Saturday, August 12, 2023

ಪೊಲೀಸ್ ಠಾಣೆ ಜನಸ್ನೇಹಿಯಾಗಿಸಲು ‘ತೆರೆದ ಮನೆ’ ಕಾರ್ಯಕ್ರಮ

ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ಸಂಚಾರಿ ಪೊಲೀಸರು

ಭದ್ರಾವತಿ ಸಂಚಾರಿ ಠಾಣೆ ಪೊಲೀಸರು ಶನಿವಾರ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಕಾಲೇಜಿನ ಪ್ರೌಢಶಾಲೆ ವಿಭಾಗದ ಮಕ್ಕಳನ್ನು ಠಾಣೆಗೆ ಕರೆತರುವ ಮೂಲಕ ಪೊಲೀಸ್ ಠಾಣೆ ಜನಸ್ನೇಹಿಯಾಗಿಸಲು 'ತೆರೆದ ಮನೆ' ಕಾರ್ಯಕ್ರಮ ಕುರಿತು ಅರಿವು ಮೂಡಿಸಿದರು.
    ಭದ್ರಾವತಿ, ಆ. ೧೨: ಸಮಾಜದಲ್ಲಿ ಪೊಲೀಸ್ ಠಾಣೆ ಎಂದರೆ ಈಗಲೂ ಬಹುತೇಕ ಮಂದಿಗೆ ಭಯ. ಅದರಲ್ಲೂ ಕೆಲವರು ಸಮಸ್ಯೆಗಳು ಎದುರಾದರೂ ಸಹ ಠಾಣೆ ಬಳಿ ಮಾತ್ರ ಸುಳಿಯುವುದಿಲ್ಲ. ಇನ್ನೂ ಮಕ್ಕಳಿಗೆ ಪೊಲೀಸರು ಕಂಡರೇ ಭಯ. ಇಂತಹ ವಾತಾವರಣ ದೂರವಾಗಿಸಿ ಪೊಲೀಸ್ ಠಾಣೆಗಳನ್ನು ಜನಸ್ನೇಹಿಗಳನ್ನಾಗಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಿದೆ.
    ತೆರೆದ ಮನೆ ಎಂಬ ಕಾರ್ಯಕ್ರಮದ ಮೂಲಕ ಪೊಲೀಸ್ ಠಾಣೆಗಳನ್ನು ಜನಸ್ನೇಹಿಗಳನ್ನಾಸಲು ಇಲಾಖೆ ಪ್ರಯತ್ನಿಸುತ್ತಿದೆ. ಪೊಲೀಸ್ ಠಾಣೆಗಳ ಬಗ್ಗೆ ಹೊಂದಿರುವ ಮನೋಭಾವನೆ ದೂರವಾಗಿಸಿ ಅಪರಾಧಗಳ ಕುರಿತು ಹಾಗು ಠಾಣೆಗಳ ಕಾರ್ಯ ನಿರ್ವಹಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
    ಈ ಹಿಂದೆ ಆರಂಭಗೊಂಡಿದ್ದ ತೆರೆದ ಮನೆ ಕಾರ್ಯಕ್ರಮ ಇದೀಗ ಪುನಃ ಆರಂಭಿಸಲಾಗಿದ್ದು, ನಗರದ ಸಂಚಾರಿ ಠಾಣೆ ಪೊಲೀಸರು ಶನಿವಾರ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಕಾಲೇಜಿನ ಪ್ರೌಢಶಾಲೆ ವಿಭಾಗದ ಮಕ್ಕಳನ್ನು ಠಾಣೆಗೆ ಕರೆತರುವ ಮೂಲಕ ಕಾರ್ಯಕ್ರಮ ಕುರಿತು ಅರಿವು ಮೂಡಿಸಿದರು.
    ಠಾಣಾ ನಿರೀಕ್ಷಕಿ ಶಾಂತಲ ಹಾಗು ಸಿಬ್ಬಂದಿಗಳು ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದ ಕಾಲೇಜಿನ ಪ್ರೌಢಶಾಲೆ ವಿಭಾಗದ ಪ್ರಾಂಶುಪಾಲರು, ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮೂವರ ಸೆರೆ : ೧ ಕೆ.ಜಿ ೪೦೮ ಗ್ರಾಂ. ಗಾಂಜಾ ವಶ

    ಭದ್ರಾವತಿ, ಆ. ೧೨: ಇಲ್ಲಿನ ಹಳೇನಗರ ಠಾಣೆ ಪೊಲೀಸರು ಮೂವರನ್ನು ಬಂಧಿಸಿ ಸುಮಾರು ೧ ಕೆ.ಜಿ ೪೦೮ ಗ್ರಾಂ. ತೂಕದ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ.
    ನಗರದ ತರೀಕೆರೆ ರಸ್ತೆಯ ರೈಲ್ವೆ ಮೇಲ್ಸೇತುವೆ ಕೆಳಗೆ ಮುಬಾರಕ್ ಅಲಿಯಾಸ್ ಡಿಚ್ಚಿ (೨೭), ಬಾಬು (೨೦) ಮತ್ತು ಪರ್ವಿಜ್ (೨೫) ಗಾಂಜಾ ಮಾರಾಟದಲ್ಲಿ ತೊಡಗಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ಮೂವರನ್ನು ಬಂಧಿಸಿ ಒಟ್ಟು ೫೦ ಸಾವಿರ ರು. ಮೌಲ್ಯದ ಸುಮಾರು ೧ ಕೆ.ಜಿ ೪೦೮ ಗ್ರಾಂ. ತೂಕದ ಒಣ ಗಾಂಜಾ ಹಾಗು ೩೦೦ ರು. ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
    ಹಿರಿಯ ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಮಾರ್ಗದರ್ಶನದಲ್ಲಿ ಠಾಣಾ ಉಪ ನಿರೀಕ್ಷಕ ಚಂದ್ರಶೇಖರ್ ನಾಯ್ಕ್ ನೇತೃತ್ವದ ಸಿಬ್ಬಂದಿಗಳನ್ನೊಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

ಹಿರಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಿರಣ್‌ಕುಮಾರ್, ಉಪಾಧ್ಯಕ್ಷರಾಗಿ ಗಂಗಮ್ಮ ಆಯ್ಕೆ

ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನಂಜಾಪುರ ನಿವಾಸಿ ಕಿರಣ್ ಕುಮಾರ್ ಹಾಗು ಉಪಾಧ್ಯಕ್ಷರಾಗಿ ಗಂಗಮ್ಮ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಆ. ೮ : ತಾಲೂಕಿನ ಹಿರಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನಂಜಾಪುರ ನಿವಾಸಿ ಕಿರಣ್ ಕುಮಾರ್ ಹಾಗು ಉಪಾಧ್ಯಕ್ಷರಾಗಿ ಗಂಗಮ್ಮ ಆಯ್ಕೆಯಾಗಿದ್ದಾರೆ.
    ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಮೀಸಲಾತಿ ಹೊಂದಿರುವ ಅಧ್ಯಕ್ಷ ಸ್ಥಾನಕ್ಕೆ ಕಿರಣ್‌ಕುಮಾರ್ ಹಾಗು ಸಾಮಾನ್ಯ ಮಹಿಳೆ ಮೀಸಲಾತಿ ಹೊಂದಿರುವ ಉಪಾಧ್ಯಕ್ಷ ಸ್ಥಾನಕ್ಕೆ ಗಂಗಮ್ಮ ಆಯ್ಕೆಯಾದರು.
    ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಬಿಜೆಪಿ ಮುಖಂಡರಾದ ಮಂಗೋಟೆ ರುದ್ರೇಶ್, ಗೋಕುಲ್ ಕೃಷ್ಣ ಹಾಗು ಗ್ರಾಮದ ಮುಖಂಡರು ಮತ್ತು ಪಂಚಾಯಿತಿ ಸದಸ್ಯರು ಅಭಿನಂದಿಸಿದ್ದಾರೆ.

ಕೂಡ್ಲಿಗೆರೆ ಗ್ರಾ.ಪಂ ಅಧ್ಯಕ್ಷರಾಗಿ ಎಂ. ಜಯಣ್ಣ, ಉಪಾಧ್ಯಕ್ಷರಾಗಿ ಸಿದ್ದಮ್ಮ ಅವಿರೋಧ ಆಯ್ಕೆ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಂ. ಜಯಣ್ಣ ಮತ್ತು ಉಪಾಧ್ಯಕ್ಷರಾಗಿ ಸಿದ್ದಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಆ. ೧೨: ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಂ. ಜಯಣ್ಣ ಮತ್ತು ಉಪಾಧ್ಯಕ್ಷರಾಗಿ ಸಿದ್ದಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಪಂಚಾಯಿತಿಯಲ್ಲಿ ನಡೆದ ೨ನೇ ಅವಧಿಗೆ ಅಧ್ಯಕ್ಷ ಹಾಗು ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಸಾಮಾನ್ಯ ಮೀಸಲಾತಿ ಹೊಂದಿರುವ ಅಧ್ಯಕ್ಷ ಸ್ಥಾನಕ್ಕೆ ಎಂ. ಜಯಣ್ಣ ಹಾಗು ಸಾಮಾನ್ಯ ಮಹಿಳೆ ಮೀಸಲಾತಿ ಹೊಂದಿರುವ ಉಪಾಧ್ಯಕ್ಷ ಸ್ಥಾನಕ್ಕೆ ಸಿದ್ದಮ್ಮ ಆಯ್ಕೆಯಾದರು.
    ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಗಂಗಣ್ಣ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಓ) ಲಕ್ಷ್ಮೀಕಾಂತ್‌, ಕಾರ್ಯದರ್ಶಿ ಸತೀಶ್‌ ಗೌಡ ಉಪಸ್ಥಿತರಿದ್ದರು.
    ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಣಿಶೇಖರ್‌ ಹಾಗು ಕಾಂಗ್ರೆಸ್‌ ಪಕ್ಷದ ಮುಖಂಡರು, ಸ್ಥಳೀಯರು ಮತ್ತು ಪಂಚಾಯಿತಿ ಸದಸ್ಯರು ಅಭಿನಂದಿಸಿದ್ದಾರೆ.

Friday, August 11, 2023

ಕಸಾಪ ದತ್ತಿ ಕಾರ್ಯಕ್ರಮ : ಅಂಧ ವಿಕಲಚೇತನರಿಂದ ಗೀತ ಗಾಯನ

ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಭದ್ರಾವತಿ ನ್ಯೂಟೌನ್‌ ಲಯನ್ಸ್‌ ಕ್ಲಬ್ ಸಭಾಂಗಣದಲ್ಲಿ ಶುಕ್ರವಾರ  ಇಎಸ್‌ಐ ಉದ್ಯೋಗಿ ಎಸ್. ಮನೋಜ್‌ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ದತ್ತಿ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್‌ ಉದ್ಘಾಟಿಸಿದರು.
    ಭದ್ರಾವತಿ, ಆ. ೧೧: ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನ್ಯೂಟೌನ್‌ ಲಯನ್ಸ್‌ ಕ್ಲಬ್ ಸಭಾಂಗಣದಲ್ಲಿ ಶುಕ್ರವಾರ  ಇಎಸ್‌ಐ ಉದ್ಯೋಗಿ ಎಸ್. ಮನೋಜ್‌ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ದತ್ತಿ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್‌ ಉದ್ಘಾಟಿಸಿದರು.
    ಸಿದ್ದಾರ್ಥ ಅಂಧರ ಕೇಂದ್ರದ ಮಕ್ಕಳಿಂದ ಗೀತ ಗಾಯನ ನಡೆಯಿತು. ಪರಿಷತ್‌ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ ಅಧ್ಯಕ್ಷತೆ ವಹಿಸಿದ್ದರು.
    ದತ್ತಿ ದಾನಿ ಲಯನ್ಸ್‌ ಎನ್‌. ಶ್ರೀನಿವಾಸ್‌, ಕರ್ನಾಟಕ ಜಾನಪದ ಪರಿಷತ್‌ ಅಧ್ಯಕ್ಷ ಎಂ.ಆರ್‌ ರೇವಣಪ್ಪ, ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ಲಯನ್ಸ್‌ ಕ್ಲಬ್‌ ಅಧ್ಯಕ್ಷ ರಾಜೇಶ್‌ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಶಾಸಕ ಬಿ.ಕೆ ಸಂಗಮೇಶ್ವರ್‌

ಶಾಸಕ ಬಿ.ಕೆ ಸಂಗಮೇಶ್ವರ್‌
    ಭದ್ರಾವತಿ, ಆ. ೧೧:  ಈ ಹಿಂದೆ ಕಾಂಗ್ರೆಸ್‌-ಜೆಡಿಎಸ್‌ ಸಂಯುಕ್ತ ಸರ್ಕಾರದಲ್ಲಿ ನಿಗಮ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಶಾಸಕ ಬಿ.ಕೆ ಸಂಗಮೇಶ್ವರ್‌ ಅವರನ್ನು ಈ ಬಾರಿ ವಿಧಾನಸಭೆ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷರನ್ನಾಗಿ ಸಭಾಧ್ಯಕ್ಷ ಯು.ಟಿ ಖಾದರ್‌ ನೇಮಕಗೊಳಿಸಿದ್ದಾರೆ.
    ಸಮಿತಿ ಒಟ್ಟು ೧೫ ಸದಸ್ಯರನ್ನು ಒಳಗೊಂಡಿದ್ದು, ಬಿ.ಕೆ ಸಂಗಮೇಶ್ವರ್‌, ಶಾಮನೂರು ಶಿವಶಂಕರಪ್ಪ, ಬಾಲಚಂದ್ರ ಲಕ್ಷ್ಮಣರಾವ್‌, ಪ್ರಭು ಬಿ. ಚೌವ್ಹಾಣ್‌, ಸಿದ್ದು ಸವದಿ, ಗೋಪಾಲಕೃಷ್ಣ ಬೇಳೂರು, ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ್‌, ದಿನಕರ್‌ ಕೇಶವ ಶೆಟ್ಟಿ, ಜಾರಕಿಹೊಳಿ, ಚನ್ನಾರೆಡ್ಡಿ ಪಾಟೀಲ ತುನ್ನೂರ, ಅವಿನಾಶ್‌ ಉಮೇಶ್‌ ಜಾಧವ್‌, ಅಶೋಕ್‌ ಕುಮಾರ್‌ ರೈ, ಅಶೋಕ ಮಲ್ಲಪ್ಪ ಮನಗೂಳಿ, ನಾರಾ ಭರತ್‌ರೆಡ್ಡಿ ಮತ್ತು ಎನ್‌.ಟಿ ಶ್ರೀನಿವಾಸ್‌ ಸಮಿತಿ ಸದಸ್ಯರಾಗಿದ್ದಾರೆ.
    ಕರ್ನಾಟಕ ವಿಧಾನಸಭೆ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮ ೨೧(೨)ರ ಮೇರೆಗೆ ಸಭಾಧ್ಯಕ್ಷರು ಸಮಿತಿಯನ್ನು ರಚಿಸಿ ಸಂಗಮೇಶ್ವರ್‌ ಅವರನ್ನು ಅಧ್ಯಕ್ಷರನ್ನಾಗಿ ನೇಮಕಗೊಳಿಸಿದ್ದಾರೆ.
    ಸದನದಲ್ಲಿ ಸದಸ್ಯರುಗಳು ಕೇಳುವ ಪ್ರಶ್ನೆಗಳು, ಗಮನ ಸೆಳೆಯುವ ಸೂಚನೆ, ಶೂನ್ಯ ವೇಳೆ ಚರ್ಚೆ, ಅಧ್ಯಕ್ಷರ ಅಪ್ಪಣೆ ಮೇರೆಗೆ ಚರ್ಚಿಸುವ ಸಂದರ್ಭದಲ್ಲಿ ಸಚಿವರುಗಳು ನೀಡುವ ಭರವಸೆಗಳನ್ನು ಪರಿಶೀಲಿಸುವುದು, ಗರಿಷ್ಠ ೨ ತಿಂಗಳ ಅವಧಿಯಲ್ಲಿ ಕಾರ್ಯಗತಗೊಳಿಸಲಾಗಿದೆಯೇ ಇಲ್ಲವೇ ಎಂಬುದನ್ನು ನಿರ್ಣಯಿಸುವುದು ಹಾಗು ವರದಿ ಮಾಡುವ ಜವಾಬ್ದಾರಿಯನ್ನು ಸಮಿತಿ ಹೊಂದಿದೆ. ಅಲ್ಲದೆ ಕೆಲವು ಭರವಸೆಗಳಲ್ಲಿನ ವಿಷಯಗಳನ್ನಾಧರಿಸಿ ಇಲಾಖೆ ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡುವ ಅಧಿಕಾರ ಹೊಂದಿದೆ.
    ಸಚಿವ ಸ್ಥಾನವೂ ಇಲ್ಲ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನವೂ ಇಲ್ಲ:
    ವಿಧಾನಸಭಾ ಕ್ಷೇತ್ರದಿಂದ ೪ನೇ ಬಾರಿಗೆ ಆಯ್ಕೆಯಾಗಿರುವ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಈ ಬಾರಿ ಸಚಿವ ಸ್ಥಾನ ಲಭಿಸುವ ವಿಶ್ವಾಸ ಆರಂಭದಲ್ಲಿ ಹೊಂದಲಾಗಿತ್ತು. ಆದರೆ ಸಚಿವ ಸ್ಥಾನ ಕೈತಪ್ಪಿ ಹೋಯಿತು. ನಂತರ ಯಾವುದಾದರೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಲಭಿಸುವ ವಿಶ್ವಾಸವಿತ್ತು. ಆದರೆ ಇದೀಗ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಹ ಕೈತಪ್ಪಿ ಹೋಗುವ ಆತಂಕ ಎದುರಾಗಿದೆ. 

ಲಾರಿಗಳಿಂದ ಡೀಸೆಲ್ ಕಳವು : ಇಬ್ಬರು ಕಳ್ಳರ ಬಂಧನ

ಹಳೇನಗರ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ


ಲಾರಿಗಳಿಂದ ಡೀಸೆಲ್ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
    ಭದ್ರಾವತಿ, ಆ. ೧೧: ಲಾರಿಗಳಿಂದ ಡೀಸೆಲ್ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ  ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
    ಶಿವಮೊಗ್ಗ ಟಿಪ್ಪುನಗರ ನಿವಾಸಿಗಳಾದ ಸೋನು(೨೪) ಮತ್ತು ನೂರುಲ್ಲಾ (೨೪) ಬಂಧಿತರಾಗಿದ್ದು, ಇವರಿಂದ ೧೫ ಸಾವಿರ ರೂ ಮೌಲ್ಯದ ೧೫೦ ಲೀಟರ್ ಡೀಸೆಲ್ ಹಾಗು ಕೃತ್ಯಕ್ಕೆ ಬಳಸಿದ್ದ ಸುಮಾರು ೭ ಲಕ್ಷ ರು. ಮೌಲ್ಯದ ಅಶೋಕ್ ಲೈಲ್ಯಾಂಡ್ ವಾಹನ ವಶಪಡಿಸಿಕೊಳ್ಳಲಾಗಿದೆ.
    ಠಾಣಾ ವ್ಯಾಪ್ತಿಯ ತರೀಕೆರೆ ರಸ್ತೆಯ ಶಿವನಿ ಕ್ರಾಸ್ ನಲ್ಲಿರುವ ಪೆಟ್ರೋಲ್ ಬಂಕ್ ಪಕ್ಕದ ಖಾಲಿ ಜಾಗದಲ್ಲಿ ತಾಲೂಕಿನ ಮಾವಿನಕೆರೆ ನಿವಾಸಿ ಮಹೇಶ್‌ರವರು ತಮ್ಮ ಲಾರಿಯನ್ನು ನಿಲ್ಲಿಸಿದ್ದು,  ಈ ಲಾರಿಯಲ್ಲಿದ್ದ ಡೀಸೆಲ್ ಕಳವು ಮಾಡಲಾಗಿತ್ತು. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
    ಈ ಪ್ರಕರಣ ಬೇಧಿಸಲು ಹಿರಿಯ ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಶೈಲ ನೇತೃತ್ವದಲ್ಲಿ ಠಾಣೆಯ ಉಪ ನಿರೀಕ್ಷಕ  ಶರಣಪ್ಪ ಹಂಡ್ರುಗಲ್, ಸಿಬ್ಬಂದಿಗಳಾದ ಎಚ್.ಸಿ ಹಾಲಪ್ಪ, ಮಧುಪ್ರಸಾದ್ ಹಾಗೂ ಸಿಪಿಸಿ ನಾರಾಯಣಸ್ವಾಮಿ, ಮೌನೇಶ್, ರಾಘವೇಂದ್ರ ಮತ್ತು ರುದ್ರಪ್ಪ ಅವನ್ನೊಳಗೊಂಡ ತಂಡ ರಚಿಸಲಾಗಿತ್ತು.
    ೨ ದಿನದಲ್ಲಿ ಪ್ರಕರಣ ಬೇಧಿಸುವಲ್ಲಿ ತಂಡ ಯಶಸ್ವಿಯಾಗಿದ್ದು, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ತಂಡವನ್ನು ಪ್ರಶಂಸಿಸಿ ಅಭಿನಂದಿಸಿದ್ದಾರೆ.