Wednesday, August 16, 2023

ಕುವೆಂಪು ವಿ.ವಿ ಪ್ರಭಾರ ಕುಲಪತಿ ಪ್ರೊ. ಎಸ್. ವೆಂಕಟೇಶ್‌

ಪ್ರೊ. ಎಸ್. ವೆಂಕಟೇಶ್‌
    ಭದ್ರಾವತಿ, ಆ. ೧೬: ಕುವೆಂಪು  ವಿಶ್ವ ವಿದ್ಯಾಲಯದ ಪ್ರಭಾರ ಕುಲಪತಿಯಾಗಿ ವಿಶ್ವ ವಿದ್ಯಾಲಯದ ವಾಣಿಜ್ಯ ವಿಭಾಗದ ಡೀನ್‌ ಪ್ರೊ. ಎಸ್. ವೆಂಕಟೇಶ್‌ ಅವರನ್ನು ನೇಮಕಗೊಳಿಸಲಾಗಿದೆ.
    ಕುಲಪತಿಯಾಗಿದ್ದ ಪ್ರೊ. ಬಿ.ಪಿ ವೀರಭದ್ರಪ್ಪ ಅವರ ಹುದ್ದೆ  ಆ.೧ರಿಂದ ತೆರವುಗೊಂಡಿದ್ದು, ಈ ಹುದ್ದೆಗೆ ಇದೀಗ ಪ್ರೊ. ಎಸ್‌. ವೆಂಕಟೇಶ್‌ ಅವರನ್ನು ೧, ಮಾರ್ಚ್‌ ೨೦೨೪ರವರೆಗೆ ಪ್ರಭಾರ ಕುಲಪತಿಯಾಗಿ ನೇಮಕಗೊಳಿಸಿ ರಾಜ್ಯಪಾಲರು ಆದೇಶಿಸಿದ್ದಾರೆ.
ಈ ಸಂಬಂಧ ರಾಜ್ಯಪಾಲರ ಸಚಿವಾಲಯದ ಅಧೀನ ಕಾರ್ಯದರ್ಶಿ ಜಿ. ಪ್ರದೀಪ್‌ ಆ. ೧೪ರಂದು ಪ್ರಕಟಣೆ ಹೊರಡಿಸಿದ್ದಾರೆ.

Tuesday, August 15, 2023

ಹಳೇಸೇತುವೆ ಮೇಲೆ ಯುವಕನ ಕೊಲೆ


    ಭದ್ರಾವತಿ, ಆ. ೧೫: ನಗರದ ಹಳೇಸೇತುವೆ ಮೇಲೆ ಯುವಕನೋರ್ವ ಕೊಲೆಯಾಗಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.
    ತಾಲೂಕಿನ ದೊಡ್ಡೇರಿ ಗ್ರಾಮದ ನಿವಾಸಿ ನರೇಂದ್ರ(೨೫) ಕೊಲೆಯಾಗಿದ್ದು, ಈ ಸಂಬಂಧ ಹಳೇನಗರ ಠಾಣೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
    ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಹಾಗು ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಇನ್ನೂ ಪ್ರಕರಣ ದಾಖಲಾಗಿಲ್ಲ. 

ಭದ್ರಾವತಿ ಹಲವು ವಿಭಿನ್ನ ಕಾರ್ಯಕ್ರಮಗಳೊಂದಿಗೆ ೭೬ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

ಶೇ.೯೦.೧೧ರಷ್ಟು ಗುರಿ ಸಾಧಿಸುವ ಮೂಲಕ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಪುರಸ್ಕೃತವಾಗಿದ್ದು, ಈ ಸಾಧನೆಯನ್ನು ಪ್ರಶಂಸಿಸಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು.
    ಭದ್ರಾವತಿ, ಆ. ೧೫ : ನಗರದ ವಿವಿಧೆಡೆ ಹಲವು ವಿಭಿನ್ನ ಕಾರ್ಯಕ್ರಮಗಳೊಂದಿಗೆ ೭೬ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ನಡೆಯಿತು.
    ಸಾರ್ವಜನಿಕ ಆಸ್ಪತ್ರೆಗೆ ರಾಷ್ಟ್ರೀಯ ಪ್ರಶಸ್ತಿ : ಪ್ರಶಂಸೆ, ಅಭಿನಂದನೆ
    ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಾಗರಾಜ್ ಧ್ವಜಾರೋಹಣ ನೆರವೇರಿಸಿದರು.
ಪೊಲೀಸ್ ನಗರ ವೃತ್ತ ನಿರೀಕ್ಷಕ ಶ್ರೈಶೈಲ ಅವರಿಂದ ಶಾಸಕ ಬಿ.ಕೆ ಸಂಗಮೇಶ್ವರ್ ಪಥಸಂಚಲನ ಗೌರವ ವಂದನೆ ಸ್ವೀಕಸಿದರು.
    ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಎಚ್.ಎಂ ಮನುಕುಮಾರ್, ತಹಸೀಲ್ದಾರ್ ಗ್ರೇಡ್-೨ ವಿ. ರಂಗಮ್ಮ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ, ನಗರಸಭೆ ಸದಸ್ಯರು, ವಿವಿಧ ಸರ್ಕಾರಿ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸ್ವಾಗತಿಸಿದರು. ದೈಹಿಕ ಶಿಕ್ಷಕ ಅಪೇಕ್ಷ ಮಂಜುನಾಥ್ ನಿರೂಪಿಸಿದರು.
    ಈ ಬಾರಿ ವಿಶೇಷವಾಗಿ ಜಿಲ್ಲೆಯಲ್ಲಿಯೇ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ರಾಷ್ಟ್ರೀಯ ಗುಣಮಟ್ಟದ ಭರವಸೆ ಮಾನದಂಡಗಳು(ಎನ್‌ಕ್ಯೂಎಎಸ್) ಶೇ.೯೦.೧೧ರಷ್ಟು ಗುರಿ ಸಾಧಿಸುವ ಮೂಲಕ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಪುರಸ್ಕೃತವಾಗಿದ್ದು, ಈ ಸಾಧನೆಯನ್ನು ಪ್ರಶಂಸಿಸಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು.


ಭದ್ರಾವತಿ ನ್ಯೂಟೌನ್ ಲಯನ್ಸ್ ಶುಗರ್‌ಟೌನ್ ಕಣ್ಣಿನ ಆಸ್ಪತ್ರೆ ಸಮೀಪದಲ್ಲಿರುವ ಗೃಹ ರಕ್ಷಕದಳ ಕಛೇರಿಯಲ್ಲಿ ೭೬ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.

    ಗೃಹ ರಕ್ಷಕದಳದಿಂದ ಸ್ವಾತಂತ್ರ್ಯ ದಿನಾಚರಣೆ :
    ಪ್ರತಿ ವರ್ಷದಂತೆ ಈ ಬಾರಿ ಸಹ ನ್ಯೂಟೌನ್ ಲಯನ್ಸ್ ಶುಗರ್‌ಟೌನ್ ಕಣ್ಣಿನ ಆಸ್ಪತ್ರೆ ಸಮೀಪದಲ್ಲಿರುವ ಗೃಹ ರಕ್ಷಕದಳ ಕಛೇರಿಯಲ್ಲಿ ೭೬ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
    ಘಟಕಾಧಿಕಾರಿ ಜಗದೀಶ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಡಾ. ರವೀಂದ್ರನಾಥ ಕೋಠಿ ಹಾಗು ಗೃಹ ರಕ್ಷಕರು ಪಾಲ್ಗೊಂಡಿದ್ದರು.


ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಕಾಂಗ್ರೆಸ್ ಪಕ್ಷದ ನಿವೇಶನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ೭೬ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
     ಸಂಘಟನೆಗೆ ಒತ್ತು ನೀಡಿ, ಕಾಂಗ್ರೆಸ್ ಭವನ ನಿರ್ಮಾಣ : ಭರವಸೆ
    ಹಳೇನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಕಾಂಗ್ರೆಸ್ ಪಕ್ಷದ ನಿವೇಶನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ೭೬ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಮಾತನಾಡಿ, ಪಕ್ಷ ಸಂಘಟನೆ ಪ್ರಸ್ತುತ್ತ ಇನ್ನೂ ಹೆಚ್ಚು ಬಲಗೊಳ್ಳಬೇಕಾದ ಅವಶ್ಯಕತೆ ಇದೆ. ಮುಖಂಡರು, ಕಾರ್ಯಕರ್ತರು ಈ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕು. ಸುಸಜ್ಜಿತವಾದ ಕಾಂಗ್ರೆಸ್ ಭವನ ನಿರ್ಮಿಸುವ ಗುರಿ ಇದ್ದು, ಎಲ್ಲರ ಸಹಕಾರದೊಂದಿಗೆ ಭವನ ನಿರ್ಮಾಣಗೊಳ್ಳುವ ವಿಶ್ವಾಸವಿವಿದೆ ಎಂದರು.
    ಪಕ್ಷದ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ವಿವಿಧ ಘಟಕಗಳ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.  


ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಬಿಪಿಎಲ್ ಸಂಘದಿಂದ ೭೬ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ರಾಷ್ಟ್ರಪತಿ ಪದಕ ಪ್ರಶಸ್ತಿ ಪುರಸ್ಕೃತ, ನಿವೃತ್ತ ಪೊಲೀಸ್ ದಾನಂ ಬಾಬು ಧ್ವಜಾರೋಹಣ ನೆರವೇರಿಸಿದರು.
          ಬಿಪಿಎಲ್ ಸಂಘದಿಂದ ೭೬ನೇ ಸ್ವಾತಂತ್ರ್ಯ ದಿನಾಚರಣೆ:
    ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಬಿಪಿಎಲ್ ಸಂಘದಿಂದ ೭೬ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ರಾಷ್ಟ್ರಪತಿ ಪದಕ ಪ್ರಶಸ್ತಿ ಪುರಸ್ಕೃತ, ನಿವೃತ್ತ ಪೊಲೀಸ್ ದಾನಂ ಬಾಬು ಧ್ವಜಾರೋಹಣ ನೆರವೇರಿಸಿದರು.
    ಸಂಘದ ಅಧ್ಯಕ್ಷ ಎನ್. ಲೋಕೇಶ್ ಅಧ್ಯಕ್ಷೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸಂಪತ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಶ್ಯಾಮ್, ಜಗದೀಶ್, ರಾಜು ಹಾಗು ಪದಾಧಿಕಾರಿಗಳು, ಸ್ಥಳೀಯರು ಪಾಲ್ಗೊಂಡಿದ್ದರು.

ಭದ್ರಾವತಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸ್ತ್ರೀ ಶಮಶಕ್ತಿ ಬ್ಯೂಟಿಷಿಯನ್ ಅಸೋಸಿಯೇಷನ್ ವತಿಯಿಂದ ೭೬ನೇ ಸ್ವಾತಂತ್ರ್ಯ ದಿನಾಚರಣೆ ಜೆಪಿಎಸ್ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
    ಸರ್ಕಾರಿ ಶಾಲೆ ಮಕ್ಕಳಿಗೆ ಲೇಖನ ಸಾಮಾಗ್ರಿ ವಿತರಣೆ:
    ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸ್ತ್ರೀ ಶಮಶಕ್ತಿ ಬ್ಯೂಟಿಷಿಯನ್ ಅಸೋಸಿಯೇಷನ್ ವತಿಯಿಂದ ೭೬ನೇ ಸ್ವಾತಂತ್ರ್ಯ ದಿನಾಚರಣೆ ಜೆಪಿಎಸ್ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
    ಧ್ವಜಾರೋಹಣ ನೇರವೇರಿಸಿ ಮಕ್ಕಳಿಗೆ ಸಿಹಿ ಹಂಚಿಕೆಯೊಂದಿಗೆ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು. ಅಸೋಸಿಯೇಷನ್ ಅಧ್ಯಕ್ಷೆ ಕವಿತಾ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖವಾದ ರೂಪ, ಪ್ರೇಮ, ಲಕ್ಷ್ಮಿ, ಸುಮಿತ್ರ, ಆರತಿ, ತೃಪ್ತಿ, ಚಂದ್ರ, ಲೀಲಾ ಹಾಗು ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
   
ಭದ್ರಾವತಿ ಸಿದ್ದಾಪುರದಲ್ಲಿರುವ ಸುರಕ್ಷಾ ಸೇವಾ ಟ್ರಸ್ಟ್, ಸುರಕ್ಷಾ ವೃದ್ಧಾಶ್ರಮ ಮತ್ತು ಅನಾಥಾಶ್ರಮದಲ್ಲಿ ೭೬ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
     ಹಿರಿಯ ಜೀವಿಗಳೊಂದಿಗೆ ಸ್ವಾತಂತ್ರ್ಯ ಸಂಭ್ರಮ :
    ನಗರದ ಸಿದ್ದಾಪುರದಲ್ಲಿರುವ ಸುರಕ್ಷಾ ಸೇವಾ ಟ್ರಸ್ಟ್, ಸುರಕ್ಷಾ ವೃದ್ಧಾಶ್ರಮ ಮತ್ತು ಅನಾಥಾಶ್ರಮದಲ್ಲಿ ೭೬ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
    ವೃದ್ದಾಶ್ರಮದ ಹಿರಿಯ ಜೀವಗಳೊಂದಿಗೆ ಸ್ವಾತಂತ್ರ್ಯ ಸಂಭ್ರಮ ಹಂಚಿಕೊಳ್ಳಲಾಯಿತು. ಟ್ರಸ್ಟ್ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ನಾಗರತ್ನ ಅನಿಲ್‌ಕುಮಾರ್ ಧ್ವಜಾರೋಹಣ ನೆರವೇರಿಸಿದರು.
    ಟ್ರಸ್ಟ್ ಖಜಾಂಚಿ ಪ್ರಶಾಂತ್, ಟ್ರಸ್ಟಿಗಳಾದ ಲಲಿತ, ಅನಿತಾ, ರವೀಂದ್ರಗಿರಿ ಹಾಗು ಸೋಮಶೇಖರ್, ಪ್ರಮುಖರಾದ ಲೀಲಾವತಿ, ಪುಷ್ಪ, ಚೇತನ ಶೆಟ್ಟಿ, ಸೌಮ್ಯ, ಜಾಹ್ನವಿ, ಕಾಂತ, ಮಹೇಶ್ವರಿ, ಸಂಪತ್, ಬಾಲಕೃಷ್ಣ, ದೀಪು, ಪುನೀತ್ ಹಾಗು ಕೆಆರ್‌ಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗು ಸ್ಥಳೀಯರು ಪಾಲ್ಗೊಂಡಿದ್ದರು.

ಭದ್ರಾವತಿ ಪ್ರಧಾನ ಅಂಚೆ ಕಛೇರಿಯಲ್ಲಿ ೭೬ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಕಛೇರಿ ಪೋಸ್ಟ್ ಮಾಸ್ಟರ್ ಆಶಾ  ಧ್ವಜಾರೋಹಣ ನೆರವೇರಿಸಿದರು
    ಪ್ರಧಾನ ಅಂಚೆ ಕಛೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ:
    ನಗರದ ಪ್ರಧಾನ ಅಂಚೆ ಕಛೇರಿಯಲ್ಲಿ ೭೬ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಕಛೇರಿ ಪೋಸ್ಟ್ ಮಾಸ್ಟರ್ ಆಶಾ  ಧ್ವಜಾರೋಹಣ ನೆರವೇರಿಸಿದರು.
    ವಿಐಸ್‌ಎಲ್ ಕಾರ್ಖಾನೆ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್‌ಕುಮಾರ್, ಸ್ತ್ರೀ ರೋಗ ತಜ್ಞೆ ಡಾ. ವೀಣಾ ಎಸ್. ಭಟ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
    ಪ್ರಮುಖರಾದ ರಾಜ್‌ಕುಮಾರ್, ಉದಯಚಾರ್, ಸುರೇಶ್, ತುಕಾರಾಮ್, ಓಂಕಾರ್ ಸೇರಿದಂತೆ ಅಂಚೆ ಕಛೇರಿ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Monday, August 14, 2023

ಪಿ. ನಾಗರಾಜಪ್ಪ ನಿಧನ

 ಪಿ.ನಾಗರಾಜಪ್ಪ 
    ಭದ್ರಾವತಿ,  ಆ. ೧೪ : ಸಿದ್ದಾರೂಢ ನಗರದ ನಿವಾಸಿ, ವಿಐಎಸ್‌ಎಲ್ ನಿವೃತ್ತ ನೌಕರ ಪಿ. ನಾಗರಾಜಪ್ಪ (೬೯)  ಸೋಮವಾರ ನಿಧನ ಹೊಂದಿದರು.
    ಪತ್ನಿ ಶಾರದಮ್ಮ, ಪುತ್ರ ಹಾಗು ಇಬ್ಬರು ಪುತ್ರಿಯರು ಇದ್ದಾರೆ.   ಇವರ ಅಂತ್ಯ ಸಂಸ್ಕಾರ ಹಿರಿಯೂರು ಗ್ರಾಮದ ಇವರ ತೋಟದಲ್ಲಿ ನೆರವೇರಿತು.
    ಅಖಿಲ ಭಾರತ ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಸಿದ್ದಲಿಂಗಯ್ಯ, ಮಡಿವಾಳ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಡಾ.ಬಿ.ಆರ್ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಿ : ಪ್ರತಿಭಟನೆ

ಭದ್ರಾವತಿ, ಆ. ೧೪: ನಗರದ ಹೃದಯ ಭಾಗದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನ ಕಾಮಗಾರಿ ತಕ್ಷಣ ಮುಕ್ತಾಯಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಬೇಕೆಂದು ಆಗ್ರಹಿಸಿ ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.  
    ಭದ್ರಾವತಿ, ಆ. ೧೪: ನಗರದ ಹೃದಯ ಭಾಗದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನ ಕಾಮಗಾರಿ ತಕ್ಷಣ ಮುಕ್ತಾಯಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಬೇಕೆಂದು ಆಗ್ರಹಿಸಿ ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.  
    ವೇದಿಕೆ ಅಧ್ಯಕ್ಷ ಬಿ.ಎನ್.ರಾಜು ಮಾತನಾಡಿ, ಅನುದಾನ ಕೊರತೆಯಿಂದ ಕಳೆದ ಸುಮಾರು ೬ ವರ್ಷದಿಂದ ಭವನದ ಕಾಮಗಾರಿ ಪೂರ್ಣಗೊಳ್ಳದೆ ಅಪೂರ್ಣಗೊಂಡಿದ್ದು, ಕಟ್ಟಡ ಶಿಥಿಲಗೊಳ್ಳುತ್ತಿದ್ದರು ಜಿಲ್ಲಾಡಳಿತ, ಸಂಸದರು, ಶಾಸಕರು, ಚುನಾಯಿತ ಪ್ರತಿನಿಧಿಗಳು ದಿವ್ಯ ನಿರ್ಲಕ್ಷ ಧೋರಣೆ ವಹಿಸಿರುವುದು ಖಂಡನೀಯ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭವನ ಪೂರ್ಣಗೊಳಿಸದೆ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಕ್ರಾಂತಿಕಾರಿ ರಾಜಕಾರಣಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪರವರ ಪುತ್ರರಾಗಿರುವ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಿಕ್ಷಣ ಸಚಿವರಾದ ಮಧುಬಂಗಾರಪ್ಪರವರು ಅಪೂರ್ಣಗೊಂಡ ಅಂಬೇಡ್ಕರ್ ಭವನಕ್ಕೆ ಅಗತ್ಯವಿರುವ ಹಣ ಬಿಡುಗಡೆ ಗೊಳಿಸಿ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಲೋಕಾರ್ಪಣೆಗೊಳಿಸಿ ಮಾದರಿ ಜನಪ್ರತಿನಿಧಿಯಾಗಬೇಕೆಂದು ಮನವಿ ಮಾಡಿದರು.  
    ಪ್ರತಿಭಟನೆಯಲ್ಲಿ ಪ್ರಮುಖರಾದ ಅಕ್ರಂಖಾನ್, ಐ.ಎಲ್ ಅರುಣ್‌ಕುಮಾರ್, ಶೇಖರ್, ರಂಗಪ್ಪ, ಶ್ರೀನಿವಾಸ್, ಬ್ರಹ್ಮಲಿಂಗಯ್ಯ, ಸುನಿಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗೋಪಾಲಪ್ಪ ರವರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ, ಶಿಕ್ಷಣ ಸಚಿವ ಮಧು ಬಂಗಾರಪ್ಪ ರವರಿಗೆ ಮನವಿ ಸಲ್ಲಿಸಲಾಯಿತು.

ಎಚ್. ಕಾಂತರಾಜ ಆಯೋಗದ ವರದಿ ಜಾರಿಗೊಳಿಸಿ : ತೀ.ನ ಶ್ರೀನಿವಾಸ್

ಭದ್ರಾವತಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಿಂದುಳಿದ ಜನಜಾಗೃತಿ ವೇದಿಕೆ ಅಧ್ಯಕ್ಷ ತೀ.ನ ಶ್ರೀನಿವಾಸ್ ಮಾತನಾಡಿದರು.
    ಭದ್ರಾವತಿ, ಆ. ೧೪ :  ಹಿಂದುಳಿದ ವರ್ಗದವರ ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ಮುಖ್ಯಮಂತ್ರಿ ಎಂದೇ ಹೆಸರಾದ ಸಿದ್ಧರಾಮಯ್ಯನವರು ಎಚ್. ಕಾಂತರಾಜ ಆಯೋಗದ ವರದಿಯನ್ನು ಶೀಘ್ರವೇ ಜಾರಿಗೊಳಿಸಬೇಕೆಂದು ಹಿಂದುಳಿದ ವರ್ಗಗಳ ಪರವಾಗಿ ಹಿಂದುಳಿದ ಜನಜಾಗೃತಿ ವೇದಿಕೆ ಆಗ್ರಹಿಸುತ್ತದೆ ಹಾಗು ಈ ಸಂಬಂಧ ಹಮ್ಮಿಕೊಳ್ಳಲಾಗಿರುವ ಸಮಾಜಪರ ಹೋರಾಟಕ್ಕೆ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡುವಂತೆ ಕೋರುತ್ತದೆ ಎಂದು ವೇದಿಕೆ ಅಧ್ಯಕ್ಷ ತೀ.ನ ಶ್ರೀನಿವಾಸ್ ಹೇಳಿದರು.
    ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೧೯೯೪ರ ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಸಧ್ಯದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಮುಂದುವರೆಸಿಕೊಂಡು ಬಂದಿದೆ. ಸರ್ವೋಚ್ಛ ನ್ಯಾಯಾಲಯ ಮೀಸಲಾತಿಯನ್ನು ಶೇಕಡ ೫೦ಕ್ಕಿಂತ ಹೆಚ್ಚಾಗಿ ನೀಡಬಾರದೆಂದು ಆದೇಶಿಸಿದೆ. ಈ ಹಿಂದೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಎಚ್. ಕಾಂತರಾಜ ಅವರ ಅಧ್ಯಕ್ಷತೆಯಲ್ಲಿ ೨೦ ಜನವರಿ ೨೦೧೪ ರಲ್ಲಿ ಆಯೋಗ ರಚಿಸಲಾಗಿತ್ತು. ಈ ಆಯೋಗ ೨೦೧೯ರಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು ಎಂದರು.
    ಈ ಆಯೋಗ ತನ್ನ ಸಮೀಕ್ಷೆಯಲ್ಲಿ ಇಡೀ ರಾಜ್ಯದಲ್ಲಿ ಕುಟುಂಬಗಳ ನಿಖರವಾದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಅಭ್ಯಸಿಸಿ, ಸಾಕಷ್ಟು ವೈಜ್ಞಾನಿಕ ಮಾಹಿತಿಯನ್ನು ಕಲೆಹಾಕಿದೆ. ಆದ್ದರಿಂದ ಈ ಆಯೋಗ ಅತ್ಯಂತ ವೈಜ್ಞಾನಿಕವಾದ ಹಿಂದುಳಿದ ವರ್ಗಗಳ ಜಾತಿವಾರು ಸಮೀಕ್ಷೆಯನ್ನು ಕೈಗೊಂಡಿದೆ ಎಂಬ ಮಾಹಿತಿಗಳು ಬಲ್ಲಮೂಲಗಳಿಂದ ತಿಳಿದುಬಂದಿದೆ ಎಂದರು.
    ದೇಶದಲ್ಲಿ ಜಾತಿವ್ಯವಸ್ಥೆ ಎನ್ನುವುದು ವಾಸ್ತವಿಕ ಸತ್ಯ. ಯಾವುದೇ ಜಾತಿಗೆ ಮೀಸಲಾತಿ ನೀಡಲು ಆಯಾ ಜಾತಿಗಳಿಗೆ ಯೋಜನೆಗಳನ್ನು ರೂಪಿಸಲು ಅಂಕಿ-ಅಂಶಗಳು ಅತ್ಯಂತ ಅವಶ್ಯಕ ಎಂಬ ಅಂಶವನ್ನು ೧೬ ನವೆಂಬರ್ ೧೯೯೨ರಂದು ಮಂಡಲ್ ವರದಿಗೆ ಸಂಬಂಧಿಸಿದ ತೀರ್ಪಿನಲ್ಲಿ ಸವೋಚ್ಛ ನ್ಯಾಯಾಲಯ ಸ್ಪಷ್ಟಪಡಿಸಿದೆ. ಅನೇಕ ಸಂದರ್ಭಗಳಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ನೀಡುವ ಸಂದರ್ಭದಲ್ಲಿ ನಿಖರವಾದ ಅಂಕಿ-ಅಂಶಗಳ ಕೊರತೆಯಿಂದಾಗಿ ವಿವಿಧ ರಾಜ್ಯಗಳು ಹಿಂದುಳಿದ ವರ್ಗಗಳಿಗೆ ನೀಡಿದ್ದ ವಿಶೇಷ ಸವಲತ್ತುಗಳನ್ನು ನ್ಯಾಯಾಲಯಗಳು ರದ್ದು ಪಡಿಸಿರುವುದನ್ನು ಕಾಣಬಹುದಾಗಿದೆ ಎಂದರು.
 ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿದ್ದ ಕಾಂತರಾಜ ಅವರ ಜಾತಿವಾರು ಜನಗಣತಿಯು ಜಾತಿ ಸಮಾಜವನ್ನು ಗಟ್ಟಿಮಾಡಲು ಅಲ್ಲ, ಆದರೆ ಸಮಾಜದಲ್ಲಿ "ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು" ಎಂಬ ತತ್ವಾಧಾರದ ಮೇಲೆ ಸಮಾನತೆಯನ್ನು ಸಾಧಿಸಲು, ಜನಪರ ಯೋಜನೆಗಳನ್ನು ರೂಪಿಸಲು ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಜಾತಿ ಸಮೀಕ್ಷೆ ಅತ್ಯಾವಶ್ಯಕವಾಗಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಒಂದು ಮಾರ್ಗಸೂಚಿ. ವಿಶ್ವದೆಲ್ಲೆಡೆ ಒಪ್ಪಿಕೊಂಡಿರುವ ಒಂದು ವಿಧಾನವೂ ಸಹ ಆಗಿದೆ ಎಂದರು.
    ಕಾಂತರಾಜ ಅವರು ೨೦೧೯ರಲ್ಲಿಯೇ ಹಿಂದುಳಿದ ವರ್ಗಗಳ ಸಮೀಕ್ಷೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ ಸಹ ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ  ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಮತ್ತು ಬಸವರಾಜ ಬೊಮ್ಮಾಯಿ ಇವರಾರೂ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇದು ಹಿಂದುಳಿದ ವರ್ಗಗಳಿಗೆ ಮಾಡಿದ ಅನ್ಯಾಯ ಮತ್ತು ದ್ರೋಹದ ಕೃತ್ಯವಾಗಿದೆ ಎಂದು ಆರೋಪಿಸಿದರು.
    ಹಿಂದುಳಿದ ವರ್ಗದವರ ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ಮುಖ್ಯಮಂತ್ರಿ ಎಂದೇ ಹೆಸರಾದ ಸಿದ್ಧರಾಮಯ್ಯನವರು ಕಾತರಾಜ ಆಯೋಗದ ವರದಿಯನ್ನು ತಕ್ಷಣ ಜಾರಿಗೊಳಿಸುವ ವಿಶ್ವಾಸವಿದೆ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯಲಿದೆ ಎಂದರು.
    ವೇದಿಕೆ ಗೌರವಾಧ್ಯಕ್ಷ ಪ್ರೊ, ಎಚ್. ರಾಚಪ್ಪ  ಪ್ರಧಾನ ಕಾರ್ಯದರ್ಶಿ ಸಿ.ಬಿ. ಮನೋಹರ ಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ಡಿ.ಆರ್. ಉಮೇಶ್ ಚನ್ನವೀರಪ್ಪ ಗಾಮನಗಟ್ಟಿ, ಸಂಚಾಲಕರಾದ ಬಿ. ಜನಮೇಜಿರಾವ್, ರಾಮಕೃಷ್ಣ ಎಸ್. ಉರಣಕರ್, ಆರ್.ಟಿ. ನಟರಾಜ್, ಅಮೀರ್ ಜಾನ್, ಬಿ. ಗಂಗಾಧರ್, ಅಬಿದ್ ಆಲಿ, ದಿಲ್‌ದಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, August 13, 2023

೭೬ನೇ ಸ್ವಾತಂತ್ರ್ಯ ದಿನಾಚರಣೆಗೆ ನಗರದಲ್ಲಿ ವಿಭಿನ್ನ ಕಾರ್ಯಕ್ರಮಗಳು

    ಭದ್ರಾವತಿ, ಆ. ೧೩: ಈ ಬಾರಿ ನಗರದಲ್ಲಿ ೭೬ನೇ ಸ್ವಾತಂತ್ರ್ಯ ದಿನಾಚರಣೆ ವಿಭಿನ್ನವಾಗಿ ಆಚರಿಸಲು ಸಿದ್ದತೆಗಳು ನಡೆಯುತ್ತಿದ್ದು, ಫ್ಲಾಗಥಾನ್, ಮಾಜಿ ಸೈನಿಕರಿಗೆ ಗೌರವ ಸಮರ್ಪಣೆ, ಉಚಿತ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ವಿಭಿನ್ನ ಕಾರ್ಯಕ್ರಮಗಳು ಜರುಗಲಿವೆ.  
    ಎಸ್‌ಎಇ ವಿದ್ಯಾಲಯದಿಂದ ಫ್ಲಾಗಥಾನ್ :
    ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್  ೫೦ನೇ ವರ್ಷದ ಸುವರ್ಣ ಮಹೋತ್ಸವ ಹಿನ್ನಲೆಯಲ್ಲಿ ಆ.೧೫ರ ಸ್ವಾತಂತ್ರ್ಯ ದಿನಾಚರಣೆಯಂದು ಕಾರೆಹಳ್ಳಿಯಲ್ಲಿರುವ ಎಸ್‌ಎಇ ವಿದ್ಯಾಲಯದಲ್ಲಿ ಫ್ಲಾಗಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ೫೦೦ ಮೀಟರ್ ಬೃಹತ್ ತ್ರಿವರ್ಣ ಧ್ವಜ ಹಿಡಿದು ಶಾಲೆಯ ಆಡಳಿತ ವರ್ಗದವರು, ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ವರ್ಗದವರು, ಹಳೇಯ ವಿದ್ಯಾರ್ಥಿಗಳು ಮೆರವಣಿಗೆ ನಡೆಸಲಿದ್ದಾರೆ. ಬಾರಂದೂರು ಗ್ರಾಮದಿಂದ ಬೆಳಿಗ್ಗೆ ೯ ಗಂಟೆಗೆ ಆರಂಭಗೊಳ್ಳುವ ಮೆರವಣಿಗೆ ಕೆಂಪೇಗೌಡ ನಗರ, ಕಾರೇಹಳ್ಳಿ ಹಾಗು ಬೊಮ್ಮೇನಹಳ್ಳಿ  ಮಾರ್ಗವಾಗಿ ಎಸ್‌ಎಇ ವಿದ್ಯಾಲಯ ತಲುಪಲಿದೆ.
    ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ,  ಕಾರೇಹಳ್ಳಿ ಶಾಖಾ ಮಠದ ಶ್ರೀ ವಿಶ್ವದೇವಾನಂದಪುರಿ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಬಿ. ಜಗದೀಶ್, ಪೇಪರ್‌ಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕಿ ಕವಿತಾ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ವಿದ್ಯಾಲಯದ ಮುಖ್ಯ ಶಿಕ್ಷಕ ರವಿಕುಮಾರ್ ಕೋರಿದ್ದಾರೆ.
    ಸಂಗೊಳ್ಳಿ ರಾಯಣ್ಣ ಯುವ ವೇದಿಕೆಯಿಂದ ಮಾಜಿ ಸೈನಿಕರಿಗೆ ಗೌರವ ಸಮರ್ಪಣೆ:
    ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಯುವ ವೇದಿಕೆ ವತಿಯಿಂದ ಆ.೧೫ರಂದು ಸಂಗೊಳ್ಳಿರಾಯಣ್ಣ ಜನ್ಮದಿನದ ಪ್ರಯುಕ್ತ ಹಾಗೂ ೭೬ನೇ  ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಂಜೆ ೪ ಗಂಟೆಗೆ ಸಿದ್ಧಾರೂಢನಗರದ ಶ್ರೀ ಧರ್ಮಶ್ರೀ ಸಭಾಭವನದಲ್ಲಿ ಕುರುಬ ಸಮಾಜದ ಮಾಜಿ ಸೈನಿಕರಿಗೆ ಯೋಧರಿಗೆ ಗೌರವ ಸಮರ್ಪಣೆ, ಚುನಾಯಿತ ಪ್ರತಿನಿಧಿಗಳು, ನಗರಸಭೆ ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಸನ್ಮಾನ ಹಾಗು ೨೦೨೨-೨೩ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.೮೫ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಯುವ ವೇದಿಕೆ ಅಧ್ಯಕ್ಷ ಅಭಿಲಾಷ್ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.
    ಲಯನ್ಸ್ ಕ್ಲಬ್‌ನಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ:
    ನಗರದ ಮೀನಾ ನರ್ಸಿಂಗ್ ಹೋಂ ಮತ್ತು ಲಯನ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆ.೧೫ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
    ಮೂತ್ರಕೋಶ ಮತ್ತು ಶ್ವಾಸಕೋಶ ತಜ್ಞ ವೈದ್ಯರು ತಪಾಸಣೆ ನಡೆಸಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ವೈದ್ಯರನ್ನು ಸಂಪರ್ಕಿಸಲು ಮೊ: ೯೫೧೩೮೭೮೨೬೫ ಹಾಗು ಹೆಸರು ನೋಂದಾಯಿಸಿಕೊಳ್ಳಲು ಮೊ: ೯೭೪೧೧೩೬೩೬೦ ಸಂಖ್ಯೆಗೆ ಕರೆ ಮಾಡಬಹುದಾಗಿದೆ.