![](https://blogger.googleusercontent.com/img/a/AVvXsEhP8GG-nLwe7d2ghHLVVySMP6KV1X5yN6AS4EYkIqUKFO6Mm_QttCUniRnSbRcOIkNetTJ1sm_vO4sqCPXB4qMriuVH-FliRcwWD8zavBQjZ5qsI9yHNqT7FYbjEqZi2m-7DsD3r-i3bZ5h2irPCeSb1z6iPt2bTxBI3nVei5FTlvphWSC0bl8TP3jCLh6m=w400-h180-rw)
ಭದ್ರಾವತಿ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ನಾಡು-ನುಡಿ ವೇದಿಕೆ ಭೂಮಿಕಾ ವತಿಯಿಂದ ಏರ್ಪಡಿಸಲಾಗಿದ್ದ ಕನ್ನಡ ಕವಿಗಳ ಋತು ವಿಲಾಸ ಕಾರ್ಯಕ್ರಮದಲ್ಲಿ ವಿಮರ್ಶಕ ಡಾ.ಎಚ್.ಎಸ್ ಸತ್ಯನಾರಾಯಣ ಪಾಲ್ಗೊಂಡು ಮಾತನಾಡಿದರು.
ಭದ್ರಾವತಿ, ಆ. ೨೮ : ಮಳೆ ಇಲ್ಲದೆ ಭೂಮಿ ಮೇಲೆ ಯಾವ ಜೀವಿಯೂ ಬದುಕುಲಾರದು. ಈ ಹಿನ್ನಲೆಯಲ್ಲಿ ಮಳೆ ಬರಲೇ ಬೇಕು. ಕವಿಗಳ ಆಶಯ ಸಹ ಇದೆ ಆಗಿದ್ದು, ಈ ನಿಟ್ಟಿನಲ್ಲಿ ಕನ್ನಡದ ಕವಿಗಳು ವರ್ಷದ ಮಳೆ ಋತು ಕುರಿತು ತಮ್ಮದೇ ಭಾವನೆ ವ್ಯಕ್ತಪಡಿಸಿದ್ದಾರೆಂದು ವಿಮರ್ಶಕ ಡಾ.ಎಚ್.ಎಸ್ ಸತ್ಯನಾರಾಯಣ ಹೇಳಿದರು.
ಅವರು ನಗರದ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ನಾಡು-ನುಡಿ ವೇದಿಕೆ ಭೂಮಿಕಾ ವತಿಯಿಂದ ಏರ್ಪಡಿಸಲಾಗಿದ್ದ ಕನ್ನಡ ಕವಿಗಳ ಋತು ವಿಲಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಳೆಯಿಲ್ಲದೆ ಇಳೆಯುಂಟೆ? ಭೂಮಿಯ ಮೇಲಿನ ಜೀವಕೋಟಿ ಬದುಕುಳಿಯಲು ಮಳೆ ಬೇಕು. ಹಾಗೆಂದೇ ಕನ್ನಡ ಕವಿಗಳು ವರ್ಷ ಋತುವನ್ನು ಬಣ್ಣಿಸಿರುವ ಪರಿ ಅನನ್ಯವಾಗಿದೆ. ಪಂಪ, ರನ್ನ, ಹರಿಹರ, ಕುಮಾರವ್ಯಾಸ, ರತ್ನಾಕರವರ್ಣಿಯಿಂದ ಮೊದಲ್ಗೊಂಡು ಆಧುನಿಕ ಕವಿಗಳು ಮಳೆಯನ್ನು ಜೀವನಾಡಿಯಾಗಿ ಕಂಡಿರುವ ಬಗೆಯನ್ನು ವಿವರಿಸಿದರು.
ಬಿಎಂಶ್ರೀ, ಬೇಂದ್ರೆ, ಕುವೆಂಪು, ಪುತೀನ ಕೆ.ಎಸ್ ನರಸಿಂಹಸ್ವಾಮಿ, ಜಿ.ಎಸ್ ಶಿವರುದ್ರಪ್ಪ, ಕಣವಿ, ನಿಸಾರ್ ಅಹಮದ್, ಸು.ರಂ ಎಕ್ಕುಂಡಿ ಕಂಬಾರ, ಎಂ.ಆರ್ ಕಮಲ, ಪ್ರತಿಭಾ ನಂದಕುಮಾರ್ ಮುಂತಾದವರ ಕವಿತೆಗಳಲ್ಲಿ ಚಿತ್ರಿತವಾಗಿರುವ ಮಳೆಯ ವರ್ಣನೆಯನ್ನು ಸಭೆಗೆ ಪರಿಚಯಿಸಿದರು. ಅಲ್ಲದೆ ಜನಪದದ ಅನೇಕ ಮಳೆಯ ಹಾಡುಗಳನ್ನು ಉಲ್ಲೇಖಿಸುತ್ತಾ ಕನ್ನಡದ ಸುಪ್ರಸಿದ್ಧ ಕವಿಗಳ ರಚನೆಗಳನ್ನು ಚರ್ಚಿಸಿದರು.
ವೇದಿಕೆ ಅಧ್ಯಕ್ಷ ಅಧ್ಯಕ್ಷ ಡಾ. ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಕವಿಗಳು ಕಂಡ ಋತು ವಿಲಾಸವನ್ನು ಅಭ್ಯಸಿಸುವುದೇ ಒಂದು ಸೊಗಸೆಂದು ಬಣ್ಣಿಸಿದರು. ಈ ಬಗೆಯ ಕಾರ್ಯಕ್ರಮದಿಂದಲಾದರೂ ವರುಣ ದೇವ ಮಳೆಯನ್ನು ಕರುಣಿಸಲೆಂದು ಆಶಿಸಿದರು.
ಪ್ರಧಾನ ಕಾರ್ಯದರ್ಶಿ ಅಪರಂಜಿ ಶಿವರಾಜ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಡಾ. ವೀಣಾ ಭಟ್ ಸ್ವಾಗತಿಸಿದರು. ಸದಸ್ಯರಾದ ಕೆ. ಆನಂದ್ ಅತಿಥಿಗಳ ಪರಿಚಯ ನಡೆಸಿಕೊಟ್ಟರು. ಡಾ. ನಾಗರಾಜ್ ಕಾರ್ಯಕ್ರಮ ನಿರೂಪಿಸಿ, ರಾಮಾಚಾರಿ ವಂದಿಸಿದರು.