ಮಂಗಳವಾರ, ಮೇ 30, 2023

ಮೇ.೩೧ರಂದು ಬೀಳ್ಕೊಡುಗೆ ಸಮಾರಂಭ

    ಭದ್ರಾವತಿ, ಮೇ. ೩೦ : ಅನೌಪಚಾರಿಕ ಪಡಿತರ ತಾಲೂಕು ಕಛೇರಿ, ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ತಾಲೂಕು ಶಾಖೆ ವತಿಯಿಂದ ಮೇ.೩೧ರಂದು ಮಧ್ಯಾಹ್ನ ೩ ಗಂಟೆಗೆ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.
    ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದು, ತಾಲೂಕು ಶಾಖೆ ನಗರ ಅಧ್ಯಕ್ಷ ಎಸ್.ಆರ್ ನಾಗರಾಜ್ ಮತ್ತು ಅನೌಪಚಾರಿಕ ಪಡಿತರ ಕಛೇರಿ ಸಹಾಯಕ ನಿರ್ದೇಶಕ ವಿ.ಎಸ್ ಅಂಕಯ್ಯ ಉಪಸ್ಥಿತರಿರುವರು.
    ಆಹಾರ ನಿರೀಕ್ಷಕಿ ಡಿ. ಗಾಯತ್ರಿ ದೇವಿ, ಕೆಎಫ್‌ಸಿಎಸ್‌ಸಿ ಮಳಿಗೆ ವ್ಯವಸ್ಥಾಪಕ ಜೆ.ಎಸ್ ಈಶ್ವರಪ್ಪ ಮತ್ತು ಆಹಾರ ಇಲಾಖೆ ಬಿ.ಆರ್ ಓಂಕಾರಯ್ಯ ಉಪಸ್ಥಿತರಿರುವರು. 

ಸೋಮವಾರ, ಮೇ 29, 2023

ಹೆಚ್ಚುತ್ತಿರುವ ರಸ್ತೆ ನಿಯಮ ಉಲ್ಲಂಘನೆ ಪ್ರಕರಣಗಳು : ಸಂಚಾರಿ ಪೊಲೀಸರ ಆತಂಕ

    ಭದ್ರಾವತಿ, ಮೇ. ೨೯ : ಶಿವಮೊಗ್ಗ ಪೊಲೀಸ್ ವತಿಯಿಂದ ರಸ್ತೆ ನಿಯಮ ಕುರಿತು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಸಹ ಇತ್ತೀಚಿನ ದಿನಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ.
    ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಇಲಾಖೆ ನಿರಂತರವಾಗಿ ತೊಡಗಿಸಿಕೊಂಡಿದೆ. ಅದರಲ್ಲೂ ಯುವ ಸಮೂಹಕ್ಕೆ ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಇತ್ತೀಚಿನ ದಿನಗಳಲ್ಲಿ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಸಂಚಾರಿ ಪೊಲೀಸರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
    ಪ್ರಮುಖವಾಗಿ ಹೆಲ್ಮೆಟ್ ಧರಿಸದಿರುವ ಹಾಗು ಚಾಲನಾ ಪರವಾನಗಿ ಇಲ್ಲದ ಪ್ರಕರಣಗಳು ಹೆಚ್ಚಾಗುತ್ತಿವೆ. ಸಂಚಾರಿ ಪೊಲೀಸ್ ಠಾಣಾಧಿಕಾರಿ ಭಾರತಿ ಅನಿಲ್ ಪತ್ರಿಕೆಗೆ ಮಾಹಿತಿ ನೀಡಿ, ಇಲಾಖೆವತಿಯಿಂದ ರಸ್ತೆ ಸುರಕ್ಷತೆ ಹಾಗು ನಿಯಮ ಪಾಲನೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಸಹ ಹೆಲ್ಮೆಟ್ ಧರಿಸದಿರುವ ಪ್ರಕರಣಗಳು ಹೆಚ್ಚುತ್ತಿವೆ. ಪ್ರತಿ ದಿನ ಸುಮಾರು ೨೦ ಪ್ರಕರಣಗಳು ಹಾಗು ಚಾಲನಾ ಪರವಾನಗಿ ಇಲ್ಲದ ಸುಮಾರು ೨-೩ ಪಕರಣಗಳು ದಾಖಲಾಗುತ್ತಿವೆ. ಅಲ್ಲದೆ ಸರ್ಕಾರ ರಸ್ತೆ ಸುರಕ್ಷತೆ ಹಾಗು ನಿಯಮಗಳಿಗೆ ಸಂಬಂಧಿಸಿದಂತೆ ಹೊಸ ಹೊಸ ಕಾನೂನುಗಳನ್ನು ಜಾರಿಗೊಳಿಸುತ್ತಿದೆ. ಈ ಕಾನೂನುಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಇಲಾಖೆ ಮುಂದಾಗುತ್ತಿದೆ ಎಂದರು.
    ನಗರದಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಚಾಲನಾ ಪರವಾನಗಿ ಇಲ್ಲದೆ ವಾಹನಗಳನ್ನು ಚಲಾಯಿಸುತ್ತಿದ್ದು, ಈ ಹಿನ್ನಲೆಯಲ್ಲಿ ಸುಮಾರು ೧೦೦೦ ಮಂದಿಗೆ ಉಚಿತವಾಗಿ ಚಾಲನಾ ಪರವಾನಗಿ ಮಾಡಿಸಿ ಕೊಡುವ ಬೃಹತ್ ಶಿಬಿರ ಆಯೋಜಿಸುವ ಅಗತ್ಯವಿದೆ.  ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಆಸಕ್ತರು ಮುಂದೆ ಬಂದಲ್ಲಿ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.  

ಉತ್ತಮ ಪ್ರಜೆಯಾಗಿ ಬಾಳಲು ಜ್ಞಾನ ದಾರಿ ದೀಪ : ವೇ.ಬ್ರ. ಜಿ. ರಾಘವೇಂದ್ರ ಉಪಾಧ್ಯಾಯ

ಭದ್ರಾವತಿ ಅಪ್ಪರ್ ಹುತ್ತಾ ಅನನ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಸೋಮವಾರ ಅನನ್ಯ ಹ್ಯಾಪಿ ಹಾರ್ಟ್ಸ್ ಯುಕೆಜಿ ಹಾಗು ಎಲ್‌ಕೆಜಿ ವಿದ್ಯಾರ್ಥಿಗಳಿಗೆ ಶಾಸ್ತ್ರೋಕ್ತವಾಗಿ ಅಕ್ಷರಾಭ್ಯಾಸದ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲಾಯಿತು.
    ಭದ್ರಾವತಿ, ಮೇ. ೨೯:  ಜಗತ್ತಿನಲ್ಲಿ ಜ್ಞಾನ ಹೊಂದಿರುವ ಏಕೈಕ ಜೀವಿ ಮನುಷ್ಯ. ಆತ ಸರಿಯಾದ ಸಮಯದಲ್ಲಿ ಸೂಕ್ತ ಸಂಸ್ಕಾರಗಳನ್ನು ಪಡೆದು ಜ್ಞಾನವಂತ, ಬುದ್ದಿವಂತ, ವಿದ್ಯಾವಂತನಾಗಿ ಉತ್ತಮ ಪ್ರಜೆಯಾಗಿ ಬಾಳಲು ಜ್ಞಾನ ದಾರಿ ತೋರುತ್ತದೆ ಎಂದು ಹುತ್ತಾಕಾಲೋನಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಆರ್ಚಕ ವೇ.ಬ್ರ ಜಿ. ರಾಘವೇಂದ್ರ ಉಪಾಧ್ಯಾಯ ಹೇಳಿದರು.
    ಅವರು ಸೋಮವಾರ ನಗರದ ಅಪ್ಪರ್ ಹುತ್ತಾ ಅನನ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಅನನ್ಯ ಹ್ಯಾಪಿ ಹಾರ್ಟ್ಸ್ ಯುಕೆಜಿ ಹಾಗು ಎಲ್‌ಕೆಜಿ ವಿದ್ಯಾರ್ಥಿಗಳಿಗೆ ಶಾಸ್ತ್ರೋಕ್ತವಾಗಿ ಅಕ್ಷರಾಭ್ಯಾಸದ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿ ಮಾತನಾಡಿದರು.
    ಭಾರತೀಯ ಸಂಸ್ಕೃತಿಯಲ್ಲಿ ಮಗು ಜನನದಿಂದ ಅಂತಿಮ ದಿನದವರೆಗೆ ಹಲವಾರು ರೀತಿಯ ಷೋಡಶ ಸಂಸ್ಕಾರಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಷೋಡಶ ಸಂಸ್ಕಾರ ೧೬ ವಿಧಿವಿಧಾನಗಳನ್ನು ಒಳಗೊಂಡಿದೆ. ಅವುಗಳಲ್ಲಿ ಅಕ್ಷರಾಭ್ಯಾಸ ಬಹುಮುಖ್ಯ ಹಾಗು ಮಹತ್ವದ್ದಾಗಿದೆ. ಕಾರಣ ಪ್ರಾರಂಭದಲ್ಲಿ ಇದನ್ನು ಕೈಗೊಂಡಾಗ ಮಕ್ಕಳು ತಮ್ಮ ಶೈಕ್ಷಣಿಕ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸುವ ಮೂಲಕ ತಮ್ಮ ಓದಿನ ಬಗ್ಗೆ ಆಸಕ್ತಿ ತಾಳುತ್ತಾರೆ ಎಂದರು.
    ಮಕ್ಕಳು ಶಿಕ್ಷಣ ಪಡೆಯುವ ಶಾಲೆಯೇ ಅವರ ಜೀವನದ ಸರಸ್ವತಿ ದೇಗುಲವಾಗಿದೆ. ಈ ದೇಗುಲದಲ್ಲಿ ಇಂದು ಮಕ್ಕಳಿಗೆ ಅಕ್ಷರಾಭ್ಯಾಸ ಶಾಸ್ತ್ರೋಕ್ತವಾಗಿ ಕೈಗೊಂಡು ಉತ್ತಮ ಸಂಸ್ಕಾರ ನೀಡುವ ಮೂಲಕ ಶಾಲಾ ದಿನವನ್ನು ಪ್ರಾರಂಭ ಮಾಡಲಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
    ಸಮಾಜದಲ್ಲಿ ಸ್ಥಿತಿವಂತರು, ಶ್ರೀಮಂತರು, ಆರ್ಥಿಕವಾಗಿ ಸಬಲರಾಗಿರುವವರು ತಮ್ಮ ತಮ್ಮ ಮಕ್ಕಳಿಗೆ ಈ ರೀತಿಯ ಸಂಸ್ಕಾರವನ್ನು ಪ್ರಸಿಧ್ದ ಧಾರ್ಮಿಕ ಸ್ಥಳಗಳು, ದೇವಾಲಯಗಳಲ್ಲಿ ವೈಯುಕ್ತಿಕವಾಗಿ ಮಾಡಿಸುತ್ತಾರೆ. ಆದರೆ ಅನನ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಎಲ್ಲಾ ಮಕ್ಕಳಿಗೂ ಈ ಸಂಸ್ಕಾರ ಸಾಮೂಹಿಕವಾಗಿ ಪ್ರತಿಯೊಬ್ಬರಿಗೂ ಮಾಡಿಸಿದ್ದು ಅಭಿನಂದನಾರ್ಹ ಎಂದರು.
    ಶಾಲಾ ಆಢಳಿತಾಧಿಕಾರಿ ಎನ್. ವೇಣುಗೋಪಾಲ್, ಮುಖ್ಯೋಪಾಧ್ಯಾಯರಾದ ಕಲ್ಲೇಶ್ ಕುಮಾರ್, ಸುನಿತಾ ನಟರಾಜ್, ತನುಜಾ, ಅನಿಲ್ ಹಾಗು ಶಾಲಾ ಅಧ್ಯಾಪಕ ಮತ್ತು ಇತರ ಸಿಬ್ಬಂದಿಗಳು, ಮಕ್ಕಳ ಪೋಷಕರು ,ಶಾಲಾ ಆಡಳಿತ ಮಂಡಳಿ ಸದಸ್ಯರುಗಳು ಉಪಸ್ಥಿತರಿದ್ದರು.

ಭಾನುವಾರ, ಮೇ 28, 2023

ಪರಿಸರ ಉಳಿವಿನ ಜಾಗೃತಿಗಾಗಿ ಯುವಕನಿಂದ ೫೦ ಸಾವಿರ ಕಿ.ಮೀ ಸೈಕಲ್ ಜಾಥಾ ಅಭಿಯಾನ

ಭದ್ರಾವತಿ ಶ್ರೀ ವಾಸವಾಂಬ ದೇವಾಲಯದಲ್ಲಿ ಗುರ್ರಂ ಚೈತನ್ಯರಿಗೆ ಅಭಿನಂದನೆ

ಪರಿಸರ ಉಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಆಂಧ್ರ ಪ್ರದೇಶದ ನೆಲ್ಲೂರಿನ ಯುವಕ ಗುರ್ರಂ ಚೈತನ್ಯರವರು ಸುಮಾರು ೫೦ ಸಾವಿರ ಕಿ.ಮೀ ಸೈಕಲ್ ಜಾಥಾ ಮೂಲಕ ಅಭಿಯಾನ ಕೈಗೊಂಡಿದ್ದು, ಭಾನುವಾರ ಭದ್ರಾವತಿಗೆ ಆಗಮಿಸಿದ ಇವರನ್ನು ಅಭಿನಂದಿಸಲಾಯಿತು.
    ಭದ್ರಾವತಿ, ಮೇ. ೨೮ : ಪರಿಸರ ಉಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಆಂಧ್ರ ಪ್ರದೇಶದ ನೆಲ್ಲೂರಿನ ಯುವಕ ಗುರ್ರಂ ಚೈತನ್ಯರವರು ಸುಮಾರು ೫೦ ಸಾವಿರ ಕಿ.ಮೀ ಸೈಕಲ್ ಜಾಥಾ ಮೂಲಕ ಅಭಿಯಾನ ಕೈಗೊಂಡಿದ್ದಾರೆ.
    ನೆಲ್ಲೂರಿನಿಂದ ಆರಂಭಗೊಂಡಿರುವ ಸೈಕಲ್ ಜಾಥಾ ಅಭಿಯಾನ ೧೫೦ ದಿನಗಳನ್ನು ಪೂರೈಸಿದ್ದು, ಇದುವರೆಗೂ ಸುಮಾರು ೧೦ ಸಾವಿರ ಕಿ.ಮೀ ಕ್ರಮಿಸಿದ್ದಾರೆ. ಭಾನುವಾರ ನಗರಕ್ಕೆ ಆಗಮಿಸಿದ ಚೈತನ್ಯರನ್ನು ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಶ್ರೀ ವಾಸವಾಂಬ ದೇವಾಲಯದಲ್ಲಿ ಸ್ವಾಗತಿಸಿ ಅಭಿನಂದಿಸಲಾಯಿತು.
    ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬದರಿನಾರಾಯಣ ಶ್ರೇಷ್ಠಿ, ಶ್ರೀ ಕನ್ಯಕಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸಿ.ಎನ್ ಗಿರೀಶ್, ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಸತ್ಯಲಕ್ಷ್ಮಿ, ಉಪಾಧ್ಯಕ್ಷೆ ಲತಾ ಬದರೀಶ್, ವಾಸವಿ ಯುವಜನ ಸಂಘದ ಸುಬ್ಬರಾಜ್, ವಾಸವಿ ವನಿತಾ ಸಂಘದ ಅಧ್ಯಕ್ಷೆ ಶ್ರೀಲಕ್ಷ್ಮಿ, ಕಾ.ರಾ ನಾಗರಾಜ್, ವಿಶಾಲಾಕ್ಷಿ, ನಾಗೇಶ್, ಗೋವಿಂದ, ಎಂ.ಎಲ್ ಶ್ರೀಧರಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸರ್ಕಾರಿ ಐಟಿಐ ವಿದ್ಯಾರ್ಥಿಗಳಿಗೆ ಕಾನೂನು ಅರಿವು, ಜಾಗೃತಿ ಕಾರ್ಯಕ್ರಮ

ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ವತಿಯಿಂದ ಬಿ.ಎಚ್ ರಸ್ತೆ, ಕಡದಕಟ್ಟೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಹಾಗು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  
    ಭದ್ರಾವತಿ, ಮೇ. ೨೮ : ನಗರದ ನ್ಯೂಟೌನ್ ಪೊಲೀಸ್ ಠಾಣೆ ವತಿಯಿಂದ ಬಿ.ಎಚ್ ರಸ್ತೆ, ಕಡದಕಟ್ಟೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಹಾಗು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  
    ಪ್ರೊಬೆಷನರಿ ಐಪಿಎಸ್ ಅಧಿಕಾರಿ ಬಿಂದುಮಣಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾದಕ ದ್ರವ್ಯ, ಸಂಚಾರಿ ನಿಯಮ ಪಾಲನೆ ಮತ್ತು ರಸ್ತೆ ಸುರಕ್ಷತೆ, ಇಆರ್‌ಎಸ್‌ಎಸ್-೧೧೨ ಸಹಾಯವಾಣಿ ಮತ್ತು ಪೋಕ್ಸೋ ಕಾಯ್ದೆ ಕುರಿತು ಮಾಹಿತಿ ನೀಡಲಾಯಿತು.
    ನಗರ ಪೊಲೀಸ್ ವೃತ್ತ ನಿರೀಕ್ಷಕ ಬಿ.ಪಿ ಶಾಂತಿನಾಥ್, ಸಂಚಾರಿ ಪೊಲೀಸ್ ಠಾಣಾಧಿಕಾರಿ ಭಾರತಿ ಅನಿಲ್, ಕೈಗಾರಿಕಾ ತರಬೇತಿ ಸಂಸ್ಥೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ವಿಜೃಂಭಣೆಯಿಂದ ಜರುಗಿದ ಶ್ರೀ ಕರುಮಾರಿಯಮ್ಮ ೪೩ನೇ ವರ್ಷದ ಕರಗ ಮಹೋತ್ಸವ

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕರುಮಾರಿಯಮ್ಮ ದೇವಸ್ಥಾನದ ೪೩ನೇ ವರ್ಷದ ಕರಗ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
    ಭದ್ರಾವತಿ, ಮೇ. ೨೮: ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕರುಮಾರಿಯಮ್ಮ ದೇವಸ್ಥಾನದ ೪೩ನೇ ವರ್ಷದ ಕರಗ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
    ಬೆಳಿಗ್ಗೆ ಅಮ್ಮನವರಿಗೆ ಎಳನೀರು ಅಭಿಷೇಕ, ನಂತರ ಪಂಚಾಮೃತ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಬುಳ್ಳಾಪುರ ಚಾನಲ್ ಬಳಿ ಶಕ್ತಿ ಕರಗ ಸ್ಥಾಪನೆ ಮಾಡಿ ನಾದಸ್ವರ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಮಧ್ಯಾಹ್ನ ೩ ಗಂಟೆಗೆ ಅಮ್ಮನವರ ದೇವಸ್ಥಾನಕ್ಕೆ ತರಲಾಯಿತು. ನಂತರ ಮಹಾಮಂಗಳಾರತಿಯೊಂದಿಗೆ ತೀರ್ಥಪ್ರಸಾದ ವಿನಿಯೊಗ ಹಾಗು ಶ್ರಿ ದೇವಿಗೆ ಅಂಬಲಿ ಮತ್ತು ಅನ್ನದಾನ ಸಂತರ್ಪಣೆ ನಡೆಯಿತು.
    ಪ್ರತಿ ವರ್ಷದಂತೆ ಈ ಬಾರಿ ಸಹ ವಿಜಯ್‌ಕುಮಾರ್ ಶಕ್ತಿ ಕರಗ ಹೊತ್ತು ತರುವ ಮೂಲಕ ಸೇವೆ ಸಮರ್ಪಿಸಿದರು. ನ್ಯೂಟೌನ್, ನ್ಯೂಕಾಲೋನಿ, ಕೂಲಿಬ್ಲಾಕ್ ಶೆಡ್ ಆಂಜನೇಯ ಅಗ್ರಹಾರ, ವಿದ್ಯಾಮಂದಿರ, ಜನ್ನಾಪುರ ಸೇರಿದಂತೆ ನಗರದ ವಿವಿಧೆಡೆಗಳಿಂದ ಭಕ್ತರು ಆಗಮಿಸಿದ್ದರು.
    ದೇವಸ್ಥಾನ ಸಮಿತಿ ಅಧ್ಯಕ್ಷ ಕುಪ್ಪಸ್ವಾಮಿ ನೇತೃತ್ವವಹಿಸಿದ್ದರು. ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸೇವಾಕರ್ತರು, ದೇವಸ್ಥಾನದ ಪ್ರಧಾನ ಅರ್ಚಕ ಕಾಶಿನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶನಿವಾರ, ಮೇ 27, 2023

ರಂಗ ಕಲಾವಿದರು ಭದ್ರಾವತಿ ಅಧ್ಯಕ್ಷರಾಗಿ ಬಿ. ಕಮಲಾಕರ

ಬಿ. ಕಮಲಾಕರ
    ಭದ್ರಾವತಿ, ಮೇ. ೨೭ : ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಂಗ ಕಲಾವಿದರು ಭದ್ರಾವತಿ ಸಂಘದ ಅಧ್ಯಕ್ಷರಾಗಿ ಎಂಪಿಎಂ ನಿವೃತ್ತ ಕಾರ್ಮಿಕ, ಹಿರಿಯ ರಂಗಕಲಾವಿದ ಬಿ. ಕಮಲಾಕರ ಆಯ್ಕೆಯಾಗಿದ್ದಾರೆ.
    ಶುಕ್ರವಾರ ನಡೆದ ಸಭೆಯಲ್ಲಿ ಸಂಘದ ನೂತನ ಅಧ್ಯಕ್ಷರು ಹಾಗು ಪದಾಧಿಕಾರಿಗಳು ಮತ್ತು ಸದಸ್ಯರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಬಿ. ಕಮಲಾಕರ, ಉಪಾಧ್ಯಕ್ಷರಾಗಿ ಜಿ. ದಿವಾಕರ, ಪ್ರಧಾನ ಕಾರ್ಯದರ್ಶಿಯಾಗಿ ತಮಟೆ ಜಗದೀಶ್, ಸಹ ಕಾರ್ಯದರ್ಶಿಯಾಗಿ ಚಿದಾನಂದ, ಖಜಾಂಚಿಯಾಗಿ ಕೆ.ಎಸ್ ರವಿಕುಮಾರ್ ಮತ್ತು ಸದಸ್ಯರಾಗಿ ಡಿ.ಎನ್ ಪುಟ್ಟಸ್ವಾಮಿ, ಎಂ. ಸುಚಿತ್ರ., ಶಿಲ್ಪಕಲಾ, ಶಿವಾನಂದಮೂರ್ತಿ, ವೈ.ಕೆ ಹನುಮಂತಯ್ಯ, ಶಿವರಾಜ್, ಶ್ರೀಧರೇಶ್ ಮತ್ತು ಜಿ. ರವಿಕುಮಾರ್ ಆಯ್ಕೆಯಾಗಿದ್ದಾರೆ.