Monday, September 25, 2023

ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ಕ್ಷಣಗಣನೆ : ಬಿಗಿ ಪೊಲೀಸ್ ಬಂದೋಬಸ್ತ್

ಪೂರ್ವ ಸಿದ್ದತೆ ಪರಿಶೀಲಿಸಿ, ಸಲಹೆ, ಸೂಚನೆ ನೀಡಿದ ಜಿಲ್ಲಾ ರಕ್ಷಣಾಧಿಕಾರಿ


ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಭದ್ರಾವತಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ವಿಸರ್ಜನೆ ಸೆ.26ರ ಮಂಗಳವಾರ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ. ಸೋಮವಾರ ಖುದ್ದಾಗಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ನಗರಕ್ಕೆ ಭೇಟಿ ನೀಡಿ ಪೂರ್ವ ಸಿದ್ದತೆಗಳನ್ನು ಪರಿಶೀಲನೆ ನಡೆಸಿ ಸಲಹೆ-ಸೂಚನೆಗಳನ್ನು ನೀಡಿದರು.
    ಭದ್ರಾವತಿ, ಸೆ. 25 : ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ವಿಸರ್ಜನೆ ಸೆ.26ರ ಮಂಗಳವಾರ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ.

    ಪ್ರತಿ ವರ್ಷ ಪೊಲೀಸ್ ಇಲಾಖೆ ವತಿಯಿಂದ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನಚ್ಚರಿಕೆ ವಹಿಸಲಾಗುತ್ತಿದೆ. ರಾಜಬೀದಿ ಉತ್ಸವದ ಪ್ರತಿ ಹೆಜ್ಜೆಗೂ ಕಣ್ಗಾವಲಿರಿಸಲಾಗುತ್ತಿದೆ. ಬೆಳಿಗ್ಗೆಯಿಂದ ಸಂಜೆವರೆಗೂ ಪ್ರತಿಯೊಂದು ಘಟನೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಈ ಬಾರಿ ಸಹ ಮುಂದುವರೆದಿದ್ದು, ಸೋಮವಾರ ಖುದ್ದಾಗಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ನಗರಕ್ಕೆ ಭೇಟಿ ನೀಡಿ ಪೂರ್ವ ಸಿದ್ದತೆಗಳನ್ನು ಪರಿಶೀಲನೆ ನಡೆಸಿದ್ದಾರೆ.

    ಇಲಾಖೆಯ ಕರ್ತವ್ಯನಿರತ ಅಧಿಕಾರಿಗಳು ಮತ್ತ ಸಿಬ್ಬಂದಿಗಳಿಗೆ ಮುನ್ನಚ್ಚರಿಕೆ ವಹಿಸುವಂತೆ ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೆ ವಿನಾಯಕ ಸೇವಾ ಸಮಿತಿ ಪ್ರಮುಖರೊಂದಿಗೆ ಚರ್ಚಿಸಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ರಾಜಬೀದಿ ಉತ್ಸವ ಮೆರವಣಿಗೆ ಯಶಸ್ವಿಯಾಗಿ ನಡೆಸುವಂತೆ ಮನವಿ ಮಾಡಿದ್ದಾರೆ.

    ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ-ಸಿಬ್ಬಂದಿಗಳು:

    ಜಿಲ್ಲಾ ರಕ್ಷಣಾಧಿಕಾರಿ-1, ಹೆಚ್ಚುವರಿ ರಕ್ಷಣಾಧಿಕಾರಿ-1, ವೃತ್ತ ನಿರೀಕ್ಷಕರು-20, ಪೊಲೀಸ್ ನಿರೀಕ್ಷರು-50, ಸಹಾಯಕ ಪೊಲೀಸ್ ನಿರೀಕ್ಷಕರು-85, ಆರಕ್ಷಕ ಸಿಬ್ಬಂದಿಗಳು-500, ಗೃಹ ರಕ್ಷಕ ದಳ-250, ಕ್ಷಿಪ್ರ ಕಾರ್ಯಪಡೆ ತುಕಡಿ-1, ಸಶಸ್ತ್ರ ಮೀಸಲು ಪಡೆ ತುಕಡಿ-6 ಮತ್ತು ಸಂಚಾರಿ ಪೊಲೀಸ್ ದಳ-1 ಬಂದೋಬಸ್ತ್ ನಲ್ಲಿ ಕಾರ್ಯ ನಿರ್ವಹಿಸಲಿವೆ.

    ವೈಭವಯುತ ರಾಜಬೀದಿ ಉತ್ಸವ ಮೆರವಣಿಗೆ :

ರಾಜಬೀದಿ ಉತ್ಸವ ಮೆರವಣಿಗೆ ಪ್ರತಿವರ್ಷ ನಿರೀಕ್ಷೆಗೂ ಮೀರಿ ವೈಭವಯುತವಾಗಿ ನಡೆಯುತ್ತಿದ್ದು, ಉತ್ಸವ ಮೆರವಣಿಗೆ ಹಬ್ಬದಂತೆ ಕಂಡು ಬರುತ್ತಿದೆ. ಜಾತಿ, ಧರ್ಮ ಬೇಧಭಾವವಿಲ್ಲದೆ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಸ್ತೆಯುದ್ದಕ್ಕೂ ಕೇಸರಿ ತೋರಣಗಳು, ಧ್ವಜಗಳು ಕಂಗೊಳಿಸುವ ಜೊತೆಗೆ ಸೇವಾಕರ್ತರಿಂದ ಅನ್ನಸಂತರ್ಪಣೆ, ಲಾಡು, ಮಜ್ಜಿಗೆ, ಕೋಸಂಬರಿ ಸೇರಿದಂತೆ ಬಗೆ ಬಗೆಯ ಪ್ರಸಾದ ವಿತರಣೆ. ಬಗೆ ಬಗೆಯ ಬೃಹತ್ ಹಾರಗಳ ಸಮರ್ಪಣೆ, ಬೃಹತ್ ಓಂಕಾರದ ಚಿತ್ತಾರದೊಂದಿಗೆ ಭಕ್ತಿ ಸಮರ್ಪಣೆ ಕಂಡು ಬರುತ್ತಿದೆ. ಅಲ್ಲದೆ ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ, ನಾದಸ್ವರ, ಕೋಲಾಟ, ಗೊಂಬೆ ನೃತ್ಯ, ಜಾನಪದ ನೃತ್ಯ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆ ಮೆರಗು ನೀಡುತ್ತಿವೆ. ಉತ್ಸವ ಮೆರವಣಿಗೆ ಪ್ರತಿ ವರ್ಷ ನಿರೀಕ್ಷೆಗೂ ಮೀರಿ ವೈಭವ ಪಡೆದುಕೊಳ್ಳುತ್ತಿದೆ.


ಗೃಹ ನಿರ್ಮಾಣ ಸಹಕಾರ ಸಂಘದ 34ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆ

ಭದ್ರಾವತಿ ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 34ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆ ಕಾಗದನಗರದ ಚಂದ್ರಾಲಯದಲ್ಲಿ ಸೋಮವಾರ ನಡೆಯಿತು.

    ಭದ್ರಾವತಿ: ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 34ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆ ಕಾಗದನಗರದ ಚಂದ್ರಾಲಯದಲ್ಲಿ ಸೋಮವಾರ ನಡೆಯಿತು.

    ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಸಭೆ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ವಾರ್ಷಿಕ ವರದಿ, ಲೆಕ್ಕಪತ್ರ ಮಂಡನೆ ಹಾಗೂ ನಿಧನರಾದ ಸದಸ್ಯರಿಗೆ ಶ್ರದ್ಧಾಂಜಲಿ ಮತ್ತು ಆಯವ್ಯಯ ಮಂಡನೆ ನಡೆಯಿತು. ಅಲ್ಲದೆ ಸದಸ್ಯರಲ್ಲದವರಿಗೆ ನೀಡಿರುವ 74 ನಿವೇಶನಗಳ ಮುಟ್ಟುಗೋಲು ವಿಚಾರಕ್ಕೆ ಸಂಬಂಧಿಸಿದಂತೆ ಉಪಸಮಿತಿ ನೇಮಕಗೊಳಿಸಲು ಅನುಮೋದನೆ ಪಡೆಯಲಾಯಿತು.

    ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಹಾಗು ಕಾರ್ಯಕಾರಿ ಮಂಡಳಿ ನಿರ್ದೇಶಕರು ಉಪಸ್ಥಿತರಿದ್ದರು.

ಶತಾಯುಷಿ ಗುರುಸಿದ್ದಮ್ಮ ನಿಧನ

ಗುರುಸಿದ್ದಮ್ಮ

    ಭದ್ರಾವತಿ : ಜೇಡಿಕಟ್ಟೆ ಹೊಸೂರು ಮರುಳಸಿದ್ದೇಶ್ವರ ಸ್ವಾಮಿ ಜನ ಕಲ್ಯಾಣ ಧಾರ್ಮಿಕ ಟ್ರಸ್ಟ್ ಪ್ರಮುಖರಾದ ಎಸ್. ವಾಗೀಶ್ ಅವರ ಅಜ್ಜಿ, ಶತಾಯುಷಿ ಗುರುಸಿದ್ದಮ್ಮ(102) ಸೋಮವಾರ ನಿಧನ ಹೊಂದಿದರು.

    ಇವರ ಅಂತ್ಯಕ್ರಿಯೆ ಜೇಡಿಕಟ್ಟೆ ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಮರುಳಸಿದ್ದೇಶ್ವರ ಸ್ವಾಮಿ ಜನ ಕಲ್ಯಾಣ ಧಾರ್ಮಿಕ ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾಕರ್ತರು ಹಾಗು ಗ್ರಾಮಸ್ಥರು ಗುರುಸಿದ್ದಮ್ಮ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಅ.15ರಂದು ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘಕ್ಕೆ ಚುನಾವಣೆ


    ಭದ್ರಾವತಿ : ನಗರದ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ಚುನಾವಣೆ ಅ.15ರಂದು ನಡೆಯಲಿದ್ದು, ಅ.4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.

    ಸಂಘದ ಕಾರ್ಯಕಾರಿ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ಚುನಾವಣೆ ನಡೆಯುತ್ತಿದ್ದು, ಎಂ.ಸಿ ಮಂಜುನಾಥ್ ಅವರನ್ನು ಚುನಾವಣಾಧಿಕಾರಿಯಾಗಿ ನೇಮಕಗೊಳಿಸಲಾಗಿದೆ. ಈಗಾಗಲೇ ಈ ಕುರಿತು ಸಂಘದ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ಅ.5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 6ರಂದು ನಾಮಪತ್ರ ಹಿಂಪಡೆಯ ಬಹುದಾಗಿದೆ.ಅ.15ರಂದು ಹಳೇನಗರದ ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಚುನಾವಣೆ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ತಿಳಿಸಿದ್ದಾರೆ.

Sunday, September 24, 2023

34ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆ



ಭದ್ರಾವತಿ: ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 34ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆ ಸೆ.25ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ಕಾಗದನಗರದ ಚಂದ್ರಾಲಯದಲ್ಲಿ ನಡೆಯಲಿದೆ. ಸಭೆಯಲ್ಲಿ ವಾರ್ಷಿಕ ವರದಿ, ಲೆಕ್ಕಪತ್ರ ಮಂಡನೆ ಹಾಗೂ ನಿಧನರಾದ ಸದಸ್ಯರಿಗೆ ಶ್ರದ್ಧಾಂಜಲಿ ಮತ್ತು ಆಯವ್ಯಯ ಮಂಡನೆ ಮತ್ತು ಅನುಮೋದನೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
 ಎಲ್ಲಾ ಸದಸ್ಯರುಗಳೂ ತಪ್ಪದೆ ಸಭೆಯಲ್ಲಿ ಭಾಗವಹಿಸಬೇಕಾಗಿ ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಕೋರಿದ್ದಾರೆ.

ವಿವಿಧೆಡೆ ವಿನಾಯಕ ಮೂರ್ತಿ ದರ್ಶನ ಪಡೆದ ಸಂಸದ ಬಿ.ವೈ ರಾಘವೇಂದ್ರ

ಭದ್ರಾವತಿ ನಗರಸಭೆ ವಾರ್ಡ್ ನಂ.27ರ ಆಂಜನೇಯ ಆಗ್ರಹಾರದ 2ನೇ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ದರ್ಶನ ಪಡೆದ ಸಂಸದ ಬಿ.ವೈ ರಾಘವೇಂದ್ರ ಅವರು ದೀಪ ಬೆಳಗಿಸುವ ಮೂಲಕ ವಿನಾಯಕ ಸೇವಾ ಸಮಿತಿಯ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು.

    ಭದ್ರಾವತಿ : ಸಂಸದ ಬಿ.ವೈ ರಾಘವೇಂದ್ರ ಅವರು ಭಾನುವಾರ ಹೊಸಮನೆಯಲ್ಲಿ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ 51ನೇ ವರ್ಷದ ಶ್ರೀ ವಿನಾಯಕ ಮೂರ್ತಿ ಸೇರಿದಂತೆ ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ದರ್ಶನ ಪಡೆದರು.

    ನಗರಸಭೆ ವಾರ್ಡ್ ನಂ.27ರ ಆಂಜನೇಯ ಆಗ್ರಹಾರದ 2ನೇ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ದರ್ಶನ ಪಡೆದ ಸಂಸದರು ದೀಪ ಬೆಳಗಿಸುವ ಮೂಲಕ ವಿನಾಯಕ ಸೇವಾ ಸಮಿತಿಯ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಸಮಿತಿ ಪ್ರಮುಖರು ಹಾಗು ಸ್ಥಳೀಯರು ಸಂಸದರನ್ನು ಸನ್ಮಾನಿಸಿ ಗೌರವಿಸಿದರು.

    ನಂತರ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ 51ನೇ ವರ್ಷದ ಶ್ರೀ ವಿನಾಯಕ ಮೂರ್ತಿ ದರ್ಶನ ಪಡೆದರು.

    ಬಿಜೆಪಿ ಪಕ್ಷದ ಯುವ ಮುಖಂಡರಾದ ಮಂಗೋಟೆ ರುದ್ರೇಶ್‌, ಜಿ. ಆನಂದಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಭದ್ರಾವತಿ ನಗರಸಭೆ ವಾರ್ಡ್ ನಂ.27ರ ಆಂಜನೇಯ ಆಗ್ರಹಾರದ 2ನೇ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ದರ್ಶನ ಪಡೆದ ಸಂಸದ ಬಿ.ವೈ ರಾಘವೇಂದ್ರ ಅವರು ದೀಪ ಬೆಳಗಿಸುವ ಮೂಲಕ ವಿನಾಯಕ ಸೇವಾ ಸಮಿತಿಯ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಸಮಿತಿ ಪ್ರಮುಖರು ಹಾಗು ಸ್ಥಳೀಯರು ಸಂಸದರನ್ನು ಸನ್ಮಾನಿಸಿ ಗೌರವಿಸಿದರು.

ಡಿ. ಜಯಶ್ರೀ ನಿಧನ

ಡಿ. ಜಯಶ್ರೀ

ಭದ್ರಾವತಿ : ಜೇಡಿಕಟ್ಟೆ ಹೊಸೂರು ನಿವಾಸಿ ಡಿ. ಜಯಶ್ರೀ(42) ಅನಾರೋಗ್ಯದಿಂದ ಶನಿವಾರ ನಿಧನ ಹೊಂದಿದರು.

ಶ್ರೀ ಮರುಳ ಸಿದ್ದೇಶ್ವರ ಜನ ಕಲ್ಯಾಣ ಧಾರ್ಮಿಕ ಟ್ರಸ್ಟ್ ಸದಸ್ಯ, ಪತಿ ಎಲ್. ದೇವರಾಜ್ ಹಾಗು ಇಬ್ಬರು ಗಂಡು ಮಕ್ಕಳು ಇದ್ದರು. ಇವರ ಅಂತ್ಯಕ್ರಿಯೆ ಭಾನುವಾರ ಜೇಡಿಕಟ್ಟೆ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.

ನಗರಸಭೆ ಸದಸ್ಯೆ ರೇಖಾ ಪ್ರಕಾಶ್, ಶ್ರೀ ಮರುಳ ಸಿದ್ದೇಶ್ವರ ಜನ ಕಲ್ಯಾಣ ಧಾರ್ಮಿಕ ಟ್ರಸ್ಟ್ ಪ್ರಮುಖರಾದ ಸಿದ್ದಲಿಂಗಯ್ಯ, ಎಸ್. ವಾಗೀಶ್, ಪ್ರಕಾಶ್, ರಾಮಲಿಂಗಣ್ಣ, ಹೋಟೆಲ್ ಶಿವಣ್ಣ, ಜವರೇಲಿಂಗೇಗೌಡ್ರು, ನಂಜಪ್ಪ, ಶಾರದಾಬಾಯಿ ಸೇರಿದಂತೆ ಗ್ರಾಮಸ್ಥರು ಜಯಶ್ರೀ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.