Tuesday, June 20, 2023

ಹಿರಿಯ ಕಾರ್ಮಿಕ ಹೋರಾಟಗಾರ ಕಾಂಮ್ರೇಡ್ ಡಿ.ಸಿ ಮಾಯಣ್ಣನವರ ೮೯ನೇ ಜನ್ಮದಿನಾಚರಣೆ

ಭದ್ರಾವತಿಯಲ್ಲಿ ಹಿರಿಯ ಕಾರ್ಮಿಕ ಹೋರಾಟಗಾರ ಕಾಂಮ್ರೇಡ್ ಡಿ.ಸಿ ಮಾಯಣ್ಣನವರ ೮೯ನೇ ಜನ್ಮದಿನಾಚರಣೆ ಡಾ. ಬಿ.ಆರ್ ಅಂಬೇಡ್ಕರ್ ಭವನ ಸಂರಕ್ಷಣಾ ಸಮಿತಿ ವತಿಯಿಂದ ಮಂಗಳವಾರ ಆಚರಿಸಲಾಯಿತು.
   ಭದ್ರಾವತಿ, ಜೂ. ೨೦ : ಹಿರಿಯ ಕಾರ್ಮಿಕ ಹೋರಾಟಗಾರ ಕಾಂಮ್ರೇಡ್ ಡಿ.ಸಿ ಮಾಯಣ್ಣನವರ ೮೯ನೇ ಜನ್ಮದಿನಾಚರಣೆ ಡಾ. ಬಿ.ಆರ್ ಅಂಬೇಡ್ಕರ್ ಭವನ ಸಂರಕ್ಷಣಾ ಸಮಿತಿ ವತಿಯಿಂದ ಮಂಗಳವಾರ ಆಚರಿಸಲಾಯಿತು. 
ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು, ಡಿ.ಸಿ ಮಾಯಣ್ಣನವರ ಹೋರಾಟ ಇಂದಿನವರಿಗೆ ಪ್ರೇರಣೆಯಾಗಿದೆ. ಹಲವಾರು ಹೋರಾಟಗಳಿಗೆ ಮಾಯಣ್ಣನವರು ಶಕ್ತಿ ತುಂಬಿದ್ದಾರೆ. ಇವರ ಮಾರ್ಗದರ್ಶನ ನಮ್ಮೆಲ್ಲರಿಗೂ ಅಗತ್ಯವಾಗಿದೆ ಎಂದರು. 
ಡಿಎಸ್‌ಎಸ್ ಮುಖಂಡರಾದ ವಿಜಯಮ್ಮ ಎನ್ ಗಿರಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ. ಬಿ.ಆರ್ ಅಂಬೇಡ್ಕರ್ ಭವನ ಸಂರಕ್ಷಣಾ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. 
  ಪ್ರಮುಖರಾದ ಎಲ್.ವಿ ರುದ್ರಪ್ಪ, ಸಿದ್ದಲಿಂಗಯ್ಯ, ಟಿ. ವೆಂಕಟೇಶ್, ಫೀರ್‌ಷರೀಪ್, ನರಸಿಂಹಚಾರ್, ಎಂ. ನಾರಾಯಣ, ಯಲ್ಲೋಜಿರಾವ್, ಅನಂತರಾಮು, ಆಂಜನೇಯ, ಚಂದ್ರಶೇಖರ್, ಶಶಿಕುಮಾರ್ ಗೌಡ, ಹಫೀಜ್ ಉರ್ ರಹಮಾನ್, ಟಿ.ಜಿ ಬಸವರಾಜಯ್ಯ, ಉಕ್ಕುಂದ ಶಿವಕುಮಾರ್, ಕಮಲಕರ್, ಜಗದೀಶ್, ಮುತ್ತು, ತಿರುಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 


ಜೂ. ೨೧ರಂದು ಉಚಿತ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ

    ಭದ್ರಾವತಿ, ಜೂ. ೨೦ : ನಗರದ ತರೀಕೆರೆ ರಸ್ತೆಯ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ಆಶ್ರಮದ ವತಿಯಿಂದ ತಮಿಳುನಾಡು ದಿಂಡಿಕಲ್‌ನ ವಂಶಪಾರಂಪರೆ ಸಿದ್ದ ವೈದ್ಯರಾದ ಕೆ. ಮುತ್ತುಕೃಷ್ಣನ್ ಅವರಿಂದ ಜೂ.೨೧ರಂದು ಉಚಿತ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಕಾರ್ಯಕ್ರಮ ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೧.೩೦ ಗಂಟೆ ವರೆಗೆ ನಡೆಯಲಿದ್ದು, ಕಣ್ಣಿಗೆ ಹನಿ ಹಾಕುವುದರಿಂದ ಕಣ್ಣಿನಲ್ಲಿ ನೀರು ಬರುತ್ತಿರುವುದು, ಕಣ್ಣು ಉರಿ, ಕಣ್ಣು ಕೆಂಪಗಾಗುವುದು, ಕಣ್ಣಿನಲ್ಲಿ ಪೊರೆ ಬರುವ ಹಂತದಲ್ಲಿರುವವರು ಹಾಗು ದೂರ ದೃಷ್ಠಿ ಮತ್ತು ಸಮೀಪ ದೃಷ್ಠಿ ತೊಂದರೆ ಇರುವವರಿಗೆ ಹಾಗು ಸೂಕ್ಷ್ಮ ಕೆಲಸಗಾರರು, ಚಿನ್ನಬೆಳ್ಳಿ, ಕಂಪ್ಯೂಟರ್, ಟೈಲರಿಂಗ್ ಕೆಲಸಗಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೆಚ್ಚಿನ ಮಾಹಿತಿಗೆ ಮೊ: ೯೪೮೦೨೮೩೦೩೦ ಅಥವಾ ೯೪೪೮೨೫೫೫೪೪ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಕುಷ್ಠರೋಗ ಪತ್ತೆ ಹಚ್ಚುವ ಅಂದೋಲನ : ೮೨,೨೬೭ ಮನೆಗಳ ಸಮೀಕ್ಷೆ

ಚಾಲನೆ ನೀಡಿ ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಸ್ಪಷ್ಟನೆ

ಭದ್ರಾವತಿ ತಾಲೂಕಿನಾದ್ಯಂತ ಜು.೬ರವರೆಗೆ ಆರೋಗ್ಯ ಇಲಾಖೆಯಿಂದ ಕುಷ್ಠರೋಗ ಪತ್ತೆ ಹಚ್ಚುವ ಅಂದೋಲನ ಹಮ್ಮಿಕೊಳ್ಳಲಾಗಿದ್ದು, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಅಂದೋಲನಕ್ಕೆ ಚಾಲನೆ ನೀಡಿದರು.  
    ಭದ್ರಾವತಿ, ಜೂ. ೨೦ : ತಾಲೂಕಿನಾದ್ಯಂತ ಜು.೬ರವರೆಗೆ ಆರೋಗ್ಯ ಇಲಾಖೆಯಿಂದ ಕುಷ್ಠರೋಗ ಪತ್ತೆ ಹಚ್ಚುವ ಅಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಹೇಳಿದರು.
    ಅವರು ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಅಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನ ೮೨,೨೬೭ ಮನೆಗಳ ೧,೧೭,೩೭೦ ಜನರ ಸಮೀಕ್ಷೆ ನಡೆಸಲಾಗುವುದು. ಈ ಕಾರ್ಯದಲ್ಲಿ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗು ಸ್ವಯಂ ಸೇವಕರನ್ನು ಒಳಗೊಂಡ ೨೯೩ ತಂಡಗಳು ಪಾಲ್ಗೊಳ್ಳಲಿವೆ. ಈಗಾಗಲೇ ಮನೆ-ಮನೆ ಸಮೀಕ್ಷೆ ಮತ್ತು ಪರೀಕ್ಷೆ ಕಾರ್ಯಕ್ರಮ ಅರಂಭವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಸಂಶಯಾತ್ಮಕ ಚರ್ಮರೋಗದ ಲಕ್ಷಣಗಳಿರುವ ವ್ಯಕ್ತಿಗಳು ಪರೀಕ್ಷೆ ಮಾಡಿಸಿಕೊಂಡು ಕುಷ್ಠರೋಗ ಪತ್ತೆ ಹಚ್ಚುವಲ್ಲಿ ಸಹಕರಿಸಬೇಕೆಂದು ಕೋರಿದರು.
    ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಡಿ.ಎಸ್ ಶಿವಪ್ರಕಾಶ್, ವೈದ್ಯರಾದ ಡಾ. ರಶ್ಮಿ, ಡಾ. ಮಯೂರಿ, ಡಾ. ಕಿರಣ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ. ಸುಶೀಲಾ ಬಾಯಿ, ಆನಂದ ಮೂರ್ತಿ, ಜಿಲ್ಲಾ ಕಛೇರಿಯ ಉಮೇಶ್, ಮಧು,  ಮೋಹನ್, ಹಾಲೇಶ್, ವಸಂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

೯ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ : ಯೋಗ ಜಾಥಾ ನಡಿಗೆ

ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿಯಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಜೂ.೨೧ರ ೯ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮಂಗಳವಾರ ಯೋಗ ಜಾಥಾ ನಡಿಗೆ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜೂ. ೨೦ : ಪ್ರತಿ ವರ್ಷದಂತೆ ಈ ಬಾರಿ ಸಹ ನಗರದ ಪತಂಜಲಿ ಯೋಗ ಸಮಿತಿ ವತಿಯಿಂದ ಜೂ.೨೧ರ ೯ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮಂಗಳವಾರ ಯೋಗ ಜಾಥಾ ನಡಿಗೆ ಹಮ್ಮಿಕೊಳ್ಳಲಾಗಿತ್ತು.
    ಜಾಥಾ ಹಳೇನಗರದ ಕಂಚಿನಬಾಗೀಲು ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಆರಂಭಗೊಂಡು ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ವೃತ್ತದ ಮೂಲಕ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ತಲುಪಿತು.
     ಪತಂಜಲಿ ಯೋಗ ಸಮಿತಿ ಗೌರವಾಧ್ಯಕ್ಷ ಪಿ  ವೆಂಕಟರಮಣಶೇಟ್, ಸ್ತ್ರೀ ರೋಗ ತಜ್ಞೆ, ಯೋಗ ಶಿಕ್ಷಕಿ ಡಾ. ವೀಣಾ ಎಸ್ ಭಟ್, ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಿ. ನಾಗರಾಜ್, ವಿಎಚ್‌ಪಿ ಹಾ. ರಾಮಪ್ಪ ಹಾಗು ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಮಿತಿ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಯೋಗಪಟುಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

Monday, June 19, 2023

ಹಳೇನಗರ ಪೊಲೀಸರ ಕಾರ್ಯಾಚರಣೆ : ಇಬ್ಬರ ಸೆರೆ, ೧.೪೯೦ ಕೆ.ಜಿ ಒಣ ಗಾಂಜಾ ವಶ

ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಭಾನುವಾರ ಸುಮಾರು ೧ ಕೆ.ಜಿ ೪೯೦ ಗ್ರಾಂ. ಒಣ ಗಾಂಜಾ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
    ಭದ್ರಾವತಿ, ಜೂ. ೧೯: ಇತ್ತೀಚಿನ ವರ್ಷಗಳಲ್ಲಿ ಕ್ಷೇತ್ರದಲ್ಲಿ ಗಾಂಜಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ ಸಹ ಸದ್ದಿಲ್ಲದೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹಳೇನಗರ ಠಾಣೆ ಪೊಲೀಸರು ಭಾನುವಾರ ಸುಮಾರು ೧ ಕೆ.ಜಿ ೪೯೦ ಗ್ರಾಂ. ಒಣ ಗಾಂಜಾ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
    ಖಚಿತ ಮಾಹಿತಿ ಆಧಾರದ ಮೇರೆಗೆ ನಗರಸಭೆ ವ್ಯಾಪ್ತಿಯ ಜಟ್‌ಪಟ್ ನಗರದ ವೀರಶೈವ ರುದ್ರಭೂಮಿ ಬಳಿ ದಾಳಿ ನಡೆಸಿ ನಸ್ರುಲ್ಲಾ ಅಲಿಯಾಸ್ ನಸ್ರು(೧೯) ಮತ್ತು ಸೈಫ್ ಆಲಿ ಖಾನ್(೨೫) ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ ಒಟ್ಟು ಸುಮಾರು ೩೪,೪೦೦ ರು. ಮೌಲ್ಯದ ೧ ಕೆ.ಜಿ ೪೯೦ ಗ್ರಾಂ ಒಣ ಗಾಂಜಾ ಹಾಗು ೭೦೦ ರು. ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
    ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಠಾಣಾಧಿಕಾರಿ ಶರಣಪ್ಪ ನೇತೃತ್ವದ ತಂಡವನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಹಾಗು ಪೊಲೀಸ್ ಉಪಾಧೀಕ್ಷಕರು ಅಭಿನಿಂದಿಸಿದ್ದಾರೆ.

ಬಾಲ ಕಾರ್ಮಿಕರ ವಿರೋಧಿ ದಿನ : ಜಾಥಾಕ್ಕೆ ಚಾಲನೆ

ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆ ನೇತೃತ್ವದಲ್ಲಿ ಬಾಲ ಕಾರ್ಮಿಕರ ವಿರೋಧಿ ದಿನದ ಅಂಗವಾಗಿ ಭದ್ರಾವತಿಯಲ್ಲಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಆರ್.ವೈ ಶಶಿಧರ ಜಾಥಾ ವಾಹನಕ್ಕೆ ಹಸಿರು ತೋರಿಸಿ ಚಾಲನೆ ನೀಡಿದರು
    ಭದ್ರಾವತಿ, ಜೂ. ೧೯: ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆ ನೇತೃತ್ವದಲ್ಲಿ ಬಾಲ ಕಾರ್ಮಿಕರ ವಿರೋಧಿ ದಿನದ ಅಂಗವಾಗಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
    ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಆರ್.ವೈ ಶಶಿಧರ ಜಾಥಾ ವಾಹನಕ್ಕೆ ಹಸಿರು ತೋರಿಸಿ ಚಾಲನೆ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಅಧ್ಯಕ್ಷತೆ ವಹಿಸಿದ್ದರು.
    ಬಾಲ ಕಾರ್ಮಿಕರ ಕುರಿತು ಜಾಗೃತಿ ಮೂಡಿಸುವ ಜೊತೆಗೆ ಕಾನೂನು ಅರಿವು ಹೊಂದಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕೆಂಬ ಆಶಯದೊಂದಿಗೆ ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು.
    ಕಾರ್ಮಿಕ ನಿರೀಕ್ಷಕಿ ಮಮ್ತಾಜ್ ಬೇಗಂ ಸೇರಿದಂತೆ ನ್ಯಾಯಾಧೀಶರು, ವಕೀಲರು ಹಾಗು ಕಾರ್ಮಿಕ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ದಾಖಲೆ ನಿರ್ಮಿಸಿದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ


ಶಿಬಿರದ ಸದುಪಯೋಗ ಪಡೆದ  ೭೪೧ ಮಂದಿ

ಭದ್ರಾವತಿ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು ಹಾಗು ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

    ಭದ್ರಾವತಿ, ಜೂ. ೧೯ : ನಗರದ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು ಹಾಗು ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ಮುಕ್ತಾಯಗೊಳ್ಳುವ ಜೊತೆಗೆ ದಾಖಲೆ ನಿರ್ಮಿಸಿದೆ.
    ಶಿಬಿರದಲ್ಲಿ ಸುಮಾರು ೭೪೧ ಮಂದಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸುವ ಜೊತೆಗೆ ಚಿಕಿತ್ಸೆ ನೀಡಿ ಅಗತ್ಯವಿರುವ ಔಷಧಿಗಳನ್ನು ಸಹ ನೀಡಲಾಯಿತು. ಇದರ ಜೊತೆಗೆ ಸುಮಾರು ೨೫ ಮಂದಿ ರಕ್ತದಾನ ಮಾಡುವ ಮೂಲಕ ಶಿಬಿರ ಯಶಸ್ವಿಗೆ ಮುನ್ನುಡಿ ಬರೆದರು.
    ಶಿಬಿರದ ಯಶಸ್ವಿಗೆ ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ೩೧ ಮಂದಿ ಪರಿಣಿತ ತಜ್ಞ ವೈದ್ಯರು, ಪ್ಯಾರ ಮೆಡಿಕಲ್ ಮತ್ತು ಇತರೆ ಸಿಬ್ಬಂದಿಗಳು ಸುಮಾರು ೪೦ ಮಂದಿ ಒಟ್ಟು ೭೧ ಮಂದಿ ಹಾಗು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ಸೇವಾದಳದ ೧೪೦ ಮಂದಿ ಹಾಗು ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದದವರು ಶ್ರಮಿಸಿದರು.
    ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವೈದ್ಯಕೀಯ ವಿಭಾಗದ ವ್ಯವಸ್ಥಾಪಕ ಡಾ. ಡಾ. ಶಿವಮೂರ್ತಿ, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕರಾದ ಕಾಂತರಾಜ್, ಮೊಹಮದ್, ಶಿವಮೊಗ್ಗ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನರರೋಗ ತಜ್ಞ ಡಾ. ನಾರಾಯಣ ಪಂಜಿ, ನಗರದ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ವೈದ್ಯೆ ಡಾ. ವೀಣಾಭಟ್, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ, ಜಿಲ್ಲಾಧ್ಯಕ್ಷ ಗೋಪಾಲ್, ಸತ್ಯಜ್ಯೋತಿ ಗೋಪಾಲ್, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಜಂಟಿ ಆಡಳಿತಾಧಿಕಾರಿ ಸೌಮ್ಯ ಡಿ. ಪ್ರಭಾಕರ ಬೀರಯ್ಯ, ಸಂಯೋಜಕ ಜಿ.ಪಿ ಪರಮೇಶ್ವರಪ್ಪ, ಪ್ರಾಂಶುಪಾಲರಾದ ಶಾಮರಾಯ ಆಚಾರ್, ಮೃತ್ಯುಂಜಯ ಕಾನಿಟ್ಕರ್, ಉಪಪ್ರಾಂಶುಪಾಲ ಪ್ರಸನ್ನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



____________________________________________
ಪ್ರಶಾಂತಿ ಸೇವಾ ಟ್ರಸ್ಟ್ ಹಾಗು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ವತಿಯಿಂದ ನಿರಂತರವಾಗಿ ಯಾವುದೇ ಫಲಾಫೇಕ್ಷೆ ಇಲ್ಲದೆ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಅದರಲ್ಲೂ ಬಹುಮುಖ್ಯವಾಗಿ ಶಿಕ್ಷಣ, ಆರೋಗ್ಯ ಹಾಗು ಹಸಿದವರಿಗೆ ಅನ್ನ ನೀಡುವ ಅನ್ನದಾಸೋಹ ಕಾರ್ಯಗಳಿಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕೈಗೊಳ್ಳುತ್ತಿರುವ ಸೇವಾ ಕಾರ್ಯಗಳಿಗೆ ನೆರವಾಗಲು ಮುಂದೆ ಬರುವ ದಾನಿಗಳು, ಸಂಘ-ಸಂಸ್ಥೆಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಈ ನಿಟ್ಟಿನಲ್ಲಿ ಆರೋಗ್ಯ ಶಿಬಿರ ಸಹ ನಡೆದಿದ್ದು, ಶಿಬಿರದ ಯಶಸ್ವಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಶ್ರೀ ಸತ್ಯಸಾಯಿ ಬಾಬಾ ಅವರ ಕೃಪೆ ಇರಲಿ ಎಂದು ಪ್ರಾರ್ಥಿಸುತ್ತೇನೆ.
 - ಡಿ. ಪ್ರಭಾಕರ ಬೀರಯ್ಯ, 
ರಾಜ್ಯ ಸಂಯೋಜಕರು, 
ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು.