Tuesday, July 11, 2023

ಅರವಿಂದ ಪಟೇಲ್‌ ನಿಧನ


ಅರವಿಂದ ಪಟೇಲ್‌ 

    ಭದ್ರಾವತಿ, ಜು. ೧೧ : ನಗರದ ಜನ್ನಾಪುರ ನಿವಾಸಿ ಅರವಿಂದ ಪಟೇಲ್(೪೩) ಮಂಗಳವಾರ ನಿಧನ ಹೊಂದಿದರು.

   ಪತ್ನಿ, ಓರ್ವ ಪುತ್ರ ಇದ್ದರು. ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅರವಿಂದ ಪಟೇಲ್ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಜಿ ಜಿಲ್ಲಾ ಉಪಾಧ್ಯಕ್ಷೆ ಮಂಜುಳಾ ನಂಜುಂಡಪ್ಪನವರ ಪುತ್ರರಾಗಿದ್ದಾರೆ. ಇವರ ಅಂತ್ಯಕ್ರಿಯೆ ಮಧ್ಯಾಹ್ನ ಅವರ ತೋಟದಲ್ಲಿ ನೆರವೇರಿತು.

     ಇವರ ನಿಧನಕ್ಕೆ ಜೇಡಿಕಟ್ಟೆ ಶ್ರೀ ಮರುಳ ಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಜಿ. ಸುರೇಶಯ್ಯ, ಬಿಜೆಪಿ ಪಕ್ಷದ ಯುವ ಮುಖಂಡ ಮಂಗೋಟೆ ರುದ್ರೇಶ್, ಉದ್ಯಮಿ  ಬಿ. ಕೆ ಜಗನ್ನಾಥ್ ಹಾಗು ನಗರಸಭಾ ಸದಸ್ಯರುಗಳು ಸಂತಾಪ ಸೂಚಿಸಿದ್ದಾರೆ.

ಜು.16ರಂದು ಡಾ. ವಿಷ್ಣುವರ್ಧನ್ ಪ್ರಶಸ್ತಿ ಪ್ರದಾನ, ಸಂಗೀತ ನೃತ್ಯ ಸಂಭ್ರಮ

ಡಾ. ವಿಷ್ಣುವರ್ಧನ್‌ 
ಭದ್ರಾವತಿ, ಜು. 11: ಅಪೇಕ್ಷ ನೃತ್ಯ ಕಲಾವೃಂದದಿಂದ ಜು.16ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದೊಂದಿಗೆ ಡಾ. ವಿಷ್ಣುವರ್ಧನ್ ಸಂಗೀತ ನೃತ್ಯ ಸಂಭ್ರಮ,  ಡಾ. ವಿಷ್ಣುವರ್ಧನ್ ಪ್ರಶಸ್ತಿ ಹಾಗು ಅಪೇಕ್ಷ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
      ಸಿದ್ದಾರೂಢನಗರದ ಬಸವೇಶ್ವರ ಸಭಾಭವನದಲ್ಲಿ ಅಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಸಮಾರಂಭ ಶಾಸಕ ಬಿ.ಕೆ ಸಂಗಮೇಶ್ವರ ಉದ್ಘಾಟಿಸಲಿದ್ದು, ಅಪೇಕ್ಷ ನೃತ್ಯ ಕಲಾವೃಂದದ ಅಧ್ಯಕ್ಷೆ ಭಾರತಿ ಗೋವಿಂದಸ್ವಾಮಿ ಅಧ್ಯಕ್ಷತೆವಹಿಸಲಿದ್ದಾರೆ. ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷ ಸುಂದರ್ ರಾಜ್ ಉಪನ್ಯಾಸ ನೀಡಲಿದ್ದಾರೆ.
    ಅಪೇಕ್ಷ ನೃತ್ಯ ಕಲಾವೃಂದದಿಂದ ಕಾರ್ಯದರ್ಶಿ ಅಪೇಕ್ಷ ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಲಾಗಿದೆ.

Monday, July 10, 2023

ಮಣಿಪುರ, ಜು. ೧೦ : ಶಾಂತಿ ಮರುಸ್ಥಾಪನೆಗೆ ಪ್ರಧಾನಿ ಮಧ್ಯ ಪ್ರವೇಶಿಸಲು ಒತ್ತಾಯ

ಭದ್ರಾವತಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತೆಲುಗು ಕ್ರಿಶ್ಚಿಯನ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಕೆ. ಭಾಸ್ಕರ್‌ಬಾಬು ಮಾತನಾಡಿದರು.  
    ಭದ್ರಾವತಿ : ಮಣಿಪುರ ರಾಜ್ಯದಲ್ಲಿ ಉಂಟಾಗಿರುವ ಜನಾಂಗೀಯ ಘರ್ಷಣೆಯಿಂದಾಗಿ ವ್ಯಾಪಕ ಹಿಂಸಾಚಾರ ನಡೆಯುತ್ತಿದ್ದು, ನಾಗರಿಕ ಸಮಾಜ ವಿಶ್ವದ ಎದುರು ತಲೆ ತಗ್ಗಿಸುವಂತೆ ಮಾಡಿದೆ. ಕೇಂದ್ರ ಗೃಹ ಸಚಿವರು ಭೇಟಿ ನೀಡಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೂಡಲೇ ಮಧ್ಯ ಪ್ರವೇಶಿಸಿ ಶಾಂತಿ ಮರುಸ್ಥಾಪನೆಗೆ ಮುಂದಾಗುವಂತೆ ತೆಲುಗು ಕ್ರಿಶ್ಚಿಯನ್ ವೆಲ್‌ಫೇರ್ ಅಸೋಸಿಯೇಷನ್ ಒತ್ತಾಯಿಸಿದೆ.
    ಅಸೋಸಿಯೇಷನ್‌ ಅಧ್ಯಕ್ಷ ಜೆ.ಭಾಸ್ಕರ್‌ಬಾಬು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಮಾನವ ಹಕ್ಕುಗಳ ರಕ್ಷಣೆ ಮಾಡುವುದರೊಂದಿಗೆ ಶಾಂತಿ ನೆಲೆಸಲು ಶೀಘ್ರವಾಗಿ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿ, ರಾಷ್ಟ್ರಪತಿ-ಪ್ರಧಾನಮಂತ್ರಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದರು.
    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಸ್ಥಾಪಿಸಿ ಒಂದು ನೂರು ಕೋಟಿ ರು. ಅನುದಾನ ಬಜೆಟ್‌ನಲ್ಲಿ ಘೋಷಿಸಿರುವುದು ಸ್ವಾಗತಾರ್ಹವಾಗಿದ್ದು, ಅಲ್ಪಸಂಖ್ಯಾತರ ಆಯೋಗ ಹಾಗು ನಿಗಮದ ನಾಮಕರಣ ದಲ್ಲಿ ಕ್ರೈಸ್ತ ಸಮಾಜದವರನ್ನು ಮಾತ್ರ ಪರಿಗಣಿಸುವಂತೆ ಒತ್ತಾಯಿಸಿದರು.
    ಮಣಿಪುರದ ಘಟನೆಗೆ ಸಂಬಂಧಿಸಿದಂತೆ ಜು.11 ರಂದು ಕ್ರೈಸ್ತಸಮಾಜದ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜೆ.ಭಾಸ್ಕರ್ ಬಾಬು ಮನವಿ ಮಾಡಿದರು.
    ಪತ್ರಿಕಾಗೋಷ್ಠಿಯಲ್ಲಿ  ಜಾರ್ಜ್, ಆನಂದ್, ಗ್ರಾಬಿಯಲ್, ಪ್ರಕಾಶ್, ರಾಜು, ಮನೋಹರ್, ಆನಂದ್ ಇನ್ನಿತರರು ಉಪಸ್ಥಿತರಿದ್ದರು.

ಅಡಕೆ ತೋಟ ಅಕ್ರಮ ಖಾತೆ

ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಸಂಬಂಧವಿಲ್ಲದ ವ್ಯಕ್ತಿಗೆ ಅಕ್ರಮವಾಗಿ ಖಾತೆ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

    ಭದ್ರಾವತಿ, ಜು. 10:  ಸಂಬಂಧವಿಲ್ಲದ ವ್ಯಕ್ತಿಗೆ ಅಕ್ರಮವಾಗಿ ಖಾತೆ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

    ತಾಲೂಕಿನ ಹೊಳೆಹೊನ್ನೂರು ಹೋಬಳಿ, ಮಲ್ಲಿಗೇನಹಳ್ಳಿ ಗ್ರಾಮದ ಸ.ನಂ.31 ರಲ್ಲಿ ರೈತ ಲೋಕೇಶಪ್ಪ ಅವರ ಕುಟುಂಬಕ್ಕೆ ಸೇರಿದ ಸುಮಾರು 1-09 ಎಕರೆ ಅಡಕೆ ತೋಟವನ್ನು ಅಕ್ರಮವಾಗಿ ಸಂಬಂಧವಿಲ್ಲದ ವ್ಯಕ್ತಿಗೆ ಖಾತೆ ಮಾಡಿರುವ ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು ಸೇರಿದಂತೆ ಸಂಬಂಧಪಟ್ಟವರ ಮೇಲೆ ಸೂಕ್ತ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ  ಆಗ್ರಹಿಸಲಾಯಿತು.

    ಸಂಘದ ಅಧ್ಯಕ್ಷ ಎಚ್.ಪಿ.ಹಿರಿಯಣ್ಣಯ್ಯ, ಪ್ರಧಾನ ಕಾರ್ಯದರ್ಶಿ ರಾಮಚಂದ್ರರಾವ್ ಘೋರ್ಪಡೆ, ಪ್ರಮುಖರಾದ ಡಿ.ವಿ ವೀರೇಶ್, ಶರತ್ಚಂದ್ರ, ಚಂದ್ರಶೇಖರ್, ಮಂಜುನಾಥ್, ಕರಿಬಸಪ್ಪ, ಶಿವಣ್ಣ ಸೇರಿದಂತೆ ಉಪಸ್ಥಿತರಿದ್ದರು.

ಜೈನ ಮುನಿ ಹತ್ಯೆಗೆ ಖಂಡನೆ : ಮೌನ ಮೆರವಣಿಗೆ

ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ

ಬೆಳಗಾವಿ ಜಿಲ್ಲೆ ಚಿಕ್ಕೋಡಿ ಜೈನ ಧರ್ಮದ ಮುನಿ ಕಾಮಕುಮಾರನಂದಿ ಮಹಾರಾಜರ ಹತ್ಯೆ ಖಂಡಿಸಿ ಸೋಮವಾರ ಭದ್ರಾವತಿ ಹಳೆನಗರದ ಜೈನ ಮಂದಿರದಿಂದ ಬೆಳಗ್ಗೆ ಜೈನ ಸಮುದಾಯದವರು ಮೌನ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಭದ್ರಾವತಿ, ಜು. 10:  ಬೆಳಗಾವಿ ಜಿಲ್ಲೆ ಚಿಕ್ಕೋಡಿ ಜೈನ ಧರ್ಮದ ಮುನಿ ಕಾಮಕುಮಾರನಂದಿ ಮಹಾರಾಜರ ಹತ್ಯೆ ಖಂಡಿಸಿ ಸೋಮವಾರ ಹಳೆ ನಗರದ ಜೈನ ಮಂದಿರದಿಂದ ಬೆಳಗ್ಗೆ ಜೈನ ಸಮುದಾಯದವರು ಮೌನ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

      ಮಾಧವಚಾರ್ ವೃತ್ತದಿಂದ ರಂಗಪ್ಪ ವೃತ್ತ ಮೂಲಕ ತಹಸೀಲ್ದಾರ್ ಕಚೇರಿವರೆಗೂ ಮೌನ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಯಿತು.

     ಪ್ರಮುಖರು ಮಾತನಾಡಿ, ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು, ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸಬೇಕು. ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗಬೇಕು. ಮುಂದಿನ ದಿನಗಳಲ್ಲಿ ಇಂತಹ ದುಷ್ಕೃತ್ಯಗಳು ನಡೆಯದಂತೆ  ಎಚ್ಚರಿಕೆ ವಹಿಸಬೇಕು. ಅಲ್ಲದೆ ಶಾಂತಿ, ಸೌಹಾರ್ದತೆ ಹಾಗು ಅಹಿಂಸಾ ಮಾರ್ಗದಲ್ಲಿ ಸಾಗುತ್ತಿರುವ ಜೈನ ಸಮುದಾಯಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.

     ಮೌನ ಮೆರವಣಿಗೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್.ಎಸ್.ಎಸ್), ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದವು.

    ಜೈನ ಸಮಾಜದ ಅಧ್ಯಕ್ಷ ರತನ್ಚಂದ್ಜೈನ್, ಸಂಚಾಲಕರಾದ ಸಂಪತ್ರಾವ್ಬಾಂಟಿಯಾ, ಸಂದೇಶ್ಜೈನ್ಮೆಹ್ತಾ, ಭರತ್ಕುಮಾರ್, ರಾಹುಲ್ಜೈನ್, ಗೌತಮ್ಚಂದ್, ರಾಜ್ಕುಮಾರ್, ಪ್ರೇಮ್ಕುಮಾರ್, ಅನಿತಾ, ಕಾಂಚನಾ, ಲೇಖನಾ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Sunday, July 9, 2023

ಉಡಾನ್‌ಯೋಜನೆಯಿಂದಾಗಿ ದೇಶದ ಸರ್ವತೋಮುಖ ಅಭಿವೃದ್ಧಿ

ಮೋರ್ಚಾಗಳ ಸಂಯುಕ್ತ ಸಮಾವೇಶದಲ್ಲಿ ಸಂಸದ ಬಿ.ವೈ ರಾಘವೇಂದ್ರ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ  9ನೇ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಭದ್ರಾವತಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ʻಮೋರ್ಚಾಗಳ ಸಂಯುಕ್ತ ಸಮಾವೇಶʼ ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಿ ಮಾತನಾಡಿದರು.

 ಭದ್ರಾವತಿ, ಜು. ೧೦ : ಕೇಂದ್ರ ಸರ್ಕಾರದ ಉಡಾನ್‌ಯೋಜನೆ ಮಹತ್ವದ ಯೋಜನೆಯಾಗಿದ್ದು, ಇಂದು ಸಾಮಾನ್ಯ ಜನರು ಅತಿ ಕಡಿಮೆ ಖರ್ಚಿನಲ್ಲಿ ವಿಮಾನ ಪ್ರಯಾಣ ಮಾಡುವಂತಾಗಿದೆ  ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

   ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ  9ನೇ ವರ್ಷ ಪೂರೈಸಿದ ಹಿನ್ನಲೆಯಲ್ಲಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ʻಮೋರ್ಚಾಗಳ ಸಂಯುಕ್ತ ಸಮಾವೇಶʼ ಉದ್ಘಾಟಿಸಿ ಮಾತನಾಡಿದರು.

     ಉಡಾನ್‌ಯೋಜನೆಯಿಂದಾಗಿ ದೇಶ ಇಂದು ಸರ್ವತೋಮುಖ ಅಭಿವೃದ್ಧಿಯಲ್ಲಿ ಸಾಗುವಂತಾಗಿದೆ. ಸಣ್ಣ ಸಣ್ಣ ನಗರಗಳಲ್ಲೂ ಇಂದು ವಿಮಾನಯಾನ ಸಂಪರ್ಕ ಸಾಧಿಸುವಂತಾಗಿದೆ ಎಂದರು.

  ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗಿದ್ದು, ಜಿಲ್ಲೆ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾಗಿದೆ. ಅಲ್ಲದೆ ಕೈಗಾರಿಕೋದ್ಯಮ ಬೆಳವಣಿಗೆ ಹೊಂದಬೇಕಾಗಿದೆ. ಈ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಈಗಾಗಲೇ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.



   ಜಿಲ್ಲಾ ಅಭಿಯಾನ ಪ್ರಮುಖ ಅಶೋಕ್ ಮೂರ್ತಿ, ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಜಿಲ್ಲಾ ಕಾರ್ಯದರ್ಶಿ ಎಂ. ಪ್ರಭಾಕರ್, ಮಂಡಲ ಪ್ರದಾನ ಕಾರ್ಯದರ್ಶಿ ಚನ್ನೇಶ್ಹಿರಿಯ ಕಾರ್ಯಕರ್ತರಾದ ವಿಶ್ವನಾಥ ಕೋಠಿ. ಎಸ್.ಎನ್ ಬಾಲಕೃಷ್ಣ. ನಗರಸಭಾ ಸದಸ್ಯರಾದ ವಿ. ಕದಿರೇಶ್, ಶಶಿಕಲಾ ನಾರಾಯಣಪ್ಪ. ಅನುಪಮ ಚನ್ನೇಶ್. ಅನಿತಾ ಮಲ್ಲೇಶ್. ಜಿ. ಆನಂದ್ ಕುಮಾರ್, ಎಂ. ಮಂಜುನಾಥ್. ಎಂ.ಎಸ್‌ಸುರೇಶಪ್ಪ. ರಾಮಲಿಂಗಯ್ಯ. ವಿಶ್ವನಾಥ್ ರಾವ್. ಕರಿ ಗೌಡ, ಮೋರ್ಚಾ ಅಧ್ಯಕ್ಷರುಗಳು, ಮುಖಂಡರು, ಜಿಲ್ಲಾ ಪ್ರಮುಖರಾದ ಎಂ.ಜೆ ಸುಬ್ರಮಣಿ, ನಾಗರಾಜ್ ಅಂಬೋರೆ. ರೇಖಾ ಪದ್ಮಾವತಿ, ಧನುಷ್, ಚಂದ್ರಪ್ಪ, ಕೃಷ್ಣಮೂರ್ತಿ, ಎಂ ಶೇಖರಪ್ಪ, ಇಮ್ರಾನ್,  ಉಮಾವತಿ, ಲೋಲಾಕ್ಷಮ್ಮ. ಮೋರ್ಚಾ ಪದಾಧಿಕಾರಿಗಳು ಮತ್ತು ಪ್ರಮುಖ ಕಾರ್ಯಕರ್ತರು ಪಾಲ್ಗೊಂಡಿದ್ದರು.

ರಾಜ್ಯಮಟ್ಟದ ಉಚಿತ ಸಾಮೂಹಿಕ ವಿವಾಹ


    ಭದ್ರಾವತಿ, ಜು. ೯: ಕರ್ನಾಟಕ ರಾಜ್ಯ ಮಾದಿಗ ಸಮಾಜದ ವತಿಯಿಂದ ರಾಜ್ಯಮಟ್ಟದ ಉಚಿತ ಸಾಮೂಹಿಕ ವಿವಾಹ ನವಂಬರ್‌ ತಿಂಗಳಿನಲ್ಲಿ ಹಮ್ಮಿಕೊಳ್ಳಲಾಗಿದೆ.
    ಎಲ್ಲಾ ಧರ್ಮ, ಜಾತಿಯ ೧೮ ವರ್ಷ ಮೇಲ್ಪಟ್ಟ ವಧು ಮತ್ತು ೨೧ ಮೇಲ್ಪಟ್ಟ ವರ ಸಾಮೂಹಿಕ ವಿವಾಹದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
    ಆಸಕ್ತರು ಆಧಾರ್‌ ಕಾಡ್‌ ಮತ್ತು ಟಿಸಿ ಅಥವಾ ಜನನ ಪ್ರಮಾಣ ಪತ್ರ ಹಾಗು ಜಾತಿ ಪ್ರಮಾಣ ಪತ್ರ ನಕಲು ದಾಖಲಾತಿಗಳನ್ನು ನೀಡತಕ್ಕದ್ದು, ಎನ್‌ಟಿಬಿ ರಸ್ತೆ, ಜನ್ನಾಪುರ, ಭದ್ರಾವತಿ-೫೭೭೩೦೧ ವಿಳಾಸಕ್ಕೆ ತಲುಪಿಸತಕ್ಕದ್ದು, ಹೆಚ್ಚಿನ ಮಾಹಿತಿಗೆ  ಎಸ್.‌ ಮಂಜುನಾಥ್‌, ಮೊ: ೯೪೦೦೩೭೭೫೮, ಸಿ ಪ್ರಭಾಕರ್‌ ಮೊ: ೮೨೯೭೩೯೪೬೮೧ ಸಂಖ್ಯೆಗೆ ಕರೆ ಮಾಡಬಹುದಾಗಿದೆ.