ನಗರಸಭೆ ವ್ಯಾಪ್ತಿಯ ೯ ಸ್ಥಳಗಳಲ್ಲಿ ವ್ಯವಸ್ಥೆ : ಶೃತಿ ವಸಂತಕುಮಾರ್
ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಶೃತಿ ವಸಂತಕುಮಾರ್ ಮಾತನಾಡಿದರು.
ಭದ್ರಾವತಿ, ಆ. ೨೫: ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ಉದ್ದೇಶದಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ತಲಾ ೨,೦೦೦ ರು. ನೀಡುವ ಮಹತ್ವಾಕಾಂಕ್ಷೆ ʻಗೃಹ ಲಕ್ಷ್ಮೀ ʼ ಯೋಜನೆಗೆ ಆ.೩೦ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು, ಅಂದು ನಡೆಯಲಿರುವ ಫಲಾನುಭವಿಗಳೊಂದಿಗೆ ನೇರ ಸಂವಾದ ಕಾರ್ಯಕ್ರಮಕ್ಕೆ ಅನುಕೂಲವಾಗುವಂತೆ ನಗರಸಭೆ ವ್ಯಾಪ್ತಿಯ ೯ ಸ್ಥಳಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್‌ಹೇಳಿದರು.
ಅವರು ಈ ಕುರಿತು ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನ ೧೨ ಗಂಟೆಗೆ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಹಾಯಧನ ಬಿಡುಗಡೆ ಮತ್ತು ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸುವ ಮೂಲಕ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದರು.
ಈ ಸಂಬಂಧ ನಗರಸಭಾ ವ್ಯಾಪ್ತಿಯ ೯ ಸ್ಥಳಗಳಲ್ಲಿ ನೇರ ಪ್ರಸಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ʻಗೃಹ ಲಕ್ಷ್ಮೀʼ ಯೋಜನೆಯ ಫಲಾನುಭವಿಗಳು, ಸಾರ್ವಜನಿಕರು, ಜನಪ್ರತಿನಿದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಬೇಕೆಂದು ಕೋರಿದರು.
ಶಾಸಕರಿಂದ ಚಾಲನೆ:
ನಗರದ ವೀರಶೈವ ಸಭಾ ಭವನದಲ್ಲಿ ಯೋಜನೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಲಿದ್ದು, ನಗರ ವ್ಯಾಪ್ತಿಯಲ್ಲಿ ೩೯,೮೮೩ ಹಾಗು ಗ್ರಾಮಾಂತರ ಭಾಗದಲ್ಲಿ ೩೦,೩೩೭ ಸೇರಿದಂತೆ ಒಟ್ಟು ೭೦,೨೨೦ ʻಗೃಹಲಕ್ಷ್ಮೀʼ ಫಲಾನುಭವಿಗಳಿದ್ದಾರೆ. ಸರ್ಕಾರದ ಈ ಯೋಜನೆಯ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕೆಂದರು.
ನೇರ ಪ್ರಸಾರ ಕಾರ್ಯಕ್ರಮದ ಕೇಂದ್ರಗಳು:
ವೀರಶೈವ ಸಭಾ ಭವನ, ತಾಲ್ಲೂಕು ಕಛೇರಿ ರಸ್ತೆ, ಭದ್ರಾವತಿ (03, 04, 05, 06), ಮಲ್ಲೇಶ್ವರ ಕಲ್ಯಾಣ ಮಂಟಪ, ಜನ್ನಾಪುರ, ಭದ್ರಾವತಿ(28, 29, 30, 31, 32), ಬಸವ ಮಂಟಪ, ಮಾಧವನಗರ, ತರೀಕೆರೆ ರಸ್ತೆ, ಭದ್ರಾವತಿ (13, 16, 17, 18), ಶ್ರೀ ವಿದ್ಯಾದಿರಾಜ ಸಭಾ ಭವನ, ಕಡದಕಟ್ಟೆ, ಭದ್ರಾವತಿ (01, 02 33, 34, 35), ಮದರಸಾ ಶಾದಿ ಮಹಲ್, ಅನ್ವರ್ ಕಾಲೋನಿ, ಭದ್ರಾವತಿ (07, 08, 09), ಹಿಂದೂ ಮಹಾಸಭಾ ಗಣಪತಿ ಸಮುದಾಯ ಭವನ, ಹೊಸಮನೆ, ಭದ್ರಾವತಿ (10, 11, 12, 14, 15), ಲಯನ್ಸ್ ಕಮ್ಯೂನಿಟಿ ಹಾಲ್, ಶುಗರ್ ಟೌನ್, ಜೆ.ಟಿ.ಎಸ್ ಶಾಲೆ ಪಕ್ಕ, ಭದ್ರಾವತಿ (25, 26, 27), ಡಾನ್ ಬೋಸ್ಕೊ ಐ.ಟಿ.ಐ ಅಡಿಟೋರಿಯಂ, ಉಜ್ಜನೀಪುರ, ಭದ್ರಾವತಿ (19, 20, 21, 22) ಮತ್ತು ಎಸ್.ಎಂ.ವಿಶ್ವೇಶ್ವರಯ್ಯ ವಿಜ್ಞಾನ ಕಾಲೇಜು, ಆಡಿಟೋರಿಯಂ, ಬೊಮ್ಮನಕಟ್ಟೆ (23, 24)
ಪೌರಾಯುಕ್ತ ಎಚ್.ಎಂ ಮನುಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ನಗರಸಭಾ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.