Friday, June 16, 2023

ವಿಕಾಸ ತೀರ್ಥಯಾತ್ರೆ ; ಆರ್‌ಎಎಫ್ ಘಟಕ, ರೈಲ್ವೆ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದ ಸಂಸದ ಬಿ.ವೈ ರಾಘವೇಂದ್ರ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ೯ ವರ್ಷ ಆಡಳಿತ ಯಶಸ್ವಿಯಾಗಿ ಪೂರೈಸಿರುವ ಹಿನ್ನಲೆಯಲ್ಲಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ಶುಕ್ರವಾರ ವಿಕಾಸ ತೀರ್ಥಯಾತ್ರೆ ಆಯೋಜಿಸಲಾಗಿತ್ತು. ಸಂಸದ ಬಿ.ವೈ ರಾಘವೇಂದ್ರ ನಗರದ ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್ ೯೭ ಬಿ.ಎನ್ ಆರ್‌ಎಎಫ್ ಘಟಕ ಕಾಮಗಾರಿ ವೀಕ್ಷಿಸಿದರು.
    ಭದ್ರಾವತಿ, ಜೂ. ೧೬: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ೯ ವರ್ಷ ಆಡಳಿತ ಯಶಸ್ವಿಯಾಗಿ ಪೂರೈಸಿರುವ ಹಿನ್ನಲೆಯಲ್ಲಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ಶುಕ್ರವಾರ ವಿಕಾಸ ತೀರ್ಥಯಾತ್ರೆ ಆಯೋಜಿಸಲಾಗಿತ್ತು.
    ಸಂಸದ ಬಿ.ವೈ ರಾಘವೇಂದ್ರ ನಗರದ ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್ ೯೭ ಬಿ.ಎನ್ ಆರ್‌ಎಎಫ್ ಘಟಕ ಹಾಗು ಕಡದಕಟ್ಟೆ ಬಳಿ ನಿರ್ಮಾಣಗೊಳ್ಳುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ವೀಕ್ಷಣೆ ನಡೆಸಿದರು.
    ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ರಾಘವೇಂದ್ರ, ಕೇಂದ್ರ ಸರ್ಕಾರ ಕಳೆದ ೯ ವರ್ಷಗಳ ಆಡಳಿತಾವಧಿಯಲ್ಲಿ ದೇಶಾದ್ಯಂತ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಜಿಲ್ಲೆಯಲ್ಲಿ ಸಾಕಷ್ಟು ಯೋಜನೆಗಳು ಪ್ರಗತಿಯಲ್ಲಿದ್ದು, ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಆಡಳಿತ ನೀಡುವ ಉದ್ದೇಶದಿಂದ ವಿಕಾಸ ತೀರ್ಥ ಯಾತ್ತೆ ಕೈಗೊಳ್ಳಲಾಗುತ್ತಿದೆ. ಭದ್ರಾವತಿ ತಾಲೂಕಿನಲ್ಲಿ ೯೭ ಬಿ.ಎನ್ ಆರ್‌ಎಎಫ್ ಘಟಕ ಹಾಗು ಕಡದಕಟ್ಟೆ ಬಳಿ ನಿರ್ಮಾಣಗೊಳ್ಳುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿವೆ. ಅಲ್ಲದೆ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.
    ಬಿಜೆಪಿ ಮಂಡಲ ತಾಲೂಕು ಅಧ್ಯಕ್ಷ ಜಿ. ಧರ್ಮಪ್ರಸಾದ್, ಜಿಲ್ಲಾ ಸಂಪರ್ಕ ಸೆ ಸಮರ್ಥನ್ ಅಭಿಯಾನದ ಪ್ರಮುಖರಾದ ಅಶೋಕ್ ಮೂರ್ತಿ, ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಕಾರ್ಯದರ್ಶಿ ಎಂ. ಪ್ರಭಾಕರ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರಿಕೃಷ್ಣ, ಮುಖಂಡರಾದ ಮಂಗೋಟೆ ರುದ್ರೇಶ್, ರಂಗಸ್ವಾಮಿ, ಪ್ರಶಾಂತ್ ಪಂಡಿತ್, ದಿನೇಶ್ ಆಚಾರ್ಯ, ತೀರ್ಥಯ್ಯ, ಕೂಡ್ಲಿಗೆರೆ ಹಾಲೇಶ್, ಕೆ.ಎನ್ ಶ್ರೀಹರ್ಷ, ರಾಮಲಿಂಗಯ್ಯ, ಜಿ. ಆನಂದಕುಮಾರ್, ಮಲ್ಲೇಶ್, ವೇಲು, ಧರ್ಮಣ್ಣ, ಸತೀಶ್, ಕರೀಗೌಡ, ಉಮಾಪತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಐಎಸ್‌ಎಲ್ ಉಳಿಸುವ ಪ್ರಯತ್ನ ಮುಂದುವರಿಕೆ : ಬಿ.ವೈ ರಾಘವೇಂದ್ರ

ಭದ್ರಾವತಿಯಲ್ಲಿ ಶುಕ್ರವಾರ ವಿಕಾಸ ತೀರ್ಥಯಾತ್ರೆ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿದರು.
    ಭದ್ರಾವತಿ, ಜೂ. ೧೬ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರೆದಿದ್ದು, ಪ್ರಸ್ತುತ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
    ಅವರು ಶುಕ್ರವಾರ ನಗರದಲ್ಲಿ ವಿಕಾಸ ತೀರ್ಥಯಾತ್ರೆ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ನಿರ್ಧಾರ ಕೈಗೊಂಡು ಆದೇಶ ಹೊರಡಿಸಿದ್ದು, ಇದರ ವಿರುದ್ಧ ನಿರಂತರ ಪ್ರಯತ್ನದ ಫಲವಾಗಿ ಮುಚ್ಚುವ ಆದೇಶದ ಪ್ರಕ್ರಿಯೆ ಮುಂದೂಡಲ್ಪಟ್ಟಿದೆ. ಪ್ರಸ್ತುತ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲಾಗಿದೆ. ಈ ನಡುವೆ ಗುತ್ತಿಗೆ ಕಾರ್ಮಿಕರ ಹಿತಕಾಪಾಡುವಲ್ಲಿ ಯಶಸ್ವಿಯಾಗಿದ್ದು, ಕಾರ್ಖಾನೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಈಗಲೂ ಮುಂದುವರೆಯುತ್ತಿದೆ ಎಂದರು.
    ಇದೀಗ ಉಕ್ಕು ಪ್ರಾಧಿಕಾರದ ನೂತನ ಅಧ್ಯಕ್ಷರನ್ನು, ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಹಾಗು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಕಾರ್ಖಾನೆ ಪುನಶ್ಚೇತನಕ್ಕೆ ಮನವಿ ಮಾಡಲಾಗಿದೆ ಎಂದರು.
    ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಮುಖಂಡರಾದ ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್, ಕೂಡ್ಲಿಗೆರೆ ಹಾಲೇಶ್, ಅಶೋಕ್‌ಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Thursday, June 15, 2023

ಜೂ.೨೦ರಂದು ಜಾಗೃತಿ ಸಭೆ, ಜನ್ಮದಿನಾಚರಣೆ

    ಭದ್ರಾವತಿ, ಜೂ. ೧೬ : ಡಾ. ಬಿ.ಆರ್ ಅಂಬೇಡ್ಕರ್ ಭವನ ಸಂರಕ್ಷಣಾ ಸಮಿತಿ ವತಿಯಿಂದ ಜೂ.೨೦ರ ಸಂಜೆ ೪ ಗಂಟೆಗೆ ಡಾ. ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣ ಜಾಗೃತಿ ಸಭೆ ಮತ್ತು ಕಾಂಮ್ರೇಡ್ ಡಿ.ಸಿ ಮಾಯಣ್ಣನವರ ೮೯ನೇ ಜನ್ಮದಿನಾಚರಣೆ ಹಮ್ಮಿಕೊಳ್ಳಲಾಗಿದೆ.
    ರೈತ ಸಂಘದ ವರಿಷ್ಠ ಕೆ.ಟಿ ಗಂಗಾಧರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಡಿಎಸ್‌ಎಸ್ ಮುಖಂಡರಾದ ವಿಜಯಮ್ಮ ಎನ್ ಗಿರಿಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ. ಚಂದ್ರಶೇಖರಯ್ಯ ನಿವೃತ್ತ ತಹಸೀಲ್ದಾರ್ ಇಂದಿರಾ ಬಿ. ಕೃಷ್ಣಪ್ಪ, ಸಾಹಿತಿ ಹರೋನಹಳ್ಳಿ ಸ್ವಾಮಿ, ಚಿತ್ರನಟ ಆಂಜನೇಯ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಡಾ. ಬಿ.ಆರ್ ಅಂಬೇಡ್ಕರ್ ಭವನ ಸಂರಕ್ಷಣಾ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಕೋರಿದ್ದಾರೆ.

ಜೂ. ೧೬ರಂದು ಆರ್‌ಎಎಫ್ ಘಟಕ, ರೈಲ್ವೆ ಮೇಲ್ಸೇತುವೆ ಕಾಮಗಾರಿ ಪರಿಶೀಲನೆಗೆ ಸಂಸದ ಬಿ.ವೈ ರಾಘವೇಂದ್ರ ಆಗಮನ

ಸಂಸದ ಬಿ.ವೈ ರಾಘವೇಂದ್ರರವರು ಕಾಮಗಾರಿಗಳ ಪರಿಶೀಲನೆಗೆ ಶುಕ್ರವಾರ ಭದ್ರಾವತಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಗುರುವಾರ ಪೂರ್ವ ಪರಿಶೀಲನೆ ನಡೆಸಿದರು. ಕಾಮಗಾರಿಗಳ ಸಂಪೂರ್ಣ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಪೂರಕ ಸಿದ್ದತೆಗಳನ್ನು ಕೈಗೊಂಡರು.
    ಭದ್ರಾವತಿ, ಜೂ. ೧೫ : ಸಂಸದ ಬಿ.ವೈ ರಾಘವೇಂದ್ರ ನಗರದಲ್ಲಿ ಹಲವು ಕಾಮಗಾರಿಗಳ ಪ್ರಗತಿ ಪರಿಶೀಲನೆಗಾಗಿ ಜೂ.೧೬ರ ಶುಕ್ರವಾರ ಆಗಮಿಸುತ್ತಿದ್ದು, ಕಾಮಗಾರಿಗಳು ಮತ್ತಷ್ಟು ವೇಗ ಪಡೆದುಕೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ.
    ಮುಂದಿನ ವರ್ಷ ಲೋಕಸಭಾ ಚುನಾವಣೆ ಎದುರಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಸಂಸದ ಬಿ.ವೈ ರಾಘವೇಂದ್ರ ವಿವಿಧ ಕಾಮಗಾರಿಗಳ ವೀಕ್ಷಣೆ-ವಿಕಾಸ ತೀರ್ಥಯಾತ್ರೆ ಕೈಗೊಂಡಿದ್ದು, ಈ ಅಂಗವಾಗಿ ಕಳೆದ ಸುಮಾರು ೨ ವರ್ಷಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಉದ್ಘಾಟನೆಗೊಂಡ ೯೭ ಬಿ.ಎನ್ ಆರ್‌ಎಎಫ್ ಘಟಕ ಹಾಗು ಕಡದಕಟ್ಟೆ ಬಳಿ ನಿರ್ಮಾಣಗೊಳ್ಳುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ವೀಕ್ಷಣೆ ನಡೆಸಲಿದ್ದಾರೆ.
    ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಪಾಲ್ಗೊಳ್ಳಲಿದ್ದು, ಕಾಮಗಾರಿಗಳು ಮತ್ತಷ್ಟು ವೇಗ ಪಡೆದುಕೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ. ಈ ಹಿಂದೆ ಸಹ ಬಿ.ವೈ ರಾಘವೇಂದ್ರ ಅವರು ಕಾಮಗಾರಿಗಳ ವೀಕ್ಷಣೆ ನಡೆಸಿದ್ದರು.
    ಬಿಜೆಪಿ ಮುಖಂಡರಿಂದ ಪೂರ್ವ ಪರಿಶೀಲನೆ:
    ಸಂಸದ ಬಿ.ವೈ ರಾಘವೇಂದ್ರರವರು ಕಾಮಗಾರಿಗಳ ಪರಿಶೀಲನೆಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಗುರುವಾರ ಪೂರ್ವ ಪರಿಶೀಲನೆ ನಡೆಸಿದರು. ಕಾಮಗಾರಿಗಳ ಸಂಪೂರ್ಣ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಪೂರಕ ಸಿದ್ದತೆಗಳನ್ನು ಕೈಗೊಂಡರು.

ಅಂತರರಾಷ್ಟ್ರೀಯ ಯೋಗ ದಿನಾಚರಣೆ : ಜೂ.೧೮ ಮುಕ್ತ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ


    ಭದ್ರಾವತಿ, ಜೂ. ೧೫: ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನ ಸಮೀಪದಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ವಿವೇಕಾನಂದ ಯೋಗ ಅಸೋಸಿಯೇಷನ್ ವತಿಯಿಂದ ಜೂ.೨೧ರಂದು ೯ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
    ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಪೂರಕವಾಗಿ ಜೂ.೧೮ರಂದು ಮುಕ್ತ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ ಆಯೋಜಿಸಲಾಗಿದೆ. ಜೂ.೨೧ರಂದು ಯೋಗ ದಿನಾಚರಣೆ ಪ್ರಯುಕ್ತ ಬೆಳಿಗ್ಗೆ ೬ ಗಂಟೆಯಿಂದ ೭.೧೫ರ ವರೆಗೆ ಸಾಮೂಹಿಕ ಯೋಗ ಪ್ರದರ್ಶನ ನಡೆಯಲಿದೆ.
    ಯೋಗಪಟುಗಳು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಅಸೋಸಿಯೇಷನ್ ಅಧ್ಯಕ್ಷ ಕೆ.ಎಚ್ ಪಾಲಾಕ್ಷಪ್ಪ, ಕಾರ್ಯದರ್ಶಿ ತಮ್ಮಣ್ಣ ಗೌಡ ಮತ್ತು ಖಜಾಂಚಿ ವಾದಿರಾಜ ಆಚಾರ್ ಕೋರಿದ್ದಾರೆ.  

ವಿಐಎಸ್‌ಎಲ್ ನಿವೃತ್ತ ನೌಕರ ನರಸಿಂಹಯ್ಯ ನಿಧನ

ನರಸಿಂಹಯ್ಯ
    ಭದ್ರಾವತಿ, ಜೂ. ೧೫ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರ, ವಿದ್ಯಾಮಂದಿರ ನಿವಾಸಿ ನರಸಿಂಹಯ್ಯ ನಿಧನ ಹೊಂದಿದರು.
    ಇವರಿಗೆ ಪತ್ನಿ, ಓರ್ವ ಪುತ್ರಿ ಇದ್ದರು. ಅನಾರೋಗ್ಯಕ್ಕೆ ಒಳಗಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
    ನರಸಿಂಹಯ್ಯ ಅವರು ಈ ಹಿಂದೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಹಲವಾರು ವರ್ಷಗಳಿಂದ ನಿವೃತ್ತ ಕಾರ್ಮಿಕರ ಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ನಿವೃತ್ತ ಕಾರ್ಮಿಕರನ್ನು ಸಂಘಟಿಸುವಲ್ಲಿ ಹೆಚ್ಚಿನ ಶ್ರಮ ವಹಿಸಿದ್ದರು.
    ಸಂತಾಪ :
    ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ರಾಮಲಿಂಗಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ಬೆಳಿಗ್ಗೆ ತುರ್ತು ಸಭೆ ನಡೆಸಿ ನರಸಿಂಹಯ್ಯನವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
    ಅವರ ಸೇವೆಯನ್ನು ಸ್ಮರಿಸಿ, ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು. ಪ್ರಮುಖರಾದ ಹನುಮಂತರಾವ್, ನರಸಿಂಹಚಾರ್, ಬಸವರಾಜ್, ಕೆಂಪಯ್ಯ, ಮಹೇಶ್ವರಪ್ಪ, ನಂಜಪ್ಪ, ಅಡವೀಶಯ್ಯ, ನಾಗರಾಜ್, ಜಯರಾಜ್, ಭೈರಪ್ಪ, ಹಾ. ರಾಮಪ್ಪ, ಗಜೇಂದ್ರ, ರವೀಂದ್ರ ರೆಡ್ಡಿ, ಮಂಜುನಾಥ್, ಸುರೇಶ್ ಪಟೇಲ್, ರಮೇಶ್, ಲಾಜರ್, ಡಾಕಪ್ಪ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, June 14, 2023

ಶಾಲಾ ಆವರಣದಲ್ಲಿ ನೆಲಕ್ಕುರುಳಿ ಬಿದ್ದಿರುವ ಮರಗಳನ್ನು ತೆರವುಗೊಳಿಸಿ : ಸ್ವಚ್ಛತೆ ಕಾಪಾಡಿ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಮನವಿ

ಭದ್ರಾವತಿಯಲ್ಲಿ ಸರ್ಕಾರಿ ಶಾಲಾ ಆವರಣದಲ್ಲಿ ಸ್ವಚ್ಛತೆ ಕೈಗೊಳ್ಳುವಂತೆ ಹಾಗು ನೆಲಕ್ಕುರುಳಿ ಬಿದ್ದಿರುವ ಮರಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಮೇಲಾಧಿಕಾರಿಗಳಿಗೆ ಹಾಗು ವಲಯ ಅರಣ್ಯಾಧಿಕಾರಿಗಳಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜೂ. ೧೪: ಸರ್ಕಾರಿ ಶಾಲಾ ಆವರಣದಲ್ಲಿ ಸ್ವಚ್ಛತೆ ಕೈಗೊಳ್ಳುವಂತೆ ಹಾಗು ನೆಲಕ್ಕುರುಳಿ ಬಿದ್ದಿರುವ ಮರಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಮೇಲಾಧಿಕಾರಿಗಳಿಗೆ ಹಾಗು ವಲಯ ಅರಣ್ಯಾಧಿಕಾರಿಗಳಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಮನವಿ ಸಲ್ಲಿಸಲಾಯಿತು.
    ಕಾಗದನಗರ ನಗರಸಭೆ ವಾರ್ಡ್ ನಂ.೨೧ರ ವ್ಯಾಪ್ತಿಯ ಬೈಪಾಸ್ ರಸ್ತೆ ಪಕ್ಕದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ(ಪಶ್ಚಿಮ)ಯ ಆವರಣದ ಸುತ್ತಮುತ್ತ ಸ್ವಚ್ಛತೆ ಇಲ್ಲದಂತಾಗಿದೆ. ಮಕ್ಕಳಿಗೆ ಸ್ವಚ್ಛತೆ ಕುರಿತು ಅರಿವು ಮೂಡಿಸುವ ಬದಲು ನಿರ್ಲಕ್ಷ್ಯವಹಿಸಿರುವುದು ವಿಪರ್ಯಾಸದ ಸಂಗತಿಯಾಗಿದೆ. ಮೊದಲು ಮಕ್ಕಳಿಗೆ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಿ ಶಾಲಾ ಆವರಣದಲ್ಲಿ ಸುಂದರ ಪರಿಸರ ರೂಪಿಸಬೇಕು.
    ಶಾಲಾ ಆವರಣದಲ್ಲಿ ವರ್ಷದ ಹಿಂದೆ ನೆಲಕ್ಕುರುಳಿ ಬಿದ್ದಿರುವ ಮರಗಳನ್ನು ತೆರವುಗೊಳಿಸಿಲ್ಲ. ಇದರಿಂದಾಗಿ ಶಾಲಾ ಮಕ್ಕಳಿಗೆ ತೊಂದರಿಯಾಗಿದೆ. ಮಕ್ಕಳಿಗೆ ವಿಶಾಲವಾದ ಸ್ಥಳದಲ್ಲಿ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಮಕ್ಕಳು ಭಯದಲ್ಲಿ ಬದುಕುವಂತಾಗಿದೆ. ಈ ಹಿನ್ನಲೆಯಲ್ಲಿ ತಕ್ಷಣ ನೆಲಕ್ಕುರುಳಿ ಬಿದ್ದಿರುವ ಮರಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಬೇಕೆಂದು ಮನವಿ ಸಲ್ಲಿಸಲಾಯಿತು.
  ಪಕ್ಷದ ತಾಲೂಕು ಅಧ್ಯಕ್ಷ ನಾಗರಾಜರಾವ್ ಸಿಂಧೆ, ಸುಮಿತ್ರ ಬಾಯಿ, ಉಪಾಧ್ಯಕ್ಷರಾದ ಆನಂದ್, ತೀರ್ಥಕುಮಾರ್, ಯುವ ಘಟಕದ ತಾಲೂಕು ಅಧ್ಯಕ್ಷ ತೀರ್ಥ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.