ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಲಕ್ಷ್ಯ ಕಾರ್ಯಕ್ರಮದಡಿ ಭದ್ರಾವತಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಿಭಾಗ ಮತ್ತು ಹೆರಿಗೆ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಉತ್ತಮ ಸಾಧನೆ ಕಂಡು ಬಂದಿದ್ದು, ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ. ಈ ಹಿನ್ನಲೆಯಲ್ಲಿ ಈ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ಸಿಬ್ಬಂದಿಗಳು ಸಂಭ್ರಮ ಹಂಚಿಕೊಂಡರು.
ಭದ್ರಾವತಿ, ಜೂ. ೧೯ : ಖಾಸಗಿ ಆಸ್ಪತ್ರೆಗಳ ಪೈಪೋಟಿ ನಡುವೆ ಸರ್ಕಾರಿ ಆಸ್ಪತ್ರೆಗಳು ಸಹ ಯಾವುದಕ್ಕೂ ಕಡಿಮೆ ಇಲ್ಲ ಎಂಬಂತೆ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಬಹುದು ಎಂಬುದನ್ನು ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಾಬೀತು ಮಾಡಿ ತೋರಿಸಿದೆ.
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ (ಎನ್.ಹೆಚ್.ಎಂ) ಹೆರಿಗೆ ವಿಭಾಗ ಮತ್ತು ಹೆರಿಗೆ ಶಸ್ತ್ರಚಿಕಿತ್ಸಾ ವಿಭಾಗಳ ಆರೈಕೆಯ ಗುಣಮಟ್ಟ ಸುಧಾರಿಸಲು ಲಕ್ಷ್ಯ ಕಾರ್ಯಕ್ರಮ ರೂಪಿಸಿದ್ದು, ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಿಭಾಗ ಈ ಕಾರ್ಯಕ್ರಮದಡಿ ಶೇ.೯೪ ಹಾಗೂ ಹೆರಿಗೆ ಶಸ್ತ್ರಚಿಕಿತ್ಸಾ ವಿಭಾಗ ಶೇ.೯೫ರಷ್ಟು ಗುರಿ ತಲುಪುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ಲಾಟಿನಂ ಪ್ರಶಸ್ತಿಗೆ ಭಾಜನವಾಗಿದೆ.
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಲಕ್ಷ್ಯ ಕಾರ್ಯಕ್ರಮದ ಅಧಿಕಾರಿಗಳು ಮೇ.೧೫ ರಂದು ಆಸ್ಪತ್ರೆಗೆ ಭೇಟಿ ನೀಡಿ ಸೌಲಭ್ಯಗಳನ್ನು ಪರಿಶೀಲನೆ ನಡೆಸಿದ್ದರು. ಹೆರಿಗೆ ವಿಭಾಗ ಮತ್ತು ಹೆರಿಗೆ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಉತ್ತಮ ಸಾಧನೆ ಕಂಡು ಬಂದಿದ್ದು, ಇದೀಗ ಪ್ರಶಸ್ತಿ ಘೋಷಣೆಯಾಗಿದೆ. ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿರುವುದು ವಿಶೇಷ ಸಂಗತಿಯಾಗಿದೆ.
ಆಸ್ಪತ್ರೆಗೆ ಲಕ್ಷ್ಯ ಕಾರ್ಯಕ್ರಮದಡಿ ರಾಷ್ಟ್ರಮಟ್ಟದ ಪ್ರಶಸ್ತಿ ಸಿಕ್ಕಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ. ಹೆರಿಗೆ ವಿಭಾಗ ಹಾಗೂ ಹೆರಿಗೆ ಶಸ್ತ್ರಚಿಕಿತ್ಸಾ ವಿಭಾಗ ರಾಷ್ಟ್ರಮಟ್ಟದಲ್ಲಿ ಗುರುತಿಸಿದ್ದು, ಈ ವಿಭಾಗಗಳಲ್ಲಿ ಕೆಲಸ ಮಾಡಿದ ವೈದ್ಯರು, ಸಿಬ್ಬಂದಿಗಳಿಗೂ ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಆಸ್ಪತ್ರೆಯ ಪ್ರತಿಯೊಬ್ಬರಿಗೂ ಹಾಗು ಜನಪ್ರತಿನಿಧಿಗಳು, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೂ ಕೃತಜ್ಞತೆ ಸಲ್ಲಿಸುತ್ತೇನೆ.
- ಡಾ. ಡಿ.ಎಸ್ ಶಿವಪ್ರಕಾಶ್,
ಮುಖ್ಯ ವೈದ್ಯಾಧಿಕಾರಿಗಳು,
ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ, ಭದ್ರಾವತಿ