Monday, May 15, 2023

ಕ್ಷೇತ್ರದ ಇತಿಹಾಸದಲ್ಲಿಯೇ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತಗಳು : ಪಕ್ಷಕ್ಕೆ ನೆಲೆ ಇದೆ

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್

ಭದ್ರಾವತಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್ ಮಾತನಾಡಿದರು.
    ಭದ್ರಾವತಿ, ಮೇ. ೧೫: ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಭವಿಷ್ಯದಲ್ಲಿ ನೆಲೆ ಇದೆ ಎಂಬುದನ್ನು ಈ ಚುನಾವಣೆ ಮೂಲಕ ತೋರಿಸಿಕೊಡಲಾಗಿದೆ. ಅತಿ ಹೆಚ್ಚು ಮತಗಳನ್ನು ನೀಡಿರುವ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್ ಹೇಳಿದರು.
    ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಚುನಾವಣೆಯಲ್ಲಿ ಗೆಲುವಿಗಾಗಿ ಒಗ್ಗಟ್ಟಿನಿಂದ ಶ್ರಮಿಸಿತ್ತೇವೆ. ಕ್ಷೇತ್ರದ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಪಕ್ಷದ ಅಭ್ಯರ್ಥಿ ೨೦ ಸಾವಿರಕ್ಕೂ ಹೆಚ್ಚಿನ ಮತಗಳನ್ನು ಪಡೆದುಕೊಂಡಿದ್ದು, ಇದರಿಂದಾಗಿ ಭವಿಷ್ಯದಲ್ಲಿ ನೆಲೆ ಇದೆ ಎಂಬುದನ್ನು ತೋರಿಸಿ ಕೊಡಲಾಗಿದೆ. ಇದು ನನಗೆ ತೃಪ್ತಿ ತಂದಿದೆ ಎಂದರು.
    ಕ್ಷೇತ್ರದ ಎಲ್ಲಾ ಬೂತ್‌ಗಳಲ್ಲೂ ನನಗೆ ಮತ ಚಲಾವಣೆಯಾಗಿದ್ದು, ಇದರಿಂದಾಗಿ ಕ್ಷೇತ್ರದಲ್ಲೆಡೆ ಪಕ್ಷ ಸಂಘಟನೆಗೆ ಮತ್ತಷ್ಟು ಸ್ಪೂರ್ತಿ ನೀಡುತ್ತಿದೆ. ಎಲ್ಲಾ ಧರ್ಮ, ಜಾತಿ, ಜನಾಂಗದವರು ನನಗೆ ಮತ ನೀಡಿದ್ದು, ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತೇನೆ  ಎಂದರು.
    ಪಕ್ಷದ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಪ್ರಮುಖರಾದ ಕೂಡ್ಲಿಗೆರೆ ಹಾಲೇಶ್, ತೀರ್ಥಯ್ಯ, ಎಂ. ಮಂಜುನಾಥ್, ಎಂ.ಎಸ್ ಸುರೇಶಪ್ಪ, ವಿ. ಕದಿರೇಶ್, ಜಿ. ಆನಂದಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಮತದಾರರಿಗೆ ಕೃತಜ್ಞತೆ : ಎದೆಗುಂದದಿರಿ, ನಿಮ್ಮ ಪರವಾಗಿ ನಿಮ್ಮ ಜೊತೆ ಇದ್ದೇವೆ

 ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ

ಭದ್ರಾವತಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಚಿರಋಣಿಯಾಗಿದ್ದು, ಮತನೀಡಿ ಸಹಕರಿಸಿದ ಕ್ಷೇತ್ರದ ಸಮಸ್ತ ಮತದಾರ ಬಂಧುಗಳಿಗೆ ಹೃದಯ ಪೂರ್ವಕ ಕೃತಜ್ಞತೆ ಸಲ್ಲಿಸಿದರು.
    ಭದ್ರಾವತಿ, ಮೇ. ೧೫: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹಗಲಿರುಳು ಶ್ರಮಿಸಿದ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಚಿರಋಣಿಯಾಗಿದ್ದು, ಮತನೀಡಿ ಸಹಕರಿಸಿದ ಕ್ಷೇತ್ರದ ಸಮಸ್ತ ಮತದಾರ ಬಂಧುಗಳಿಗೆ ಹೃದಯ ಪೂರ್ವಕ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ ಎಂದು  ಜೆಡಿಎಸ್ ಅಭ್ಯರ್ಥಿ  ಶಾರದ ಅಪ್ಪಾಜಿ ಹೇಳಿದರು.
    ಅವರು ಸೋಮವಾರ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ವಿಜೇತ ಅಭ್ಯರ್ಥಿಯ ಹಣದ ಪ್ರಭಾವದ ಎದುರು ಸೋಲಾಗಿದೆ. ಸೋಲಿನ ಅಂತರ ಆತ್ಮವಿಶ್ವಾಸ  ಹೆಚ್ಚಿಸಿದ್ದು, ಸೋಲನ್ನು ಸವಾಲಾಗಿ ಸ್ವೀಕರಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಅವರ ಮಧ್ಯೆಯೇ ಉಳಿಯಲು ಬಯಸುತ್ತೇನೆ ಎಂದರು.  
    ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಕ್ಷೇತ್ರದ ಮತದಾರರು ದಿವಂಗತ ಎಂ.ಜೆ ಅಪ್ಪಾಜಿಯವರ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ ನನಗೆ ಹೆಚ್ಚಿನ ಮತಗಳನ್ನು ನೀಡಿದ್ದಾರೆ. ಮೊದಲ ಚುನಾವಣೆಯಲ್ಲಿಯೇ ಹೆಚ್ಚಿನ ಮತಗಳನ್ನು ಪಡೆದಿರುವುದು ನನಗೆ ತೃಪ್ತಿ ಇದೆ. ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಧೈರ್ಯ ಕಳೆದುಕೊಳ್ಳುವುದು ಬೇಡ. ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಬೇಕು. ಯುವ ಸಮುದಾಯ ದುಶ್ಚಟಗಳಿಗೆ ಬಲಿಯಾಗುವುದು ನಿಲ್ಲಬೇಕು. ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳು ಅಭಿವೃದ್ಧಿಗೊಳ್ಳಬೇಕು. ಈ ನಿಟ್ಟಿನಲ್ಲಿ ನನ್ನ ಹೋರಾಟ ಮುಂದುವರೆಯಲಿದೆ.
     ಪುನರಾಯ್ಕೆಯಾಗಿರುವ  ಶಾಸಕರಿಗೆ ಅಭಿನಂದನೆಗಳು. ಊರಿನ ಅಭಿವೃದ್ಧಿಗೆ ಜನತೆಗೆ ನೀಡಿರುವ ಭರವಸೆಗಳನ್ನು ಈ ಬಾರಿಯಾದರೂ ಈಡೇರಿಸಲಿ ಎಂದು ಆಶಿಸುತ್ತೇನೆ. ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
      ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ಗ್ರಾಮಾಂತರ ಘಟಕದ ಅಧ್ಯಕ್ಷ ಧರ್ಮಕುಮಾರ್, ಪ್ರಮುಖರಾದ ಮಹಮದ್ ಸನ್ನಾವುಲ್ಲಾ,  ಎನ್. ಕೃಷ್ಣಪ್ಪ, ಡಿ.ಟಿ ಶ್ರೀಧರ್, ಕರಿಯಪ್ಪ, ತಿಮ್ಮೇಗೌಡ, ತ್ಯಾಗರಾಜ್, ಮೈಲಾರಪ್ಪ, ತರುಣ್‌ಕುಮಾರ್, ಲೋಕೇಶ್ವರ್‌ರಾವ್, ಎಂ. ರಾಜು ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Sunday, May 14, 2023

ವಿಐಎಸ್‌ಎಲ್-ಎಂಪಿಎಂ ಕಾರ್ಖಾನೆ ಉಳಿವಿಗೆ ನೂತನ ಸರ್ಕಾರ ಸ್ಪಂದಿಸಲಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನುಡಿದಂತೆ ನಡೆಯುವರೇ..?

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ.
    * ಅನಂತಕುಮಾರ್
    ಭದ್ರಾವತಿ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಳೆದ ಸುಮಾರು ೪ ತಿಂಗಳಿನಿಂದ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ನೂತನ ಸರ್ಕಾರ ಪೂರಕವಾಗಿ ಸ್ಪಂದಿಸಬೇಕಾಗಿದೆ.
    ಜ.೧೬ರಂದು ಕೇಂದ್ರ ಉಕ್ಕು ಪ್ರಾಧಿಕಾರದ ಅಧೀನದಲ್ಲಿರುವ ಈ ಕಾರ್ಖಾನೆಯನ್ನು ಮುಚ್ಚಲು ಆದೇಶ ಹೊರಡಿಸಲಾಗಿದ್ದು, ಇದರ ವಿರುದ್ಧ ಗುತ್ತಿಗೆ ಕಾರ್ಮಿಕರು ಜ.೧೮ರಿಂದ ಕಾರ್ಖಾನೆ ಮುಂಭಾಗ ಅನಿರ್ಧಿಷ್ಟಾವಧಿ ಹೋರಾಟ ಕೈಗೊಂಡಿದ್ದಾರೆ.
    ಸುಮಾರು ೪ ತಿಂಗಳು ಕಳೆದರೂ ಸಹ ಗುತ್ತಿಗೆ ಕಾರ್ಮಿಕರು ಧೈರ್ಯ ಕಳೆದುಕೊಳ್ಳದೆ ಒಗ್ಗಟ್ಟಿನಿಂದ ಹೋರಾಟ ಮುನ್ನಡೆಸುತ್ತಿದ್ದು, ಬೆಂಗಳೂರು ವಿಧಾನಸೌಧ, ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿವರೆಗೂ ಪಾದಯಾತ್ರೆ, ಬೈಕ್ ರ‍್ಯಾಲಿ, ದೆಹಲಿಯಲ್ಲಿ ಹೋರಾಟ, ಮೈಸೂರು ಮಹಾರಾಜರ ವಂಶಸ್ಥರ ಗಮನ ಸೆಳೆಯಲು ಮೈಸೂರಿನಲ್ಲಿ ಹೋರಾಟ, ಭದ್ರಾವತಿ ಬಂದ್, ಬೃಹತ್ ಜಾಥಾ, ರಸ್ತೆ ತಡೆ, ಸಹಿ ಅಭಿಯಾನ, ಪತ್ರ ಚಳುವಳಿ ಸೇರಿದಂತೆ ಹಲವು ಬಗೆಯ ಹೋರಾಟಗಳನ್ನು ಕೈಗೊಂಡಿದ್ದಾರೆ.
    ಹೋರಾಟದ ನಡುವೆ ರಾಜ್ಯದ ಪ್ರಮುಖ ಮಠಗಳಿಗೆ ತೆರಳಿ ಮಠಾಧೀಶರುಗಳಿಗೆ, ಮಾಜಿ ಪ್ರಧಾನಿ, ಕೇಂದ್ರ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳಿಗೆ ಮನವಿ ಸಲ್ಲಿಸಿ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆದು ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವಂತೆ ಕೋರಿದ್ದಾರೆ.


ಭದ್ರಾವತಿ ಎಂಪಿಎಂ ಕಾರ್ಖಾನೆ.
    ವಿವಿಧ ಧರ್ಮಗಳ ಧರ್ಮಗುರುಗಳು, ಮಠಾಧೀಶರು, ರಾಜಕೀಯ ಪಕ್ಷಗಳ ಪ್ರಮುಖರು, ಗಣ್ಯರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೆಂಬಲ ನೀಡಿ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚದಂತೆ ಆಗ್ರಹಿಸಿದ್ದಾರೆ. ವಿವಿಧ ಸಂಘ-ಸಂಸ್ಥೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿ ಕೈಜೋಡಿಸಿವೆ. ಆದರೂ ಸಹ ಕೇಂದ್ರ ಸರ್ಕಾರವಾಗಲಿ, ಉಕ್ಕು ಪ್ರಾಧಿಕಾರವಾಗಲಿ ಹೋರಾಟಕ್ಕೆ ಪೂರಕವಾಗಿ ಸ್ಪಂದಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.
    ಈ ನಡುವೆ ೨೦೧೫ರಿಂದ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಮುಚ್ಚಲ್ಪಟ್ಟಿದ್ದು, ಈ ಕಾರ್ಖಾನೆ ಸಹ ಪುನರ್ ಆರಂಭಗೊಳ್ಳಬೇಕಾಗಿದೆ. ಈಗಾಗಲೇ ಕಾರ್ಖಾನೆ ಪಾಳುಬಿದ್ದಿದ್ದು, ಕೋಟ್ಯಾಂತರ ರು. ಮೌಲ್ಯದ ಆಸ್ತಿ-ಪಾಸ್ತಿ ಹಾಳಾಗಿದೆ. ಕಾರ್ಖಾನೆಯ ನಗರಾಡಳಿತ ಪ್ರದೇಶಲ್ಲಿ ಸ್ಮಶಾನ ಮೌನ ಆವರಿಸಿಕೊಂಡಿದೆ. ತಕ್ಷಣ ಕಾರ್ಖಾನೆಯನ್ನು ಪುನರ್ ಆರಂಭಿಸಬೇಕಾಗಿದೆ.

    ಫೆ. ೮ರಂದು ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಅಲ್ಲದೆ 'ಈ ಬಾರಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳನ್ನು ಉಳಿಸುವ ಜವಾಬ್ದಾರಿ ನನ್ನದು. ನಮ್ಮನ್ನು ನೀವು ಬೆಂಬಲಿಸಿ, ನಿಮ್ಮನ್ನು ನಾವು ಉಳಿಸುತ್ತೇವೆ' ಎಂದು ಭರವಸೆ ನೀಡಿದ್ದರು. ಇದೀಗ ನೂತನ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದು, ಈ ಎರಡೂ ಕಾರ್ಖಾನೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಕ್ಷಣ ಗಮನ ಹರಿಸಬೇಕಾಗಿದೆ.


ಶಾಸಕ ಬಿ.ಕೆ ಸಂಗಮೇಶ್ವರ್

``೪ನೇ ಬಾರಿಗೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಲು ಮತದಾರರು ಕಾರಣರಾಗಿದ್ದು, ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.  ಪ್ರಸ್ತುತ ನೂತನ ಸರ್ಕಾರದಲ್ಲಿ ನಾನು ಸಚಿವನಾಗುವ ವಿಶ್ವಾಸವಿದ್ದು, ಈಗಾಗಲೇ ಪಕ್ಷದ ವರಿಷ್ಠರು ಸಹ ಬಹಿರಂಗವಾಗಿ ಭರವಸೆ ನೀಡಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಗಳು ನಡೆಯಬೇಕಾಗಿದ್ದು, ಬಹಳ ಮುಖ್ಯವಾಗಿ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳನ್ನು ಅಭಿವೃದ್ಧಿಗೊಳಿಸಿ ಇದರ ಜೊತೆಗೆ ಇನ್ನೂ ಸಣ್ಣ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಿ ನಿರುದ್ಯೋಗ ನಿರ್ಮೂಲನೆಗೆ ಶ್ರಮಿಸಲಾಗುವುದು.''
                                                                                       - ಬಿ.ಕೆ ಸಂಗಮೇಶ್ವರ್, ಶಾಸಕರು, ಭದ್ರಾವತಿ.

Saturday, May 13, 2023

ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ೨೦೨೩ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಅಂಚೆ ಮತಗಳನ್ನು ಒಳಗೊಂಡಂತೆ ಪಡೆದುಕೊಂಡಿರುವ ಮತಗಳು.

 


ಸಂಗಮೇಶ್ವರ್ ಗೆಲುವು : ನಗರದಲ್ಲಿ ವಿಜಯೋತ್ಸವ

ಶಾಸಕರು ಸಚಿವರಾಗಲಿದ್ದಾರೆ : ಎಚ್.ಎಲ್ ಷಡಾಕ್ಷರಿ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ಶಾಸಕ ಬಿ.ಕೆ ಸಂಗಮೇಶ್ವರ್ ೪ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಕುಟುಂಬ ವರ್ಗದವರು ಭದ್ರಾವತಿ ನಗರದಲ್ಲಿ ಶನಿವಾರ ವಿಜಯೋತ್ಸವ ನಡೆಸಿದರು.
    ಭದ್ರಾವತಿ, ಮೇ. ೧೩ : ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ಶಾಸಕ ಬಿ.ಕೆ ಸಂಗಮೇಶ್ವರ್ ೪ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಕುಟುಂಬ ವರ್ಗದವರು ನಗರದಲ್ಲಿ ಶನಿವಾರ ವಿಜಯೋತ್ಸವ ನಡೆಸಿದರು.
    ಶಿವಮೊಗ್ಗ ಮತಗಟ್ಟೆ ಕೇಂದ್ರ ಮೆರವಣಿಗೆ ಆರಂಭಗೊಂಡು ನಗರದ ಬಿ.ಎಚ್ ರಸ್ತೆ ಹುತ್ತಾ ಕಾಲೋನಿ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ ಹಾಗು ರಂಗಪ್ಪವೃತ್ತ ಮೂಲಕ ಶಾಸಕ ಬಿ.ಕೆ ಸಂಗಮೇಶ್ವರ್ ನಿವಾಸದವರೆಗೂ ವಿಜಯೋತ್ಸವ ನಡೆಯಿತು.
    ರಸ್ತೆಯುದ್ದಕ್ಕೂ ಪಟಾಕಿ ಸಿಡಿಸಿ, ಕಾಂಗ್ರೆಸ್ ಪಕ್ಷಕ್ಕೆ ಹಾಗು ಸಂಗಮೇಶ್ವರ್‌ಗೆ ಜೈಕಾರ ಹಾಕುವ ಮೂಲಕ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಈ ಬಾರಿ ಶಾಸಕರು ಸಚಿವರಾಗಲಿದ್ದಾರೆ. ಈ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲಿದ್ದಾರೆ. ಕ್ಷೇತ್ರದ ಜನರ ಬೆಂಬಲ ಇದೆ ರೀತಿ ಮುಂದುವರೆಯಬೇಕು. ಕ್ಷೇತ್ರದ ಮತದಾರರಿಗೆ ಶಾಸಕರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಶಾಸಕರ ಸಹೋದರ ಬಿ.ಕೆ ಶಿವಕುಮಾರ್, ಪುತ್ರ ಬಿ.ಎಸ್ ಗಣೇಶ್, ನಗರಸಭಾ ಸದಸ್ಯ ಬಿ.ಎಂ ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ವಿಜಯೋತ್ಸವ ಹಿನ್ನಲೆಯಲ್ಲಿ ಕೆಲ ಸಮಯ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.


ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ಶಾಸಕ ಬಿ.ಕೆ ಸಂಗಮೇಶ್ವರ್ ೪ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಕುಟುಂಬ ವರ್ಗದವರು ಭದ್ರಾವತಿ ನಗರದಲ್ಲಿ ಶನಿವಾರ ವಿಜಯೋತ್ಸವ ನಡೆಸಿದರು. ಈ ಸಂದರ್ಭದಲ್ಲಿ ಪಕ್ಷದ ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ ಮಾತನಾಡಿದರು.


ಸಚಿವರಾಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಭರವಸೆ : ಗೆಲುವಿಗೆ ಕಾರಣ

    ಬಿ.ಕೆ ಸಂಗಮೇಶ್ವರ್
ಭದ್ರಾವತಿ, ಮೇ. ೧೩ : ಕ್ಷೇತ್ರದಲ್ಲಿ ೩ ಬಾರಿ ಶಾಸಕರಾಗಿ ಅಯ್ಕೆಯಾಗಿದ್ದ ಬಿ.ಕೆ ಸಂಗಮೇಶ್ವರ್ ವಿರುದ್ಧ ಈ ಬಾರಿ ಹಲವು ಆರೋಪಗಳು ಕೇಳಿ ಬರುತ್ತಿದ್ದವು. ಅಲ್ಲದೆ ಅವರೊಂದಿಗೆ ಗುರುತಿಸಿಕೊಂಡಿದ್ದ  ಬಹುತೇಕ ಮಂದಿ ದೂರ ಸರಿದಿದ್ದರೂ ಆದರೂ ಸಹ ಈ ಬಾರಿ ಗೆಲ್ಲುವ ಮೂಲಕ ೪ನೇ ಬಾರಿಗೆ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದಾರೆ.
    ಕಳೆದ ಕೆಲವು ವರ್ಷಗಳಿಂದ ಆರೋಗ್ಯದ ಸುಧಾರಣೆಗೆ ಹೆಚ್ಚಿನ ಗಮನ ಹರಿಸಿರುವ ಸಂಗಮೇಶ್ವರ್ ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿರಲಿಲ್ಲ. ಬಹುತೇಕ ಸಭೆ-ಸಮಾರಂಭಗಳಲ್ಲಿ ಕುಟುಂಬ ವರ್ಗದವರೇ ಪಾಲ್ಗೊಳ್ಳುತ್ತಿದ್ದರು. ಆರೋಗ್ಯ ಸುಧಾರಣೆ ನಡುವೆಯೂ ಎಂದಿಗೂ ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಸಂಗಮೇಶ್ವರ್ ಕಡೆಗಣಿಸಿರಲಿಲ್ಲ. ಆದರೂ ಸಹ ಇವರ ವಿರುದ್ಧ ಕುಟುಂಬ ರಾಜಕಾರಣ ಆರೋಪ ಮಾಡಲಾಗುತ್ತಿತ್ತು.
    ಚುನಾವಣೆ ಸಮೀಪಿಸುತ್ತಿದ್ದಂತೆ ಇವರಿಂದ ಬಹಳಷ್ಟು ಮಂದಿ ದೂರ ಸರಿದಿದ್ದರು. ಆದರೂ ಸಹ ಯಾವುದಕ್ಕೂ ತಲೆಗೆಡಿಸಿಕೊಳ್ಳದೆ ಕೇವಲ ಸಂಜೆಯಿಂದ ರಾತ್ರಿವರೆಗೂ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ೫ ವರ್ಷಗಳ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳ ಮೇಲೆ ವಿಶ್ವಾಸ ಹೊಂದಿದ್ದರು. ಅಲ್ಲದೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ನನಗೆ ಸಚಿವ ಸ್ಥಾನ ಸಿಗಲಿದೆ. ಇದರಿಂದ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದ್ದರು.  ಅವರ ಭರವಸೆಯಿಂದಾಗಿ ಇದೀಗ ಗೆಲುವು ಲಭಿಸಿದೆ ಎನ್ನಲಾಗುತ್ತಿದೆ.
    ನೂತನ ಸರ್ಕಾರದಲ್ಲಿ ಅವರಿಗೆ ಸಚಿವ ಸ್ಥಾನ ಲಭಿಸುವ ಮೂಲಕ ಕ್ಷೇತ್ರದಲ್ಲಿನ ಸಮಸ್ಯೆಗಳು ಬಗೆಹರಿಯಬೇಕು. ಬಹುಮುಖ್ಯವಾಗಿ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡೂ ಕಾರ್ಖಾನೆಗಳ ಅಭಿವೃದ್ಧಿ, ನಿರುದ್ಯೋಗ ನಿರ್ಮೂಲನೆ, ಉನ್ನತ ಶಿಕ್ಷಣ, ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.
ಇದೀಗ ೪ನೇ ಬಾರಿಗೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ದಾಖಲೆ ನಿರ್ಮಿಸಿರುವ ಸಂಗಮೇಶ್ವರ್ ನೂತನ ಸರ್ಕಾರದಲ್ಲಿ ಸಚಿವರಾಗುವ ಮತ್ತೊಂದು ದಾಖಲೆ ನಿರ್ಮಿಸುವಂತಾಗಲಿ ಎಂಬುದು ಕ್ಷೇತ್ರದ ಜನರ ಆಶಯವಾಗಿದೆ.

೪ನೇ ಬಾರಿಗೆ ಗೆಲವು ಸಾಧಿಸಿ ಇತಿಹಾಸ ನಿರ್ಮಿಸಿದ ಶಾಸಕ ಬಿ.ಕೆ ಸಂಗಮೇಶ್ವರ್

ಪ್ರಬಲ ಸ್ಪರ್ಧೆ ನೀಡಿದ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ

    ಭದ್ರಾವತಿ, ಮೇ. ೧೩: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಬಿ.ಕೆ ಸಂಗಮೇಶ್ವರ್ ೪ನೇ ಬಾರಿಗೆ ಮರು ಆಯ್ಕೆಯಾಗುವ ಮೂಲಕ ಕ್ಷೇತ್ರದ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ್ದಾರೆ.
    ಈ ಬಾರಿ ಚುನಾವಣೆಯಲ್ಲಿ ಸಂಗಮೇಶ್ವರ್‌ಗೆ ಜ್ಯಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಪ್ರಬಲ ಪೈಪೋಟಿ ನೀಡುವ ಗಮನ ಸೆಳೆದರು. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಶಾರದ ಅಪ್ಪಾಜಿ ೨,೫೮೫ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ೧೯ ಸುತ್ತಿನ ಮತಗಳ ಎಣಿಕೆಯವರೆಗೂ ಇಬ್ಬರ ನಡುವೆ ತೀವ್ರ ಪೈಪೋಟಿ ಕಂಡು ಬಂದಿತು. ಕಡಿಮೆ ಅಂತರದಲ್ಲಿಯೇ ಮುನ್ನಡೆ ಕಾಯ್ದುಕೊಂಡಿದ್ದ ಸಂಗಮೇಶ್ವರ್ ಅಂತಿಮವಾಗಿ ಗೆಲುವು ಸಾಧಿಸಿದ್ದಾರೆ.
    ಅಂತಿಮ ಸುತ್ತಿನಲ್ಲಿ ಸಂಗಮೇಶ್ವರ್ ೬೫,೮೮೩ ಹಾಗು ಶಾರದ ಅಪ್ಪಾಜಿ ೬೩,೨೯೮ ಮತಗಳನ್ನು ಪಡೆದುಕೊಂಡಿದ್ದಾರೆ. ಉಳಿದಂತೆ ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್ ೨೧,೧೩೭, ಎಎಪಿ ಅಭ್ಯರ್ಥಿ ಆನಂದ್ ಮಾರುತಿ ಮೆಡಿಕಲ್ ೧,೩೭೮ ಮತಗಳನ್ನು ಪಡೆದುಕೊಂಡಿದ್ದಾರೆ.
    ಪಟಾಕಿ ಹೊಡೆದು ಸಂಭ್ರಮಿಸಿದ ಜೆಡಿಎಸ್ ಕಾರ್ಯಕರ್ತರು :
    ಇನ್ನೂ ಫಲಿತಾಂಶ ಬಾಕಿ ಇರುವಾಗಲೇ ಜೆಡಿಎಸ್ ಕಾರ್ಯಕರ್ತರು ತಪ್ಪು ಮಾಹಿತಿ ಹಿನ್ನಲೆಯಲ್ಲಿ ಶಾರದ ಅಪ್ಪಾಜಿ ಗೆಲುವು ಸಾಧಿಸಿದ್ದಾರೆಂದು ಪಟಾಕಿ ಸಿಡಿಸಿ ಸಂಭ್ರಮಿಸಿರುವ ಘಟನೆ ನಡೆದಿದೆ. ನಂತರ ನಿಖರ ಮಾಹಿತಿ ತಿಳಿದು ಕಾರ್ಯಕರ್ತರು ಬೇಸರ ಗೊಂಡಿದ್ದಾರೆ.
    ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ :
    ಬಿ.ಕೆ ಸಂಗಮೇಶ್ವರ್ ಗೆಲುವು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್  ೩ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ೨೦ ಸಾವಿರ ಮತಗಳ ಗಡಿದಾಟದ ಬಿಜಿಪಿ ಈ ಬಾರಿ ೨೦,೮೭೨ ಮತಗಳನ್ನು ಪಡೆದುಕೊಂಡಿದೆ. ಮಂಗೋಟೆ ರುದ್ರೇಶ್ ಪಡೆದಿರುವ ಮತಗಳು ಸಂಗಮೇಶ್ವರ್ ಗೆಲುವಿನ ಅಂತರ ಕಡಿಮೆಗೊಳಿಸಿವೆ.