೮೫ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ೧೯ ಸುತ್ತಿನ ಮತಗಳ ಎಣಿಕೆಯವರೆಗೂ ಇಬ್ಬರ ನಡುವೆ ತೀವ್ರ ಪೈಪೋಟಿ ಕಂಡು ಬಂದಿತು. ಕಡಿಮೆ ಅಂತರದಲ್ಲಿಯೇ ಮುನ್ನಡೆ ಕಾಯ್ದುಕೊಂಡಿದ್ದ ಸಂಗಮೇಶ್ವರ್ ಅಂತಿಮವಾಗಿ ಗೆಲುವು ಸಾಧಿಸಿದ್ದಾರೆ.
    ಅಂತಿಮ ಸುತ್ತಿನಲ್ಲಿ ಸಂಗಮೇಶ್ವರ್ ೬೫,೮೮೩ ಹಾಗು ಶಾರದ ಅಪ್ಪಾಜಿ ೬೩,೨೯೮ ಮತಗಳನ್ನು ಪಡೆದುಕೊಂಡಿದ್ದಾರೆ. ಉಳಿದಂತೆ ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್ ೨೧,೧೩೭, ಎಎಪಿ ಅಭ್ಯರ್ಥಿ ಆನಂದ್ ಮಾರುತಿ ಮೆಡಿಕಲ್ ೧,೩೭೮ ಮತಗಳನ್ನು ಪಡೆದುಕೊಂಡಿದ್ದಾರೆ.
    ಪಟಾಕಿ ಹೊಡೆದು ಸಂಭ್ರಮಿಸಿದ ಜೆಡಿಎಸ್ ಕಾರ್ಯಕರ್ತರು :
    ಇನ್ನೂ ಫಲಿತಾಂಶ ಬಾಕಿ ಇರುವಾಗಲೇ ಜೆಡಿಎಸ್ ಕಾರ್ಯಕರ್ತರು ತಪ್ಪು ಮಾಹಿತಿ ಹಿನ್ನಲೆಯಲ್ಲಿ ಶಾರದ ಅಪ್ಪಾಜಿ ಗೆಲುವು ಸಾಧಿಸಿದ್ದಾರೆಂದು ಪಟಾಕಿ ಸಿಡಿಸಿ ಸಂಭ್ರಮಿಸಿರುವ ಘಟನೆ ನಡೆದಿದೆ. ನಂತರ ನಿಖರ ಮಾಹಿತಿ ತಿಳಿದು ಕಾರ್ಯಕರ್ತರು ಬೇಸರ ಗೊಂಡಿದ್ದಾರೆ.
    ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ :
    ಬಿ.ಕೆ ಸಂಗಮೇಶ್ವರ್ ಗೆಲುವು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್  ೩ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ೨೦ ಸಾವಿರ ಮತಗಳ ಗಡಿದಾಟದ ಬಿಜಿಪಿ ಈ ಬಾರಿ ೨೦,೮೭೨ ಮತಗಳನ್ನು ಪಡೆದುಕೊಂಡಿದೆ. ಮಂಗೋಟೆ ರುದ್ರೇಶ್ ಪಡೆದಿರುವ ಮತಗಳು ಸಂಗಮೇಶ್ವರ್ ಗೆಲುವಿನ ಅಂತರ ಕಡಿಮೆಗೊಳಿಸಿವೆ.

No comments:

Post a Comment