ಶಾರದ ಅಪ್ಪಾಜಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ
ಶಾರದ ಅಪ್ಪಾಜಿ
ಭದ್ರಾವತಿ, ಮೇ. ೧೭ : ಕ್ಷೇತ್ರದಲ್ಲಿ ಇತ್ತೀಚೆಗೆ ಓ.ಸಿ, ಮಟ್ಕಾ, ಇಸ್ಪೀಟ್ ಸೇರಿದಂತೆ ಜೂಜಾಟ, ಅಕ್ರಮ ದಂಧೆಗಳು ಮಿತಿಮೀರಿವೆ. ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.
ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಅವನತಿಯಿಂದಾಗಿ ಬಡಕುಟುಂಬಗಳು ಬೀದಿ ಪಾಲಾಗಿವೆ. ನಿರುದ್ಯೋಗಿ ಯುವಕರಿಗೆ ಅಕ್ರಮ ದಂಧೆಗಳು ಕಸುಬಾಗಿ ಮಾರ್ಪಟ್ಟಿವೆ. ವಿಶೇಷವಾಗಿ ಅನೇಕ ಬಡಾವಣೆಗಳಲ್ಲಿ, ಮೊಹಲ್ಲಾಗಳಲ್ಲಿ ಗಾಂಜಾ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ನಾಗರೀಕರ ನೆಮ್ಮದಿ ಬದುಕಿಗೆ ಭಂಗ ಉಂಟು ಮಾಡುವ ಜೊತೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಗಾಂಜಾದಂತಹ ಮಾದಕ ವಸ್ತುಗಳು ರಾಜಾರೋಷವಾಗಿ ಯುವಕರ, ವಿದ್ಯಾರ್ಥಿಗಳ ಕೈಗೆ ಸುಲಭವಾಗಿ ದೊರೆಯುತ್ತಿದ್ದು, ಕಾನೂನಿನ ಭಯ ಇಲ್ಲದಂತಾಗಿದೆ. ದುಶ್ಚಟಗಳಿಗೆ ಯುವ ಜನಾಂಗ ಬಲಿಯಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಈ ಹಿನ್ನಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.