Saturday, August 5, 2023

ಪ್ರಾಚಾರ್ಯ ವೈ.ಡಿ ಹಿರಿಯಣ್ಣ ವಯೋನಿವೃತ್ತಿ : ಸನ್ಮಾನ

ಭದ್ರಾವತಿ ಹಳೇನಗರದ ತರೀಕೆರೆ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವೈ.ಡಿ ಹಿರಿಯಣ್ಣ ವಯೋನಿವೃತ್ತಿ  ಹೊಂದಿದ್ದು, ಇವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.  
    ಭದ್ರಾವತಿ, ಆ. ೫ : ಹಳೇನಗರದ ತರೀಕೆರೆ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವೈ.ಡಿ ಹಿರಿಯಣ್ಣ ವಯೋನಿವೃತ್ತಿ  ಹೊಂದಿದ್ದು, ಇವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.  
    ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಜಿಲ್ಲಾ ಉಪನಿರ್ದೇಶಕರ ನೇತೃತ್ವದಲ್ಲಿ ವೈ.ಡಿ ಹಿರಿಯಣ್ಣ ದಂಪತಿಯನ್ನು ಸನ್ಮಾನಿಸುವ ಮೂಲಕ ಅವರ ವೃತ್ತಿ ಸೇವೆಯನ್ನು ಸ್ಮರಿಸಲಾಯಿತು.
ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಯ ಪ್ರಾಚಾರ್ಯರು, ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿಯವರು, ಕಾಲೇಜು ಅಭಿವೃದ್ಧಿ ಸಮಿತಿ  ಸದಸ್ಯರು, ತಾಲೂಕು ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
,     ಕಾಲೇಜಿನ ಹಿರಿಯ ಉಪನ್ಯಾಸಕ ಎಚ್.ಬಿ ಪ್ರಕಾಶ್ ಅವರನ್ನು ಪ್ರಭಾರ ಪ್ರಾಚಾರ್ಯರ ಹುದ್ದೆಗೆ ನಿಯೋಜನೆ ಗೊಳಿಸಲಾಗಿದೆ.

ಅನಂತರಾಮ ನಿಧನ

ಅನಂತರಾಮ  
    ಭದ್ರಾವತಿ, ಆ. ೫: ನಗರದ ಮೈಸೂರು ಕಾಗದ ಕಾರ್ಖಾನೆ ನಗರಾಡಳಿತ ನೀರು ಸರಬರಾಜು ಇಲಾಖೆಯಲ್ಲಿ ಫ್ಲಂಬರ್‌ಉದ್ಯೋಗಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದ ಅನಂತರಾಮ(೬೭) ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದರು. ಅನಂತರಾಮ ಅವರು ನಿವೃತ್ತಿ ನಂತರ ಬೆಂಗಳೂರಿನಲ್ಲಿ ವಾಸವಾಗಿದ್ದರು. ಶುಕ್ರವಾರ ಸಂಜೆ ಹೃದಯಾಘಾತದಿಂದ ನಿಧನ ಹೊಂದಿದರು. ಇವರ ನಿಧನಕ್ಕೆ ಎಂಪಿಎಂ ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ಎಸ್. ಚಂದ್ರಶೇಖರ್‌ ಸೇರಿದಂತೆ ಕಾರ್ಮಿಕ ವರ್ಗದವರು ಸಂತಾಪ ಸೂಚಿಸಿದ್ದಾರೆ.

ಮುಜರಾಯಿ ಅರ್ಚಕರ ಸಂಘದ ಅಧ್ಯಕ್ಷರಾಗಿ ಬದರಿನಾರಾಯಣ ನೇಮಕ

ಎಚ್.ಎಸ್‌ ಬದರಿನಾರಾಯಣ
    ಭದ್ರಾವತಿ, ಆ. ೫ : ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ-ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ವತಿಯಿಂದ ತಾಲೂಕು ಮುಜರಾಯಿ ಅರ್ಚಕರ ಸಂಘಕ್ಕೆ ಅಧ್ಯಕ್ಷರಾಗಿ ಎಚ್.ಎಸ್‌ ಬದರಿನಾರಾಯಣ ನೇಮಕ ಗೊಂಡಿದ್ದಾರೆ.
    ಒಕ್ಕೂಟದ ರಾಜ್ಯಾಧ್ಯಕ್ಷ, ಶಾಸಕ ದಿನೇಶ್‌ ಗುಂಡೂರಾವ್‌ ೫ ವರ್ಷಗಳ ಅವಧಿಗೆ ಎಚ್.ಎಸ್‌ ಬದರಿನಾರಾಯಣ ಹಾಗು ಕಾರ್ಯದರ್ಶಿಯಾಗಿ ಎಂ. ಮಂಜುನಾಥ್‌  ನಾಗತಿ ಬೆಳಗಲು ಅವರನ್ನು  ನೇಮಕಾತಿಗೊಳಿಸಿ ಕೇಂದ್ರ ಸಮಿತಿಯ ಎಲ್ಲಾ ಆದೇಶಗಳನ್ನು ಪರಿಪಾಲಿಸಿಕೊಂಡು ಬರುವ ಜೊತೆಗೆ ಸಕಾಲದಲ್ಲಿ ಸಂಘದ ವರದಿಗಳನ್ನು ನೀಡುವಂತೆ ಕೋರಿದ್ದಾರೆ.


ಎಂ. ಮಂಜುನಾಥ್‌ ನಾಗತಿ ಬೆಳಗಲು
    ನೇಮಕಗೊಳ್ಳಲು ಕಾರಣಕರ್ತರಾದ ಒಕ್ಕೂಟದ ರಾಜ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌,  ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್‌ ದೀಕ್ಷಿತ್‌ ಮತ್ತು ಒಕ್ಕೂಟದ ಜಿಲ್ಲಾಧ್ಯಕ್ಷ ಮಿಥುನ್‌ ಅಯ್ಯಂಗಾರ್‌ ಅವರಿಗೆ ನೂತನ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಕೃತಜ್ಞತೆ ಸಲ್ಲಿಸಿದ್ದಾರೆ.

Friday, August 4, 2023

ಆ.೬ರಂದು ವಿದ್ಯುತ್‌ ವ್ಯತ್ಯಯ

    ಭದ್ರಾವತಿ, ಆ. ೪ :  ನಗರಸಭೆ  ಹಳೇನಗರ ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಆ.೬ರಂದು ವಿದ್ಯುತ್‌ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.
    ಸಿ.ಎನ್ ರಸ್ತೆ, ಕನಕ ಮಂಟಪ ರಸ್ತೆ, ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ ರಸ್ತೆ(ಎನ್.ಎಸ್.ಟಿ ರಸ್ತೆ), ಬಸವೇಶ್ವರ ವೃತ್ತ, ಉಪ್ಪಾರ ಬೀದಿ ಸೇರಿದಂತೆ ಇನ್ನಿತರ ಭಾಗಗಳಲ್ಲಿ ನಗರಸಭೆ ವತಿಯಿಂದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ  ಆ.೬ ರಂದು ಭಾನುವಾರ ಬೆಳಿಗ್ಗೆ ೧೦
ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪೌರಾಯುಕ್ತ ಮನುಕುಮಾರ್‌ ತಿಳಿಸಿದ್ದಾರೆ.  

ಆಡಿ ಕೃತ್ತಿಕೆ ಜಾತಾ ಮಹೋತ್ಸವಕ್ಕೆ ಚಾಲನೆ

ಭದ್ರಾವತಿ : ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಆಡಿ ಕೃತ್ತಿಕೆ ಜಾತ್ರಾ ಮಹೋತ್ಸವಕ್ಕೆ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಯಿತು.
    ಭದ್ರಾವತಿ, ಆ. ೪ : ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಆಡಿ ಕೃತ್ತಿಕೆ ಜಾತ್ರಾ ಮಹೋತ್ಸವಕ್ಕೆ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಯಿತು.
    ಪ್ರತಿ ವರ್ಷದಂತೆ ಈ ಬಾರಿ ಸಹ ಆಡಿ ಕೃತಿಕೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಶ್ರೀ ಕ್ಷೇತ್ರದ ಶ್ರೀ ಮುರುಗೇಶ್‌ ಸ್ವಾಮೀಜಿ ನೇತೃತ್ವದಲ್ಲಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಆ.೮ರಂದು ಭರಣಿ ಕಾವಡಿ ಉತ್ಸವ ಮತ್ತು  ೯ರಂದು ಆಡಿ ಕೃತಿಕೆ ಜಾತ್ರೆ ನಡೆಯಲಿದೆ.
    ವಿಶ್ವ ಹಿಂದೂ ಪರಿಷತ್‌ ದಕ್ಷಿಣ ಪ್ರಾಂತೀಯ ಉಪಾಧ್ಯಕ್ಷ ಹಾ. ರಾಮಪ್ಪ, ನ್ಯೂಟೌನ್‌ ಮಾರಿಯಮ್ಮ ದೇವಸ್ಥಾನದ ಪಾರ್ಥಿಬ ಕುಮಾರ್‌, ತಮಿಳು ಸಮಾಜದ ಅಧ್ಯಕ್ಷ ರವಿಕುಮಾರ್‌, ಪ್ರಮುಖರಾದ  ಚಂದ್ರಘೋಷಣ್‌, ಕರುಣಾಮೂರ್ತಿ, ಮಂಜುನಾಥ್‌, ತಿರುಮೂರ್ತಿ, ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರುಗಳು, ಭದ್ರಗಿರಿ ಸೇವಾ ಟ್ರಸ್ಟ್‌ ಪದಾಧಿಕಾರಿಗಳು ಹಾಗು ಭಕ್ತ ವೃಂದದವರು ಪಾಲ್ಗೊಂಡಿದ್ದರು.

ಜೀವನದಲ್ಲಿಇತಿಮಿತಿಗಳನ್ನು ಅರಿತು ಯಶಸ್ಸು ಕಂಡುಕೊಳ್ಳಿ

 

ಭದ್ರಾವತಿ ಹೊಸಮನೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ದೈಹಿಕ ಶಿಕ್ಷಣ ವಿಭಾಗ ಮತ್ತು ಐಕ್ಯುಎಸಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೂನಿಕ್ವೆ ಫ್ಯೂಚರ್‌ ಆಫ್‌ ಹ್ಯೂಮನ್‌ ಬೀಯಿಂಗ್ಸ್‌ (Unique Features of Human Beings) ಎಂಬ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಆಯನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ  ದೈಹಿಕ ಶಿಕ್ಷಣ ನಿರ್ದೇಶಕ ಡಾ. ರೋಹನ್ ಡಿಕಾಸ್ಟ  ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಆ. ೪ :  ಭೂಮಿ ಮೇಲೆ ಪ್ರತಿಯೊಂದು ಜೀವಿಯು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದ್ದು, ಅನನ್ಯ ಗುಣಗಳನ್ನು ಹೊಂದಿರುತ್ತದೆ.  ತನ್ನ ಇತಿಮಿತಿಗಳನ್ನು ಅರಿತು ಅದರಂತೆ ಜೀವನದಲ್ಲಿ ಯಶಸ್ಸನ್ನು ಕಾಣಬೇಕು. ತನ್ನಂತೆ ಇತರರನ್ನು ಬದುಕಲು ಬಿಡಬೇಕು ಎಂದು ಆಯನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ  ದೈಹಿಕ ಶಿಕ್ಷಣ ನಿರ್ದೇಶಕ ಡಾ. ರೋಹನ್ ಡಿಕಾಸ್ಟ ಹೇಳಿದರು.
    ಅವರು ನಗರದ ಹೊಸಮನೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ದೈಹಿಕ ಶಿಕ್ಷಣ ವಿಭಾಗ ಮತ್ತು ಐಕ್ಯುಎಸಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೂನಿಕ್ವೆ ಫ್ಯೂಚರ್‌ ಆಫ್‌ ಹ್ಯೂಮನ್‌ ಬೀಯಿಂಗ್ಸ್‌ (Unique Features of Human Beings) ಎಂಬ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ  ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
    ಕಾಲೇಜಿನ  ದೈಹಿಕ ಶಿಕ್ಷಣ ನಿರ್ದೇಶಕ ಎಂ.ಡಿ ವಿಶ್ವನಾಥ್  ಪ್ರಾಸ್ತಾವಿಕ ನುಡಿಗಳನ್ನಾಡಿ, ಮಾನವ ತನ್ನ ಸುತ್ತಲಿನ ಜೀವಿಗಳಿಂದ ಕಲಿಯಬೇಕಾದ ವಿಶಿಷ್ಟ ಗುಣಗಳ ಕುರಿತು ವಿವರಿಸಿದರು.
    ಆಶಯ ನುಡಿಗಳನ್ನಾಡಿದ ಐಕ್ಯೂಎಸಿ ಸಂಚಾಲಕ ಡಾ. ಟಿ. ಪ್ರಸನ್ನ, ನಮ್ಮ ಸಾಮರ್ಥ್ಯದಲ್ಲಿ ನಮಗೆ ನಂಬಿಕೆ ಇರಬೇಕು. ಆತ್ಮವಿಶ್ವಾಸ ಬೆಳೆಸಿಕೊಂಡು ನಮಗೆ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸರ್ವತೋಮುಖ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಸಕಲೇಶ್ ಅಧ್ಯಕ್ಷತೆ ವಹಿಸಿದ್ದರು. ಅಪೂರ್ವ  ಪ್ರಾರ್ಥಿಸಿ,     ರೇವತಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ವೇದಿಕೆ ಸಂಚಾಲಕ ಎನ್. ಕುಮಾರ್‌  ವಂದಿಸಿದರು.
    ಕಾಲೇಜಿನ ಅಧ್ಯಾಪಕ, ಅಧ್ಯಾಪಕೇತರ  ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಸಮಾರು  ೮೦ಕ್ಕೂ  ಅಧಿಕ  ವಿದ್ಯಾರ್ಥಿಗಳು ಪಾಲ್ಗೊಂಡು  ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

ಬಸ್-ಟ್ಯಾಕ್ಸಿ ಅಪಘಾತ : ತಪ್ಪಿದ ಅನಾಹುತ

ಶಿವಮೊಗ್ಗ-ಭದ್ರಾವತಿ ನಡುವಿನ 206 ಹೆದ್ದಾರಿಯಲ್ಲಿ ಗುರುವಾರ ರಾತ್ರಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಟ್ಯಾಕ್ಸಿ ನಡುವೆ ಅಪಘಾತ ಸಂಭವಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
    ಭದ್ರಾವತಿ, ಆ. ೪: ಶಿವಮೊಗ್ಗ-ಭದ್ರಾವತಿ ನಡುವಿನ 206 ಹೆದ್ದಾರಿಯಲ್ಲಿ ಗುರುವಾರ ರಾತ್ರಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಟ್ಯಾಕ್ಸಿ ನಡುವೆ ಅಪಘಾತ ಸಂಭವಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
    ಜೈನ್ ಪಬ್ಲಿಕ್ ಶಾಲೆಯ ಬಳಿಯಲ್ಲಿ ಅಪಘಾತ ಸಂಭವಿಸಿದ್ದು, ಮೈಸೂರಿನಿಂದ ಶಿವಮೊಗ್ಗ ತೆರಳುತ್ತಿದ್ದ ಕೆಎಸ್ಆರ್‌ಟಿಸಿ  ಬಸ್ ಹಾಗೂ ಶಿವಮೊಗ್ಗದಿಂದ ಭದ್ರಾವತಿಗೆ ತೆರಳುತ್ತಿದ್ದ ಟ್ಯಾಕ್ಸಿ ನಡುವೆ ಡಿಕ್ಕಿ ಸಂಭವಿಸಿದೆ.
    ಟ್ಯಾಕ್ಸಿಯಲ್ಲಿದ್ದ ಪ್ರಯಾಣಿಕರಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಸ್ ಹಾಗೂ ಟ್ಯಾಕ್ಸಿ ಮುಂಭಾಗ ಜಖಂಗೊಂಡಿದೆ.
    ಶಿವಮೊಗ್ಗ-ಭದ್ರಾವತಿ ನಡುವೆ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವು ಕಡೆಗಳಲ್ಲಿ ಏಕ ಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ, ಹಲವು ಕಡೆಗಳಲ್ಲಿ ರಸ್ತೆ ಉತ್ತಮವಾಗಿರುವ ಹಿನ್ನೆಲೆಯಲ್ಲಿ ವಾಹನಗಳ ವೇಗವೂ ಸಹ ಹೆಚ್ಚಾಗಿರುವುದು ಇಂತಹ ಅಪಘಾತಗಳಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.