Saturday, July 29, 2023

ವಿಐಎಸ್‌ಎಲ್‌ ಕಾರ್ಖಾನೆ ಮುಚ್ಚುವ ಆದೇಶ ಪುನರ್‌ ಪರಿಶೀಲಿಸಿ

ಮುಖ್ಯಮಂತ್ರಿಯಿಂದ ಕೇಂದ್ರ ಉಕ್ಕು ಸಚಿವರಿಗೆ ಪತ್ರ

ಭದ್ರಾವತಿ ವಿಐಎಸ್‌ಎಲ್‌ ಕಾರ್ಖಾನೆ
    ಭದ್ರಾವತಿ, ಜು. ೨೯: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶ ಪುನಃ ಪರಿಶೀಲನೆ ನಡೆಸುವಂತೆ ಕೇಂದ್ರ ಉಕ್ಕು ಸಚಿವರಿಗೆ ರಾಜ್ಯ ಸರ್ಕಾರ ಮನವಿ ಮಾಡಿದೆ.
    ಈ ಕುರಿತು ಕೇಂದ್ರ ಸಚಿವ  ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜು.೨೭ರಂದು ಪತ್ರ ಬರೆದಿದ್ದು, ಭದ್ರಾವತಿ ಕ್ಷೇತ್ರದ ಜನರು ವಿಐಎಸ್‌ಎಲ್‌ ಕಾರ್ಖಾನೆಯನ್ನು ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲದೆ ಈ  ಕಾರ್ಖಾನೆ ಕರ್ನಾಟಕ ರಾಜ್ಯದ ಇತಿಹಾಸದ ಭವ್ಯ ಪರಂಪರೆಯಾಗಿದೆ. ಭಾರತರತ್ನ, ಶ್ರೇಷ್ಠ ತಂತ್ರಜ್ಞ ಸರ್‌.ಎಂ ವಿಶ್ವೇಶ್ವರಾಯ ಅವರಿಗೆ ಗೌರವ ಸಲ್ಲಿಸಬೇಕಾದರೆ ಈ ಕಾರ್ಖಾನೆ ಉಳಿಯಬೇಕಾಗಿದೆ.  ಈ ಹಿಂದೆ ೨೦೧೮ರಲ್ಲಿ ರಾಜ್ಯ ಸರ್ಕಾರ ೧೫೦ ಎಕರೆ ಕಬ್ಬಿಣ ಅದಿರು ಗಣಿ ಕಾರ್ಖಾನೆಗೆ  ಮಂಜೂರಾತಿ ಮಾಡಿದ್ದು, ಈಗಾಗಲೇ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯಗೊಂಡಿದೆ. ೨೦೨೪ರಿಂದ ಗಣಿಯಲ್ಲಿ ಅದಿರು ಉತ್ಪಾದನೆ ಆರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚದೆ ಮುನ್ನಡೆಸಿಕೊಂಡು ಹೋಗುವ ಸಂಬಂಧ  ಪುನರ್‌ ಪರಿಶೀಲನೆ ಮಾಡುವಂತೆ ಮನವರಿಕೆ ಮಾಡಿದ್ದಾರೆ.
    ಮುಖ್ಯಮಂತ್ರಿಗಳು ಕೇಂದ್ರ ಸಚಿವರಿಗೆ ಬರೆದಿರುವ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಕಾರ್ಮಿಕರು ಮುಂದಿನ ಬೆಳವಣಿಗೆಯನ್ನುಎದುರು ನೋಡುತ್ತಿದ್ದಾರೆ. ಕಾರ್ಖಾನೆ ಮುಂಭಾಗ ಕಳೆದ ಸುಮಾರು ೬ ತಿಂಗಳಿನಿಂದ ಗುತ್ತಿಗೆ ಕಾರ್ಮಿಕರು ಹೋರಾಟ ನಡೆಸುತ್ತಿದ್ದು, ಹೋರಾಟಕ್ಕೆ ಇದುವರೆಗೂ ಯಾವುದೇ ಪ್ರತಿಫಲ ಲಭಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.

ತಹಸೀಲ್ದಾರ್‌ ಟಿ.ಜಿ ಸುರೇಶ್‌ ಆಚಾರ್‌ ವರ್ಗಾವಣೆ

ಟಿ.ಜಿ ಸುರೇಶ್‌ ಆಚಾರ್‌
    ಭದ್ರಾವತಿ, ಜು. ೨೯ : ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಹಸೀಲ್ದಾರ್‌ ಗ್ರೇಡ್‌-೧ ಹುದ್ದೆಗೆ ವರ್ಗಾವಣೆಯಾಗಿ ಬಂದಿದ್ದ ಟಿ.ಜಿ ಸುರೇಶ್‌ ಆಚಾರ್‌ ಅವರನ್ನು ಪುನಃ ವರ್ಗಾವಣೆಗೊಳಿಸಲಾಗಿದೆ.
    ಈ ಹಿಂದಿನ ತಹಸೀಲ್ದಾರ್‌ ಆರ್‌. ಪ್ರದೀಪ್‌ ಅವರ ಸ್ಥಳಕ್ಕೆ ವರ್ಗಾವಣೆಗೊಂಡು ಬಂದಿದ್ದ ಸುರೇಶ್‌ ಆಚಾರ್‌ ಅವರನ್ನು ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನ ತಹಸೀಲ್ದಾರ್‌ ಗ್ರೇಡ್‌-೧ ಹುದ್ದೆಗೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಇವರಿಂದ ತೆರವಾಗಿರುವ ಹುದ್ದೆಗೆ ಇದುವರೆಗೂ ಯಾರನ್ನು ನಿಯೋಜನೆಗೊಳಿಸಿಲ್ಲ.

Friday, July 28, 2023

ಜು.೨೯ರಂದು ʻಭಾರತ ದರ್ಶನʼ ಉಪನ್ಯಾಸ ಕಾರ್ಯಕ್ರಮ

    ಭದ್ರಾವತಿ, ಜು. ೨೮: ನ್ಯೂಕಾಲೋನಿ ತರುಣ ಭಾರತಿ ವಿದ್ಯಾಕೇಂದ್ರದ ವತಿಯಿಂದ ಕೇಶವಪುರ ಬಡಾವಣೆಯಲ್ಲಿರುವ ತರುಣ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜು.೨೯ರಂದು ೧೨.೧೫ಕ್ಕೆ ʻಭಾರತ ದರ್ಶನʼ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಮತ್ತೂರಿನ ಸಾಮಾಜಿಕ ಕಾರ್ಯಕರ್ತ ಟಿ.ಎನ್‌ ಸ್ವಾಮಿ ಉಪನ್ಯಾಸ ನೀಡಲಿದ್ದು, ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.  

ಇಸ್ಪೀಟ್‌ ಅಡ್ಡೆ ಮೇಲೆ ದಾಳಿ

    ಭದ್ರಾವತಿ, ಜು. ೨೮: ನ್ಯೂಟೌನ್‌ ಠಾಣೆ ಪೊಲೀಸರು ಇಸ್ಪೀಟ್‌ ಅಡ್ಡೆಯೊಂದರ ಮೇಲೆ ದಾಳಿ ನಡೆಸಿ ಘಟನೆ ಗುರುವಾರ ನಡೆದಿದೆ.
    ಜಿಂಕ್ ಲೈನ್ ಸಾರ್ವಜನಿಕ ಸಮುದಾಯ ಭವನದ ಪಕ್ಕದಲ್ಲಿ 5-6 ಜನರ ಗುಂಪೊಂದು ಇಸ್ಪೀಟ್‌ ಜೂಜಾಟದಲ್ಲಿ ತೊಡಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಲಕ್ಕವಳ್ಳಿ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹಿನ್ನಲೆಯಲ್ಲಿ ಔತಣಕೂಟ

೮ ಜನ ಗ್ರಾ.ಪಂ ಸದಸ್ಯರ ಮೇಲೆ ಹಲ್ಲೆ ಆರೋಪ: ಇಬ್ಬರ ಸೆರೆ


    ಭದ್ರಾವತಿ, ಜು. ೨೮:  ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹಿನ್ನಲೆಯಲ್ಲಿ ಏರ್ಪಡಿಸಲಾಗಿದ್ದ  ಔತಣ ಕೂಟದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು,  ಈ ಸಂಬಂಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ತಾಲೂಕಿನ ಶಂಕರಘಟ್ಟದ ಕುವೆಂಪು ನಗರ ಬಡಾವಣೆಯ ಹೋಟೆಲ್ ಒಂದರಲ್ಲಿ ಏರ್ಪಡಿಸಲಾಗಿದ್ದ ಔತಣಕೂಟದಲ್ಲಿ 8 ಜನ ಗ್ರಾಮಪಂಚಾಯಿತಿ ಸದಸ್ಯರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.
    ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ರವಿ ಕಿಶೋರ್ ಬೆಂಬಲಿತರನ್ನು ಕಡೆಗಣಿಸಿರುವ ಹಿನ್ನಲೆಯಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ನಡುವೆ ಗ್ರಾಮ ಪಂಚಾಯಿತಿ ಸದಸ್ಯರ ಮೇಲೆ ಹಲ್ಲೆ ನಡೆಸಿರುವ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.
    ಗ್ರಾಮ ಪಂಚಾಯಿತಿ ಸದಸ್ಯರಾದ ಧನಪಾಲ್, ದಶರಥ್, ಶ್ರೀಧರ್, ವೆಂಕಟರಮಣ, ಮಂಜುನಾಥ್ ಸೇರಿದಂತೆ ಇನ್ನಿತರರು ಹಲ್ಲೆಗೊಳಗಾಗಿದ್ದಾರೆ. ರವಿಕಿಶೋರ್, ಆಕಾಶ್, ಪವನ್, ಕಿಶೋರ್, ಕಾರ್ತಿಕ್ ಮತ್ತು  ಡ್ರೈವರ್ ಸಾದಿಕ್ ವಿರುದ್ಧ ಪ್ರಕರಣ ದಾಖಲಾಗಿದೆ.  ರವಿಕಿಶೋರ್ ಮತ್ತು ಆಕಾಶ್  ಇಬ್ಬರನ್ನು ಬಂಧಿಸಲಾಗಿದ್ದು, ಉಳಿದ ಮೂವರು ನಾಪತ್ತೆಯಾಗಿದ್ದಾರೆ.

ಬಿ.ಎ ಪದವಿಯಲ್ಲಿ ಎಚ್.ಎಂ ಪುಷ್ಪಾ ಪ್ರಥಮ ರ‍್ಯಾಂಕ್

ಎಚ್.ಎಂ ಪುಷ್ಪಾ
    ಭದ್ರಾವತಿ, ಜು. ೨೮: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉದ್ಯೋಗಿ, ಲ್ಯಾಬೋರೇಟರೀಸ್ ವಿಭಾಗದ ಸೂಪರ್‌ವೈಸರ್ ಎಲ್‌. ಮಧುಕುಮಾರ್‌ರವರ ಪತ್ನಿ  ಎಚ್.ಎಂ. ಪುಷ್ಪಾರವರು ಬಿ.ಎ ಪದವಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾರೆ.
    ಕುವೆಂಪು ವಿಶ್ವವಿದ್ಯಾಲಯ 2022ರ ನವೆಂಬರ್‌ನಲ್ಲಿ ನಡೆಸಿದ ಬ್ಯಾಚುಲರ್ ಆಫ್ ಆರ್ಟ್ಸ್‌
ಪರೀಕ್ಷೆಯಲ್ಲಿ ಪುಷ್ಪಾರವರು ದೂರ ಶಿಕ್ಷಣದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.
    ಇತ್ತೀಚೆಗೆ ನಡೆದ ವಿಶ್ವ ವಿದ್ಯಾಲಯದ 33ನೇ ಘಟಿಕೋತ್ಸವದಲ್ಲಿ ಇವರಿಗೆ ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು. ಪುಷ್ಪಾರವರು ಓದು, ಬರವಣೆಗೆ, ನೃತ್ಯ, ಸೃಜನಾತ್ಮಕ ಕಲೆ ಇತ್ಯಾದಿ ಹವ್ಯಾಸಗಳನ್ನು ಹೊಂದಿದ್ದಾರೆ. ಭವಿಷ್ಯದಲ್ಲಿ ಶಿಕಕಿಯಾಗುವ ಹಂಬಲ ಇವರದ್ದಾಗಿದೆ. ವಿಐಎಸ್‌ಎಲ್ ಸಮುದಾಯ ಇವರ ಮುಂದಿನ ಎಲ್ಲಾ ಪ್ರಯತ್ನಗಳಿಗೆ ಶುಭ ಹಾರೈಸಿದೆ.

ಅಪ್ಪಾಜಿ ಶಿಷ್ಯ ಎಸ್.‌ ಕುಮಾರ್‌ ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

ಭದ್ರಾವತಿ ಬಿಜೆಪಿ ಮುಖಂಡ ಎಸ್.‌ ಕುಮಾರ್‌ರವರನ್ನು ನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ಶುಕ್ರವಾರ ನೇಮಕಗೊಳಿಸಲಾಗಿದೆ.
    ಭದ್ರಾವತಿ, ಜು. ೨೮: ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರೊಂದಿಗೆ  ಬಹುಕಾಲದವರೆಗೆ ರಾಜಕೀಯ ಶಿಷ್ಯರಾಗಿ ಗುರುತಿಸಿಕೊಂಡಿದ್ದ, ಈ ಬಾರಿ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಬಿಜೆಪಿ ಮುಖಂಡ ಎಸ್.‌ ಕುಮಾರ್‌ರವರನ್ನು ಇದೀಗ ನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ನೇಮಕಗೊಳಿಸಲಾಗಿದೆ.
    ಈ ಕುರಿತು ಶುಕ್ರವಾರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಜಿಲ್ಲಾಧ್ಯಕ್ಷ ಎಚ್.ಎಸ್‌ ಸುಂದರೇಶ್‌ರವರು ಕೆಪಿಸಿಸಿ ಆದೇಶದ ಅನ್ವಯ ನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರನ್ನಾಗಿ ನೇಮಕಗೊಳಿಸಿ ಆದೇಶ ಪತ್ರ ಹೊರಡಿಸಿದ್ದಾರೆ.
    ಎಸ್.‌ ಕುಮಾರ್‌  ಮೂಲತಃ ಎಂ.ಜೆ ಅಪ್ಪಾಜಿಯವರ ಶಿಷ್ಯರಾಗಿ ರಾಜಕೀಯ ಪ್ರವೇಶಿಸುವ ಮೂಲಕ ಮೊದಲ ಬಾರಿಗೆ ಮಾವಿನಕೆರೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಅಧ್ಯಕ್ಷರಾಗಿದ್ದರು. ನಂತರ ಇದೆ ಕ್ಷೇತ್ರದಿಂದ ತಾಲೂಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಅಧ್ಯಕ್ಷರಾಗಿದ್ದರು. ನಂತರ  ಇದೆ ಕ್ಷೇತ್ರದಿಂದ ೨ ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಒಂದು ಬಾರಿ ಶಿಕ್ಷಣ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ಅಲ್ಲದೆ ಇವರ ಪತ್ನಿ ಜ್ಯೋತಿ ಸಹ ೨ ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಒಂದು ಬಾರಿ ಉಪಾಧ್ಯಕ್ಷರಾಗಿ, ಮತ್ತೊಂದು ಬಾರಿ ಅಧ್ಯಕ್ಷರಾಗಿದ್ದರು. ಎಂ.ಜೆ ಅಪ್ಪಾಜಿ ನಿಧನ ಹೊಂದಿದ ನಂತರ ಜೆಡಿಎಸ್‌ ಪಕ್ಷ ತೊರೆದು ಸಂಸದ ಬಿ.ವೈ ರಾಘವೇಂದ್ರ ಅವರೊಂದಿಗೆ ಗುರುತಿಸಿಕೊಂಡು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.
    ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡು ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಗೆಲುವಿಗೆ ಕಾರಣರಾಗಿದ್ದರು. ಇದೀಗ ನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ.
    ಇದುವರೆಗೂ ನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿದ್ದ ನ್ಯಾಯವಾದಿ ಟಿ. ಚಂದ್ರೇಗೌಡ ಅವರನ್ನು ಏಕಾಏಕಿ ಕೈ ಬಿಡಲಾಗಿದೆ.