Sunday, June 4, 2023

೪ ಬಾರಿ ಶಾಸಕರಾಗಿರುವ ಸಂಗಮೇಶ್ವರ್‌ಗೂ ಭವಿಷ್ಯದಲ್ಲಿ ಸಚಿವರಾಗುವ ಯೋಗ

ಸನ್ಮಾನ ಸ್ವೀಕರಿಸಿ ನೂತನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ

ಭದ್ರವತಿ ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ಸಂಬಂಧಿಕರಾದ ಲಕ್ಷ್ಮೀ ಹೆಬ್ಬಾಳ್ಕರ್‌ರವರು ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ್ದು, ಈ ಹಿನ್ನಲೆಯಲ್ಲಿ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸಹೋದರ ಬಿ.ಕೆ ಶಿವಕುಮಾರ್‌ರವರ ಗಾಂಧಿನಗರದ ನಿವಾಸದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
    ಭದ್ರಾವತಿ, ಜೂ. ೪ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆಯುವ ಆದರ್ಶ ವ್ಯಕ್ತಿಯಾಗಿದ್ದು, ಮುಂದಿನ ಅವಧಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ ಎಂದು ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ನೂತನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ಸಂಬಂಧಿಕರಾದ ಲಕ್ಷ್ಮೀ ಹೆಬ್ಬಾಳ್ಕರ್‌ರವರು ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ನಂತರ  ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ್ದು, ಈ ಹಿನ್ನಲೆಯಲ್ಲಿ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸಹೋದರ ಬಿ.ಕೆ ಶಿವಕುಮಾರ್‌ರವರ ಗಾಂಧಿನಗರದ ನಿವಾಸದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.      ಒಬ್ಬ ವ್ಯಕ್ತಿ ಒಂದು ಬಾರಿ ಶಾಸಕರಾಗುವುದೇ ಹೆಚ್ಚು ಇಲ್ಲಿನ ಕ್ಷೇತ್ರದ ಜನರು ಸಂಗಮೇಶ್ವರ್ ಅವರನ್ನು ೪ ಬಾರಿ ಆಯ್ಕೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಈ ಬಾರಿ ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ೧೩೫ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗುವ ಮೂಲಕ ಅಭೂತಪೂರ್ವ ಇತಿಹಾಸ ನಿರ್ಮಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆಯುವ ಆದರ್ಶ ವ್ಯಕ್ತಿಯಾಗಿದ್ದು, ಸಂಗಮೇಶ್ವರ್ ಅವರಿಗೂ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಸಂಗಮೇಶ್ವರ್ ಅವರಿಗೂ ಸಚಿವರಾಗುವ ಯೋಗವಿದ್ದು, ಸ್ವಲ್ಪ ವಿಳಂಬವಾಗಬಹುದು. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ ೭೫ ವರ್ಷಗಳ ಕನಸು ನನಸಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಕ್ಷೇತ್ರದ ಮತದಾರರು ಚಿಂತೆ ಮಾಡುವ ಅಗತ್ಯವಿಲ್ಲ. ಈ ಕ್ಷೇತ್ರದ ಶಾಸಕರ ಕುಟುಂಬ ಸಂಬಂಧಿಯಾಗಿರುವ ನಾನು ನಿಮ್ಮ ಪರವಾಗಿದ್ದೇನೆ. ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿ ವಿಚಾರದಲ್ಲಿ ನಾನು ಸಹ ಕೈ ಜೋಡಿಸುತ್ತೇನೆ. ನೀವುಗಳು ನಮ್ಮ ಮೇಲೆ ಹೊಂದಿರುವ ಅಭಿಮಾನ, ವಿಶ್ವಾಸಕ್ಕೆ ಚಿರಋಣಿಯಾಗಿರುತ್ತೇನೆ ಎಂದರು.
    ವೈದ್ಯೆಯಾಗುವ ಕನಸು ಸೊಸೆಯಿಂದ ಈಡೇರಿದೆ, ಅದೃಷ್ಟದ ಮೊಮ್ಮಗಳು :
    ದೂರದ ಬೆಳಗಾವಿಗೂ ಭದ್ರಾವತಿಗೂ ನಂಟು ಬೆಳೆಯುತ್ತದೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ಶಾಸಕ ಬಿ.ಕೆ ಸಂಗಮೇಶ್ವರ್‌ರವರು ನನ್ನ ಬಳಿ ಬಂದು ನಿಮ್ಮ ಮಗನಿಗೆ ಹೆಣ್ಣು ಹುಡುಕುತ್ತಿದ್ದೀರಾ ಎಂಬ ಮಾಹಿತಿ ಕೇಳಿ ಬಂತು. ನನ್ನ ಸಹೋದರನ ಮಗಳು ವೈದ್ಯೆಯಾಗಿದ್ದು, ಒಂದು ಸಲ ಬಂದು ನೋಡಿ ಎಂದು ಹೇಳಿದರು. ನಾನು ವೈದ್ಯೆಯಾಗಬೇಕು ಎಂಬ ಆಸೆ ಹೊಂದಿದ್ದೆ. ಆದರೆ ವೈದ್ಯೆಯಾಗಲು ಸಾಧ್ಯವಾಗಲಿಲ್ಲ. ಈ ಹಿನ್ನಲೆಯಲ್ಲಿ ನಾನು ಇಲ್ಲಿಗೆ ಬರಲು ತೀರ್ಮಾನಿಸಿದೆ.  ಮೊದಲ ಸಲವೇ ಸಂಬಂಧ ಕೂಡಿ ಬಂತು. ಸೊಸೆ ಬಂದ ನಂತರ ನನ್ನ ತಮ್ಮ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದು, ನಾನು ೨ನೇ ಬಾರಿಗೆ ಶಾಸಕಿಯಾಗಿದ್ದೇನೆ. ಇದೀಗ ನನ್ನ ಮೊಮ್ಮಗಳು ಜನಿಸಿದ ಮರುದಿನ ಸಚಿವೆಯಾಗಿದ್ದೇನೆ. ಸೊಸೆ ಮತ್ತು ಮೊಮ್ಮಗಳು ಇಬ್ಬರು ನಮ್ಮ ಕುಟುಂಬಕ್ಕೆ ಅದೃಷ್ಟ ತಂದಿದ್ದಾರೆ ಎಂದರು.
    ಇಲಾಖೆ ಬಗ್ಗೆ ಅಭಿಮಾನ :
    ನನಗೆ ನೀಡಿರುವ ಇಲಾಖೆ ಬಗ್ಗೆ ಅಭಿಮಾನಿವಿದ್ದು, ಹುಟ್ಟು ಮಕ್ಕಳಿಂದ ಹಿಡಿದು ಗರ್ಭಿಣಿ ಮಹಿಳೆ, ಅಂಗವಿಕಲರ ಹಾಗು ಸಾಯುವವರೆಗಿನ ವಯೋವೃದ್ಧರ ಸೇವೆ ಸಲ್ಲಿಸುವ ಅವಕಾಶ ಲಭಿಸಿರುವುದು ನನ್ನ ಸೌಭಾಗ್ಯವಾಗಿದೆ. ಭದ್ರಾವತಿ ಕ್ಷೇತ್ರ ಸೇರಿದಂತೆ ನಾಡಿನಾದ್ಯಂತ ಇಲಾಖೆ ಕೆಲಸ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
    ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಅಲ್ಪ ಸಂಖ್ಯಾತ ಸಮುದಾಯದ ಫೀರ್‌ಷರೀಫ್, ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ ಸೇರಿದಂತೆ ಇನ್ನಿತರರು ಅಭಿನಂದನಾ ನುಡಿಗಳನ್ನಾಡಿದರು.
    ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಮುರುಗೇಶ್ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರರಾದ ಬಿ.ಕೆ ಜಗನ್ನಾಥ್, ಬಿ.ಕೆ ಮೋಹನ್, ಬಿ.ಕೆ ಶಿವಕುಮಾರ್ ಹಾಗು ಮಕ್ಕಳು, ಕುಟುಂಬ ವರ್ಗದವರು, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ನಗರಸಭೆ, ಗ್ರಾಮ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.


ಭದ್ರವತಿ ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ಸಂಬಂಧಿಕರಾದ ಲಕ್ಷ್ಮೀ ಹೆಬ್ಬಾಳ್ಕರ್‌ರವರು ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ್ದು, ಈ ಹಿನ್ನಲೆಯಲ್ಲಿ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸಹೋದರ ಬಿ.ಕೆ ಶಿವಕುಮಾರ್‌ರವರ ಗಾಂಧಿನಗರದ ನಿವಾಸದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದರು.

Saturday, June 3, 2023

ಜಾನಪದ ಕಲಾವಿದರಿಂದ ಬೀದಿ ನಾಟಕ ಪ್ರದರ್ಶನದ ಮೂಲಕ ಸ್ವಚ್ಛತೆ, ನೀರಿನ ಅರಿವು

ಭದ್ರಾವತಿ ಜನ್ನಾಪುರ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘ ನೆಹರು ಯುವ ಕೇಂದ್ರ, ಶಿವಮೊಗ್ಗ ಸಹಯೋಗದೊಂದಿಗೆ ಬೀದಿ ನಾಟಕ ಪ್ರದರ್ಶನಗಳ ಮೂಲಕ ಡಾ.ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
    ಭದ್ರಾವತಿ, ಜೂ. ೩ : ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸುಂದರ ಪರಿಸರ ನಿರ್ಮಿಸಿಕೊಳ್ಳುವ ಹಾಗು ನೀರಿನ ಮಹತ್ವ ಹಾಗು ಸದ್ಬಳಕೆ ಕುರಿತು ಅರಿವು ಮೂಡಿಸುವಲ್ಲಿ ಜನ್ನಾಪುರ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘ ಮುಂದಾಗಿದೆ.  
    ನೆಹರು ಯುವ ಕೇಂದ್ರ, ಶಿವಮೊಗ್ಗ ಸಹಯೋಗದೊಂದಿಗೆ ಬೀದಿ ನಾಟಕ ಪ್ರದರ್ಶನಗಳ ಮೂಲಕ ಡಾ.ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಸೋಮವಾರ ಬೆಳಿಗ್ಗೆ ತಾಲೂಕು ಕಛೇರಿ ಮಿನಿ ವಿಧಾನಸೌಧದ ಆವರಣದಲ್ಲಿ  ಮಿಷನ್ ಲೈಫ್ ೨೦೨೩-೨೪ರ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೀದಿ ನಾಟಕ ಪ್ರದರ್ಶನಕ್ಕೆ ತಹಸೀಲ್ದಾರ್ ಸುರೇಶ್ ಆಚಾರ್ ಚಾಲನೆ ನೀಡಿದರು.
    ಕಲಾಸಂಘದ ಮುಖ್ಯಸ್ಥ ತಮಟೆ ಜಗದೀಶ್, ಟಿ. ರಘುನಾಯ್ಕ, ಕೆ.ಆರ್ ಆಂಜನೇಯ, ನಾಗರಾಜ್ ನೀಲ್, ಬಿ. ಪ್ರವೀಣ್ ಕುಮಾರ್, ವೈ.ಕೆ ಹನುಮಂತಯ್ಯ, ಎಸ್. ಪಂಕಜ್, ಜಿ. ದಿವಾಕರ ಸೇರಿದಂತೆ ಇನ್ನಿತರ ಕಲಾವಿದರು ಪ್ರದರ್ಶನ ಯಶಸ್ವಿಯಾಗಿ ಕೈಗೊಂಡರು.
    ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಾಲಪ್ಪ ಹಾಗೂ ರಂಗ ಕಲಾವಿದರು ಭದ್ರಾವತಿ ಸಂಘದ ಅಧ್ಯಕ್ಷ ಬಿ. ಕಮಲಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶಾಸಕ ಸಂಗಮೇಶ್ವರನ್ನು ಸದ್ಯಕ್ಕೆ ನಿಗಮಮಂಡಳಿಗೆ ಅಧ್ಯಕ್ಷರಾಗಿ ನೇಮಕಗೊಳಿಸಿ

ಜೂ.೪ರಂದು ಸಚಿವೆಯಾಗಿ ಮೊದಲ ಬಾರಿಗೆ ಲಕ್ಷ್ಮೀ ಹೆಬ್ಬಾಳ್ಕರ್ ನಗರಕ್ಕೆ ಆಗಮನ

ಭದ್ರಾವತಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಮುಖಂಡರು ಮಾತನಾಡಿದರು.  .
    ಭದ್ರಾವತಿ, ಜೂ. ೩: ಮುಂದಿನ ಅವಧಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದ್ದು, ಸದ್ಯಕ್ಕೆ ಯಾವುದಾದರೂ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕಗೊಳಿಸಿ ಸೂಕ್ತ ಸ್ಥಾನಮಾನ ನೀಡುವಂತೆ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಮುಖಂಡರು ಮನವಿ ಮಾಡಿದರು.
    ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ೧೩೫ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರು ಉತ್ತಮ ಆಡಳಿತ ನೀಡುವ ಭರವಸೆ ಇದ್ದು, ಈಗಾಗಲೇ ಗ್ಯಾರಂಟಿ ಕಾರ್ಡ್‌ನಲ್ಲಿ ಘೋಷಿಸಲಾಗಿದ್ದ ೫ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದೆ ಎಂದರು.
    ಶಾಸಕರಿಗೆ ಮೊದಲ ಅವಧಿಯಲ್ಲಿಯೇ ಸಚಿವ ಸ್ಥಾನ ಸಿಗುವ ವಿಶ್ವಾಸವಿತ್ತು. ಸಾಕಷ್ಟು ಪ್ರಯತ್ನಿಸಿದರೂ ಸಹ ಈ ಬಾರಿ ಕೈತಪ್ಪಿದ್ದು, ಮುಂದಿನ ೨ನೇ ಅವಧಿಯಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಶಾಸಕರನ್ನು ಯಾವುದಾದರೂ ನಿಗಮ ಮಂಡಳಿಗೆ ನೇಮಕಗೊಳಿಸಿ ಸೂಕ್ತ ಸ್ಥಾನಮಾನ ನೀಡಬೇಕೆಂದರು.
    ಜೂ.೪ರಂದು ನಗರಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ :
    ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ, ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ಸಂಬಂಧಿಕರಾದ ಲಕ್ಷ್ಮೀ ಹೆಬ್ಬಾಳ್ಕರ್‌ರವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಚಿವರಾದ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಜೂ.೪ರಂದು ಆಗಮಿಸುತ್ತಿದ್ದಾರೆ.
    ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸಹೋದರ ಬಿ.ಕೆ ಶಿವಕುಮಾರ್‌ರವರ ಗಾಂಧಿನಗರದ ನಿವಾಸದ ಆವರಣದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ರವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.
    ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಮಾಜಿ ಉಪಾಧ್ಯಕ್ಷ ಚನ್ನಪ್ಪ, ಮುಖಂಡರಾದ ಬಿ.ಕೆ ಮೋಹನ್, ಫೀರ್‌ಷರೀಫ್, ಅರುಣ್, ಎಚ್. ರವಿಕುಮಾರ್, ರಮೇಶ್, ಎಸ್.ಎನ್ ಶಿವಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ : ಪ್ರಕರಣ ದಾಖಲು

    ಭದ್ರಾವತಿ, ಜೂ. ೩: ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಕ್ಕೆ ಅಶೋಕ್ ಲೈಲ್ಯಾಂಡ್ ಗೂಡ್ಸ್ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದಿರುವ ಘಟನೆ ನಡೆದಿದ್ದು, ಈ ಸಂಬಂಧ ದೂರು ದಾಖಲಾಗಿದೆ.
    ಮಂಜುನಾಥ್ ಎಂಬುವರು ಜೂ.೨ರ ಮಧ್ಯಾಹ್ನ ೨.೪೫ರ ಸಮಯದಲ್ಲಿ ರಸ್ತೆ ಪಕ್ಕದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ ಜಮೀನಿಗೆ ನಡೆದು ಕೊಂಡು ಹೋಗುತ್ತಿದ್ದಾಗ ಕಾಚಗೊಂಡನಹಳ್ಳಿ ಕಡೆಯಿಂದ ಬರುತ್ತಿದ್ದ ಅಶೋಕ್ ಲೈಲ್ಯಾಂಡ್ ಗೂಡ್ಸ್ ಕ್ಯಾಂಟರ್ ವಾಹನ ಯಮಹಾ ಫ್ಯಾಸಿನೋ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
    ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನ ಸಂಪೂರ್ಣವಾಗಿ ಜಖಂಗೊಂಡಿದೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Friday, June 2, 2023

ಸಂಗಮೇಶ್ವರ್‌ಗೆ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಲಭಿಸಲಿ

ಬಿಳಿಕಿ ಶ್ರೀ ನೇತೃತ್ವದ ಸ್ವಾಮೀಜಿಗಳ ನಿಯೋಗ ಪ್ರಾರ್ಥನೆ

ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ಬೆಂಗಳೂರಿನ ನಿವಾಸದಲ್ಲಿ   ಹಿರೇಮಠ ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದ ಸ್ವಾಮೀಜಿಗಳ ನಿಯೋಗ ಭೇಟಿ ಮಾಡಿ ಸನ್ಮಾನಿಸಿ ಆಶೀರ್ವದಿಸುವ ಮೂಲಕ ಪ್ರಸಕ್ತ ಬೆಳವಣಿಗೆಗಳನ್ನು ಚರ್ಚಿಸಲಾಯಿತು.
    ಭದ್ರಾವತಿ, ಜೂ. ೩ : ಕ್ಷೇತ್ರದ ಶಾಸಕರಾಗಿ ೪ನೇ ಬಾರಿಗೆ ಆಯ್ಕೆಯಾಗುವ ಮೂಲಕ ದಾಖಲೆ ನಿರ್ಮಿಸಿರುವ ಬಿ.ಕೆ ಸಂಗಮೇಶ್ವರ್ ಅವರಿಗೆ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಹ ಲಭಿಸುವಂತಾಗಲಿ ಎಂದು ತಾಲೂಕಿನ ಹಿರೇಮಠ ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದ ಸ್ವಾಮೀಜಿಗಳ ನಿಯೋಗ ದೇವರಲ್ಲಿ ಪ್ರಾರ್ಥಿಸಿದೆ.
    ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ನೂತನ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಕೊನೆಯವರೆಗೂ ತೀವ್ರ ಪೈಪೋಟಿ ನಡೆಸಿದ ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಸ್ವಾಮೀಜಿಗಳ ನಿಯೋಗ ಭೇಟಿ ಮಾಡಿ ಸನ್ಮಾನಿಸಿ ಆಶೀರ್ವದಿಸುವ ಮೂಲಕ ಪ್ರಸಕ್ತ ಬೆಳವಣಿಗೆಗಳನ್ನು ಚರ್ಚಿಸಲಾಯಿತು.
    ರಟ್ಟಿಹಳ್ಳಿ ಶ್ರೀಗಳು, ಶಂಕರ ದೇವರ ಮಠದ ಶ್ರೀಗಳು ಹಾಗು ಎಸ್. ವಾಗೀಶ್, ಎಚ್. ಮಂಜುನಾಥ್, ಬಿ.ಎಂ ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಓಸಿ, ಮಟ್ಕಾ ಜೂಜಾಟ : ಪ್ರಕರಣ ದಾಖಲು


    ಭದ್ರಾವತಿ, ಜೂ. ೨: ನಗರದ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ  ಓಸಿ, ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಾಗಿದೆ.
    ಬೊಮ್ಮನಕಟ್ಟೆ ನಿವಾಸಿ ಇಸ್ರಯಿಲ್ ಎಂಬಾತ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಜನರ ಗುಂಪು ಸೇರಿಸಿಕೊಂಡು  ಓಸಿ, ಮಟ್ಕಾ ಜೂಜಾಟದಲ್ಲಿ ತೊಡಗಿಸಿಕೊಂಡಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಈ ಸಂಬಂಧ ಠಾಣೆಗೆ ದೂರು ಸಲ್ಲಿಕೆಯಾಗಿದ್ದು, ಈ ದೂರಿನ ಆಧಾರದ ಮೇಲೆ ತನಿಖೆ ಮಾಡಲು ನ್ಯಾಯಾಲಯ ಆದೇಶಿಸಿದೆ. ಈ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಆಧಾರ ಕಾರ್ಡ್ ಬ್ಯಾಂಕ್ ಉಳಿತಾಯ ಖಾತೆಗೆ ಜೋಡಣೆ ಮಾಡಿಸದಿದ್ದಲ್ಲಿ ಪಿಂಚಣಿ ಸ್ಥಗಿತ

    ಭದ್ರಾವತಿ, ಜೂ. ೨ :  ತಾಲೂಕಿನಲ್ಲಿ ಸಾಮಾಜಿಕ ಭದ್ರತೆ ಯೋಜನೆಯಡಿಯಲ್ಲಿ ಸಂಧ್ಯಾ ಸುರಕ್ಷಾ, ಇಂದಿರಾಗಾಂಧಿ ವೃದ್ಯಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ನಿರ್ಗತಿಕ ವಿಧವಾವೇತನ ಮುಂತಾದ ಸಾಮಾಜಿಕ ಭದ್ರತೆ ಯೋಜನೆಯಡಿಯಲ್ಲಿ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರು ತಮ್ಮ ಆಧಾರ ಕಾರ್ಡ್‌ನ್ನು ಬ್ಯಾಂಕ್ ಉಳಿತಾಯ ಖಾತೆಗೆ ಎನ್‌ಪಿಸಿಐ/ಡಿಬಿಟಿ ಮಾಡಿಸುವಂತೆ ಸರ್ಕಾರ ಸೂಚಿಸಿದೆ.
    ಫಲಾನುಭವಿಗಳು ಆಧಾರ ಜೋಡಣೆ ಮಾಡದೇ ಇದ್ದಲ್ಲಿ, ಜೂನ್ ತಿಂಗಳ ಅಂತ್ಯದೊಳಗಾಗಿ ಬ್ಯಾಂಕ್ ಉಳಿತಾಯ ಖಾತೆಗೆ ಎನ್‌ಪಿಸಿಐ/ಡಿಬಿಟಿ ಆಧಾರ್ ಜೋಡಣೆ ಮಾಡಿಸುವುದು. ಇಲ್ಲವಾದಲ್ಲಿ ಪಿಂಚಣಿ ನಿಲ್ಲಿಸಲು ಕ್ರಮ ವಹಿಸಲಾಗುವುದು, ಇದಕ್ಕೆ ಫಲಾನುಭವಿಗಳೇ ಜವಾಬ್ದಾರರಾಗಿರುತ್ತಾರೆ.
    ಆದ್ದರಿಂದ ಕಾರ್ಡ್‌ನ್ನು ಬ್ಯಾಂಕ್ ಉಳಿತಾಯ ಖಾತೆಗೆ ಜೋಡಣೆ ಮಾಡಲು ತಮ್ಮ ಆಧಾರ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ ದಾಖಲೆಯೊಂದಿಗೆ ಬ್ಯಾಂಕ್‌ಗೆ ತೆರಳಿ ಜೂ. ೧೦ರೊಳಗಾಗಿ ಪರಿಷ್ಕರಣೆ (ಅಪೇಟ್) ಮಾಡಿಸುವಂತೆ ತಹಸೀಲ್ದಾರ್ ಸುರೇಶ್ ಆಚಾರ್ ಕೋರಿದ್ದಾರೆ.