Thursday, June 15, 2023

ಜೂ. ೧೬ರಂದು ಆರ್‌ಎಎಫ್ ಘಟಕ, ರೈಲ್ವೆ ಮೇಲ್ಸೇತುವೆ ಕಾಮಗಾರಿ ಪರಿಶೀಲನೆಗೆ ಸಂಸದ ಬಿ.ವೈ ರಾಘವೇಂದ್ರ ಆಗಮನ

ಸಂಸದ ಬಿ.ವೈ ರಾಘವೇಂದ್ರರವರು ಕಾಮಗಾರಿಗಳ ಪರಿಶೀಲನೆಗೆ ಶುಕ್ರವಾರ ಭದ್ರಾವತಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಗುರುವಾರ ಪೂರ್ವ ಪರಿಶೀಲನೆ ನಡೆಸಿದರು. ಕಾಮಗಾರಿಗಳ ಸಂಪೂರ್ಣ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಪೂರಕ ಸಿದ್ದತೆಗಳನ್ನು ಕೈಗೊಂಡರು.
    ಭದ್ರಾವತಿ, ಜೂ. ೧೫ : ಸಂಸದ ಬಿ.ವೈ ರಾಘವೇಂದ್ರ ನಗರದಲ್ಲಿ ಹಲವು ಕಾಮಗಾರಿಗಳ ಪ್ರಗತಿ ಪರಿಶೀಲನೆಗಾಗಿ ಜೂ.೧೬ರ ಶುಕ್ರವಾರ ಆಗಮಿಸುತ್ತಿದ್ದು, ಕಾಮಗಾರಿಗಳು ಮತ್ತಷ್ಟು ವೇಗ ಪಡೆದುಕೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ.
    ಮುಂದಿನ ವರ್ಷ ಲೋಕಸಭಾ ಚುನಾವಣೆ ಎದುರಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಸಂಸದ ಬಿ.ವೈ ರಾಘವೇಂದ್ರ ವಿವಿಧ ಕಾಮಗಾರಿಗಳ ವೀಕ್ಷಣೆ-ವಿಕಾಸ ತೀರ್ಥಯಾತ್ರೆ ಕೈಗೊಂಡಿದ್ದು, ಈ ಅಂಗವಾಗಿ ಕಳೆದ ಸುಮಾರು ೨ ವರ್ಷಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಉದ್ಘಾಟನೆಗೊಂಡ ೯೭ ಬಿ.ಎನ್ ಆರ್‌ಎಎಫ್ ಘಟಕ ಹಾಗು ಕಡದಕಟ್ಟೆ ಬಳಿ ನಿರ್ಮಾಣಗೊಳ್ಳುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ವೀಕ್ಷಣೆ ನಡೆಸಲಿದ್ದಾರೆ.
    ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಪಾಲ್ಗೊಳ್ಳಲಿದ್ದು, ಕಾಮಗಾರಿಗಳು ಮತ್ತಷ್ಟು ವೇಗ ಪಡೆದುಕೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ. ಈ ಹಿಂದೆ ಸಹ ಬಿ.ವೈ ರಾಘವೇಂದ್ರ ಅವರು ಕಾಮಗಾರಿಗಳ ವೀಕ್ಷಣೆ ನಡೆಸಿದ್ದರು.
    ಬಿಜೆಪಿ ಮುಖಂಡರಿಂದ ಪೂರ್ವ ಪರಿಶೀಲನೆ:
    ಸಂಸದ ಬಿ.ವೈ ರಾಘವೇಂದ್ರರವರು ಕಾಮಗಾರಿಗಳ ಪರಿಶೀಲನೆಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಗುರುವಾರ ಪೂರ್ವ ಪರಿಶೀಲನೆ ನಡೆಸಿದರು. ಕಾಮಗಾರಿಗಳ ಸಂಪೂರ್ಣ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಪೂರಕ ಸಿದ್ದತೆಗಳನ್ನು ಕೈಗೊಂಡರು.

No comments:

Post a Comment